Homeಸಾಮಾಜಿಕಶೂದ್ರ ಆಚರಣೆಗಳಲ್ಲಿ ಬ್ರಾಹ್ಮಣ್ಯದ ಪ್ರವೇಶ!

ಶೂದ್ರ ಆಚರಣೆಗಳಲ್ಲಿ ಬ್ರಾಹ್ಮಣ್ಯದ ಪ್ರವೇಶ!

- Advertisement -
- Advertisement -

ಬಹಳ ವರ್ಷಗಳ ಹಿಂದಿನ ಮಾತು. ನಂಬಿಕೆಗಳು, ಅದರಲ್ಲೂ ಸಾರಾಸಗಟಾಗಿ ಮೂಢನಂಬಿಕೆ ಅನಿಸುವಂತವು- ಹೇಗೆ ಜನರ ಮನಸ್ಸಿನಲ್ಲಿ ಮೊಳೆಜಡಿದಂತೆ ಕುಳಿತುಬಿಟ್ಟಿರುತ್ತವೆ ಎಂಬುದಕ್ಕೆ ಉದಾಹರಣೆಯಾಗಿ ಇದನ್ನು ಹೇಳುತ್ತಿದ್ದೇನೆ.
ನಮ್ಮ ಮನೆಯಿಂದ ಸ್ವಲ್ಪವೇ ದೂರದ ಪಕ್ಕದ ಮನೆಯಲ್ಲಿ ನನ್ನ ಗೆಳೆಯನೊಬ್ಬ ಸೇಂದಿ ಮಾರಾಟ ಮಾಡುತ್ತಿದ್ದ. ಅವರ ಮನೆ ಅಂಗಳದ ಕೊಟ್ಟಿಗೆಯಲ್ಲಿ ತಾಳೆ ಮರದ ಪಕ್ಕಾಸಿನ ಬೆಂಚುಗಳು. ಮಣ್ಣಿನ ಗಡಿಗೆಯಲ್ಲಿ ಸೇಂದಿ ಸರಬರಾಜು. ಹರಟೆಗೆ ನೆಚ್ಚಿನ ತಾಣ. ಅದರಲ್ಲೂ ಭಾನುವಾರದ ದಿನ ಹತ್ತು ಗಂಟೆಗೆ ಅಲ್ಲಿಗೆ ಎಂಟ್ರಿ ಹಾಕಿದರೆ, ಮಧ್ಯಾಹ್ನ ದಾಟುವವರೆಗೂ ನಡೆಯುವ ಪಟ್ಟಾಂಗಗಳಲ್ಲಿ ಚರ್ಚೆಗೆ ಬರದ ವಿಷಯಗಳಿಲ್ಲ! ಮೂಢನಂಬಿಕೆಗಳು, ಭೂತಪ್ರೇತಗಳ ಕತೆಗಳು ಇತ್ಯಾದಿಯೇ ಹೆಚ್ಚಾಗಿ ಚರ್ಚೆಗೆ ಬರುತ್ತಿದ್ದುದು. ಇವರಿಗೆಲ್ಲ ಒಂದು ಚಿಕ್ಕ ಪಾಠ ಕಲಿಸಬೇಕೆಂದು ನಾನು ಒಂದು ಮ್ಯಾಜಿಕ್ ಪ್ರಯೋಗ ಮಾಡಲು ನಿರ್ಧರಿಸಿದೆ.
