ಡಾ. ಕಿರಣ್ ಎಂ ಗಾಜನೂರು, ಅಜೀಮ್ ಪ್ರೇಮ್ ಜಿ ಫೌಂಡೇಷನ್, ಯಾದಗಿರಿ |
ಸಂವಿಧಾನ ರಚನಾ ಸಭೆಯ ಗಣ್ಯರು ಮತ್ತು ಸಂವಿಧಾನ ನಿರ್ಮಾತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸೇರಿ ಸಂವಿಧಾನ ರಚನಾ ಸಭೆಯಲ್ಲಿ ಚರ್ಚಿಸಿ ರಾಜ್ಯದ ಒಟ್ಟು ಜವಾಬ್ದಾರಿಯನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವೆ ವೈಜ್ಞಾನಿಕವಾಗಿ ಹಂಚಿಕೆ ಮಾಡಿದ್ದರು. ಈ ಹಂಚಿಕೆಯ ಉದ್ಧೇಶ ರಾಜ್ಯಾಂಗದ ಮೂಲ ಘಟಕಗಳಲ್ಲಿ ಪರಸ್ಪರ ಹಸ್ತಕ್ಷೇಪವಿಲ್ಲದೆ ಸಂವಿಧಾನದ ಆಶಯವಾದ ಸಮಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ನಿಭಾಯಿಸುವುದು ಅವರ ಬಹುಮುಖ್ಯ ಆಶಯವಾಗಿತ್ತು. ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶ, ಸಂವಿಧಾನವನ್ನು ರಕ್ಷಿಸುವ ಹೊಣೆಯನ್ನು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಭಾಗವಾದ ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಲಾಗಿತ್ತು. ಆ ಕಾರಣಕ್ಕೆ ಬಾಬಾ ಸಾಹೇಬರು ಸಂವಿಧಾನ ರಚನಾ ಸಭೆಯಲ್ಲಿ ‘One single integrated judiciary having jurisdiction and providing remedies in all cases arising under the Constitutional law, the Civil, or the criminal law, essential to maintain the unity of the country’ ಎಂಬ ಅಭಿಪ್ರಾಯವನ್ನು ದಾಖಲಿಸಿದ್ದರು.
ಇದರ ಅರ್ಥ ಎಲ್ಲಾ ಹಂತಗಳಿಗೂ ಅನ್ವಯವಾಗುವ ಏಕರೂಪ ಮತ್ತು ಸ್ವತಂತ್ರ ನ್ಯಾಯಿಕ ವ್ಯವಸ್ಥೆ ಪ್ರಜಾತಂತ್ರದ ರಕ್ಷಕನಾಗಿ ಉಳಿಯಲು ಸಾಧ್ಯ. ಕಾಲಾನಂತರ ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಹಾದಿ ತಪ್ಪಿದರೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತಿಸಿದರೆ ಆ ಎರಡೂ ಅಂಗಗಳನ್ನು ನಿಯಂತ್ರಿಸುವ ಅಧಿಕಾರವನ್ನು ನ್ಯಾಯಾಂಗ ನಿರ್ವಹಿಸುತ್ತದೆ ಎಂಬ ಅಭಿಪ್ರಾಯವನ್ನು ಬಾಬಾ ಸಾಹೇಬರು ಹೊಂದಿದ್ದರು. ಆ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ಜವಾಬ್ದಾರಿ ಸಂವಿಧಾನದ ಮೂಲ ರಚನೆ ಮತ್ತು ಚೈತನ್ಯವನ್ನು ಸಂರಕ್ಷಿಸುವುದು ಎಂಬ ಅಂಶವನ್ನು ಸಂವಿಧಾನದಲ್ಲಿ ದಾಖಲಿಸಲಾಗಿದೆ. ಆ ಕಾರಣಕ್ಕೆ ಹಲವಾರು ಚಿಂತಕರು ಭಾರತದ ಸುಪ್ರೀಂಕೋರ್ಟ್ ಅನ್ನು `ಸಂವಿಧಾನದ ರಕ್ಷಕ’ ಎಂದು ವಿಶ್ಲೇಷಿಸಿದ್ದಾರೆ.

