Homeಅಂಕಣಗಳುಗಣರಾಜ್ಯವನ್ನು ಮತ್ತೆ ನಮ್ಮದಾಗಿಸಿಕೊಳ್ಳೋಣ

ಗಣರಾಜ್ಯವನ್ನು ಮತ್ತೆ ನಮ್ಮದಾಗಿಸಿಕೊಳ್ಳೋಣ

- Advertisement -
- Advertisement -

(ಭಾರತದ ಹಲವು ಗಣ್ಯ ವಿದ್ವಾಂಸರು, ಹೋರಾಟಗಾರರು ಮತ್ತು ಸಾಮಾಜಿಕ ಹಾಗೂ ಆಡಳಿತ ಸುಧಾರಣೆಗಳಲ್ಲಿ ತೊಡಗಿರುವವರು ಒಟ್ಟುಗೂಡಿ, ಮುಂಬರುವ ಚುನಾವಣೆಗೆ ಒಂದು ‘ಪ್ರಜಾಪ್ರಣಾಳಿಕೆ’ಯನ್ನು ಸಿದ್ಧಪಡಿಸಿದ್ದಾರೆ. ಅವರದನ್ನು Reclaiming the republic ಎಂದು ಕರೆದಿದ್ದಾರೆ. ಅದರ ಯಥಾವತ್ ಕನ್ನಡಾನುವಾದ ಕಷ್ಟವಾದ್ದರಿಂದ ‘ಈ ಗಣರಾಜ್ಯವನ್ನು ಮತ್ತೆ ನಮ್ಮದಾಗಿಸಿಕೊಳ್ಳೋಣ’ ಎಂಬ ಹೆಸರಿನಲ್ಲಿ ಇಲ್ಲಿ ಮುಂದಿಟ್ಟಿದ್ದೇವೆ. ಇಂಗ್ಲಿಷಿನಲ್ಲಿದ್ದ ಮೂಲ ದಸ್ತಾವೇಜಿನ ಸಂಕ್ಷಿಪ್ತ ರೂಪವನ್ನು ಅದೇ ತಂಡದಲ್ಲಿದ್ದ ಸುಪ್ರೀಂಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಮತ್ತು ಅಂಜಲಿ ಭಾರದ್ವಾಜ್ ಅವರು ಸ್ಕ್ರೋಲ್ ವೆಬ್ ಮ್ಯಾಗಜೀನ್‍ಗೆ ಬರೆದಿದ್ದರು. ಅದನ್ನು ರಾಜಶೇಖರ ಅಕ್ಕಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ.

ಅದಕ್ಕೆ ಕರ್ನಾಟಕದ ಕೆಲವು ಚಿಂತಕ-ಹೋರಾಟಗಾರರನ್ನು ತಮ್ಮ ನೆಲೆಯಿಂದ ಪ್ರತಿಕ್ರಿಯಿಸಲು ಕೇಳಿದ್ದೆವು. ಅವುಗಳಲ್ಲಿ ಕೆ.ಫಣಿರಾಜ್, ಸ್ವರ್ಣಾಭಟ್ ಮತ್ತು ವಿಕಾಸ್ ಆರ್ ಮೌರ್ಯ ಅವರ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.)

ಈ ಗಣರಾಜ್ಯವನ್ನು ಮತ್ತೆ ನಮ್ಮದಾಗಿಸಿಕೊಳ್ಳೋಣ

– ಪ್ರಶಾಂತ್ ಭೂಷಣ್ ಮತ್ತು ಅಂಜಲಿ ಭಾರದ್ವಾಜ್  |

ನಮ್ಮದು ಈ ದೇಶದ ವಿದ್ಯಮಾನಗಳಿಂದ ಆತಂಕಗೊಳಗೊಂಡ ನಾಗರಿಕರ ಒಂದು ಗುಂಪು. ನಾವೆಲ್ಲ ಬೇರೆ ಬೇರೆ ರಾಜಕೀಯ ಅಭಿಪ್ರಾಯ ಮತ್ತು ರಾಜಕೀಯ ಸಂಬಂಧಗಳನ್ನು ಹೊಂದಿದ್ದೇವೆ. ಆದರೆ ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ ನಮಗಿರುವ ನಂಬಿಕೆ, ಸಂವಿಧಾನದ ತತ್ವಕ್ಕೆ ಬದ್ಧರಾಗಿರಬೇಕೆನ್ನುವ ನಂಬಿಕೆ ಮತ್ತು ಬಹುತ್ವ ಹಾಗೂ ಪ್ರಜಾತಾಂತ್ರಿಕ ಭಾರತ ಗಣರಾಜ್ಯದಲ್ಲಿರುವ ವಿಶ್ವಾಸಗಳು ನಮ್ಮನ್ನು ಒಗ್ಗೂಡಿಸಿವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಗಣರಾಜ್ಯಕ್ಕೆ ಒದಗಿದ ಅನೇಕ ಸವಾಲುಗಳನ್ನು ಕಂಡು ಕಳವಳಗೊಂಡು, ನಾವು ಈ ಸವಾಲುಗಳನ್ನು ಆಳವಾಗಿ ಪರೀಕ್ಷಿಸಿದ್ದೇವೆ. ಗಟ್ಟಿಯಾದ ಸಮಾಜಕ್ಕೆ ಮತ್ತು ಪ್ರಜಾತಾಂತ್ರಿಕ ರಾಜ್ಯಾಡಳಿತಕ್ಕೆ ಇರುವ ಸಂವಿಧಾನಾತ್ಮಕ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ರಕ್ಷಿಸುವ ಸಲುವಾಗಿ ಸಮಾಜದ ಮುಂದೆ ಈ ಕೆಲವು ಪ್ರಸ್ತಾಪವನ್ನಿಡುತ್ತಿದ್ದೇವೆ. ನಮ್ಮ ಗಣರಾಜ್ಯದ ಹಿರಿಮೆಯನ್ನು ಬುಡಮೇಲು ಮಾಡುವುದನ್ನು ತಡೆದು, ಆ ಹಿರಿಮೆಯನ್ನು ಮರಳಿ ಪಡೆಯಲು ಮುಂಬರುವ ಲೋಕಸಭೆ ಚುನಾವಣೆಯನ್ನು ಒಂದು ಅವಕಾಶವನ್ನಾಗಿ ನೋಡುತ್ತಿದ್ದೇವೆ.

ಇಂದಿನ ಸ್ಥಿತಿಗತಿಯನ್ನು ಗಮನಿಸಿದರೆ, ಕಾನೂನು, ನೀತಿಗಳಲ್ಲಿ ಹಾಗೂ ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ ತುರ್ತು ಸುಧಾರಣೆಗಳ ಅವಶ್ಯಕತೆ ಕಾಣುತ್ತದೆ. ಇದರಲ್ಲಿ ಮೊದಲನೇಯದಾಗಿ, ಸದ್ಯಕ್ಕೆ ಆಳ್ವಿಕೆಯಲ್ಲಿರುವ ಸರಕಾರದಿಂದ ಆಗಿರುವ ಹಾನಿಗಳನ್ನು ಸರಿಪಡಿಸುವುದಾಗಿದೆ: ಇದರಲ್ಲಿ ನಮ್ಮ ದೇಶದಲ್ಲಿ ಕಾನೂನುಬದ್ಧ ಆಳ್ವಿಕೆ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು; ನ್ಯಾಯಾಂಗ ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಆಗದಂತೆ ನೋಡಿಕೊಳ್ಳುವುದು; ಆಡಳಿತಾತ್ಮಕ ರಚನೆಗಳು/ಸಂಸ್ಥೆಗಳು ನ್ಯಾಯಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ನಡೆಯುವಂತೆ ನೋಡಿಕೊಳ್ಳುವುದು ಹಾಗೂ ಕೊನೆಯದಾಗಿ, ಅತ್ಯಂತ ಮಹತ್ವವಾಗಿ, ರಾಷ್ಟ್ರೀಯ ಘಟನೆಗಳನ್ನು ವರದಿ ಮಾಡುವಾಗ ಸ್ವತಂತ್ರವಾಗಿ ನಿಖರತೆ ಮತ್ತು ಜವಾಬ್ದಾರಿಯಿಂದ ನಮ್ಮ ಮಾಧ್ಯಮಗಳು ವರದಿ ಮಾಡುವಂತೆ ನೋಡಿಕೊಳ್ಳುವುದು. ಆದರೆ ಈಗಾಗಲೇ ಆಗಿರುವ ಹಾನಿಯನ್ನು ಸರಿಪಡಿಸುವುದು ಎಂದರೆ ಬರೀ ಹಿಂದಿನ ಸ್ಥಿತಿಗೆ ಮರಳುವುದು ಎಂತಲ್ಲ. ಈ ಸವಾಲುಗಳ ಬೇರುಗಳು ತುಂಬಾ ಹಿಂದಿನ ಸಮಯಕ್ಕೆ ಹೋಗುತ್ತವೆ. ನಮಗೆ, ಭವಿಷ್ಯದಲ್ಲಿ ಇಂತಹ ಹಾನಿ ಆಗಬಾರದಂತೆ ಖಾತ್ರಿಪಡಿಸುವಂತಹ ಗಟ್ಟಿಯಾದ ಕ್ರಮಗಳ ಮತ್ತು ಮರುರಚನೆಯ ಅಗತ್ಯವಿದೆ. ನ್ಯಾಯ, ಸ್ವಾತಂತ್ರ್ಯ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಉಳಿಸಿಕೊಳ್ಳಲು ಸಂವಿಧಾನಿಕ ನಿಶ್ಚಯಗಳ ಚೈತನ್ಯವನ್ನು ಮತ್ತೊಮ್ಮೆ ಪುಟಿದೆಬ್ಬಿಸದೇ ರಾಷ್ಟ್ರೀಯ ಕರ್ತವ್ಯದಲ್ಲಿ ಬಹುಸಂಖ್ಯಾತ ಭಾರತೀಯರನ್ನು ತೊಡಗಿಸುವುದನ್ನು ಊಹಿಸಲಾಗದು.