ಒಂದು ಭಾನುವಾರ ಕೆಲವು ಬಾಳೆಹಣ್ಣುಗಳಿಗೆ ಎರಡು ಕಡೆ ಸೂಜಿಯಿಂದ ತೂತು ಮಾಡಿ, ಜಾಗರೂಕತೆಯಿಂದ ಒಳಗಿನ ಹಣ್ಣು ಮೂರು ತುಂಡಾಗುವಂತೆ ಮಾಡಿದೆ. ಹೊರಗಿನಿಂದ ಏನೂ ಗೊತ್ತಾಗುತ್ತಿರಲಿಲ್ಲ. ಇದನ್ನು ಎತ್ತಿಕೊಂಡ ನಾನು ಅಲ್ಲಿಗೆ ಹೋಗಿ ತೀರ್ಥ ಸೇವನೆ ಆರಂಭಿಸಿದೆ. ಹಲವು ಮಂದಿ ಸೇರಿ, ಚರ್ಚೆಗಳು ಭರದಿಂದ ಸಾಗುತ್ತಿದ್ದಾಗ ನಾನು ಈ ಬಾಳೆಹಣ್ಣುಗಳನ್ನು ಹೊರತೆಗೆದು, ನಾನು ಕೆಲವು ಮಂತ್ರಗಳನ್ನು ಕಲಿತಿದ್ದೇನೆಂದೂ, ಅದರ ಮೂಲಕ ಬೆರಳಿನಲ್ಲೇ ಸವರಿ ಒಳಗಿನ ಹಣ್ಣನ್ನು ಮೂರು ತುಂಡು ಮಾಡುತ್ತೇನೆಂದೂ ಬುರುಡೆ ಬಿಟ್ಟೆ. ಕೆಲವರು ಸಂಶಯದಿಂದ, ಕೆಲವರು ಅಚ್ಚರಿಯಿಂದ ನೋಡಿದರು!
ನಾನು ಒಂದು ಬಾಳೆಹಣ್ಣನ್ನು ಪರೀಕ್ಷೆಗಾಗಿ ಕೊಟ್ಟು, ನಂತರ ಬಾಯಿಯಲ್ಲಿ ಮಣಮಣ ಹೇಳುತ್ತಾ ಎರಡು ಬಾರಿ ಬಾಳೆಹಣ್ಣನ್ನು ಸವರಿ, ಅಲ್ಲಿಯೇ ಒಬ್ಬರಿಗೆ ಹಣ್ಣನ್ನು ಸುಲಿಯಲು ಕೊಟ್ಟೆ! ಸಿಪ್ಪೆ ಸುಲಿದಾಗ, ಒಳಗಿನ ಹಣ್ಣು ಮೂರು ತುಂಡಾಗಿದ್ದದ್ದು ಕಂಡು ಕೆಲವರು ಉದ್ಘಾರ ತೆಗೆದರು! ಇದನ್ನು ಪುನರಾವರ್ತಿಸಿದಾಗ ಹೆಚ್ಚಿನವರಿಗೆ ಅಚ್ಚರಿಯಾಗಿತ್ತು!
ಇದನ್ನು ಹೇಗೆ ಮಾಡಬಹುದು ಎಂದು ನಾನು ವಿವರಿಸಿ, ಹೇಗೆ ಕೆಲವರು ಇಂತಹ ಸರಳ ಟ್ರಿಕ್ಕುಗಳಿಂದ ನಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ ಎಂದು ವಿವರಿಸಿ ಪ್ರವಚನ ಬಿಗಿದೆ.
ಆದರೆ, ನನ್ನ ಉತ್ಸಾಹಕ್ಕೆ ತಣ್ಣೀರು ಎರಚಿದಂತೆ ಒಬ್ಬ ಹಿರಿಯರು, ಭಯದಿಂದ ನೋಡುತ್ತಾ, “ನೀವೇನೇ ಹೇಳಿ! ಇವನು ಎಲ್ಲೇ ಈ ಮಂತ್ರ ಕಲಿತಿದ್ದಾನೆ! ಇಲ್ಲದಿದ್ದರೆ ಇದನ್ನು ಮಾಡಲು ಸಾಧ್ಯವೇ ಇಲ್ಲ!” ಎಂದು ಘಂಟಾಘೋಷವಾಗಿ ಸಾರಿ, ಬೇಗಬೇಗ ತನ್ನ ಸೇಂದಿ ಖಾಲಿ ಮಾಡಿದವರೇ ತಕ್ಷಣವೇ ಜಾಗವನ್ನೂ ಖಾಲಿಮಾಡಿದರು! ನಂತರ ಅವರು ನನಗೆ ಎದುರು ಸಿಕ್ಕಿದಾಗಲೆಲ್ಲಾ ಒಂದು ರೀತಿಯ ಭಯದಿಂದಲೇ ಮಾತನಾಡಿಸುತ್ತಿದ್ದರು. ನಂತರ ಇದೇ ರೀತಿ ಹಲವು ಟ್ರಿಕ್ಕುಗಳ ಪ್ರಯೋಗ ಮಾಡಿದರೂ ಪ್ರಯೋಜನ ಮಾತ್ರ ಸೊನ್ನೆ! ಜನರ ಮನಸ್ಥಿತಿ ಹೀಗಿರುವಾಗ ಈ ಜೋಯಿಸರ ಭಯೋತ್ಪಾದನೆ ಎಷ್ಟು ಸುಲಭ ಎಂದು ಊಹಿಸಿ!
