Homeಮುಖಪುಟಮೋದಿ 2.0 ಸರ್ಕಾರದ ಮುಂದಿರುವ ನಿಜವಾದ ಸವಾಲುಗಳೇನು?

ಮೋದಿ 2.0 ಸರ್ಕಾರದ ಮುಂದಿರುವ ನಿಜವಾದ ಸವಾಲುಗಳೇನು?

- Advertisement -
- Advertisement -

| ಇಂಗ್ಲಿಷ್ ಮೂಲ: ಮುಖೇಶ್ ಅಸೀಮ್ |
| ಭಾವಾನುವಾದ: ಬಿ.ಸಿ.ಬಸವರಾಜ್ |

ಈಗ ನಮಗೆಲ್ಲಾ ಅರ್ಥವಾಗಿರುವಂತೆ ಮೋದಿಯ ಮುಂದಿರುವ ದೊಡ್ಡ ಸವಾಲು ವಿರೋಧ ಪಕ್ಷಗಳಲ್ಲವೇ ಅಲ್ಲ.
ಹೋದಸಾರಿಗಿಂತ ಇನ್ನೂ ಇಪ್ಪತ್ತು ಸೀಟುಗಳನ್ನು ಹೆಚ್ಚಿಗೆ ಪಡೆದ ಮೇಲಂತೂ ಮೋದಿ ಮತ್ತು ಬಿಜೆಪಿಗೆ ವಿರೋಧಪಕ್ಷಗಳು ಲೆಕ್ಕಕ್ಕೇ ಇರದಂತಾಗಿವೆ. ಜೊತೆಗೆ ಒರಿಸ್ಸಾ, ತೆಲಂಗಾಣದಂತಹ ರಾಜ್ಯಗಳಲ್ಲಿ ಬೇರೆ ಪಕ್ಷಗಳು ಅಧಿಕಾರದಲ್ಲಿದ್ದರೂ ಕೂಡ ಈ ಪಕ್ಷಗಳು ಬಹುತೇಕ ಕೇಂದ್ರ ಸರ್ಕಾರದ ನೀತಿಗಳನ್ನು ಬೆಂಬಲಿಸುವಂತಹ ಮನೋಭಾವವನ್ನು ಹೊಂದಿವೆ. ಹಾಗಾಗಿ ಇನ್ನು ಮುಂದಿನ ಐದು ವರ್ಷಗಳು ಮೋದಿ ಮತ್ತು ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ಲೆಕ್ಕಿಸದೆ ತಾವು ಬಯಸಿದ ನೀತಿಗಳನ್ನು ಜಾರಿ ಮಾಡುವ ಅನುಕೂಲವನ್ನು ಪಡೆದಿವೆ.

ಹಾಗಿದ್ದರೆ ಕಡೆಯ ಐದು ವರ್ಷ ಅಂದರೆ 2014ರಿಂದ 2019ರ ಮೋದಿ ಸರ್ಕಾರಕ್ಕೆ ನಿಜವಾದ ಸವಾಲನ್ನು ವಿರೋಧ ಪಕ್ಷಗಳು ಒಡ್ಡಿದ್ದವೆ ಅಂದರೆ ಅದೂ ನಿಜವಲ್ಲ. ಆದರೆ, ಜನಪರ ಆಡಳಿತ ನೀಡಲು ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿವೆ ಎಂದು ಜನರನ್ನು ನಂಬಿಸಲಾಗಿತ್ತು ಎನ್ನುವುದೇ ಅಸಲಿ ವಿಷಯ.

