ಜಪಾನ್‍ನಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿದ್ದು, ಜನತೆ ಅಲ್ಲೋಲಕಲ್ಲೋಲಗೊಂಡಿದ್ದಾರೆ. ಜಪಾನ್‍ನ ರಾಜಧಾನಿ ಟೋಕಿಯೋದಲ್ಲಿ ಬಿಡದೇ ಮಳೆ ಸುರಿಯುತ್ತಿದೆ. ಮಳೆಯಿಂದ ಜನತೆ ತತ್ತರಿಸಿದ್ದು, ಎಲ್ಲೆಲ್ಲೂ ನೀರೇ ನೀರು ತುಂಬಿಕೊಂಡಿದೆ. ಇತ್ತ ಮಳೆಯ ಪ್ರಮಾಣ ಹೆಚ್ಚಿದ್ದು, ಭೂಕುಸಿತ ಉಂಟಾಗುತ್ತಿದೆ. ನೆಲ ಕುಸಿಯುತ್ತಿರುವ ಪರಿಣಾಮ ಮನೆಗಳು, ಮರಗಳು ಸಹ ನೆಲಕಚ್ಚುತ್ತಿವೆ. ಜನ ಅಯೋಮಯಗೊಂಡಿದ್ದಾರೆ.
ಈ ಹಿಂದೆ ಆರು ದಶಕಗಳ ಹಿಂದೆ ಭೀಕರ ಚಂಡಮಾರುತ ಅಪ್ಪಳಿಸಿತ್ತು. ಈಗ ಮತ್ತೆ ಭಾರಿ ಮಳೆಯಾಗುತ್ತಿದ್ದು, ಚಂಡಮಾರುತ ಅನಾಹುತ ಸೃಷ್ಟಿಸಿದೆ. ಫೆಸಿಪಿಕ್ ಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಹಿಗ್ಬೀಸ್ ಚಂಡಮಾರುತ ಎದ್ದಿದೆ. ನೈರುತ್ಯ ಟೋಕಿಯೋ, ಶಿಸೋಕಾ ಸೇರಿದಂತೆ ಹಲವು ಭಾಗಗಳಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಮಳೆಗೆ ಒಬ್ಬ ಮೃತಪಟ್ಟಿದ್ದು, ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ.
ಮಳೆ ಹಿನ್ನೆಲೆ ರಾಜಧಾನಿ ಟೋಕಿಯೋದಲ್ಲಿ ಆಯೋಜನೆಗೊಂಡಿದ್ದ ರಗ್ಬಿ ವರ್ಲ್ಡ್ ಕಪ್ ಮ್ಯಾಚ್‍ನ್ನು ರದ್ದುಗೊಳಿಸಲಾಗಿದೆ. ರೈಲು, ವಿಮಾನ ಸೇವೆ ಸ್ಥಗಿತಗೊಂಡಿದ್ದು, ರಸ್ತೆ ಸಂಚಾರ ವ್ಯತ್ಯಯವಾಗಿದೆ. ಇನ್ನು ಚಂಡಮಾರುತ ಬೀಸಲಿರುವ ಬಗ್ಗೆ ಜನರಿಗೆ ಮೊದಲೇ ಸೂಚನೆ ನೀಡಲಾಗಿತ್ತು. ಸುರಕ್ಷಿತ ಸ್ಥಳಗಳತ್ತ ಹೋಗುವುದಾಗಿ ಹೇಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.


