Homeಕರ್ನಾಟಕಡಾ. ಮಾತೆ ಮಹಾದೇವಿ ಎಂಬ ಬೆರಗು

ಡಾ. ಮಾತೆ ಮಹಾದೇವಿ ಎಂಬ ಬೆರಗು

- Advertisement -
- Advertisement -

ವಿಶ್ವಾರಾಧ್ಯ ಸತ್ಯಂಪೇಟೆ |

ಅಂಗಸಂಗದಲ್ಲಿ ಲಿಂಗಸಂಗಿಯಾದೆನು
ಲಿಂಗಸಂಗದಲ್ಲಿ ಅಂಗಸಂಗಿಯಾದೆನು
ಉಭಯಸಂಗವನೂ ಅರಿಯದೆ ಪರಿಣಾಮಿಯಾದೆನು
ನುಡಿಯ ಗಡಣವ ಮರೆದು ತೆರಹಿಲ್ಲದಿದ್ದೆನು
ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಬೆರಸಿದ ಬಳಿಕ
ಎನ್ನ ನಾನು ಏನೊಂದ ಅರಿಯೆನಯ್ಯಾ

ಈ ಲಿಂಗ ಸುಖದಲ್ಲಿಯೆ ತಮ್ಮ ಅಂಗಸುಖವನ್ನು ಮರೆತು ಬಸವಾದಿ ಶರಣರ ವಚನಗಳ ಸುಖದಲ್ಲಿ ಕರ ಕರಕರಗಿ ಹೋದವರು ಯಾರಾದರೂ ಇದ್ದರೆ ಅವರು ಲಿಂಗೈಕ್ಯ ಲಿಂಗಾನಂದ ಮಹಾಸ್ವಾಮಿಗಳು ಹಾಗೂ ಡಾ. ಮಾತೆ ಮಹಾದೇವಿಯವರು. ಮಾತೆ ಮಹಾದೇವಿ ಒಂದು ದಂತಕತೆಯಂತೆ ತಮ್ಮ ವ್ಯಕ್ತಿತ್ವವನ್ನು ವಿಸ್ತರಿಸಿಕೊಂಡವರು. ತಾವು ಗುರುಗಳಾದ ಪೂಜ್ಯ ಲಿಂಗಾನಂದ ಸ್ವಾಮಿಗಳಿಂದ ಪಡೆದ ಆಧ್ಯಾತ್ಮಿಕ ಔನತ್ಯವನ್ನು ನಾಡಿನ ಉದ್ದಗಲಕ್ಕೂ ಪಸರಿಸಿದವರು. ವಚನಗಳು , ಬಸವಾದಿ ಶರಣರು ಅಂದರೆ ಕೇವಲ ಮಠೀಯ ವ್ಯವಸ್ಥೆ ಮಾತ್ರ ಉಚ್ಚರಿಸುತ್ತಿದ್ದ ದಿನಮಾನಗಳು.

ಆಗ ಬಸವಣ್ಣ ಕೇವಲ ನಾಲ್ಕು ಕಾಲಿನ, ಒಂದು ಬಾಲವಿರುವ, ಎರಡು ಕೊಂಬಿರುವ ಮೂಕ ಪ್ರಾಣಿ. ಬಸವಣ್ಣ ಎಂಬ ಶಬ್ಧದ ಬಗೆಗೆ ಸಾಕಷ್ಟು ಜನರಿಗೆ ಮನವರಿಕೆ ಇರಲಿಲ್ಲ. ವಿರಕ್ತ ಮಠಗಳು ಅಲ್ಲೊಂದು ಇಲ್ಲೊಂದು ಶಿವಾನುಭವ ಗೋಷ್ಠಿಗಳನ್ನು ಮಾತ್ರ ನಡೆಸುತ್ತಿತ್ತು. ಅಲ್ಲೂ ಆ ಕೈಲಾಸ ಪರ್ವತದ ಶಿವ ಹಾಗೂ ಪಾರ್ವತಿ ಗಣಪತಿ ಷಣ್ಮುಖರುಗಳೆ ಪ್ರಮುಖವಾಗಿ ಮಿಂಚುತ್ತಿದ್ದರು. ಪೌರಾಣಿಕ ಅತಿರಂಜಿತ ಕತೆಗಳು ಜನತೆಯಲ್ಲಿ ಪುಳಕವನ್ನು ಉಂಟು ಮಾಡುತ್ತಿದ್ದವು. ಬಸವಣ್ಣನವರು ಸಹ ದೈವಾಂಶವಾಗಿ ಹುಟ್ಟಿದವರು ಎಂಬ ದಂತಕತೆಗಳು ಸಮಾಜವನ್ನು ಆಳುತ್ತಿದ್ದವು. ಆನ ಸಾಮಾನ್ಯರ ನಡುವೆ ವಚನಗಳು , ಶರಣರ ಪರಿಚಯ ಹರಿದಾಡದ ದಿನಗಳವು. ಇಂಥ ಕಗ್ಗತ್ತಲ ನಾಡಿನಲ್ಲಿ ಬೆಳಕಾಗಿ ಮೂಡಿ ಬಂದವರು ಲಿಂಗೈಕ್ಯ ಲಿಂಗಾನಂದ ಅಪ್ಪಗಳು.

