Homeಮುಖಪುಟನೊಣಗಳು ಮುತ್ತುವ ತಿನಿಸುಗಳೆ ನಾವು? ’ಮಧುರುಭಾಗನ್’ ಕಾದಂಬರಿ ಬಹಿಷ್ಕಾರ ಕರೆಯ ಕಹಿ ನೆನಪುಗಳು

ನೊಣಗಳು ಮುತ್ತುವ ತಿನಿಸುಗಳೆ ನಾವು? ’ಮಧುರುಭಾಗನ್’ ಕಾದಂಬರಿ ಬಹಿಷ್ಕಾರ ಕರೆಯ ಕಹಿ ನೆನಪುಗಳು

ಸಾಮಾನ್ಯವಾಗಿ ಈ ವದಂತಿಗಳನ್ನು ಕಾಡ್ಗಿಚ್ಚಿಗೆ ಹೋಲಿಕೆ ಮಾಡಲಾಗುತ್ತದೆ. ಅದು ಎಷ್ಟು ವೇಗವಾಗಿ ಹರಡಿತು? ಹೇಗೆ ಹರಡಿತು? ಮತ್ತು ಯಾವ ರೀತಿ ಹರಡಿತು ಎಂಬುದು ನಮ್ಮ ಪರಿಗಣನೆಗೆ ಸಿಗುವುದೇ ಇಲ್ಲ. ಆದರೆ, ವದಂತಿಗಳು ನಮ್ಮ ಊಹೆಗೂ ಮೀರಿ ವೇಗವಾಗಿ ಹರಡಿರುತ್ತವೆ ಎನ್ನುತ್ತಾರೆ ಪೆರುಮಾಳ್ ಮುರುಗನ್.

- Advertisement -
- Advertisement -

2014ರ ಡಿಸೆಂಬರ್ ನಿಂದ 2015ರ ಜನವರಿ ಮಧ್ಯದವರೆಗೆ ನನ್ನೂರಿನಲ್ಲಿ ನಡೆದ ‘ಮಧುರುಭಾಗನ್’ ಕಾದಂಬರಿಯ ವಿರುದ್ಧದ ಹೋರಾಟದ ಬಗ್ಗೆ ಹಂಚಿಕೊಳ್ಳಲು ನನ್ನಲ್ಲಿ ಇನ್ನೂ ಅನೇಕ ವಿಷಯಗಳಿವೆ. ಆದರೆ, ಎಲ್ಲದರ ಬಗ್ಗೆಯೂ ಮುಕ್ತವಾಗಿ ಬರೆಯಲು ಹಾಗೂ ಮಾತನಾಡಲು ಇದು ಸರಿಯಾದ ಸಮಯವಲ್ಲ ಅಥವಾ ಅಂತಹ ವಾತಾವರಣ ಈಗ ನಿರ್ಮಾಣವಾಗಿಲ್ಲ ಎಂದೇ ನಾನು ಭಾವಿಸುತ್ತೇನೆ.

ಹೀಗಾಗಿ ಈ ಲೇಖನದಲ್ಲಿ ಕೇವಲ ಒಂದು ವಿಚಾರವನ್ನು ಮಾತ್ರ ನಾನು ಉಲ್ಲೇಖಿಸಲು ಮತ್ತು ಆ ಕುರಿತು ಮುಕ್ತವಾಗಿ ಮಾತನಾಡಲು ಇಚ್ಛಿಸುತ್ತೇನೆ. ಅಸಲಿಗೆ ನನ್ನ ಬಗ್ಗೆ ಮತ್ತು ನಾನು ಬರೆದ ಆ ಕಾದಂಬರಿಯ ಬಗ್ಗೆ ಹರಡಿದ್ದ ವದಂತಿಗಳು ಈ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಈ ವದಂತಿಗಳು ಹಾಗೂ ಅವುಗಳನ್ನು ಎದುರಿಸುವ ಬಗೆ ನಿಜಕ್ಕೂ ನನಗೆ ಹೊಸದು. ಈ ವದಂತಿಗಳು ಹೆಚ್ಚಾದಂತೆ ನಾನು ಎಂದಿಗೂ ಎದುರಿಸಲಾಗದ ಒಂದು ಬಿಕ್ಕಟ್ಟಿಗೆ ಸಿಲುಕಿಕೊಂಡಿದ್ದೆ ಎಂಬುದೇ ಸತ್ಯ.

ವದಂತಿ ಎಂಬುದು ಸಾಮಾನ್ಯವಾಗಿ ಆಧಾರ ರಹಿತವಾದದ್ದು, ಅಥವಾ ಸುಳ್ಳು ಆಧಾರಗಳ ಮೇಲೆ ಇದನ್ನು ರೂಪಿಸಲಾಗುತ್ತದೆ. ಇಂತಹ ವದಂತಿಗಳಲ್ಲಿ ಬಹುಪಾಲು ವಿಚಾರಗಳನ್ನು ಬೇಕೆಂದೆ ಪೂರ್ವಯೋಜಿತವಾಗಿ ಹರಡಲಾಗುತ್ತದೆ. ಇದಕ್ಕೆಂದೆ ಒಂದು ಸ್ವಾರ್ಥ ಸ್ವಹಿತಾಸಕ್ತಿಯ ಗುಂಪು ಕಾರ್ಯ ನಿರ್ವಹಿಸುತ್ತಿರುತ್ತದೆ. ಜನರ ನಡುವೆ ಸಂಘರ್ಷ, ಉದ್ವಿಗ್ನತೆಯನ್ನು ಹುಟ್ಟುಹಾಕುವ ಸಲುವಾಗಿಯೇ ಈ ಸ್ವಾರ್ಥ ಗುಂಪು ಜಾತಿ-ಧರ್ಮ-ಸಂಸ್ಕೃತಿ ಎಂಬ ಜನರ ನಂಬಿಕೆಗಳನ್ನು ಬಗ್ಗೆ ವದಂತಿ ಹರಡುತ್ತಾ ಸಮಾಜದಲ್ಲಿ ಕೋಲಾಹಲ ಮೂಡಿಸಲು ಪ್ರಯತ್ನಿಸುತ್ತಿರುತ್ತವೆ.

ಆದರೆ, ಕೆಲವು ವದಂತಿಗಳ ಜೀವಿತಾವಧಿ ತೀರಾ ಕಡಿಮೆ. ತನ್ನ ಉದ್ದೇಶ ನೆರವೇರುತ್ತಿದ್ದಂತೆ ಈ ವದಂತಿಗಳು ಕಾಲ ಕ್ರಮೇಣ ಹಾಗೆ ಕಾಲಗರ್ಭ ಸೇರಿಬಿಡುತ್ತವೆ. ಉದಾ;-ಕೆಲವು ವರ್ಷಗಳ ಹಿಂದೆ ಗಣಪತಿ ವಿಗ್ರಹ ಹಾಲು ಕುಡಿಯುತ್ತಿದೆ ಎಂಬ ವದಂತಿಯು ದೊಡ್ಡ ಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಆದರೆ, ಈ ವದಂತಿ ಕಾಲಕ್ರಮೇಣ ಹಾಗೆ ಕಣ್ಮರೆಯಾಗಿತ್ತು. ಹೀಗೆ ಕಾಲಗರ್ಭ ಸೇರುವ ಮುನ್ನ ಈ ವದಂತಿ ಜನರ ಗಮನವನ್ನು ತನ್ನಡೆ ಸೆಳೆಯುವ ತನ್ನ ಗುರಿಯನ್ನು ಯಶಸ್ವಿಗೊಳಿಸಿತ್ತು.

ಇನ್ನೂ ಕೆಲವು ವದಂತಿಗಳಿಗೆ ದೀರ್ಘವಾದ ಜೀವಿತಾವಧಿ ಇರುತ್ತದೆ. ಕಾಲ ಕಾಲಕ್ಕೆ ನಮ್ಮ ನಡುವೆಯೇ ಸತ್ಯವೆನ್ನುವ ರೀತಿಯಲ್ಲೇ ಹರಡುತ್ತಿರುತ್ತಾರೆ. ತೀವ್ರ ನಾಸ್ತಿಕ ಮತ್ತು ಶುದ್ಧ ತರ್ಕಬದ್ಧ ವ್ಯಕ್ತಿಯಾದ ಪೆರಿಯಾರ್ ತನ್ನ ಮನೆಯಲ್ಲಿ ಯಾರಿಗೂ ತಿಳಿಯದೆ ರಹಸ್ಯವಾಗಿ ಗಣಪತಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ ಎಂಬ ವದಂತಿಯನ್ನು ಸತ್ಯವೇ ಎಂಬಂತೆ ಹಲವು ವರ್ಷಗಳ ಕಾಲ ಹರಡಲಾಗಿತ್ತು. ಈ ವಂದತಿಗೆ ಯಾವುದೇ ಪುರಾವೆಗಳಿಲ್ಲ. ಆದರೆ, ಈಗಲೂ ಈ ವದಂತಿ ಹರಡುತ್ತಲೇ ಇದೆ.