ಇದಕ್ಕನುಗುಣವಾದ ಮರುರಚನೆ, ಹೊಸ ನಿಲುವು ಮತ್ತು ಗಣರಾಜ್ಯವನ್ನು ಮರುಪಡೆಯುವುದಕ್ಕಾಗಿ ದೇಶದ ಮುಂದೆ ನಿರ್ದಿಷ್ಟ ಐಡಿಯಾ ಮತ್ತು ಕೈಗೊಳ್ಳಬೇಕಾದ ಕ್ರಮಗಳನ್ನು ಇಡುತ್ತಿದ್ದೇವೆ. ನಾವು ಪ್ರಸ್ತಾಪಿಸುವ ಸುಧಾರಣೆಗಳ ವ್ಯಾಪ್ತಿ ಇಂತಿವೆ.

ಪ್ರಜಾತಾಂತ್ರಿಕ ಸ್ವಾತಂತ್ರ್ಯ

1) ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಮತ್ತು ರಾಜಕೀಯ ಕಾರ್ಯಕರ್ತರನ್ನು ಹೆದರಿಸಲು ವ್ಯಾಪಕವಾಗಿ ದುರುಪಯೋಗಪಡಿಸಲಾಗುತ್ತಿರುವ ಹಳತಾದ ಮತ್ತು ಅತ್ಯಂತ ಕಠೋರವಾದ ಕಾನೂನುಗಳನ್ನು ತೆಗೆದುಹಾಕುವುದು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ (ರಾಜದ್ರೋಹ/ಸೆಡಿಷನ್) ಮತ್ತು 499 (ಕ್ರಿಮಿನಲ್ ಮಾನಹಾನಿ), ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಅನ್‍ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್) ಮತ್ತು ರಾಷ್ಟ್ರೀಯ ರಕ್ಷಣಾ ಕಾಯಿದೆ (ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ NSA) ಹಾಗೂ ಸಶಸ್ತ್ರ ಬಲಗಳ ವಿಶೇóಷಾಧಿಕಾರ ಕಾಯಿದೆ(ಏ.ಎಫ್.ಎಸ್.ಪಿ.ಏ AFSPA) ಹಾಗೂ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ (FCRA) ಅದರೊಂದಿಗೆ ಧರ್ಮನಿಂದೆ ಹಾಗೂ ಶಾಸಕಾಂಗದ ಮತ್ತು ನ್ಯಾಯಾಂಗ ನಿಂದನೆಗೆ ಇರುವ ಕಾಯಿದೆಗಳು, ಇವೆಲ್ಲವುಗಳನ್ನು ತೆಗೆದುಹಾಕಬೇಕು.

2) ಚುನಾವಣೆಗಳಲ್ಲಿ ಹಣಬಲದ ಪ್ರಭಾವವನ್ನು ಕಡಿಮೆ ಮಾಡುವ ಹಾಗೂ ಚುನಾವಣೆ ವ್ಯವಸ್ಥೆಯನ್ನು ಇನ್ನಷ್ಟು ಪ್ರಜಾತಾಂತ್ರಿಕವಾಗಿ ಮಾಡುವ ಗುರಿಯನ್ನಿಟ್ಟುಕೊಂಡು ಮಾಡಬೇಕಾದ ಚುನಾವಣಾ ಸುಧಾರಣೆಗಳು (ಎಲೆಕ್ಟೋರಲ್ ರಿಫಾರ್ಮ್ಸ್)

ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಹಾಗೂ ಚುನಾವಣೆ ದೇಣಿಗೆಗೆ ಸಂಬಂಧಿಸಿದಂತೆ ಇತ್ತೀಚಿಗೆ ತಂದ ಬದಲಾವಣೆಗಳನ್ನು ಹಿಂಪಡೆಯಬೇಕು, ಚುನಾವಣೆಯ ಹಣಕಾಸು ಸುಧಾರಣೆಗಾಗಿ ಒಂದು ಸಮಗ್ರವಾದ ಕಾನೂನನ್ನು ತರಬೇಕು ಮತ್ತು ಚುನಾವಣೆಗೆ ಹಣಕಾಸು ಒದಗಿಸಲು ರಾಷ್ಟ್ರೀಯ ಚುನಾವಣಾ ನಿಧಿಯನ್ನು ಸ್ಥಾಪಿಸಬೇಕು.

3) ಮಾಧ್ಯಮಗಳನ್ನು ಇನ್ನಷ್ಟು ಸ್ವತಂತ್ರವಾಗಿಸಲು, ಹೆಚ್ಚಿನ ವೈವಿಧ್ಯ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸುವ ಉದ್ದೇಶವನ್ನಿಟ್ಟುಕೊಂಡ ಮಾಧ್ಯಮ ಸುಧಾರಣೆಗಳು

ಅಮೇರಿಕದಲ್ಲಿ ಇರುವ ‘ಮೊದಲ ತಿದ್ದುಪಡಿ’ಯಂತೆ ಮಾಧ್ಯಮ ಸ್ವಾತಂತ್ರ್ಯ ಬಿಲ್ ತರಬೇಕು; ಈ ಅಮೆಂಡ್‍ಮೆಂಟ್‍ನಿಂದ ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಖಾತ್ರಿಯಾಗುತ್ತದೆ ಮತ್ತು ಎಲ್ಲ ರೀತಿಯ ಕಟ್ಟಳೆ, ನಿರ್ಬಂಧಗಳನ್ನು ತೆಗೆದುಹಾಕುತ್ತದೆ. ಆ ನಿರ್ಬಂಧಗಳು ರೇಡಿಯೋದಲ್ಲಿ ಬಿತ್ತರಿಸುವುದಕ್ಕೂ ಮುಂಚೆ ಮಾಡುವ ಸೆನ್ಸರ್‍ಷಿಪ್ ಆಗಿರಬಹದು; ಕಟ್ಟಳೆಯಿಲ್ಲದೆ ಬೇಕಾಬಿಟ್ಟಿಯಾಗಿ ಮಾಡುವ ಅಂತರ್ಜಾಲ ಸೇವೆ ಸ್ಥಗಿತ ಆಗಿರಬಹುದು. ಒಂದು ಸ್ವಯಂಆಡಳಿತದ ಶಾಸನಬದ್ಧ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರ ಹಾಗೂ ಸ್ವಯಂಆಡಳಿತದ ಶಾಸನಬದ್ಧ ದೂರು ಪ್ರಾಧಿಕಾರ ಸ್ಥಾಪಿಸಬೇಕು. ಅದರೊಂದಿಗೆ ಪ್ರಸಾರ ಭಾರತಿಯನ್ನು ಒಂದು ನಿಜವಾದ ಸ್ವತಂತ್ರ ಸಾರ್ವಜನಿಕ ಸೇವೆಯ ಪ್ರಸಾರದ ಸಂಸ್ಥೆಯನ್ನಾಗಿಸಬೇಕು.

ಕಲ್ಯಾಣ ರಾಜ್ಯ

4) ಎಲ್ಲಾ ನಾಗರಿಕರಿಗೆ ಸಾರ್ವತ್ರಿಕ ಮೂಲ ಸೇವೆಗಳು ಹಾಗೂ ಸಾಮಾಜಿಕ ರಕ್ಷಣೆ

ಶಿಕ್ಷಣ, ಆರೋಗ್ಯ, ಬಾಣಂತಿ ಪೋಷಣೆ ಹಾಗೂ ಮಕ್ಕಳಸೇವೆ ಇವೆಲ್ಲವುಗಳನ್ನು ಒಳಗೊಂಡ ಒಳ್ಳೆಯ ಗುಣಮಟ್ಟದ ಸಾರ್ವತ್ರಿಕ ಸಾರ್ವಜನಿಕ ಸೌಲಭ್ಯ; ಪೌಷ್ಟಿಕ ಧಾನ್ಯಗಳು, ಕಾಳುಗಳು, ಖಾದ್ಯತೈಲ ಇವೆಲ್ಲವುಗಳನ್ನು ಒಳಗೊಂಡ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮುಖಾಂತರ ಆಹಾರ ಭದ್ರತೆಗೆ ಎಲ್ಲರಿಗೂ ಅವಕಾಶ, ಕನಿಷ್ಠ ವರಮಾನದ ಅರ್ಧದಷ್ಟು ಎಲ್ಲ ಹಿರಿಯ ನಾಗರಿಕರಿಗೆ ಸಾರ್ವತ್ರಿಕ ಪೆನ್ಷನ್ ಹಾಗೂ ವಿಶೇಷ ಅನಾನುಕೂಲತೆ ಹೊಂದಿರುವವರಿಗೆ ವಿಶೇಷ ಸೌಲಭ್ಯಗಳು; ಉದ್ಯೋಗಕ್ಕೆ ಸಂಬಂಧಿಸಿದಂತೆ ವಿತ್ತೀಯ ನೀತಿಯ ಮರುರಚನೆ; ಸಾರ್ವಜನಿಕ ವಸ್ತುಗಳ ರಚನೆಯಲ್ಲಿ ವಿನಿಯೋಗಿಸಿ, ಉದ್ಯೋಗಗಳು ಸೃಷ್ಟಿಯಾಗುವಂತೆ ಹೆಚ್ಚಿನ ವ್ಯಯಕ್ಕೆ ಅನುವು ಮಾಡಿಕೊಡುವುದು.

