Homeನ್ಯಾಯ ಪಥಬ್ರ್ಯಾಂಡ್ ಬೆಂಗಳೂರನ್ನು ಗೆಲ್ಲಿಸುವವರಾರು? ಒಂದು ಚುನಾವಣಾ ನೋಟ

ಬ್ರ್ಯಾಂಡ್ ಬೆಂಗಳೂರನ್ನು ಗೆಲ್ಲಿಸುವವರಾರು? ಒಂದು ಚುನಾವಣಾ ನೋಟ

- Advertisement -
- Advertisement -

| ನೀಲಗಾರ |

ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾಗಿರುವ ಬೆಂಗಳೂರಿಗೆ ದೇಶದ ಮತ್ತು ಪ್ರಪಂಚದ ನಕ್ಷೆಯಲ್ಲಿ ವಿಶಿಷ್ಟ ಸ್ಥಾನವಿದೆ. 1 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಮತ್ತು ರಾಜ್ಯದ ಜಿಡಿಪಿಗೆ ಗಣನೀಯ ಕೊಡುಗೆ ಕೊಡುವ ಈ ನಗರ ಐಟಿ ಮತ್ತು ಸ್ಟಾರ್ಟ್‍ಅಪ್ ರಾಜಧಾನಿ. ಮಹಾನಗರಗಳ ಎಲ್ಲಾ ಕೊಳಕು ಮತ್ತು ಕೆಡುಕುಗಳನ್ನು ಹೊತ್ತುಕೊಂಡಿದ್ದರೂ, ಮುಂಬೈನ ಥರವೋ, ಕೊಲ್ಕತ್ತಾ ಥರವೋ ಅಲ್ಲ. ಆರ್ಥಿಕವಾಗಿಯೂ ಹಲವು ಸಾಧ್ಯತೆಗಳನ್ನು ಇನ್ನೂ ಇಟ್ಟುಕೊಂಡಿರುವುದರಿಂದ, ರಾಜ್ಯದ ಮತ್ತು ದೇಶದ ಎಲ್ಲ ಭಾಗಗಳಿಂದ ಇಲ್ಲಿಗೆ ಜನರು ವಲಸೆ ಬರುತ್ತಲೇ ಇದ್ದಾರೆ. ಪ್ರಾಯಶಃ ರಾಜ್ಯದ ಪ್ರತೀ ಹಳ್ಳಿಯ ಜನರೂ ಇಲ್ಲಿದ್ದಾರೆ; ಕೆಲವು ಹಳ್ಳಿಗಳ ಪ್ರತಿ ಮನೆಯಿಂದಲೂ ಒಬ್ಬೊಬ್ಬರು ಇಲ್ಲಿರಬಹುದು.

20 ವರ್ಷಗಳ ಕೆಳಗೆ ಒನ್‍ವೇ ಮಾಡುವುದರ ಮೂಲಕ ಟ್ರಾಫಿಕ್ ಸಮಸ್ಯೆ ಬಗೆಹರಿಸುತ್ತೇವೆಂದು ಹೊರಟವರು ಬೆಂಗಳೂರಿನಲ್ಲಿ ಫ್ಲೈ ಓವರ್, ಅಂಡರ್‍ಪಾಸ್, ಮೆಟ್ರೋ ಎಲ್ಲಾ ಮಾಡಿದರೂ ಟ್ರಾಫಿಕ್ ಹೆಚ್ಚಾಗುತ್ತಲೇ ಹೋಗುತ್ತಿದೆ. ಬೆಂಗಳೂರಿನ ಸಮಸ್ಯೆ ಟ್ರಾಫಿಕ್‍ದೊಂದೇ ಅಲ್ಲ. ನಿರಂತರವಾಗಿ ವಲಸೆ ಬರುತ್ತಿರುವವರಿಗೆ ಮೂಲಭೂತ ಸೌಕರ್ಯಗಳನ್ನು ಹೇಗೆ, ಯಾರು, ಏಕೆ ಕಲ್ಪಿಸಬೇಕು ಎಂಬ ಪ್ರಶ್ನೆಗಳನ್ನು ಹಾಕಿಕೊಂಡಂತಿಲ್ಲ. ದಶಕಗಳಿಂದ ಇಲ್ಲೇ ಇರುವವರು ಸೂರು ಪಡೆದುಕೊಂಡಿಲ್ಲ, ಇವತ್ತಿನ ಬೆಲೆಗಳಲ್ಲಿ ಅಂತಹವರು ಸ್ವಂತ ಮನೆ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಕಸ, ಕಾವೇರಿ ನೀರು, ಮಳೆ ನೀರಿನ ಹರಿವು ಸೇರಿದಂತೆ ನೂರಾರು ಸಮಸ್ಯೆಗಳು ಇಲ್ಲಿವೆ. ಜಾಗತಿಕವಾಗಿ ನಗರೀಕರಣದ ಸಮಸ್ಯೆಗಳಿಗೆ ಪರಿಹಾರ ಹೇಗೆ ಕಂಡುಕೊಂಡಿದ್ದಾರೆ? ಬೆಂಗಳೂರಿನ ಪಾರಂಪರಿಕ ಚಹರೆ, ಸಂಸ್ಕøತಿಯನ್ನು ಉಳಿಸಿಕೊಂಡೇ ನೆಮ್ಮದಿಯ ಜೀವನ ಹೇಗೆ ಖಾತರಿ ಮಾಡುತ್ತೇವೆ? ಇದು ಇನ್ನಷ್ಟು ಬೆಳೆಯಬೇಕಾ, ಬೇಡವಾ ಇವೆಲ್ಲಕ್ಕೂ ಪರಿಹಾರಗಳು ಜನಪ್ರತಿನಿಧಿಗಳಲ್ಲೇ ಇರುವುದಿಲ್ಲ. ನಗರ ಯೋಜನಾ ತಜ್ಞರು, ಅರ್ಥಶಾಸ್ತ್ರಜ್ಞರು ಸೇರಿದಂತೆ ಹಲವು ಬಗೆಯ ಪರಿಣಿತರ ಯೋಜನೆಗಳನ್ನು ಜನಪರವಾಗಿ ಕಾರ್ಯಗತಗೊಳಿಸಲು ಇವರು ಬೆನ್ನಿಗೆ ನಿಲ್ಲಬೇಕು.