ಪೆರಿಯಾರ್ ವಿರೋಧಿ ಗುಂಪು ತನ್ನ ಕಾರ್ಯಕರ್ತರ ಮೂಲಕ ಈ ವದಂತಿಯನ್ನು ಸತ್ಯ ಎಂಬ ರೀತಿಯಲ್ಲೇ ಹರಡುತ್ತಿದ್ದು, ಇದನ್ನು ನಂಬುವ ಒಂದು ಜನರ ಗುಂಪೂ ಇದೆ. ಆದರೆ, ಇದನ್ನು ನಂಬುವವರೂ ಯಾವುದೇ ಸಾಕ್ಷ್ಯಾಧಾರಗಳನ್ನು, ಪುರಾವೆಗಳನ್ನು ಕೇಳುವುದಿಲ್ಲ. ಕನಿಷ್ಟ ತಮ್ಮ ಸಾಮಾನ್ಯ ಜ್ಞಾನವನ್ನೂ ಸಹ ಉಪಯೋಗಿಸುವ ಪ್ರಮೇಯವೇ ಇಲ್ಲಿ ಇರುವುದಿಲ್ಲ. ಕೊನೆಗೆ ವದಂತಿಯೊಂದು ನಿಜವೇ ಆಗಿ ಹೋಗುತ್ತದೆ ಎಂಬುದು ನಂಬಲು ಕಷ್ಟವಾದರೂ ಸತ್ಯ.

ಮಧುರುಭಾಗನ್ ಕಾದಂಬರಿ, photo courtesy: Amazon.In

ಸಾಮಾನ್ಯವಾಗಿ ಈ ವದಂತಿಗಳನ್ನು ಕಾಡ್ಗಿಚ್ಚಿಗೆ ಹೋಲಿಕೆ ಮಾಡಲಾಗುತ್ತದೆ. ಅದು ಎಷ್ಟು ವೇಗವಾಗಿ ಹರಡಿತು? ಹೇಗೆ ಹರಡಿತು? ಮತ್ತು ಯಾವ ರೀತಿ ಹರಡಿತು ಎಂಬುದು ನಮ್ಮ ಪರಿಗಣನೆಗೆ ಸಿಗುವುದೇ ಇಲ್ಲ. ಆದರೆ, ವದಂತಿಗಳು ನಮ್ಮ ಊಹೆಗೂ ಮೀರಿ ವೇಗವಾಗಿ ಹರಡಿರುತ್ತದೆ. ಉದಾ:-ತಮ್ಮ ಕುಲದೈವದ ಪೂಜೆಗೆ ದೇವಾಲಯಕ್ಕೆ ತೆರಳಿದ್ದ ಕುಟುಂಬವೊಂದನ್ನು ಮಕ್ಕಳ ಕಳ್ಳರು ಎಂಬಂತೆ ವದಂತಿಯನ್ನು ಸೃಷ್ಟಿಸಲಾಗಿತ್ತು. ಕೆಲವೇ ನಿಮಿಷಗಳಲ್ಲಿ ಈ ವದಂತಿ ಕಾಡ್ಗಿಚ್ಚಿನಂತೆ ಹರಡಿ ಆನಂತರ ಉಂಟು ಮಾಡಿದ ಪರಿಣಾಮ ನಮಗೆಲ್ಲರಿಗೂ ತಿಳಿದೇ ಇದೆ. ಬೆಂಕಿಯನ್ನು ಹರಡುವಲ್ಲಿ ಗಾಳಿಯ ಪಾತ್ರಕ್ಕಿಂತ ವದಂತಿಯನ್ನು ಹರಡುವ ಮನುಷ್ಯನ ಸ್ವಭಾವದ ಪಾತ್ರ ದೊಡ್ಡದು ಎಂದೇ ಇಲ್ಲಿ ಹೇಳಬೇಕಾಗುತ್ತದೆ.

ವದಂತಿಗಳಿಗೆ ಇಂತಹ ಹಲವಾರು ಸ್ವರೂಪಗಳಿವೆ ಎಂಬುದು ನನಗೆ ತಿಳಿಯದ ವಿಚಾರ ಏನಲ್ಲ. ಆದರೆ, ಅದನ್ನು ಅರಿವಿನಿಂದ ತಿಳಿದುಕೊಳ್ಳುವುದೇ ಬೇರೆ ಮತ್ತು ಅದಕ್ಕೆ ಎದೆ ತೋರಿಸಿ ಎದುರುಗೊಳ್ಳುವುದೇ ಬೇರೆ ಎಂಬುದು ನನಗೆ “ಮಧುರುಭಾಗನ್” ಕಾದಂಬರಿ ಹುಟ್ಟುಹಾಕಿದ ವದಂತಿಗಳ ನಂತರವೇ ಅರ್ಥವಾದದ್ದು.

ನನ್ನ ಬಗ್ಗೆ ಹರಡಲಾಗಿದ್ದ ವದಂತಿಗಳಲ್ಲಿ ಮೊದಲನೆಯದು “ಪೆರುಮಾಳ್ ಮುರುಗನ್ ತಮ್ಮ ಪುಸ್ತಕದಲ್ಲಿ ಹಿಂದೂ ದೇವರು ಮತ್ತು ಹಿಂದೂ ಮಹಿಳೆಯರ ಬಗ್ಗೆ ಅವಮಾನಕರವಾಗಿ ಬರೆದಿದ್ದಾರೆ” ಎಂಬ ಮಾತು. 2014ರ ಇಡೀ ಡಿಸೆಂಬರ್ ತಿಂಗಳಿನಲ್ಲಿ ನನಗೆ ಫೋನ್ ಕರೆ ಮಾಡಿದ ಅನೇಕರು “ನೀವು ಕ್ರೈಸ್ತ ಧರ್ಮಕ್ಕೆ ಸೇರಿದವರಾ?, ನೀವು ಕ್ರೈಸ್ತರಾದರೆ ನಿಮ್ಮ ದೇವರ ದೃಷ್ಟಾಂತವನ್ನು ಬರೆಯಬಹುದಲ್ಲವೇ? ಎಂದು ಪ್ರಶ್ನೆ ಮಾಡಲು ಆರಂಭಿಸಿದ್ದರು. ಇನ್ನೂ ಮರು ವರ್ಷ ಮಾರ್ಚ್ ತಿಂಗಳ ವೇಳೆಗೆ ದೇವಾಲಯಕ್ಕೆ ಆಗಮಿಸುವ ಭಕ್ತರ ಬಳಿ ನಾನೊಬ್ಬ ಕ್ರೈಸ್ತ ಎಂದು ಕರಪತ್ರಗಳನ್ನು ಹಂಚುವ ಕೆಲಸವನ್ನೂ ಸಾಂಗವಾಗಿ ಮಾಡಿದ್ದರು.

ಕರಪತ್ರದಲ್ಲಿ ನನ್ನ ಫೋನ್ ಸಂಖ್ಯೆ ನೀಡಿದ್ದರಿಂದ ಅನೇಕರು ನನಗೆ ಕರೆ ಮಾಡಿದ್ದರು. ಈ ಪೈಕಿ ಕೆಲವರಿಗೆ ಕನಿಷ್ಟ ಮಾನವೀಯತೆ ಇತ್ತು ಎಂದು ಕಾಣಿಸುತ್ತದೆ. ಏಕೆಂದರೆ ಹೀಗೆ ಕರೆ ಮಾಡಿದವರು, “ದೇವಾಲಯದಲ್ಲಿ ನೀವು ಕ್ರೈಸ್ತ ವ್ಯಕ್ತಿ ಎಂದು ಹೇಳಿಯೇ ಈ ಕರಪತ್ರಗಳನ್ನು ಹಂಚಲಾಗುತ್ತಿದೆ. ಅಲ್ಲದೆ, ಈ ವಿಷಯ ತುಂಬಾ ಸೂಕ್ಷ್ಮವಾಗಿದ್ದು, ತಾವು ಸ್ವಲ್ಪ ಜಾಗರೂಕರಾಗಿರುವುದು ಒಳಿತು” ಎಂದು ಸಲಹೆಗಳನ್ನು ನೀಡಿದ್ದರು.

