ಅವಕಾಶವಿದ್ದರೂ ಸರ್ಕಾರ ರಚಿಸಲು ಒಲವಿಲ್ಲದ ಕಾಂಗ್ರೆಸ್

ಇದನ್ನು ಓದಿರಿ

| ನೀಲಗಾರ |

ವಿಶೇಷವಾದ ಅಂಡರ್‍ಕರೆಂಟ್ ಅಲೆ ಇಲ್ಲದೇ ಇದ್ದರೆ ಈ ಸಾರಿ ಬಿಜೆಪಿಗೆ ಮಾತ್ರವಲ್ಲಾ, ಎನ್‍ಡಿಎಗೂ ಬಹುಮತ ಬರುವುದಿಲ್ಲವೆಂಬುದು ಬಹುತೇಕ ಖಚಿತವಾಗಿದೆ. ಆದರೆ, ಮುಂದಿನ ಸರ್ಕಾರವನ್ನು ರಚಿಸಲು ಕಾಂಗ್ರೆಸ್ ಮಾತ್ರ ಉತ್ಸುಕವಾಗಿಲ್ಲವೆಂಬುದಕ್ಕೆ ಹಲವು ಆಧಾರಗಳಿವೆ. ಕಳೆದ ಒಂದೂವರೆ ವರ್ಷದಿಂದ ಇಳಿಯುತ್ತಾ ಬಂದಿದ್ದ ಬಿಜೆಪಿ ಮತ್ತು ಮೋದಿ ಜನಪ್ರಿಯತೆಯ ಗ್ರಾಫ್ ಚೇತರಿಕೆ ಪಡೆದುಕೊಂಡಿದ್ದು ಬಾಲಾಕೋಟ್ ದಾಳಿಯ ನಂತರ. ಸರ್ರನೇ ಮೇಲೇರಿದ್ದ ಬಿಜೆಪಿ ಪರ ಒಲವು ಮತ್ತೆ ಕೆಳಗಿಳಿಯುತ್ತಾ ಬಂದಿತಲ್ಲದೇ, ಮತದಾನಗಳ ವಿವಿಧ ಹಂತಗಳ ಜೊತೆಗೆ ಮತ್ತೆ ಕೆಳಗಿಳಿದಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಎಲ್ಲಾ ಹಂತಗಳಲ್ಲೂ ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶದಲ್ಲಿ ನಿರಂತರ ಸಮೀಕ್ಷೆ ನಡೆಸುತ್ತಾ ಬಂದಿರುವ ಸಂಸ್ಥೆಗಳು ಇದನ್ನೇ ಹೇಳಿವೆ. ಆಂತ್ರೋ.ಎಐ ಮತ್ತು ಇನ್ನೂ ಕೆಲವು ಸಂಸ್ಥೆಗಳು ಇದನ್ನು ಮುಂದಿಟ್ಟಿವೆ. ಉತ್ತರ ಪ್ರದೇಶವೊಂದರಲ್ಲೇ 45 ಸೀಟುಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಚುನಾವಣೋತ್ತರ ವಿಶ್ಲೇಷಣೆಯಲ್ಲಿ ಹೇಳಲಾಗಿದೆ. ಇವುಗಳ ಜೊತೆಗೆ ವಿವಿಧ ಏಜೆನ್ಸಿಗಳ ಮೂಲಕ ತಮ್ಮದೇ ಸಮೀಕ್ಷೆಗಳನ್ನು ಮಾಡಿಸುವ ರಾಜಕೀಯ ಪಕ್ಷಗಳ ಆತ್ಮವಿಶ್ವಾಸದಲ್ಲಾಗಿರುವ ಏರುಪೇರು ಸಹಾ ಅದನ್ನು ಪುಷ್ಟೀಕರಿಸುತ್ತವೆ.

