Homeಮುಖಪುಟಪೌರತ್ವ ಮಸೂದೆ: ಕೇಂದ್ರದ ಕಾಯ್ದೆಯನ್ನು ತಿರಸ್ಕರಿಸುವ ಸಾಂವಿಧಾನಿಕ ಹಕ್ಕು ರಾಜ್ಯಗಳಿಗೆ ಇದೆಯೇ?

ಪೌರತ್ವ ಮಸೂದೆ: ಕೇಂದ್ರದ ಕಾಯ್ದೆಯನ್ನು ತಿರಸ್ಕರಿಸುವ ಸಾಂವಿಧಾನಿಕ ಹಕ್ಕು ರಾಜ್ಯಗಳಿಗೆ ಇದೆಯೇ?

- Advertisement -
- Advertisement -

ರಾಷ್ಟ್ರಪತಿಗಳ ಅನುಮೋದನೆಯ ಮೂಲಕ ಗುರುವಾರ ರಾತ್ರಿಯಿಂದಲೇ ಕಾಯ್ದೆಯಾಗಿ ಜಾರಿಗೆ ಬಂದಿರುವ ಪೌರತ್ವ ತಿದ್ದುಪಡಿ ಮಸೂದೆಗೆ ವಿಪರೀತ ಪ್ರತಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಕೇರಳ ರಾಜ್ಯ ಸರ್ಕಾರಗಳು ಈ ಕಾಯ್ದೆಯನ್ನು ತಮ್ಮ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರಲು ಬಿಡುವುದಿಲ್ಲ ಎಂಬ ಹೇಳಿಕೆ ನೀಡಿವೆ. ಮಧ್ಯಪ್ರದೇಶದ ಕಮಲನಾಥ್ ಸರ್ಕಾರವು ಕೂಡಾ ಇದೇ ನಿಲುವಿನ ಸುಳಿವು ನೀಡಿದೆ. ಆದರೆ ಲೋಕಸಭೆ, ರಾಜ್ಯಸಭೆಗಳೆರಡರಲ್ಲು ಅನುಮೋದನೆ ಪಡೆದು ರಾಷ್ಟ್ರಪತಿಗಳಿಂದ ಅಂಕಿತವನ್ನೂ ಹಾಕಿಸಿದ, ಶಾಸನಬದ್ಧ ಪ್ರಕ್ರಿಯೆಗಳನ್ನೆಲ್ಲ ಪೂರೈಸಿದ ಕಾನೂನನ್ನು ತಿರಸ್ಕರಿಸುವ ಸಾಂವಿಧಾನಿಕ ಅವಕಾಶ ರಾಜ್ಯ ಸರ್ಕಾರಗಳಿಗೆ ಇದೆಯೇ? ಹಾಗೊಮ್ಮೆ ಅಸಹಕಾರ ತೋರಿದರೆ ಏನೆಲ್ಲ ಆಡಳಿತಾತ್ಮಕ ಬಿಕ್ಕಟ್ಟುಗಳು ಎದುರಾಗಬಹುದು? ಎಂಬ ಕುರಿತು ದಿ ಪ್ರಿಂಟ್ ಪತ್ರಿಕೆಯು ಖ್ಯಾತ ಕಾನೂನು ತಜ್ಞರನ್ನು ಮಾತಾಡಿಸಿ ಅವರ ಅಭಿಪ್ರಾಯಗಳನ್ನು ದಾಖಲಿಸಿದೆ. ಅದರ ಸಾರಾಂಶ ಇಲ್ಲಿದೆ.