ದಾವಣಗೆರೆ ಮೂಲದ ರತ್ನಮ್ಮ ಲಿಂಗಾನಂದ ಮಹಾಸ್ವಾಮಿಗಳ ಅಸ್ಖಲಿತವಾದ ವಚನಗಳಿಗೆ ಬೆಕ್ಕಸ ಬೆರಗಾದವರು. ವಚನ ಸಾಹಿತ್ಯಕ್ಕೆ ಮಾರು ಹೋದ ಮಹಾದೇವಿಯವರು ತಿರುಗಿ ನೋಡಲಿಲ್ಲ. ಅಸಲಿ ಸತ್ಯ ಅರ್ಥವಾದ ಮೇಲೆ ಬದುಕು ದಾಂಗುಟಿ ಇಟ್ಟು ಬೆಳೆಯಿತು. ನೋಡ ನೋಡುತ್ತಿದ್ದಂತೆ ನಾಡಿನ ಉದ್ದಗಲಕ್ಕೂ ತಿರುಗಾಡಿದರು.

ಬಸವ ತತ್ವ ಪ್ರಸಾರ ಯಾತ್ರೆಗಳು, ಪ್ರವಚನಗಳು ನಡೆದವು. ಇವುಗಳ ನಡುವೆ ಹಲವಾರು ಕೃತಿಗಳು ಹೊರಬಂದವು. ಆಗ ನಾಡಿನಲ್ಲಿ ವಚನಕಾರರ ಕುರಿತು ಚಟುವಟಿಕೆಗಳು ಆರಂಭವಾದವು. ಅಲ್ಲಿಯವರೆಗೂ ಸ್ಥಬ್ಧವಾಗಿದ್ದ ಬಸವ ಸಮುದ್ರ ಎಲ್ಲೆಡೆ ವ್ಯಾಪಿಸಲು ಶುರುವಾಯಿತು. ಆರಂಭದ ದಿನಗಳಲ್ಲಿ ಲಿಂಗಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಪ್ರವಚನಕ್ಕೆ ಹೋದಾಗ ಅನುಭವಿಸಿದ ಯಾತನೆ, ಅವಮಾನ ಬಣ್ಣಿಸಲು ಸಾಧ್ಯವಿಲ್ಲ. ಹರ್ಡೆಕರ ಮಂಜಪ್ಪನಂಥವರನ್ನು ಅವಮಾನಿಸಿ ಅವರು ಹೋದ ಹೋದಲ್ಲೆಲ್ಲ ’ಸೂಳೆಯ ಮಗ ಬರುತ್ತಿದ್ದಾನೆ ಎಚ್ಚರಿಕೆ’ ಎಂಬ ಬ್ಯಾನರ್ ಕಟ್ಟಿದ ವಂಶಸ್ಥರು ಮಾತೆ ಮಹಾದೇವಿ ಹಾಗೂ ಲಿಂಗಾನಂದರಿಗೆ ಹಲವಾರು ಕಿರುಕುಳ ನೀಡಿದರು. ಕೂಡಲಸಂಗಮದಲ್ಲಿಯೇ ಪಂಚಾಚಾರ್ಯ ಜಗದ್ಗುರುಗಳು ಬೇಕಂತಲೆ ಶರಣ ಮೇಳದ ಸಂದರ್ಭದಲ್ಲಿ ಅಡ್ಡ ಪಲ್ಲಕ್ಕಿ ಮಹೋತ್ಸವವನ್ನು ಏರ್ಪಡಿಸಿದರು. ಆಗ ಶರಣ ಮೇಳಕ್ಕೆ ಬರುವವರಿಗೆ ಆದರದ ಸ್ವಾಗತ, ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂಬ ಬ್ಯಾನರ್ ಕಂಡು ಕೆಂಡಾಮಂಡಲವಾದವರು ಅದನ್ನು ಹರಿದು ಹಾಕಿದರು. ಕೆಲವರು ಬೇಕಂತಲೆ ಬಸವಣ್ಣನವರ ಭಾವ ಚಿತ್ರವನ್ನು ಕಾಲಲ್ಲಿ ಹೊಸಕಿ ಹಾಕಿ ಗದ್ದಲ ಎಬ್ಬಿಸಲು ಯತ್ನಿಸಿದರು. ಆಗಲೂ ಮಾತೆ ಮಹಾದೇವಿ ಲಿಂಗಾನಂದ ಮಹಾಸ್ವಾಮಿಗಳು ಆ ಬಗ್ಗೆ ದಿವ್ಯ ಮೌನ ತಾಳಿದರು. ಹೀನ ಕೆಲಸ ಮಾಡಿದ ಅವಿವೇಕಿಗಳು ಯಾರೆಂಬುದು ಜಗತ್ತಿಗೆ ಬರುಬರುತ್ತ ತಿಳಿಯಿತು.

ಛಲಬೇಕು ಶರಣಂಗೆ ಹಿಡಿದುದ ಬಿಡೆನೆಂಬ. ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ” ಎನ್ನುವಂತೆ ತಾವು ನಂಬಿದ ಸಿದ್ಧಾಂತ ಮತ್ತು ತತ್ವಗಳ ಸಾರವನ್ನು ಜನ ಸಾಮಾನ್ಯರಿಗೆ ತಲುಪಿಸಲು ಮುಂದೆ ಮುಂದೆ ನಡೆದೆ ಹೋದರು. ಜನ ಸಾಮಾನ್ಯನಿಗೆ ಅರ್ಥವಾಗುವಂತೆ ವಚನಗಳನ್ನು ಅರುಹಿದರು. ಲಿಂಗಾಯತ ಪ್ರಜ್ಞೆ ಮೂಡಿಸಲು ಅಹರ್ನಿಶಿ ಶ್ರಮಿಸಿದರು. ಕೂಡಲಸಂಗಮ , ಉಳವಿ, ಬಸವಕಲ್ಯಾಣದಲ್ಲಿ ಯಾರೂ ಮರೆಯದ ಸ್ಮಾರಕಗಳನ್ನು ನಿರ್ಮಿಸಿ ಇತಿಹಾಸ ನಿರ್ಮಿಸಿದರು.