ಕರ್ನಾಟಕದ ಉಳಿದ ಭಾಗಕ್ಕಿಂತ ತಮಿಳುನಾಡು ಮತ್ತು ಆಂಧ್ರಕ್ಕೆ ಹತ್ತಿರವಿರುವ ಬೆಂಗಳೂರಿನಲ್ಲಿ ಕನ್ನಡಿಗರು ಅತೀ ದೊಡ್ಡ ಅಲ್ಪಸಂಖ್ಯಾತ ಸಮುದಾಯವೇ ಹೊರತು, ಶೇ.50ನ್ನು ದಾಟಿಲ್ಲ. ಇದರ ಸಂಕೀರ್ಣತೆಗಳನ್ನು ನಿಭಾಯಿಸಬೇಕು. ವಿವಿಧ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು ಗಣನೀಯವಾಗಿ ಇರುವ ಈ ನಗರವು ಭವಿಷ್ಯದ ದಿನಗಳಲ್ಲಿ ಯಾವ್ಯಾವ ರೀತಿಯ ತಲ್ಲಣಗಳನ್ನು ಎದುರಿಸುತ್ತದೆ ಎಂಬುದನ್ನು ಈಗಲೇ ಹೇಳಲಾಗದು. ಇವನ್ನೂ ನಿಭಾಯಿಸುವವರು ಮಾತ್ರ ನಾಯಕರಾಗಲು ಯೋಗ್ಯ.

ರಾಜಕೀಯ ನಕ್ಷೆಯಲ್ಲಿ ಬೆಂಗಳೂರು
ಜನಸಂಖ್ಯೆಯ ಹೆಚ್ಚಳವು ಬೆಂಗಳೂರಿಗಿದ್ದ ರಾಜಕೀಯ ಪ್ರಾತಿನಿಧ್ಯವನ್ನೂ ಹೆಚ್ಚಿಸಿದೆ. 2008ಕ್ಕೆ ಹಿಂದೆ ಬೆಂಗಳೂರಿನಲ್ಲಿ 12 ವಿಧಾನಸಭಾ ಕ್ಷೇತ್ರಗಳಿದ್ದವು, ಬೆಂಗಳೂರು ದಕ್ಷಿಣದ ಜೊತೆಗಿದ್ದ ಉತ್ತರ ಕ್ಷೇತ್ರಕ್ಕೆ ಹೊರಗಿನ ಹಳ್ಳಿಗಳೂ ಸೇರಿದ್ದವು. ಬೃಹತ್ತಾಗಿದ್ದ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ಉತ್ತರಹಳ್ಳಿಯೆಂಬ ಬೃಹತ್ ವಿಧಾನಸಭಾ ಕ್ಷೇತ್ರದ ಮೂಲಕ ನಗರದೊಳಗಿನ ಸ್ವಲ್ಪ ಭಾಗ ಸೇರುತ್ತಿತ್ತು. 2008ರ ನಂತರ ಬೆಂಗಳೂರು ನಗರದಲ್ಲೇ 28 ವಿಧಾನಸಭಾ ಕ್ಷೇತ್ರಗಳೂ (ಕೆಲವು ಕ್ಷೇತ್ರಗಳು ಸಣ್ಣ ಪ್ರಮಾಣದ ಗ್ರಾಮೀಣ ಭಾಗವನ್ನು ಹೊಂದಿವೆ), ನಗರದೊಳಗೇ 3 ಲೋಕಸಭಾ ಕ್ಷೇತ್ರಗಳೂ, ನಗರಕ್ಕೆ ಸೇರಿದ 2 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಗ್ರಾಮಾಂತರ ಕ್ಷೇತ್ರವೂ ಇವೆ. ಯಲಹಂಕ ವಿ.ಕ್ಷೇತ್ರವು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅಂದರೆ ರಾಜಕೀಯವಾಗಿಯೂ ನಗರದ ಪ್ರಾಮುಖ್ಯತೆ ಹೆಚ್ಚುತ್ತಿದೆ. ಪ್ರತೀ ರಾಜ್ಯ ಸಚಿವ ಸಂಪುಟದಲ್ಲಿ ಕನಿಷ್ಠ 3ರಿಂದ 5 ಜನ ಬೆಂಗಳೂರಿನಿಂದಲೇ ಇರುತ್ತಾರೆ. ಕಳೆದ ಕೇಂದ್ರ ಸಂಪುಟದಲ್ಲೂ ಬೆಂಗಳೂರಿನಿಂದ ಆಯ್ಕೆಯಾದ ಇಬ್ಬರು ಲೋಕಸಭಾ ಸದಸ್ಯರು ಮಂತ್ರಿಗಳಾಗಿದ್ದರು.

4 ಕ್ಷೇತ್ರಗಳ 9 ಪ್ರಮುಖ ಅಭ್ಯರ್ಥಿಗಳು
ಇಂತಹ ಪ್ರಾಮುಖ್ಯತೆ ಹೊಂದಿರುವ ಬೆಂಗಳೂರು ನಗರದ ರಾಜಕೀಯ ಮುಂದಿನ ದಿನಗಳಲ್ಲಿ ಹೇಗಿರಬಹುದು ಎಂಬುದಕ್ಕೆ ಈ ನಾಲ್ಕು ಕ್ಷೇತ್ರಗಳ 9 ಅಭ್ಯರ್ಥಿಗಳು ಸಾಂಕೇತಿಕವಾಗಿದ್ದಾರೆ. ಸದಾನಂದ ಗೌಡ, ಕೃಷ್ಣ ಭೈರೇಗೌಡ, ಪಿ.ಸಿ.ಮೋಹನ್, ರಿಜ್ವಾನ್ ಅರ್ಷದ್, ತೇಜಸ್ವಿ ಸೂರ್ಯ, ಬಿ.ಕೆ.ಹರಿಪ್ರಸಾದ್, ಅಶ್ವತ್ಥನಾರಾಯಣ್, ಡಿ.ಕೆ.ಸುರೇಶ್ ಮತ್ತು ಪ್ರಕಾಶ್ ರೈ ಇವರೇ ಆ 9 ಅಭ್ಯರ್ಥಿಗಳು.
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರೆಂದರೆ ಬಿ.ಕೆ.ಹರಿಪ್ರಸಾದ್, ಅಶ್ವತ್ಥನಾರಾಯಣ್, ಪ್ರಕಾಶ್ ರೈ, ಪಿ.ಸಿ.ಮೋಹನ್ ಮತ್ತು ತೇಜಸ್ವಿ. ಡಿ.ಕೆ.ಸುರೇಶ್ ಸಹಾ ಅವರು ಪ್ರತಿನಿಧಿಸುವ ಕ್ಷೇತ್ರದವರೇ. ಮೈಸೂರಿನ ರಿಜ್ವಾನ್, ಸುಳ್ಯದ ಸದಾನಂದ ಗೌಡರು ಮತ್ತು ಮೂಲತಃ ಕೋಲಾರ ಜಿಲ್ಲೆಯವರಾಗಿದ್ದು ಈಗ ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕೃಷ್ಣ ಭೈರೇಗೌಡರು ಬೆಂಗಳೂರಿಗೆ ‘ವಲಸೆ’ ಬಂದವರು.