 

ಮೋದಿ ಮತ್ತು ಬಿಜೆಪಿ ವಲಯದಲ್ಲಿ ಆತ್ಮವಿಶ್ವಾಸ ಇಳಿಯುತ್ತಿದ್ದರೆ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಲ್ಲಿ ಅದು ಹೆಚ್ಚುತ್ತಿದೆ. ಈಗಾಗಲೇ ಇಂಗ್ಲಿಷ್ ವೆಬ್ ಪೋರ್ಟಲ್ ದಿ ಪ್ರಿಂಟ್‍ನಲ್ಲಿ ಪ್ರಕಟವಾದ ಕಾಂಗ್ರೆಸ್‍ನ ಆಂತರಿಕ ಸಮೀಕ್ಷೆಯು ಕಡಿಮೆಯೆಂದರೆ 101 ಹೆಚ್ಚೆಂದರೆ 150 ಸೀಟುಗಳು ಕಾಂಗ್ರೆಸ್‍ಗೆ ಬರಲಿವೆಯೆಂದು ಹೇಳಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಉಳಿದವರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಚಾಲನೆ ನೀಡಿದ್ದ ಟಿಆರ್‍ಎಸ್‍ನ ಕೆ.ಚಂದ್ರಶೇಖರರಾವ್, ತಮ್ಮ ಸಂಸತ್‍ಸದಸ್ಯರೊಬ್ಬರನ್ನು ಕಾಂಗ್ರೆಸ್ ಬಳಿಗೂ ಮಾತುಕತೆಗೆ ಕಳಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಪರವಾದ ಮೈತ್ರಿಕೂಟ ರಚಿಸುವಲ್ಲಿ ಮುಖ್ಯ ಪಾತ್ರವನ್ನು ಬಿಟ್ಟುಕೊಡಲಿಚ್ಛಿಸದ ತೆಲುಗುದೇಶಂನ ಚಂದ್ರಬಾಬುನಾಯ್ಡು ಸಹಾ ವಿವಿಧ ಪಕ್ಷಗಳ ಜೊತೆಗೆ ಮಾತುಕತೆ ಮಾಡಲು ಶುರುಹಚ್ಚಿಕೊಂಡಿದ್ದಾರೆ.

ಆದರೆ, ಕಾಂಗ್ರೆಸ್ ಪಕ್ಷದ ನಾಯಕತ್ವ, ಅದರಲ್ಲೂ ರಾಹುಲ್‍ಗಾಂಧಿ ಸರ್ಕಾರ ರಚಿಸಲು ಉತ್ಸುಕವಾಗಿಲ್ಲ. ಎನ್‍ಡಿಟಿವಿಯ ಶ್ರೀನಿವಾಸನ್ ಜೈನ್ ಮತ್ತು ರವೀಶ್‍ಕುಮಾರ್‍ರು ನಡೆಸಿದ ಸಂದರ್ಶನಗಳಲ್ಲಿ ಈ ಪ್ರಶ್ನೆಯನ್ನು ರಾಹುಲ್‍ಗಾಂಧಿಗೆ ನೇರವಾಗಿ ಕೇಳಲಾಯಿತು. ಅಂತಹ ಸಂದರ್ಭ ಬಂದರೆ, ನೀವು ಪ್ರಧಾನಮಂತ್ರಿಯಾಗಲು ಸಿದ್ಧರಿದ್ದೀರಾ?’ ಎಂಬುದೇ ಆ ಪ್ರಶ್ನೆಯಾಗಿತ್ತು. ವಿನಯಪೂರ್ವಕವಾಗಿ ಮತ್ತು ಅಗತ್ಯವಿರುವ ಚಾಣಾಕ್ಷತೆಯೊಂದಿಗೆ, ‘ಅದನ್ನು ಹೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ಆದರೆ, ಜನರು ಏನು ತೀರ್ಮಾನ ಮಾಡುತ್ತಾರೋ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ’ ಎಂದು ರಾಹುಲ್ ಹೇಳಿದರು.