ಇದನ್ನು ಬರೆಯುವ ಹೊತ್ತಿಗೆ ಕರಾವಳಿಯ ಮನೆಮನೆಗಳಲ್ಲಿ ನಾಗರಪಂಚಮಿಯ ಮಾತುಗಳು ನಡೆಯುತ್ತಿವೆ. ಈ ಬಾರಿ ಸ್ವಾತಂತ್ರ್ಯ ದಿನದಂತೇ ನಾಗರಪಂಚಮಿ ಬರುತ್ತಿರುವುದು ಸಾಂಕೇತಿಕವಾಗಿದೆ. ಅಂದು ಬಹಳಷ್ಟು ಶೂದ್ರಜನರ ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯ ಹರಣವಾಗಲಿದೆ! ನಾಗಾರಾಧನೆ ತುಳುನಾಡಿನಲ್ಲಿ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಇದು ಜನಪದೀಯ ಅಚರಣೆಗಳಾಗಿತ್ತು. ಕುಂದಾಪುರ ಪ್ರದೇಶದಲ್ಲಿ ನಡೆಯುವ ಕಾಡ್ಯನಾಟ ಇತ್ಯಾದಿ ಮೂಲನಿವಾಸಿ ಆಚರಣೆಗಳ ಬಗ್ಗೆ ಬಹಳಷ್ಟು ಸಂಶೋಧನಾ ಬರಹಗಳು ಬಂದಿವೆ. ಈ ಕುರಿತು ಪುಟಗಟ್ಟಲೆ ಬರೆಯಲು ಸಾಧ್ಯ!
ನಾಗನೆಂದರೆ ಎಲ್ಲರಿಗೂ ಭಕ್ತಿಗಿಂತ ಭಯ ಜಾಸ್ತಿ. ಮಾತೃಪ್ರಧಾನ ಶೂದ್ರ ಸಮುದಾಯದಲ್ಲಿ ನಾಗರಪಂಚಮಿಯ ದಿನ ಜನರು, ಮುಖ್ಯವಾಗಿ ಮಹಿಳೆಯರು ತಮ್ಮ ಮೂಲಸ್ಥಾನ ಎಂದು ಎಲ್ಲೆಲ್ಲಿಗೋ ಹೋಗಿ ಹಾಲೆರೆದು ಬರುವುದು ಪರಿಪಾಠ. ಇಲ್ಲಿ ನಾಗನಡೆ, ನಾಗಬೆರ್ಮೆರ್, ಇತ್ಯಾದಿ ಕಲ್ಪನೆಗಳು ಹಿಂದೆಯೂ ಇದ್ದವು. ಕೃಷಿ ಮತ್ತು ಪ್ರಕೃತಿ ಸಂಬಂಧಿಯಾದ ಈ ಆಚರಣೆಯಲ್ಲಿ ಬ್ರಾಹ್ಮಣ್ಯದ ಪ್ರವೇಶ ಹಿಂದೆಯೇ ಆಗಿತ್ತು. ಆದರೆ, ಅದು ನಾಲ್ಕು ಮಂತ್ರ ಹೇಳಿ ನಾಗ ಬನಗಳ ಹಳೆಯ ಮರಗಳ ಕೆಳಗೆ ಇರುತ್ತಿದ್ದ ಪುರಾತನವಾದ ನಾಗನ ಕಲ್ಲುಗಳಿಗೆ ಹಾಲು ಎರೆದು ಅರಿಶಿನ ಪೂಸಿ, ಕಾಡು ಹೂಗಳನ್ನು ಇಟ್ಟು ಪ್ರಸಾದ ಕೊಡುವುದಕ್ಕೆ ಸೀಮಿತವಾಗಿತ್ತು. ತುಳುವರ ಆಳವಾದ ನಂಬಿಕೆ ಭಯಗಳನ್ನು ಪುರೋಹಿತರು ಅತ್ಯಂತ ಚಾಕಚಕ್ಯತೆಯಿಂದ ತಮ್ಮ ಲಾಭಕ್ಕಾಗಿ ಬಳಸಿಕೊಂಡು ಎಲ್ಲದಕ್ಕೂ ‘ವೈದಿಕ’ದ ಬಣ್ಣ ಸಾರಿಸಿದ್ದಾರೆ. ಈಗ ನಾಗಸಂಬಂಧಿ ಎಲ್ಲಾ ಆಚರಣೆಗಳು ಸಾವಿರಾರು, ಲಕ್ಷಾಂತರ ರೂ. ವಹಿವಾಟಿನ ದಂಧೆಗಳಾಗಿವೆ. ಅದರ ಕುರಿತು ಪ್ರತ್ಯೇಕವಾಗಿ ಬರೆಯುತ್ತೇನೆ.
