| ನಾನುಗೌರಿ |
ಪ್ರಪಂಚಾದ್ಯಂತ ಗಾಂಧಿ ಪ್ರತಿಮೆಗಳನ್ನು ನಿರ್ನಾಮ ಮಾಡಲು ಇದು ಸಕಾಲ, ಹಾಗೆಯೇ ಭಾರತದ ಕರೆನ್ಸಿ ನೋಟುಗಳಿಂದಲೂ ಸಹ ಗಾಂಧಿ ಭಾವಚಿತ್ರ ತೆಗೆದುಬಿಡಿ’ ಎಂದು ವ್ಯಂಗ್ಯದಿಂದ ಅಣಕ ಮಾಡಿ ಮೇ 17ರಂದು ಟ್ವೀಟ್ ಮಾಡಿದ್ದ ಮಹಾರಾಷ್ಟ್ರದ ಐಎಎಸ್ ಅಧಿಕಾರಿ ನಿಧಿ ಚೌಧರಿಯವರ ಹುದ್ದೆಗೆ ಸಂಚಕಾರ ಬಂದಿದೆ. ಈ ಕುರಿತು ತ್ವರಿತ ಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಸೂಚಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ನಿಧಿ ಚೌಧರಿಯವರು ಸರಣಿ ಟ್ವೀಟ್‍ಗಳನ್ನು ಮಾಡಿ ತನ್ನ ಗಾಂಧಿ ಪ್ರೇಮವನ್ನು ತೋರಿಸಬೇಕಾಗಿ ಬಂದಿದೆ. ಗಾಂಧಿಯವರ ಹೇಳಿಕೆಗಳನ್ನು ಉಲ್ಲೇಖಿಸಿ ಮಾಡಿರುವ ಹಳೆಯ ಟ್ವೀಟ್‍ಗಳನ್ನು ಮತ್ತೆ ಷೇರ್ ಮಾಡಿರುವ ಅವರು ‘ನಾನೆಂದೂ ಗಾಂಧೀಜಿಯವರನ್ನು ಅವಮಾನಿಸುವುದಿಲ್ಲ, ಅವರ ನನ್ನ ಸತ್ಯಾನ್ವೇಷಣೆ ಪುಸ್ತಕ ನನ್ನ ಎಲ್ಲಾ ಕಾಲದ ನೆಚ್ಚಿನ ಪುಸ್ತಕ’ ಎಂತಲೂ ಟ್ವೀಟ್ ಮಾಡಿದ್ದಾರೆ.
ಆದರೆ ಮೇ 17ರಂದು ನಿಧಿ ಚೌದರಿಯವರು ಟ್ವೀಟ್ ಮಾಡಿದ್ದನ್ನು ಸುದ್ದಿ ಮಾಡುವ ಭರದಲ್ಲಿ ಕೆಲ ಮಾಧ್ಯಮಗಳು ಅದರೊಳಗಿನ ವ್ಯಂಗ್ಯ, ಅಣಕವನ್ನು ಗುರುತಿಸಿರಲಿಲ್ಲ. ಇನ್ನು ಕೆಲವು ಮಾಧ್ಯಮಗಳಿಗೆ ಗೊತ್ತಿದ್ದರೂ ಸಹ ಆಕೆಯನ್ನು ದೇಶದ್ರೋಹಿ ರೀತಿಯಲ್ಲಿ ಚಿತ್ರಿಸಲಾಯಿತು. ಈಗ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚಿಸುವಷ್ಟರ ಮಟ್ಟಿಗೆ ಪ್ರಕರಣ ಬಂದು ನಿಂತಿದೆ.

ಇದೇ ಸಂದರ್ಭದಲ್ಲಿ ಚುನಾವಣಾ ಸಮಯದಲ್ಲಿ ಪ್ರಗ್ಯಾ ಸಿಂಗ್ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ಹೊಗಳಿದ್ದರು. ಅದನ್ನೇ ದಕ್ಷಿಣ ಕನ್ನಡದ ಸಂಸದ ನಳೀನ್ ಕುಮಾರ್ ಕಟೀಲ್ ಮತ್ತು ಉತ್ತರ ಕನ್ನಡದ ಅನಂತ್ ಕುಮಾರ್ ಹೆಗ್ಡೆ ಪುನಾರಾವರ್ತಿಸಿದ್ದರು. ಆ ಮೂವರು ಈಗ ಲಕ್ಷ ಲಕ್ಷ ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿರುವುದನ್ನು ನಾವು ನೆನಪಿಸಿಕೊಳ್ಳಬೇಕಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಪತ್ರಕರ್ತ ಗಿರೀಶ್ ತಾಳಿಕಟ್ಟೆ ಅವರು ಹೀಗೆಂದರು. ‘ಇಂದಿನ ಕಾಲ ಎತ್ತ ಸಾಗುತ್ತಿದೆ ಎಂಬುದಕ್ಕೆ ಈ ಘಟನೆ ನಿದರ್ಶನ. ನಿಜ ಗಾಂಧಿ ಪ್ರೇಮಿ ನಿಧಿ ಚೌಧರಿಯವರು ಮಾಡಿದ್ದ ಟ್ವೀಟ್‍ನಿಂದ ಅವರು ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಗಾಂಧೀಜಿಯವರ ಕುರಿತು ದ್ವೇಷ ಭಾವ ಮೂಡಿಸುತ್ತಾ, ಗೋಡ್ಸೆಗೆ ಮಂದಿರ ಕಟ್ಟಿ ಬಹಿರಂಗವಾಗಿ ಜೈಕಾರ ಹಾಕುತ್ತಿರುವವರು ದೇಶಭಕ್ತರೆಂದು ಕರೆಸಿಕೊಳ್ಳುತ್ತಿರುವುದು ದುರಂತ’.
ಈ ಕುರಿತು ಮೊದಲು ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿತ್ತು. ನಂತರ ಅವರ ಸ್ಪಷ್ಟೀಕರಣವನ್ನು ಸೇರಿಸಿ ವರದಿ ಪ್ರಕಟಿಸಿದೆ. ಈ ಕುರಿತು ಕನ್ನಡದ ಪ್ರಮುಖ ಬರಹಗಾರರಾದ ಕೆ.ಪಿ ನಟರಾಜ್‍ರವರು ಮೊದಲು ಆ ಐಎಎಸ್ ಅಧಿಕಾರಿಯ ವಿರುದ್ಧ ಷೇರ್ ಮಾಡಿದ್ದ ಲೇಖನವನ್ನು ಅಳಿಸಿ ಪೂರ್ತಿ ಗಮನಿಸದೇ ಷೇರ್ ಮಾಡಿದ್ದಕ್ಕೆ ಕ್ಷಮೆ ಕೇಳುವ ಮೂಲಕ ಮಾದರಿಯಾಗಿದ್ದಾರೆ.


