HomeUncategorizedಇವಿಎಂ ಚರ್ಚೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕಿದೆ

ಇವಿಎಂ ಚರ್ಚೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕಿದೆ

- Advertisement -
- Advertisement -

| ಯೋಗೇಂದ್ರ ಯಾದವ್‍ |

ಕನ್ನಡಕ್ಕೆ : ರಾಜಶೇಖರ್ ಅಕ್ಕಿ

ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಚುನಾವಣೆಯ ಸಮಯದಲ್ಲಿ ಇವಿಎಮ್ ಚರ್ಚೆಗೆ ಮುಕ್ತಾಯ ನೀಡಲು ಸುಪ್ರೀಮ್ ಕೋರ್ಟಿನ ಹಸ್ತಕ್ಷೇಪದಿಂದ ಒಂದು ಒಳ್ಳೆಯ ಅವಕಾಶ ಒದಗಿಬಂದಿದೆ. ನಮಗೆ ಬೇಕಾಗಿರುವುದು ಇಷ್ಟೆ, ಚುನಾವಣಾ ಆಯೋಗ ತಾನು ಪಟ್ಟುಹಿಡಿದ ನಿಲುವನ್ನು ಸಡಿಲಗೊಳಿಸಬೇಕು.
ಇವಿಎಮ್ ಬಗ್ಗೆಯ ಚರ್ಚೆ ಅನವಶ್ಯಕ ಹಾಗೂ ಹಾನಿಕಾರಕ ಎಂದು ನಾನು ಕೆಲಸಮಯದಿಂದ ವಾದಿಸುತ್ತಲೇ ಬಂದಿದ್ದೇನೆ. ಇವಿಎಮ್‍ಗಳನ್ನು ಬಿಟ್ಟುಕೊಡುವ ಬದಲಾಗಿ, ಈ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ಜನರ ವಿಶ್ವಾಸವನ್ನು ಹೆಚ್ಚಿಸಲು ಸದ್ಯಕ್ಕೆ ಬಳಸಲಾಗುತ್ತಿರುವ ವಿಧಾನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ನಾನು ಸೂಚಿಸಿದ್ದೆ.
ಒಂದು, ಇವಿಎಮ್‍ಗಳನ್ನು ನಿಯೋಜಿಸುವುದಕ್ಕೂ ಮುಂಚೆ ರಾಜಕೀಯ ಪಕ್ಷಗಳಿಗೆ ಅವುಗಳನ್ನು ಪರೀಕ್ಷಿಸಲು ಅನುವು ಮಾಡಿಕೊಡಬೇಕು. ಎರಡು, ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ಇವಿಎಮ್‍ಗಳನ್ನು ಬೇರೆ ಬೇರೆ ಕ್ಷೇತ್ರಗಳಿಗೆ ಯಾದೃಚ್ಛಿಕವಾಗಿ(ರ್ಯಾಂಡಮ್ ಆಗಿ) ನಿಗದಿ ಮಾಡಬೇಕು. ಮೂರು, ತಾವು ಮತ ಹಾಕಿದ ಪಕ್ಷಕ್ಕೆ ಪೇಪರ್ ಸ್ಲಿಪ್‍ಗಳು ಹೋಲಿಕೆಯಾಗದಿದ್ದಲ್ಲಿ ಆ ಮತದಾರರಿಗೆ ತಮ್ಮ ದೂರನ್ನು ನೀಡಲು ಅನುವು ಮಾಡಿಕೊಡಬೇಕು. ನಾಲ್ಕು, ಯಾವುದೇ ಇವಿಎಮ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಅದನ್ನು ಮೂವತ್ತು ನಿಮಿಷಗಳಲ್ಲಿ ಬದಲಾಯಿಸಬೇಕು. ಹಾಗೂ ಐದು, ಪ್ರತಿ ಅಸೆಂಬ್ಲಿ ಕ್ಷೇತ್ರಕ್ಕೆ ಒಂದು ಬೂತ್‍ನ ವಿವಿಪ್ಯಾಟ್‍ನ ಆಡಿಟ್ ಮಾಡುವ ಸದ್ಯದ ಈ ಆಚರಣೆಯನ್ನು 14 ಬೂತ್‍ಗಳಿಗೆ ಹೆಚ್ಚಿಸಬೇಕು.