ನಾಲ್ಕೂವರೆ ದಶಕಗಳ ಹಿಂದೆ ನಾಗರಪಂಚಮಿ ಬಂದರೆ ನಮಗೆ ಮಕ್ಕಳಿಗೆಲ್ಲಾ ಹಬ್ಬದ ಸಡಗರ. ಹತ್ತಿರದ ಮನೆಗಳವರೆಲ್ಲಾ ಸೇರುತ್ತಿದ್ದರು. ನಮ್ಮ ಮನೆಯವರದ್ದೇ ಪಾರುಪತ್ಯ. ನಾವು ಕವಳಿಗೆ, ನಾಗಸಂಪಿಗೆ, ಅಬ್ಬಲಿಗೆ, ಗೋರಂಟಿ ಇತ್ಯಾದಿ ಹೂಗಳನ್ನು ಕೊಯ್ದು ಇಡುತ್ತಿದ್ದೆವು. ಇವುಗಳಲ್ಲಿ ತೇರು ಹೂ ಕೂಡಾ ಸೇರಿತ್ತು. ಪೂಜೆಗೆ, ನಾವು ಕಿಟ್ಟಜ್ಜ ಎಂದು ಕರೆಯುತ್ತಿದ್ದ ವೃದ್ಧ ಬ್ರಾಹ್ಮಣರೊಬ್ಬರು ಬರುತ್ತಿದ್ದರು. ಅವರ ಸರಳ ವ್ಯಕ್ತಿತ್ವ ಎಲ್ಲರ ಗೌರವಕ್ಕೆ ಪಾತ್ರವಾಗಿತ್ತು. ಅವರು ಕಾಲವಾದ ಮೇಲೆ ಅವರ ಮಕ್ಕಳು ಬರುತ್ತಿದ್ದರೂ, ಹೂವಿನ ವಿಚಾರ ಹೀಗೆಯೇ ನಡೆಯುತ್ತಿತ್ತು.
ಕೆಲ ವರ್ಷಗಳ ಹಿಂದೆ ನಾಗಬನದ ನವೀಕರಣವಾಯಿತು. ಕಲ್ಲಿನ ಕಟ್ಟೆ ನಿರ್ಮಾಣವಾಯಿತು. ಹೊಸದಾಗಿ ‘ಸೇರಿದ್ದ’ ಕುಟುಂಬ ಎರಡು ಮೂರು ಲಕ್ಷ ಖರ್ಚು ಮಾಡಿತು. ಅಲ್ಲಿಂದ ಪೂಜೆ ಅದ್ದೂರಿಯಾಯಿತು. ‘ಹಿರಿಯ’ ಮನೆಯಲ್ಲಿ ಉಳಿದಿರುವ ಹಿರಿಯ ಗಂಡಸಾಗಿ ನಾನೂ ಅಂಗಿ ತೆಗೆದು ಉಳಿದವರೊಡನೆ ಪೂಜೆಗೆ ನಿಲ್ಲಬೇಕಾಗಿತ್ತು. ನಾನು ವೈಚಾರಿಕವಾಗಿ ಇದಕ್ಕೆಲ್ಲ ವಿರೋಧ ವಾಗಿದ್ದರೂ, ಉಳಿದವರ ನಂಬಿಕೆಗೆ ಗೌರವ ಕೊಡುವ ಸಲುವಾಗಿ ನಿಲ್ಲುತ್ತಿದ್ದೆ.