ಜನರು ಕಾಂಗ್ರೆಸ್‍ಗೆ ಬಹುಮತ ಕೊಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಯುಪಿಎ ಸಹಾ ಬಹುಮತದ ಸಮೀಪಕ್ಕೆ ಬರುವುದಿಲ್ಲ. ಹಾಗಿದ್ದ ಮೇಲೆ ರಾಹುಲ್‍ಗಾಂಧಿಗೆ ಪ್ರಧಾನಿಯಾಗು ಎಂಬ ಸಂದೇಶವನ್ನು ಜನರು ಹೇಗೆ ನೀಡಲು ಸಾಧ್ಯ? ರಾಹುಲ್ ಏನು ಬಯಸುತ್ತಿದ್ದಾರೆ? ಯುಪಿಎಗೆ ಬಹುಮತಕ್ಕೆ ಹತ್ತಿರದ ಸೀಟುಗಳು ಬಂದು, ತಮ್ಮ ಸರ್ಕಾರದ ನೀತಿ ನಿರ್ಧಾರಗಳನ್ನು ಸದಾ ನಿಯಂತ್ರಿಸಲು ಬಯಸದ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಸಾಧ್ಯವಾದರೆ ಮಾತ್ರ ಕಾಂಗ್ರೆಸ್ ಸರ್ಕಾರ ರಚನೆಗೆ ಮುಂದಾಗುತ್ತದೆ. ಇಲ್ಲದಿದ್ದರೆ, ಬಿಜೆಪಿಯೇತರ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಡುತ್ತದೆಯೇ ಹೊರತು ಈಗಲೇ ಪ್ರಧಾನಮಂತ್ರಿಯಾಗಿಬಿಡಬೇಕು ಎಂಬ ಆತುರದಲ್ಲಿ ರಾಹುಲ್‍ಗಾಂಧಿ ಇಲ್ಲ. ಇದನ್ನು ಕಾಂಗ್ರೆಸ್‍ನ ಹಲವು ಮೂಲಗಳು ಸ್ಪಷ್ಟಪಡಿಸುತ್ತವೆ.

ಪತ್ರಿಕೆಯ ವತಿಯಿಂದ ಕೆಲವು ಹಿರಿಯ ಪತ್ರಕರ್ತರನ್ನು ಮಾತ್ರರಲ್ಲದೇ, ಕಾಂಗ್ರೆಸ್‍ನ ದೆಹಲಿ ವಲಯದಲ್ಲಿರುವ ಮತ್ತು ರಾಹುಲ್‍ಗಾಂಧಿಯ ಕೋರ್ ಟೀಂನಲ್ಲಿರುವವರನ್ನು ಒಂದು ತಿಂಗಳಿಂದ ಮಾತಾಡಿಸುತ್ತಾ ಬರಲಾಗುತ್ತಿತ್ತು. ಕಾಂಗ್ರೆಸ್‍ಗೆ 150+ ಸ್ಥಾನಗಳು ಬರಬಹುದೆಂಬ (ದೂರದ) ಆಶಾವಾದಿ ಸಮೀಕ್ಷೆಗಳು ಬಂದಾಗಲೂ, ನಮ್ಮ ಗುರಿ 120 ಅಷ್ಟೇ ಎಂದೇ ಅವರುಗಳು ಹೇಳುತ್ತಿದ್ದರು.

ಮೋದಿ, ಜೇಟ್ಲಿ ಆಡಳಿತದಲ್ಲಿ ಭಾರತದ ಆರ್ಥಿಕತೆ ಬಹಳ ಸಂಕಷ್ಟಕ್ಕೆ ಸಿಲುಕಿಕೊಂಡಿದೆ ಎಂಬುದು ಕೇವಲ ವಿರೋಧ ಪಕ್ಷಗಳ ಆರೋಪವಲ್ಲ. ಹಲವು ಆರ್ಥಿಕ ತಜ್ಞರ, ಅದರಲ್ಲೂ ಮೋದಿಯವರ ಆರ್ಥಿಕ ಸಲಹೆಗಾರರಾಗಿದ್ದವರೂ ಈ ಮಾತನ್ನು ಹೇಳುತ್ತಿದ್ದಾರೆ. ಆರು ತಿಂಗಳ ಕೆಳಗೆ ಇಂತಹ ಮಾತನ್ನು ಪಿ.ಚಿದಂಬರಂ ಅವರು ಟಿವಿ ಸಂದರ್ಶನವೊಂದರಲ್ಲಿ ಹೇಳಿದಾಗ, ಅವರಿಗೆ ನಿರೀಕ್ಷಿತ ಪ್ರಶ್ನೆಯೊಂದು ಎದುರಾಯಿತು. ‘ಹಾಗಾದರೆ, ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಇದನ್ನು ಸರಿಪಡಿಸಲು ಸಾಧ್ಯವಾಗುತ್ತದಾ?’ ಎಂದು ಕೇಳಿದಾಗ, ಮಾಜಿ ಆರ್ಥಿಕ ಸಚಿವರು ಹೇಳಿದ್ದು ಹೀಗೆ, ‘ಸರಿಪಡಿಸಲು ಸಾಧ್ಯ. ಆದರೆ ಅದು ಮುಂದಿನ ಸರ್ಕಾರದ ಸ್ವರೂಪವನ್ನು ಅವಲಂಬಿಸಿರುತ್ತದೆ’.

