ಸರೋವರ್ ಬೆಂಕಿಕೆರೆ |
ರೈತರ ಹೋರಾಟವು ಎಲ್ಲರ ಗಮನ ಸೆಳೆಯಿತು. ಅದಕ್ಕಾಗಿ ದೆಹಲಿಗೆ ಹೋಗಿದ್ದ ನಮಗೆ ಅದೇ ಜಂತರ್‌ಮಂತರ್‌ನಲ್ಲಿ ಇನ್ನೊಂದು ಹೋರಾಟವು ಗಮನ ಸೆಳೆಯಿತು. ಸರ್ಕಾರಗಳ ಕಣ್ಣು ಕಾಣಿಸದೇ ಇರಬಹುದು, ಅವರುಗಳ ಕಿವಿ ಕೇಳಿಸದೇ ಇರಬಹುದು. ಆದರೆ ಆಳದಲ್ಲಿ ಪ್ರಜ್ಞೆಯನ್ನು ಜಾಗೃತವಾಗಿರಿಸಿಕೊಂಡ ನಾಗರಿಕರು ಅವರ ಕಣ್ಣು, ಕಿವಿಗಳು ಊನವಾಗಿದ್ದರೂ, ಸಮಾಜವನ್ನು ಎಚ್ಚರಿಸುತ್ತಲೇ ಇರುತ್ತಾರೆ. ದೆಹಲಿಯ ರೈತ ಹೋರಾಟ ನಡೆದ ೨ ದಿನಗಳ ಬಳಿಕ ನಮಗೆ ಅಲ್ಲಿ ಕಂಡ ಸಂಗತಿಯಿದು. ಡಿ. 3ರಂದು ನೂರಾರು ಅಂಗವಿಕಲರು ಸಂಘಟಿತರಾಗಿ ಒಂದು ಪ್ರತಿಭಟನೆಯನ್ನು ನಡೆಸಿದರು. ಅವರಲ್ಲಿ ಅಂಧರೇ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿದ್ದರು.
ಹೆಣ್ಣುಮಕ್ಕಳು ಬಳಸುವ ನ್ಯಾಪ್ಕಿನ್ ಮೇಲೆ ಹೆಚ್ಚಿನ ಜಿಎಸ್‌ಟಿ ತೆರಿಗೆ ವಿಧಿಸಿ ದೇಶದಾದ್ಯಂತ ಪ್ರತಿರೋಧದ ಬಂದ ನಂತರದಲ್ಲಿ ಸ್ವಲ್ಪ ಮಟ್ಟಿಗೆ ತೆರಿಗೆ ಇಳಿಸಿದ್ದು ನಮಗೆ ಗೊತ್ತಿತ್ತು. ಆದರೆ ಅದೇ ಸರ್ಕಾರವು ಸಾವಿರಾರು ಕೋಟಿ ರೂಗಳನ್ನು ಕೊಳ್ಳೆ ಹೊಡೆದು ದೇಶ ಬಿಟ್ಟಂತ ದರೋಡೆಕೋರರು, ತೆರಿಗೆ ಪಾವತಿಸದೆ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ತಿಂದು ತೇಗುತ್ತಿರುವ ಬಂಡವಾಳಶಾಹಿಗಳಿಗೆ ಬೆನ್ನೆಲುಬಾಗಿ ನಿಂತಿರುವುದೂ ಗೊತ್ತಿತ್ತು. ಆದರೆ, ಈ ಪ್ರತಿಭಟನೆಯಿಂದ ನಮಗೆ ಇನ್ನೊಂದು ಸಂಗತಿಯೂ ಗೊತ್ತಾಯಿತು. ಮಾನ ಮರ್ಯಾದೆಯಿಲ್ಲದ, ಪಂಚೇಂದ್ರಿಯಗಳಿಲ್ಲದ ಕೇಂದ್ರ ಸರ್ಕಾರವು ಅಂಗವಿಕಲರು ಬಳಸುವ ಉಪಕರಣಗಳ ಮೇಲೆ ತೆರಿಗೆ ಹೆಚ್ಚಿಸಿ 25% ಜಿಎಸ್‌ಟಿಅನ್ನು ವಿಧಿಸಿದೆ! ಅದೇ ಕಾರಣಕ್ಕೆ ಅವರು ಅಲ್ಲಿ ಸೇರಿದ್ದರು.