ನನ್ನ ಈ ಸಲಹೆಗಳಿಗೆ ಚುನಾವಣಾ ಆಯೋಗದ ಕಾರ್ಯದರ್ಶಿಯು ಪ್ರತಿಕ್ರಿಯೆ ನೀಡಿದ್ದರಿಂದ ನನಗೆ ಆಶ್ಚರ್ಯದೊಂದಿಗೆ ಸಂತೋಷವೂ ಆಯಿತು. ನನ್ನ ಮೊದಲ ಮೂರು ಸಲಹೆಗಳು ಚುನಾವಣಾ ನಿಯಮಗಳ ಭಾಗವಾಗಿವೆ ಮತ್ತು ಅವುಗಳನ್ನು ಪಾಲಿಸಲಾಗುತ್ತಿದೆ ಎಂದು ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದ್ದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಎಲ್ಲಾ ಇವಿಎಮ್‍ಗಳನ್ನು ಮೊದಲ ಹಂತದಲ್ಲಿ ಪರೀಕ್ಷಿಸುವ ಆಚರಣೆ ಚಾಲ್ತಿಯಲ್ಲಿದೆ. ಇವಿಎಮ್‍ಗಳನ್ನು ಎರಡು ಹಂತದಲ್ಲಿ ಯಾದೃಚ್ಛಿಕವಾಗಿ (ರ್ಯಾಂಡಮ್) ನಿಯೋಜಿಸಲು ಒಂದು ವಿಧಾನ ಚಾಲ್ತಿಯಲ್ಲಿದೆ ಹಾಗೂ ಈ ಪ್ರಕ್ರಿಯೆಯನ್ನು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿಯೇ ನಡೆಸಿಕೊಡಲಾಗುತ್ತದೆ.
ಮತದಾರ ತಾನು ಮತಹಾಕಿದ ಪಕ್ಷ ಮತ್ತು ಪೇಪರ್ ಸ್ಲಿಪ್‍ಗಳು ಹೊಂದಾಣಿಕೆ\ ಆಗುತ್ತಿಲ್ಲ ಎಂದು ಸಂಶಯ ಪಟ್ಟಲ್ಲಿ ಆ ಮತದಾರರು ತಮ್ಮ ಆಕ್ಷೇಪಣೆಯನ್ನು ದಾಖಲಿಸಲು (ಚುನಾವಣಾ ನಿಯಮಗಳ ನಡವಳಿಕೆಯ ನಿಯಮ 49 ಎಮ್‍ಏ, 1961) ಅವಕಾಶ ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ, ಆ ಮತಗಟ್ಟೆಯ ಅಧ್ಯಕ್ಷೀಯ ಅಧಿಕಾರಿ ಒಂದು ವಿಶೇಷ `ಟೆಸ್ಟ್ ವೋಟ್’ ಹಾಕಲು ಆದೇಶಿಸಬಹುದಾಗಿದೆ. ಅಲ್ಲಿಯೂ ಹೊಂದಾಣಿಕೆ ಆಗದಿದ್ದಲ್ಲಿ ಆ ಮತಗಟ್ಟೆಯಲ್ಲಿ ಮತದಾನ ನಿಲ್ಲಿಸಬೇಕಾಗುತ್ತದೆ. ಸದ್ಯಕ್ಕೆ ಕಾರ್ಯನಿರತವಾಗಿರುವ ಒಬ್ಬ ಅಧಿಕಾರಿಯು ನನಗೆ ಒಂದು ವಿವರವಾದ ಪ್ರತಿಕ್ರಿಯೆಯನ್ನು ನೀಡಿ ನನ್ನ ಅನೇಕ ಸಂಶಯಗಳನ್ನು ದೂರಮಾಡಿದರು. ಈಗ ಉಳಿಯುವುದು ಒಂದು ಮಾತ್ರ: ವಿವಿಪ್ಯಾಟ್‍ನ ಆಡಿಟ್‍ನ ಪ್ರಕ್ರಿಯೆ ಮತ್ತು ಸಂಖ್ಯೆ.
