Homeಅಂಕಣಗಳುನೀರನಡೆ | ಭವಿಷ್ಯದ ನೆರಳಿನಂತಿರುವ ವರ್ತಮಾನದ ಸಣ್ಣ ಸಂಗತಿಗಳು

ನೀರನಡೆ | ಭವಿಷ್ಯದ ನೆರಳಿನಂತಿರುವ ವರ್ತಮಾನದ ಸಣ್ಣ ಸಂಗತಿಗಳು

- Advertisement -
- Advertisement -
  • ಡಾ. ವಿನಯಾ ಒಕ್ಕುಂದ |

ನಮ್ಮ ಸುತ್ತ ನಡೆಯುತ್ತಿರುವ ಸಣ್ಣ ಸಂಗತಿಗಳನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಅವು ಬೃಹತ್ ವಿದ್ಯಮಾನದ ನೆರಳಿನಂತಿರುತ್ತವೆ. ಮೊನ್ನೆ ಧಾರವಾಡದ ಮೇ ಸಾಹಿತ್ಯದ ಕಾರ್ಯಕ್ರಮದಲ್ಲಿದ್ದೆ. ನನ್ನ ಪಕ್ಕ ಹಿರಿಯರೊಬ್ಬರು ಕೂತಿದ್ದರು. ನಿಧಾನ ಮಾತು ಆರಂಭಿಸಿದರು. ‘ನಿಮ್ಮ ಮಗಳಾ?’ ‘ಹೀಗೆ ಫೋಟೋ ತೆಗೆದು ಓಡಾಡಿ ಮುಂದೇನು ಮಾಡುತ್ತಾಳೆ?’ .. ಆ ಮಾತುಗಳಲ್ಲಿ ಮಮತೆ ಇರಲಿಲ್ಲ. ವ್ಯಂಗ್ಯವಿತ್ತು. ಪೇಚಿಗೆ ಸಿಲುಕಿಸುವ ಇರಾದೆಯಿತ್ತು. ನಾನು ‘ಗೊತ್ತಿಲ್ಲ’ ಎಂದೆ. ‘ಚಿತ್ರ ಗಿತ್ರ ತಗೀತಾಳಂತಲ್ಲ?’ ‘ಹೂಂ’. ‘ಓದೋದು ಬರೆಯೋದು?’ ‘ಅಂಥದೇನಿಲ್ಲ’… ನಾನು ಕುರ್ಚಿಯನ್ನು ಅತ್ತಿತ್ತ ಜರುಗಿಸಿಕೊಂಡು ಕೂತೆ. ಅವಳು ಬಂದಾಗ ‘ನೋಡು ಚಿತ್ರವೆಂದರೆ ಹೀಗೆ ತಗೀಬೇಕು’ ಎಂದು ಮೊಬೈಲ್‍ನಿಂದ ತೋರಿಸಿದರು. ಬಿಜೆಪಿ ಶಾಸಕರೊಬ್ಬರ ಚಿತ್ರ ಬಿಡಿಸಿದ ಕಲಾವಿದರೊಬ್ಬರ ಚಿತ್ರಗಳವು. ಇವಳು ತಲೆಯಾಡಿಸಿ ಎದ್ದುಹೋದಳು. ಧರ್ಮದ ಕುರಿತ ಗೋಷ್ಠಿಯಲ್ಲಿ ವೀರಶೈವ- ಲಿಂಗಾಯತ ಚರ್ಚೆ ಬಂತು. ಎಚ್.ಎಸ್.