ಚುನಾವಣೆ ಸೀಜನ್ ಆರಂಭವಾದಾಗಿನಿಂದ ಎಲ್ಲ ಪತ್ರಿಕೆಗಳ ಮುಖಪುಟಗಳಲ್ಲಿ ‘ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ’ ಎಂಬ ಜಾಹೀರಾತು ಕಣ್ಣಿಗೆ ರಾಚುತ್ತಿದೆ. ಚಾನೆಲ್‍ಗಳಲ್ಲೂ ಗಂಟೆಗೊಮ್ಮೆ, ಗಳಿಗೆಗೊಮ್ಮೆ ರೇಜಿಗೆ ಹುಟ್ಟಿಸುವಷ್ಟು ಇಂಥದೇ ಅಬ್ಬರದ ಜಾಹೀರಾತುಗಳು. ಜಾಹೀರಾತುಗಳ ಮೂಲಕ ತಮ್ಮ ರಾಜಕೀಯವನ್ನು ಮಾರ್ಕೆಟಿಂಗ್ ಮಾಡುವ ಧಂಧೆಯಲ್ಲಿ ಎಲ್ಲ ಪಕ್ಷಗಳೂ ತೊಡಗಿಸಿಕೊಂಡಿವೆ. ಅದರಲ್ಲಿ ಬಿಜೆಪಿ ಅಗ್ರಗಣ್ಯ.
ಇದು ಹೇಳಿಕೇಳಿ ಜಾಹೀರಾತು ಯುಗ. ಮಾರ್ಕೆಟಿಂಗ್ ಮ್ಯಾನೇಜರ್‍ಗಳಿಗೆ ಪ್ರಸ್ತುತ ಭಾರೀ ಬೇಡಿಕೆಯಿದೆ. ಆಕರ್ಷಕ ಪ್ಯಾಕಿಂಗ್ ಮತ್ತು ಮಾರ್ಕೆಟಿಂಗ್ ತಂತ್ರಗಾರಿಕೆಯಿಂದ ಏನನ್ನು ಬೇಕಾದರೂ ಒಳ್ಳೆಯ ಬೆಲೆಗೆ ಮಾರಿಬಿಡಬಹುದು. ಆದರೆ ಒಮ್ಮೆ ಕೊಂಡ ಕಂಪನಿಯ ಮಾಲನ್ನೇ ಮತ್ತೊಮ್ಮೆ ಕೊಳ್ಳಬೇಕಾದರೆ ಗ್ರಾಹಕರಿಗೆ ಕನಿಷ್ಟ ಪಕ್ಷದ ತೃಪ್ತಿಯಾದರೂ ಸಿಕ್ಕಿರಬೇಕು. ಇದು ಮಾರ್ಕೆಟಿಂಗ್ ಸೂತ್ರದ ಕನಿಷ್ಟ ಜ್ಞಾನ.
ರಾಜಕೀಯದ ಮಾರ್ಕೆಟಿಂಗ್‍ನಲ್ಲಿರುವ ಬಿಜೆಪಿ ಈ ಕನಿಷ್ಟ ಜ್ಞಾನವನ್ನು ಅರ್ಥಮಾಡಿಕೊಂಡಂತಿಲ್ಲ. ಕೇವಲ ಅಬ್ಬರದ ಪ್ರಚಾರದಿಂದಲೇ ತಮ್ಮ ರಾಜಕೀಯದತ್ತ ಮತದಾರರನ್ನು ಸೆಳೆದುಬಿಡಬಹುದೆಂಬ ಭ್ರಮೆಯಲ್ಲಿರುವಂತೆ ಕಾಣುತ್ತಿದೆ. ನಿಜ, ಈ ದೇಶದ ರಾಜಕೀಯ ಮಾರುಕಟ್ಟೆ ನಮ್ಮ ಸಾಮಾಜಿಕ ವ್ಯವಸ್ಥೆಯಷ್ಟೇ ಸಂಕೀರ್ಣ. ಇಲ್ಲಿ ಮತದಾರರ ಮೇಲೆ ಪರಿಣಾಮ ಬೀರುವುದು ಆರ್ಥಿಕ ಸವಲತ್ತುಗಳಷ್ಟೇ ಅಲ್ಲ; ಹಲವು ಸಾಂಸ್ಕøತಿಕ, ಭಾವನಾತ್ಮಕ ವಿಚಾರಗಳೂ ತೀವ್ರ ಪರಿಣಾಮ ಬೀರುತ್ತಲಿವೆ. ಬಿಜೆಪಿಯ ಮಾರ್ಕೆಟಿಂಗ್ ಸ್ಟ್ರಾಟೆಜಿ ಬಹುಮಟ್ಟಿಗೆ ಇಂಥಾ ಧಾರ್ಮಿಕ ವಿಚಾರಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ.
