Homeರಾಜಕೀಯಚನ್ನಗಿರಿ ಯುವಕನ ಸಾವು ಕಡೇಪಕ್ಷ ಒಂದು ಚರ್ಚೆಯಾದರೂ ಆಗಲಿ....

ಚನ್ನಗಿರಿ ಯುವಕನ ಸಾವು ಕಡೇಪಕ್ಷ ಒಂದು ಚರ್ಚೆಯಾದರೂ ಆಗಲಿ….

- Advertisement -
- Advertisement -

ಕರ್ನಾಟಕವಷ್ಟೇ ಯಾಕೆ ಇಡೀ ದೇಶವೇ ಬೆಚ್ಚಿ ಬೀಳಬೇಕಾಗಿದ್ದ ಪ್ರಕರಣವಿದು. ಆದರೆ ಬೆಚ್ಚಿ ಬೀಳಲಿಲ್ಲ ಎನ್ನುವುದು ದುರಂತ! ಬಜೆಟ್ ರಾಜಕಾರಣದ ಬಿಸಿಬಿಸಿ ಗದ್ದಲಗಳ ನಡುವೆ ನಮ್ಮ ಮೀಡಿಯಾಗಳೂ ನಿರ್ಲಕ್ಷಿಸಿದ ಚೆನ್ನಗಿರಿ ಯುವಕನ ಆತ್ಮಹತ್ಯೆ, ಕೇವಲ ಅವನೊಬ್ಬನ ಸಾವಾಗಿರಲಿಲ್ಲ. ಸಮಸ್ತ ಯುವಸಮೂಹದ ಆತ್ಮಸ್ಥೈರ್ಯವೇ ಸಾವಿನ ಹಾದಿಹಿಡಿಯುತ್ತಿರುವುದರ ಸೂತಕದ ಸೂಚನೆಯಾಗಿತ್ತು. ಆದರೆ ನಮ್ಮ ಸಮಾಜ, ಸರ್ಕಾರ, ಮಾಧ್ಯಮಗಳು ಸ್ಪಂದಿಸಬೇಕಾದ ರೀತಿಯಲ್ಲಿ ಸ್ಪಂದಿಸಲೇ ಇಲ್ಲ.
ದಾವಣಗೆರೆಯ ಚೆನ್ನಗಿರಿ ತಾಲ್ಲೂಕಿನಲ್ಲಿರುವ ಹೊಸನಗರ ಎಂಬ ಪುಟ್ಟ ಹಳ್ಳಿಯ ಅನಿಲ್ ರಾಥೋಡ್‍ನದ್ದು ಸಾಯುವ ವಯಸ್ಸಲ್ಲ. ಆದರೆ ನನಗಿನ್ನು ಬದುಕುವ ಅವಕಾಶವಿಲ್ಲ ಎಂಬ ಆತಂಕವನ್ನು ಈ ನಮ್ಮ ಸಮಾಜ ತುಂಬಿದ್ದರಿಂದ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿ ಬಂದಿದೆ.
ಕೂಲಿ ಮಾಡಿ ಜೀವನ ಸಾಗಿಸುವ ಒಂದು ಬಡ ಕುಟುಂಬದ ಮೂವರು ಮಕ್ಕಳಲ್ಲಿ ಅನಿಲ್ ಕೂಡಾ ಒಬ್ಬನಾಗಿದ್ದ. ಬಿಎ ಪದವೀಧರ. ತಂದೆಯ ಸಾವಿನ ನಂತರ ಮುಂದಕ್ಕೆ ಓದಲಾಗದೆ ತಾಯಿಗೆ ನೆರವಾಗುತ್ತಾ ಸ್ಪರ್ಧಾತ್ಮಕ ಪರೀಕ್ಷಗಳನ್ನು ಬರೆಯುತ್ತಾ ಅದೃಷ್ಟಪರೀಕ್ಷೆಯಲ್ಲಿದ್ದ. ಆತನ ಅಣ್ಣ ಚಕ್ರವರ್ತಿ ದಾವಣಗೆರೆ ವಿವಿಯಲ್ಲಿ ಎಂಎ ಮಾಡುತ್ತಿದ್ದು ಕೊನೆಯ ತಮ್ಮ ರಾಜ್‍ಕುಮಾರ್ ಮನೆಯ ಜವಾಬ್ದಾರಿ ನಿಭಾಯಿಸಲು ಓದು ಬಿಟ್ಟು ಕೂಲಿ ಕೆಲಸ ಮಾಡುತ್ತಿದ್ದಾನೆ.
ಅನಿಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿರುವುದಲ್ಲದೆ ಅವರನ್ನು ಉದ್ದೇಶಿಸಿ ಎರಡೂವರೆ ನಿಮಿಷದ ವಿಡಿಯೋವನ್ನೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ. ಅದರಲ್ಲಿ “ಹಳ್ಳಿಗಾಡಿನ ಪದವೀಧರರಿಗೆ ಅನ್ಯಾಯವಾಗುತ್ತಿದೆ, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂತಹ ಪದವೀಧರರಿಗೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಮತ್ತು ಬಡತನ ಕಡಿಮೆ ಮಾಡಬೇಕು, ನನ್ನ ಸಾವು ನಿರುದ್ಯೋಗಿಗಳಿಗೆ ಮಾತ್ರ ಅರ್ಥವಾಗುತ್ತದೆ. ನನ್ನ ಸಾವಿನಿಂದಲಾದರು ಸರ್ಕಾರ ಎಚ್ಚೆತ್ತುಕೊಳ್ಳಲಿ. ನಿರುದ್ಯೋಗಿಗಳಿಗೆ ನನ್ನ ಸಾವಿನಿಂದಲಾದರೂ ಉದ್ಯೋಗ ಸಿಗುವಂತಾಗಲಿ” ಎಂದು ಹೇಳಿಕೊಂಡಿದ್ದಾನೆ.
ಅಧ್ಯಯನ ತಂಡವಾಗಿ ಭೇಟಿ ನೀಡಿದ್ದ ನಮಗೆ ಅನಿಲ್ ಮನೆಯಲ್ಲಿ ಕಿತ್ತು ತಿನ್ನುವ ಬಡತನವಾಗಲಿ, ಆತ ಇಷ್ಟು ತುರ್ತಾಗಿ ಆತ್ಮಹತ್ಯೆ ಮಾಡಿಕೊಳ್ಳಲೇಬೇಕಿದ್ದ ಅನಿವಾರ್ಯತೆಯಾಗಲಿ ಕಂಡು ಬರಲಿಲ್ಲ. ಆದರೆ ಕೆಲಸಕ್ಕಾಗಿ ಅಲೆದಾಡಿದ್ದ ನೋವು, ಯಾವ ಭರವಸೆಗೂ ಆಸ್ಪದವಿಲ್ಲದಂತೆ ಸುತ್ತಿಕೊಂಡಿದ್ದ ನಿರುದ್ಯೋಗ, ಬಿಎ ಪದವಿಯಿಂದ ಈ ಸಮಾಜದಲ್ಲಿ ಕೆಲಸ ಸಿಗುವುದಿಲ್ಲ ಎಂದು ಈ ಸಮಾಜ ಹುಟ್ಟುಹಾಕಿರುವ ಭ್ರಮೆ, ಕೊನೆಗೆ ತನ್ನ ಸಾವಿನಿಂದಾದರು ಈ ಸಮಸ್ಯೆಗಳು ಬಗೆಹರಿಯಬಹುದೆನ್ನುವ ಆಶಾವಾದ ಆತನನ್ನು ಸಾವಿನ ಕುಣಿಕೆಗೆ ತಳ್ಳಿವೆ. ಆತನ ಆಲೋಚನೆ, ಉದ್ದೇಶ ಸರಿಯಿರಬಹುದು, ಆದರೆ ಆಯ್ಕೆ ಮಾಡಿಕೊಂಡು ಹಾದಿಯ ಬಗ್ಗೆ ನಮಗೆಲ್ಲ ಬೇಸರವಿದೆ. ಆದರೆ ಆತನನ್ನು ಮುಂದಿಟ್ಟುಕೊಂಡು ನಾವು ಒಂದಷ್ಟು ಗಂಭೀರ ಚರ್ಚೆಯನ್ನಾದರು ಮಾಡದಿದ್ದರೆ, ರಾಥೋಡನ ಆ ಸಾವಿಗೆ ಅರ್ಥವೇ ಇಲ್ಲದಂತಾಗುತ್ತೆ. ಸಣ್ಣಪುಟ್ಟದಕ್ಕೆಲ್ಲ ದಿನಗಟ್ಟಲೆ ಪ್ಯಾನೆಲ್ ಡಿಸ್ಕಷನ್ ನಡೆಸುವ ನಮ್ಮ ಮೀಡಿಯಾಗಳು ಅದಾಗಲೇ ಅಂತಹ ತಪ್ಪು ಮಾಡಿವೆ…
“ನಮ್ಮ ದೇಶ ನಿರುದ್ಯೋಗದ ಟೈಮ್‍ಬಾಂಬ್ ಮೇಲೆ ಕೂತಿದೆ” ಈ ಮಾತು ಹೇಳಿದ್ದು ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್. ರಾಥೋಡ್‍ನ ಆತ್ಮಹತ್ಯೆಯನ್ನು ರೆಫೆರೆನ್ಸ್ ಆಗಿಟ್ಟುಕೊಂಡು ಇಂದಿನ ಯುವಜನರ ಪರಿಸ್ಥಿತಿ ಗಮನಿಸಿದರೆ ಆ ಟೈಂ ಬಾಂಬ್‍ನ ಕೌಂಟ್‍ಡೌನ್ ಶುರುವಾಗಿ ಸ್ಫೋಟಗೊಳ್ಳಲು ಅಣಿಯಾಗಿದೆಯೇನೋ ಎಂಬ ಭಯ ಭಾಸವಾಗುತ್ತದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿಯ (ಎನ್.ಎಸ್.ಡಿ.ಸಿ) ವರದಿ ಪ್ರಕಾರ ನಮ್ಮ ರಾಜ್ಯವೊಂದರಲ್ಲೆ 95 ಲಕ್ಷದಷ್ಟು ಯುವಜನರು ನಿರುದ್ಯೋಗಿಗಳು ಮತ್ತು ಅರೆ ಉದ್ಯೋಗಿಗಳಾಗಿದ್ದಾರೆ. ಇನ್ನು ದೇಶದಲ್ಲಿ ಪ್ರತಿವರ್ಷ 1.2 ಕೋಟಿ ಯುವಜನರು ತಮ್ಮ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿ ಹೊರಬರುತ್ತಿದ್ದಾರೆ! ಇಂತಹ ಕೋಟ್ಯಾಂತರ ಯುವಜನರಿಗೆ ಸರ್ಕಾರದ ಬಳಿ ಉದ್ಯೋಗಕ್ಕಾಗಿ ಸಮಗ್ರವಾದ ಯೋಜನೆಯಿದೆಯೇ ಎಂದು ನೋಡಿದರೆ ನಿರಾಶೆಯ ಉತ್ತರ ಸಿಗುತ್ತದೆ. ಬಹುತೇಕ ನಿರುದ್ಯೋಗ ಯುವಕರೇ ಅಪರಾಧ, ಕೋಮುಗಲಭೆ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಇಂತಹ ಅನಾಹುತಗಳನ್ನು ತಪ್ಪಿಸಿ, ದುಡಿಯುವ ಶಕ್ತಿಯುಳ್ಳ ಯುವಜನರಿಗೆ ಉದ್ಯೋಗ ಸೃಷ್ಟಿಯಾಗಬೇಕು ಮತ್ತು ಅಭದ್ರ ಸ್ಥಿತಿಯಲ್ಲಿರುವ ಗುತ್ತಿಗೆ ನೌಕರರಿಗೆ ಸುಭದ್ರ ಉದ್ಯೋಗ ಕಲ್ಪಿಸುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರುವ ಸಲುವಾಗಿ ಕರ್ನಾಟಕದಲ್ಲಿ ‘ಉದ್ಯೋಗಕ್ಕಾಗಿ ಯುವಜನರು’ ವೇದಿಕೆಯು ಕಳೆದ ಒಂದು ವರ್ಷದಿಂದ ಆಂದೋಲನ ನಡೆಸಿಕೊಂಡು ಬರುತ್ತಿದೆ. ಆದರೆ ಸರ್ಕಾರಗಳು ಇದರ ಗಂಭೀರತೆಯನ್ನು ಮನಗಾಣದೆ ಜಾಣ ಕಿವುಡರಂತೆ ವರ್ತಿಸುತ್ತಿವೆ. ಸರ್ಕಾರಗಳ ಈ ಧೋರಣೆಯಿಂದಾಗಿಯೇ ಹತಾಶ ಯುವಕರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಅಂದರೆ ತಪ್ಪಾಗಲಿಕ್ಕಿಲ್ಲ.