ಶಿವಪ್ರಕಾಶ್, ಎಸ್ ಜಿ. ಸಿದ್ದರಾಮಯ್ಯ, ರಂಜಾನ್ ದರ್ಗಾ ಚರ್ಚಿಸುತ್ತಿದ್ದರು. ‘ಇದೇನಿದು, ಸಾಹಿತ್ಯದ ಬಗ್ಗೆ ಮಾತಾ? ತಥ್.. ನೀವು ಇಂಗ್ಲಿಷ್ ಲಿಟರೇಚರ್ ಓದಿದ್ದೀರಾ ಮೇಡಂ? ಅಲ್ಲಿ ಹೀಗೆ ಮಾತಾಡುವುದನ್ನು ಮಾತಿನ ವಾಂತಿ ಅಂತಾರೆ’. ನನಗೆ ಕೋಪ ಬರುತ್ತಿತ್ತು. ‘ನಿಮಗೆ ಬೇಡವಾದರೆ ಎದ್ದು ಹೋಗಿ’ ಎಂದೆ. ‘ಇಲ್ಲ ಇಲ್ಲ ನಾನು ಕೇಳಲಿಕ್ಕೇ ಬಂದಿದ್ದು’ ಎಂದು ಉತ್ತರ ಬಂತು. ದಿನೇಶ್ ಅಮೀನ್‍ಮಟ್ಟು, ‘ಇಷ್ಟೆಲ್ಲ ಮಾಡುವ ಬದಲು ಇವಿಎಂ ಮಶಿನ್‍ಗಳನ್ನು ಹ್ಯಾಕ್ ಮಾಡುವವರನ್ನು ತಯಾರು ಮಾಡಿಕೊಂಡಿದ್ದರೆ ಸಾಕಾಗಿತ್ತು’ ಎಂದು ಪ್ರಜಾಪ್ರಭುತ್ವದ ಅಭದ್ರತೆಯ ಬಗ್ಗೆ ವ್ಯಂಗ್ಯದಿಂದ ಮಾತು ಆರಂಭಿಸಿದರು. ನನ್ನ ಪಕ್ಕದ ವ್ಯಕ್ತಿಗೆ ಸಿಟ್ಟು ನೆತ್ತಿಗೇರಿತ್ತು. ‘ಏನಿದು ಬಾಯಿಬಡುಕರ ಹಾಗೆ ಒದರಿದರೆ..? ವಿವಿಪ್ಯಾಟ್ ಲಗತ್ತಿಸಿಲ್ವಾ?’ ಈ ಬಾರಿ ಆಸಾಮಿ ನನ್ನ ಕಡೆ ಹೊರಳಿರಲಿಲ್ಲ. ಆ ಕಡೆಯ ವ್ಯಕ್ತಿಯ ಜತೆಗೆ ಮಾತಾಡುತ್ತಿತ್ತು. ಆ ಕ್ಷಣ ವಿವಿಪ್ಯಾಟ್ ಹಿಂದೆ ಹೀಗೆ ಬಾಯ್ಮುಚ್ಚಿಸುವ ತಂತ್ರಗಾರಿಕೆ ಇದೆ ಅನ್ನಿಸಿತು.

ಸಂಜೆಯ ಸಮಾರೋಪದಲ್ಲಿ ಮಾತನಾಡುತ್ತ ಸುನಂದಾ ಕಡಮೆ, ಪ್ರಕಾಶ್ ರೈ ಮನೆಗೆ ಬಂದಿದ್ದ ಫೋಟೋ ಫೇಸ್ ಬುಕ್ಕಿಗೆ ಹಾಕಿದಾಗ ಕೆಲ ದಿನ ನಿರಂತರವಾಗಿ ಕೆಟ್ಟ ಮೆಸೇಜ್‍ಗಳು ಬಂದಿದ್ದನ್ನು ಪ್ರಸ್ತಾಪಿಸಿದರು. ನನಗೆ ಗಾಬರಿಯಾಯಿತು. ಪ್ರಕಾಶ್ ರೈ ಮನೆಗೆ ಬಂದಿದ್ದ ಫೋಟೋಗಳನ್ನು ನನ್ನ ಗಂಡನೂ ಮಗಳೂ ಫೇಸ್ ಬುಕ್ಕಿಗೆ ಹಾಕಿದ್ದರು. ಮಗಳಿಗೆ ಪ್ರಕಾಶ್ ರೈ ಕುರಿತು ಕೆಲವು ಕೆಟ್ಟ ಕಮೆಂಟ್‍ಗಳು ಬಂದಿದ್ದವಂತೆ. ‘ನನಗೆ ಹೇಳಲಿಲ್ಲವಲ್ಲ’ಎಂದರೆ ‘ನಾನೇ ಓದ್ಲಿಲ್ಲ, ಹೀಗೆ ಅಂತ ಕಂಡ ತಕ್ಷಣ ಬ್ಲಾಕ್ ಮಾಡಿ ಒಗೆದೆ’ ಎಂದಳು ನಿಸೂರಾಗಿ. ಇವೆಲ್ಲ ಇಷ್ಟು ಉಪೇಕ್ಷಿಸುವ ಸಂಗತಿಗಳಲ್ಲ ಎಂದು ಅವಳಿಗೆ ತಿಳಿದಿರಲಿಲ್ಲ. ಪ್ರಕಾಶ್ ರೈ, ನಮ್ಮ ಮನೆಯಲ್ಲಿ ಕೆಲಗಂಟೆ ಕಳೆದು ಹೋದ ಮೇಲೆ ನಡೆದ ಸಂಗತಿಗಳನ್ನು ನೆನಪಿಸಿಕೊಂಡೆ. ಅಕ್ಕಪಕ್ಕದವರ ಕಣ್ಣು ಬೇರೆ ನಮೂನಿ ತೂಗತೊಡಗಿವೆ ಅನ್ನಿಸಿತ್ತು. ಎಲ್ಲರ ಹಾಗೆ ಬಾಗಿಲಿಗೆ ರಂಗೋಲಿ ಇಕ್ಕಿ, ಎಲ್ಲರ ಹಾಗೆ ಆಕಾಶಬುಟ್ಟಿ ತೂಗುಬಿಟ್ಟು, ಎಲ್ಲರ ಹಾಗೆ ಕಬ್ಬು ನಿಲ್ಲಿಸಿ ತುಳಸಿ ಪೂಜೆ ಮಾಡಿ… ಏನೆಲ್ಲಾ ಮಾಡಿದರೂ ಇವರು ನಮ್ಮಂತಿಲ್ಲ ಅಂತ ಸುತ್ತಲ ಜನ ಇರುಸು-ಮುರಸು ಅನುಭವಿಸುತ್ತಿದ್ದ ಹಾಗಿತ್ತು. ಅವರ ಬಗ್ಗೆ ಪಾಪ ಅನ್ನಿಸಿತು. ನಮ್ಮ ಕೆಲಸದವಳು, ಆವತ್ತು ಪ್ರಕಾಶ್ ರೈ ಅಡಿಗೆ ಮನೆ ಬಾಗಿಲವರೆಗೂ ಬಂದು ಅವಳೊಡನೊಂದು ಫೋಟೋ ಕೂಡ ತಗೊಂಡಿದ್ದರು. ಅವಳು ಆವತ್ತು ಪ್ರಕಾಶ್ ರೈ ಬಗ್ಗೆ ಫಿದಾ ಆಗಿದ್ದು ನಿಜ. ಆದರೆ ದಿನವೂ ಒಂದೊಂದು ಪ್ರಶ್ನೆಗಳನ್ನು ತರುತ್ತಿದ್ದಳು. ‘ಅವರಿಗೆ ಕಾಂಗ್ರೆಸ್ ಏಜೆಂಟ್ ಅಂತಾರಂತಲ್ಲ?’ ‘ಅವರಿಗೆ ಎರಡು ಮದುವೆಯಾಗಿದಾವಂತಲ್ಲ?’ ಹೀಗೆ. ತಿಳಿದಷ್ಟನ್ನು ಸಮಾಧಾನದಿಂದ ವಿವರಿಸಿದ್ದೆ. ಪ್ರಕಾಶ ರೈ ಭಾಷಣದ ತುಣುಕುಗಳನ್ನು ಕೇಳಿಸಿದೆ. ‘ ಹೌದ್ ಬಿಡ್ರೀ, ಸರಿ ಬಿಡ್ರೀ,’ ಅಂತ ಸುಮ್ಮನಾಗಿದ್ದಳು. ನಿಜಕ್ಕೂ ಅವಳ ಅಂತರಂಗದಲ್ಲಿ ಹೌದೆನ್ನಿಸಿತೇ ತಿಳಿಯಲಿಲ್ಲ. ದುಡಿದು ಬದುಕುವ ಇಂತಹ ಜನರ ಅನಕ್ಷರತೆ, ಮುಗ್ಧತೆಗಳನ್ನು ಕೋಮುವಾದ ಬಳಸಿಕೊಳ್ಳುವ ಪರಿ ದಂಗುಬಡಿಯುವಂಥದ್ದು. ಕಲ್ಬುರ್ಗಿಯವರ ಹತ್ಯೆಯ ನಂತರದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮನೆಗೆ ಬರುವಾಗ ಆಟೋ ಚಾಲಕ ಕೇಳಿದ್ದ-‘ ಅವ್ರು ನಮ್ದೇವ್ರ ಮೇಲೆ ಉಚ್ಚಿ ಹೊಯ್ಬಹುದು