ನನ್ನ ಕಾದಂಬರಿ ಹುಟ್ಟುಹಾಕಿದ್ದ ವಿವಾದದ ನಂತರ ನಮ್ಮ ಊರಿನಲ್ಲಿ ಜಾತಿ ಕಾರಣಕ್ಕೆ ಮರ್ಯಾದೆಗೇಡು ಹತ್ಯೆಯಲ್ಲಿ ಭಾಗವಹಿಸಿದ್ದ ಜಾತಿ ಸಂಘದ ಓರ್ವ ನಾಯಕ ಪುಸ್ತಕದ ವಿವಾದದ ದಿನಗಳಲ್ಲಿ ಮಾತನಾಡಿದ್ದ ವಿಡಿಯೋ ಒಂದನ್ನು ನಾನು ನೋಡಿದೆ. ಈ ವಿಡಿಯೋದಲ್ಲಿ ಆತ, “ಕ್ರಿಶ್ಚಿಯನ್ನರು ಬಂದು ತನ್ನನ್ನು ರಕ್ಷಿಸುತ್ತಾರೆ ಎಂದು ಆತ ನಂಬಿಕೊಂಡಂತಿದೆ. ಆದರೆ, ಆತನ ಪರವಾಗಿ ಚರ್ಚ್‍ನಿಂದ ಯಾರಾದರೂ ಆಗಮಿಸಿದರೆ ಅವರ ಕೈಗಳನ್ನು ಕತ್ತರಿಸಲಾಗುತ್ತದೆ” ಎಂದು ಬೆದರಿಕೆ ಒಡ್ಡಿದ್ದರು.

ಹಿಂದೂ ಧರ್ಮದ ಬಗ್ಗೆ ಬರೆದ ವ್ಯಕ್ತಿ ಓರ್ವ ಕ್ರ್ರೈಸ್ತ ಎಂದು ವದಂತಿಯನ್ನು ಹರಡಿದರೆ ಅದು ಸಮಾಜದಲ್ಲಿ ಹಠಾತ್ ದ್ವೇಷವನ್ನು ಉಂಟುಮಾಡಬಲ್ಲದು ಎಂಬ ವಿಚಾರ ಈ ವದಂತಿಯನ್ನು ಹರಡಿದವರಿಗೆ ಚೆನ್ನಾಗಿಯೇ ತಿಳಿದಿರುವಂತಿದೆ.

ಆದರೆ, ನಾನು ಓರ್ವ ಇಸ್ಲಾಮಿ ಎಂದು ಹರಡದೆ ಏಕೆ ಕ್ರೈಸ್ತ ಎಂಬ ವದಂತಿಯನ್ನು ಹರಡಿದರು? ಅಸಲಿಗೆ ಹಿಂದೂ ಧರ್ಮದ ದೇವರುಗಳನ್ನು ರಾಕ್ಷರುಗಳು ಎಂದು ಹೀಗೆಳೆಯುವ ಕೆಲ ಪಂಥಗಳು ಕ್ರೈಸ್ತ ಸಮುದಾಯದಲ್ಲಿವೆ. ಈ ವಿಚಾರ ವದಂತಿಯನ್ನು ಹರಡಿದವರಿಗೂ ತಿಳಿದಿದೆ. ಇನ್ನೂ ನಾನಿರುವ ಊರಿನ ಬೆಟ್ಟದ ಸಮೀಪ ಒಂದು ಸಣ್ಣ ಚರ್ಚ್ ಇದೆ. ಆ ಚರ್ಚ್‍ಗೆ ಕನಿಷ್ಠ 200 ವರ್ಷ ಆಯಸ್ಸು. ಆದರೆ, ಈ ಚರ್ಚನ್ನು ನೆಲಸಮ ಮಾಡಬೇಕು ಎಂಬ ಗಲಾಟೆ ಸ್ಥಳೀಯವಾಗಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಹೀಗಾಗಿ ಹಿಂದೂ-ಕ್ರಿಶ್ಚಿಯನ್ ವೈರತ್ವವು ಈಗಾಗಲೇ ಸ್ವಲ್ಪಮಟ್ಟಿಗೆ ಇಲ್ಲಿ ನೆಲೆಯೂರಿದೆ. ಹೀಗಾಗಿ ನನ್ನ ಪುಸ್ತಕ ಹುಟ್ಟುಹಾಕಿದ ವಿವಾದವನ್ನು ಈ ಪ್ರಕಾರದಲ್ಲಿ ಬಳಸಿಕೊಳ್ಳುವುದು ವದಂತಿ ಹರಡುವವರಿಗೆ ಇನ್ನೂ ಸುಲಭವಾಗಿತ್ತು.

ಅಸಲಿಗೆ ಈ ಭಾಗದಲ್ಲಿ ‘ಕ್ರೈಸ್ತ’ ಎಂಬ ಗುರುತಿನ ಹಿಂದೆ ‘ದಲಿತ’ ಎಂಬು ಗುರುತೂ ಸಹ ಇದೆ. ಇಲ್ಲಿನ ಮೇಲ್ ವರ್ಗದ ಜನರ ಭಾವನೆಗಳಲ್ಲಿ ಕ್ರೈಸ್ತ ಎಂದರೆ ದಲಿತ ಎಂದು ಅರ್ಥಮಾಡಿಕೊಳ್ಳುವುದು ತೀರಾ ಸಹಜ ಮತ್ತು ಸಾಮಾನ್ಯ ಪ್ರಕ್ರಿಯೆ.

ವಿಶೇಷವಾಗಿ ನಮ್ಮ ಪ್ರದೇಶದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ತೀರಾ ಕಡಿಮೆ. ಈ ಅಲ್ಪಸಂಖ್ಯಾತ ಸಮುದಾಯದಲ್ಲಿ ಮತಾಂತರಗೊಂಡವರ ಸಂಖ್ಯೆಯೇ ಅಧಿಕ. ತಮ್ಮ ಜಾತಿ ಗುರುತನ್ನು ನೇರವಾಗಿ ಹೇಳಲು ಹಿಂಜರಿಯುವ ಸ್ಥಳಗಳಲ್ಲಿ ದಲಿತರು ತಮ್ಮನ್ನು ‘ಕ್ರಿಶ್ಚಿಯನ್ನರು’ ಎಂದೇ ಕರೆದುಕೊಳ್ಳುತ್ತಾರೆ. ನನ್ನ ಸ್ನೇಹಿತ ಓರ್ವ ದಲಿತ ಸಮುದಾಯಕ್ಕೆ ಸೇರಿದಾತ ಒಂದು ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಹೀಗಾಗಿ ಸ್ವಂತ ಊರಿನಲ್ಲಿ ನೆಲೆಸುವುದು ಸಾಧ್ಯವಿಲ್ಲದ ಕಾರಣ ಆತ ಚೆನ್ನೈಗೆ ತನ್ನ ವಾಸ್ತವ್ಯವನ್ನು ಬದಲಿಸಲು ಮುಂದಾಗಿದ್ದ. ಈ ವೇಳೆ ನಾನು ವಾಸವಾಗಿದ್ದ ಚೆನ್ನೈ ಉಪನಗರದ ಭಾಗದಲ್ಲೇ ಆತನಿಗೂ ಒಂದು ಮನೆಯನ್ನು ಹುಡುಕಿದ್ದೆವು.