ಹಿನ್ನೆಲೆ – ಮುನ್ನೋಟ
ಅತ್ಯಂತ ಹಳಬರಾದ ಬಿ.ಕೆ.ಹರಿಪ್ರಸಾದ್, ಯೂತ್ ಕಾಂಗ್ರೆಸ್ ಸಂಜಯಗಾಂಧಿಯ ತೋಳ್ಬಲದ ಪಡೆಯಾಗಿದ್ದಾಗ ಅದರಲ್ಲಿ ಸಕ್ರಿಯವಾಗಿ ಕಾಂಗ್ರೆಸ್ ಸೇರಿಕೊಂಡವರು. ಬಹುಕಾಲ ಬೆಂಗಳೂರಿನ ಭೂಗತ ಲೋಕದ ನಂಟೂ ಹೊಂದಿದ್ದವರು, ಈಗ ಕಾಂಗ್ರೆಸ್‍ನ ಮಟ್ಟಿಗೆ ದೆಹಲಿ ಮಟ್ಟದ ನಾಯಕರು. ಬೆಂಗಳೂರು ಬದಲಾಗುತ್ತಾ ಬಂದ ಪರಿಯನ್ನು ಕಣ್ಣೆದುರಿಗೆ ನೋಡಿದವರು. ಬಿಜೆಪಿಯ ಕೋಮುವಾದಿ ಸಿದ್ಧಾಂತದ ಕಡುವಿರೋಧಿಗಳು.

ಅಶ್ವತ್ಥನಾರಾಯಣ್ ಬಿಎಚ್‍ಇಎಲ್‍ನ ಯೂನಿಯನ್ ಮುಖಂಡರಾಗಿದ್ದವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಹಂತಹಂತವಾಗಿ ಮೇಲೇರುತ್ತಾ ಬಂದವರು. ಎಡಪಂಥೀಯ ಹಿನ್ನೆಲೆಯವರಂತೆ ಇಂದು ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವ ಮನೋಭಾವವಿಲ್ಲದಿದ್ದರೂ, ಕೋಮುವಾದಿ ಫೈರ್‍ಬ್ರಾಂಡ್ ಅಲ್ಲ. ಆರ್.ಅಶೋಕ್ ಅವರ ಆಪ್ತರಾಗಿದ್ದು, ಅವರಿಗಾಗಿ ಮಂಡ್ಯ ಜಿಲ್ಲೆ ಉಸ್ತುವಾರಿ ನಿಭಾಯಿಸಿದ್ದರು.
ಪ್ರಕಾಶ್ ರೈ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಮತ್ತು ವೃತ್ತಿನಿರತ ರಾಜಕಾರಣಿಯಲ್ಲದ, ತನ್ನ ಸಾರ್ವಜನಿಕ ಬದುಕಿನ ವಿಸ್ತರಣೆಯಾಗಿ ರಾಜಕಾರಣವನ್ನು ನೋಡುತ್ತಿರುವವರು. ಬಹಳ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದು ರಂಗನಟನಾಗಿ, ಚಿತ್ರನಟನಾಗಿ, ಇದೀಗ ಅಖಿಲ ಭಾರತ ಮಟ್ಟದ ಗುರುತನ್ನು ಪಡೆದುಕೊಂಡಿರುವವರು. ದಕ್ಷಿಣ ಭಾರತದ ಪ್ರಸಿದ್ಧ ಚಿತ್ರ ನಟ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಜನರೂ ಹೆಚ್ಚಿನ ಸಂಖ್ಯೆಯಲ್ಲಿರುವ ಬೆಂಗಳೂರು ಕೇಂದ್ರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ.

ಬೆಂಗಳೂರಿನ ವ್ಯಾಪಾರಿ ಸಮುದಾಯದ ಭಾಗವಾಗಿದ್ದ ಪಿ.ಸಿ.ಮೋಹನ್ ಚಿಕ್ಕಪೇಟೆ ಕ್ಷೇತ್ರದಿಂದ ಎರಡು ಸಾರಿ ಬಿಜೆಪಿಯಿಂದ ಎಂಎಲ್‍ಎಯಾಗಿ ಗೆದ್ದು ನಂತರ ಎರಡು ಸಾರಿ ಎಂಪಿಯಾಗಿರುವವರು. ವೆಂಕಯ್ಯನಾಯ್ಡು ಅವರ ಜೊತೆಗಿನ ಸಖ್ಯವೂ ಬಿಜೆಪಿಯಲ್ಲಿ ಇವರ ಸ್ಥಾನವನ್ನು ಗಟ್ಟಿಯಾಗುಳಿಸಿದೆ. ವ್ಯಾಪಾರದ ಆಚೆಗೆ ರಾಜಕಾರಣದಲ್ಲಿ ವಿಶೇಷ ಛಾಪನ್ನೇನೂ ಮೂಡಿಸಿಲ್ಲ.
ತೇಜಸ್ವಿ ಸೂರ್ಯ ಬೆಂಗಳೂರಿನ ಟಿಪಿಕಲ್ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ, ಕುಟುಂಬದ ಆರೆಸ್ಸೆಸ್ ನಂಟು ಮತ್ತು ರಾಜಕಾರಣದ ನಂಟು ಎರಡನ್ನೂ ಮುಂದುವರೆಸಿಕೊಂಡು ಹೋಗುತ್ತಿರುವವರು. ನ್ಯಾಷನಲ್ ಲಾ ಸ್ಕೂಲ್‍ನಿಂದ ಡಿಗ್ರಿ ಪಡೆದು ವಕೀಲಿಕೆಯನ್ನೂ ಮಾಡುತ್ತಿದ್ದಾರೆ. ಅತಿರೇಕದ ಕೋಮುವಾದೀ ಮಾತುಗಳಿಂದ ಪ್ರಸಿದ್ಧರು.