ಈಗ ಎರಡು ದಿನಗಳ ಕೆಳಗೆ ಮತ್ತೆ ಚಿದಂಬರಂ ಮಾತನಾಡಿದ್ದಾರೆ. ಆರ್ಥಿಕತೆ ಎಷ್ಟು ಕೆಟ್ಟಿದೆಯೆಂದರೆ ಮುಂದಿನ ಹಣಕಾಸು ಮಂತ್ರಿಗೆ ವಿಪರೀತ ಕಷ್ಟವಿದೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಎನ್‍ಡಿಎ ಎಷ್ಟೇ ಕಡಿಮೆ ಸೀಟುಗಳನ್ನು ಪಡೆದುಕೊಂಡರೂ, ಅತ್ಯಂತ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಲು ಬೇಕಾದ ಶಕ್ತಿ ಅದಕ್ಕಿರುತ್ತದೆ ಮತ್ತು ಬೀದಿಯಲ್ಲಿ ಸಾಮಾಜಿಕ ಅಶಾಂತಿ ಉಂಟುಮಾಡಲು ಬೇಕಾದ ಸಂಘಪರಿವಾರದ ಯಂತ್ರಾಂಗವೂ ಅದರ ಜೊತೆಗಿರುತ್ತದೆ. ಹೀಗಿರುವಾಗ ಆರ್ಥಿಕವಾಗಿ ವಿಶೇಷ ಜನಪರ ಕಾರ್ಯಕ್ರಮಗಳಿಲ್ಲದೇ ಅದನ್ನು ನಿಭಾಯಿಸುವುದು ಸುಲಭವಲ್ಲ. ತಮಗೆ ಸರಿಯೆನ್ನಿಸಿದ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರದ ಮೈತ್ರಿಕೂಟದಲ್ಲಿ ಸ್ವಾತಂತ್ರ್ಯ ಇಲ್ಲದಿದ್ದರೆ ಅಸಾಧ್ಯವೇ ಸರಿ. ಹಾಗಾಗಿ ಮೈತ್ರಿ ಅಂಕಗಣಿತ ಪೂರಕವಾಗಿಲ್ಲದಿದ್ದರೆ ಸರ್ಕಾರ ರಚಿಸುವುದು ಅಷ್ಟು ಒಳ್ಳೆಯದಲ್ಲವೆಂಬುದು ಕಾಂಗ್ರೆಸ್‍ನ ಆಲೋಚನೆ.

ತೃತೀಯ ರಂಗ (ಅಂಥದ್ದೊಂದು ಇನ್ನೂ ರಚನೆಯಾಗಿಲ್ಲದಿದ್ದರೂ, ಚುನಾವಣೋತ್ತರ ಸಂದರ್ಭದ ಅಂಕಿ-ಸಂಖ್ಯೆಗಳು ಅದನ್ನು ಸಾಧ್ಯವಾಗಿಸಬಹುದು) ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಡುವುದರಿಂದ ಕಾಂಗ್ರೆಸ್‍ಗೆ ಅನುಕೂಲವಿದೆ. ಮೋದಿ ನೇತೃತ್ವದ ಸರ್ಕಾರವು ಇಲ್ಲದಿರುವ ಅನುಕೂಲ ಅದಕ್ಕೆ ಲಭಿಸುತ್ತದೆ. ತೃತೀಯ ರಂಗ ಸರ್ಕಾರ ಬಿದ್ದು ಹೋದರೆ, ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿಯು ತಾನು ಕೊಟ್ಟ ಆಶ್ವಾಸನೆಗಳನ್ನು ಜಾರಿ ಮಾಡಿಲ್ಲ, ಇತರ ಪಕ್ಷಗಳೂ ಸ್ಥಿರ ಸರ್ಕಾರ ಕೊಡಲು ಶಕ್ತವಾಗಿಲ್ಲ, ಹಾಗಾಗಿ ಕಾಂಗ್ರೆಸ್‍ಗೆ ಮತ ಕೊಡಿ ಎಂದು ಚುನಾವಣೆಗೆ ಹೋಗಲು ಕಾಂಗ್ರೆಸ್‍ಗೆ ಸುಲಭ ಎಂಬುದು ಅವರ ಲೆಕ್ಕಾಚಾರ. ಆದರೆ, 1980, 1991 ಅಥವಾ 1998ರಲ್ಲಿ ಮಾಡಿದಂತೆ ತೃತೀಯ ರಂಗದ ಸರ್ಕಾರವನ್ನು ಬೀಳಿಸುವ ಕೆಲಸವನ್ನು ಈ ಸಾರಿ ಕಾಂಗ್ರೆಸ್ ಮಾಡುವುದಿಲ್ಲ.