5) ರೈತರಿಗೆ ಖಚಿತವಾದ ಆದಾಯವನ್ನು ಒಳಗೊಂಡ, ಸಾಲದಿಂದ ಮುಕ್ತಿಯಾಗುವಂತಹ ಮತ್ತು ಸುಸ್ಥಿರವಾದ ಕೃಷಿ ಪದ್ಧತಿಯನ್ನು ಒಳಗೊಂಡ ‘ಹೊಸ ನೀತಿ’ (ನ್ಯೂ ಡೀಲ್)

ಪ್ರತಿಫಲ ಬೆಲೆಗೆ (ಸಂಪೂರ್ಣ ಉತ್ಪಾದನಾ ವೆಚ್ಚ ಸಿ2 ಮೇಲೆ 50%) ಶಾಸನಬದ್ಧ ಖಾತ್ರಿ; ಸಮಗ್ರವಾದ ಒಂದು ಬಾರಿಯ ಸಾಲಮನ್ನಾ, ಅದರೊಂದಿಗೆ ರಾಷ್ಟ್ರೀಯ ಸಾಲ ಮುಕ್ತಿಯ ಆಯೋಗ; ವಿಕೋಪಗಳಿಗೆ ಸಂಬಂಧಿಸಿದ ಬಿಕ್ಕಟ್ಟು ನಿವಾರಣೆಗೆ ಸಮಯಕ್ಕೆ ಸರಿಯಾಗಿ ಮತ್ತು ಪರಿಣಾಮಕಾರಿಯಾದ ಪರಿಹಾರ; ಇನ್‍ಪುಟ್ ವೆಚ್ಚವನ್ನು ಕಡಿಮೆಮಾಡುವುದು ಹಾಗೂ ಜಾನುವಾರುಗಳ ವ್ಯಾಪಾರಕ್ಕೆ ವಿಧಿಸಿದ ಕಾನೂನುಬದ್ಧ ಮತ್ತು ಕಾನೂನುಬಾಹಿರ ರಕ್ಷಕರು ವಿಧಿಸಿದ ಎಲ್ಲಾ ನಿರ್ಬಂಧನೆಗಳನ್ನು ತೆಗೆದುಹಾಕುವುದು; ರೈತರಿಗೆ ಇರುವ ಎಲ್ಲಾ ಸೌಲಭ್ಯಗಳನ್ನು ಗೇಣಿದಾರರಿಗೆ, ಮಹಿಳಾ ರೈತರಿಗೆ, ಆದಿವಾಸಿ ಕೃಷಿಕರಿಗೆ, ಭೂರಹಿತ ಬೆಳೆಗಾರರಿಗೆ ಮತ್ತು ಪಶುಸಂಗೋಪನೆ ಮಾಡುವವರಿಗೆ ವಿಸ್ತರಿಸುವುದು.

6) ಶಿಕ್ಷಣದ ಹಕ್ಕನ್ನು ನಿಜವಾದ ಅರ್ಥದಲ್ಲಿ ಜಾರಿ ಮಾಡುವುದು

ಸರಿಯಾದ ಶಿಕ್ಷಕರನ್ನು ಮತ್ತು ಅಗತ್ಯವಿರುವಷ್ಟು ಅನುದಾನವನ್ನು ಹೊಂದಿರುವ ಸರಕಾರಿ ಶಾಲೆಗಳು; ಪ್ರತಿಯೊಂದು ಶಾಲೆಯೂ ಶಿಕ್ಷಣದ ಹಕ್ಕಿನ ನೀತಿಯೊಂದಿಗೆ ಬದ್ಧವಾಗಿರುವಂತೆ ನೋಡಿಕೊಳ್ಳುವುದು; ಆರ್.ಟಿ.ಇ. ಕಾಯಿದೆಯನ್ನು 16ನೇ ವಯಸ್ಸಿನವರೆಗೆ ಹಾಗೂ ಪ್ರಾಥಮಿಕಪೂರ್ವ ಶಿಕ್ಷಣಕ್ಕೆ ವಿಸ್ತರಿಸುವುದು; ಖಾಲಿ ಹುದ್ದೆಗಳಿರದಂತೆ ನಿಯಮಿತವಾಗಿ ನೇಮಕಾತಿ ಮಾಡಿ ಶಿಕ್ಷಕರ ಕೊರತೆಯನ್ನು ಇಲ್ಲವಾಗಿಸುವುದು; ಎಲ್ಲರಿಗೂ ಕಾರ್ಯಸಮರ್ಥವಾದ ಸಾಕ್ಷರತೆ ಮತ್ತು ಸಂಖ್ಯಾ ಸಾಕ್ಷರತೆ ಬೆಳೆಸಿ, ಅದನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ಚಳವಳಿ.

7) ಸರಿಯಾದ ಸಾಮಥ್ರ್ಯವುಳ್ಳ, ನಿಯಂತ್ರಣವುಳ್ಳ ಹಾಗೂ ಸ್ವಾಯತ್ತತೆಯುಳ್ಳ ಉಚ್ಚ ಶಿಕ್ಷಣ ಸಂಸ್ಥೆಗಳು

ಜಿಡಿಪಿಯ 1% ಹೆಚ್ಚುವರಿ ಭಾಗವನ್ನು ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಮೀಸಲಿಡಬೇಕು, ಹಾಗೂ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿಕ ಕಾಲೇಜುಗಳ ಬೆಂಬಲಕ್ಕಾಗಿ ಮತ್ತು ಅವುಗಳು ಮರುಜೀವ ಪಡೆಯಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು; ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಎಲ್ಲಾ ವಿದ್ಯಾರ್ಥಿಗಳಿಗೆ ನೀಡುವ ಫೆಲೋಷಿಪ್‍ಗಳಲ್ಲಿ ಹತ್ತು ಪಟ್ಟು ಹೆಚ್ಚಳ ಮಾಡುವುದು; ಉಚ್ಚ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯನ್ನು ಪುನರ್‍ಸ್ಥಾಪಿಸಿ ಗಟ್ಟಿಗೊಳಿಸಬೇಕು.

8) ಸಾರ್ವಜನಿಕ ಆರೋಗ್ಯ ಸೇವೆಯ ವ್ಯವಸ್ಥೆಯ ಮುಖಾಂತರ ಎಲ್ಲರಿಗೂ ಸಿಗುವ ಆರೋಗ್ಯ ಸೇವೆ

ಆರೋಗ್ಯಕ್ಕಾಗಿ ಸರಕಾರಿ ವೆಚ್ಚವನ್ನು ಜಿಡಿಪಿಯ 3%ಗೆ ಏರಿಸಬೇಕು, ಅದರ ನಾಲ್ಕನೇ ಮೂರರಷ್ಟು ಭಾಗದ ಹೆಚ್ಚುವರಿ ವೆಚ್ಚವನ್ನು ಕೇಂದ್ರ ಸರಕಾರ ಭರಿಸಬೇಕು; ಪ್ರತಿ ಹಂತದಲ್ಲೂ ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು, ಪ್ರಾಥಮಿಕ ಸೇವೆಗೆ ಆದ್ಯತೆ ನೀಡಬೇಕು; ಮಂಜಾಗ್ರತೆಯ ಸೇವೆ ಮತ್ತು ಆರೋಗ್ಯ ವರ್ಧನೆಯ ಸೇವೆಗಳನ್ನೂ ಖಾತರಿ ಪಡಿಸಬೇಕು. ಇಬ್ಬರು ‘ಆಶಾ’ ಕಾರ್ಯಕರ್ತರೊಂದಿಗೆ ಸಮರ್ಥವಾದ ಸಾರ್ವಜನಿಕ ಆರೋಗ್ಯ ಸಿಬ್ಬಂದಿ ಇರಬೇಕು; ಖಾಸಗಿ ಆರೋಗ್ಯ ವ್ಯವಸ್ಥೆ ಮತ್ತು ವೈದ್ಯಕೀಯ ಕಾಲೇಜುಗಳನ್ನು ನಿಯಂತ್ರಿಸಬೇಕು.

9) ಕನಿಷ್ಠ ವೇತನದೊಂದಿಗೆ ಎಲ್ಲಾ ವಯಸ್ಕರಿಗೆ ಕನಿಷ್ಠ 150 ದಿನಗಳ ಕೆಲಸ ಖಾತ್ರಿಪಡಿಸುವಂತೆ ಮನರೇಗಾ ಯೋಜನೆಯನ್ನು ವಿಸ್ತರಿಸಿಬೇಕು.

ಹಾಗೂ ಕನಿಷ್ಠ ದಿನಗೂಲಿ ಹೊಂದಿರುವಂತೆ ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ವಯಸ್ಕರಿಗೆ ವರ್ಷಕ್ಕೆ 150 ದಿನಗಳ ಕೆಲಸ ಸಿಗುವಂತೆ ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ವಿಸ್ತರಿಸಬೇಕು

10) ಶಿಕ್ಷಣ, ಆರೋಗ್ಯ ಮತ್ತು ಇತರ ಅವಶ್ಯಕ ಸಾರ್ವಜನಿಕ ಸೇವೆಗಳಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.

ಹಾಗೂ ಅವಶ್ಯಕ ಸೇವೆಗಳಲ್ಲಿಯ (ಆರೋಗ್ಯ, ಶಿಕ್ಷಣ, ಸ್ವಚ್ಛತೆ) ಎಲ್ಲಾ ಉದ್ಯೋಗಿಗಳನ್ನು ಇತರೆ ಖಾಯಂ ಸಾರ್ವಜನಿಕ ಉದ್ಯೋಗಿಗಳಂತೆ ಸಮಾನವಾಗಿ ಪರಿಗಣಿಸಬೇಕು. ಆಶಾ, ಬಿಸಿಯೂಟ, ಅಂಗನವಾಡಿ ಇತ್ಯಾದಿ ಸ್ಕೀಂ ಕಾರ್ಯಕರ್ತರೆಂದು ಸದ್ಯಕ್ಕೆ ವರ್ಗೀಕರಿಸಿರುವ ಎಲ್ಲರಿಗೂ ಈ ಹಕ್ಕುಗಳು ದಕ್ಕಬೇಕು.