ಸತತವಾಗಿ ಶರಣ ಮೇಳಗಳನ್ನು ಸಂಘಟಿಸಿ, ಕಲ್ಯಾಣ ಪರ್ವಗಳನ್ನು ನಡೆಸಿ ಹಲವಾರು ಅಡೆ ತಡೆಗಳನ್ನು ಗೆದ್ದು ಬಂದರು. ಬದುಕಿನಲ್ಲಿ ಬರುವ ಕಷ್ಟ ಸುಖಗಳನ್ನು ’ ಎನ್ನ ವಾಮ ಕ್ಷೇಮ ನಿಮ್ಮದಯ್ಯಾ, ಎನ್ನ ಹಾನಿ ವೃದ್ಧಿ ನಿಮ್ಮದಯ್ಯಾ, ಎನ್ನ ಮಾನಾಪಮಾನವೂ ನಿಮ್ಮದಯ್ಯ’ ಬಳ್ಳಿಗೆ ಕಾಯಿ ದಿಮ್ಮಿತ್ತೆ ಕೂಡಲಸಂಗಮದೇವಾ ಎಂಬ ಭಾವವನ್ನು ಇಂಬಿಟ್ಟುಕೊಂಡು ನಡೆದು ಹೋದರು. ಆನೆ ನಡೆದುದೆ ದಾರಿ ಆಯಿತು ಎಂದೆನ್ನುವಂತೆ ಮಾತಾಜಿ ನಡೆದುದೆ ದಾರಿಯಾಯಿತು. ಅದು ಬರು ಬರುತ ಸಕಲಜೀವಾತ್ಮರಿಗೆ ಲೇಸ ಬಯಸುವ ಮಾರ್ಗವೂ ಆಯಿತು.

ಲಿಂಗಾಯತರೊಳಗೆ ಸಾವಕಾಶವಾಗಿ ತಮಂಧ ಕಳೆದು ಬೆಳಕು ತುಂಬುವ ಹೊತ್ತಿಗೆ ಮಾತಾಜಿಯ ದೇಹ ಒಳಗೊಳಗೆ ಕುಸಿಯುತ್ತ ಸಾಗಿತು. ಆದರೆ ಅವರೊಳಗಿನ ಅದಮ್ಯ ಚೈತನ್ಯ ಮಾತ್ರ ಬತ್ತದ ಉತ್ಸಾಹ ಪ್ರಕಟಿಸುತ್ತಿತ್ತು. ಇದೆ ವರ್ಷದ ಜನೆವರೆ ತಿಂಗಳ ಶರಣ ಮೇಳದಲ್ಲಿ ಮಾತಾಜಿ ಭಾಗವಹಿಸುವುದು ಸಾಧ್ಯವಾಗಲಿಕ್ಕಿಲ್ಲ ಎನ್ನುವ ಹೊತ್ತಿಗೆ ಮತ್ತೆ ಮೇಳದಲ್ಲಿ ಕಾಣಿಸಿಕೊಂಡು ಎಲ್ಲರಲ್ಲಿ ಅಚ್ಚರಿ ಮತ್ತು ಆಶಾವಾದವನ್ನು ಹುಟ್ಟು ಹಾಕಿದರು.

ಕರ್ನಾಟಕದ ತುಂಬೆಲ್ಲ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಕಿನ್ನರಿಯ ಬೊಮ್ಮಯ್ಯ, ಮಡಿವಾಳ ಮಾಚಿತಂದೆ , ಅಕ್ಕನಾಗಮ್ಮ ಮುಂತಾದ ಶರಣ ಶರಣೆಯ ಭಾವ ಚಿತ್ರಗಳು ನಮಗೆ ನೋಡುವುದಕ್ಕೆ ಹಾಗೂ ಅವನ್ನು ನಮ್ಮ ಮನೆಗೆ ತರಲು ಸಾಧ್ಯವಾಗಿದ್ದರೆ ಅವುಗಳ ಹಿಂದೆ ಇವರಿಬ್ಬರ ಪರಿಶ್ರಮ , ಜಾಣ್ಮೆ ಹಾಗೂ ಕಕ್ಕುಲಾತಿಗಳಿವೆ. ಬೀದರ ಜಿಲ್ಲೆಯ ತುಂಬೆಲ್ಲ ಶರಣರ ಭಾವ ಚಿತ್ರಗಳು ರಾರಾಜಿಸುತ್ತಿದ್ದರೆ ಅದರ ಬೆನ್ನ ಹಿಂದೆ ಶಕ್ತಿಯಾಗಿ ಮಾತಾಜಿ ಇದ್ದಾರೆ.

