2020ರ ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳನ್ನು ‘ಪ್ರವಾಹಪೀಡಿತ ತಾಲೂಕುಗಳು’ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಮಹಾರಾಷ್ಟ್ರದ ಕೃಷ್ಣಾಕಣಿವೆ ಜಲಾಶಯಗಳು ತುಂಬಿ ಹರಿದು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಸಂದರ್ಭದಲ್ಲಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲೂ ಮಳೆಯಾಗಿ ಅಪಾರ ಪ್ರಮಾಣದ ಜೀವಹಾನಿ, ಬೆಳೆ ಹಾನಿ, ಮನೆ ಕುಸಿತಗಳು ಸಂಭವಿಸಿದ್ದವು.
ಸದ್ಯ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದ ಪ್ರವಾಹ ಉಂಟಾಗಿದೆ ಎಂದು ತಿಳಿಸಿದೆ. ಈ ಉಸ್ತುವಾರಿ ಕೇಂದ್ರದ ವರದಿಯನ್ನಾಧರಿಸಿ, 130 ತಾಲೂಕುಗಳನ್ನು ಅತಿವೃಷ್ಟಿ/ಪ್ರವಾಹಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ.
ಇದನ್ನೂ ಓದಿ: ಮುಂದಿನ ವರ್ಷದಿಂದ ‘ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್’ ಕಡ್ಡಾಯ-ಸಚಿವ ಬಿ.ಸಿ.ಪಾಟೀಲ್
ಪ್ರವಾಹಪೀಡಿತ ತಾಲ್ಲೂಕುಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಪ್ರಕಾರ ಮತ್ತು ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ ಆದೇಶಗಳ ಪ್ರಕಾರ ಜಿಲ್ಲಾಡಳಿತಗಳು ಕ್ರಮ ತೆಗೆದುಕೊಳ್ಳಬೇಕು.
ಬೆಳಗಾವಿ 14, ಉತ್ತರ ಕನ್ನಡ 10, ಕಲಬುರ್ಗಿ, ಬಾಗಲಕೋಟೆ ತಲಾ 9, ಧಾರವಾಡ, ಶಿವಮೊಗ್ಗ, ಉಡುಪಿ ತಲಾ 7, ಬಳ್ಳಾರಿ, ಹಾವೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ತಲಾ 6, ರಾಯಚೂರು, ಯಾದಗಿರಿ, ಬೀದರ್, ಹಾಸನ ತಲಾ 5, ಮೈಸೂರು, ವಿಜಯಪುರ, ಗದಗ ತಲಾ 4, ದಾವಣಗೆರೆ, ಕೊಪ್ಪಳ, ಕೊಡಗು ತಲಾ 3, ಚಾಮರಾಜನಗರ, ಮಂಡ್ಯ ತಲಾ 1 ಈ ತಾಲ್ಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಲಾಗಿದೆ.