11) ಸಂಪನ್ಮೂಲಗಳನ್ನು ಹೆಚ್ಚಿಸುವ ಸಕ್ರಿಯವಾದ ವಿತ್ತೀಯ ನೀತಿಯಿಂದ ಇವುಗಳಿಗೆ ಬೇಕಾಗುವ ಹೆಚ್ಚುವರಿ ವೆಚ್ಚವನ್ನು ನೀಗಿಸಬೇಕು.

ಕನಿಷ್ಠ 20% ರಷ್ಟು ಪಿತ್ರಾರ್ಜಿತ ತೆರಿಗೆ(ಇನ್ಹೆರಿಟನ್ಸ್ ಟ್ಯಾಕ್ಸ್), 10 ಕೋಟಿಗಿಂತಲೂ ಹೆಚ್ಚಿರುವ ಆಸ್ತಿಗೆ ಏರುತ್ತಾ ಹೋಗುವ ಆಸ್ತಿ ತೆರಿಗೆ, ಲಾಭಕ್ಕಲ್ಲದೇ, ಸಮಗ್ರ ವಹಿವಾಟಿಗೆ ಸಂಪರ್ಕಿಸಿದ ಕಾರ್ಪೋರೇಟ್ ಸಾಮಾಜಿಕ ತೆರಿಗೆ, ಕಡಿಮೆ ಕಾರ್ಬನ್ ಹೊರಸೂಸುವಿಕೆಯನ್ನು ಪ್ರೋತ್ಸಾಹಿಸಲು ಹಸಿರು ತೆರಿಗೆ, ಮಾಲಿನ್ಯ ತೆರಿಗೆ. ಈ ಕ್ರಮಗಳಿಂದ ಜಿಡಿಪಿಯ 3% ರಿಂದ 5% ಹೆಚ್ಚುವರಿ ರೆವೆನ್ಯೂ ಹುಟ್ಟಿಸಬಹುದು.

12) ಪರಿಸರದ ಮಾನದಂಡಗಳನ್ನು ಮತ್ತು ನಿಯಂತ್ರಣಗಳನ್ನು ಸ್ಪಷ್ಟವಾಗಿ ಮುಂದಿಡಲು ಹಾಗೂ ಅವುಗಳ ಅನುಸರಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಒಂದು ಸ್ವತಂತ್ರ ಹಾಗೂ ಸ್ವಾಯತ್ತ ಅಧಿಕಾರವುಳ್ಳ ಪರಿಸರ ಆಯೋಗ.

ದೇಶದ ನದಿಗಳನ್ನು ಉಳಿಸಲು ಮತ್ತು ಕೆಡದಂತೆ ಕಾಪಾಡಲು ಒಂದು ಸ್ವಾಯತ್ತ ಸಂಸ್ಥೆ, ಹೆಚ್ಚು ಮಾಲಿನ್ಯವಿರುವ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ಪರೀಕ್ಷಿಸುವ ಕೇಂದ್ರಗಳ ಸಂಖ್ಯೆಯಲ್ಲಿ ಹೆಚ್ಚಳ, ಮುಂದಿನ ಹದಿನೈದು ವರ್ಷಗಳಲ್ಲಿ ವಿಕೇಂದ್ರಿಕರಣವಾದ ಮತ್ತು ನವೀಕರಿಸಬಹುದಾದ ಎನರ್ಜಿ (ವಿದ್ಯತ್ ಇತ್ಯಾದಿ) ಕಡೆಗೆ ಹಂತ ಹಂತವಾಗಿ ಬದಲಾವಣೆ ಮಾಡಲು ಒಂದು ರಾಷ್ಟ್ರೀಯ ನೀತಿ ಹಾಗೂ ಸಾರ್ವಜನಿಕ ಸಾರಿಗೆ ಮತ್ತು ಮೋಟಾರಿಲ್ಲದ ಖಾಸಗಿ ವಾಹನಗಳಿಗೆ ಉತ್ತೇಜನ; ತೈಲ ಮತ್ತು ಅನಿಲಗಳ ರಾಷ್ಟ್ರೀಕರಣ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಕರಾಗಿ, ಪಾಲುದಾರರಾಗಿ ಮತ್ತು ಪಾಲಕರಾಗಿರುವ ಸಮುದಾಯಗಳನ್ನು ಗುರುತಿಸಿ ಅವರಿಗೆ ಮಾನ್ಯತೆ ನೀಡುವುದು.

ಸಾಮಾಜಿಕ ನ್ಯಾಯ

13) ನಿರ್ಣಯ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಕಡ್ಡಾಯವಾಗಿ ಮಹಿಳೆಯರ ಕನಿಷ್ಠ ಉಪಸ್ಥಿತಿ ಇರುವಂತೆ ನೋಡಿಕೊಳ್ಳುವುದು.

ನ್ಯಾಯಾಂಗದಲ್ಲಿ, ಪೋಲೀಸ್ ಇಲಾಖೆಯಲ್ಲಿ ಒಳಗೊಂಡಂತೆ ರಾಜ್ಯ ವಿಧಾನಸಭೆಗಳಲ್ಲಿ ಮತ್ತು ಲೋಕಸಭೆಯಲ್ಲಿ ಮೂರನೇ ಒಂದರಷ್ಟು ಮಹಿಳೆಯರ ಪ್ರಾತಿನಿಧ್ಯವನ್ನು ನೀಡಲು ಕಾನೂನುಗಳಲ್ಲಿ ಮತ್ತು ಸಂವಿಧಾನದಲ್ಲಿ ತಿದ್ದುಪಡಿ ತರುವುದು.

14) ಒಂದು ಸಮಗ್ರ ತಾರತಮ್ಯ ವಿರೋಧಿ ಕಾನೂನನ್ನು ಶಾಸನಬದ್ಧವಾಗಿ ರಚಿಸುವುದು.

ಇಂತಹ ಕಾನೂನಿನ ಅನುಷ್ಠಾನಗೊಳಿಸುವುದನ್ನು ನೋಡಿಕೊಳ್ಳಲು ಹಾಗೂ ಎಲ್ಲಾ ದುರ್ಬಲ ಸಮುದಾಯಗಳಿಗೂ ನ್ಯಾಯ ಒದಗಿಸುವಂತಹ ಸಮಾನಾವಕಾಶ ಆಯೋಗವನ್ನು ರಚಿಸುವುದು. ದುರ್ಬಲ ಜಾತಿಗಳ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದ್ವೇಷದ ಅಪರಾಧಗಳನ್ನು ತಡೆಗಟ್ಟುವುದರಲ್ಲಿ ವಿಫಲವಾಗುವ ಸಾರ್ವಜನಿಕ ವ್ಯವಸ್ಥೆಯ ಅಧಿಕಾರಿಗಳ ಮೇಲೆ ಕ್ರಿಮಿನಲ್ ದೋಷಪೂರಿತತೆಯನ್ನು ಹೊರಿಸುವಂತೆ ಆಗಬೇಕು. ಆದಿವಾಸಿಗಳಿಗೆ ಭೂಮಿಯ ಮೇಲೆ ಹಕ್ಕಿಲ್ಲದಂತೆ ಮಾಡುವ ಕ್ರಮಗಳನ್ನು ರದ್ದುಪಡಿಸಬೇಕು ಮತ್ತು ಬುಡಕಟ್ಟು ಜನರ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆಗೆ ಶಾಸನಬಲ ನೀಡುವುದು.

15) ಅತ್ಯಂತ ದುರ್ಬಲ ಸಾಮಾಜಿಕ ಗುಂಪುಗಳಿಗೆ ವಿಶೇಷ ಕಾರ್ಯಕ್ರಮಗಳು

ಪ್ರೊಹಿಬಿಷನ್ ಆಫ್ ಎಂಪ್ಲಾಯ್‍ಮೆಂಟ್ ಆಸ್ ಮ್ಯಾನುವಲ್ ಸ್ಕೆವೆಂಜರ್‍ಸ್ ಮತ್ತು ಪುನರ್ವಸತಿ ಕಾಯಿದೆ, 2013ರ ಸಂಪೂರ್ಣ ಅನುಷ್ಠಾನಕ್ಕೆ ಮತ್ತು ಚರಂಡಿ ಕಾರ್ಮಿಕರ ಸಾವನ್ನು ತಡೆಗಟ್ಟಲು ಹಾಗೂ ಮಾನ್ಯುವಲ್ ಸ್ಕೆವೆಂಜಿಂಗ್ ಅನ್ನು ಕೊನೆಗಾಣಿಸಲು ಒಂದು ರಾಷ್ಟ್ರೀಯ ಮಿಷನ್; ಅಧಿಸೂಚನೆಯಿಂದ ತೆಗೆದುಹಾಕಿದ (ಡಿನೋಟಿಫೈಡ್) ಬುಡಕಟ್ಟು ಜನರು, ಅಲೆಮಾರಿ ಮತ್ತು ಅರೆಅಲೆಮಾರಿ ಜನರ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಸರಕಾರದಿಂದ ಶೈಕ್ಷಣಿಕ, ವಸತಿ ಮತ್ತು ಇತರ ಸೌಲಭ್ಯಗಳು; ಸರಕಾರಿ ಮತ್ತು ಸಾರ್ವಜನಿಕ ಸಂಸ್ಥೆಗಳ ಯೋಜನೆ ಮತ್ತು ನೀತಿಗಳನ್ನು ಕಡ್ಡಾಯವಾಗಿ ಡಿಸೆಬಿಲಿಟಿ ಆಡಿಟ್‍ಗೆ ಒಳಪಡಿಸಬೇಕು; ಮೀಸಲಾತಿಗಳ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಅಂಗವೈಕಲ್ಯತೆ ಹೊಂದಿರುವ ಮಕ್ಕಳಿಗೆ ಆರೈಕೆ ಹಾಗೂ ಐಸಿಡಿಎಸ್‍ನೊಳಗೇ ಇದರ ಸೇರ್ಪಡೆಯಾಗಬೇಕು.