ಡಿ.ಕೆ.ಸುರೇಶ್ ಅವರ ಅಣ್ಣ ಡಿ.ಕೆ.ಶಿವಕುಮಾರ್ ಅವರ ಬಲಗೈ ಲೆಫ್ಟಿನೆಂಟ್ ರೀತಿಯಲ್ಲಿ ಕ್ಷೇತ್ರ ನಿಭಾಯಿಸುತ್ತಿದ್ದವರು 2013ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆದ್ದು ಇದುವರೆಗೂ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವವರಾಗಿದ್ದಾರೆ. ಕುಟುಂಬದ ಭಾರೀ ವ್ಯವಹಾರಗಳೆಲ್ಲದರಲ್ಲೂ ಡಿಕೆಶಿಗೆ ಸಾಥ್ ಕೊಟ್ಟು, ರಾಜಕಾರಣವನ್ನು ಪಕ್ಕಾ ವ್ಯವಹಾರದಂತೆ ಮಾಡುತ್ತಾ, ತೋಳ್ಬಲವನ್ನೂ ಬಳಸುತ್ತಾ ಕ್ಷೇತ್ರಾದ್ಯಂತ ಆವರಿಸಿಕೊಂಡಿದ್ದಾರೆ.

ಕೃಷ್ಣ ಭೈರೇಗೌಡರ ತಂದೆ ವೇಮಗಲ್ಲಿನವರು ಆದರೂ, ಇವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಅಮೆರಿಕಾಕ್ಕೆ ಹೋಗಿ ವಿದ್ಯಾಭ್ಯಾಸ ಮತ್ತು ಕೆಲಕಾಲ ಉದ್ಯೋಗವನ್ನೂ ಮಾಡಿ ವಾಪಸ್ ಬಂದರು. ತಂದೆಯ ಮರಣಾನಂತರ ಜನತಾದಳದಿಂದಲೇ ಉಪಚುನಾವಣೆಯಲ್ಲಿ ಗೆದ್ದರಾದರೂ, ಮರುಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹಾರಿದರು. ವೇಮಗಲ್ ಕ್ಷೇತ್ರವೇ ಇಲ್ಲವಾದ ನಂತರ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಬೆಂಗಳೂರು ದಕ್ಷಿಣದಿಂದಲೂ 10 ವರ್ಷಗಳ ಹಿಂದೆ ಸ್ಪರ್ಧಿಸಿ ಸೋತಿದ್ದರು.
ಸುಳ್ಯದ ಸದಾನಂದ ಗೌಡರು, ಅದು ಮೀಸಲು ಕ್ಷೇತ್ರವಾದ್ದರಿಂದ ಪುತ್ತೂರಿಗೆ ಹೋಗಿ ಬಿಜೆಪಿಯಿಂದ ವಿಧಾನಸಭಾ ಸದಸ್ಯರಾಗಿ ನಂತರ ಲೋಕಸಭೆಗೆ ಏರಿದರು. ಮಂಗಳೂರು ಕ್ಷೇತ್ರದಿಂದ ಗೆದ್ದವರು ಮರುಸಾಲಿನಲ್ಲಿ ಉಡುಪಿ-ಚಿಕ್ಕಮಗಳೂರಿಗೆ ವಲಸೆ ಹೋಗಬೇಕಾಯಿತು. ಸಂಸದರಾಗಿದ್ದಾಗಲೇ ಮುಖ್ಯಮಂತ್ರಿಯಾಗಿ ಬೆಂಗಳೂರಿಗೆ ಬಂದವರು, ನಂತರ ಅಲ್ಲೇ ಉಳಿದುಕೊಂಡರು. ಆಗ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸದರಾಗಿದ್ದ ವಲಸಿಗ ಡಿ.ಬಿ.ಚಂದ್ರೇಗೌಡರಿಗೆ ವಿಶ್ರಾಂತಿ ಕೊಟ್ಟು ಡಿವಿಎಸ್‍ಗೆ ಟಿಕೆಟ್ ನೀಡಲಾಯಿತು. ಆಗ ಗೆದ್ದವರೂ, ಈ ಸಾರಿಯೂ ಸ್ಪರ್ಧಿಯಾಗಿದ್ದಾರೆ.

ರಿಜ್ವಾನ್ ಅರ್ಷದ್ ಮೈಸೂರಿನ ಸಾಮಾನ್ಯ ಕುಟುಂಬದವರು. ಎನ್‍ಎಸ್‍ಯುಐ ಮುಖಂಡರಾಗಿ ಪ್ರವರ್ಧಮಾನಕ್ಕೆ ಬಂದವರು, ಯೂತ್ ಕಾಂಗ್ರೆಸ್‍ನಲ್ಲಿ ಸಕ್ರಿಯವಾಗಿ ಅದರ ಚುನಾಯಿತ ಅಧ್ಯಕ್ಷರಾಗಿ ಗೆದ್ದರು. ರಾಹುಲ್ ಗಾಂಧಿಯವರ ಬೆಂಬಲದೊಂದಿಗೆ ಕಾಂಗ್ರೆಸ್‍ನಲ್ಲಿ ಪ್ರಭಾವಿಯಾಗಿ ಬೆಳೆದು ನಿಂತಿದ್ದಾರೆ. ಮುಸ್ಲಿಂ ಸಮುದಾಯದಲ್ಲೂ ಪ್ರಮುಖ ನಾಯಕರಲ್ಲೊಬ್ಬರಾಗಿರುವ ರಿಜ್ವಾನ್, ಸಮುದಾಯ ಇಂದು ಹಾದುಹೋಗುತ್ತಿರುವ ಸಂದರ್ಭದ ಸಂಕೀರ್ಣತೆಗಳನ್ನು ಬಲ್ಲವರು.

