ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಸೋಮವಾರ (ನ.11) ನಡೆದ ಗುಂಡಿನ ಚಕಮಕಿಯಲ್ಲಿ 10 ಶಂಕಿತ ಕುಕಿ-ಜೋ ಬಂಡುಕೋರರು ಹತರಾಗಿದ್ದಾರೆ ಮತ್ತು ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜವಾನರು ಗಾಯಗೊಂಡಿದ್ದಾರೆ.
ಬೊರೊಬೆಕ್ರಾ ಉಪವಿಭಾಗದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಸಮವಸ್ತ್ರದಲ್ಲಿದ್ದ ಬಂಡುಕೋರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಜೊತೆ ಆಗಮಿಸಿ, ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಪಕ್ಕದ ಸಿಆರ್‌ಪಿಎಫ್ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದರೆ, ಇನ್ನೂ ಕೆಲವರು ಠಾಣೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಜಕುರಾಧೋರ್ ಕರೋಂಗ್ ಮಾರುಕಟ್ಟೆಗೆ ತೆರಳಿ, ಅಲ್ಲಿ ಹಲವಾರು ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ ಮತ್ತು ಮನೆಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಭಾರೀ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಶಂಕಿತ ಬಂಡುಕೋರರು ಸಾವನ್ನಪ್ಪಿದ್ದಾರೆ. ಬಳಿಕ ಮೃತರ ಶವಗಳನ್ನು ಬೊರೊಬೆಕ್ರಾ ಪೊಲೀಸ್ ಠಾಣೆಗೆ ತರಲಾಗಿದೆ.
“ಇಂದು ನವೆಂಬರ್ 11, 2024 ಮಧ್ಯಾಹ್ನ 3 ಗಂಟೆಗೆ ಜಕುರಾಧೋರ್ ಮಾರುಕಟ್ಟೆ ಮತ್ತು ಬೊರೊಬೆಕ್ರಾ ಪೊಲೀಸ್ ಠಾಣೆ ಹಾಗೂ ಅದರ ಸಮೀಪದಲ್ಲಿರುವ ಸಿಆರ್‌ಪಿಎಫ್ ಶಿಬಿರದ ಮೇಲೆ ಸಶಸ್ತ್ರ ಬಂಡುಕೋರರು ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಪ್ರಬಲ ಪ್ರತಿದಾಳಿ ನಡೆಸಿವೆ. ಘಟನೆಯಲ್ಲಿ ಒಬ್ದರು ಸಿಆರ್‌ಪಿಎಫ್ ಕಾನ್‌ಸ್ಟೇಬಲ್ ಸಂಜೀವ್ ಕುಮಾರ್ ಎಂಬವರಿಗೆ ಬುಲೆಟ್ ತಗುಲಿ ಗಾಯವಾಗಿದೆ. ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜಿಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಮಣಿಪುರ ಪೊಲೀಸ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
Today, 11th November, 2024 at about 3 pm, the CRPF Post located at Jakuradhor and Borobekra Police Station (located nearby), Jiribam District were attacked by armed militants. The security forces retaliated strongly. Due to the attack, one CRPF constable namely Sanjeev Kumar… pic.twitter.com/8ORw3EB4Pg
— Manipur Police (@manipur_police) November 11, 2024
“ಸುಮಾರು 40-45 ನಿಮಿಷಗಳ ಭಾರೀ ಗುಂಡಿನ ಚಕಮಕಿಯ ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಗುಂಡು ಹಾರಾಟ ನಿಲ್ಲಿಸಿದ ನಂತರ, ಘಟನಾ ಪ್ರದೇಶವನ್ನು ಶೋಧಿಸಲಾಗಿದೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಶಸ್ತ್ರಸಜ್ಜಿತ ಬಂಡುಕೋರರ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಪ್ರಕಾರ, ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದೆ.
ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಮೂರು ಎಕೆ ಸರಣಿಯ ರೈಫಲ್‌ಗಳು, ನಾಲ್ಕು ಎಸ್‌ಎಲ್‌ಆರ್‌ಗಳು, ಎರಡು ಐಎನ್‌ಎಸ್‌ಎಸ್ ರೈಫಲ್‌ಗಳು, ಒಂದು ಆರ್‌ಪಿಜಿ ಮತ್ತು ಪಂಪ್-ಆಕ್ಷನ್ ಗನ್ ಜೊತೆಗೆ ಬುಲೆಟ್ ಪ್ರೂಫ್ ಹೆಲ್ಮೆಟ್‌ಗಳು ಮತ್ತು ಮ್ಯಾಗಜೀನ್‌ಗಳು ಸೇರಿವೆ.
ಬೊರೊಬೆಕ್ರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗಾಗಿ ಪರಿಹಾರ ಶಿಬಿರವಿದ್ದು, ಅಲ್ಲಿ ವಾಸಿಸುತ್ತಿದ್ದ ಐವರು ನಾಪತ್ತೆಯಾಗಿದ್ದಾರೆ. ಈ ನಾಗರಿಕರನ್ನು ಬಂಡುಕೋರರು ಅಪಹರಿಸಿದ್ದಾರೆಯೇ? ಅಥವಾ ದಾಳಿ ನಡೆದಾಗ ಅವರೇ ಸ್ಥಳಾಂತರವಾಗಿದ್ದಾರೆಯೇ? ಎಂಬುವುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗಾಗಿ ಶೋಧ ನಡೆಯುತ್ತಿದೆ ಎಂದಿದ್ದಾರೆ.
ಬಂಡುಕೋರರ ವಿರುದ್ದದ ಕಾರ್ಯಾಚರಣೆ ಮುಂದುವರಿದಿದ್ದು, ಅಸ್ಸಾಂ ರೈಫಲ್ಸ್, ಸಿಆರ್‌ಪಿಎಫ್ ಮತ್ತು ಸಿವಿಲ್ ಪೊಲೀಸರನ್ನೊಳಗೊಂಡ ತಂಡಗಳು ಸ್ಥಳಕ್ಕೆ ಆಗಮಿಸಿವೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.
ಗಮನಾರ್ಹವಾಗಿ, ಬೊರೊಬೆಕ್ರಾ ಪೊಲೀಸ್ ಠಾಣೆ ಮೇಲೆ ಈ ಹಿಂದೆಯೂ ಅನೇಕ ದಾಳಿಗಳು ನಡೆದಿದೆ. ಇದು ಜಿಲ್ಲೆಯ ಅತ್ಯಂತ ಹೆಚ್ಚು ಬಾಧಿತ ಪ್ರದೇಶಗಳಲ್ಲಿ ಒಂದಾಗಿದೆ. ಗುಂಡಿನ ಚಕಮಕಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿತ್ತು.
ಸೋಮವಾರದ ಘಟನೆಯ ನಂತರ, ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ. ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕುಕಿ-ಜೋ ಕೌನ್ಸಿಲ್ ತನ್ನ 11 ಸ್ವಯಂ ಸೇವಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದೆ. ಅವರಿಗೆ ಗೌರವ ಸೂಚಿಸುವ ಸಲುವಾಗಿ ಇಂದು ಬೆಳಿಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್‌ಗೆ ಕರೆ ಕೊಟ್ಟಿದೆ.
ಇದನ್ನೂ ಓದಿ : ಬಾಬಾ ಸಿದ್ದೀಕ್ ಹತ್ಯೆ ಪ್ರಕರಣ | ಪ್ರಮುಖ ಆರೋಪಿಯನ್ನು ಬಂಧಿಸಿದ ಪೊಲೀಸರು