ಪಾರದರ್ಶಕ ಮತ್ತು ಹೊಣೆಗಾರಿಕೆಯನ್ನು ಹೊಂದಿದ ಆಡಳಿತ

16) ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳಿಗೆ ಮತ್ತು ಕಾನೂನುಗಳಿಗೆ ಆದ ಹಾನಿಯನ್ನು ಸರಿಪಡಿಸುವುದು.

ಭ್ರಷ್ಟಾಚಾರ ನಿಗ್ರಹ ಕಾಯಿದೆಗೆ ಮಾಡಿದ ಪ್ರತಿಗಾಮಿ ತಿದ್ದುಪಡಿಗಳನ್ನು ಹಿಂಪಡೆಯಬೇಕು; ಪಾರದರ್ಶಕ ರೀತಿಯಲ್ಲಿ ಲೋಕಪಾಲ್ ರಚಿಸುವುದು, ಅಕ್ರಮಗಳನ್ನು ಬಯಲಿಗೆಳೆಯುವವರಿಗೆ ರಕ್ಷಣೆ ನೀಡುವ ಕಾಯ್ದೆಯ ನ್ನು ಕಾರ್ಯಗತಗೊಳಿಸಬೇಕು ಹಾಗೂ ಕುಂದುಕೊರತೆ ಪರಿಹಾರ ಬಿಲ್‍ಅನ್ನು ಶಾಸನಬದ್ಧವಾಗಿ ಜಾರಿಗೊಳಿಸಬೇಕು.

17) ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಬಲಪಡಿಸಬೇಕು

ಸಿ.ಬಿ.ಐ., ಸಿ.ವಿ.ಸಿ., ಸಿ.ಏ.ಜಿ. ಯಂತಹ ತನಿಖಾ/ಉಸ್ತುವಾರಿ ಸಂಸ್ಥೆಗಳ ಸ್ವಾತಂತ್ರ್ಯವನ್ನು ಭದ್ರಪಡಿಸಬೇಕು; ಮಾಹಿತಿ ಹಕ್ಕಿನ ಆಳ್ವಿಕೆಯನ್ನು ಬಲಪಡಿಸಬೇಕು; ಶಾಸಕಾಂಗಪೂರ್ವ ಸಮಾಲೋಚನೆಯನ್ನು ಪ್ರಾರಂಭಿಸಬೇಕು ಹಾಗೂ ಎಲ್ಲಾ ಸಾರ್ವಜನಿಕ ಯೋಜನೆಗಳಿಗೆ ಸಾಮಾಜಿಕ ಆಡಿಟ್‍ಅನ್ನು ಕಡ್ಡಾಯಗೊಳಿಸಬೇಕು.

18) ನ್ಯಾಯಾಂಗವನ್ನು ಇನ್ನಷ್ಟು ಸ್ವತಂತ್ರ, ಸಮರ್ಥ, ಪಾರದರ್ಶಕ, ಪ್ರಾತಿನಿಧಿಕ ಹಾಗೂ ಹೊಣೆಗಾರಿಕೆಯಳ್ಳದ್ದಾಗಿ ಮಾಡುವುದು.

ನ್ಯಾಯಾಧೀಶರನ್ನು ಆಯ್ಕೆ ಮಾಡಲು ಸ್ವತಂತ್ರ ನ್ಯಾಯಾಗ ನೇಮಕಾತಿ ಆಯೋಗ, ಸ್ವತಂತ್ರ ನ್ಯಾಯಾಂಗ ದೂರುಗಳ ಆಯೋಗ, ವೃತ್ತಿಪರ ನ್ಯಾಯಾಲಯ ನಿರ್ವಹಣೆ ತಂಡ ಹಾಗೂ ನ್ಯಾಯಾಲಯದ ಕಾರ್ಯಕಲಾಪಗಳ ವಿಡಿಯೋ ಚಿತ್ರೀಕರಣ

19) ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದ ಏಳು ನಿರ್ದೇಶನಗಳಿಗನುಗುಣವಾಗಿ ಪೋಲೀಸ್ ಸುಧಾರಣೆಗಳು

ಪೋಲೀಸ್ ಮತ್ತು ರಾಜಕೀಯ ಕಾರ್ಯನಿರ್ವಹಣೆ ನಡುವಿನ ಸಂಬಂಧವನ್ನು ಸಮನ್ವಯಗೊಳಿಸಲು 2006ರ ಮಾಡೆಲ್ ಪೋಲೀಸ್ ಬಿಲ್ ಆರಂಭಿಕ ಬಿಂದುವಾಗಬೇಕು.

ಫೆ.2019ರಲ್ಲಿ ಬಿಡುಗಡೆಯಾದಾಗ ಈ ಅಂಶಗಳನ್ನು ಒಪ್ಪಿರುವ ಸದಸ್ಯರು

ನ್ಯಾ.ಎ.ಪಿ.ಶಾ (ಅಧ್ಯಕ್ಷರು), ಪ್ರಶಾಂತ್ ಭೂಷಣ್ (ಸಂಚಾಲಕರು), ಅಂಜಲಿ ಭಾರದ್ವಾಜ್ (ಸಂಚಾಲಕರು), ಆಕಾರ್ ಪಟೇಲ್, ಅರುಣಾ ರಾಯ್, ಬೆಜವಾಡ ವಿಲ್ಸನ್, ದೀಪಕ್ ನಯ್ಯರ್, ಇಎಎಸ್ ಶರ್ಮಾ, ಗೋಪಾಲ್ ಗುರು, ಗೋಪಾಲ್ ಗಾಂಧಿ, ಹರ್ಷ್ ಮಂದರ್, ಜಯತಿ ಘೋಷ್, ಕವಿತಾ ಕುರುಗಂಟಿ, ಕೃಷ್ಣ ಕುಮಾರ್, ನಿಖಿಲ್ ಡೇ, ಪಾಲ್ ದಿವಾಕರ್, ಪ್ರಭಾತ್ ಪಟ್ನಾಯಕ್, ಪಿ.ಸಾಯಿನಾಥ್, ಎಸ್.ಪಿ.ಶುಕ್ಲಾ, ಶ್ರೀನಾತ್ ರೆಡ್ಡಿ, ಸುಜಾತಾ ರಾವ್, ಶಕ್ತಿ ಸೆಲ್ವರಾಜ್, ರವಿ ಚೋಪ್ರಾ, ಸಯೀದಾ ಹಮೀದ್, ವಿಪುಲ್ ಮುದ್ಕಲ್, ವಜಾಗತ್ ಹಬೀಬುಲ್ಲಾ, ಯೋಗೇಂದ್ರ ಯಾದವ್.

ಇನ್ನೂ ಕೆಲವು ಅಂಶಗಳು ಸೇರಬೇಕಿತ್ತು:
ನರೇಗಾ ಕಾನೂನಿಯಡಿಯಲ್ಲಿ ಪ್ರತಿಯೋರ್ವ ವಯಸ್ಕ ವ್ಯಕ್ತಿಗೆ 150 ದಿನಗಳ ಕೆಲಸ ಕೊಡಬೇಕೆನ್ನುವುದು ಪ್ರಾಯೋಗಿಕವಲ್ಲ. ಒಂದು ಕುಟುಂಬದಲ್ಲಿ 3 ಜನ ವಯಸ್ಕರಿದ್ದರೂ 450 ದಿನಗಳಾಗುತ್ತವೆ. ಹಾಗಾಗಿ ಇದು ವಾಸ್ತವವಲ್ಲ. ನಾವು ಕೇಳಬೇಕಾಗಿರುವುದು ಒಂದು ಕುಟುಂಬಕ್ಕೆ 250 ದಿನ. ನಮ್ಮ ಹೆಚ್ಚಿನ ಗ್ರಾಮೀಣ ಕಾರ್ಮಿಕರು ವರ್ಷದ ಕೆಲ ತಿಂಗಳುಗಳಷ್ಟೇ ನಗರಕ್ಕೆ ವಲಸೆ ಹೋಗುವವರು. ಉಳಿದಂತೆ ಸ್ಥಳೀಯ ಕೃಷಿಯನ್ನು ನೆಚ್ಚಿದವರು. ನರೇಗಾ ಅನುದಾನ ಬಿಡುಗಡೆಯನ್ನು ಸಾಂವಿಧಾನಿಕ ಹೊಣೆಗಾರಿಕೆಯಾಗಿ ವರ್ಷಾರಂಭದಲ್ಲೇ ಅನುದಾನ ನಿಧಿ ರೂಪದಲ್ಲಿ ಸಂಚಿತವಾಗಿರಬೇಕು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾನೂನಿಗೆ 73 ಮತ್ತು 74 ನೇ ತಿದ್ದುಪಡಿ ಮೂಲಕ ಬಲಪಡಿಸಿದ ಮಾದರಿ ಕರ್ನಾಟಕದ್ದು. ಗ್ರಾಮ ಪಂಚಾಯತಿಗಳಲ್ಲಿ ಶೇ.50 ಮೀಸಲಾತಿ ಮಹಿಳೆಯರಿಗೆ ನೀಡುವ ಮೂಲಕ ಮಹಿಳೆಯರ ರಾಜಕೀಯ ಸಶಕ್ತೀಕರಣಕ್ಕೆ ದೊಡ್ಡ ಕೊಡುಗೆ ನೀಡಿದ ಕೀರ್ತಿ ನಮ್ಮ ರಾಜ್ಯಕ್ಕಿದೆ. ಇದನ್ನು ಆಡಳಿತಾತ್ಮಕ ಎಲ್ಲಾ ಸಂಸ್ಥೆಗಳಲ್ಲಿ ಜಾರಿಗೊಳಿಸುವಂಥ ಕಾನೂನು ಬರಬೇಕಾಗಿದೆ. ನಿರ್ಧಾರದಲ್ಲಿ ಮಹಿಳೆಯರು ಭಾಗೀದಾರಿಕೆ ಕನಿಷ್ಠ ಮೂರನೇ ಒಂದರಷ್ಟಿರಬೇಕೆನ್ನುವುದು ಎಲ್ಲಾ ಸಾರ್ವಜನಿಕ ಸಂಸ್ಥೆಗಳಿಗೂ ಅನ್ವಯಿಸಬೇಕು. ಉದ್ಯೋಗದಲ್ಲೂ ಅಷ್ಟೇ, ಎಲ್ಲಾ ಸಾರ್ವಜನಿಕ ಉದ್ಯಮ, ಬ್ಯಾಂಕು ಮತ್ತು ಸರ್ಕಾರೀ ಉದ್ಯೋಗಗಳಲ್ಲಿ ಕನಿಷ್ಠ 1/3 ಮಹಿಳೆಯರಿಗೆ ಮೀಸಲಿಡಬೇಕು.