ಅಪಾಯಕಾರಿ ಇಬ್ಬರು, ಸಾಧ್ಯತೆಯುಳ್ಳ ಮೂವರು ಮತ್ತು ಬೆನ್ನಿಗೆ ನಿಲ್ಲಬಲ್ಲ ಇಬ್ಬರು ಹಿರಿಯರು
ಮೊದಲೇ ಹೇಳಲಾದ ಸವಾಲುಗಳನ್ನು ಎದುರಿಸುತ್ತಿರುವ ಬೆಂಗಳೂರಿಗೆ ಈ ಪ್ರಮುಖ ಅಭ್ಯರ್ಥಿಗಳು ಪರಿಹಾರ ಏನು ಕಂಡುಕೊಡಬಹುದು ಎಂಬುದನ್ನು ಕೊನೆಯಲ್ಲಿ ನೋಡೋಣ. ಆದರೆ, ಈ ಅಭ್ಯರ್ಥಿಗಳಲ್ಲಿ ವ್ಯಕ್ತಿಗತವಾಗಿ ಅತ್ಯಂತ ಅಪಾಯಕಾರಿಯಾಗಿ ತೋರುವ ಇಬ್ಬರೆಂದರೆ ತೇಜಸ್ವಿ ಸೂರ್ಯ ಮತ್ತು ಡಿ.ಕೆ.ಸುರೇಶ್. ಸದಾನಂದ ಗೌಡರು ಹಿಂದುತ್ವಕ್ಕೆ ಸಾಕಷ್ಟು ಒಲಿದಿದ್ದಾರಾದರೂ, ವೈಯಕ್ತಿಕವಾಗಿ ಹಿಂಸೆಗೆ ಮತ್ತು ಅಸಭ್ಯ ರಾಜಕಾರಣಕ್ಕೆ ಇಳಿಯಲಾರರು. ಅಶ್ವತ್ಥನಾರಾಯಣ ಸಹಾ ಆ ರೀತಿಯ ಕೇಡರ್ ಅಲ್ಲ. ಆದರೆ, ತೇಜಸ್ವಿ ಬೆಂಗಳೂರಿನ ಚಹರೆಗೆ ಸಕಾರಾತ್ಮಕವಾದ ಸ್ವರೂಪ ತಂದುಕೊಡಬಲ್ಲ ಯಾವ ಗುಣಲಕ್ಷಣಗಳನ್ನೂ ಇದುವರೆಗೆ ತೋರಿಲ್ಲ. ಅದೇ ಸಂದರ್ಭದಲ್ಲಿ ನಡೆಯಬಹುದಾದ ಘೋರ ಪಾತಕಗಳಿಗೆ ಸಮರ್ಥನೆಯನ್ನೊದಗಿಸಬಲ್ಲ ನಾಲಿಗೆಯನ್ನಂತೂ ಹೊಂದಿದ್ದಾರೆ. ಫ್ಯೂಡಲ್ ಸಿದ್ಧಾಂತ ಮತ್ತು ಆಧುನಿಕ ಲಾಲಸೆಗಳೆರಡೂ ಎರಕ ಹೊಯ್ದಂತಿರುವ ಈತ ಬೆಂಗಳೂರಿನ ಜನಜೀವನ, ಅದರ ಸಂಸ್ಕೃತಿಗಳೆಲ್ಲವನ್ನೂ ಹದಗೆಡಿಸಬಲ್ಲ.

ಸಾಧಾರಣ ಹಳ್ಳಿಯ ಕುಟುಂಬದ ಹಿನ್ನೆಲೆಯ ಡಿ.ಕೆ.ಸುರೇಶ್‍ರಿಗೆ ಕೋಮು ನಂಜಿನ ಕುರಿತು ಅಂತಹ ತಿರಸ್ಕಾರವಿದೆಯೋ ಇಲ್ಲವೋ ಕಂಡುಬಂದಿಲ್ಲ. ಆದರೆ, ಸೋದರರಿಬ್ಬರೂ ತೋರುತ್ತಿರುವ ಪಾಳೇಗಾರಿ ದರ್ಪ ಮತ್ತು ಆಸ್ತಿ ಸಂಪಾದನೆಗಳು ಅವರನ್ನು ಯಾವ ಕಡೆಗೆ ತಿರುಗಿಸಬಹುದೆಂಬುದನ್ನು ತೋರುತ್ತವೆ. ಬೆಂಗಳೂರನ್ನು ಒಳ್ಳೆಯ ಗಣಿ ಎಂದು ಭಾವಿಸಿ ಮುಕ್ಕುವ ಮತ್ತು ತಮ್ಮ ಪಾಳೆಯಪಟ್ಟನ್ನು ಬಿಗಿಗೊಳಿಸುವ ಕಡೆಗೆ ಅವರು ಯೋಚಿಸುವ ಸಾಧ್ಯತೆಗಳೇ ಹೆಚ್ಚು.