ಚೆನ್ನೈಗೆ ಆಗಮಿಸಿದ ನಂತರ ಆತನ ಜಾತಿಯ ಕುರಿತು ಯಾರೇ ವಿಚಾರಿಸಿದರೂ ಆತ ತನ್ನನ್ನು ಓರ್ವ ಕ್ರೈಸ್ತ ಎಂದೇ ಗುರುತಿಸಿಕೊಳ್ಳುತ್ತಿದ್ದ. ಆದರೆ, ಆತನ ಕುಟುಂಬದವರಾಗಲಿ ಅಥವಾ ಆತನ ಹೆಂಡತಿಯಾಗಲಿ ಎಂದಿಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರಾಗಿರಲಿಲ್ಲ. ನಮ್ಮ ಊರಿನಲ್ಲಿ ಆತ ತನ್ನನ್ನು ಕ್ರೈಸ್ತ ಎಂದು ಹೇಳಿಕೊಂಡಿದ್ದರೆ, ಜನ ಆತನನ್ನು ದಲಿತ ಎಂದೇ ಗುರುತಿಸುತ್ತಿದ್ದರು. ಆದರೆ, ಚೆನ್ನೈನಲ್ಲಿ ಕ್ರೈಸ್ತರಿಗೆ ಬೇರೆ ಬೇರೆ ಜಾತಿ ಗುರುತುಗಳಿವೆ. ಹೀಗಾಗಿ ಆತನಿಗೆ ಸುಲಭದಲ್ಲಿ ಮನೆಯೂ ಸಿಕ್ಕಿತ್ತು.

ಪ್ರತಿದಿನ ದೇವಸ್ಥಾನಕ್ಕೆ ಬರುವವರಲ್ಲಿ ಹೆಚ್ಚಿನವರು ಪ್ರಬಲ ಜಾತಿಯವರು. ಹಬ್ಬದಂತಹ ದೊಡ್ಡ ಆಚರಣೆಗಳಲ್ಲಿ ದಲಿತರೂ ಸಹ ಭಾಗವಹಿಸುತ್ತಾರೆ. ನನ್ನ ಹೆಸರು ಪೆರುಮಾಳ್ ಮತ್ತು ಮುರುಗನ್ – ಎರಡು ಹಿಂದೂ ದೇವರುಗಳ ಹೆಸರು ಬೆಸೆದಿದೆ. ಆದರೆ ನನ್ನನ್ನು ಕ್ರೈಸ್ತ ಎಂದು ಹೇಳುವ ಮೂಲಕ ಪರೋಕ್ಷವಾಗಿ ನನಗೆ ದಲಿತ ಎಂಬ ಗುರುತನ್ನೂ ನೀಡಲು ಮುಂದಾಗಿದ್ದರು. ಹೀಗಾಗಿ ನನ್ನ ಹೆಸರಿನಲ್ಲಿ ಪೆರುಮಾಳ್ ಮತ್ತು ಮುರುಗನ್ ಎಂಬ ಇಬ್ಬರು ಹಿಂದೂ ದೇವರ ಹೆಸರುಗಳಿದ್ದರೂ ಸಹ ನನ್ನನ್ನು ಕ್ರೈಸ್ತ ಎಂದು ಕರೆಯಲು ಯಾರಿಗೂ ಯಾವುದೇ ಸಮಸ್ಯೆ ಉದ್ಭವಿಸಲಿಲ್ಲ.

ಕಾರಣ ದಲಿತ ಸಮುದಾಯದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಮೊದಲ ತಲೆಮಾರಿನ ಬಹುಪಾಲು ಜನರ ಹೆಸರು ಹಿಂದೂ ಧರ್ಮದ ಹೆಸರೇ ಆಗಿರುವುದು ಈ ಭಾಗದಲ್ಲಿ ಸಹಜವಾಗಿತ್ತು. ಅವರಿಗೆ ಮತಾಂತರದ ಸಂದರ್ಭದಲ್ಲಿ ಪುಣ್ಯ ಸ್ನಾನ ನೀಡುವಾಗ ಎಲ್ಲರಿಗೂ ಜಾರ್ಜ್ ಎಂದೇ ಹೆಸರಿಸಲಾಗುತ್ತದೆ. ಹೀಗಾಗಿ ಎಲ್ಲರ ಹೆಸರಿನ ಹಿಂದೆ ಜಾರ್ಜ್ ಎಂಬುದು ಸಾಮಾನ್ಯವಾಗಿರುತ್ತದೆ.

ಹೀಗಾಗಿ ನನ್ನ ಹೆಸರಿಗೂ ಕ್ರೈಸ್ತ ಗುರುತಿಗೂ ಸಂಬಂಧವೇ ಇಲ್ಲದಿದ್ದರೂ ಸಹ ನನ್ನ “ದಲಿತ್ ಕ್ರೈಸ್ತ” ಎಂದು ಅರ್ಥಮಾಡಿಕೊಳ್ಳುವುದು ಅವರಿಗೆ ಕಷ್ಟವಾಗಲಿಲ್ಲ. ಇಂತಹ ಸುಳ್ಳು ಗುರುತಿನಿಂದಾಗಿಯೇ “ಈತ ಹಿಂದೂ ದೇವರ ಬಗ್ಗೆ ಕೆಟ್ಟದಾಗಿ ಬರೆದಿರುತ್ತಾನೆ” ಎಂದು ಜನ ತತ್‍ಕ್ಷಣಕ್ಕೆ ಯಾವುದೇ ಆಧಾರಗಳು ಇಲ್ಲದೆಯೂ ನಂಬುವುದಕ್ಕೆ ಸಹಾಯವಾಗಿತ್ತು. ಇನ್ನು ಕರಪತ್ರದಲ್ಲಿ ನನ್ನ ಕಾದಂಬರಿಯ ಆಯ್ದ ಕೆಲ ಭಾಗಗಳನ್ನು ಮಾತ್ರ ಮುದ್ರಿಸಿ ಕೊಡಲಾಗಿತ್ತು. ನನ್ನ ಹೊಸ ಗುರುತಿನ ವದಂತಿಯನ್ನು ಉತ್ತೇಜಿಸಲು ಆ ಕೆಲವು ಪ್ಯಾರಾಗಳೇ ಸಾಕಾಗಿದ್ದವು.

ಪೆರಿಯಾರ್‍ photo courtesy: Hindu Tamil

ಸಾವಿರಾರು ಜನರಿಗೆ ಕರಪತ್ರಗಳನ್ನು ಹಂಚುವ ಮೂಲಕ ನನಗೆ ನೀಡಲಾಗಿದ್ದ “ದಲಿತ್ ಕ್ರೈಸ್ತ” ಎಂಬ ಗುರುತನ್ನು ಹೇಗೆ ನಿರಾಕರಿಸುವುದು ಎಂದೇ ನನಗೆ ತೋಚಲಿಲ್ಲ. ಅಲ್ಲದೆ ವದಂತಿಯನ್ನು ಹರಡಿದವರಂತೆಯೇ ಸಾವಿರಾರು ಲೆಕ್ಕದಲ್ಲಿ ನಾನೂ ಸಹ ಕರಪತ್ರಗಳನ್ನು ಹಂಚುವಷ್ಟರ ಮಟ್ಟಿಗಿನ ಶಕ್ತಿಯಾಗಲಿ, ಸಂಘಟನೆಯಾಗಲಿ ನನ್ನ ಬಳಿ ಇಲ್ಲ. ಅಲ್ಲದೆ, ಪ್ರತಿಯೊಬ್ಬರ ಬಳಿಯೂ ಹೋಗಿ ನನ್ನ ಬಗ್ಗೆ ವಿವರಿಸುವುದೂ ಸಾಧ್ಯವಿಲ್ಲ. ಇನ್ನೂ ನನ್ನನ್ನು “ದಲಿತ್ ಕ್ರಿಶ್ಚಿಯನ್” ಎಂದು ಗುರುತಿಸುವ ಮಾಹಿತಿಯು ತಮಿಳು ಭಾಷೆ ಮಾತ್ರವಲ್ಲದೆ ಇಂಗ್ಲಿಷ್ ಮತ್ತು ಇತರ ರಾಜ್ಯಗಳ ಸ್ಥಳೀಯ ಭಾಷೆಗಳ ಸಾಮಾಜಿಕ ಮಾಧ್ಯಮಗಳಲ್ಲೂ ಹರಡಲಾಗುತ್ತಿತ್ತು. ಈ ಬಗ್ಗೆ ನನಗೆ ತಿಳಿದಾಗ ಏನು ಮಾಡಬೇಕೆಂಬುದೇ ತೋಚದೆ ದಿಗ್ಭ್ರಾಂತನಾಗಿದ್ದೆ.