ಜನರ ಆರೋಗ್ಯ ಸುಧಾರಿಸಬೇಕು. ಪೌಷ್ಟಿಕ ಆಹಾರ ನೀಡಬೇಕು. ಜೀವನ ಮಟ್ಟ ಸುಧಾರಿಸಬೇಕು. ಆರೋಗ್ಯಕ್ಕೆ ಹಾನಿಯಾಗುವ ಮಾದಕ ವಸ್ತುಗಳ ಸೇವನೆಯನ್ನು ಪ್ರತಿಬಂಧಿಸಬೇಕು ಎಂದು 47 ನೇ ಪರಿಚ್ಛೇಧದಲ್ಲಿ ರಾಜ್ಯಗಳಿಗೆ ಸ್ಪಷ್ಟ ನಿರ್ದೇಶನವಿದೆ. ಮದ್ಯಪಾನ ನಿಷೇಧವನ್ನು ಜಾರಿಗೆ ತರುವುದು ರಾಜ್ಯದ ಆದ್ಯ ಕರ್ತವ್ಯವಾಗಬೇಕೆಂದು ಹೇಳಲಾಗಿದೆ. ಇದನ್ನು ಯಾವ ರಾಜ್ಯ ಸರಕಾರಗಳೂ ಪಾಲಿಸುತ್ತಿಲ್ಲ. ಹಾಗಾಗಿ ಇದನ್ನು ಕಾನೂನಾಗಿ ರೂಪಿಸಲೇಬೇಕಾಗಿದೆ. ಸಂವಿಧಾನದ ನಿರ್ದೇಶಕ ತತ್ವಗಳನ್ನು ಆಶಯದ ಮಟ್ಟದಲ್ಲಿ ನೋಡದೇ ಅನುಷ್ಠಾನ ಯೋಗ್ಯ ಕಾನೂನುಗಳಾಗಿ ಪರಿವರ್ತಿಸಬೇಕು. ಎಷ್ಟು ವರ್ಷ ಕಾಲ ಆಶಯಗಳಾಗಿ ಇಡುವುದು? ಕಲ್ಯಾಣ ರಾಜ್ಯದಲ್ಲಿ ಈ ಆಶಯ ಜಾರಿಯಾಗಬೇಕಲ್ಲವೇ!

ಅಸಂಘಟಿತ ಶ್ರಮಿಕ ವರ್ಗಕ್ಕೆ ಅನ್ವಯಿಸುವಂಥ ಕನಿಷ್ಟ ಕೂಲಿ ಐಎಲ್‍ಒ ಮಾನದಂಡದಂತೆ ಲಿವಿಂಗ್ ವೇಜಸ್ ಆಧಾರದಲ್ಲಿ ನಿರ್ಧಾರಗೊಳ್ಳಬೇಕೆಂಬ ಚರ್ಚೆ ಈಗಾಗಲೇ ಆರಂಭಗೊಂಡಿದೆ. ಸಾಮಾಜಿಕ ಭದ್ರತಾ ವಿಷಯದಲ್ಲಿ ಇದು ಅನ್ವಯಿಸಬೇಕಲ್ಲವೇ.

ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯಗಳ ಹೊಣೆಗಾರಿಕೆಗೆ ಕಾಲಮಿತಿಯ ನಿರ್ದಿಷ್ಟತೆಯನ್ನು ತರುವುದು.

ಈ ಪ್ರಣಾಳಿಕೆಯಲ್ಲಿ ಸಮಗ್ರ ಒಳನೋಟ ಕಾಣುತ್ತಿಲ್ಲ. ತುಂಬಾ ಜನರಲ್ ಆಗಿ ಕಾಣಿಸುತ್ತಿದೆ.

  • ಸ್ವರ್ಣಾಭಟ್, ಗ್ರಾಮೀಣ ಕೂಲಿಕಾರರ ಸಂಘ

ಜನಹಿತದ ಪರ್ಯಾಯ ರಾಜಕೀಯದತ್ತ ಮೊದಲ ಹೆಜ್ಜೆ

‘ಗಣರಾಜ್ಯದ ಮರುಸ್ವಾಧೀನಕ್ಕಾಗಿ 19 ಪ್ರಸ್ತಾವನೆಗಳು’ ಎಂಬ ಪ್ರಣಾಳಿಕೆಯು, ನಿಜಕ್ಕೂ, ಪ್ರಸ್ತುತ ರಾಜಕೀಯ ವಾತಾವರಣವನ್ನು ಬದಲಾಯಿಸುವ ಸಂಕಲ್ಪವುಳ್ಳ ಬೌದ್ಧಿಕ ಸಾಧನವಾಗಿದೆ. ಇದನ್ನು ಸಿದ್ಧಪಡಿಸಿ, ಪ್ರಜೆಗಳ ಅವಗಾಹನೆಗೆ ಮಂಡಿಸಿರುವ ಜನರು, ನಮ್ಮ ದೇಶದ ವಸಾಹತುಶಾಹಿ ವಿರೋಧಿ ಹೋರಾಟ ಕಾಲದ ’ಜನ ವಿಮೋಚನೆಯ’ ವಿಚಾರಗಳನ್ನು ತಮ್ಮ ಬದುಕಿನುದ್ದಕ್ಕೂ ಪ್ರತಿಪಾದಿಸುತ್ತಾ ಬಂದವರಾಗಿದ್ದಾರೆ; ಅಂತಹ ವಿಚಾರಗಳನ್ನು ತಮ್ಮ ಹೋರಾಟಗಳ ಕೇಂದ್ರ ಕಾರ್ಯಸೂಚಿ ಆಗಿಸಿಕೊಂಡ ಚಳುವಳಿಗಳನ್ನು ಬೆಂಬಲಿಸಿ, ಪೋಷಿಸುವ ಬದ್ದತೆಯನ್ನು ಪಾಲಿಸುತ್ತಿರುವ ಬೌದ್ಧಿಕ ವರ್ಗದ ಜನರೂ ಆಗಿದ್ದಾರೆ. ಇಂದಿನ ಸನ್ನಿವೇಶದಲ್ಲಿ, ಜನರಿಗೆ ’ತಮ್ಮಂತಹ ಸಾಮಾನ್ಯ ಜನರು’ ಹುರಿಗಟ್ಟಿಸಿದ ಹೋರಾಟಗಳಿಂದಲೇ ’ಜನ ವಿಮೋಚನೆ’ಯ ವಿಚಾರಗಳು ಕಟ್ಟಿಕೊಂಡವು ಎಂಬುದು ಮರೆತು ಹೋದಂತೆ ಕಾಣುತ್ತಿದೆ; ಜಾತಿ-ಮತಗಳನ್ನು ಎತ್ತಿ ಕಟ್ಟುವ ರಾಜಕೀಯ ಸ್ಪರ್ಧಾಟದಲ್ಲಿ ತಮ್ಮ ತಮ್ಮ ಜಾತಿ-ಮತಗಳ ಬೆಂಬಲಕ್ಕೆ ನಿಂತರೆ ಮಾತ್ರ ತಮ್ಮ ಬದುಕಿನ ಸುರಕ್ಷೆ ಇದೆ ಎಂದು ಭಾವಿಸುವ ನಿಸ್ಸಾಹಯಕತೆಯನ್ನು ಅಧಿಕಾರ ರಾಜಕಾರಣವು ಯಶಸ್ವಿಯಾಗಿ ರೂಢಿಸಿಬಿಟ್ಟಿದೆ. ಬೌದ್ಧಿಕ ವರ್ಗದ ಬಹುಪಾಲು ಮಂದಿ, ಅಧಿಕಾರದ ಸೇವಕರಾಗಿರುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಅಧಿಕಾರದ ನಿರಂಕುಶ ಪಟ್ಟಭದ್ರತೆಯನ್ನು ಚೋದಿಸುವ ವಿಚಾರಗಳನ್ನು ಉತ್ಪಾದಿಸಿ ಹುಮ್ಮಸ್ಸಿನಿಂದ ಪ್ರಸಾರಿಸುವ ಬೌದ್ಧಿಕ ದಳವಾಗುವ ಉತ್ಸಾಹ ತೋರುತ್ತಿದ್ದಾರೆ. ಹೀಗಿರುವಾಗ, ’ಗಣರಾಜ್ಯ’ವನ್ನು ಸಾಮಾನ್ಯ ಜನರ ಸ್ವಾಧೀನಕ್ಕೆ ಮರಳಿ ತರುವ ಪ್ರಾಯೋಗಿಕ ವಿಧಾನಗಳನ್ನು ಮುಂದಿಟ್ಟಿರುವ ಈ ಪ್ರಣಾಳಿಕೆಯನ್ನು, ಸಾವಧಾನದಿಂದ ವಿವೇಚಿಸಬೇಕಾದ ಕೆಲಸ ಮೊದಲಾಗಿ ನಡೆಯಬೇಕು.