ಅಷ್ಟೇನೂ ಪ್ರಯೋಜನವಿಲ್ಲ ಎಂಬ ಸಾಲಿಗೆ ಸೇರಬಹುದಾದವರು ಪಿ.ಸಿ.ಮೋಹನ್ ಮತ್ತು ಸದಾನಂದಗೌಡರೇ. ಆದರೆ ಇದು ಅವರ ಕುರಿತ ಷರಾ ಎನ್ನುವುದಕ್ಕಿಂತ, ನಮ್ಮೆಲ್ಲಾ ಲೋಕಸಭಾ ಸದಸ್ಯರು ಇರುವುದು ಹೀಗೆಯೇ. ಎಂಎಲ್‍ಎ ಪ್ರಧಾನವಾಗಿ ನಡೆಯುತ್ತಿರುವ ರಾಜಕಾರಣವು ಎಂಪಿಗಳಿಗೆ ಹೆಚ್ಚಿನ ಪಾತ್ರವನ್ನು ಕಲ್ಪಿಸಿಲ್ಲ. ಭಾರೀ ದೊಡ್ಡ ನಾಯಕರುಗಳಾದರೆ ಅಥವಾ ಆಳುವ ಪಕ್ಷದಲ್ಲಿ ಪ್ರಭಾವಿಗಳಾಗಿದ್ದರೆ ಕೆಲವು ಯೋಜನೆಗಳನ್ನು ತರಲು ಸಾಧ್ಯ. ಮಾಜಿ ಮುಖ್ಯಮಂತ್ರಿಯೂ, ಕೇಂದ್ರ ಮಂತ್ರಿಯೂ ಆಗಿದ್ದ ಸದಾನಂದಗೌಡರು ಗಣನೀಯ ಸಾಧನೆಯನ್ನೇನೂ ಮಾಡಿಲ್ಲ. ಕಲಬುರ್ಗಿಗೆ ಖರ್ಗೆಯವರು ಮಾಡಿದ ಒಂದಷ್ಟು ಕೆಲಸವನ್ನು ಹೋಲಿಸಿ ನೋಡಬಹುದು. ಅದೂ ಸಹಾ ಭಾರೀ ಅಲ್ಲವಾದರೂ, ಸ್ವಲ್ಪ ಪ್ರಯತ್ನವನ್ನು ಅವರು ತಮ್ಮ ಪ್ರಭಾವ ಬಳಸಿ ಮಾಡಿದರು. ಅದೇನೇ ಇರಲಿ, ಈ ಇಬ್ಬರು ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಮಹತ್ವದ ಕೊಡುಗೆ ಕೊಡಲಾರರು.

ಅಂತಹ ಮುನ್ನೋಟ ಮತ್ತು ಸಾಧ್ಯತೆ ಇರುವುದು ಕೃಷ್ಣ ಭೈರೇಗೌಡ, ರಿಜ್ವಾನ್ ಮತ್ತು ಪ್ರಕಾಶ್ ರೈರಿಗೆ. ವಯಸ್ಸು, ಸಾಮಥ್ರ್ಯ ಮತ್ತು ಮಹತ್ವಾಕಾಂಕ್ಷೆಗಳಿರುವುದರ ಜೊತೆಗೆ ರಾಜಕಾರಣಿಗಳಿಗಿರುವ ದುಷ್ಟತನದ ಗೈರುಹಾಜರಿ ಇವರ ಪ್ಲಸ್ ಪಾಯಿಂಟ್. ಆದರೆ ಕೃಷ್ಣ ಭೈರೇಗೌಡರು ಜನಪ್ರತಿನಿಧಿಗಿಂತ ಐಎಎಸ್ ಅಧಿಕಾರಿ ಥರಾ ಇರುತ್ತಾರೆಂಬ ಆರೋಪ ಅವರ ಮೇಲಿದೆ. ರಿಜ್ವಾನ್ ಇನ್ನೂ ಆಡಳಿತದ ಅನುಭವವನ್ನು ಪ್ರದರ್ಶಿಸಿಲ್ಲ. ರಾಜಕಾರಣದ ಅನುಭವವೂ ಇಲ್ಲದ ಪ್ರಕಾಶ್ ರೈ ಪ್ರಜಾತಂತ್ರ ಅಭಿವೃದ್ಧಿ, ಜನರ ಬೇಕು-ಬೇಡಗಳ ಕುರಿತು ಒಳ್ಳೆಯ ಒಳನೋಟಗಳನ್ನು ಮುಂದಿಟ್ಟಿದ್ದಾರೆ. ಸೀಮಿತ ರೀತಿಯಲ್ಲಿ ಹಳ್ಳಿ, ಶಾಲೆಗಳ ಅಭಿವೃದ್ಧಿಯಲ್ಲಿ ಖುದ್ದಾಗಿ ಪಾಲ್ಗೊಂಡಿದ್ದಾರೆ. ಉಳಿದಂತೆ ಪ್ರಜಾಪ್ರತಿನಿಧಿಯ ಹೊಸ ಪಾತ್ರದಲ್ಲಿ ಯಾವ ರೀತಿ ಯಶಸ್ವಿ ಆಗುತ್ತಾರೆನ್ನುವುದನ್ನು ನೋಡಬೇಕು. ಗೆದ್ದರೆ, ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ ಗೆದ್ದವರನ್ನು ಕೆಲಸ ಮಾಡುವಂತೆ ಮಾಡುತ್ತೇನೆಂದು ಘೋಷಿಸಿರುವ ಅವರು ಬೆಂಗಳೂರು ಸೆಂಟ್ರಲ್‍ಅನ್ನು ಮುಂದಿನ ದಿನಗಳಲ್ಲೂ ಬಿಡುವುದಿಲ್ಲವೆಂದು ತೀರ್ಮಾನಿಸಿದಂತಿದೆ.

ಗುಜರಾತ್ ಮಾಡೆಲ್ ಅನ್ನು ಬೆಂಗಳೂರಿಗೆ ಹೋಲಿಸಿ ರಾಜ್ಯಸಭೆಯಲ್ಲಿ ಹರಿಪ್ರಸಾದ್ ಮಾಡಿದ ಒಳ್ಳೆಯ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಚಾಲ್ತಿಯಲ್ಲಿದೆ. ಅದರಾಚೆಗೆ ಅವರ ಮುನ್ನೋಟ, ಚಿಂತನೆಗಳ ಬಗ್ಗೆ ಹೆಚ್ಚು ಬಹಿರಂಗವಾಗಿಲ್ಲ. ಆದರೆ, ದೆಹಲಿ ರಾಜಕಾರಣದ ಪಟ್ಟುಗಳನ್ನು ಅರಿತಿರುವ ಅವರು ಮನಸ್ಸು ಮಾಡಿದರೆ ಬೆಂಗಳೂರಿಗೆ ಅನುದಾನ ತರಬಲ್ಲರು; ಕರ್ನಾಟಕದ ಪ್ರತಿನಿಧಿಯೂ ಆಗಬಲ್ಲರು. ಈ ವಿಚಾರದಲ್ಲಿ ಅನಂತಕುಮಾರ್‍ರಿಗೆ ಇದ್ದಂತಹ ಪಾತ್ರವನ್ನು ಹರಿಪ್ರಸಾದ್ ತುಂಬಬಲ್ಲರು. ಪಕ್ಷದ ಸೀಮಾರೇಖೆಯ ಆಚೆಗೆ ಪ್ರಯತ್ನಿಸಿದರೆ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸದಾನಂದಗೌಡರೂ ಮಾಡಬಹುದೇನೋ!

