Homeರಾಜಕೀಯಹತಾಶ ಸಂಘ ಪರಿವಾರದಿಂದ ಕೋಮು ಧ್ರುವೀಕರಣಕ್ಕೆ ಷಡ್ಯಂತ್ರ

ಹತಾಶ ಸಂಘ ಪರಿವಾರದಿಂದ ಕೋಮು ಧ್ರುವೀಕರಣಕ್ಕೆ ಷಡ್ಯಂತ್ರ

- Advertisement -
- Advertisement -

ಪಿ.ಕೆ. |

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶೀಘ್ರ ಶುರುವಾಗಬೇಕು’……

ಇದೊಂದು ವ್ಯವಸ್ಥಿತ ಸಂಚು, ಮತಬೇಟೆಯ ಷಡ್ಯಂತ್ರ. ಮೇಲುನೋಟಕ್ಕೆ ಎಲ್ಲ ಬಿಡಿ ಬಿಡಿ ಘಟನೆ, ಬಿಡಿ ಬಿಡಿ ಹೇಳಿಕೆಗಳು ಎನಿಸುತ್ತವೆ. ಆದರೆ ನಾಗಪುರದ ಆರೆಸ್ಸೆಸ್ ಕಚೇರಿಯಲ್ಲಿ ಸ್ಕ್ರಿಪ್ಟ್ ಮೊದಲೇ ಸಿದ್ಧವಾಗಿದೆ.

ಈ ಎಲ್ಲದರ ಅಂತಿಮ ಗುರಿ: ಏನೇನೂ ಜನಪರ ಕೆಲಸ ಮಾಡದ, ಅದೂಅಲ್ಲದೇ ಮೂರ್ಖ, ಮುಠ್ಠಾಳತನದ ನಿರ್ಧಾರಗಳಿಂದ ದೇಶದ ಅರ್ಥವ್ಯವಸ್ಥೆಯನ್ನೇ ಶಿಥಿಲಗೊಳಿಸಿರುವ ಮೋದಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದು. ಅದಕ್ಕಿಂತ ಮುಖ್ಯವಾಗಿ, ಈ ನಾಲ್ಕೂವರೆ ವರ್ಷಗಳಲ್ಲಿ ಹುಟ್ಟಿಸಿರುವ ಅಸಹನೆಯ, ಕ್ರೌರ್ಯದ ವಾತಾವರಣವನ್ನು ಶಾಶ್ವತವಾಗಿ ನಿರ್ಮಿಸುವುದು, ಈಗ ಶಿಥಿಲಗೊಳಿಸಲ್ಪಟ್ಟಿರುವ ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ನಾಮ ಮಾಡುವುದು. ಆ ಮೂಲಕ ಸಂವಿಧಾನವನ್ನೇ ನಗಣ್ಯವಾಗಿಸಿ, ಚುನಾವಣೆಗಳನ್ನು ಪ್ರಹಸನಗಳನ್ನಾಗಿ ಪರಿವರ್ತಿಸಿ, ಒಂದು ಅರಾಜಕ ಸ್ಥಿತಿ ನಿರ್ಮಾಣ ಮಾಡುವುದು. ಅವರ ಮಟ್ಟಿಗೆ ಅದು ‘ಹಿಂದೂ ರಾಷ್ಟ್ರ’….ಅಲ್ಲಿಗೆ ಭಾರತ ದೇಶವು ಪಾಕಿಸ್ತಾನದ ಮಾದರಿಯಲ್ಲಿ ಸಾಗುವುದಂತೂ ಖಂಡಿತ.

ಆದರೆ, ಇದು ಅಷ್ಟು ಸುಲಭವಲ್ಲೆಂಬುದು ಮೋದಿ, ಶಾಗಳು ಸೇರಿದಂತೆ ಇಡೀ ಸಂಘಪರಿವಾರಕ್ಕೆ ಮನವರಿಕೆಯಾಗಿದೆ. ದೇಶದ ರೈತರು, ಕಾರ್ಮಿಕರು, ಯುವಕರು ಸ್ಪಷ್ಟವಾಗಿಯೇ ತಮ್ಮ ಖಚಿತ ವಿರೋಧಗಳನ್ನು ದಾಖಲಿಸುತ್ತಿದ್ದಾರೆ. ಇದು ಸಂಘದ ಮುಂದಿರುವ ಸವಾಲು.

ಜನರ ಬಳಿ ಹೇಳಿಕೊಳ್ಳಲು ಯಾವ ಸಾಧನೆಯೂ ಇಲ್ಲ, ಮಣ್ಣಾಂಗಟ್ಟಿಯೂ ಇಲ್ಲ. ನಾಕೂವರೆ ವರ್ಷ ‘ಇಮೇಜ್’ ಕಾಪಾಡಲು ಹೆಣಗಿದ ಮಾಧ್ಯಮಗಳು ಸುಸ್ತಾಗಿವೆ, ವಿಶ್ವಾಸ ಕಳೆದುಕೊಳ್ಳುತ್ತಿವೆ. ಸುಳ್ಳು ಸುದ್ದಿಗಳನ್ನು ಹರಡುತ್ತ ಬಂದವರಿಗೇ ನಾಚಿಕೆಯಾಗಿದೆ.