ಈ ಪ್ರಸ್ತಾವನೆಗಳನ್ನು ಮೂರು ಭಾಗವಾಗಿ ವಿಗಂಡಿಸಿಕೊಂಡು ನೋಡಬಹುದು:

(1) ಈಗಾಗಲೇ, ಪ್ರಾಥಮಿಕ ಹಂತದ ಶಾಸನಗಳಾಗಿದ್ದು, ಕಾರ್ಯಸಾಧ್ಯವೆಂದು ಸಾಬೀತಾಗಿರುವಂತಹವು; ಮತದಾರರಲ್ಲಿ ತಮ್ಮ ಓಟಿನ ಮೌಲ್ಯದ ಪ್ರಜ್ಞೆಯನ್ನು ಜಾಗೃತಗೊಳಿಸಿದರೆ, ಈ ಶಾಸನಗಳನ್ನು ಹೆಚ್ಚು ಜನೋಪಯೋಗಿಯಾಗುವಂತೆ ವಿಸ್ತರಿಸುವ ಜನಾಭಿಪ್ರಾಯ ರೂಢಿಸಬಹುದಾದಂತಹ ಪ್ರಸ್ತಾವನೆಗಳು. ಅಧಿಕಾರ ಆಕಾಂಕ್ಷೆಯ ಇಂದಿನ ರಾಜಕೀಯ ಪಕ್ಷಗಳನ್ನು ಓಟಿನ ಸಂಖ್ಯಾ ಬಲದಿಂದ ಮಣಿಸಬಲ್ಲ ಸುಧಾರಣಾವಾದಿ ಚುರುಕು ಈ ಪ್ರಸ್ತಾವನೆಗಳಲ್ಲಿವೆ. ಸಕಲ ನಾಗರಿಕರಿಗೆ ಸಾರ್ವತ್ರಿಕ ಪ್ರಾಥಮಿಕ ಸಾಮಾಜಿಕ ಭದ್ರತೆಯನ್ನು ಬೇಡುವ (4ನೇ), ಸಾರ್ವಜನಿಕ ಆರೋಗ್ಯ ಸೇವೆಯನ್ನೂ (8ನೇ), ಉದ್ಯೋಗ ಖಾತ್ರಿ ಯೋಜನೆಯನ್ನೂ (9ನೇ) ವಿಸ್ತರಿಸುವ ಮಾರ್ಗ ಸೂಚಿಸುವ, ಸಾರ್ವಜನಿಕ ಸೇವಾ ಇಲಾಖೆಯಲ್ಲಿ ಎಲ್ಲ ಹುದ್ದೆಗಳನ್ನು ತುಂಬುವಂತೆ ಒತ್ತಾಯಿಸುವ (10ನೇ) ಪ್ರಸ್ತಾವನೆಗಳು ಈ ಬಗೆಯವಾಗಿವೆ.

(2) ಚುನಾವಣೆಗಳನ್ನು ಹಣದಾಟದಿಂದ ಮುಕ್ತಗೊಳಿಸುವ ಸುಧಾರಣೆಗಳು (2ನೇ), ಮಾಧ್ಯಮಗಳು ಸ್ವತಂತ್ರವಾಗಿಯೂ, ಸಾರ್ವಜನಿಕ ಉತ್ತರದಾಯಿತ್ವದಿಂದ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಸ್ವಾಯತ್ತ ಮಾಧ್ಯಮ ನಿಯಂತ್ರಣ ಸಂಸ್ಥೆಯ ಸ್ಥಾಪನೆ (3ನೇ), ರೈತರ ಕಾಯಕ ಭದ್ರತೆಗೆ ’ಹೊಸ ಒಡಂಬಡಿಕೆ’(5ನೇ), ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಸುಭದ್ರಗೊಳಿಸುವ ಮೂಲಕ ಶಿಕ್ಷಣದ ಹಕ್ಕನ್ನು ವಾಸ್ತಾವಿಕವಾಗಿಸುವ ಮಾರ್ಗ ಸೂಚಿ (6ನೇ), ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಸಬಲೀಕರಣ (7ನೇ), ಸತ್ವಶಾಲಿ ಪರಿಸರ ಸಂರಕ್ಷಣೆಗಾಗಿ ಆಯೋಗ ರಚನೆ (12ನೇ), ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಶೇ.33 ಸ್ಥಾನ ನೀಡುವ ಸಂವಿಧಾನ ತಿದ್ದುಪಡಿ (13ನೇ)- ಈ ಪ್ರಸ್ತಾವನೆಗಳ ಸದುದ್ದೇಶವನ್ನು ಯಾವ ರಾಜಕೀಯ ಬಣವೂ ಅಲ್ಲಗಳೆಯುವುದಿಲ್ಲ; ಇವುಗಳ ಕುರಿತು ಆಯೋಗ-ಶಾಸ್ತ್ರೀಯ ಅಧ್ಯಯನಗಳ ತಜ್ಞ ವರದಿಗಳಿವೆ, ಇವುಗಳ ಅನುಷ್ಠಾನವೂ ಅಸಾಧ್ಯವೇನೂ ಅಲ್ಲ ಎನ್ನುವುದಕ್ಕೆ ಜಗತ್ತಿನ ಅನೇಕ ದೇಶಗಳ ಉದಾಹರಣೆ ಕೊಡಬಹುದು; ಪ್ರತಿಯೊಂದರ ವಿಷಯದಲ್ಲೂ ತೀವ್ರ ಚಳುವಳಿಗಳು ನಡೆಯುತ್ತಿವೆ. ಆದರೆ, 20-21ನೇ ಶತಮಾನದಲ್ಲಿ ಈ ಎಲ್ಲಾ ವಿಷಯಗಳೂ ಖಾಸಗಿ ಯಜಮಾನರು ಮತ್ತು ಪ್ರಭುತ್ವಾಕಾಂಕ್ಷಿ ಪಕ್ಷಗಳ ನಡುವಿನ ಅಧಿಕಾರ ಅನುಸಂಧಾನದ ಹಿತಕ್ಕೆ ಮಾರಕವಾಗುತ್ತದೆ ಎನ್ನುವುದನ್ನೂ ಎಲ್ಲ ರಾಜಕೀಯ ಬಣಗಳೂ ಬಲ್ಲವು. ಈ ಎಲ್ಲ ಸಂಗತಿಗಳು ಪರಸ್ಪರ ಭಿನ್ನ ಜನ ವರ್ಗಗಳ ಹಿತಾಸಕ್ತಿಯವೆಂಬ ಸಾಮಾನ್ಯ ಕಂಣೋಟದಲ್ಲಿ ಚದುರಿದ ಕಾರ್ಯಸೂಚಿಗಳಾಗಿವೆ. ಇವುಗಳನ್ನು ’ಸಮಗ್ರವಾಗಿ’ ಒಗ್ಗೂಡಿಸಿ ಕಾರ್ಯಸಾಧ್ಯಗೊಳಿಸುವ ರಾಜಕೀಯ ನಿರೂಪಣೆಯೇ ನೈಜವಾದ ’ಗಣರಾಜ್ಯ ಮರುಸ್ವಾಧೀನ’ದ ಪರ್ಯಾಯ ರಾಜಕಾರಣ ಪ್ರಣಾಳಿಕೆಯಾಗಬಲ್ಲದು. ಸಧ್ಯಕ್ಕೆ, ಇವುಗಳು ’ಕ್ರಾಂತಿಕಾರಿ ಸುಧಾರಣೆ’ಯ ಸೂಚಿಗಳು ಮಾತ್ರವಾಗಿವೆ.

(3) ನೈಜ ಪ್ರಜಾಪ್ರಭುತ್ವವು ಅಸ್ತಿತ್ವದಲ್ಲಿ ಇರಬೇಕಾದರೆ ಪ್ರಸ್ತಾವನೆ 1ರಲ್ಲಿರುವ ಕರಾಳ ಕಾನೂನುಗಳು ತಕ್ಷಣಕ್ಕೆ ಕೈದಾಗಬೇಕು, ಪ್ರಸ್ತಾವನೆ 14ರಲ್ಲಿ ಸೂಚಿಸಲಾಗಿರುವ ಕಾನೂನುಗಳು ತಕ್ಷಣವೇ ಜಾರಿಯಾಗಬೇಕು-ಈಗಲ್ಲ, 70 ವರ್ಷಗಳ ಹಿಂದೆಯೂ ಈ ಅರಿವು ಇತ್ತು. ಆದರೂ ಏಳು ದಶಕದ ದೇಶದ ರಾಜಕಾರಣವು, ಹೊಸ ಕರಾಳ ಕಾನೂನು ರಚಿಸಿತು, ವಿಧಾಯಕ ರಕ್ಷಣೆಯ ಕಾನೂನುಗಳ ಚರ್ಚೆಯನ್ನು ಮೂಲೆಗೆ ತಳ್ಳಿತು. ಸಂವಿಧಾನಿಕ ಗಣತಂತ್ರ ವ್ಯವಸ್ಥೆಯನ್ನು ನಾವiಕಾವಸ್ಥೆಗೆ ಉಳಿಸಿಕೊಂಡು, ನೈಜಗೊಳಿಸುವ ರಾಜಕಾರಣವನ್ನು ಒರೆಸಿ ಹಾಕುವ ನಿರಂಕುಶ ಪ್ರಭುತ್ವ ರಚನೆಯ ಬಗ್ಗೆ ಈ ಪ್ರಸ್ತಾವನೆಗಳು ಎಚ್ಚರಿಸುವುದು ನಿಜ. ಆದರೆ, ನೈಜ ಸಂವಿಧಾನಿಕ ಪ್ರಜಾಪ್ರಭುತ್ವ ರಾಜಕೀಯಕ್ಕೆ ಅವಶ್ಯಕವಾದ ಸಂಕಲ್ಪವನ್ನು ಎರಡನೇ ಬಗೆಯ ಪ್ರಸ್ತಾಪಗಳು ಪ್ರಚೋದಿಸುವ ’ಕ್ರಾಂತಿಕಾರಿ ಸುಧಾರಣೆ’ಯ ಪರ್ಯಾಯ ಮಾರ್ಗದಿಂದ ಪಡೆಯಬಹುದೇ? ನಡೆದು ನೋಡದೆ ವಿಧಿ ಇಲ್ಲ. ಭಿನ್ನಮತದ ದನಿಗಳು ಉಳಿದು ಬೆಳೆಯುವುದಕ್ಕೆ ಬೇಕಾದ ಸಾಮಾಜಿಕ-ರಾಜಕೀಯ ಅವಕಾಶವನ್ನು ಮರಳಿ ಪಡೆಯುವ ಪ್ರಾಯೋಗಿಕ ಸಾಧ್ಯತೆಗಳನ್ನು ಸೂಚಿಸುವ ಪ್ರಸ್ತುತ ಪ್ರಣಾಳಿಕೆಯು, ಚುನಾವಣೆಯ ಸಂದರ್ಭದಲ್ಲೂ, ಅ ನಂತರವೂ ಬೆಳೆಸಿ ವಿಸ್ತರಿಸಬೇಕಾದ ಪರ್ಯಾಯ ರಾಜಕಾರಣಕ್ಕೆ ಮೊದಲ ಹೆಜ್ಜೆಯಾಗಿದೆ.