ಹೀಗಿರುತ್ತಾ ಒಂದು ವರ್ಷ ನಾನು ಇದೇ ಸಮಯದಲ್ಲಿ ಮಾತ್ರ ಕಾಣುವ ತೇರು ಹೂಗಳನ್ನು ಕೊಯ್ದು ಕಳಿಸಿದ್ದೆ. ಈಗ ಭಕ್ತರು ಪೇಟೆಯಿಂದ ತರುವ ಮಲ್ಲಿಗೆ, ಸೇವಂತಿಗೆ, ಗುಲಾಬಿಗಳ ರಾಶಿಯ ನಡುವೆ ಅವು ಪೇಟೆಯ ಹುಡುಗಿಯರ ನಡುವೆ ಹಳ್ಳಿಯ ಹುಡುಗಿಯರಂತೆ ಕುಳಿತಿದ್ದವು. ಭಟ್ರು ಹೂವಿನ ಅಲಂಕಾರ ಮಾಡುತ್ತಾ, ಈ ತೇರು ಹೂಗಳನ್ನು ಕಂಡು ಮುಖ ಸಿಂಡರಿಸುತ್ತಾ, ಯಾರು ತಂದದ್ದು ಇದನ್ನು ಎಂದು ತುಚ್ಛವಾಗಿ ದೂರ ಎಸೆದುಬಿಟ್ಟರು! ಅವರಿಗೆ ಅದನ್ನು ತಂದವನು ‘ಯಜಮಾನ’ ನಾನೆಂದು ಗೊತ್ತಿರಲಿಲ್ಲ. ಗೊತ್ತಿದ್ದರೆ, ನಾನು ಅವರ ಜೊತೆ ಚರ್ಚೆ ಮಾಡುತ್ತಿದ್ದುದರಿಂದ ಅವರು ನನ್ನ ತಂಟೆಗೆ ಬರದೇ ಈ ಹೂಗಳನ್ನು ಎಸೆಯುವ ಗೋಜಿಗೆ ಹೋಗುತ್ತಿರಲಿಲ್ಲ. ನನಗೆ ಮುಖಕ್ಕೆ ಹೊಡೆದಂತಾದರೂ, ರಂಪ ಮಾಡಲಿಲ್ಲ.
ಅಂದು ತುಳುವನಾದ ನನ್ನ ಪುರಾತನ ಆಚರಣೆಯನ್ನು ಆಧುನಿಕ ಬ್ರಾಹ್ಮಣ್ಯ ಕಾಲಡಿ ಹಾಕಿ ಹೊಸಕಿದಂತಾಯಿತು. ಅಂದಿನಿಂದ ಮನೆಯ ಪಕ್ಕದ ಬನದಲ್ಲಿ ನಡೆಯುವ ಪೂಜೆಗೆ ನಾನು ಹೋಗುತ್ತಿಲ್ಲ! ಫಲವಂತಿಕೆಯ ಸಂಕೇತವಾಗಿ ಶೂದ್ರ, ಅಬ್ರಾಹ್ಮಣ ಸ್ತ್ರೀಯರು ಮುಟ್ಟಿ ಪೂಜೆಗೊಳ್ಳುತ್ತಿದ್ದ ನಾಗ ಇಂದು ವೈದಿಕತೆಯ ಬುಟ್ಟಿಯಲ್ಲಿ ಸುರುಳಿ ಸುತ್ತಿಕೊಂಡು ಬಿದ್ದಿರಬೇಕಾಗಿ ಬಂದಿದೆ!
ತುಳುನಾಡಿನಲ್ಲಿ ಆಳವಾಗಿ ಬೇರುಬಿಟ್ಟಿರುವ ಭೂತಾರಾಧನೆಯಲ್ಲಿ ಪುರೋಹಿತರ ಪ್ರವೇಶ ಆದದ್ದು ಹೇಗೆ?