ಪ್ರಜಾತಂತ್ರ ಜಾರಿಗೊಳ್ಳಬೇಕಾದ ವ್ಯವಸ್ಥೆಯಲ್ಲಿ, ಆದರಲ್ಲೂ ಭಾರತದಂತಹ ಅಸಮಾನ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ವತಂತ್ರ ನ್ಯಾಯಿಕ ವ್ಯವಸ್ಥೆಯ ಮಹತ್ವವನ್ನು ಸ್ವತಃ ನ್ಯಾಯವಾದಿಗಳಾಗಿದ್ದ ಬಾಬಾ ಸಾಹೇಬರು ಬಲ್ಲವರಾಗಿದ್ದರು. ಆ ಕಾರಣಕ್ಕೆ ಅವರು ಸಂವಿಧಾನ ರಚನಾ ಸಭೆಯಲ್ಲಿ ಸ್ವತಂತ್ರ ನ್ಯಾಯಿಕ ಕಲ್ಪನೆಯನ್ನು ವ್ಯವಸ್ಥಿತವಾಗಿ ಮುಂದಿಟ್ಟಾಗ ದೊಡ್ಡ ಮಟ್ಟದ ಚರ್ಚೆಗಳು ನಡೆಯಲಿಲ್ಲ. ಏಕೆಂದರೆ ಸ್ವತಂತ್ರ ನ್ಯಾಯಿಕ ವ್ಯವಸ್ಥೆ ಅಸಮಾನ ಸಮಾಜದಲ್ಲಿ ಸವiತೆಯನ್ನು ಸಾಧಿಸುವ ಪ್ರಬಲ ಅಸ್ತ್ರ ಎಂಬುದನ್ನು ಸಂವಿಧಾನ ರಚನಾ ಸಭೆಯಲ್ಲಿನ ಬಹುತೇಕರು ಒಪ್ಪಿದ್ದರು.
ಆದರೆ ಕಾಲ ಬದಲಾದಂತೆ ಸ್ವತಂತ್ರ ನ್ಯಾಯಿಕ ವ್ಯವಸ್ಥೆ ಮತ್ತು ಅದರ ಸ್ವಯತ್ತ ಕಾರ್ಯವೈಖರಿ ಆಳುವ ವರ್ಗಕ್ಕೆ ತೊಡಕಾಗಿದೆ ಎಂಬ ವಾದವನ್ನು ದೊಡ್ಡ ಮಟ್ಟದಲ್ಲಿ ತೇಲಿ ಬಿಡಲಾಯಿತು. ಇದರೊಂದಿಗೆ ದೇಶದಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗಗಳ ನಡುವಿನ ಮುಸುಕಿನ ಸಮರ ಆರಂಭವಾಯಿತು ಅದರ ಸಂಕ್ಷಿಪ್ತ ಚರಿತ್ರೆಯನ್ನು ಕೆಳಗಿನಂತೆ ಗುರುತಿಸಬಹುದು. . .
ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯಗಳ ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಾತಿ ಪದ್ಧತಿಯಲ್ಲಿ ಸಾಕಷ್ಟು ಮಿತಿಗಳಿವೆ ಎಂಬ ವಾದವನ್ನು ಹುಟ್ಟುಹಾಕಲಾಯ್ತು. ಈ ಕಾರಣವನ್ನು ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸಂವಿಧಾನಕ್ಕೆ 99ನೇ ತಿದ್ದುಪಡಿ ತರುವ ಮೂಲಕ ನ್ಯಾಯಾಧೀಶರ ನೇಮಕಕ್ಕೆ ಬದಲಾಗಿ National Judicial Appointments (NJAC) Act ಹೆಸರಿನಲ್ಲಿ ಹೊಸ ಪದ್ಧತಿಯೊಂದನ್ನು ಜಾರಿಗೆ ತರುವ ಕುರಿತು ಪ್ರಕ್ರಿಯೆಗಳನ್ನು ಆರಂಭಿಸಿತು. ಇದರ ಪರಿಣಾಮವಾಗಿ `ಸಂಸತ್ತು, ಸಂವಿಧಾನಬದ್ಧ ನ್ಯಾಯಿಕ ಅಧಿಕಾರವನ್ನು ಮೊಟಕುಗೊಳಿಸುವ ಯತ್ನ ಮಾಡುತ್ತಿದೆ. ಇದು ಸಂವಿಧಾನದ ಮೂಲ ರಚನೆ ಮತ್ತು ಧ್ಯೇಯಗಳಿಗೆ ಧಕ್ಕೆ ತರುತ್ತದೆ. ಇದರ ಪರಿಣಾಮ ಇಂದು ಸ್ವತಃ ಸಂವಿಧಾನವೇ ಅಪಾಯದಲ್ಲಿದೆ, ಅದನ್ನು ರಕ್ಷಿಸಿ’ ಎಂಬ ಘೋಷದೊಂದಿಗೆ ಸಾಕಷ್ಟು ಚರ್ಚೆಗಳು ದೇಶದಾದ್ಯಂತ ನಡೆದವು.