ನನ್ನ ಕಾದಂಬರಿಯನ್ನು ಸುಡುವ ಹೋರಾಟದ ಹಿಂದಿನ ದಿನ ರಾತ್ರಿ 15 ಜನರ ಗುಂಪೊಂದು ನಮ್ಮ ಮನೆಗೆ ಬಂದು ನನ್ನ ವಿರುದ್ಧ ಧಮಕಿ ಹಾಕಿದ್ದರು, ಈ ವೇಳೆಯೂ ಸಹ ಅವರು ನನ್ನನ್ನು ಕ್ರೈಸ್ತ ಎಂದು ಸಂಬೋಧಿಸಿಯೇ ಮಾತನಾಡಿದ್ದರು. “ನೀನು ನಿಮ್ಮ ದೇವರುಗಳ ಬಗ್ಗೆ ಬೇಕಾದಷ್ಟು ಬರೆದುಕೋ, ನಮ್ಮ ದೇವರುಗಳ ಬಗ್ಗೆ ಏಕೆ ಬರೆಯುತ್ತಿದ್ದೀಯ?” ಎಂಬುದೊಂದೆ ಅವರೆಲ್ಲರೂ ಒಟ್ಟಾಗಿ ನನ್ನ ಬಳಿ ಕೇಳಿದ ಪ್ರಶ್ನೆ.

ಈ ವೇಳೆ ನಾನು ಕ್ರೈಸ್ತನಲ್ಲ ಎಂಬ ವಿಚಾರವನ್ನು ಅವರಿಗೆ ಮನವರಿಕೆ ಮಾಡಿಕೊಡಲು ಮುಂದಾದೆ. ಆ ಗುಂಪನ್ನು ಕಂಡು ತುಸು ಭಯಕ್ಕೆ ಒಳಗಾಗಿ “ನಾನೇನು ಹಿಂದೂ ವಿರೋಧಿ ಅಲ್ಲ” ಎಂದು ಹೇಳಿದೆ. ಅಲ್ಲದೆ, ನಾನೂ ಸಹ ಹಿಂದುವೇ ಎಂಬುದನ್ನು ನಿರೂಪಿಸಲು ಮುಂದಾದೆ.

ಈ ಘಟನೆಗೂ ಮೂರು ತಿಂಗಳ ಮೊದಲು, ವಿಜಯದಶಮಿಯ ದಿನದಂದು ಮಕ್ಕಳ ನಾಲಿಗೆ ಮೇಲೆ ಜೇನಿನಿಂದ ಬರೆಯಲು ಹಾಗೂ ಮಕ್ಕಳ ಬೆರಳನ್ನು ಹಿಡಿದು ತಾಂಬೂಲದಲ್ಲಿ ತುಂಬಲಾಗಿದ್ದ ಭತ್ತದ ಮೇಲೆ ಬರೆಯುವ ಮೂಲಕ ಮಕ್ಕಳ ಶಿಕ್ಷಣ ಪರ್ವವನ್ನು ಆರಂಭಿಸಲು ಉತ್ಸಾಹಿ ಸಾಹಿತ್ಯಾಸಕ್ತರು ಕಾರ್ಯಕ್ರಮವೊಂದನ್ನು ರೂಪಿಸಿದ್ದರು. ಈ ಕಾರ್ಯಕ್ರಮಕ್ಕೆ ಹಲವು ಬರಹಗಾರರ ಜೊತೆ ನನ್ನನ್ನೂ ಆಹ್ವಾನಿಸಿದ್ದರು. ಅದು ಒಂದು ಸಂಘಟನೆಯ ಹೆಸರಿನಲ್ಲಿ ನಡೆದ ಕಾರ್ಯಕ್ರಮವಾಗಿತ್ತು. ಆ ಕಾರ್ಯಕ್ರಮದಲ್ಲಿ ನಾನು ಪೂರ್ಣ ಹೃದಯದಿಂದ ಭಾಗವಹಿಸಿದ್ದೆ.

ಈ ಸಂಘಟನೆಯವರು ಸಾಹಿತ್ಯಿಕ ಉತ್ಸಾಹಿಯಾಗಿದ್ದರೂ ಸಹ ಧಾರ್ಮಿಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು. ಆದರೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನ್ನ ಕೆಲವು ಸ್ನೇಹಿತರೊಂದಿಗೆ ಮಾತನಾಡಿದ ನಂತರವೇ ನಾನು ಹಾಜರಾಗಲು ನಿರ್ಧರಿಸಿದ್ದೆ. ಇವರು ಉತ್ತಮ ಸಾಹಿತ್ಯ ಓದುಗರು ಮತ್ತು ಅಪಾಯಕಾರಿಯಲ್ಲದ ಕಾರಣ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಬಹುದು ಎಂದು ನನ್ನ ಕೆಲ ಸ್ನೇಹಿತರು ಭರವಸೆ ನೀಡಿದ್ದರು.

ಆ ಕಾರ್ಯಕ್ರಮ ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ತಮಿಳುನಾಡಿನಲ್ಲಿ ಅಂತಹ ಪದ್ಧತಿ ಇಲ್ಲ. ಶಿಕ್ಷಣ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡುವ ಕೇರಳದಲ್ಲಿ, ಬರಹಗಾರರು ಮಕ್ಕಳನ್ನು ಬೆರಳ ತುದಿಯಿಂದ ಭತ್ತದ ಮೇಲೆ ಬರೆಯುವ ಮೂಲಕ ಶಿಕ್ಷಣ ಪರ್ವವನ್ನು ಪ್ರಾರಂಭಿಸುವುದು ವಾಡಿಕೆ. ಈ ಕಾರ್ಯಕ್ರಮಕ್ಕೆ ಬರಹಗಾರರನ್ನು ಆಹ್ವಾನಿಸಲು ಮಲಯಾಳಂ ಜನರು ಇಷ್ಟಪಡುತ್ತಾರೆ. ಇಂತಹ ಬರಹಗಾರನ ಕೈಯಿಂದ ಬರೆಯಲು ಪ್ರಾರಂಭಿಸಿದ ಮಗು ಎಂದು ಹೇಳಿಕೊಳ್ಳಲು ಅವರು ಹೆಮ್ಮೆಪಡುತ್ತಾರೆ. ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿ ಸುಕುಮಾರನ್, ಅದರ ಬಗ್ಗೆ ‘ಭೂಮಿಯನ್ನು ಓದುವ ಹುಡುಗಿ’ ಎಂಬ ಶೀರ್ಷಿಕೆಯಲ್ಲಿ ಒಂದು ಕವಿತೆಯನ್ನೂ ಬರೆದಿದ್ದಾರೆ.

ಆ ಕವಿತೆ ನನ್ನ ಮೇಲೆ ಬೀರಿದ ಪರಿಣಾಮವೂ ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರಣವಾಗಿತ್ತು. ಬರಹಗಾರರನ್ನು ತಂದೆಯೆಂದು ಪರಿಗಣಿಸುವ ತಮಿಳು ಸಮುದಾಯದಲ್ಲಿ ಇಂತಹ ಸಮಾರಂಭವು ಉತ್ತಮ ಸಂಪ್ರದಾಯ. ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತರುವ ಪೋಷಕರ ಪೈಕಿ ಬಹುಪಾಲು ಜನ ಸಾಮಾನ್ಯವಾಗಿ ಬಡ ಜನರು. ಅವರೊಂದಿಗೆ ಮಾತನಾಡಿದಾಗ, ಅವರು ತಮ್ಮ ಮಕ್ಕಳ ಬಗ್ಗೆ ಕಂಡಿದ್ದ ಕನಸುಗಳನ್ನು ನಾನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಯಿತು.

ನನ್ನ ಮನೆಗೆ ದಾಳಿಯಿಟ್ಟ ಜನರ ಬಳಿ ಈ ಕಾರ್ಯಕ್ರಮವನ್ನು ಉಲ್ಲೇಖಿಸಿ ನಾನು ಹಿಂದೂ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದೆ. ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದನ್ನು ಅವರ ಎದುರು ಹೇಳಿ ನಾನೂ ಹಿಂದೂ ಎಂದು ಸಾಬೀತುಪಡಿಸುವುದು ನನಗೆ ಮುಜುಗರದ ವಿಚಾರವೇ ಆಗಿತ್ತು. ಆದರೆ, ಆ ರಾತ್ರಿಯಲ್ಲಿ ನಾನು ಬೇರೆ ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೆ.