ಸಂವಿಧಾನ ಏನು ಹೇಳುತ್ತೆ?
ಬಹುಪಾಲು ಕಾನೂನು ತಜ್ಞರ ಪ್ರಕಾರ ರಾಜ್ಯ ಸರ್ಕಾರಗಳಿಗೆ ಇಂತಹ ಸ್ವಾತಂತ್ರ್ಯ ಇಲ್ಲ! ಯಾಕೆಂದರೆ ಪೌರತ್ವ, ಪೌರತ್ವ ನೋಂದಣಿ ಮತ್ತು ವಿದೇಶಿ ವಲಸಿಗರ ಗುರುತಿಸುವಿಕೆಗಳು ಭಾರತ ಸಂವಿಧಾನದ ಕೇಂದ್ರ ಪಟ್ಟಿಯ ವ್ಯಾಪ್ತಿಗೆ ಒಳಪಡುತ್ತವೆ. ಅಂದರೆ ಈ ಕುರಿತು ಶಾಸನಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುತ್ತದೆ.
ಜೊತೆಗೆ, ೨೫೬ನೇ ವಿಧಿಯು ಕೇಂದ್ರದ ಕಾನೂನುಗಳ ಅನುಷ್ಠಾನವನ್ನು ಖಾತ್ರಿಪಡಿಸುವುದು ರಾಜ್ಯಗಳ ಕರ್ತವ್ಯ ಎಂದು ಉಲ್ಲೇಖಿಸುತ್ತದೆ. ಆ ವಿಧಿಯು, ಆ ರಾಜ್ಯಕ್ಕೆ ಅನ್ವಯವಾಗುವ ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ಸಂಸತ್ತಿನ ಮೂಲಕ ರೂಪಿಸಲ್ಪಟ್ಟ ಹೊಸ ಕಾಯ್ದೆಗಳನ್ನು ಅನುಷ್ಠಾನಕ್ಕೆ ತಂದು ಖಾತ್ರಿಪಡಿಸುವುದು ಪ್ರತಿ ರಾಜ್ಯದ ಕಾರ್ಯಾಂಗಾಧಿಕಾರದ ಹೊಣೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಇದನ್ನೂ ಓದಿ: ಪೌರತ್ವ ಮಸೂದೆ ಜಾರಿಗೆ ತಂದ ಗೃಹಮಂತ್ರಿ ಅಮಿತ್ ಶಾಗೆ ಕಾದಿದೆಯಾ ಅಮೆರಿಕಾ ಬಹಿಷ್ಕಾರ?

ರಾಜ್ಯಗಳಿಗೆ ಬೇರೆ ದಾರಿಯೇ ಇಲ್ಲ
ಹಿರಿಯ ವಕೀಲರಾದ ಕೆ.ಟಿ.ಎಸ್.ತುಳಸಿಯವರು ಪ್ರಿಂಟ್ ಪತ್ರಿಕೆ ಜೊತೆ ಹಂಚಿಕೊಂಡಿರುವ ಅಭಿಪ್ರಾಯದ ಪ್ರಕಾರ ರಾಜ್ಯ ಸರ್ಕಾರಗಳಿಗೆ ಬೇರೆ ದಾರಿಯೇ ಇಲ್ಲ. ಕಾಯ್ದೆಯಾಗಿ ರೂಪಿಸಲ್ಪಟ್ಟ ಶಾಸನಗಳ ಪ್ರಕಾರವೇ ರಾಜ್ಯಗಳು ಕಾರ್ಯನಿರ್ವಹಿಸಬೇಕು. ರಾಜ್ಯದ ಶಾಸನಗಳಿಗಿಂತ ಕೇಂದ್ರದ ಶಾಸನಗಳು ನಮ್ಮ ಸಂವಿಧಾನದಲ್ಲಿ ಹೆಚ್ಚು ಮಾನ್ಯತೆ ಪಡೆದವು. ಹಾಗಾಗಿ ರಾಜ್ಯಗಳಿಗೆ ಬೇರೆ ದಾರಿಯಿಲ್ಲ. ರಾಜ್ಯಗಳು ನಿರ್ದಿಷ್ಟ ಕಾಯ್ದೆ ಬಗ್ಗೆ ತನಗೆ ಸಮ್ಮತಿ ಇಲ್ಲದಿರುವ ಬಗ್ಗೆ ಅಸಮಾಧಾನ ಹೊರಹಾಕಬಹುದು, ಆದರೆ ಅನುಷ್ಠಾನದ ವಿಚಾರಕ್ಕೆ ಬಂದಾಗ ಅವು ಮಾಡಲೇಬೇಕು. ಒಂದೊಮ್ಮೆ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರದಿದ್ದರೆ, ಆಯಾ ರಾಜ್ಯದ ಹೈಕೋರ್ಟ್‌ಗಳು ಅದನ್ನು ಜಾರಿಗೆ ತರುತ್ತವೆ ಎಂದಿದ್ದಾರೆ ಅವರು.