ಬಹುಶಃ ಮಾತಾಜಿ ಬಸವ ತತ್ವವನ್ನು ಮರೆತು ಬರೀ ಕಾದಂಬರಿಗಳನ್ನು ಬರೆಯುತ್ತ ಕುಳಿತ್ತಿದ್ದರೆ ಅವರೊಬ್ಬ ದೊಡ್ಡ ವಿದ್ಮಾಸರಾಗಿ , ಸಾಹಿತಿಗಳಾಗಿ ಜನ ಗುರುತಿಸುತ್ತಿದ್ದರು. ಅವರು ಹಿಂದೆ ಬರೆದ ಹೆಪ್ಪಿಟ್ಟ ಹಾಲು ಎಂಬ ಕೃತಿ ಮನೋಜ್ಞವಾಗಿ ಮೂಡಿ ಬಂದಿದೆ. ಮನಶಾಸ್ತ್ರದ ಹಿನ್ನೆಲೆಯಲ್ಲಿ ರಚಿತವಾದ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿತು. ತರಂಗಿಣಿ ಎಂಬ ಅಕ್ಕಮಹಾದೇವಿಯ ಕುರಿತ ಕೃತಿ ಮಹಾಮಾತೆ ಅಕ್ಕಮಹಾದೇವಿ ತಾಯಿಯ ಜೀವನ ವೃತ್ತಾಂತವನ್ನು ನಮ್ಮ ಕಣ್ಣ ಮುಂದೆ ಕಟೆದು ನಿಲ್ಲಿಸಿತು. ಇದಲ್ಲದೆ ಕಲ್ಯಾಣ ಕಿರಣದಲ್ಲಿ ಸತತವಾಗಿ ವಚನಗಳ ಬೆಳಕು ಬಹುತೇಕ ಜನಗಳ ಬಾಳ ಬುತ್ತಿಯಾಗಿ ಬೆಳಗಿಸಿದ್ದಾರೆ.

ಅವರ ’ಲಿಂಗದೇವ ಲೀಲಾ ವಿಲಾಸ’ ಎಂಬ ಕೃತಿ ಮಾತ್ರ ಎಲ್ಲರ ಟೀಕೆ ಟಿಪ್ಪಣಿಗಳಿಗೆ ಗುರಿಯಾದದ್ದು ನಮ್ಮೆಲ್ಲರ ಕಣ್ಣ ಮುಂದಿನ ಸತ್ಯವಾಗಿದೆ. ಇವೆಲ್ಲವುಗಳ ನಡೆವೆಯೂ ಮಾತೆ ಮಹಾದೇವಿ ತತ್ವದ ಪ್ರಶ್ನೆ ಬಂದಾಗ ಯಾರೊಂದಿಗೂ ಮೈತ್ರಿ ಮಾಡಿಕೊಂಡು ತತ್ವವನ್ನು ಬಲಿಕೊಡಲಿಲ್ಲ. ಒಳ ಸಂಚುಗಳನ್ನು ರೂಪಿಸಿ ಶರಣರ ಆಶಯಗಳಿಗೆ ಕೊಡಲಿಪೆಟ್ಟು ಕೊಡಲಿಲ್ಲ. ತಮ್ಮ ಬದುಕಿನುದ್ದಕ್ಕೂ ಬಸವಣ್ಣನವರನ್ನು ಹಾಸಿಕೊಂಡು ಹೊದ್ದುಕೊಂಡು ಬಸವ ಭಾವವನ್ನು ಹೊತ್ತು ಮುನ್ನಡೆದು ಬಿಟ್ಟರು.ನೂರಾರು ಜನ ಅನಾಥ ಮಕ್ಕಳನ್ನು ಸಾಕಿ ಸಲಹಿ ಅವರಲ್ಲಿ ವಿವೇಕವನ್ನು ತುಂಬಿ ಸಮಾಜಕ್ಕೆ ಅವರೆಲ್ಲರನ್ನು ಆಸ್ತಿಯಾಗಿ ಮಾಡಿದರು. ಇಂದಿನ ನಿಷ್ಕಲ ಮಂಟಪದ ನಿಜಗುಣ ಸ್ವಾಮಿಗಳು, ಮಾತೆ ವಾಗ್ದೇವಿ , ಕುಮುದಾ ತಾಯಿ,ಅಕ್ಕ ಅನ್ನಪೂರ್ಣ, ಚೆನ್ನಬಸವಾನಂದ ಸ್ವಾಮೀಜಿ, ಬಸವಕಲ್ಯಾಣದ ಪ್ರಭುದೇವ ಸ್ವಾಮಿ, ಮಾತೆ ಸತ್ಯಾನಂದ ತಾಯಿ, ವಿ.ಸಿದ್ಧರಾಮಣ್ಣ, ಜಗದ್ಗುರು ಡಾ. ಗಂಗಾಂಬಿಕೆ ಮೊದಲಾದವರೆಲ್ಲ ಲಿಂಗೈಕ್ಯ ಲಿಂಗಾನಂದ ಅಪ್ಪಗಳ ಬಸವಾನುಭವ ತತ್ವಗಳಲ್ಲಿ ಪರಿಪಾಕಗೊಂಡವರು. ಇವರೆಲ್ಲ ಈಗ ಸಾವಿರ ಸಾವಿರ ಸಂಖ್ಯೆಯ ಬಸವ ಬಳ್ಳಿಗಳನ್ನು ಸಿದ್ಧಗೊಳಿಸಿದ್ದಾರೆ. ನೂರಾರು ಜನ ಸಾಧಕರು ತಯಾರಾಗಿದ್ದಾರೆ.