ರಾತ್ರಿ ಹನ್ನೊಂದು ಗಂಟೆ. ಮನೆಯೊಳಗೆ ನನ್ನ ಇಡೀ ಕುಟುಂಬವಿತ್ತು. ಬೀದಿಯಲ್ಲಿ ಜನ ಓಡಾಟವೇ ಇರಲಿಲ್ಲ. ಹಣೆಯ ಮೇಲೆ ಉದ್ದನೆಯ ತಿಲಕದೊಂದಿಗೆ ನನ್ನ ಮನೆಗೆ ಆಗಮಿಸಿದ್ದ ಗುಂಪು ನನ್ನನ್ನು ಕ್ರೈಸ್ತ ಎಂದು ಆರೋಪಿಸಿತ್ತು. ಆ ಹೊತ್ತಿನಲ್ಲಿ ಅವರ ಕೈಯಲ್ಲಿ ಮತ್ತು ಬ್ಯಾಗುಗಳಲ್ಲಿ ಏನಿತ್ತು? ಎಂಬುದು ನನಗೆ ತಿಳಿದಿರಲಿಲ್ಲ. ಹೀಗಾಗಿ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾನು ಆ ಕಾರ್ಯಕ್ರಮವನ್ನು ಬಳಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಆದಾಗ್ಯೂ ಅವರು ತೃಪ್ತರಾಗಿಲ್ಲ. ನಾನು ಕ್ರೈಸ್ತನಲ್ಲ ಎಂಬ ವಿಚಾರ ಅವರ ಅರಿವಿಗೆ ಬರುತ್ತಿದ್ದಂತೆ ಅವರು ಅತೃಪ್ತರಾದಂತೆ ಕಂಡರು. ಆದರೂ, ನಾನು ಉತ್ತರಿಸಲು ಸಾಧ್ಯವೇ ಆಗದಂತಹ ಒಂದು ಪ್ರಶ್ನೆಯನ್ನು ಮುಂದಿಟ್ಟರು.

ಕ್ರೈಸ್ತ ಧರ್ಮದ ಬಗ್ಗೆಯೂ ನೀನು ಹೀಗೆಯೇ ಬರೆಯುವೆಯಾ? ಅಸಲಿಗೆ ಈ ಪ್ರಶ್ನೆಗೆ ನಾನು ಏನೆಂದು ಉತ್ತರಿಸಬಲ್ಲೆ? ಧಾರ್ಮಿಕ ದೃಷ್ಟಿಕೋನದಿಂದ ನಾನು ಏನನ್ನೂ ಬರೆಯಲಿಲ್ಲ. ಒಂದು ಧರ್ಮವನ್ನು ಅಪಮಾನಿಸುವುದು ಅಥವಾ ಇನ್ನೊಂದು ಧರ್ಮವನ್ನು ಉತ್ತೇಜಿಸುವುದು ನನ್ನ ಬರವಣಿಗೆಯ ಉದ್ದೇಶವಲ್ಲ. ಆದರೆ, ಈ ಪ್ರಶ್ನೆಯನ್ನು ಅವರು ಕ್ರಿಶ್ಚಿಯನ್ ಧರ್ಮದ ಬಗ್ಗೆ ಬರೆದರೆ ಆ ಧರ್ಮದ ಜನ ಸಹಿಸುವುದಿಲ್ಲ ಎಂಬ ಅರ್ಥದಲ್ಲೇ ಕೇಳಲಾಗುತ್ತಿದೆ ಎಂಬುದನ್ನು ನಾನು ಬಲ್ಲೆ.

ನಾನು ಅನುಸರಿಸುವ ಆರಾಧಿಸುವ ಆಚರಣೆಗಳ ಬಗ್ಗೆ ತಾನೆ ನಾನು ಬರೆಯಲು ಸಾಧ್ಯ? ಎಂಬ ಸತ್ಯ ನನಗೆ ಗೊತ್ತು. ಹಿಂದೂ ಧಾರ್ಮಿಕ ಆಚರಣೆಗಳನ್ನು ಕಟುವಾಗಿ ಟೀಕಿಸಿದ್ದ ಪೆರಿಯಾರ್, “ತಾನು ಬೇರೆ ಧರ್ಮಕ್ಕೆ ಮತಾಂತರವಾಗದೆ ಈ ಧರ್ಮದಲ್ಲೇ ಇದ್ದರೆ ಮಾತ್ರ ಅದನ್ನು ಟೀಕಿಸಬಹುದು” ಎಂದು ಹೇಳಿದ್ದರು.

ಆದರೆ, ಇಡೀ ಜನಸಮೂಹದ ಬೆರಳುಗಳು ಒಗ್ಗಟ್ಟಿನಿಂದ ನನ್ನ ಕಡೆಗೆ ಚಾಚಿ ಪ್ರಶ್ನಿಸುತ್ತಿರುವಾಗ ನಾನು ಯಾವ ಉತ್ತರವನ್ನು ನೀಡುವುದೂ ಸಹ ಸಾಧುವಲ್ಲ. ಈ ವೇಳೆ ಆ ಜನರ ಗುಂಪು “ನೀವು ಕ್ರಿಶ್ಚಿಯನ್ನರ ಬಗ್ಗೆ ಬರೆಯುತ್ತೀರಾ?” ಎಂದು ಪದೇ ಪದೇ ಪ್ರಶ್ನಿಸುವ ಮೂಲಕ ಅವರ ದೃಷ್ಟಿಕೋನದಲ್ಲಿ ನನ್ನನ್ನು ಕ್ರೈಸ್ತನನ್ನಾಗಿಸಿ ಎಚ್ಚರಿಕೆ ನೀಡಿ ಹೊರಟಿತು.

ಕೆಲವು ದಿನಗಳ ನಂತರ ವಿದೇಶಿ ರಾಯಭಾರ ಕಚೇರಿಯಿಂದ ನನ್ನ ಸ್ನೇಹಿತನ ಮೂಲಕ ನಾನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವ್ಯಕ್ತಿಯೇ ಎಂದು ಕೆಲವರು ವಿಚಾರಿಸಿರುವ ಬಗ್ಗೆಯೂ ನನಗೆ ಮಾಹಿತಿ ದೊರಕಿತ್ತು. ಈ ವದಂತಿಯ ಶಕ್ತಿಯೂ ದೊಡ್ದದೆ. ಏಕೆಂದರೆ ಈ ಸಮಸ್ಯೆ ಮುಗಿದ ಸುಮಾರು ನಾಲ್ಕು ವರ್ಷಗಳ ನಂತರ ನಾನು ನೆರೆಯ ರಾಜ್ಯದ ಖಾಸಗಿ ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ತೆರಳಿದ್ದೆ. ಅಲ್ಲಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುವ ಪ್ರಾಧ್ಯಾಪಕರೊಂದಿಗೆ ಕೆಲವು ದಿನಗಳನ್ನು ಕಳೆಯುವ ಅವಕಾಶ ನನಗೆ ಸಿಕ್ಕಿತ್ತು.

ಅವರು ಆಂಗ್ಲಭಾಷೆಯಲ್ಲಿ ಅನೇಕ ನಿಯತಕಾಲಿಕೆಗಳಿಗೆ ಬರೆಯುವ ಪ್ರಮುಖ ವಿಮರ್ಶಕರೂ ಹೌದು. ಒಂದು ದಿನ ಮಾತುಕತೆಯ ಸಮಯದಲ್ಲಿ ಅವರು ನನ್ನನ್ನು ಉದ್ದೇಶಿಸಿ, “ನಿಮ್ಮದು ಕ್ರೈಸ್ತ ಧರ್ಮವೇ?” ಎಂದು ಕೇಳಿದ್ದರು. ನಾನು ಅವರಿಗೆ ‘ಇಲ್ಲ’ ಎಂದು ಹೇಳಿದೆ ಮತ್ತು ಈ ವದಂತಿಯನ್ನು ಏಕೆ ಹರಡಲಾಯಿತು? ಎಂಬ ಹಿನ್ನೆಲೆಯನ್ನು ವಿವರಿಸಿದೆ. ಈ ವೇಳೆ ಇಂತಹ ವದಂತಿಗಳು ತನ್ನ ಮನಸ್ಸಿನಲ್ಲೂ ಎಂತಹಾ ದಾಖಲೆಯನ್ನು ಅಚ್ಚೊತ್ತಿದೆ ಎಂಬುದರ ಬಗ್ಗೆ ಅವರು ನಾಚಿಕೆ ಮತ್ತು ನೋವನ್ನು ವ್ಯಕ್ತಪಡಿಸಿದ್ದರು.