ರಾಥೋಡ್‍ನ ವಿಚಾರಕ್ಕೇ ಮರಳುವುದಾದರೆ, ಉದ್ಯೋಗಕ್ಕಾಗಿ ಯುವಜನರು ಆಂದೋಲನ ಬಿಡುಗಡೆ ಮಾಡಿದ್ದ ‘ಯುವಜನ ಪ್ರಣಾಳಿಕೆ’ಯನ್ನು ಮೂರು ಪಕ್ಷದವರ ಮುಂದಿಟ್ಟು, ತಮ್ಮ ಪ್ರಣಾಳಿಕೆಯಾಗಿಸಿಕೊಳ್ಳಲು ಒತ್ತಾಯಿಸಿತ್ತು. ಜೆಡಿಎಸ್‍ನ ಕುಮಾರಸ್ವಾಮಿಯವರು ಆಂದೋಲನದ ಪ್ರಣಾಳಿಕೆಯ ಅಂಶಗಳ ಸಾಲುಗಳನ್ನಿಟ್ಟುಕೊಂಡು ಉದ್ಯೋಗ ಸೃಷ್ಟಿಯ ಕುರಿತು ಪತ್ರಿಕೆ ಮತ್ತು ಟಿವಿಗಳಲ್ಲಿ ಪ್ರಚಾರ ಮಾಡಿದ್ದರು. ಇದನ್ನು ಅಪಾರವಾಗಿ ನಂಬಿದ್ದ ಅನಿಲ್ ಚುನಾವಣೆ ಸಮಯದಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ದಲ್ಲದೇ ತನ್ನ ಗೆಳೆಯರ ಬಳಿ, “ಜೆಡಿಎಸ್ ಗೆಲ್ಲಬೇಕು, ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ” ಎಂದು ಹೇಳಿಕೊಂಡಿದ್ದ. ತಾನು ಮಾಡಿದ ವಿಡಿಯೋದಲ್ಲಿಯೂ ಕುಮಾರಸ್ವಾಮಿ ಅವರನ್ನು “ಅನುಭವಿಗಳು, ಮೋಸ್ಟ್ ಇಂಟಲಿಜೆಂಟ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ” ಎಂದು ಬಣ್ಣಿಸಿರುವುದು ಸಿಎಂ ಮೇಲೆ ಆತನಿಟ್ಟಿರುವ ಭರವಸೆಯನ್ನು ತೋರಿಸುತ್ತದೆ.
ಇದೀಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ, ಅನಿಲ್ ಆತ್ಮಹತ್ಯೆ ಮಾಡಿಕೊಂಡು ವಾರಗಳೆ ಕಳೆದರು ಸಾಂತ್ವನಕ್ಕಾದರು ಸಿಎಂ ಆತನ ಮನೆಕಡೆ ತಲೆ ಹಾಕದಿರುವುದು ನಿರುದ್ಯೋಗಿಗಳ ವಿಚಾರದಲ್ಲಿ ಅವರೆಷ್ಟು ಗಂಭೀರವಾಗಿದ್ದಾರೆ ಮತ್ತು ಚುನಾವಣಾ ಪೂರ್ವ ಅವರು ಕೊಟ್ಟಿದ್ದ ಆಶ್ವಾಸನೆಗಳ ಗಟ್ಟಿತನವೆಷ್ಟು ಎಂಬುದು ಅರ್ಥವಾಗುತ್ತದೆ.