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಕೂಡ ಮೋದಿಗೆ ನಿಜವಾದ ಸವಾಲು ಒಡ್ಡಿದ್ದುದು ಕೆಳಕ್ಕಿಳಿಯುತ್ತಿದ್ದ ದೇಶದ ಆರ್ಥಿಕ ಬೆಳವಣಿಗೆ ಮತ್ತು ತನ್ಮೂಲಕ ಸೃಷ್ಟಿಯಾದ ಅಥವಾ ತೀವ್ರವಾದ ರೈತರ, ದಲಿತರ ಮತ್ತು ಇತರ ಜನಸಾಮಾನ್ಯರ ಸಂಕಷ್ಟಗಳು, ನಿರುದ್ಯೋಗದ ಹೆಚ್ಚಳ ಇತ್ಯಾದಿ. ಎಲ್ಲಾ ವರ್ಗದ ಜನರಿಗೂ ಒಂದಲ್ಲ ಒಂದು ರೀತಿಯಲ್ಲಿ ಅನುಭವಕ್ಕೆ ಬಂದ ಈ ದೈನಂದಿನ ಸಂಕಷ್ಟಗಳು ಚುನಾವಣೆಯ ಮೇಲೆ ಪರಿಣಾಮ ಬೀರದಂತೆ ದೇಶಭಕ್ತಿ, ರಾಷ್ಟ್ರೀಯತೆ ಮುಂತಾದ ವಿಷಯಗಳನ್ನು ವ್ಯವಸ್ಥಿತವಾಗಿ ಮುನ್ನೆಲೆಗೆ ತಂದಿದ್ದು ಮೋದಿಯವರು ಗೆಲ್ಲಲು ಕಾರಣವಾಯ್ತೆಂದು ನಮಗೆ ಗೊತ್ತಿದೆ. ಜೊತೆಗೆ , ಈ ಎಲ್ಲಾ ಸಂಕಷ್ಟಗಳಿಗೆ ಪರಿಹಾರ ಕೊಡುವಂತವರು ವಿರೋಧ ಪಕ್ಷಗಳಲ್ಲಿ ಯಾರೂ ಇಲ್ಲ, ಹಾಗಾಗಿ ಮೋದಿಗೇ ಮತ್ತೊಂದು ಚಾನ್ಸ್ ಕೊಡುವುದೇ ಸರಿ ಎಂಬ ಭಾವನೆಯನ್ನು ಜನಗಳಲ್ಲಿ ವ್ಯವಸ್ಥಿತವಾಗಿ ( ತಮ್ಮೆಲ್ಲಾ ಸಂಘಟನಾತ್ಮಕ ಮತ್ತು ಮೀಡಿಯಾ ಶಕ್ತಿಗಳನ್ನು ಬಳಸಿ) ಮೂಡಿಸಿದ್ದು ಮುಖ್ಯವಾಗಿ ಮೋದಿಯವರು ಗೆಲ್ಲಲು ಕಾರಣವಾಗಿರುವ ವಿಷಯ ಈಗಂತೂ ಬಹುತೇಕರಿಗೆ ಮನದಟ್ಟಾಗಿದೆ.

ಹೌದು, ಈಗ ಮೋದಿಯವರು ಮತ್ತೊಂದು ಅವಧಿಗೆ ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ ಹಾಗೂ ಮೊದಲ ಅವಧಿಯಲ್ಲಿ ಅವರ ಮುಂದೆ ಏನು ನಿಜವಾದ ಸವಾಲು ಇತ್ತೋ, ಈ ಅವಧಿಗೂ ಅದೇ ಸವಾಲು ಮತ್ತಷ್ಟು ಕ್ಲಿಷ್ಟಕರವಾಗಿ ಅವರ ಮುಂದೆ ಮತ್ತು ದೇಶದ ಮುಂದೆ ನಿಂತಿದೆ. ಮೊದಲ ಅವಧಿಯ ಶುರುವಿನಲ್ಲಿ ಜಾಗತಿಕ ಆರ್ಥಿಕತೆಯ ಚೇತರಿಕೆ ಮತ್ತು ತೈಲೋತ್ಪನ್ನಗಳ ಬೆಲೆಕುಸಿತದಿಂದಾಗಿ ಮೋದಿಯವರಿಗೆ ಅನುಕೂಲಕರ ವಾತಾವರಣ ಇತ್ತು. ಆದರೆ, ಡಿಮಾನೆಟೈಸೇಷನ್ ಮತ್ತು ತರಾತುರಿಯ ಜಿಎಸ್ಟಿಯಿಂದಾಗಿ ಭಾರತದ ಆರ್ಥಿಕ ಬೆಳವಣಿಗೆಯ ವೇಗಕ್ಕೆ ಮೋದಿಯವರೇ ಬ್ರೇಕ್ ಹಾಕಿದ್ದು ಈಗ ಇತಿಹಾಸದ ಪಾಠ. ಡಿಮಾನೆಟೈಸೇಷನ್ನಿಂದ ಪ್ರಾರಂಭವಾದ ದೇಶದ ಆರ್ಥಿಕ ಹಿಂಜರಿತ ಮೋದಿಯವರ ಮತ್ತೊಂದು ಅವಧಿಯ ಶುರುವಿನಲ್ಲಿ ಯಾವ ಸ್ಥಿತಿಯಲ್ಲಿದೆ ಮತ್ತು ಈ ಸವಾಲನ್ನು ಎದುರಿಸಲು ಮೋದಿಯವರ ಯೋಜನೆಗಳೇನಿರಬಹುದು ಎಂದು ನೋಡೋಣ.