ಯುಪಿಎ ಆಡಳಿತದ ಸಂದರ್ಭದಿಂದ ಶುರುವಾದ ಜಾಬ್‌ಲೆಸ್ ಗ್ರೋಥ್‌ನಿಂದ ಜಾಬ್ ಲಾಸ್‌ಗ್ರೋಥ್‌ನತ್ತ ಭಾರತವು ಮುಖ ಮಾಡಿದೆ. ಈ ನಕಾರಾತ್ಮಕ ಬೆಳವಣಿಗೆಗೆ ಬಿಜೆಪಿ ಆಡಳಿತವೇ ಕಾರಣವೆಂಬುದು ನಮಗೆ ಗೊತ್ತಿತ್ತು. ನಿರುದ್ಯೋಗದ ವಿರುದ್ಧದ ಆಂದೋಲನದಲ್ಲಿ ತೊಡಗಿದ್ದ ನಮಗೆ ಅದರ ಒಳಹೊರಗುಗಳ ಅರಿವಿದೆ. ಆದರೆ ಈ ಅವಧಿಯಲ್ಲಿ ಎರಡು ವಿಶೇಷ ಸಮುದಾಯಗಳ ಕುರಿತು ನಮಗೆ ದೆಹಲಿಯಲ್ಲಿ ಅರಿವಿಗೆ ಬಂದಿತು. ನಿರುದ್ಯೋಗದ ಸಮಸ್ಯೆಯು ಓದಿಕೊಂಡಿರುವ ಸುಶಿಕ್ಷಿತ ಸಮುದಾಯದ ಜೊತೆಗೆ, ಹಳ್ಳಿಯಲ್ಲೇ ಉಳಿಯಬಯಸುವ ಯುವಜನರದ್ದೂ ಆಗಿರುವುದು ಎಲ್ಲರಿಗೂ ತಿಳಿದಿದೆ; ಉದ್ಯೋಗ ಹುಡುಕಿಕೊಳ್ಳಲು ಸಾಧ್ಯವಾಗದೇ ಸೆಕ್ಸ್‌ವರ್ಕ್ ಮತ್ತು ಭಿಕ್ಷಾಟನೆಗಿಳಿದಿರುವ ಹಿಜ್ರಾ ಸಮುದಾಯದ ಕಥೆ ಏನಾಗಿರಬಹುದು? ಹಾಗೆಯೇ ವಿಕಲಚೇತನರದ್ದು?
ಎಲ್ಲರಿಗೂ ಖುಷಿಯಿಂದ ಆಚರಣೆ ಮಾಡಲು ಒಂದು ದಿನವಿರುವಂತೆ (ಡಿ.3ರಂದು) ಯಾವುದೋ ಒಂದು ಕಾರ್ಯಕ್ರಮದಲ್ಲಿ ಅಂಗವಿಕಲರ ದಿನವನ್ನು ಸಂತಸದಿಂದ ಆಚರಣೆ ಮಾಡಬೇಕಿದ್ದವರು ಅಂದು ಪ್ರತಿಭಟನೆಗೆ ಧುಮುಕಿದ್ದರು. ದೆಹಲಿಯಲ್ಲಿ ಸಂಘಟಿತರಾಗಿದ್ದ ಅವರು ನೋವುಗಳನ್ನು ಅದುಮಿಟ್ಟುಕೊಂಡು ರೋಷಾವೇಶದಿಂದ ಕುದಿಯುತ್ತಿದ್ದರು. ನಮಗೆ ನಿಮ್ಮ ಕರುಣೆ ಬೇಡ, ಸ್ವಾವಲಂಬಿಯಾಗಿ ಘನತೆಯಿಂದ ನಾವು ಜೀವಿಸಲು ನಮ್ಮ ಕೈಗೆ ಉದ್ಯೋಗ ಕೊಡಿ, ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿ ಎಂದು ತಮ್ಮ ಹಕ್ಕುಗಳನ್ನು ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದರು. ಅಲ್ಲದೆ ಅಂಗವಿಕಲರ ಉಪಕರಣಗಳ ಮೇಲೆ ಹೆಚ್ಚಿಸಿರುವ ಜಿಎಸ್‌ಟಿ ತೆರಿಗೆಯನ್ನು ಕಡಿಮೆ ಮಾಡಿ ಎನ್ನುವುದು ಅವರ ಹಕ್ಕೊತ್ತಾಯವಾಗಿತ್ತು. ದೇಶದ ದೊಡ್ಡ ಸುದ್ದಿಯಾಗಬೇಕಿದ್ದ ಈ ಹೋರಾಟವು ದುರದೃಷ್ಟವಶಾತ್ ಬಿಜೆಪಿಯ ಕೈಗೊಂಬೆಯಾಗಿರುವ ಮಾಧ್ಯಮಗಳು ಜನರ ಜೀವನಕ್ಕೆ ಸಂಬಂಧವೇ ಇಲ್ಲದ ಯಾರ ಹೊಟ್ಟೆಯನ್ನು ತುಂಬಿಸದ ರಾಮಮಂದಿರ, ಕೋಮು ದ್ವೇಷದಂತಹ ವಿಚಾರಗಳು ಮತ್ತು ಸೆಲಬ್ರಿಟಿಗಳ ಮದುವೆಯಿಂದ ಹಿಡಿದು ಬಸುರಿ ಬಾಣಂತನದವರೆಗಿನ ಸುದ್ದಿಗಳಲ್ಲಿ ಮುಳುಗಿವೆ. ಕರ್ನಾಟಕದಿಂದ ದೆಹಲಿಯವರೆಗೆ ಇದೇ ಕಥೆ. ಒಂದು ಸಮಧಾನದ ವಿಚಾರವೆಂದರೆ, ನೋವುಣ್ಣುತ್ತಿರುವ ಸಮುದಾಯಗಳು ಸುಮ್ಮನೇ ಕೂತಿಲ್ಲ; ಬೀದಿಗಿಳಿಯುತ್ತಿವೆ.