  • ಕೆ.ಫಣಿರಾಜ್

ಗಣ ರಾಜ್ಯಕ್ಕಾಗಿ ಒಂದು ಹೆಜ್ಜೆ ಇಡೋಣ

‘ಗಣ ರಾಜ್ಯವನ್ನು ಮರಳಿ ಪಡೆಯಲು’ ಎಂಬ ಉದ್ಘೋಷದೊಂದಿಗೆ ದೇಶದ ಹಿರಿಯ ಸಾಮಾಜಿಕ ಹೋರಾಟಗಾರರು ಮುಂಬರುವ ಲೋಕಸಭೆ ಚುನಾವಣೆಗೆ 16 ಅಜೆಂಡಾಗಳನ್ನು ಮುಂದಿಟ್ಟುಕೊಂಡು ಜನ ಜಾಗೃತಿಗೆ ತಯಾರಾಗಿದ್ದಾರೆ. ಭಾರತ ಹಿಂದೆಂದೂ ಕಂಡಿರಿಯದ ಸ್ಥಿತಿಯಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ದುರುಪಯೋಗಗೊಂಡಿರುವ ಈ ಸಂಕಷ್ಟ ಕಾಲಘಟ್ಟದಲ್ಲಿ ಇಂತಹ ಅಜೆಂಡಾಗಳು ನಿಜಕ್ಕೂ ಜನರನ್ನು ತಲುಪಿ ಜಾಗೃತಿಗೊಳಿಸಬೇಕಿದೆ. ಇಂದಿರಾಗಾಂಧಿ ಕಾಲದ ತುರ್ತುಪರಿಸ್ಥಿತಿಯಲ್ಲಿ ಹೋರಾಟಗಾರರನ್ನು ಜೈಲಿಗೆ ತಳ್ಳಿದಂತೆ ಇಂದೂ ತಳ್ಳಲಾಗುತ್ತಿದೆ. ಆದರೆ ಈ ಬಾರಿಯದ್ದು ತುರ್ತುಪರಿಸ್ಥಿತಿ ಘೋಷಿಸದೇ ಅದಕ್ಕಿಂತ ಭಯಂಕರವಾಗಿ ಯೋಜನೆಯೊಂದನ್ನು ಸಿದ್ಧಪಡಿಸಿ ಜನಪರ ಹೋರಾಟಗಾರರನ್ನು ಜೈಲಿಗೆ ತುಂಬಲಾಗುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ದೇಶದೊಳಗಿನ ಶತ್ರುಗಳ ಮರ್ಮವನ್ನು ಬಹಿರಂಗಗೊಳಿಸುವ ಜನ ಚಳವಳಿಯ ಅಗತ್ಯವಿದೆ. ಇದು ತಾತ್ಕಾಲಿಕವಾಗಿಯಾದರೂ ಒಗ್ಗೂಡಿ ಜನವಿರೋಧ ಸರ್ಕಾರವನ್ನು ಕಿತ್ತೆಸೆಯುವ ನಿಟ್ಟಿನಲ್ಲಿ ಅಳಿಲು ಸೇವೆಯನ್ನಾದರೂ ಮಾಡಬೇಕಿದೆ.

ಹೌದು ಈ ಅಜೆಂಡಾಗಳು ತಾತ್ಕಾಲಿಕವಾದವು ಹಾಗೂ ಅದಷ್ಟನ್ನೇ ಈಗ ಮಾಡಲು ಸಾಧ್ಯವಾಗುವುದು. ಆದರೆ ಈ ಉದ್ಘೋಷದ ಬಗ್ಗೆಯೇ ನನ್ನ ತಕರಾರಿದೆ. ಅದೇನೆಂದರೆ ಭಾರತ ಯಾವಾಗ ಕಡತಗಳಿಂದಾಚೆಗೆ ‘ಗಣರಾಜ್ಯವಾಗಿದೆ’ ಎಂಬುದು. ಯುವ ಹೋರಾಟಗಾರರು ‘ಎರಡನೆಯ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಿದೆ’ ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಎನ್ನುತ್ತಿರುವಾಗ ಹಿರಿಯ ಹೋರಾಟಗಾರರು ‘ಗಣ ರಾಜ್ಯವನ್ನು ಮರಳಿ ಪಡೆಯಬೇಕಿದೆ’ ಎನ್ನುತ್ತಿದ್ದಾರೆ. ನಮ್ಮ ದೇಶದಲ್ಲಿ 5 ವರ್ಷಗಳ ಹಿಂದೆ ಗಣರಾಜ್ಯವಿತ್ತು ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಹಾಗಾದರೆ ಅಂಬೇಡ್ಕರರು ಹೇಳಿದಂತೆ ಒಬ್ಬ ಮನುಷ್ಯ ಒಂದು ವೋಟಿನ ರಾಜಕೀಯ ಸಮಾನತೆಯ ಜೊತೆಗೆ ಒಬ್ಬ ಮನುಷ್ಯ ಸಾಮಾಜಿಕವಾಗಿ, ಆರ್ಥಿಕವಾಗಿ ಒಂದೇ ಮೌಲ್ಯ ಹೊಂದುವ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ನಾವು ಅನುಭವಿಸಿದ್ದೇವೆಯೇ? ಹೌದಾದರೆ ಅದು ಯಾವಾಗ? ಸಂಸದೀಯ ಪ್ರಜಾಫ್ರಭುತ್ವಕ್ಕೆ ಮಗ್ಗುಲ ಮುಳ್ಳಾಗಿರುವ ವಂಶಪಾರಂಪರ್ಯ ಅಧಿಕಾರ, ಕಣ್ಣು ಕುಕ್ಕುವ ಅಸಮಾನತೆ, ಅಧಿಕಾರ ಕೇಂದ್ರೀಕರಣ ಮತ್ತು ಜಾತಿ ಅಸಮಾನತೆಗಳನ್ನು ಬಲಿ ಹಾಕದೇ ಗಣ ರಾಜ್ಯವಾಗಿಸುವುದು ಸಾಧ್ಯವೇ?

ಕಳೆದ 5 ವರ್ಷಗಳಲ್ಲಿ ಪ್ರಜಾಪ್ರಭುತ್ವದ ಅಂಗಗಳು ಸರ್ವಾಧಿಕಾರದ ಕಬಂಧ ಬಾಹುಗಳಲ್ಲಿ ನರಳಿರುವುದು ಸತ್ಯ. ಸ್ವಾಯತ್ತ ಸಂಸ್ಥೆಗಳು ದುರುಪಯೋಗವಾಗಿರುವುದೂ ಸತ್ಯ. ಭಾರತದ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬಿದ್ದಿರುವುದೂ ಸತ್ಯ. ಹಾಗೆಂದು ಇದಕ್ಕೂ ಮುಂಚೆ ಅನುಭವಜನ್ಯವಾಗಿ ಗಣ ರಾಜ್ಯವೊಂದು ದೇಶದಲ್ಲಿ ನೆಲೆಸಿತ್ತು ಎಂದು ಭಾವಿಸುವುದು ಬಾಂಡಲಿಯಿಂದ ಬೆಂಕಿಗೆ ಬಿದ್ದಂತಾಗುತ್ತದೆ ಎಂಬುದು ನನ್ನ ದೃಢವಾದ ಅನಿಸಿಕೆ.

ಅದಾಗ್ಯೂ ಈ 16 ಅಜೆಂಡಾಗಳು ಇಂದಿನ ತುರ್ತಾಗಿದ್ದು, ಇದಕ್ಕೆ ಮಹಿಳಾ ಮೀಸಲಾತಿ ಜಾರಿಯ ವಿಚಾರವನ್ನೂ ಸೇರಿಸಿಕೊಳ್ಳುವುದು ಸೂಕ್ತವೆಂದು ತೋರುತ್ತಿದೆ. ಮಹಿಳಾ ಮೀಸಲಾತಿ ಜಾರಿಯನ್ನು ಈ ಚುನಾವಣೆಯ ಬಹುಮುಖ್ಯ ಅಜೆಂಡಾವನ್ನಾಗಿ ಮುನ್ನೆಲೆಗೆ ತರಬೇಕಿದೆ.

  • ವಿಕಾಸ್ ಆರ್ ಮೌರ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...