ನಿರುದ್ಯೋಗದ ವಿಚಾರ 70-80ರ ದಶಕದ ನಂತರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ರಾಜಕೀಯ ಪಕ್ಷಗಳೂ ಚುನಾವಣೆ ಆಶ್ವಾಸನೆಯಲ್ಲಿ ಉದ್ಯೋಗ ಸೃಷ್ಟಿಯ ಭರವಸೆ ನೀಡುವ ಅನಿವಾರ್ಯಕ್ಕೆ ತುತ್ತಾಗಿವೆ. ಆದರೆ ಇವೆಲ್ಲ ಕೇವಲ ಎಲೆಕ್ಷನ್‍ಗೆ ಮಾತ್ರವೇ ಸೀಮಿತವಾಗುಳಿಯುತ್ತಿವೆ. ನಮ್ಮ ಪ್ರಧಾನಮಂತ್ರಿಗಳು ಮತ್ತು ಇತರೆ ರಾಜಕಾರಣಿಗಳ ಹೇಳಿಕೆಗಳು ಇದನ್ನು ಪುಷ್ಠೀಕರಿಸುತ್ತಿವೆ. ಉದ್ಯೋಗ ಸೃಷ್ಟಿಯ ಪ್ರಶ್ನೆ ಬಂದಾಗ ‘ಪಕೋಡ ಮಾರುವುದು ಉದ್ಯೋಗವಲ್ಲವೇ’ ಎಂಬ ಉಡಾಫೆಯ ಉತ್ತರ ಪ್ರಧಾನಿಗಳಿಂದ ಬಂದರೆ, ಆರ್.ವಿ. ದೇಶಪಾಂಡೆಯಂತಹ ರಾಜ್ಯದ ಕಂದಾಯ ಮಂತ್ರಿಗಳೂ ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಇದರಿಂದ, ಯುವಜನರನ್ನು ವಂಚಿಸುವಲ್ಲಿ ರಾಜಕಾರಣಿಗಳ ನಡುವೆ ಯಾವ ಪಕ್ಷಬೇಧವೂ ಇಲ್ಲ ಅನ್ನೋದು ಸಾಬೀತಾಗುತ್ತೆ. ಭಾರತದ ಸಮಸ್ತ ಜನರಿಗೆ ಸರ್ಕಾರವೇ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿಲ್ಲ ನಿಜ. ಆದರೆ, ಉದ್ಯೋಗ ಸೃಷ್ಟಿಯಾಗುವಂತ ವಾತಾವರಣ ನಿರ್ಮಿಸಿಲು ಸಾಧ್ಯವಿದೆ. ಅದು ಈ ಸರ್ಕಾರಗಳ ಜವಾಬ್ದಾರಿಯೂ ಹೌದು.
ತಮ್ಮ ಹೆತ್ತವರಿಗೆ ಹೊರೆಯಾಗಿದ್ದೇವೆ ಪಾಪಪ್ರಜ್ಞೆಯಿಂದ ಹೊರಬರಲು ಹಲವು ಯುವಜನರು ತಮ್ಮ ಓದಿಗೆ ಸಂಬಂಧವೇ ಇಲ್ಲದಂತ ತಾತ್ಕಾಲಿಕ ಉದ್ಯೋಗಗಳ ಬೆನ್ನುಹತ್ತಿ ಅಭದ್ರತೆಯಲ್ಲೇ ಬದುಕು ಸಾಗಿಸುತ್ತಾರೆ. ಇನ್ನು ಕೆಲವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿಯನ್ನು ಹಿಡಿದಿದ್ದಾರೆ!!
ಸಂಪನ್ಮೂಲಗಳ ಶ್ರೀಮಂತಿಕೆಯನ್ನು ಹೊಂದಿರುವ ಭಾರತದಂತ ದೇಶದಲ್ಲಿಯೂ ನಿರುದ್ಯೋಗ ಸಮಸ್ಯೆಯಿಂದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದರೆ ಇದು ಪ್ರಜಾಪ್ರಭುತ್ವದ ದೊಡ್ಡ ವ್ಯಂಗ್ಯವೇ ಸರಿ!

– ಸರೋವರ್ ಬೆಂಕಿಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...