ಎಷ್ಟು ಕಾಲ ಆ ಸರ್ಕಾರವಿರುತ್ತೋ, ಅಷ್ಟು ಕಾಲ ತನಗೆ ಪಕ್ಷವನ್ನು ಗಟ್ಟಿ ಮಾಡಿಕೊಳ್ಳುವ ಅವಕಾಶ ಇರುತ್ತದೆ ಎಂದು ಕಾಂಗ್ರೆಸ್ ಲೆಕ್ಕ ಹಾಕಿದೆ. ಪಕ್ಷವನ್ನು ಗಟ್ಟಿ ಮಾಡಿಕೊಳ್ಳುವ ಕೆಲಸವನ್ನು ಈಗಾಗಲೇ ಆರಂಭ ಮಾಡಿದ್ದಾರೆ. ಗುಜರಾತ್‍ನ ಚುನಾವಣೆಯ ಹೊತ್ತಿನಿಂದಲೇ ರಾಹುಲ್‍ಗಾಂಧಿ ಆ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದೀಗ ಉತ್ತರ ಪ್ರದೇಶಕ್ಕೆ ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಕಳಿಸಿಕೊಟ್ಟಿರುವುದೂ ಸಹಾ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಪಡೆಯಲಿಲ್ಲ; ಬದಲಿಗೆ 2022ರಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬೆಂಬಲವಿಲ್ಲದೇ ಸರ್ಕಾರ ರಚನೆ ಸಾಧ್ಯವಿಲ್ಲದ ಪ್ರಮಾಣಕ್ಕೆ ಪಕ್ಷವನ್ನು ಬೆಳೆಸಲು! ಈ ಸಾರಿ ಅಮೇಥಿಗೆ ಹೋದ ಪ್ರಿಯಾಂಕಾ ಗಾಂಧಿ, ಅಲ್ಲಿನ ಕಾಂಗ್ರೆಸ್ ನಾಯಕರಿಗೆ 2022ರ ವಿಧಾನಸಭಾ ಚುನಾವಣೆಗೆ ತಯಾರಿ ಶುರು ಹಚ್ಚಿಕೊಳ್ಳಿ ಎಂದು ಸೂಚಿಸಿದ್ದಾರೆ!!