ಆದರೆ ಕರ್ನಾಟಕದ ಪ್ರಜ್ಞಾವಂತ ಮತದಾರರು ಬಿಜೆಪಿಯ ಈ ಕಾಲಬಾಹಿರ, ವಿಚ್ಛಿದ್ರಕಾರಿ ತಂತ್ರವನ್ನು ತಿರಸ್ಕರಿಸುವ ಸ್ಪಷ್ಟ ಲಕ್ಷಣಗಳು ಎಲ್ಲೆಡೆ ಕಂಡು ಬರುತ್ತಿವೆ. ಬಿಜೆಪಿ ಹಾಗೂ ಸಂಘ ಪರಿವಾರದ ಪ್ರಯೋಗಶಾಲೆಯಂತಿದ್ದ ಕರಾವಳಿ ಪ್ರದೇಶದಲ್ಲೂ ಈ ಮತೀಯವಾದಿ ರಾಜಕೀಯದ ಆಟಗಳ ಬಗ್ಗೆ ಕ್ರಮೇಣ ಜಾಗೃತಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ.
‘ರಾಜಕೀಯ ಚಾಣಕ್ಯ’ ಎಂಬ ಮಾಧ್ಯಮ ಬಿರುದಾಂಕಿತ ಅಮಿತ್ ಶಾ ಈ ಬಾರಿ ಇವರ ದಂಡನಾಯಕ. ಈ ‘ಚಾಣಕ್ಯ’ ತಂತ್ರದ ಭಾಗವಾಗಿ ಹೆಣಗಳನ್ನು ಮುಂದಿಟ್ಟುಕೊಂಡು ಕೋಮು ದಳ್ಳುರಿ ಎಬ್ಬಿಸಿ, ಮತಗಳ ದೃವೀಕರಣದ ಮೂಲಕ ಗೆಲ್ಲುವ ತಮ್ಮ ಮಾಮೂಲಿ ತಂತ್ರವನ್ನೇ ಪ್ರಯೋಗ ಮಾಡಿ ವಿಫಲರಾದರು. ಬಹುಶಃ ಈ ದಳ್ಳುರಿ ತಂತ್ರದ ಮೇಲೆ ಅತಿಯಾಗಿ ನೆಚ್ಚಿಕೊಂಡಿದ್ದರೆಂದು ಕಾಣುತ್ತೆ. ನಂತರ ಮತ ಸೆಳೆಯಲು ಅವರಿಗೆ ದಿಕ್ಕೇ ತೋಚದಂತಾಯ್ತು. ನಂತರ ‘ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂ.1’ ಎಂದು ‘ಚಾಣಕ್ಯ’ ಅಪ್ಪಣೆಕೊಡಿಸಿದರು. ಮಾಧ್ಯಮಗಳು ಅತಿ ಉತ್ಸಾಹದಿಂದಲೇ ಈ ‘ನಂ 1’ ಪಟ್ಟ ಕಟ್ಟಲು ಪ್ರಯಾಸಪಟ್ಟವು. ಆದರೆ ಇದ್ಯಾವುದೂ ನಾಡಿನ ಜನತೆಗೆ ತಟ್ಟಲೇಇಲ್ಲ. ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರರಹಿತವಾಗಿದೆ ಎಂಬುದಾಗಿರಲಿಲ್ಲ. ಬದಲಿಗೆ ಇಂಥಾ ಆರೋಪ ಮಾಡುತ್ತಿರುವವರು ಕಾಂಗ್ರೆಸ್‍ನ ಹೋಲಿಕೆಯಲ್ಲಿ ಮತ್ತಷ್ಟು ಪರಮ ಭ್ರಷ್ಟರಾಗಿದ್ದುದು. ಭ್ರಷ್ಟಾಚಾರದ ಆರೋಪದ ಮೇಲೆಯೇ ಜೈಲಿಗೆ ಹೋದ ಯಡ್ಯೂರಪ್ಪನವರೇ ಅವರ ಸಿಎಂ ಅಭ್ಯರ್ಥಿ ಎಂದು ಜನರು ಹಾದಿಬೀದಿಯಲ್ಲಿ ಆಡಿಕೊಂಡು ನಕ್ಕರು. ರಾಜಕೀಯ ‘ಚಾಣಕ್ಯ’ನಿಗೆ ಇಂಥಾ ಕನಿಷ್ಟ ವಿಚಾರ ಹೊಳೆಯಲೇ ಇಲ್ಲವೇ? ಅಥವಾ ಮಾಧ್ಯಮಗಳ ಬೆಂಬಲವೊಂದಿದ್ದರೆ ಹೇಗೆ ಬೇಕಾದರೂ ಆಟ ಆಡಬಹುದು ಎಂಬ ದಾಷ್ಟ್ರ್ಯವೇ? ‘ಚಾಣಕ್ಯ’ ಬಿರುದನ್ನು ದಯಪಾಲಿಸಿರುವ ಮಹಾನುಭಾವರೇ ಉತ್ತರಿಸಬೇಕು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ನೈತಿಕ ಶಕ್ತಿಯನ್ನೇ ಕಳೆದುಕೊಂಡಂತಾಗಿರುವ ಬಿಜೆಪಿಯ ರಾಜ್ಯ ನಾಯಕತ್ವಕ್ಕೆ ಇನ್ನು ಉಳಿದಿದ್ದ ಒಂದೇ ಆಸರೆಯೆಂದರೆ ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸನ್ನು ಬಳಸಿಕೊಳ್ಳುವುದು. ಪ್ರಧಾನಿ ಮೋದಿಯೇ ಅಖಾಡಕ್ಕಿಳಿದರು. ವಿರೋಧಿಗಳನ್ನು ಕೀಳುಮಟ್ಟದಲ್ಲಿ ದೂಷಿಸುವುದನ್ನು ಬಿಟ್ಟರೆ ಈ ಮಹಾನುಭಾವರಿಗೆ ಹೇಳಿಕೊಳ್ಳಲಿಕ್ಕೆ ಯಾವ ಸಾಧನೆಯೂ ಇಲ್ಲ. ಹೀಗೆ ಈ ಬಾರಿಯ ಚುನಾವಣಾ ಪ್ರಚಾರ ಅತ್ಯಂತ ಕೀಳುಮಟ್ಟದ ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ. ಮೋದಿಯವರಿಗೆ ಹೇಗಾದರೂ ತನ್ನ ಪಕ್ಷವನ್ನು ಅಧಿಕಾರಕ್ಕೆ ತರಲು ಇಂಥಾ ತಂತ್ರಗಳು ಅನಿವಾರ್ಯ ಎಂದು ವಾದಕ್ಕಾಗಿ ಒಪ್ಪಿಕೊಳ್ಳೋಣ. ಆದರೆ ಸುಳ್ಳು ಪೊಳ್ಳುಗಳನ್ನೆಲ್ಲ ಅತಿ ಉತ್ಸಾಹದಿಂದ ಪ್ರಚುರಪಡಿಸುತ್ತಿರುವ ಬಹುಪಾಲು ಮಾಧ್ಯಮಗಳ ಪಾತ್ರ ಇಲ್ಲಿ ಪ್ರಶ್ನಾರ್ಹ.