ಪ್ರಚಾರವು ವದಂತಿಯ ಮೂಲವನ್ನು ಹುಡುಕಿ ಹೋಗುವುದಿಲ್ಲ ಎಂದು ತಿಳಿದಿರುವವ ಪ್ರಾಧ್ಯಾಪಕರೂ ಸಹ ಈ ವದಂತಿಗಳಿಗೆ ಕಿವಿಗೊಟ್ಟದನ್ನು ಯೋಚಿಸಿಯೇ ಅವರು ನಾಚಿಕೆಪಟ್ಟುಕೊಂಡಿದ್ದು. ಈ ವದಂತಿ ಎಂಬುದು ಸಾರ್ವಜನಿಕರಿಗೆ ಮಾತ್ರವಲ್ಲ ಬುದ್ಧಿಜೀವಿಗಳ ಕಿವಿಗೂ ಹೋಗಿದೆ ಎಂದು ನೆನೆದು ನನಗೆ ಸಾಕಷ್ಟು ಬೇಸರವಾಗಿತ್ತು.

photo courtesy: Daily express

ಈ ವಿಷಯದ ಬಗ್ಗೆ ಮೊದಲು ಪ್ರತಿಕ್ರಿಯಿಸಿದವರು ತಮಿಳುನಾಡಿನ ಪ್ರಮುಖ ದಲಿತ ಪಕ್ಷವಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‍ಟಿಟಿಇ). ಮಧುರುಭಾಗನ್ ವಿವಾದ ವೇಳೆ ಈ ಪಕ್ಷ ಸರ್ಕಾರಕ್ಕೆ ನೀಡಿದ ಹೇಳಿಕೆಯಲ್ಲಿ (28-12-2014) “ಹಿಂದೂ ಸಂಘಟನೆಗಳು ಸದಾ ಹಕ್ಕುಸ್ವಾಮ್ಯ, ಸಿದ್ಧಾಂತ ಮತ್ತು ವ್ಯಕ್ತಿಗತ ಅಭಿಪ್ರಾಯವನ್ನು ಕಸಿದುಕೊಳ್ಳುವ ವಿಚಾರದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಜನ ಎಂಬುದು ಇಡೀ ದೇಶಕ್ಕೆ ತಿಳಿದಿರುವ ಸತ್ಯ. ಅವರು ತಮಿಳುನಾಡಿನಲ್ಲೂ ಇದೇ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅನಗತ್ಯ ವಿವಾದವನ್ನು ಸೃಷ್ಟಿಸಲಾಗುತ್ತಿದೆ. ಹೀಗಾಗಿ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‍ಟಿಟಿಇ) ಪರವಾಗಿ ಬರಹಗಾರರು ಮತ್ತು ಪ್ರಕಾಶಕರಿಗೆ ರಕ್ಷಣೆ ನೀಡುವಂತೆ ನಾವು ತಮಿಳುನಾಡು ಸರ್ಕಾರವನ್ನು ಕೋರುತ್ತೇವೆ” ಎಂದು ಅವರು ಸರ್ಕಾರಕ್ಕೆ ಬರೆದಿದ್ದ ಪತ್ರ ನನಗೆ ಬಹಳ ಸಮಾಧಾನ ಮತ್ತು ಧೈರ್ಯವನ್ನು ನೀಡಿತು.

ಆದರೆ, ಎಲ್‍ಟಿಟಿಇ ಪಕ್ಷದ ಈ ಹೇಳಿಕೆಯನ್ನು ಪ್ರತಿಭಟನಾಕಾರರು ತಮ್ಮ ಅನುಕೂಲಕ್ಕೆ ಬಳಸಿಕೊಂಡರು.

ಈಗಾಗಲೇ ನನ್ನನ್ನು ಕ್ರಿಶ್ಚಿಯನ್ ಎಂದು ವದಂತಿ ಹರಡಿದವರು, ಎಲ್‍ಟಿಟಿಇ ಪಕ್ಷದ ತಿರುಮಾವಳನ್ ಅವರು ಓರ್ವ ‘ದಲಿತ್ ಕ್ರೈಸ್ತ’ ಎಂಬ ಕಾರಣಕ್ಕಾಗಿ ಅವರು ಪೆರುಮಾಳ್ ಮುರುಗನ್ ಪರವಾಗಿ ನಿಂತಿದ್ದಾರೆ ಎಂದು ಮತ್ತೊಂದು ವದಂತಿಯನ್ನು ಹರಡಲು ಆರಂಭಿಸಿದರು. ಅತ್ಯಂತ ಸ್ಪಷ್ಟವಾದ ರಾಜಕೀಯ ಸನ್ನಿವೇಶದಲ್ಲಿ, ಅಷ್ಟೇ ಸ್ಪಷ್ಟವಾಗಿದ್ದ ಆ ವರದಿಯು ಈ ವಿಷಯದ ಬಗ್ಗೆ ಇತರ ಪಕ್ಷಗಳು, ಬರಹಗಾರರು ಮತ್ತು ಮಾಧ್ಯಮಗಳ ಗಮನವನ್ನು ಬೇರೆಡೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಪರಿಣಾಮ ಪ್ರತಿಭಟನೆಯ ಕಾವು ದಿನೇ ದಿನೇ ಹೆಚ್ಚಾಯಿತು. ಜಾತಿಗ್ರಸ್ಥ ಸಮಾಜದಲ್ಲಿ ಯಾವುದೇ ಒಂದು ಸಾರ್ವಜನಿಕ ವಿಷಯವನ್ನು ಜಾತೀಯ ವಿಷಯವನ್ನಾಗಿ ಬದಲಿಸಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿದಿರುವವರು ಅವರೇ ಅಲ್ಲವೇ?

ತಾವು ಪ್ರಾರಂಭಿಸಿದ ಈ ಸಮಸ್ಯೆಯನ್ನು ತಾವೇ ಮುಂದುವರಿಸುವಲ್ಲಿ ಎದುರಾಗುವ ತೊಂದರೆಗಳನ್ನು ಮುಂಚೆಯೇ ಅರಿತಿದ್ದ ಧಾರ್ಮಿಕ ಸಂಸ್ಥೆಗಳು ಈ ಸಮಸ್ಯೆಯನ್ನು ಜಾತಿ ಸಂಘಟನೆಗಳಿಗೆ ಹಸ್ತಾಂತರಿಸಿ ನಂತರ ತಾವು ಹಿಂದೆ ನಿಂತು ಪೋಷಿಸಿದವು. ತಿರುಮಾವಳನ್ ಸರ್ಕಾರಕ್ಕೆ ನೀಡಿದ ವರದಿಯು ಮುನ್ನೆಲೆಗೆ ಬಂದದ್ದು ಜಾತಿಗ್ರಸ್ಥ ವ್ಯವಸ್ಥೆಗೆ ಬಹಳಷ್ಟು ಸಹಾಯ ಮಾಡಿತು.

ನನ್ನನ್ನು ದಲಿತನೆಂದು ಗುರುತಿಸಲು ತಿರುಮಾವಳನ್ ಹೇಳಿಕೆಗಿಂತ ದೊಡ್ಡ ಪುರಾವೆ ಬೇಕೆ? ಇಲ್ಲಿನ ಜಾತಿಗ್ರಸ್ಥ ಬಣಗಳು ಧಾರ್ಮಿಕ ಮೂಲಭೂತವಾದಿಗಳಂತಲ್ಲ. ಅವರಿಗೆ ಕ್ರೈಸ್ತ ಎಂಬ ಗುರುತು ಅಷ್ಟು ಮುಖ್ಯವಾದದ್ದಲ್ಲ. ಅವರಿಗೆ ‘ದಲಿತ’ ಎಂಬ ಗುರುತು ಮಾತ್ರ ಸಾಕಾಗಿತ್ತು. ಪ್ರಬಲ ಜಾತಿಗಳನ್ನು ಅವಮಾನಿಸುವ ರೀತಿಯಲ್ಲಿ ದಲಿತರು ಹೀಗೆ ಬರೆದಿದ್ದಾರೆ ಎಂಬ ಪ್ರಚಾರವು ಕಾದಂಬರಿ ವಿರೋಧಿ ಮನೋಭಾವವನ್ನು ಹರಡಲು ಸಹಾಯ ಮಾಡಿತು. ‘ದಲಿತ’ಎಂಬ ಗುರುತು ಅವರು ಕೈಗೊಳ್ಳುತ್ತಿರುವ ಹೋರಾಟಗಳಿಗಾಗಿ ಜನರನ್ನು ಸಜ್ಜುಗೊಳಿಸುವುದು ಕಷ್ಟವಾಗಿದ್ದರೂ ಪಟ್ಟಣದಾದ್ಯಂತ ಬೆಂಬಲ ಮನಸ್ಥಿತಿಯನ್ನು ಸೃಷ್ಟಿಸಲು ಅವರಿಗೆ ಇಷ್ಟೇ ಸಾಕಾಗಿತ್ತು.

