ತಮಿಳುನಾಡಿನ ಶಿವಕಾಸಿಯಲ್ಲಿರುವ ಎಂ ಪುದುಪಟ್ಟಿ ಎಂಬ ಗ್ರಾಮದಲ್ಲಿ, ಅರ್ಜುನ ನದಿಯ ದಡದ ಬಳಿ 1,200 ವರ್ಷಗಳಷ್ಟು ಹಳೆಯದಾದ ಮತ್ತು ಬಂಡೆಯಲ್ಲಿ ಕೊರೆದಂತೆ ಇರುವ ದೇವಸ್ಥಾನ ಪತ್ತೆಯಾಗಿದೆ.

ಪುರಾತತ್ವಶಾಸ್ತ್ರಜ್ಞರು ಈ ದೇವಸ್ಥಾನ ಬಂಡೆಯಿಂದ ನಿರ್ಮಿಸಲ್ಪಟ್ಟಿದೆ ಎಂದು ಗುರುತಿಸಿದ್ದಾರೆ. ಆದರೂ ಇಲ್ಲಿರುವ ಮೂರೂ ಕೋಣೆಗಳಲ್ಲಿಯೂ (ಗರ್ಭಗುಡಿ, ಅರ್ಧಮಂಟಪ ಮತ್ತು ಮಹಾ ಮಂಟಪ) ಯಾವುದೇ ದೇವರ ವಿಗ್ರಹಗಳು ಪತ್ತೆಯಾಗಿಲ್ಲ. ಇದು 20 ಅಡಿ ಉದ್ದದ ಸುಣ್ಣದ ದಿಬ್ಬದ ಪ್ರವೇಶದ್ವಾರವನ್ನು ಹೊಂದಿದೆ.
ಗೋಡೆಗಳ ಮೇಲೆ ಮತ್ತು ಚಾವಣಿಯಲ್ಲಿ ಸಿಮೆಂಟ್‌ನ ಕುರುಹುಗಳಿವೆ ಎಂದು ತಜ್ಞರು ಹೇಳಿದ್ದಾರೆ. ಸುಮಾರು 100 ವರ್ಷಗಳ ಹಿಂದೆ ದೇವಸ್ಥಾನದ ಭಕ್ತರು ದುರಸ್ಥಿ ನಡೆಸಿದ್ದಿರಬಹುದು ಎಂದು ಪುರಾತತ್ತ್ವಜ್ಞರು ಊಹಿಸಿದ್ದಾರೆ. ದೇವಸ್ಥಾನದ ಒಳಗೆ ಹಲವು ಕಡೆ ಸುಣ್ಣದ ಕಲ್ಲು ಕುಸಿಯುತ್ತಿದೆ. ಮಹಾ ಮಂಟಪದ ಸೀಲಿಂಗ್‌ನಲ್ಲಿ ಬೃಹತ್ ರಂಧ್ರವಿದೆ ಎನ್ನಲಾಗಿದೆ.
ಇದನ್ನೂ ಓದಿ: ಇತಿಹಾಸ ಪುರುಷರ ಬಗ್ಗೆ ಸಂಘ ಪರಿವಾರ ಮಾಡಿದ ಚಾರಿತ್ಯವಧೆಯ ಇತಿಹಾಸ..
ರಾಜ್ಯ ಪುರಾತತ್ವ ವಿಭಾಗದ ನಿವೃತ್ತ ಸಹಾಯಕ ನಿರ್ದೇಶಕ ಡಾ.ಸಿ.ಸಂತಲಿಂಗಂ ಮಾತನಾಡಿ, ಈ ದೇವಾಲಯವು ಮೂರು ಅಂಶಗಳಲ್ಲಿ ವಿಶಿಷ್ಟವಾಗಿದೆ ಎಂದಿದ್ದಾರೆ.