ಮಾಜಿ ಲೋಕಸಭಾ ಕಾರ್ಯದರ್ಶಿ ಮತ್ತು ಕಾನೂನು ತಜ್ಞರಾದ ಪಿ.ಡಿ.ಟಿ. ಆಚಾರಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಿಂದ ಶಾಸನವಾಗಿ ರೂಪಿಸಲ್ಪಟ್ಟ ಕಾನೂನುಗಳನ್ನು ಅನುಷ್ಠಾನಕ್ಕೆ ತರಲು ಬಿಡುವುದಿಲ್ಲ ಎಂದು ಹೇಳಲು ರಾಜ್ಯ ಸರ್ಕಾರಗಳಿಗೆ ಯಾವ ಸಾಂವಿಧಾನಿಕ ಅವಕಾಶಗಳೂ ಇಲ್ಲ. ಈ ವಿಚಾರದಲ್ಲಿ ಸಂವಿಧಾನ ಬಹಳ ಸ್ಪಷ್ಟವಾಗಿದೆ. ಹಾಗಾಗಿ ರಾಜ್ಯ ಸರ್ಕಾರಗಳಿಗೆ ಬೇರೆ ದಾರಿ ಇಲ್ಲ ಎಂದಿದ್ದಾರೆ. ಆದರೆ ಅನುಷ್ಠಾನಕ್ಕೆ ತರದಿದ್ದರೆ ಏನಾಗುತ್ತದೆ ಎಂಬ ಕುರಿತು ಅವರು ಬೇರೆಯದೇ ಸಾಧ್ಯತೆಯನ್ನು ಮುಂದಿಡುತ್ತಾರೆ, ಒಂದೊಮ್ಮೆ ರಾಜ್ಯ ಸರ್ಕಾರಗಳು ಒಪ್ಪದಿದ್ದರೆ, ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತಂದು ಆಡಳಿತವನ್ನು ತನ್ನ ಕೈವಶ ಮಾಡಿಕೊಳ್ಳಬಹುದು ಎನ್ನುತ್ತಾರೆ ಅವರು.

ಇನ್ನು ಮತ್ತೊಬ್ಬ ಹಿರಿಯ ವಕೀಲ ಗೋಪಾಲ ಶಂಕರನಾರಾಯಣನ್ ಅವರು, ಒಂದು ಶಾಸನವನ್ನು ಅನುಷ್ಠಾನಕ್ಕೆ ತರಲು ಸಹಮತಿ ಸೂಚಿಸದೆ ಅಸಹಕಾರ ತೋರುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಮುಂಬರುವ ಪರಿಣಾಮಗಳನ್ನು ಅದು ಎದುರಿಸಲು ಸಿದ್ದವಾಗಿರಬೇಕಾಗುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಆಡಳಿತದ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಘಡದಲ್ಲಿ ಸಿಎಬಿ ಜಾರಿ ಇಲ್ಲ…