1) ಕಡೆಯ ಜನವರಿ -ಮಾರ್ಚ್ 2018-2019 ತ್ರೈಮಾಸಿಕದಲ್ಲಿ ನಮ್ಮ ದೇಶದ ಜಿಡಿಪಿ ಬೆಳವಣಿಗೆ ಕೇವಲ 5.8% ರಷ್ಟಿದೆ. ಇದು ಕಡೆಯ ಐದು ವರ್ಷಗಳಲ್ಲೆ ಅತೀ ಕಡಿಮೆ ಜಿಡಿಪಿ ಬೆಳವಣಿಗೆಯಾಗಿದೆ.

2) IIP (Index of industrial production) ಅಂದರೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ಫೆಬ್ರವರಿಯಲ್ಲಿ ಕೇವಲ 0.1% ರಷ್ಟು ಬೆಳವಣಿಗೆಯಾಗಿದ್ದರೆ, ಮಾರ್ಚಿಯಲ್ಲಿ -0.1% ರಷ್ಟು ಕೆಳಗಿಳಿದಿದೆ.

3) ಬಂಡವಾಳ ಸರಕುಗಳ ಉತ್ಪಾದನೆಯ ವೇಗ ಫೆಬ್ರವರಿಯಲ್ಲಿ 8.8% ರಷ್ಟು ಮತ್ತು ಮಾರ್ಚಿಯಲ್ಲಿ 8.7% ರಷ್ಟು ಕೆಳಗಿಳಿದಿದೆ.

4) ಜನಗಳ ಸಂಪಾದನೆಯ ವೇಗ ತಗ್ಗಿರುವುದರಿಂದ ಖಾಸಗಿ ಬಳಕೆಯ ಪ್ರಮಾಣವೂ ಅಪಾರ ಪ್ರಮಾಣದಲ್ಲಿ ತಗ್ಗಿದ್ದು, ದಿನಬಳಕೆಯ ವಸ್ತುಗಳಾದ ಸೋಪು, ಪೇಸ್ಟು, ಎಣ್ಣೆ ಇತ್ಯಾದಿಗಳ ವ್ಯಾಪಾರವೂ ಕಡಿಮೆಯಾಗಿದ್ದು ದೊಡ್ಡ ಈಒಅಉ FMCG ( fast moving consumer goods) ಕಂಪನಿಗಳಾದ ಯೂನಿಲಿವರ್, ಡಾಬರ್ ಗಳಂತವು ಇದನ್ನು ದೃಢೀಕರಿಸಿವೆ.
ಜೊತೆಗೆ, ಸ್ಕೂಟರ್, ಕಾರುಗಳು ಮತ್ತು ಟ್ರಾಕ್ಟರುಗಳ ವ್ಯಾಪಾರವೂ ಕಡಿಮೆಯಾಗಿದ್ದು ದೊಡ್ಡ ಆಟೋಮೊಬೈಲ್ ಕಂಪನಿಗಳು ತಮ್ಮ ಉತ್ಪಾದನೆಯನ್ನು ಕಡಿತಗೊಳಿಸಿವೆ.