ಅಪ್ಪಿದೇವಯ್ಯ ಎಂಬ ಶರಣನೊಬ್ಬ ಒಂದು ಕಡೆ

“ರೋಷ ಹರುಷವ ಕೆಡಿಸದ ಲಿಂಗವ ಪೂಜಿಸೆ,

ತಾಮಸ ಭ್ರಮೆಯಳಿಯದ ಜಂಗಮಕ್ಕೆ ದಾಸೋಹವ ಮಾಡೆ”

ಎಂಬಂತೆ ಮಾತಾಜಿಯವರ ಕುರಿತಾಗಿ ಸಾಕಷ್ಟು ಟೀಕೆ ಟಿಪ್ಪಣಿಗಳು ಬರೆದ ನನ್ನನ್ನೆ ಮತ್ತೆ ಮತ್ತೆ ಕೂಡಲಸಂಗಮದ ’ಶರಣ ಮೇಳಕ್ಕೆ’ , ಬಸವ ಕಲ್ಯಾಣದ ’ಕಲ್ಯಾಣ ಪರ್ವ’ಕ್ಕೆ , ದೆಹಲಿಯ ’ಲಿಂಗಾಯತ ರ್‍ಯಾಲಿ’ಗೆ ಆಹ್ವಾನಿಸಿದರು. ತಮ್ಮ ಕಲ್ಯಾಣ ಕಿರಣ ಪತ್ರಿಕೆಗೆ ಲೇಖನವನ್ನು ಬರೆಯುವಂತೆ ತಿಳಿಸಿದರು. ಆಗಾಗ ಲಿಂಗಾಯತ ಧರ್ಮದ ಹೋರಾಟದ ಕುರಿತು ಬರೆದ ನನ್ನ ಗಟ್ಟಿ ನಿಲುವುಗಳನ್ನು ಬೆಂಬಲಿಸಿ ಮಾತನಾಡಿದರು. ಈ ಹಿಂದೆ ’ಲಂಕೇಶ್ ಪತ್ರಿಕೆ’ ಮತ್ತು ’ಪ್ರಪಂಚ’ ಹಾಗೂ ’ಅಗ್ನಿ ಅಂಕುರ’ ಪತ್ರಿಕೆಯಲ್ಲಿ ಅವರನ್ನು ಕುರಿತು ಮೂದಲಿಸಿ ಬರೆಯಲಾಗಿಯೂ ನಮ್ಮನ್ನು ನಿರ್ಲಕ್ಷಿಸಿ ಮಾತನಾಡದಿರುವುದು ಅವರ ಔದಾರ್ಯವಲ್ಲದೆ ಇನ್ನೇನು ?ಮೂರು ವರ್ಷಗಳ ಹಿಂದೆ ನಾನು ಭಾಗವಹಿಸಿದ ಪ್ರಥಮ ’ಶರಣ ಮೇಳ’ದಲ್ಲಿ ಮಾತೆ ಮಹಾದೇವಿಯವರ ಲಿಂಗದೇವವನ್ನು ನಾನು ಒಪ್ಪಲಾರೆ ಎಂದಾಗಲೂ ಅದಕ್ಕೆ ಚಕಾರ ಶಬ್ಧವೆತ್ತದಿರುವುದು ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರು ಎಂಬುದು ಗೊತ್ತಾಗುತ್ತದೆ.

ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು

ತೆರನನರಿಯದೆ ತನಿರಸದ

ಹೊರಣ ಎಲೆಯನೆ ಮೆಲಿದವು!

ನಿಮ್ಮನರಿವ ಮದಕರಿಯಲ್ಲದೆ

ಕುರಿ ಬಲ್ಲುದೆ ಕೂಡಲ ಸಂಗಮದೇವಾ

ಎಂಬ ವಚನದಂತೆ ಕುರಿವಿಂಡಾಗಿ ವಚನ ಸಾಹಿತ್ಯವನ್ನು ಓದಲಿಲ್ಲ. ಮದಕರಿಯಂತೆ ವಚನ ಸಾಹಿತ್ಯವೆಂಬ ತೋಟವನ್ನು ಹೊಕ್ಕು ಅಲ್ಲಿಯ ತನಿರಸವನ್ನು ತಾವೊಬ್ಬರೆ ಸವಿಯದೆ, ಅದರ ಸವಿ- ಸೊಗಬು- ಬನಿ ಅರಿತುಕೊಂಡು ಸಹಸ್ರಾರು ಜನರಿಗೆ ಉಣಬಡಿಸಿ ಆನೆಯಂತೆಯೆ ನಡೆದು ಹೋದರು. ಸತ್ಯದ ನಿಲವ ಅರಿತು ಮನ ಮೆಚ್ಚಿ ನಡಕೊಂಡರು.

ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಒಂದು ವಿಶ್ವವಿದ್ಯಾಲಯ ಮಾಡಿದಷ್ಟು ಕೆಲಸವನ್ನು ಮಾಡಬಹುದು ಎಂಬುದನ್ನು ನಮಗೆ ತೋರಿಸಿ ಕೊಟ್ಟರು. ಬಸವಮಾರ್ಗವೆಂಬುದೊಂದು ಹೆದ್ದಾರಿ. ಈ ದಾರಿಯಲ್ಲಿ ಯಾರಾದರೂ ಹೋಗಬಹುದು. ಬಸವರಾಜಮಾರ್ಗವೆಂಬ ಹೆದ್ದಾರಿಗೆ ಅಡರಿಕೊಂಡ ಬಾವುಗಗಳು ಯಾವು ? ಎಂಬುದನ್ನು ಜನ ಸಾಮಾನ್ಯರಿಗೆ ಪರಿಚಯಿಸಿ ನಮ್ಮೊಳಗೆ ಒಬ್ಬರಾಗಿ ಕರಗಿ ಹೋದರು. ಉರಿ ಉಂಡ ಕರ್ಪುರದ ಸವಿ ಬಲ್ಲವನೆ ಬಲ್ಲ. ’ಎಮ್ಮವರಿಗೆ ಸಾವಿಲ್ಲ. ಎಮ್ಮವರು ಸಾವನರಿಯರು.

ಸಾವೆಂಬುದು ಸಯವಲ್ಲ.

ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ

ಆ ಲಿಂಗದಲ್ಲಿಯಲ್ಲದೆ ಮತ್ತೊಂದೆಡೆಯಿಲ್ಲ.

ಎಂಬಂತೆ ಜೀವನ ಪಥವನ್ನು ಸರಿಯಾಗಿ ಗ್ರಹಿಸಿದ್ದ ಮಾತೆ ಮಹಾದೇವಿ ಅರಿತು ಸಾವನ್ನು ಗೆದ್ದಿದ್ದಾರೆ. ಸಹಸ್ರಾರು ಭಾವಗಳಲ್ಲಿ ಜೀವವಾಗಿ ಸೇರಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...