ಇದಕ್ಕೆ ಸ್ವಲ್ಪ ವಿವರಣೆಯ ಅವಶ್ಯಕತೆ ಇದೆ. ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್ (ವಿವಿಪಿಏಟಿ) ಗಳನ್ನು ಫ್ರಾರಂಭಿಸಿರುವುದರಿಂದ ಈಗ ಪ್ರತಿ ಮತಗಟ್ಟೆಯ ಮತಗಳನ್ನು ಎಣಿಸಲು ಎರಡು ಸ್ವತಂತ್ರ ವಿಧಾನಗಳಿವೆ.


ಒಂದು ಇವಿಎಮ್‍ನ ಪ್ರದರ್ಶನ ಫಲಕ, ಒಂದು ಬಟನ್ ಒತ್ತಿದೊಡನೆ, ಪ್ರತಿಯೊಂದು ಅಭ್ಯರ್ಥಿ ಪಡೆದ ಮತಗಳು ಆ ಫಲಕದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗೂ ವಿವಿಪ್ಯಾಟ್‍ಗಳಿಂದ ಬಂದ ಪೇಪರ್ ಸ್ಲಿಪ್‍ಗಳು, ಮತಚಲಾಯಿಸಿದ ನಂತರ ಅವುಗಳು ಸೀಲ್ ಮಾಡಲಾದ ಒಂದು ಪೆಟ್ಟಿಗೆಯೊಳಗೆ ಹೋಗುತ್ತವೆ. ಆ ಪೆಟ್ಟಿಗೆಗಳನ್ನು ತೆಗೆದು ಅಲ್ಲಿರುವ ಪೇಪರ್ ಸ್ಲಿಪ್‍ಗಳನ್ನು ಕೈಯಾರೆ ಎಣಿಸುವುದು ಇನ್ನೊಂದು ವಿಧಾನ. ಈ ವಿವಿಪ್ಯಾಟ್‍ಗಳನ್ನು ಪ್ರಾರಂಭಿಸಲು ಇದ್ದ ಒಂದೇ ಕಾರಣ; ಮತದಾರರು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಹೆಚ್ಚಿನ ವಿಶ್ವಾಸ ಮೂಡಿಸುವುದು. ಇವಿಎಮ್‍ಗಳನ್ನು ಈಗ `ವಿವಿಪ್ಯಾಟ್’ ಆಡಿಟ್‍ಗೆ ಒಳಪಡಿಸಬಹುದು, ಅಂದರೆ, ಪ್ರತಿಯೊಬ್ಬ ಅಭ್ಯರ್ಥಿ ಪಡೆದ ಮತಗಳನ್ನು, ಇವಿಎಮ್‍ನ ಫಲಕದಲ್ಲಿ ಕಾಣಿಸುವ ಸಂಖ್ಯೆಯನ್ನು ಪೇಪರ್ ಸ್ಲಿಪ್‍ಗಳನ್ನು ಕೈಯಾರೆ ಎಣಿಸುವುದರಿಂದ ತಾಳೆ ಹಾಕುವುದು. ಆದರೆ, ಸದ್ಯಕ್ಕೆ ನ್ಯಾಯಾಲಯಗಳು ಮಾತ್ರ ಈ ತಾಳೆ ಮಾಡುವ ಪ್ರಕ್ರಿಯೆಯನ್ನು ಮಾಡಬಹುದಾಗಿದೆ. ಇದು ಎಲ್ಲಾ ಸಂಶಯ ಮತ್ತು ವಿವಾದಗಳನ್ನು