5) ಜಿಎಸ್ಟಿ ಮತ್ತು ಇತರ ತೆರಿಗೆ ಮೂಲಗಳಿಂದ ಸಂಗ್ರಹವಾಗಬೇಕಿದ್ದರಲ್ಲಿ ಸರ್ಕಾರ ಸುಮಾರು ಒಂದು ಲಕ್ಷಕೋಟಿಯಷ್ಟು ತನ್ನ ಗುರಿಯಿಂದ ಹಿಂದೆ ಇದೆ.
ಇದರಿಂದಾಗಿ, ಆರ್ಥಿಕತೆಯ ವೇಗ ಹೆಚ್ಚಿಸಲು ಬೇಕಾದ ಸಾರ್ವಜನಿಕ ಬಂಡವಾಳದ ಕೊರತೆಯನ್ನು ಸರ್ಕಾರ ಎದುರಿಸುತ್ತಿದೆ.

6) ಮೇಲಿನ ಕಾರಣದಿಂದಾಗಿಯೇ, ದೇಶದ ವಿತ್ತೀಯ ಕೊರತೆ ಫಿಕ್ಸ್ ಮಾಡಿದ್ದ 3.39% ದಾಟಿ ಹೋಗುತ್ತಿದೆ. ಸಾರ್ವಜನಿಕ ಉದ್ದಿಮೆಗಳಾದ ONGC, FCI ಮತ್ತಿತರ ಸಂಸ್ಥೆಗಳ ಬ್ಯಾಲೆನ್ಸ್ ಶೀಟುಗಳಲ್ಲಿ ಕಾಣುತ್ತಿರುವ ಸಾಲದ ಮೊತ್ತ ಸರ್ಕಾರದ ಸಾಲವೇ ಆಗಿದ್ದು ಇದೆಲ್ಲ ಸೇರಿಸಿದರೆ ವಿತ್ತೀಯ ಕೊರತೆ ಮತ್ತಷ್ಟು ಅಪಾಯಕಾರಿ ಮಟ್ಟದಲ್ಲಿದೆಯೆಂಬುದು ಮನದಟ್ಟಾಗುತ್ತದೆ.

7) ಮೇಲಿನ ಎಲ್ಲವುದರುಗಳ ಪರಿಣಾಮ ಮುಖ್ಯವಾಗಿ ಉದ್ಯೋಗ ಸೃಷ್ಟಿಯ ಮೇಲಾಗುತ್ತಿದೆ. ಸರ್ಕಾರ ಚುನಾವಣೆ ಮುಗಿಯುವ ತನಕ ತಡೆದು ಆಮೇಲೆ ಬಿಡುಗಡೆ ಮಾಡಿದ NSSO ವರದಿಯ ಪ್ರಕಾರವೇ, ದೇಶದಲ್ಲಿ ನಿರುದ್ಯೋಗದ ಪ್ರಮಾಣ 6.1% ರಷ್ಟಿದ್ದು ಇದು ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ. ದೇಶದಲ್ಲಿ ಉದ್ಯೋಗದಲ್ಲಿ ಭಾಗವಹಿಸುವಿಕೆಯ ಪ್ತಮಾಣ ಕೇವಲ 40% ಇದ್ದು ಇದು ಜಾಗತಿಕವಾಗಿ ಅತಿ ಕಡಿಮೆ ಮಟ್ಟದಲ್ಲಿದೆ. ಇನ್ನು ಮಹಿಳೆಯರ ವಿಷಯಕ್ಕೆ ಬಂದರೆ, ಈ ಮಟ್ಟ ಕೇವಲ 15% ರಷ್ಟಿದೆ.

8) ಮೇಲಿನವುಗಳ ಜೊತೆಗೆ ಭಾರಿ ಪ್ರಮಾಣದ NPA (ವಸೂಲಿಯಾಗದ ಸಾಲ), ರಿಯಲ್ ಎಸ್ಟೇಟ್ ಬಿಕ್ಕಟ್ಟು, ಕೆಲ ಉದ್ಯಮಗಳ ದಿವಾಳಿಯಾಗುತ್ತಿರುವಿಕೆ, ಪರೋಕ್ಷ ತೆರಿಗೆಗಳಿಂದ ಜನಸಾಮಾನ್ಯರ ಮೇಲಾಗುತ್ತಿರುವ ಒತ್ತಡ ಇವೆಲ್ಲವುಗಳು ಸೇರಿ ದೇಶದ ಆರ್ಥಿಕ ಚೇತರಿಕೆಯನ್ನು ಮತ್ತಷ್ಟು ಜಟಿಲಗೊಳಿಸಿವೆ.