“ಮೊದಲನೆಯದು: ಇದು ಸಂಧಾರ ಮಾದರಿಯ ದೇವಾಲಯವಾಗಿದೆ. ಭಾರತದಲ್ಲಿ ಇದುವರೆಗೂ ಸಂಧಾರ ಮಾದರಿಯ, ಬಂಡೆಯಲ್ಲಿ ಕತ್ತರಿಸಿದ ದೇವಾಲಯವಿಲ್ಲ. ಈ ದೇವಾಲಯಗಳು ದೇವಾಲಯದ ಸುತ್ತಲೂ ವೃತ್ತಾಕಾರದ ಹಾದಿಯನ್ನು (ಪ್ರದಕ್ಷಿಣಪಥ) ಹೊಂದಿವೆ. ಎಲ್ಲಾ ದೇವಾಲಯಗಳಲ್ಲಿ ಈ ಹಾದಿಗಳಿಲ್ಲ ಎಂದು ಮೂಲಗಳು ತಿಳಿಸಿವೆ.
ಎರಡನೆಯದು: ದೇವಾಲಯವು ಎರಡು ಸುತ್ತುವರಿದ ಹಾದಿಗಳನ್ನು ಹೊಂದಿದೆ. ಇದು ಬಹಳ ಅಪರೂಪ. ಒಂದು ಮಾರ್ಗವು ಅರ್ಧಮಂಟಪದಿಂದ ಪ್ರದಕ್ಷಿಣಾಕಾರವಾಗಿ ಚಲಿಸುತ್ತಿದ್ದರೆ, ಎರಡನೆಯದು ಮಹಾಮಂಟಪದ ಪಕ್ಕದಲ್ಲಿದೆ.
ಮೂರನೆಯದು: ದೇವಾಲಯವನ್ನು ಸಂಪೂರ್ಣವಾಗಿ ಸುಣ್ಣದ ಕಲ್ಲುಗಳಿಂದ ಕೆತ್ತಲಾಗಿದೆ. ಇದು ಕಡಿಮೆ ಗುಣಮಟ್ಟದ ಕಲ್ಲಾಗಿದ್ದು, ಹಾಗಾಗಿಯೇ ದೇವಾಲಯದಲ್ಲಿ ಕಲಾತ್ಮಕ ವಿನ್ಯಾಸ, ಶಿಲ್ಪಕಲೆ ಅಥವಾ ಕೆತ್ತನೆ ಇಲ್ಲದಿರುವುದಕ್ಕೆ ಕಾರಣವಾಗಿದೆ. ಆದರೂ ಗರ್ಭಗೃಹದ ಪ್ರವೇಶದ್ವಾರದ ಎರಡೂ ಬದಿಗಳಲ್ಲಿ ಗೂಡುಗಳಿವೆ. ಇದಲ್ಲದೆ, ಗರ್ಭಗೃಹದಲ್ಲಿ ಕಲ್ಲಿನ ನಾಗ ಪ್ರತಿಮೆ ಇದೆ. ಪೂಜೆ ಮಾಡುವ ಸಲುವಾಗಿ, ಭಕ್ತರು 100 ವರ್ಷಗಳ ಹಿಂದೆ ಇದನ್ನು ಇಟ್ಟಿರಬಹುದು” ಎಂದು ಸಂತಲಿಂಗಂ ಹೇಳಿದ್ದಾರೆ.
ಈ ದೇವಾಲಯವು ಕ್ರಿ.ಶ 8 ನೇ ಶತಮಾನದ ಆರಂಭದಲ್ಲಿ-ಪಾಂಡ್ಯರ ಯುಗಕ್ಕೆ ಸೇರಿದೆ. ಇದು ತಿರುಚಂದೂರಿನಲ್ಲಿರುವ ವಲ್ಲಿ ಗುಹೆ ದೇವಾಲಯಕ್ಕೆ ಹೋಲುತ್ತದೆ. ಇದನ್ನು ಮರಳುಗಲ್ಲಿನಿಂದ ಕೆತ್ತಲಾಗಿದೆ. ಇದು ಸುಣ್ಣದ ಕಲ್ಲುಗಳಿಗೆ ಹೋಲುವ ಬಂಡೆಯಾಗಿದೆ ಎಂದು ಸಂತಲಿಂಗಂ ಹೇಳಿದರು.
ಇದನ್ನೂ ಓದಿ: ಆರ್ಯ-ಅನಾರ್ಯರ ನಡುವಿನ ಕಾಳಗ ಮತ್ತು ಮಿಲನ: ಗೊಂಡಿಯರ ಸಂಭೂ ಶೇಖರ ಶಂಭೋ ಶಂಕರನಾದ ಕಥೆ