ಹಾಗೆ ನೋಡುವುದಾದರೆ ಭಾರತದ ಸಂವಿಧಾನ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ನಡುವೆ ಅಧಿಕಾರವನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡಿ, ಸಂವಿಧಾನದ ಮೂಲ ರಚನೆಯ ಸತ್ವವನ್ನು ಸಂರಕ್ಷಿಸುವ ನ್ಯಾಯಿಕ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಿದ್ದರೂ, ಒಟ್ಟು ವ್ಯವಸ್ಥೆಯಲ್ಲಿ ಸಂಸತ್ತಿನ ಅಧಿಪತ್ಯ ಇರುವಂತೆ ನೋಡಿಕೊಳ್ಳುವ ಪ್ರಯತ್ನ ಸಾಕಷ್ಟು ವರ್ಷಗಳಿಂದ ನಡೆಯುತ್ತಿದೆ. ಆ ನಿಟ್ಟಿನಲ್ಲಿ 1971ರಲ್ಲಿ `ಮೂಲಭೂತ ಹಕ್ಕುಗಳ ತಿದ್ದುಪಡಿಯ ಅಧಿಕಾರ ಸಂಸತ್ತಿಗೆ ಇದೆ’ ಎಂಬ ಅಂಶಗಳನ್ನು ಒಳಗೊಂಡ 24ನೇ ಸಂವಿಧಾನ ತಿದ್ದುಪಡಿ ಮೊದಲ ಪ್ರಭಾವಿ ಯತ್ನ ಎಂಬುದನ್ನು ನಾವು ಗುರುತಿಸಬಹುದು.
ಇದಕ್ಕೆ ಪ್ರತಿಕ್ರಿಯೆ ಎಂಬಂತೆ 1973ರಲ್ಲಿ ಕೇಶವಾನಂದಭಾರತಿ ಪ್ರಕರಣವನ್ನು ಆಧರಿಸಿ ಸರ್ವೋಚ್ಚ ನ್ಯಾಯಾಲಯ ನೀಡಿದ ತಿರ್ಪಿನಲ್ಲಿ `ಸಂಸತ್ತು, ಸಂವಿಧಾನವನ್ನು ತಿದ್ದುಪಡಿ ಮಾಡಬಹುದು, ಆದರೆ ಆ ಪ್ರಕ್ರಿಯೆ ಸಂವಿಧಾನದ ಮೂಲ ರಚನೆ ಮತ್ತು ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಇರಬೇಕು’ ಎಂಬ ಅಂಶವನ್ನು ದಾಖಲಿಸಿತು. ಈ ಮೂಲಕ ಸುಪ್ರೀಂಕೋರ್ಟ್ ನ್ಯಾಯಾಂಗದ ಸಂವಿಧಾನÀದತ್ತ ನ್ಯಾಯಿಕ ಅಧಿಕಾರವನ್ನು ಉಳಿಸಿಕೊಳ್ಳುವ ಯತ್ನ ಮಾಡಿದ್ದನ್ನು ನಾವು ಗಮನಿಸಬಹುದು. ಇದರ ಭಾಗವಾಗಿಯೇ ರಾಜ್ಯ ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಹಕ್ಕುಗಳ ಕುರಿತು ಸಂಸತ್ತಿನ ಅಧಿಕಾರವನ್ನು ವಿಶ್ಲೇಷಿಸಿದ ಗೋಲಕ್‍ನಾಥ್ ಪ್ರಕರಣವನ್ನು(1967) ನಾವು ಗಮನಿಸಬಹುದು.
ನ್ಯಾಯಿಕ ಅಧಿಕಾರದ ವ್ಯಾಪ್ತಿಯಲ್ಲಿ ಸಂಸತ್ತಿನ ಹಸ್ತಕ್ಷೇಪವನ್ನು ತಡೆಯುವ ಸುಪ್ರೀಂಕೋರ್ಟ್‍ನ ಈ ಎಲ್ಲಾ ಪ್ರಯತ್ನಗಳ ಆಚೆಗೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ (1975-76) ಇಂದಿರಾ ಗಾಂಧಿ ಸಂವಿಧಾನಕ್ಕೆ ತಂದ 42ನೇ ತಿದ್ದುಪಡಿ ಮತ್ತೆ ಸುಪ್ರೀಂಕೋರ್ಟ್ ಮತ್ತು ರಾಜ್ಯ ಉಚ್ಚ ನ್ಯಾಯಾಲಯಗಳ ನ್ಯಾಯಿಕ ಅಧಿಕಾರವನ್ನು ಮೊಟಕು ಮಾಡುವ ಎಲ್ಲಾ ಪ್ರಯತ್ನಗಳನ್ನು ನಡೆಸಿತ್ತು. ಆ ಕಾಲಕ್ಕೆ ಅದು ಎಷ್ಟು ವಿವಾದಾತ್ಮಕ ತಿದ್ದುಪಡಿಯಾಗಿತ್ತು ಅಂದರೆ 42ನೇ ಸಂವಿಧಾನ ತಿದ್ದುಪಡಿಯನ್ನು `ಮಿನಿ ಸಂವಿಧಾನ’ ಅಥವಾ `ಇಂದಿರಾ ಸಂವಿಧಾನ’ ಎಂಬ ಕಟು ವಿಮರ್ಶೆಗಳು ಕೇಳಿಬಂದಿದ್ದವು. ಆದರೆ ಈ ಅತಿಕ್ರಮಣವನ್ನು 1993ರ ಸೆಕೆಂಡ್ ಜಡ್ಜ್ ಪ್ರಕರಣದ ತೀರ್ಪು ಹಾಗೂ 43 ಮತ್ತು 44ನೇ ಸಂವಿಧಾನ ತಿದ್ದುಪಡಿಗಳು ಎದುರಿಸುವಲ್ಲಿ ಯಶಸ್ವಿಯಾಗಿದ್ದವು.
ನಂತರ 2009ರ ಎರಡನೇ ಹಂತದ ಯುಪಿಎ ಸರ್ಕಾರದ ಕಾಲದಲ್ಲಿ ದೇಶದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾದವು. ಇದರ ಪರಿಣಾಮ ಕೇಂದ್ರದಲ್ಲಿ ಅಧಿಕಾರದ ಕೇಂದ್ರೀಕರಣ ಪ್ರಕ್ರಿಯೆ ಆರಂಭವಾಯಿತು. ಆಗ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ್ ಸಿಂಗ್ ಅವರು ಮೊದಲು ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆ ಕುರಿತ ಬದಲಾವಣೆಯನ್ನು ಪ್ರತಿಪಾದಿಸುವ 99ನೇ ಸಂವಿಧಾನ ತಿದ್ದುಪಡಿಯನ್ನು ಪ್ರಸ್ತಾಪಿಸಿದ್ದರು. ಸಾಕಷ್ಟು ವಿವಾದ ಮತ್ತು ಚರ್ಚೆಗಳ ಕಾಲ ನೆನೆಗುದಿಗೆ ಬಿದ್ದಿದ್ದ ತಿದ್ದುಪಡಿ ಪ್ರಕ್ರಿಯೆಗೆ 2014ರಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆದ ನಂತರ ಮತ್ತೆ ಚಾಲನೆ ದೊರೆಯಿತು. ಇದರ ಪರಿಣಾಮ 99ನೇ ಸಂವಿಧಾನ ತಿದ್ದುಪಡಿ ಆಗಿ ಅದು ಏಪ್ರಿಲ್ 13, 2015ರಿಂದ ಕಾಯ್ದೆಯಾಗಿ ಜಾರಿಗೆ ಬಂದಿತು.