ನಿವಾರಿಸಬಹುದಾಗಿದೆ. ಆದರೆ, ಈ ಸಾಧ್ಯತೆಯನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಮತಎಣಿಕೆ ಆದ ನಂತರ ಬರೀ ಒಂದು ಮತಗಟ್ಟೆಯನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಿ, ಈ ವಿವಿಪ್ಯಾಟ್‍ನ ಆಡಿಟ್ ಅನ್ನು ಮಾಡಬಹುದು ಎಂದು ಚುನಾವಣಾ ಆಯೋಗ ಹೇಳುತ್ತದೆ. ಅಲ್ಲಿ ಇನ್ನೊಂದು ನಿಯಮವೂ ಇದೆ, ಮತಎಣಿಕೆಯ ನಂತರ ಹಾಗೂ ಫಲಿತಾಂಶ ಪ್ರಕಟಣೆಯ ಮುಂಚೆ ಯಾವುದೇ ಅಭ್ಯರ್ಥಿ ಆ ಕ್ಷೇತ್ರದ ಯಾವುದೇ ಮತಗಟ್ಟೆಯಲ್ಲಿ ಅಥವಾ ಎಲ್ಲಾ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಆಡಿಟ್ ಮಾಡಲು ವಿನಂತಿ ಮಾಡಬಹುದು. ಆದರೆ, ಆ ಆಡಿಟ್ ಮಾಡಬೇಕೋ ಇಲ್ಲವೋ ಎನ್ನುವ ನಿರ್ಣಯ ಅಲ್ಲಿಯ ರಿಟರ್ನಿಂಗ್ ಅಧಿಕಾರಿಯ ವಿವೇಚನೆಗೆ ಬಿಟ್ಟಿದ್ದು. ಹಾಗಾಗಿ, ವಿವಿಪ್ಯಾಟ್ ಆಡಿಟ್‍ನ ಪ್ರಕ್ರಿಯೆ ಮತ್ತು ಸಂಖ್ಯೆ ಈ ಸಮಸ್ಯೆಯ ಮೂಲವಾಗಿದೆ.
ಕಳೆದ ಎರಡು ತಿಂಗಳಲ್ಲಿ ಎಲ್ಲಾ ಕಡೆಗಳಿಂದ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿವೆ. ಪ್ರತಿಪಕ್ಷಗಳು ಇವಿಎಮ್ ಬಗ್ಗೆ ತಮಗಿದ್ದ ಸಿನಿಕತೆಯನ್ನು ಬದಿಗಿಟ್ಟಿವೆ ಮತ್ತು ಪೇಪರ್ ಮತಪತ್ರಕ್ಕೆ ಮರಳುವ ಬೇಡಿಕೆಯನ್ನೂ ಕೈಬಿಟ್ಟಿವೆ. ಸುಪ್ರೀಮ್ ಕೋರ್ಟಿಗೆ ಎಲ್ಲಾ ಪ್ರಮುಖ ಪಕ್ಷಗಳು ಸೇರಿ ಸಲ್ಲಿಸಿರುವ ಅರ್ಜಿಯನ್ನು ನೋಡಿದರೆ ಇವಿಎಮ್ ಬಗ್ಗೆ ಎಲ್ಲರೂ ಒಂದೇ ತಿಳುವಳಿಕೆ ಹೊಂದಿರುವುದು ಸ್ಪಷ್ಟವಾಗುತ್ತದೆ. ಪ್ರತೀ ಕ್ಷೇತ್ರದಲ್ಲಿಯ ಅರ್ಧದಷ್ಟು ಮತಗಟ್ಟೆಗಳಲ್ಲಿ (50%) ವಿವಿಪ್ಯಾಟ್ ಆಡಿಟ್ ಆಗಬೇಕೆಂದು ಬೇಡಿಕೆಯನ್ನಿಟ್ಟಿದ್ದಾರೆ. ನಿವೃತ್ತ ಅಧಿಕಾರಿಗಳ ಗುಂಪೆದು ಈ ವಿಷಯದ ಆಳಕ್ಕೆ ಒತ್ತುಕೊಟ್ಟು ಒಂದು ಅತ್ಯಂತ ವಿವೇಚನೆಯುಳ್ಳ ಅರ್ಜಿಯನ್ನು ಬರೆದಿದ್ದಾರೆ; ಇವಿಎಮ್ ವರ್ಸಸ್ ಪೇಪರ್ ಮತಪತ್ರ ಎನ್ನುವುದು ವಿಷಯವಲ್ಲ, ನಿಜವಾದ ವಿಷಯವಿರುವುದು ಪರ್ಯಾಪ್ತ ಆಡಿಟ್ ಇಲ್ಲದ ವಿವಿಪ್ಯಾಟ್ ಮತ್ತು ಅವಶ್ಯಕತೆ ಇದ್ದಷ್ಟು ಆಡಿಟ್‍ನೊಂದಿಗಿರುವ ವಿವಿಪ್ಯಾಟ್. ಚುನಾವಣಾ ಆಯೋಗ ಒಂದು ಹಠಮಾರಿ ನಿಲುವನ್ನು ತೆಗೆದುಕೊಂಡು ಒಂದು ಕ್ಷೇತ್ರದಲ್ಲಿ ಒಂದೇ ಮತಗಟ್ಟೆಯ ವಿವಿಪ್ಯಾಟ್ ಆಡಿಟ್ ಸಾಕು ಎಂದು ಸುಪ್ರೀಮ್ ಕೋರ್ಟಿಗೆ ಹೇಳಿದೆ. ಆದರೆ ಸುಪ್ರೀಮ್ ಕೋರ್ಟ್ ಈ ವಾದದಿಂದ ಸಂತುಷ್ಟವಾಗಿಲ್ಲ. ಹಾಗಾಗಿ 28ರ ಮಾರ್ಚ್ ಒಳಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಪ್ಯಾಟ್ ಆಡಿಟ್ ಮಾಡುವ ಪ್ರಸ್ತಾಪವನ್ನು ಒಂದು ಅಫಿಡವಿಟ್ ಮೂಲಕ ನೀಡುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. 1ನೇ ಎಪ್ರಿಲ್‍ರಂದು ಈ ಪ್ರಕರಣ ನ್ಯಾಯಾಲಯದೆದುರಿಗೆ ಬರಲಿದೆ.
ಈ ವಿವಾದವನ್ನು ಸುಲಭವಾಗಿ ನಿವಾರಿಸಬಹುದು ಎನ್ನುವುದು ನನ್ನ ಅನಿಸಿಕೆ. ಒಂದು ಕ್ಷೇತ್ರಕ್ಕೆ ಒಂದೇ ಮತಗಟ್ಟೆಯಲ್ಲಿ ವಿವಿಪ್ಯಾಟ್ ಆಡಿಟ್ ಸಾಕು ಎನ್ನುವ ಚುನಾವಣಾ ಆಯೋಗದ ಪಟ್ಟು ಈ ಆಡಿಟ್‍ನ ಪ್ರಕ್ರಿಯೆನ್ನು ಸಂಶಯಕ್ಕೆ ಎಡೆಮಾಡಿಕೊಡುತ್ತದೆ ಹಾಗೂ ಆಯೋಗದ ಅಸಡ್ಡೆಯನ್ನು ತೋರಿಸುತ್ತದೆ. ದೇಶಾದ್ಯಂತ ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ಕೇವಲ 497 ಮತಗಟ್ಟೆಗಳಲ್ಲಿ ವಿವಪ್ಯಾಟ್ ಆಡಿಟ್ ಮಾಡಬೇಕೆಂದು ಹೆಸರಾಂತ ಸಂಖ್ಯಾಶಾಸ್ತ್ರಜ್ಞರ ಸಮಿತಿಯು ಸೂಚಿಸಿತ್ತು. ಚುನಾವಣಾ ಆಯೋಗ ಈ ವರದಿಯನ್ನೇ ನೆಚ್ಚಿಕೊಂಡಂತಿದೆ. ಆ ತಜ್ಞರು ತಪ್ಪೇನೂ ಹೇಳಿಲ್ಲ. ಈವಿಎಮ್ ಎಣಿಕೆಯ ವಿಶ್ವಾಸಾರ್ಹತೆಯನ್ನು ಸಮಗ್ರವಾಗಿ ಪರೀಕ್ಷಿಸಲು ಇಂತಹ ಸಣ್ಣ ಮಾದರಿ ಸೂಕ್ತವಾಗಿದೆ. ಆದರೆ, ಇಲ್ಲಿರುವುದು ಕಾರ್ಯನಿರ್ವಹಣೆಯ ಪ್ರಶ್ನೆಯಲ್ಲ. ಈಗ ಅವಶ್ಯಕತೆ ಇರುವುದು ಪ್ರತಿಯೊಂದು ಕ್ಷೇತ್ರದ ವ್ಯವಸ್ಥೆಯನ್ನು ಪರೀಕ್ಷಿಸುವುದು ಹಾಗೂ ಇದು ಬರೀ ಅಂಕಿಅಂಶಗಳ ಮಾನದಂಡಗಳ ಪ್ರಶ್ನೆಯಾಗಿರದೇ ಜನತೆಯ ವಿಶ್ವಾಸವನ್ನು ಹೆಚ್ಚಿಸುವ ವಿಷಯವಾಗಿದೆ. ಚುನಾವಣಾ ಆಯೋಗದ ಪ್ರಸ್ತಾಪ ಇವೆರಡನ್ನೂ ಮಾಡುವುದಿಲ್ಲ.


ಇನ್ನೊಂದೆಡೆ, ಶೇಕಡಾ ಐವತ್ತು ಮತಗಟ್ಟೆಗಳಲ್ಲಿ ಆಡಿಟ್ ಮಾಡಬೇಕೆನ್ನುವ ಪ್ರತಿಪಕ್ಷಗಳ ಬೇಡಿಕೆ ಅನಗತ್ಯವಾಗಿದೆ ಹಾಗೂ ಇದರಿಂದ ಅತ್ಯಂತ ದೊಡ್ಡ ಹೊರೆ ಬೀಳಲಿದೆ. ಯಾವುದನ್ನೂ ಖಾತ್ರಿಪಡಿಸಿಕೊಳ್ಳಲು ಐವತ್ತು ಪರ್ಸೆಂಟ್ ಮಾದರಿಯ ಅವಶ್ಯಕತೆ ಇರುವುದಿಲ್ಲ. ಮತಗಟ್ಟೆಗಳ ಒಟ್ಟು ಸಂಖ್ಯೆಯ ಶೇಕಾಡಾವಾರು ಲೆಕ್ಕದಲ್ಲಿ ಮಾದರಿಗಳನ್ನು ಪರೀಕ್ಷಿಸಬೇಕಿಲ್ಲ ಎಂದು ತಜ್ಞರು ಹೇಳುತ್ತಾರೆ. ಪರೀಕ್ಷೆ ಮಾಡಿದ ಮತಗಟ್ಟೆಗಳ ನಿಜವಾದ ಸಂಖ್ಯೆ ಮುಖ್ಯವಾಗುತ್ತದೆಯೇ ಹೊರತು ಶೇಕಾಡಾವಾರು ಪ್ರಮಾಣವಲ್ಲ.