ಕಳೆದ 5 ವರ್ಷಗಳಿಂದಲೂ ಸಿಎಂ ಸಿದ್ದರಾಮಯ್ಯನವರ ಹೆಸರಿಗೆ ಮಸಿಹಚ್ಚಲು ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಟಿವಿ ಚಾನೆಲ್‍ಗಳು ಸಾಕಷ್ಟು ಕಸರತ್ತು ನಡೆಸಿವೆ. ಸಿದ್ದರಾಮಯ್ಯರನ್ನು ‘ನಿದ್ದರಾಮಯ್ಯ’ ಎಂದು ಬೊಂಬಡಾ ಬಜಾಯಿಸಿದರು, ಕೊನೆಗೆ ಕಾರಿನ ಮೇಲೆ ಕೂತ ಕಾಗೆಯನ್ನು ಸಿದ್ದುಗೆ ಶನಿ ಹೆಗಲೇರಿದೆ, ಇನ್ನು ಅವರ ಕತೆ ಮುಗೀತು ಎಂಬಂತಹ ಬಾಲಿಶ ಅಪಪ್ರಚಾರಗಳನ್ನು ಮಾಡಿದರು. ಯಾವುದೇ ಗುರುತರವಾದ ಹಗರಣಗಳು, ಆರೋಪಗಳು ಸಿಗದೇ ಇದ್ದಾಗ ಕೈಯಲ್ಲಿರುವ ವಾಚ್‍ನ ಹಿಂದೆ ಬಿದ್ದರು. ಡಿ.ಕೆ ರವಿ ಎಂಬ ಐಎಎಸ್ ಅಧಿಕಾರಿಯ ಸೂಸೈಡ್ ಕೇಸು ನಮಗೆ ನೆನಪಿದೆ. ವೈಯಕ್ತಿಕ ಕಾರಣಗಳಿಗಾಗಿ ಸಂಭವಿಸಿದ ಆತ್ಮಹತ್ಯೆಯನ್ನು ಈ ಸರ್ಕಾರದಲ್ಲಿರುವ ಮಂತ್ರಿಗಳೇ ಕೊಲೆಮಾಡಿದ್ದಾರೆ ಎಂಬಂತೆ ಬಿಂಬಿಸಿ ತಿಂಗಳುಗಟ್ಟಲೆ ಎಂಥ ಪ್ರಕ್ಷುಬ್ದ ವಾತಾವರಣ ಸೃಷ್ಟಿಸಿದ್ದರು ಎಂಬುದು ನಮ್ಮ ನೆನಪಿನಲ್ಲಿರಲಿ. ಹೋಗಲಿ, ಕೊನೆಗೆ ಸಿಬಿಐ ತನಿಖೆಯಿಂದ ಸತ್ಯ ಹೊರಬಂದ ನಂತರವಾದರೂ ಜನರಿಗೆ ವಾಸ್ತವ ಚಿತ್ರಣ ಸಿಕ್ಕಿದೆಯೆ? ಉಹೂಂ ಇಲ್ಲ.
ಈ ಮಾಧ್ಯಮಗಳು ಟಿಆರ್‍ಪಿಗಾಗಿ ರೋಚಕತೆಯ ಬೆನ್ನುಹತ್ತುತ್ತಾರೆ ಬಿಡಿ ಎಂದು ಈ ವಿಷಯವನ್ನು ಕಡೆಗಣಿಸುವವರಿದ್ದಾರೆ. ವಿಷಯ ಅಷ್ಟು ಸರಳವಾಗಿಲ್ಲ. ‘ಕರ್ನಾಟಕ ಸರ್ಕಾರ ನಂ.1 ಭ್ರಷ್ಟಾಚಾರಿ’ ಎಂದ ‘ಚಾಣಕ್ಯ’ನ ಮಾತನ್ನು ಟಾಂಟಾಂ ಹೊಡೆಯುವ ಮಾಧ್ಯಮಗಳಿಗೆ, ಜೂನಿಯರ್ ಶಾನ ಕೇವಲ 50 ಸಾವಿರ ಬಂಡವಾಳದ ಕಂಪನಿಯ ಬಂಡವಾಳ ದಿಡೀರ್ 80 ಕೋಟಿಯಾಗಿದ್ದು ಯಾಕೆ ಕಾಣುತ್ತಿಲ್ಲ. ಏಕಾಏಕಿ 16,000 ಪಟ್ಟು ಬೆಳವಣಿಗೆಯ ಮರ್ಮವೇನೆÉಂಬ ಪ್ರಶ್ನೆಯನ್ನು ಯಾಕೆ ಚರ್ಚಿಸುವುದಿಲ್ಲ? ಹೋಗಲಿ, ಈ ‘ಚಾಣಕ್ಯ’ನ ಕೆಲವು ಪ್ರಮುಖ ಸಾಧನೆಗಳನ್ನು ನೋಡೋಣ.
2010 ರಲ್ಲಿ ಈ ವ್ಯಕ್ತಿ ನರೇಂದ್ರಮೋದಿ ಸರ್ಕಾರದಲ್ಲಿ ಗುಜರಾತ್‍ನ ಗೃಹ ಸಚಿವರಾಗಿದ್ದಾಗ ನಕಲಿ ಎನ್‍ಕೌಂಟರ್ ಕೇಸಿನಲ್ಲಿ ಮೂರೂವರೆ ತಿಂಗಳು ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅದೂ ಕೂಡ ಷರತ್ತುಬದ್ದ ಜಾಮೀನು. ಗುಜರಾತ್ ರಾಜ್ಯ ಪ್ರವೇಶ ಮಾಡಿದರೆ ಸಾಕ್ಷ್ಯ ನಾಶ ಮಾಡುತ್ತಾರೆಂದು ಸುಪ್ರಿಂಕೋರ್ಟ್ ಎರಡು ವರ್ಷ ಈ ‘ಚಾಣಕ್ಯ’ನಿಗೆ ರಾಜ್ಯದಿಂದ ಗಡಿಪಾರು ವಿಧಿಸಿತ್ತು. ಕಾರಿನ ಮೇಲೆ ಕೂತ ಕಾಗೆಯನ್ನು ವಾರಗಟ್ಟಲೆ ತೋರಿಸಿದ ಮಾಧ್ಯಮಗಳು ಇಂಥಾ ವಿಷಯಗಳನ್ನು ಮರೆಮಾಚಿ, ‘ಚಾಣಕ್ಯ’ನ ತಂತ್ರಗಳಿಗೆ ತಲೆದೂಗುತ್ತಿರುವುದು ದುರಂತದ ಸಂಗತಿ.
ಇನ್ನು ಪ್ರಧಾನ ಸೇವಕರ ವಿಚಾರಕ್ಕೆ ಬರೋಣ. ಲಲಿತ್ ಮೋದಿ ಮತ್ತು ನೀರವ್ ಮೋದಿಗಳಿಗೂ ಪ್ರಧಾನಿ ನರೇಂದ್ರ ಮೋದಿಗೂ ಇರುವ ಸಂಬಂಧ ಏನೆಂಬ ಪ್ರಶ್ನೆಯನ್ನು ಯಾರಾದರೂ ಕೇಳಿದ್ದಾರೆಯೆ? ಮಲ್ಯ, ಚೋಕ್ಸಿ, ಅದಾನಿಯ ಬೀಗ ಜತಿನ್ ಮೆಹ್ತಾ ಮುಂತಾದವರು ಬ್ಯಾಂಕುಗಳಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿ ವಿದೇಶಕ್ಕೆ ಹಾರಿ ಹೋಗಲು ಯಾಕೆ ಅವಕಾಶ ಮಾಡಿಕೊಟ್ಟಿರಿ ಎಂದು ಮೋದಿಯನ್ನು ಪ್ರಶ್ನೆ ಮಾಡಿದ್ದನ್ನು ಯಾವ ಚಾನೆಲ್‍ನಲ್ಲೂ ಯಾಕೆ ನೋಡಲೇಇಲ್ಲ?