ಶ್ರೀನಿವಾಸನ್ ಜೈನ್ ಅವರಿಗೆ ನೀಡಿದ ಸಂದರ್ಶನದಲ್ಲೇ ರಾಹುಲ್‍ಗಾಂಧಿ ಒಂದು ಮುಖ್ಯ ಅಂಶವನ್ನು ಹೊರಗೆಡವಿದರು. ನಿಮ್ಮ ಶಕ್ತಿ ಮತ್ತು ದೌರ್ಬಲ್ಯಗಳು ಪ್ರಧಾನವಾಗಿ ಎಲ್ಲಿವೆ ಎಂಬ ಕುರಿತು ತಲಾ ಒಂದು ಅಂಶವನ್ನು ಹೇಳಿ ಎಂದು ಜೈನ್ ಕೇಳಿದ್ದರು. ‘ನಾವು ಜನರ ಮಾತನ್ನು ಆಲಿಸುತ್ತೇವೆ ಎಂಬುದರಲ್ಲಿ ನಮ್ಮ ಶಕ್ತಿಯಿದೆ. ಇನ್ನು ದೌರ್ಬಲ್ಯದ ವಿಚಾರಕ್ಕೆ ಬರುವುದಾದರೆ, ನಾವು ಅತ್ಯಂತ ಅರಾಜಕವಾಗಿ ಇರಬಲ್ಲೆವು (We can be very disorganised)’ ಎಂದು ರಾಹುಲ್ ಹೇಳಿದರು. ಅಂದರೆ, ರಾಹುಲ್‍ಗಾಂಧಿಗೆ ತಮ್ಮ ಶಕ್ತಿಗಿಂತಲೂ ದೌರ್ಬಲ್ಯವು ಚೆನ್ನಾಗಿ ಗೊತ್ತಿದೆ ಎಂದಾಯಿತು. ಹಾಗಾಗಿಯೇ ಪಕ್ಷವನ್ನು ಗಟ್ಟಿಗೊಳಿಸುವುದೆಂದರೆ ಅದು ಬೇಗ ಬೇಗ ಆಗಿಬಿಡುವುದಿಲ್ಲ ಎಂದು ಅವರಿಗೆ ಅರಿವಿದ್ದಂತಿದೆ. ಹಳೆಯ ನಾಯಕರುಗಳನ್ನು ಒಂದೇ ಸಾರಿಗೆ ಪಕ್ಕಕ್ಕೆ ಸರಿಸುವುದು ಅಸಾಧ್ಯ. ಹಂತಹಂತವಾಗಿ ಪಕ್ಷದಲ್ಲಿ ಹೊಸ ನೀರನ್ನು ತಂದು ಅದನ್ನು ಗಟ್ಟಿಗೊಳಿಸಬೇಕು ಎಂಬುದು ಅವರ ಇರಾದೆಯಿದ್ದಂತಿದೆ. ಈ ಕೆಲಸವನ್ನು ಅವರು ಕಳೆದ 3-4 ವರ್ಷಗಳಲ್ಲಿ ಮಾಡುತ್ತಾ ಬಂದಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕೇ ಪ್ರಥಮ ಆದ್ಯತೆ, ಆದರೆ ಅದಕ್ಕಾಗಿ ತಮ್ಮ ಪಕ್ಷದ ಹಿತಾಸಕ್ತಿಯನ್ನೂ ಬಲಿಕೊಡುವುದಿಲ್ಲ ಎಂದು ಕಾಂಗ್ರೆಸ್ ನಿರ್ಧರಿಸಿದ್ದು ಸ್ಪಷ್ಟವಾಗಿತ್ತು. ಎರಡರ ಜಾಗದಲ್ಲಿ 5 ಸ್ಥಾನಗಳಿಗೆ ಕಾಂಗ್ರೆಸ್ ತೃಪ್ತಿಪಟ್ಟುಕೊಳ್ಳುವುದಾಗಿದ್ದರೆ, ಅಷ್ಟು ಬಿಟ್ಟುಕೊಡಲು ಎಸ್‍ಪಿ ಬಿಎಸ್‍ಪಿಗಳು ಸಿದ್ಧವಿದ್ದವು. ಆದರೆ, ಉತ್ತರ ಪ್ರದೇಶಾದ್ಯಂತ ತಮ್ಮ ಪಕ್ಷವನ್ನು ಬಲಪಡಿಸಿಕೊಳ್ಳಲು ಕಾಂಗ್ರೆಸ್‍ಗೆ ಅದರಿಂದ ಅಡ್ಡಿಯಾಗುತ್ತಿತ್ತು. ಅದಕ್ಕಾಗಿ ಪಕ್ಕದ ರಾಜ್ಯದ ಯುವ ಮುಂದಾಳು ಜ್ಯೋತಿರಾದಿತ್ಯಾರ ಜೊತೆಗೆ, ತನಗಿಂತಲೂ ಹೆಚ್ಚು ಚರಿಷ್ಮಾ ಉಳ್ಳ, ಸ್ಥಳೀಯ ಹಿಂದಿ ಮಾತನಾಡಬಲ್ಲ ತಂಗಿ ಪ್ರಿಯಾಂಕಾ ಗಾಂಧಿಯನ್ನೇ ರಾಹುಲ್ ದೇಶದ ದೊಡ್ಡ ರಾಜ್ಯದಲ್ಲಿಳಿಸಿದರು.