ಈ ಎರಡು ಅವಶ್ಯಕತೆಗಳನ್ನೂ ಪೂರ್ಣಗೊಳಿಸುವ, ನಾನು ಈ ಮುಂಚೆ ಹೇಳಿದ ಸಲಹೆಗಳನ್ನು ಮತ್ತೊಮ್ಮೆ ಹೇಳುತ್ತೇನೆ. ಮೊದಲನೆಯದು, ಪ್ರತೀ ಅಸೆಂಬ್ಲಿ ಕ್ಷೇತ್ರಕ್ಕೆ(ಅಥವಾ ಸಂಸದೀಯ ಕ್ಷೇತ್ರದೊಳಗಿನ ಒಂದು ಅಸೆಂಬ್ಲಿ ಘಟಕ) 14 ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಆಡಿಟ್ ಮಾಡಬೇಕು. ಈ 14 ಎನ್ನುವ ಸಂಖ್ಯೆ ಯಾವುದೇ ಜಾದೂ ಹೊಂದಿಲ್ಲ, ಅದಕ್ಕೆ ಕಾರಣವಿಷ್ಟೆ, ಪ್ರತಿಯೊಂದು ಅಸೆಂಬ್ಲಿ ಘಟಕದಲ್ಲಿ ಮತಎಣಿಕೆಯ ಸುತ್ತನ್ನು 14 ಟೇಬಲ್‍ಗಳಲ್ಲಿ ಮಾಡಲಾಗುತ್ತದೆ. ಎರಡನೆಯದಾಗಿ, ಮತಎಣಿಕೆಯ ಪ್ರಾರಂಭದಲ್ಲಿ ಆಡಿಟ್‍ಅನ್ನು ಮಾಡಬೇಕೇ ಹೊರತು ಮುಕ್ತಾಯದ ಹಂತದಲ್ಲಲ್ಲ. ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ಒಂದು ಇವಿಎಮ್ ಮತ್ತು ಅದಕ್ಕೆ ಅನುಕ್ರಮವಾದ ವಿವಿಪ್ಯಾಟ್ ತೆಗೆಯಬೇಕು ಮತ್ತು ಪ್ರತೀ 14 ಟೇಬಲ್‍ಗಳೊಂದಿಗೆ ತಾಳೆ ಹಾಕಿದ ನಂತರವೇ ಬಾಕಿ ಇವಿಎಮ್‍ಗಳ ಮತಎಣಿಕೆ ಪ್ರಾರಂಭಿಸಬೇಕು. ಇವುಗಳು ತಾಳೆ ಹೊಂದಿದಲ್ಲಿ, ಬಾಕಿ ಮತಎಣಿಕೆ ಈಗ ಮಾಡುವಂತೆ ಮಾಡಬೇಕು. ತಾಳೆ ಆಗದಿದ್ದಲ್ಲಿ, ಆ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಪೇಪರ್ ಸ್ಲಿಪ್‍ಗಳ ಎಣಿಕೆಯಾಗಬೇಕು. ಮೂರನೆಯದಾಗಿ, ಮತಎಣಿಕೆ ಮುಗಿದ ನಂತರ ಪ್ರತಿಯೊಬ್ಬ ಅಭ್ಯರ್ಥಿಗೂ ತಾನು ಆಯ್ಕೆ ಮಾಡಿದ ಕನಿಷ್ಠ ಒಂದು ಮತಗಟ್ಟೆಯಲ್ಲಿ ವಿವಿಪ್ಯಾಟ್ ಆಡಿಟ್‍ಗೆ ಬೇಡಿಕೆ ಇಡುವ ಹಕ್ಕನ್ನು ಹೊಂದಿರಬೇಕು, ಇದನ್ನು ರಿಟರ್ನಿಂಗ್ ಅಧಿಕಾರಿಯ ವಿವೇಚನೆಗೇ ಬಿಡಬಾರದು. ಚುನಾವಣಾ ಆಯೋಗ ಅಥವಾ ಉಚ್ಚ ನ್ಯಾಯಾಲಯ ಈ ವಿಷಯವನ್ನು ಬಗೆಹರಿಸಿ ಮುಕ್ತಾಯಗೊಳಿಸಲಿ. ಈ ವಿಷಯದ ಬಗ್ಗೆ ಈ ಲೇಖನ ಕೊನೆಯದಾಗಲಿ ಎಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...