ಗೋರಕ್ಷಣೆಯ ಹೆಸರಿನಲ್ಲಿ ಭಾರೀ ರಾಜಕೀಯ ಷಡ್ಯಂತ್ರಗಳೇ ನಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಗೋಮಾಂಸ ರಫ್ತಿನಲ್ಲಿ ಭಾರತ ನಂ.1 ಸ್ಥಾನಕ್ಕೇರಿದೆ. ‘ನನ್ನ ಕೆಲವು ಮಿತ್ರರು ಬೀಫ್ ಎಕ್ಸ್‍ಪೋರ್ಟ್ ಬ್ಯುಸಿನೆಸ್ ಮಾಡ್ತಾರೆ’ ಅಂತ ಸ್ವತಃ ಮೋದಿಯವರೇ ಕೆಲವು ವರ್ಷಗಳ ಹಿಂದೆ ನಿಜ ಒಪ್ಪಿಕೊಂಡಿದ್ದರು. ಈ ಬಗ್ಗೆ ಒಂದಾದರೂ ಪ್ರಶ್ನೆ ಕೇಳುವ ಧೈರ್ಯ ಯಾಕೆ ತೋರುತ್ತಿಲ್ಲ? ರಫೇಲ್ ವಿಮಾನ ಖರೀದಿಸಲು ಸರ್ಕಾರಿ ಸ್ವಾಮ್ಯದ ಎಚ್‍ಎಎಲ್ ಕಂಪನಿಯ ಒಪ್ಪಂದ ರದ್ದು ಮಾಡಿ, ಅದೇ ವಿಮಾನಗಳನ್ನು ಮೂರುಪಟ್ಟು ಬೆಲೆಗೆ ಸರಬರಾಜು ಮಾಡಲು ತಮ್ಮ ಮಿತ್ರ ಅನಿಲ್ ಅಂಬಾನಿಗೆ ಡೀಲ್ ಕೊಟ್ಟು ಸರ್ಕಾರದ ಸಾವಿರಾರು ಕೋಟಿ ಹಣವನ್ನು ಗುಳುಂ ಮಾಡಿದ ಬಗ್ಗೆ ಯಾಕೆ ಆಸಕ್ತಿ ತೋರುತ್ತಿಲ್ಲ? ಸ್ಕೂಪ್ ಗೇಟ್, ಸಹರಾ ಡೈರಿ, ಜಿಎಸ್‍ಪಿಸಿ ಹಗರಣ … ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಿದೆ.
ಇರಲಿ, ಕರ್ನಾಟಕದ ಚುನಾವಣೆಯ ವಿಚಾರಕ್ಕೆ ಬರೋಣ. ಮೋದಿಯನ್ನು ಮುಂದಿಟ್ಟುಕೊಂಡು ರ್ಯಾಲಿಗಳನ್ನು ನಡೆಸಿದರೂ ಬಿಜೆಪಿ ಗ್ರಾಫ್ ಮೇಲೇರುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣ ಇದೇ ಯಡ್ಯೂರಪ್ಪ, ಶ್ರೀರಾಮುಲು, ಕಟ್ಟಾ ಸುಬ್ರಮಣ್ಯ, ಜನಾರ್ಧನ ರೆಡ್ಡಿ, ಬ್ಲೂಫಿಲಂ ಖ್ಯಾತಿಯ, ಅತ್ಯಾಚಾರ ಆರೋಪಿಗಳ ಕೈಗೆ ಸರ್ಕಾರ ಒಪ್ಪಿಸಲು ಕನ್ನಡ ನಾಡಿನ ಪ್ರಜ್ಞಾವಂತ ಜನತೆ ಸಿದ್ಧರಿಲ್ಲ. ಇನ್ನು ‘ಹವಾ ಎಬ್ಬಿಸಲು’ ಬಂದಿರುವ ಸ್ವತಃ ಮೋದಿಯ 4 ವರ್ಷಗಳ ಆಡಳಿತವನ್ನು ಈಗಾಗಲೇ ಜನರು ನೋಡಿದ್ದಾರೆ. ಕಪ್ಪು ಹಣ ವಾಪಸ್ ತರುತ್ತೇವೆ ಎಂದಿದ್ದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಅಂತ ಬೂಸಿ ಬಿಟ್ಟದ್ದು, ಬೆಲೆಯೇರಿಕೆ ನಿಯಂತ್ರಣದ ಬಗ್ಗೆ ಭರ್ಜರಿ ಭಾಷಣ ಮಾಡಿ, ತಾವೇ ಎಲ್ಲ ಬೆಲೆಗಳನ್ನು ಗಗನಕ್ಕೇರಿಸಿದ್ದು, ನೋಟ್‍ಬಂದಿ ಅವಾಂತರ, ಜಿಎಸ್‍ಟಿ ಲೂಟಿ, ಡಾಲರ್ ಎದುರು ರೂಪಾಯಿ ಕುಸಿತ, ನಿರುದ್ಯೋಗ ಹೆಚ್ಚಿಸಿದ್ದು, ಅಭಿವೃದ್ದಿ ದರ ಕುಸಿದಿರುವುದು – ಹೀಗೆ ಸರ್ವಾಂಗೀಣ ವೈಫಲ್ಯ ಎದ್ದು ಕಾಣುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ವಾಗ್ದಾನ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷದ ಶಾಸಕರು, ಸಚಿವರೇ ಅತ್ಯಾಚಾರಿಗಳಾದ ಪ್ರಕರಣಗಳು ದಿನನಿತ್ಯದ ಸುದ್ದಿಯಾಗಿಬಿಟ್ಟಿವೆ. ಉತ್ತರಪ್ರದೇಶ, ಮಧ್ಯಪ್ರದೇಶ ಮುಂತಾದೆಡೆ ಬಿಜೆಪಿ ಸರ್ಕಾರಗಳು ಅತ್ಯಾಚಾರಿಗಳ ರಕ್ಷಣೆಗೆ ಬಹಿರಂಗವಾಗಿ ನಿಂತಿರುವ ವಿಷಯ ಅಷ್ಟು ಸುಲಭವಾಗಿ ಮರೆಯುವಂಥದ್ದಲ್ಲ.
ಉಹೂಂ, ಮೋದಿಯ ಅಬ್ಬರದ ಸುಳ್ಳುಪ್ರಚಾರಕ್ಕೆ ಕನ್ನಡ ನಾಡಿನ ಪ್ರಜ್ಞಾವಂತ ಜನತೆ ಮರುಳಾಗುತ್ತಿಲ್ಲ. ಅವರ ಜಾಹೀರಾತುಗಳು ಜನರ ಕಣ್ಣಲ್ಲಿ ಹಾಸ್ಯಾಸ್ಪದವಾಗುತ್ತಿವೆ. ಅಲ್ಲದೆ ಕಳೆದ 5 ವರ್ಷಗಳ ಕಾಂಗ್ರೆಸ್ ಆಡಳಿತದ ಜನಪ್ರಿಯ ಯೋಜನೆಗಳೂ ಕೂಡ ಜನರ ಮೇಲೆ ಪ್ರಭಾವ ಬೀರಿದಂತೆ ಕಾಣುತ್ತಿದೆ. ಹಾಗಂತ ಕಾಂಗ್ರೆಸ್ ಪಕ್ಷಕ್ಕೆ ನೂರಕ್ಕೆ ನೂರು ಅಂಕ ಕೊಟ್ಟು ತಲೆಮೇಲೆ ಹೊತ್ತು ಮೆರೆಸಬೇಕಾದ ಅಗತ್ಯವೇನಿಲ್ಲ. ಪ್ರಕಾಶ್ ರೈ ಅವರು ಹೇಳಿದಂತೆ ‘ಮೊದಲು ನಾವು ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆಯೋಣ, ಕೆಮ್ಮು ನೆಗಡಿಗಳನ್ನು ನಂತರ ನೋಡಿಕೊಳ್ಳೋಣ’.
“ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ” ಎಂದು ಬಿಜೆಪಿಯ ಮುಖವಾಣಿಗಳಂತೆ ಬೊಬ್ಬಿಡುತ್ತಿರುವ ಮಾಧ್ಯಮಗಳು ಬಾಣಲೆಯಿಂದ ಬೆಂಕಿಗೆ ಹಾರುವಂತೆ ಪ್ರಚೋದಿಸುತ್ತಿವೆ. ಆದರೆ ಬೆಂಕಿಗೆ ಹಾರಲು ನಾವು ಸಿದ್ಧರಿಲ್ಲ ಎಂದು ಗಟ್ಟಿದನಿಯಲ್ಲಿ ಹೇಳಬೇಕಿದೆ.
ಸಂಪಾದಕೀಯ ತಂಡದ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ


