ಉತ್ತರಪ್ರದೇಶದ ಹಾಪುರದಲ್ಲಿ 2018ರಲ್ಲಿ ಗೋಹತ್ಯೆ ನೆಪದಲ್ಲಿ ನಡೆದಿದ್ದ ಗುಂಪುಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 10 ಜನರನ್ನು ದೋಷಿ ಎಂದು ಸ್ಥಳೀಯ ನ್ಯಾಯಾಲಯವು ಘೋಷಿಸಿದ್ದು, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಶ್ವೇತಾ ದೀಕ್ಷಿತ್ ಅವರ ಪೀಠ ಈ ಕುರಿತು ವಿಚಾರಣೆಯನ್ನು ನಡೆಸಿ ಮಹತ್ವದ ತೀರ್ಪನ್ನು ನೀಡಿದ್ದು, ಗೋಹತ್ಯೆಯ ಸುಳ್ಳು ವದಂತಿಯ ಹಿನ್ನೆಲೆ 45 ವರ್ಷದ ಖಾಸಿಮ್‌ನನ್ನು ಹತ್ಯೆ ಮಾಡಿ ಸಮಯದೀನ್(62) ಮೇಲೆ ಹಲ್ಲೆ ನಡೆಸಿದ 10 ಜನರನ್ನು ದೋಷಿ ಎಂದು ತೀರ್ಪು ನೀಡಿದೆ.
ಸರ್ಕಾರಿ ವಕೀಲ ವಿಜಯ್ ಚೌಹಾಣ್ ಅವರ ಪ್ರಕಾರ, ಧೌಲಾನಾದ ಬಜೈದಾ ಗ್ರಾಮದ ರಾಕೇಶ್, ಹರಿಓಮ್, ಯುಧಿಷ್ಠಿರ್, ರಿಂಕು, ಕರನ್‌ಪಾಲ್, ಮನೀಶ್, ಲಲಿತ್, ಸೋನು, ಕಪ್ತಾನ್ ಮತ್ತು ಮಂಗೇರಾಮ್‌ಗೆ ಜೀವಾವಧಿ ಶಿಕ್ಷೆ ಮತ್ತು ತಲಾ 58,000ರೂ.ದಂಡವನ್ನು ವಿಧಿಸಲಾಗಿದೆ. 302/149, 307/149, 147, 148 ಮತ್ತು 153A IPCಯಡಿ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ರೂ. ತಲಾ 58,000/ ದಂಡ ವಿಧಿಸಿದೆ.
ಸಂತ್ರಸ್ತರು ಆರೋಪಿಗಳ ವಿರುದ್ಧ ಯಾವುದೇ ದ್ವೇಷವನ್ನು ಹೊಂದಿಲ್ಲ ಮತ್ತು ನ್ಯಾಯವನ್ನು ಮಾತ್ರ ಕೋರುತ್ತಾರೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಇದಲ್ಲದೆ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಕೂಡ ವಿಧಿಸದಂತೆ ನ್ಯಾಯಾಲಯವನ್ನು ಕೋರಿದ್ದರು.
ಜೂನ್ 2018ರಲ್ಲಿ ಗೋಹತ್ಯೆ ಮಾಡಿದ್ದಾರೆಂದು ಆರೋಪಿಸಿ ಬಜೈದಾ ಗ್ರಾಮದ ನಿವಾಸಿ ಖಾಸಿಮ್ ಖುರೇಷಿ ಅವರನ್ನು ಗುಂಪೊಂದು ಹತ್ಯೆ ಮಾಡಿತ್ತು ಮತ್ತು ಅವರ ಜೊತೆಗಿದ್ದ ಸಮಯದೀನ್ ಮೇಲೆ ಹಲ್ಲೆ ನಡೆಸಿತ್ತು. ಘಟನೆಗೆ ಅಪಘಾತದ ಆಯಾಮವನ್ನು ನೀಡುವ ಮೂಲಕ ಪೊಲೀಸರು ಸುಳ್ಳು ಎಫ್‌ಐಆರ್ ದಾಖಲಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಸಮಯದೀನ್ ನ್ಯಾಯಕ್ಕೆ ಆಗ್ರಹಿಸಿ ಸುಪ್ರೀಂಕೋರ್ಟ್ ಮೊರೆ ಹೋದ ನಂತರ ತನಿಖೆಯನ್ನು ಸರಿಯಾಗಿ ನಡೆಸಲಾಗಿದೆ ಎಂದು ಚೌಹಾಣ್ ಹೇಳಿದ್ದಾರೆ.
ಸಮಯದೀನ್ 2018ರಲ್ಲಿ ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು ಮತ್ತು ನ್ಯಾಯಾಲಯವು ಸೆಕ್ಷನ್ 164 CrPC ಅಡಿಯಲ್ಲಿ ಭದ್ರತೆ ಮತ್ತು ಹೇಳಿಕೆಯನ್ನು ದಾಖಲಿಸಲು ನಿರ್ದೇಶನ ನೀಡಿತ್ತು ಮತ್ತು ತನಿಖೆಯ ಮೇಲ್ವಿಚಾರಣೆಯನ್ನು ಮೀರತ್ ವಲಯ ಐಜಿಗೆ ವಹಿಸಿತ್ತು.
ಇದನ್ನು ಓದಿ: ‘ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್’ ಸಂಘಟನೆ ನಿಷೇಧಿಸಿ ಕೇಂದ್ರ ಗೃಹ ಇಲಾಖೆ ಆದೇಶ