ಸಂಘ ಪರಿವಾರದ ಒಳಗಡೆ ಹತಾಶೆ ಗಿಜಿಗಿಟ್ಟಿ ತುಳುಕಾಡುತ್ತಿದೆ. 2019ರ ಚುನಾವಣೆ ಸುಲಭವಲ್ಲ ಎಂಬುದು ಅದಕ್ಕೆ ಪಕ್ಕಾ ಆಗಿದೆ. ಅದಕ್ಕಾಗಿ ಅದು ಭಿನ್ನ ವೇದಿಕೆಗಳಿಂದ ಭಿನ್ನ ಸ್ತರಗಳಲ್ಲಿ ‘ಶೀಘ್ರವೇ ರಾಮ ಮಂದಿರ ನಿರ್ಮಾಣ ಆಗಬೇಕು’ ಎಂದು ಹುಯಿಲು ಎಬ್ಬಿಸಲು ಯತ್ನಿಸುತ್ತಿದೆ. ನಾಲ್ಕೂವರೆ ವರ್ಷದ ನಂತರ ಅದಕ್ಕೆ ದಿಢೀರ್ ಶ್ರೀರಾಮ ನೆನಪಾಗಿದ್ದಾನೆ.

ಖಂಡಿತ, ಅದರ ಗುರಿ ರಾಮಮಂದಿರ ನಿರ್ಮಾಣ ಅಲ್ಲವೇ ಅಲ್ಲ, ಶ್ರೀರಾಮನ ಅಪ್ಪನಾಣೆಗೂ ಅದಕ್ಕೆ ರಾಮ ಮಂದಿರ ನಿರ್ಮಾಣ ಮುಖ್ಯವೇ ಅಲ್ಲ. ರಾಮನ ಹೆಸರಲ್ಲಿ ಸಮಾಜದಲ್ಲಿ ಬಿರುಕು ಮೂಡಿಸಬೇಕು, ನಂತರ ಸಣ್ಣಪುಟ್ಟ ಗಲಾಟೆಗಳು ನಡೆಯಬೇಕು. ಮುಸ್ಲಿಮರನ್ನು ಮಂಇರ ವಿರೋಧಿಗಳು ಎಂದು ಬಿಂಬಿಸಬೇಕು, ಇದಕ್ಕೆ ವಿಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡಬೇಕು…… ಇದನ್ನೇ ಮುಂದಿಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಗಲಭೆ, ಹಿಂಸಾಚಾರ ಎಬ್ಬಿಸುವುದು ಅದರ ಮೊಡರೆಸ್ ಅಪರೆಂಡಿ-ಕಾರ್ಯವಿಧಾನ…ಹೆಣಗಳು ಬೀಳಬೇಕು, ಮುಸ್ಲಿಮರದು, ಹಿಂದೂಗಳದು….ಒಟ್ಟು ಹೆಣಗಳು ಬೀಳಬೇಕು, ರಕ್ತಪಾತವಾಗಬೇಕು…’ಹಿಂದೂಗಳು ಅಪಾಯದಲ್ಲಿ’ ಎಂದೆಲ್ಲ ಹುಯಿಲೆಬ್ಬಿಸಿ ಹಿಂದೂ-ಮುಸ್ಲಿಂ ಧ್ರುವೀಕರಣ ನಡೆಯಬೇಕು, ೨೦೧೯ರ ಚುನಾವಣೆ ಇದರ ಆಧಾರದ ಮೇಲೇ ನಡೆದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು…..
* * * *

ಡಿಸೆಂಬರ್ 2ರಂದು ಬೆಂಗಳೂರಿನಲ್ಲಿ ನಡೆದ ‘ರಾಮ ಮಂದಿರಕ್ಕಾಗಿ ಜನಾಗ್ರಹ’ ಸಭೆಯಲ್ಲಿ ಪೇಜಾವರ ಶ್ರೀಗಳು ಮಾತಾಡಿ, ‘ರಾಮಮಂದಿರಕ್ಕಾಗಿ ಮುಸ್ಲಿಮರು ಮತ್ತು ಕ್ರೈಸ್ತರು ಕೈ ಜೋಡಿಸಬೇಕು’ ಎಂದು ಫರ್ಮಾನು ಹೊರಿಸಿದ್ದಾರೆ. ಮುಂದುವರೆದು, ‘ಹಿಂದೂ-ಮುಸ್ಲಿಂ ಸೌಹಾರ್ದತೆ ಕಾಪಾಡಲು ಮುಸ್ಲಿಮರಿಗೆ ಇದೊಂದು ಒಳ್ಳೆಯ ಅವಕಾಶ’ ಎನ್ನುತ್ತಾರೆ. ಕೇಳಲಿಕ್ಕೆ ಹಿತ ಎನಿಸಬಹುದಾದ ಈ ಮಾತಿನ ಹಿಂದೆ ಸಂಘದ ಅಜೆಂಡಾ ಇದೆ. ಅಂದರೆ ಈ ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದತೆ ಕೆಡಲು ಮುಸ್ಲಿಮರ ತಪ್ಪುಗಳೇ ಕಾರಣ ಎಂದು ಸುಳ್ಳು ಆರೋಪವನ್ನು ಮುಸ್ಲಿಮರ ತಲೆಗೆ ಕಟ್ಟುವ ಹುನ್ನಾರ ಮತ್ತೆ ಪ್ರವರ್ಧಮಾನಕ್ಕೆ ಬಂದಿದೆ. 1992, 2002 ರ ಹಿಂಸಾಚಾರಗಳಿಗೂ ಮೊದಲು ಇದೇ ರೀತಿ ವ್ಯವಸ್ಥಿತ ಅಪಪ್ರಚಾರ ಮಾಡಲಾಗಿತ್ತು ಎಂಬುದನ್ನು ಮರೆಯದಿರೋಣ.

ಬರುವ ತಿಂಗಳು ಸುಪ್ರಿಂ ಕೋರ್ಟ್ ವಿಚಾರಣೆಯ ಸ್ವರೂಪವನ್ನು ನಿರ್ಧರಿಸುವುದು ಗೊತ್ತಿದ್ದೂ ಪೇಜಾವರಶ್ರೀಗಳು ಸುಗ್ರೀವಾಜ್ಞೆಗೆ ಆಗ್ರಹಿಸುವುದರ ಹಿಂದೆ ಮಸಲತ್ತಿದೆ. ನಿರ್ಣಾಯಕ ಘಟ್ಟಗಳಲ್ಲಿ ಇಂತಹ ಪಾತ್ರ ನಿರ್ವಹಿಸುತ್ತಲೇ ಬಂದಿರುವ ಅವರು ಈಗ ತಮ್ಮ ಪಾತ್ರದ ಅಂತಿಮ ದೃಶ್ಯಕ್ಕೆ ರೆಡಿಯಾದಂತಿದೆ.

ಇದೇ ಹೊತ್ತಲ್ಲಿ, ಅಖಿಲ ಭಾರತ್ ಅಖಾಡ ಪರಿಷತ್ ಎನ್ನುವ ಸಾಧು ಸಂತರ ಗುಂಪು ಮುಸ್ಲಿಮರ ಜೊತೆ ಮಾತುಕತೆ ನಡೆಸುವ ಮೂಲಕ ಮಂದಿರ ಕಟ್ಟುತ್ತೇವೆ ಎನ್ನುತ್ತದೆ. ಮುಖ್ಯವಾಹಿನಿ ಮಾಧ್ಯಮಗಳು, ‘ಹಿಂದೂತ್ವ ಗುಂಪುಗಳಲ್ಲಿ ಭಿನ್ನಮತ’ ಎಂದು ಬರೆದು, ಮತ್ತದೇ ಹಿಂದಿನ ತಪ್ಪನ್ನು (ಬೇಕೆಂತಲೇ) ಮಾಡಿವೆ. ಈ ಅಖಾಡದ ಉದ್ದೇಶವೂ ಮುಸ್ಲಿಮರನ್ನು ಬಲಿಪಶು ಮಾಡುವುದೇ ಆಗಿದೆ ಮತ್ತು ಇದು ಆರ್‌ಎಸ್‌ಎಸ್ ಸ್ಕ್ರಿಪ್ಟ್‌ನ ಭಾಗವೇ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ.

ವಿವಾದಿತ ಪ್ರದೇಶ ತನ್ನ ಆಸ್ತಿ ಎಂದು ಭ್ರಮಿಸಿರುವ ವಿಎಚ್‌ಪಿ, ಆ ಜಾಗವನ್ನು ತನ್ನ ಸುಪರ್ದಿಗೆ ಒಪ್ಪಿಸಿ ಮಂದಿರ ನಿರ್ಮಾಣ ಆರಂಭಿಸಲು ಅನುವು ಮಾಡಿ ಕೊಡಬೇಕು ಎನ್ನುತ್ತಿದೆ. ಕೇಂದ್ರ ಸಚಿವ ಗಿರಿರಾಜ್‌ಸಿಂಗ್ ಮಂದಿರ ನಿರ್ಮಾಣಕ್ಕೆ ಅವಕಾಶ ಸಿಗದಿದ್ದರೆ ಅನಾಹುತಗಳು ಸಂಭವಿಸಲಿವೆ ಎಂದು ಎಚ್ಚರಿಸಿದ್ದಾನೆ. ರಾಜ್ಯಸಭಾ ಸದಸ್ಯ ಮತ್ತು ಆರ್‌ಎಸ್‌ಎಸ್ ಸಿದ್ದಾಂತಿ ರಾಕೇಶ್ ಶರ್ಮಾ ಚಳಿಗಾಲ ಅಧಿವೇಶನದಲ್ಲಿ ಮಂದಿರಕ್ಕಾಗಿ ಖಾಸಗಿ ಮಸೂದೆ ಮಂಡಿಸುತ್ತಾನಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ಆತ, ‘ನೀವು ಮಂದಿರದ ಪರವೋ, ವಿರೋಧವೋ’ ಎಂಬುದನ್ನು ಹೇಳಬೇಕು ಎಂದು ರಾಹುಲ್ ಗಾಂಧಿ, ಸೀತಾರಾಮ್ ಯೆಚೂರಿ, ಮಾಯಾವತಿ ಮುಂತಾದ ವಿಪಕ್ಷ ನಾಯಕರನ್ನು ಆಗ್ರಹಿಸಿದ್ದಾನೆ. ಮಂದಿರ ನಿರ್ಮಾಣಕ್ಕೆ ವಿಪಕ್ಷಗಳೇ ಮುಖ್ಯವಾಗಿ ಕಾಂಗ್ರೆಸ್ಸೇ ಅಡ್ಡಿ ಎಂಬ ಭಾವ ಸೃಷ್ಟಿಸುವ ಭಾಗವಾಗಿ ಈ ‘ಮಸೂದೆ’ ಡ್ರಾಮಾ ತಯ್ಯಾರಿ ನಡೆಯುತ್ತಿದೆ.

ಈ ಅಜೆಂಡಾದ ಪ್ರಮುಖ ಭಾಗವಾಗಿರುವ ಫಲಾನುಭವಿ ಪ್ರಧಾನಿ, ಮಂದಿರ ವಿಷಯ ಬೇಗ ಇತ್ಯರ್ಥ ಆಗದಂತೆ ನ್ಯಾಯಾಲಯದ ಮೇಲೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂದು ಚುನಾವಣಾ ಪ್ರಚಾರದಲ್ಲಿ ನಿರ್ಲಜ್ಜವಾಗಿ ಹೇಳಿದ್ದಾರೆ. ಹೇಳಿಕೊಳ್ಳಲೂ ಯಾವ ಸಾಧನೆಯೂ ಇಲ್ಲ, ಜನರ ದೈನಂದಿನ ಬದುಕು ಹದಗೆಡಲು ಮಾಡಿದ ಕೆಲಸಗಳಿಗೆ ಲೆಕ್ಕವಿಲ್ಲ. ಹೀಗಾಗಿ ಪ್ರಧಾನಿಗೆ ರಾಮನ ಪಾದ ಬಿಟ್ಟರೆ ಗತಿಯಿಲ್ಲ. ಅವರ ಅಜೆಂಡಾದ ಪ್ರಕಾರ ಕೋಮು ಧ್ರುವೀಕರಣ ಆಗಬೇಕು, ಅದಾಗಬೇಕೆಂದರೆ 1992 ಮತ್ತು 2002ರ ಹಿಂಸಾಚಾರಗಳು ಸಂಭವಿಸಬೇಕು… ಈಗ ನಡೆಯುತ್ತಿರುವುದು ಇದಕ್ಕೆ ಬೇಕಾದ ಪೂರ್ವಸಿದ್ದತೆಗಳು ಅಷ್ಟೇ.

ಈಗಲೇ ಜನರು ಇದನ್ನು ಅರಿತುಕೊಂಡರೆ, ಭೀಕರ ಅನಾಹುತವನ್ನು ತಪ್ಪಿಸಬಹುದು. ದೆಹಲಿಯಲ್ಲಿ ನಡೆದ ರೈತರ ರ‍್ಯಾಲಿ ಈ ದಿಸೆಯಲ್ಲಿನ ಆಶಾದಾಯಕ ಬೆಳವಣಿಗೆ. ಧರ್ಮದ ವಿಚಾರ ಬಿಟ್ಟು ಬದುಕಿನ ಸಂಕಟಗಳ ಕುರಿತು, ಅವುಗಳ ಪರಿಹಾರ ದಾರಿಗಳ ಕುರಿತು ಜನ ಯೋಚಿಸತೊಡಗಿದರೆ ಸಂಘದ ಸಂಚು ಮಣ್ಣುಪಾಲಾಗುವುದು ಖಚಿತ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...