99ನೇ ತಿದ್ದುಪಡಿ ಮೇಲ್ನೋಟಕ್ಕೆ ನ್ಯಾಯಾಧೀಶರ ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕುರಿತು ಮಾತನಾಡುತ್ತಿದೆ ಎಂಬ ಭಾವನೆ ಮೂಡಿದರೂ ಆಳದಲ್ಲಿ ಈ ತಿದ್ದುಪಡಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವೆ ಅಧಿಕಾರವನ್ನು ಹಂಚಿರುವ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ನ್ಯಾಯಾಂಗದ ಮೇಲೆ ಸಂಸತ್ತು/ಶಾಸಕಾಂಗದ ಅತಿಕ್ರಮಣ ಧೋರಣೆಯಿಂದ ಇಂದು ಸ್ವತಃ ಸಂವಿಧಾನವೇ ಅಪಾಯದಲ್ಲಿದೆ, ಅದನ್ನು ರಕ್ಷಿಸಿ ಎಂಬ ನೆಲೆಯಲ್ಲಿ ದೇಶದ ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಈ ತಿದ್ದುಪಡಿ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಪರಿಣಾಮ 99ನೇ ಸಂವಿಧಾನ ತಿದ್ದುಪಡಿ ಸಂವಿಧಾನದ ಮೂಲ ರಚನೆ ಮತ್ತು ಆಶಯಕ್ಕೆ ವಿರುದ್ಧವಾಗಿದೆ ಎಂಬ ಕಾರಣವನ್ನು ನೀಡಿ ಅದರ ಭಾಗವಾಗಿ ಜಾರಿಗೆ ಬಂದ National Judicial Appointments Commission Act (2014)ನ್ನು ಅಸಂವಿಧಾನಿಕ ಎಂಬ ತೀರ್ಪನ್ನು ನೀಡಿತು.
ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಸಂಸತ್ತಿನ ಅಧಿಕಾರವನ್ನು ಮೊಟಕುಗೊಳಿಸಿದೆ ಎಂಬ ವಾದಗಳು ಇಂದು ಚಾಲ್ತಿಯಲ್ಲಿವೆ. ಇದರ ಜೊತೆಜೊತೆಗೆ ಇಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರುಗಳು ಪತ್ರಿಕಾಗೋಷ್ಠಿ ನಡೆಸುವ ಮೂಲಕ ನ್ಯಾಯಾಂಗದಲ್ಲಿ ಎಲ್ಲವೂ ಸರಿ ಇಲ್ಲ, ಇಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವಿನ ಸಂವಿಧಾನಿಕ ಅಧಿಕಾರ ಹಂಚಿಕೆಯನ್ನು ವಿಷಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗತೊಡಗಿದೆ.
ಈ ಎಲ್ಲಾ ಘಟನೆಗಳನ್ನು ನೋಡುತ್ತಿದ್ದರೆ ಬದಲಾದ ಭಾರತದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಚಿಂತನೆಗಳು ಸೃಷ್ಟಿಸಿದ ಹೊಸ ಮಾದರಿಯ ಆಳುವವರ್ಗ ಮತ್ತು ಜಾಗತೀಕರಣದಿಂದ ಹುಟ್ಟಿದ ನವಮಾರುಕಟ್ಟೆ ನೀತಿಗಳು ಸಮಸಮಾಜದ ಕನಸನ್ನು ಹೊತ್ತ ಮೂಲ ಸಂವಿಧಾನದ ಆಶಯಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ನಿರತವಾಗಿರುವಂತೆ ಕಾಣುತ್ತಿದೆ. ಈ ಆಲೋಚನೆಯನ್ನು ಜಾಗತಿಕ ಮಾರುಕಟ್ಟೆ ಮೂಲಭೂತವಾದ ಮತ್ತು ಸ್ಥಳೀಯ ಧಾರ್ಮಿಕ ಮೂಲಭೂತವಾದಗಳು ಪೋಷಿಸುತ್ತಿರುವುದು ನಮ್ಮ ಕಣ್ಣಿಗೆ ಕಾಣುತ್ತಿದೆ. ಆ ಕಾರಣಕ್ಕೆ ಬಹುತೇಕ ಆಳುವ ವರ್ಗದ ಪ್ರತಿನಿಧಿಗಳೇ ತುಂಬಿರುವ ಸಂಸತ್ತು, ಸ್ವತಂತ್ರ ನ್ಯಾಯಿಕ ವ್ಯವಸ್ಥೆಯ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ.