ತನ್ನ ನಿಷ್ಠಾವಂತ ಮೈತ್ರಿ ಪಕ್ಷ ಆರ್‍ಜೆಡಿಯ ಬಿಹಾರಕ್ಕೆ ಈ ಸಾರಿ ಎಂಟ್ರಿ ಕೊಡುವಾಗಲೂ ಕಾಂಗ್ರೆಸ್ ಮಾಡಿದ್ದೇನು ಗೊತ್ತೇ? ಯುಪಿಎ ರ್ಯಾಲಿ ಬದಲಿಗೆ, ಪಾಟ್ನಾದಲ್ಲಿ ಬೃಹತ್ ಕಾಂಗ್ರೆಸ್ ರ್ಯಾಲಿ ಮಾಡುವ ಮೂಲಕ. ಏಕೆಂದರೆ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಪ್ರಾಬಲ್ಯ ಸ್ಥಾಪಿಸಿದರೆ ಹಿಂದಿ ರಾಜ್ಯಗಳನ್ನು ಪೂರ್ಣ ಕವರ್ ಮಾಡಿದಂತಾಗುತ್ತದೆ. ಇನ್ನು ದಕ್ಷಿಣದಲ್ಲಿ ತನ್ನ ಎದುರಾಳಿ ಬಿಜೆಪಿ ಅಲ್ಲವೇ ಅಲ್ಲ; ಅದರಲ್ಲೂ ಕೇರಳದಲ್ಲಿ ಎಡಪಕ್ಷಗಳನ್ನು ಎದುರು ಹಾಕಿಕೊಂಡಾದರೂ ಕಾಂಗ್ರೆಸ್‍ನ ಪ್ರಾಬಲ್ಯ ಸ್ಥಾಪಿಸಲು ನಿರ್ಧಾರ ಮಾಡಿಯೇ ವಯನಾಡಿನಲ್ಲಿ ಕಣಕ್ಕಿಳಿದಾಗಿದೆ. ಇನ್ನು ಆಂಧ್ರ, ತಮಿಳುನಾಡುಗಳಲ್ಲಿ ಈಗಲೇ ಪ್ರಾಬಲ್ಯ ಕಷ್ಟವಿದ್ದರೂ ಉಳಿದ ರಾಜ್ಯಗಳಲ್ಲಿ ತಾನೇ ಪ್ರಧಾನ ಪ್ರತಿಪಕ್ಷ ಎಂಬ ಲೆಕ್ಕಾಚಾರ ಅವರದ್ದಾಗಿದೆ.

ದೆಹಲಿ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಮೈತ್ರಿಗೆ ಮುಂದಾಗದಿರುವುದು ಸಹಾ ಕಾಂಗ್ರೆಸ್‍ನ ಈ ದೂರಾಲೋಚನೆಯನ್ನೇ ತೋರಿಸುತ್ತದೆ. ಇದರರ್ಥ ಕಾಂಗ್ರೆಸ್‍ಗೆ ಎಲ್ಲವೂ ಸುಲಭವೇನಲ್ಲ. ಒರಿಸ್ಸಾ, ಪ.ಬಂಗಾಳಗಳಲ್ಲಿ ಪ್ರಾದೇಶಿಕ ಪಕ್ಷಕ್ಕೆದುರು ವಿರೋಧ ಪಕ್ಷದ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಾಗಿದೆ. ತಮಿಳುನಾಡಿನಂತೆ ಆಂಧ್ರ, ಈಶಾನ್ಯ ಭಾರತ ಜಮ್ಮು ಕಾಶ್ಮೀರಗಳಲ್ಲೂ ಪ್ರಾದೇಶಿಕ ಪಕ್ಷದ ಬಾಲ ಹಿಡಿದು ಜೂನಿಯರ್ ಪಾರ್ಟ್‍ನರ್ ಆಗಬೇಕಾದ ಸ್ಥಿತಿಯಿದೆ. ಮಹಾರಾಷ್ಟ್ರದಲ್ಲಿ ಎನ್‍ಸಿಪಿಯ ಜೊತೆಗೆ ಮೈತ್ರಿ ಇಲ್ಲದಿದ್ದರೆ, ಬಿಜೆಪಿಯನ್ನು ಎದುರಿಸುವುದು ಸಾಧ್ಯವೇ ಇಲ್ಲ. ತೆಲಂಗಾಣದಲ್ಲಿ ಹೆಸರಿಗೆ ಪ್ರಮುಖ ವಿರೋಧ ಪಕ್ಷವಾದರೂ, ಗುಂಪುಗುಂಪಾಗಿ ಎಂಎಲ್‍ಎಗಳು ಟಿಆರ್‍ಎಸ್‍ಗೆ ವಲಸೆ ಹೋಗುತ್ತಿದ್ದಾರೆ. ಉತ್ತರದ ರಾಜ್ಯಗಳಿಗಿಂತ ಹೆಚ್ಚು ಮೋದಿ ಪರ ಅಲೆ ಇರುವ ಕರ್ನಾಟಕದಲ್ಲಿ ಮುಂದೇನಾಗುತ್ತದೆಂದು ಈಗಲೇ ಹೇಳಲಾಗದು. ಇಂತಹ ಹಲವು ಸವಾಲುಗಳನ್ನು ರಾಹುಲ್ ನೇತೃತ್ವದ ತಂಡ ಎದುರಿಸಬೇಕಾಗುತ್ತದೆ.