ಈ ಮೇಲಿನ ಅಂಕಿಅಂಶಗಳಲ್ಲಿ ಗೊಂದಲವಿದೆ, ಮತ್ತು ದೇಶದ ಆರ್ಥಿಕ ಅಭಿವೃದ್ದಿಯ ಸ್ಥಿತಿ ಸರ್ಕಾರದ ಅಂಕಿಗಳು ತೋರಿಸುತ್ತಿರುವುದಕ್ಕಿಂತ ಕೆಟ್ಟದಾಗಿದೆ ಎಂದು ಹಲವಾರು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಆದಾಗ್ಯೂ, ಸರ್ಕಾರ ಕೊಟ್ಟಿರುವ ಅಂಕಿಅಂಶಗಳೇ ಸರಿ ಎಂದುಕೊಂಡರೂ ಈ ಅಂಕಿಅಂಶಗಳ ಪ್ರಕಾರವೂ ಕೂಡ ದೇಶದ ಆರ್ಥಿಕ ಸ್ಥಿತಿ ಬಹುಕಷ್ಟದ ಪರಿಸ್ಥಿತಿಯಲ್ಲಿದೆ.

ಈ ಮಧ್ಯೆ ಪ್ರಧಾನಿ ಮೋದಿಯವರು ಸಂಸತ್ತಿನಲ್ಲಿ ಭಾಷಣ ಮಾಡುತ್ತ, 2024 ರ ವೇಳೆಗೆ ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವ ಬಹುತೇಕ ಅಸಾಧ್ಯ ಗುರಿಯ ಮಾತನ್ನಾಡಿದ್ದಾರೆ.

ಈ ಜಿಡಿಪಿ ಕೇಂದ್ರಿತ ಬೆಳವಣಿಗೆಯ ಬಗ್ಗೆ ಕೆಲವು ಗಂಭೀರ ತಕರಾರುಗಳಿದ್ದಾಗ್ಯೂ ಕೂಡ ಮೋದಿಯವರು ಹೇಳಿರುವ ಮಟ್ಟಿಗಿನ ಆರ್ಥಿಕ ಬೆಳವಣಿಗೆ ಕಾರ್ಯಸಾಧುವೆ? ಹಾಗಿದ್ದರೆ ಅದಕ್ಕೆ ಮೋದಿಯವರ ಮಾರ್ಗಗಳೇನು?

ದೇಶವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವ ಮಾರ್ಗಗಳ ಬಗ್ಗೆ ಮೋದಿಯವರು ಭಾಷಣದಲ್ಲಿ ವಿವರವಾಗಿ ಹೇಳದಿದ್ದರೂ, ಅವರ ಕೆಲ ಭಾಷಣಗಳಲ್ಲಿ, ಪಕ್ಷದ ಪ್ರಣಾಳಿಕೆಯಲ್ಲಿ, ನೀತಿ ಆಯೋಗ ಮತ್ತು ಆರ್ ಬಿ ಐ ನ ಕೆಲ ನೀತಿ ನಿರ್ಧಾರಗಳಲ್ಲಿ ಈ ಬಗ್ಗೆ ಸ್ಪಷ್ಟ ಸೂಚನೆಗಳಿವೆ.
ಅವುಗಳೆಂದರೆ, 1) ಬ್ಯಾಂಕುಗಳಿಗೆ ಸರ್ಕಾರದಿಂದ ಹೆಚ್ಚು ಹಣ ಪೂರೈಸುವುದು, ತನ್ಮೂಲಕ ಇಂಡಸ್ಟ್ರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲಸಿಗುವಂತೆ ಮಾಡುವುದು.

ಅದನ್ನು ಬಂಡವಾಳವಾಗಿ ಕಂಪನಿಗಳು ತೊಡಗಿಸಿ ಉತ್ಪಾದನೆಯ ಹೆಚ್ಚಳ ಮಾಡುವ ಸಾಧ್ಯತೆಯಿದೆ.
2) Labour reforms, ಅಂದರೆ ಕಾರ್ಮಿಕ ಕಾನೂನುಗಳ ಸುಧಾರಣೆ ಮಾಡುವುದು. ಅದರ ಮೂಲಕ ಕಂಪನಿಗಳು ಕಾರ್ಮಿಕರನ್ನು ನೇಮಿಸಿಕೊಳುವ ಮತ್ತು ತೆಗೆಯುವ ಪ್ರಕ್ರಿಯೆ ಸುಲಭವಾಗಿಸುವುದು. ಹಾಗೂ, ಕಾರ್ಮಿಕರ ಮೂಲಕ ಕಂಪನಿಯ ಮೇಲಾಗುವ ಯಾವುದೇ ರೀತಿಯ ಹೊರೆ ತಗ್ಗಿಸುವುದು. ಇದರಿಂದ ಜನಸಾಮಾನ್ಯರಿಗೆ ಭಾರೀ ಕಷ್ಟವಾದರೂ ಕಂಪನಿಗಳ ಆರ್ಥಿಕ ಲಾಭ ಹೆಚ್ಚಾಗುತ್ತದೆ.
ಹಾಗಾಗಿ ಕಂಪನಿಗಳು ಹೆಚ್ಚು ಬಂಡವಾಳ ಹೂಡಲು ಉತ್ಸುಕತೆ ತೋರಿಸುತ್ತವೆ.

3) Land reforms, ಹೊಸ ಭೂಸುಧಾರಣಾ ಕಾಯ್ದೆಯ ಮೂಲಕ ಯಾವುದೇ ರೀತಿಯ ಭೂಮಿ ಕಂಪನಿಗಳಿಗೆ ಸುಲಭವಾಗಿ ಸಿಗುವಂತೆ ಮಾಡುವುದು. ಅಂದರೆ, ಅರಣ್ಯ, ಖನಿಜ, ನದಿ, ವ್ಯವಸಾಯ ಯೋಗ್ಯ ಭೂಮಿ, ಹೀಗೆ ಯಾವುದೇ ನೈಸರ್ಗಿಕ ಸಂಪತ್ತು ಕಂಪನಿಗಳಿಗೆ ಸುಲಭವಾಗಿ ಸಿಗುವಂತೆ ಮಾಡುವುದು.

4) ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಂಪನಿಗಳಿಗೆ ಇನ್ನೂ ಹೆಚ್ಚಿನ ಆರ್ಥಿಕ ಬೆಂಬಲ ( economic bail out) ನೀಡಿ ಅವುಗಳು ಚೇತರಿಸಿಕೊಳ್ಳಲು ಸಹಾಯ ಮಾಡುವುದು.

5) ತೆರಿಗೆ ರದ್ದು, ಕಡಿಮೆ ಬಡ್ಡಿ ದರ ಸೇರಿದಂತೆ ಇನ್ನೂ ಹಲವು ಹೆಚ್ಚಿನ ಅನುಕೂಲಗಳನ್ನು ಕೊಟ್ಟು ವಿಶೇಷ ಆರ್ಥಿಕ ವಲಯಗಳನ್ನು ಹೆಚ್ಚೆಚ್ಚು ಸೃಷ್ಟಿಸಿ ಹೆಚ್ಚಿನ ಬಂಡವಾಳ ಆಕರ್ಷಿಸುವುದು.

6) ಜೊತೆಗೆ ಸರ್ಕಾರವೂ ಒಂದು ಲಕ್ಷ ಕೋಟಿಯಷ್ಟು ಇನ್ಫಾಸ್ಟ್ರಕ್ಚರ್ ಮೇಲೆ ಬಂಡವಾಳ ಹೂಡಿ ಆರ್ಥಿಕ ಬೆಳವಣಿಗೆಯ ವೇಗ ವೃದ್ದಿ ಮಾಡುವುದು.