ಇದರ ಪರಿಣಾಮ ಇಂದು ಸರ್ವೋಚ್ಚ ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸದಲ್ಲೆ ಇರುವಂತೆ ನೋಡಿಕೊಳ್ಳಲಾಗಿದೆ. ಈ ಅಸಂಗತ ಸಂಗತಿಗಳನ್ನು ಆಧರಿಸಿಯೇ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟೀಸ್ ಚಲಮೇಶ್ವರ ಅವರು `ಸರ್ವೋಚ್ಚ ನ್ಯಾಯಾಲಯದ ಮುಖ್ಯ ಕಾರ್ಯ ಜಾಮೀನು ಅರ್ಜಿಗಳನ್ನು ವಿಲೇವಾರಿ ಮಾಡುವುದಲ್ಲ, ಬದಲಾಗಿ ಸಂವಿಧಾನದ ಚೈತನ್ಯವನ್ನು ಸಂರಕ್ಷಿಸುವುದು ಸರ್ವೋಚ್ಚ ನ್ಯಾಯಾಲಯ ಮಹತ್ವದ ಸಾಂವಿಧಾನಿಕ ಪೀಠ. ಒಂದು ವೇಳೆ ಇಂದು ಬಾಬಾ ಸಾಹೇಬರು ಇದ್ದಿದ್ದರೂ ಸರ್ವೋಚ್ಚ ನ್ಯಾಯಾಲಯ ಜಾಮೀನು ಅರ್ಜಿ ವಿಲೇವಾರಿ ಕಾರ್ಯವನ್ನು ಒಪ್ಪುತ್ತಿರಲಿಲ್ಲ’ ಎಂಬ ಅರ್ಥದ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
ಒಟ್ಟಾರೆ ಸಂಸತ್ತಿನ ಸ್ವಾಯತ್ತತೆಯ ಹೆಸರಿನಲ್ಲಿ ಸ್ವತಂತ್ರ ನ್ಯಾಯಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಒಂದು ವೇಳೆ ಆಳುವ ವರ್ಗಗಳು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರೆ ತನ್ನ ವ್ಯಾಪ್ತಿಯಲ್ಲಿ ಎಲ್ಲರನ್ನು ಒಳಗೊಳ್ಳುವ, ನ್ಯಾಯದಾನ ಮಾಡುವ ಉದ್ದೇಶ ಹೊಂದಿರುವ ಭಾರತೀಯ ಸಂವಿಧಾನದ ಆಶಯ, ಸ್ವತಂತ್ರ ನ್ಯಾಯಿಕ ವ್ಯವಸ್ಥೆ ಕುರಿತ ಬಾಬಾ ಸಾಹೇಬರ ಕಾಳಜಿ ಎಲ್ಲವೂ ದುರ್ಬಲಗೊಳ್ಳುತ್ತವೆ. ಈ ಅರ್ಥದಲ್ಲಿ ಸಂವಿಧಾನ ಅಪಾಯಕ್ಕೆ ಒಳಗಾಗಿದೆ ಎಂಬ ಸಂಗತಿಯನ್ನು ನಾವು ಗ್ರಹಿಸಬೇಕಿದೆ. ಹಾಗೆ ಗ್ರಹಿಸಿದಲ್ಲಿ ಮಾತ್ರ ನಮಗೆ `ಸರ್ವೋಚ್ಚ ನ್ಯಾಯಾಲಯದ ಮುಖ್ಯ ಕೆಲಸ ಜಾಮೀನು ಅರ್ಜಿಗಳನ್ನು ವಿಲೇವಾರಿ ಮಾಡುವುದಲ್ಲ ಬದಲಾಗಿ ಸಂವಿಧಾನದ ಚೈತನ್ಯವನ್ನು ಸಂರಕ್ಷಿಸುವುದು’ ಎಂಬ ಜಸ್ಟೀಸ್ ಚಲಮೇಶ್ವರ ಅವರ ಕಾಳಜಿ, ನ್ಯಾಯಾಲಯ ಬಿಟ್ಟು ಮಾಧ್ಯಮದ ಮುಂದೆ ಬಂದ ನ್ಯಾಯಾಧೀಶರ ಆತಂಕ ಅರ್ಥವಾಗಲು ಸಾಧ್ಯ.