ಇದನ್ನು ಓದಿರಿ ನರ್ವಸ್ ಬಿಜೆಪಿಯ ಮುಂದೆ ಆತ್ಮವಿಶ್ವಾಸವಿಲ್ಲದ ಕಾಂಗ್ರೆಸ್

ಅದೇನೇ ಇದ್ದರೂ, 2009ರ ನಂತರ ಕುಸಿಯುತ್ತಾ ಬಂದ ಕಾಂಗ್ರೆಸ್‍ನ ಸಂಘಟನೆಯನ್ನು ಬಲಗೊಳಿಸದಿದ್ದರೆ, ಬಿಜೆಪಿ ಆರೆಸ್ಸೆಸ್‍ಗೆದುರು ಭಿನ್ನ ರೀತಿಯ ಸೈದ್ಧಾಂತಿಕ ನೆಲೆಯನ್ನು ಸಮಾಜದಲ್ಲೂ ಗಟ್ಟಿಗೊಳಿಸದಿದ್ದರೆ ಕಾಂಗ್ರೆಸ್‍ಗೆ ದೀರ್ಘಕಾಲಿಕ ಭವಿಷ್ಯವಿಲ್ಲ. ಆ ದೃಷ್ಟಿಯಿಂದ ನೋಡಿದರೆ, ಪೂರಕ ವಾತಾವರಣವಿಲ್ಲದಿದ್ದರೆ ಸರ್ಕಾರ ರಚಿಸದಿರುವ ರಾಹುಲ್ ತಂಡದ ಲೆಕ್ಕಾಚಾರ ಸರಿಯಿದೆ.

ಆದರೆ, ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಹೀನಾಯ ಸೋಲನ್ನು ಅನುಭವಿಸಿದರೆ ಮಾತ್ರ ಈ ಎಲ್ಲಾ ಲೆಕ್ಕಾಚಾರಗಳು ಫಲ ಕೊಡುತ್ತವೆ. ಇಲ್ಲದಿದ್ದರೆ, ತೃತೀಯ ರಂಗದ ಸರ್ಕಾರವು ಒಂದೇ ವರ್ಷದಲ್ಲಿ ಬಿದ್ದು ಬಿಟ್ಟರೆ ಈ ಲೆಕ್ಕಾಚಾರ ಕೈ ಕೊಟ್ಟು ಮೋದಿ ಹಿಂದಿಗಿಂತ ಪ್ರಬಲವಾಗಿ ಮತ್ತೆ ಅಧಿಕಾರದ ಗದ್ದುಗೆಗೇರುವ ಎಲ್ಲಾ ಸಾಧ್ಯತೆಗಳಿವೆ. ಈ ಸಾರಿ ಮತ್ತೆ ಮೋದಿಯೇ ಅಧಿಕಾರಕ್ಕೆ ಬಂದರೆ? ಆಗ ಸವಾಲು ದೊಡ್ಡದಿರುತ್ತದೆ. ಆದರೆ, ಕಾಂಗ್ರೆಸ್ ಪಕ್ಷವನ್ನು ಬುಡದಿಂದ ಭದ್ರಗೊಳಿಸುವ ಕೆಲಸ, ಎಷ್ಟೇ ದೀರ್ಘವಾಗಿದ್ದರೂ ಸಹಾ, ಅದಕ್ಕೆ ಒಳ್ಳೆಯದನ್ನೇ ಮಾಡುತ್ತದೆ.

ಇವೆಲ್ಲದರಲ್ಲಿ ಯಾವುದರ ಸಾಧ್ಯತೆ ಎಷ್ಟಿದೆ ಎಂಬುದು ಗೊತ್ತಾಗುವುದು ಮೇ 23ರ ಸಂಜೆಗೇ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here