ಇಂತಹ ಕನಸು ಕಾಣುವುದು ಸಾಧ್ಯವಾಗಬೇಕು
ಕೃಷ್ಣ ಭೈರೇಗೌಡ, ಪ್ರಕಾಶ್ ರೈ, ರಿಜ್ವಾನ್ ಅರ್ಷದ್ (ಒಂದೇ ಕ್ಷೇತ್ರದ ಇಬ್ಬರೂ ಗೆಲ್ಲಲಾಗದು) ಜೊತೆಗೆ ಬಿ.ಕೆ.ಹರಿಪ್ರಸಾದ್ ಮತ್ತು ಸದಾನಂದಗೌಡರು (ಇಬ್ಬರು ಗೌಡರೂ ಪ್ರತಿಸ್ಪರ್ಧಿಗಳು, ಒಬ್ಬರೇ ಗೆಲ್ಲಲು ಸಾಧ್ಯ) ನಿಂತು ಹೊಸ ರೀತಿಯಲ್ಲಿ ಬೆಂಗಳೂರನ್ನು ಕಟ್ಟುವುದು ಸಾಧ್ಯವಾದೀತೇ ಎಂದು ಯೋಚಿಸುವುದು ಕೇವಲ ಕನಸೇ?
ಹೌದು, ಇವತ್ತಿನ ಮಟ್ಟಿಗೆ ಇವೆಲ್ಲವೂ ಕನಸೇ. ಸ್ವಂತ ಹಿತಾಸಕ್ತಿ, ಪಕ್ಷದ ಹಿತಾಸಕ್ತಿಯಾಚೆಗೆ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರ, ರಾಜ್ಯ ಮತ್ತು ದೇಶವನ್ನು ಹಸನುಗೊಳಿಸಲು ಪ್ರಯತ್ನಿಸುವವರೇ ಕಡಿಮೆ. ಇನ್ನು ಪಕ್ಷಾತೀತವಾಗಿ ಇತರ ಜನಪ್ರತಿನಿಧಿಗಳ ಜೊತೆಗೆ ಒಂದಾಗಿ ಕೆಲಸ ಮಾಡುವುದು ಕನಸಿನ ಮಾತೇ.ಬೆಂಗಳೂರು ಅಂತಹದೊಂದು ಕನಸಿನ ಸಾಕಾರದ ನಿರೀಕ್ಷೆಯಲ್ಲಿದೆ. ಬೆಂಗಳೂರಿನ ಮತದಾರರು ಯಾರಿಗೆ ಮತ ಹಾಕಬಹುದೆಂಬುದರ ಮೇಲೆ ಉಳಿದದ್ದು ನಿಂತಿದೆ.

ನಗರದ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ತೆರೆದು ಕೊಂಡಿರುವ ಸಾಧ್ಯತೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ನಗರದ 28 ಕ್ಷೇತ್ರಗಳಲ್ಲಿ 15ನ್ನು ಕಾಂಗ್ರೆಸ್, 11ನ್ನು ಬಿಜೆಪಿ ಗೆದ್ದಿದ್ದರೆ ಜನತಾದಳವು 2 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಗೆದ್ದ ಕೆಲವು ಕ್ಷೇತ್ರಗಳಲ್ಲಿ ಭಾರೀ ದೊಡ್ಡ ಅಂತರವಿತ್ತು. ಹೀಗಿದ್ದರೂ, ವಿಧಾನಸಭೆಗೆ ಒಂದು ರೀತಿಯಲ್ಲಿ ಸಂಸತ್ತಿಗೆ ಇನ್ನೊಂದು ರೀತಿಯಲ್ಲಿ ಮತದಾನವು ಇಲ್ಲಿ ನಡೆದಿದೆ.
ಹಾಗಿದ್ದರೂ ಈ ಸಾರಿ ಬೆಂಗಳೂರು ಉತ್ತರದಲ್ಲಿ ಕೃಷ್ಣ ಭೈರೇಗೌಡರು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಮಲ್ಲೇಶ್ವರ ಹೊರತುಪಡಿಸಿ ಇನ್ನೆಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಶಾಸಕರೇ ಇದ್ದಾರೆ. ಮಿಕ್ಕ ಮತಗಳು ಹಂಚಿ ಹೋದರೂ, ಅಲ್ಪಸಂಖ್ಯಾತರ ಮತಗಳು ಈ ಸಾರಿ ಕಾಂಗ್ರೆಸ್ಸಿಗೆ ಗಟ್ಟಿ. ಸದಾನಂದ ಗೌಡರಿಗಿಂತ, ದೇವೇಗೌಡರ ಬೆಂಬಲ ಪಡೆದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿಯ ಪರ ಒಂದಷ್ಟು ಒಕ್ಕಲಿಗರ ಮತಗಳು ಬರುತ್ತವೆ. ಇದಲ್ಲದೇ, ಕಾಂಗ್ರೆಸ್ಸಿನ ನಾಲ್ಕು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಬಲವಾದ ಹಿಡಿತವನ್ನು ಹೊಂದಿದ್ದಾರೆ. ಇವೆಲ್ಲಾ ಕಾರಣಕ್ಕೆ ಸದಾನಂದ ಗೌಡರು ಈ ಸಾರಿ ಸೋಲುವ ಸಾಧ್ಯತೆ ಹೆಚ್ಚು.

ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಗೆ ಹಲವು ಪ್ಲಸ್ ಪಾಯಿಂಟ್‍ಗಳಿದ್ದರೂ ಅಭ್ಯರ್ಥಿಯೇ ಮೈನಸ್. ಆರ್.ಅಶೋಕ್, ಸೋಮಣ್ಣನವರ ಅಸಮಾಧಾನ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಮತ್ತು ಯಾವಾಗಲೂ ಅನಂತಕುಮಾರ್‍ರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದ ರಾಮಲಿಂಗಾರೆಡ್ಡಿಯವರು ಎಷ್ಟರಮಟ್ಟಿಗೆ ಕಾಂಗ್ರೆಸ್ ಅಭ್ಯರ್ಥಿ ಹರಿಪ್ರಸಾದ್‍ರ ಪರವಾಗಿ ಕೆಲಸ ಮಾಡುತ್ತಾರೆಂಬುದು ದೊಡ್ಡ ಏರುಪೇರು ಉಂಟು ಮಾಡಬಲ್ಲದು. ಅದರ ಜೊತೆಗೆ ದೇವೇಗೌಡರು ವಿಶೇಷ ಆಸಕ್ತಿ ವಹಿಸಬೇಕು. ಅದರ ಸಾಧ್ಯತೆ ಈಗ ಕಡಿಮೆಯಿದೆ. ಅದೇನೇ ಇದ್ದರೂ ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್‍ಗೆ ಹೆಚ್ಚಿನ ಸಾಧ್ಯತೆ ಹರಿಪ್ರಸಾದ್‍ರು ನಿಂತಾಗಲೇ ಇದೆ.

ಬೆಂಗಳೂರು ಕೇಂದ್ರದ ಸುಳಿವು ಈಗಲೇ ಕಷ್ಟ. ಪ್ರಕಾಶ್ ರೈ ಅವರು ಅಭ್ಯರ್ಥಿಯಾಗಿರುವುದು ಕಾಂಗ್ರೆಸ್ಸಿನ ಸಾಧ್ಯತೆಯನ್ನು ಹೆಚ್ಚಿಸಿದೆ. 8 ವಿಧಾನಸಭಾ ಕ್ಷೇತ್ರಗಳ ಪೈಕಿ 3ರಲ್ಲಿ ಬಿಜೆಪಿಯಿದೆ; 5ರಲ್ಲಿ ಪ್ರಬಲ ಕಾಂಗ್ರೆಸ್ ಶಾಸಕರಿದ್ದಾರೆ. ಮುನಿಸಿಕೊಂಡಿರುವ ರೋಷನ್‍ಬೇಗ್ ಕೈ ಕೊಡುವುದರ ಜೊತೆಗೆ ಯಾರಿಗೆ ಮತ ಹಾಕಲು ಹೇಳುತ್ತಾರೆಂಬ ಆತಂಕ ರಿಜ್ವಾನ್‍ರಿಗಿದೆ. ಈ ದೇಶದ ದುರಂತದ ಭಾಗವಾಗಿ ಮುಸ್ಲಿಂ ಅಭ್ಯರ್ಥಿಗೆ ಮತ ಹಾಕಲು ಇಷ್ಟಪಡದೇ ಬಿಜೆಪಿಗೆ ಹಾಕುವುದರಿಂದಲೂ ಇಲ್ಲಿ ಕಳೆದ ಸಾರಿ ಬಿಜೆಪಿ ಗೆದ್ದಿತ್ತು. ಇವೆಲ್ಲದರ ಮಧ್ಯೆ ಪ್ರಕಾಶ್ ರೈರ ವಿಶೇಷ ಸ್ಪರ್ಧೆ ಎಲ್ಲರ ಗಮನ ಸೆಳೆದಿದೆ. ಅವರ ಸ್ಪರ್ಧೆಯ ಲಾಭ ಕಾಂಗ್ರೆಸ್‍ಗೆ ಆಗುವ ಸಾಧ್ಯತೆಯೇ ಹೆಚ್ಚು. ತಮಿಳು ಮತಗಳ ಜೊತೆಗೆ ಯಾರ ಮತಗಳನ್ನು ಅವರು ಹೆಚ್ಚು ಸೆಳೆಯುತ್ತಾರೆಂಬುದನ್ನೂ ಕಾದು ನೋಡಬೇಕು. ಮತದಾರರಿಗೆ ಹಣ ಹಂಚದೇ, ಯಾವ ದೊಡ್ಡ ಪಕ್ಷದ ನೆರವೂ ಇಲ್ಲದೇ, ಎಲ್ಲವನ್ನೂ ಅಭ್ಯರ್ಥಿಯೆಂದು ಘೋಷಿಸಿದ ನಂತರವೇ ಕಟ್ಟಿಕೊಳ್ಳುತ್ತಿರುವ ಪ್ರಕಾಶ್ ರೈ ಗಣನೀಯ ಮತ ಪಡೆದು ಸೋತರೂ ಅದು ದೊಡ್ಡ ಗೆಲುವೇ.

ಇನ್ನು ಬೆಂಗಳೂರು ಗ್ರಾಮಾಂತರದ ಫಲಿತಾಂಶ ಈಗಾಗಲೇ ಘೋಷಣೆಯಾದಂತೆಯೇ. ಜೆಡಿಎಸ್ ಮತ್ತು ಕಾಂಗ್ರೆಸ್‍ಗಳೇ ಪ್ರಬಲ ಎದುರಾಳಿಗಳಾದ ಈ ಕ್ಷೇತ್ರದ ವ್ಯಾಪ್ತಿಯಲ್ಲಿ, ಡಿಕೆಶಿ ಸಹೋದರರ ಜೊತೆಗೆ ಕುಮಾರಸ್ವಾಮಿಗೆ ಕುದುರಿರುವ ಒಳ್ಳೆಯ ಸಂಬಂಧದ ಕಾರಣಕ್ಕೆ ಮೈತ್ರಿ ಅಭ್ಯರ್ಥಿ ಸುರೇಶ್ ಸುಲಭವಾಗಿ ಗೆಲ್ಲುತ್ತಾರೆ.
ಇವೆಲ್ಲದರ ನಂತರವೂ ಪ್ರಶ್ನೆ ಉಳಿಯುವುದು ಬ್ರಾಂಡ್ ಬೆಂಗಳೂರನ್ನು ಇವರೆಲ್ಲರೂ ಸೇರಿ ಗೆಲ್ಲಿಸುತ್ತಾರೆಯೇ ಎಂದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...