ಅಂದಿದ್ರಂತಲ್ಲ. ಅಂಥವರ ಸಂಬಂಧ ರ್ಯಾಲಿ ಮಾಡೀರಿ? ಹುಷಾರ್ರೀ ನಿಮ್ಮ ಮನಿಗೋಳ ಮ್ಯಾಲೂ ಕಲ್ ಬಿದ್ದಾವು’. ಹಿಂದುತ್ವದ ಅಜೆಂಡಾ ತುಂಬಾ ಪ್ರಬಲವಾಗಿ ಈ ಕೆಲಸ ಮಾಡುತ್ತಿದೆ. ಸಾಮಾಜಿಕ ವ್ಯವಸ್ಥೆಯ ತಳಹದಿಯಲ್ಲಿರುವ ಜೀವಿಗಳಲ್ಲಿ ತನ್ನ ನಂಬಿಕೆಯನ್ನು ಉತ್ಪಾದಿಸುತ್ತಿದೆ. ನಿಧಾನ ವಿಷದಂತೆ ದಿನವೂ ಸುಳ್ಳುಗಳು ತಪ್ಪುಗಳು ಅರೆ ಬರೆ ವ್ಯಾಖ್ಯಾನಗಳು ಅವರನ್ನು ತಲುಪುತ್ತವೆ. ಮರು ವಿಶ್ಲೇಷಿಸಬಹುದಾದ ಸುದ್ದಿಯಾಗಿಯಲ್ಲ, ನಂಬಿಕೆಯಾಗಿ. ಈ ನಂಬಿಕೆಯ ಲೇಹ್ಯದ ಕಟುತ್ವವನ್ನು ಯಾವ ವೈಚಾರಿಕತೆಯೂ ಮಾಗಿಸಲಾರದು ಎನ್ನುವಷ್ಟು ತೀವ್ರವಾಗಿ.

ಪ್ರಕಾಶ್ ರೈ ಬಂದುಹೋದ ಕೆಲ ದಿನಗಳಲ್ಲಿ, ಮಗಳು ತನ್ನ ಗೆಳತಿಯೊಂದಿಗೆ ಸಮೀಪದ ಪರಿಚಯದ ಪಾರ್ಲರಿಗೆ ಹೋಗಿದ್ದಳು ಕೂದಲು ಶೇಪ್‍ಲೆಸ್ ಆಗಿದೆ ಎಂದು ಗೊಣಗಿಕೊಳ್ಳುತ್ತ. ಬೇಡವೆಂದರೂ ಏನೋ ಮಹತ್ವದ್ದನ್ನು ಪಡೆಯುವ ಉಮೇದಿಯಲ್ಲಿ. ಬಂದಾಗ ಕೋಪದಿಂದ ಧುಮುಗುಡುತ್ತಿದ್ದಳು. ಆ ಪಾರ್ಲರಿನಲ್ಲಿ ಗಂಡಹೆಂಡತಿ ಇಬ್ಬರೂ ಇರುತ್ತಾರೆ. ಮಕ್ಕಳ ಕೂದಲನ್ನು ಶೇಪ್ ಮಾಡೋದು ಸಾಮಾನ್ಯವಾಗಿ ಗಂಡನೇ ಅಂತೆ. ಅವರ ಮಗಳು ಇವರ ಗೆಳತಿ ಕೂಡ. ಅವರು ತೆಲುಗು ಮಾತಾಡುವ ದಲಿತರು. ಬಹಳ ಕಾಲದಿಂದ ಇಲ್ಲೇ ಇರುವವರು. ಇವಳು ಕೂದಲು ಕೊಟ್ಟು ಕೂತಾಗ ಆತ ಕೇಳಿದನಂತೆ. ‘ನಿಮ್ಮನೆಗೆ ಹುಚ್ಚ ಬಂದಿದ್ದನಂತಲ್ಲ?’ ‘ಆಂ’? ‘ಆ ಪ್ರಕಾಶ ರೈ ಅನ್ನೋ ಹುಚ್ಚ ಬಂದಿದ್ದನಂತಲ್ಲ?’ ‘ಯಾಕ್ರಿ ಅಂಕಲ್, ಅನಂತಕುಮಾರ ಹೆಗಡೆ ಬಂದಿದ್ದರೆ ಹಾಗನ್ನಬಹುದಿತ್ತು. ಹೋಗಿ ಹೋಗಿ ಅಷ್ಟು ದೊಡ್ಡ ವ್ಯಕ್ತಿಗೆ ಹೀಗನ್ನುತ್ತೀರಲ್ರೀ.. ಏನ್ರೀ ನೀವು…?’ ಆತ ದಂಗಾದನಂತೆ. ಇಷ್ಟು ಸಣ್ಣ ಹುಡುಗಿ ಹೀಗೆ ಉತ್ತರಿಸಬಹುದೆಂದುಕೊಂಡಿರಲಿಲ್ಲವೇನೋ. ನಂತರದ್ದು ಇನ್ನೊಂದು ಬಗೆಯ ವಿಕಾರ. ಚೆಂದದ ಕೂದಲನ್ನು ಅಸಡ್ಡಾಳ ಕತ್ತರಿಸಿದ್ದ. ಕಣ್ಣೊರೆಸಿಕೊಳ್ಳುತ್ತ ಬಂದವಳು ಕೂದಲ ದುಃಸ್ಥಿತಿ ನೋಡಿ ಕೊರಗುತ್ತಲೇ ಇದ್ದಳು. ಆದರೆ, ಪ್ರಕಾಶ್ ರೈ ಜತೆ ಇದ್ದ ಬಿದ್ದ ಫೋಟೋಗಳನ್ನೆಲ್ಲ ಅಪ್ ಲೋಡ್ ಮಾಡಿದಳು. ನನಗೆ ಅರ್ಧ ಹೇರ್ ಕಟಿಂಗ್ ಮಾಡಿ ಹೊರದಬ್ಬಿಸಿಕೊಂಡಿದ್ದ ಹಿರೇಕೆರೂರಿನ ದಲಿತ ಯುವಕ ನೆನಪಾಗುತ್ತಿದ್ದ. ಅವನನ್ನು ಹೊರದಬ್ಬಲಾಗಿತ್ತು. ಇವಳು ಇನ್ನೊಂದು ರೀತಿಯಲ್ಲಿ ಹೊರಬಂದಿದ್ದಳು, ಇನ್ನೆಂದೂ ಅಲ್ಲಿ ಕಾಲಿಡಲಾರದಂತೆ. ಜಾತಿ, ಧರ್ಮ, ಲಿಂಗಗಳ ಜತೆಗೆ ವೈಚಾರಿಕತೆಯೂ ತೀವ್ರ ಒತ್ತುವರಿಗೆ ಒಳಗಾಗುತ್ತಿರುವ ಕಾಲವಿದು.

ರಾಜೇಂದ್ರ ಚೆನ್ನಿಯವರು ನಮ್ಮ ಈ ವರ್ತಮಾನವನ್ನು ಜಾರ್ಜ್ ಆರ್ವೆಲ್ 1984ರಲ್ಲಿ ಬರೆದ Thought police ವಿಧಾನದೊಂದಿಗೆ ಇಡುತ್ತಾರೆ. ಬಿಗ್ ಬ್ರದರ್ ತನ್ನ ಪ್ರಜೆಗಳ ಮೇಲೆ ನಿಗಾ ಇಡುತ್ತಾನೆ. ಸಾರ್ವಜನಿಕ ಸ್ಥಳಗಳಲ್ಲಿ ಪರದೆಯ ಮೇಲೆ ದೊಡ್ಡ ಭಾವಚಿತ್ರ ಮೂಡುತ್ತದೆ. ಯಾರು ನಮಸ್ಕರಿಸುವುದಿಲ್ಲವೋ ಅದು ದಾಖಲಾಗುತ್ತದೆ. ಅಂಥವರನ್ನು ಅರೆಸ್ಟ್ ಮಾಡಲಾಗುತ್ತದೆ. ಇದು ಸಲೀಸಾಗಿ ನಡೆಯುತ್ತದೆ. ಯಾಕೆಂದರೆ ಪ್ರಭುತ್ವಕ್ಕೆ ಅಪಥ್ಯವೆನ್ನಿಸುವ ಚರಿತ್ರೆಯ ನೆನಪುಗಳನ್ನು ಜನರ ಮನಸ್ಸಿನಿಂದ ಶಾಶ್ವತವಾಗಿ ಅಳಿಸಲಾಗಿದೆ. ನಮ್ಮ ಸುತ್ತ ನಡೆಯುತ್ತಿರುವ ಸಣ್ಣಸಣ್ಣ ಸಂಗತಿಗಳು ಅದೇ ಕರೆಗಂಟೆಗಳೇ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...