ನಮ್ಮಲ್ಲಿ ಬೊಬ್ಬರ್ಯ ಅಲಿ ಭೂತದಂತಹ ಮುಸ್ಲಿಮ್ ಭೂತಗಳೂ, ಕಲ್ಲುರ್ಟಿ, ಕಲ್ಕುಡ, ಬಬ್ಬುಸ್ವಾಮಿಯಂತಹ ದಲಿತ ಭೂತಗಳೂ ಇವೆ. ಕೊರಗಜ್ಜನೆಂದೇ ಸಾವಿರಾರು ಶೂದ್ರರು ನಂಬುವ ಕೊರಗ ತನಿಯ, ಬಿಲ್ಲವ ವೀರರಾದ ಕೋಟಿ-ಚೆನ್ನಯರು ದೈವಗಳಾಗಿ ಆರಾಧನೆಗೆ ಪಾತ್ರರಾಗಿದ್ದಾರೆ.
ಇಲ್ಲಿ ಭೂತಗಳ ಮೇಲಿನ ನಂಬಿಕೆಗೆ ಧರ್ಮ ಭೇದವಿಲ್ಲ. ಹೆಚ್ಚಿನ ಭೂತಗಳು ಮಾಂಸಾಹಾರಿಗಳು- ಕೋಳಿ ಬೇಕೇಬೇಕು. ಕೆಲವು ಭೂತಗಳಿಗೆ ಸೇಂದಿ ಬೇಕೇಬೇಕು. ಅಬ್ರಾಹ್ಮಣ ಹಿನ್ನೆಲೆಯ ಭೂತಾರಾಧನೆಯಲ್ಲಿ ಪುರೋಹಿತರ ಪ್ರವೇಶವಾದದ್ದು ಹೇಗೆ? ಭೂತಗಳನ್ನು ನಂಬುವ ಬ್ರಾಹ್ಮಣ ಮನೆಗಳಲ್ಲಿ ಕೋಳಿಯ ಬದಲು ಕುಂಬಳ ಕಡಿಯುವ ಪದ್ಧತಿ ಏಕೆ ಇದೆ? ಅದಕ್ಕಾಗಿಯೇ ಇಡೀ ಕುಂಬಳಕ್ಕೆ ಮನೆಯ ಪ್ರವೇಶವನ್ನು ನಿಷೇಧಿಸಿದ್ದು ಯಾರು? ಅದನ್ನು ಬೊಜ್ಜದಂತಹ ಅಶುಭ ಕಾರ್ಯಗಳಿಗೆ ಕಡ್ಡಾಯ ಮಾಡಿದ್ದು ಯಾರು? ಸಸ್ಯಾಹಾರಿ ಬೊಜ್ಜ (ಈಗ ಉತ್ತರ ಕ್ರಿಯೆ!)ದ ರಾತ್ರಿ ಕೋಳಿ ಕಡ್ಡಾಯ ಏಕೆ? ಇದು ಏನನ್ನು ಸೂಚಿಸುತ್ತದೆ?
ನಮ್ಮ ಹಿರಿಯರು ಸರಳವಾಗಿ ಮತ್ತು ನೇರವಾಗಿ ಭೂತದೊಂದಿಗೆ ಮಾತನಾಡುತ್ತಿದ್ದರು. ಈಗ ಯಾಕೆ ನಡುವೆ ಏಜೆಂಟರು ಬಂದಿದ್ದಾರೆ? ಕಡಿಮೆ ಖರ್ಚಿನಲ್ಲಿ ನಡೆಯುತ್ತಿದ್ದ ಕೋಲ ನೇಮಗಳು ಲಕ್ಷಾಂತರ ರೂ. ಖರ್ಚಾಗುವ ಸಂಸ್ಕøತದ ಕೋಲೋತ್ಸವ, ನೇಮೋತ್ಸವಗಳಾದದ್ದು ಹೇಗೆ? ದಲಿತರು, ಶೂದ್ರರು ಯೋಚಿಸಬೇಕು- ನಮ್ಮ ನಂಬಿಕೆ ನಮಗೆ, ಅದರಲ್ಲಿ ಹೊರಗಿನವರಿಗೆ ಏನು ಕೆಲಸ!? ಇವುಗಳನ್ನು ಮುಂದೆ ವಿವರವಾಗಿ ನೋಡೋಣ.

– ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...