ಇದು ಕೇಂದ್ರ ಸರ್ಕಾರದ ಕಾಯ್ದೆಯೇ ಇರಬಹುದು ಮತ್ತು ಪೌರತ್ವದ ವಿಚಾರದ ರಾಷ್ಟ್ರೀಯ ಒಕ್ಕೂಟಕ್ಕೆ ಸಂಬಂಧಿಸಿದ ವಿಷಯವೇ ಆಗಿರಬಹುದು, ಆದರೆ ಅನುಷ್ಠಾನದ ವಿಚಾರಕ್ಕೆ ಬಂದಾಗ ಕೇಂದ್ರವು ಸಹಾ ಪ್ರಾದೇಶಿಕ ಪ್ರಾಧಿಕಾರಗಳನ್ನು (ಕಾರ್ಯಾಂಗ ಮತ್ತು ನ್ಯಾಯಾಂಗ ಎರಡೂ) ಅವಲಂಬಿಸಲೇಬೇಕಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಆಯಾ ಸ್ಥಳೀಯ ಆಡಳಿತದ ಯಂತ್ರಾಂಗ ಮತ್ತು ಪೊಲೀಸ್ ವ್ಯವಸ್ಥೆಯ ಅಗತ್ಯವಿರುತ್ತದೆ. ಇವು ಆಯಾ ರಾಜ್ಯ ಸರ್ಕಾರಗಳ ಸುಪರ್ದಿಯಲ್ಲಿರುತ್ತವೆ. ರಾಜ್ಯ ಸರ್ಕಾರ ತನ್ನ ಆಡಳಿತ ಯಂತ್ರಾಂಗಕ್ಕೆ ಅನುಷ್ಠಾನದ ವಿಚಾರದಲ್ಲಿ ಅಸಹಕಾರ ತೋರುವಂತೆ ನಿರ್ದೇಶನ ನೀಡಿದರೆ ಕೇಂದ್ರದ ಕಾಯ್ದೆ ಅನುಷ್ಠಾನಕ್ಕೆ ಬರುವುದು ಅಸಾಧ್ಯವಾಗುತ್ತದೆ ಎನ್ನುವ ಅವರು, ಅದರ ನಂತರದ ಪರಿಣಾಮಗಳನ್ನು ಹೀಗೆ ಬಿಚ್ಚಿಡುತ್ತಾರೆ, ಆದರೆ ಕೇಂದ್ರದ ಕೆಂಗಣ್ಣಿಗೆ ಗುರಿಯಾಗುವ ರಾಜ್ಯವು ಮುಂದಿನ ಕೆಟ್ಟ ಪರಿಣಾಮಗಳಿಗೂ ಸಿದ್ದವಾಗಿರಬೇಕಾಗುತ್ತದೆ. ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರಾಂಗ ವೈಫಲ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಕೇಂದ್ರ, ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಒಟ್ಟಾರೆ ಈ ಎಲ್ಲಾ ಕಾನೂನುತಜ್ಞರ ಅಭಿಪ್ರಾಯಗಳ ಪ್ರಕಾರ ಕೇಂದ್ರ ಪಟ್ಟಿಗೆ ಸೇರುವ ಒಂದು ಕಾಯ್ದೆಗೆ ತನ್ನ ಅಸಮಾಧಾನವನ್ನು ಹೊರಹಾಕುವ ಅವಕಾಶ ರಾಜ್ಯ ಸರ್ಕಾರಕ್ಕೆ ಇರಬಹುದಾದರು, ಅನುಷ್ಠಾನ ಮಾಡದೆ ಇರಲು ಸಾಧ್ಯವಿಲ್ಲ. ಹಾಗೊಮ್ಮೆ ಅಸಹಕಾರ ಮುಂದುವರೆಸಿದರೆ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿ, ಕಾಯ್ದೆಯನ್ನು ಜಾರಿಗೆ ತರುವ ಸಾಂವಿಧಾನಿಕ ಅವಕಾಶ ಕೇಂದ್ರದ ಮುಂದಿರುತ್ತದೆ. ಆದಾಗ್ಯೂ ಕೇಂದ್ರ ಮತ್ತು ರಾಜ್ಯಗಳ ನಡುವೆ ತಿಕ್ಕಾಟ ಬರದಂತೆ ಹೊಂದಾಣಿಕೆಯ ಮೂಲಕ ಆಡಳಿತ ನಡೆಸುವುದು ನಮ್ಮ ಒಟ್ಟಾರೆ ಸಂವಿಧಾನದ ಆಶಯವಾಗಿದೆ, ಒಕ್ಕೂಟ ವ್ಯವಸ್ಥೆಯ ಶ್ರೇಯವಾಗಿದೆ ಎಂಬುದನ್ನು ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಮರೆಯದಿರುವುದು ದೇಶದ ಹಿತದೃಷ್ಟಿಯಿಂದ ಒಳಿತು.

ಕೃಪೆ: ಪ್ರಿಂಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸರಿ ಆದರೆ ಅನುಷ್ಠಾನಕ್ಕೆ ಬಂದಿರುವ ಕಾನೂನೆ ಸಂವಿಧಾನಕ್ಕೆ ವಿರುದ್ದವಾಗಿದ್ದರೆ?
    ಅನುಷ್ಠಾನ ಮಾಡುವವರು ಮೊದಲು ಸಂವಿಧಾನವನ್ನು ಓದಿದ್ದರೆ ತಿಳಿಯಬಹುದು.
    ಜನರು ಧಂಗೆ ಹೇಳಲು ಯಾರಪ್ಪನ ಅನುಮತಿಯೂ ಬೆಕಾಗಿಲ್ಲತಾನೆ.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...