ಆದರೆ, ದೇಶದ ಆರ್ಥಿಕ ಬೆಳವಣಿಗೆಯ ಬಗ್ಗೆ ಅಲ್ಪಸ್ವಲ್ಪ ಓದಿಕೊಂಡು ಬಂದಿರುವ ಯಾರಿಗೇ ಆದರೂ ಒಂದು ವಿಷಯ ಸ್ಪಷ್ಟವಾಗಿ ಅರ್ಥ ಆಗುವ ವಿಷಯ ಒಂದಿದೆ. ಅದೆಂದರೆ, ದೇಶದ ಹಳ್ಳ ಹಿಡಿದಿರುವ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರಲು ಮೋದಿ ಸರ್ಕಾರ ತೆಗೆದುಕೊಳ್ಳಲು ಹೊರಟಿರುವ ಕ್ರಮಗಳನ್ನೇ 1992 ರ ಉದಾರೀಕರಣ ನೀತಿಯ ನಂತರದ ಎಲ್ಲ ಸರ್ಕಾರಗಳೂ ತೆಗೆದುಕೊಂಡಿವೆ. 2008 ರ ಜಾಗತಿಕ ಆರ್ಥಿಕ ಹಿಂಜರಿತದಿಂದ ಹೊರಬರಲು ಮನಮೋಹನ್ ಸಿಂಗ್ ಕೂಡ ಇಂತಹುದೇ ಕ್ರಮಗಳನ್ನು ಕೈಗೊಂಡಿದ್ದರು.
2014 ರಿಂದ ಮೋದಿ ಸರ್ಕಾರ ಕೂಡ ಇದೇ ಕ್ರಮಗಳನ್ನು ಮನಮೋಹನರಿಗಿಂತ ತೀವ್ರವಾಗಿ ಕೈಗೊಂಡಿತ್ತು.

ಆದಾಗ್ಯು, 2018 ರಲ್ಲಿ ದೇಶಕ್ಕೆ ಹರಿದ ಬಂಡವಾಳ ಕೇವಲ 9.5 ಲಕ್ಷ ಕೋಟಿಯಷ್ಟು ಮಾತ್ರ. ಅದರಲ್ಲಿ ಖಾಸಗಿಯವರ ಪಾಲು ಕೇವಲ 45% ರಷ್ಟು (ಸಾಮಾನ್ಯವಾಗಿ ಖಾಸಗಿಯವರ ಪಾಲು ಶೇ 60 ರಷ್ಟಿರುತ್ತದೆ). ಅಂದರೆ, ಈ ರೀತಿಯ ಆರ್ಥಿಕ ನೀತಿಗಳು ದೇಶದ ಸರ್ವತೋಮುಖ ಅಭಿವೃಧಿಯಿರಲಿ, ಬೇಕಿರುವಷ್ಟು ಜಿಡಿಪಿ ಕೇಂದ್ರಿತ ಅಭಿವೃದ್ದಿಯನ್ನು ಕೂಡ ದೀರ್ಘಕಾಲದಲ್ಲಿ ಮಾಡಲಾರವು ಎಂಬುದು ಮೋದಿಯವರ ಮೊದಲ ಅವಧಿಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಆದಾಗ್ಯೂ, ಆರ್ಥಿಕ ನೀತಿನಿಯಮಗಳಲ್ಲಿ ಕೆಲ ಮೂಲಭೂತ ಬದಲಾವಣೆಗಳಿಲ್ಲದೆ ಈಗಿನ ಭೀಕರ ನಿರುದ್ಯೋಗ ಬೆಳವಣಿಗೆಯ ಸ್ಥಿತಿಗೆ ಕಾರಣವಾಗಿರುವ ಆರ್ಥಿಕ ನೀತಿಗಳನ್ನೆ ಮತ್ತಷ್ಟು ತೀವ್ರವಾಗಿ ಜಾರಿ ಮಾಡಲು ಮೋದಿ ಸರ್ಕಾರ ಹೊರಟಿರುವುದು ಮೇಲ್ನೋಟದಲ್ಲಿಯಾದರೂ ಸ್ಪಷ್ಟವಾಗಿ ಕಾಣಿಸುತ್ತಿದೆ.

ಆದುದರಿಂದ ದೇಶದ ಸರ್ವತೋಮುಖ ಆರ್ಥಿಕ ಪ್ರಗತಿಯಿರಲಿ ಮೋದಿಯವರ ಕನಸಾದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯೂ ಮೇಲ್ನೋಟಕ್ಕೆ ಕಾರ್ಯಸಾಧುವಾಗಿ ಕಾಣುತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...