ಭೂ ಮಾಲೀಕತ್ವ ಹೊಂದಿರುವ ಪ್ರಬಲ ಸವರ್ಣೀಯ ಹಿಂದೂ ಜಾತಿ ಗುಂಪುಗಳಿಗೆ ದಲಿತರ ವಿರುದ್ಧದ ಅವರ ಕಟು ನಿಲುವಿಗೆ ಹಲವು ಕಾರಣಗಳಿದ್ದರೂ, ಅವರು ಪ್ರಮುಖವಾಗಿ ದ್ವೇಷ ಸಾಧಿಸುವುದು “ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ”ಯ ಬಗ್ಗೆ. ಈ ಕಾಯ್ದೆಯನ್ನು ರದ್ದುಪಡಿಸಲು ಅವರು ಉಗ್ರವಾಗಿ ಆಗ್ರಹಿಸುತ್ತಿದ್ದಾರೆ.

ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮಟ್ಟದಲ್ಲಿ ಈ ಕಾನೂನನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿ ಪ್ರಬಲ ಜಾತಿಗಳು ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಿವೆ. ಈ ಕಾಯ್ದೆಯ ಕಾರಣದಿಂದಲೇ ಹಿಂದಿನ ಕಾಲದಂತೆ ದಲಿತರ ಮೇಲೆ ದಬ್ಬಾಳಿಕೆ ಮೆರೆಯಲು, ದೌರ್ಜನ್ಯವೆಸಗಲು ಸಾಧ್ಯವಾಗುತ್ತಿಲ್ಲ. ಈ ಕಾಯ್ದೆ ದಲಿತರನ್ನು ಕಾಪಾಡುತ್ತಿದೆ ಎಂಬುದು ಪ್ರಬಲ ಜಾತಿಗಳಿಗೆ ಈಗಲೂ ನುಂಗಲಾರದ ತುತ್ತಾಗಿದೆ. ಈ ಕಾನೂನಿನಿಂದಾಗಿ ಹಲವು ಪ್ರಬಲ ಜಾತಿಯ ಜನ ತಾವು ಮಾಡಿದ ತಪ್ಪುಗಳಿಗೆ ವಿಚಾರಣೆಗಾಗಿ ಅಲೆದಾಡುತ್ತಿರುವ ಮತ್ತೆ ಕೆಲವರು ಜೈಲಿಗೆ ಹೋಗುವಂತೆ ಮಾಡಿರುವು ಕಾರಣದಿಂದಾಗಿಯೇ ಈ ಕುರಿತು ಅವರಲ್ಲೊಂದು ಆತಂಕ ಮತ್ತು ಭಯ ಇದೆ.

ಈ ಕಾಯ್ದೆಯ ವಿರುದ್ಧದ ತಮ್ಮ ನಿಲುವಿನಿಂದಲೇ ಹಲವು ಜಾತಿಗ್ರಸ್ತ ರಾಜಕೀಯ ನಾಯಕರು ಈ ಪ್ರಬಲ ಜಾತಿಗಳ ನಡುವೆ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ಪ್ರಬಲ ಜಾತಿ ಸಂಘಗಳು ಈ ಕಾಯ್ದೆಯಿಂದಾಗಿ ಸಮಸ್ಯೆಗೆ ಸಿಲುಕಿದ ತಮ್ಮ ಜಾತಿ ಜನರಿಗೆ ಕಾನೂನು ಸಹಾಯವನ್ನು ಮಾಡುತ್ತಿದೆ. ಹೀಗಾಗಿಯೇ ತಮಗೆ ಯಾವ ಸಮಸ್ಯೆ ಎದುರಾದರೂ ಸಹ ತಮ್ಮ ಜಾತಿ ಸಂಘಟನೆ ತಮ್ಮ ಬೆನ್ನಿಗೆ ನಿಲ್ಲುತ್ತದೆ ಎಂಬ ಬಲವಾದ ನಂಬಿಕೆ ಈ ಪ್ರಬಲ ಜಾತಿ ಜನರ ನಡುವೆ ಇದೆ. ದಲಿತರ ವಿರುದ್ಧದ ತಮ್ಮ ಜಾತಿಗ್ರಸ್ತ ದಬ್ಬಾಳಿಕೆಯನ್ನು ನಿಲ್ಲಿಸಿ ಸುಧಾರಣೆಗೊಳ್ಳುವುದರ ಬದಲು ಈ ಅಸೂಯೆಯೆ ಬಣಗಳು ದಲಿತರನ್ನು ತಮ್ಮ ಶತ್ರುಗಳಂತೆ ಕಂಡು ಜಾತಿಯ ಗುರುತಿನ ರಾಜಕೀಯದ ಜೊತೆಗೆ ಚಿಲ್ಲರೆ ಜನಪ್ರಿಯತೆಗೆ ಹಾತೊರೆಯುತ್ತಾರೆ. ನನ್ನ ದಲಿತ ಗುರುತು ಇಂತಹವರಿಗೆ ಬಹಳ ಸಹಾಯ ಮಾಡಿತು.

“ಯಾರೋ ಒಬ್ಬ ದಲಿತ ನಮ್ಮ ಜಾತಿಯ ಬಗ್ಗೆ ಅಸಹ್ಯಕರವಾಗಿ ಬರೆದಿದ್ದಾನೆ” ಎಂಬ ವಿಚಾರ ಮತ್ತಷ್ಟು ವೇಗವಾಗಿ ಪಸರಿಸಲು ಈ ವದಂತಿ ಸಹಕಾರಿಯಾಯಿತು. ಹೀಗಾಗಿಯೇ ನನ್ನ ಜಾತಿಯ ಜನ ಹೆಚ್ಚಾಗಿ ವಾಸಿಸುವ ಸುಮಾರು ಎಂಟು ಜಿಲ್ಲೆಗಳಲ್ಲಿ ಈ ವದಂತಿ ವೇಗವಾಗಿ ಹರಡಿತು. ನನ್ನನ್ನು ದಲಿತ ಎಂದು ಗುರುತಿಸಿದ್ದರ ಬಗ್ಗೆ ನನಗೆ ಕಿಂಚಿತ್ತೂ ಬೇಸರವಿಲ್ಲ. ಈ ಘಟನೆಗೆ ಮುಂಚೆಯೂ ನನಗೆ ಹಲವಾರು ಜಾಗಗಳಲ್ಲಿ ಇಂತಹ ಗುರುತುಗಳು ಸಿಕ್ಕಿವೆ. ಆದರೆ, ಈ ಘಟನೆಯ ನಂತರ ಸಿಕ್ಕ ದಲಿತ ಗುರುತಿನ ಹಿಂದೆ ಅತಿದೊಡ್ಡ ರಾಜಕಾರಣ ಕೆಲಸ ಮಾಡಿದೆ ಎಂಬುದು ಉಲ್ಲೇಖಾರ್ಹ.

ಈ ಹೋರಾಟ ಕೇವಲ ಒಂದು ಕಾದಂಬರಿಯ ವಿರುದ್ಧದ ಹೋರಾಟವಲ್ಲ. ಬದಲಾಗಿ ದಲಿತ ರಾಜಕಾರಣ ಮತ್ತು “ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ” ವಿರುದ್ಧದ ಹೋರಾಟವಾಗಿಯೂ ವಿಸ್ತರಿಸಿತ್ತು. ವದಂತಿಯನ್ನು ಕಾಡ್ಗಿಚ್ಚು ಎಂದು ಹೇಳುವುದಕ್ಕಿಂತ “ವಿಷ” ಎಂದು ಹೇಳುವುದೇ ಸೂಕ್ತ. ಹೀಗೆ ಹರಡುತ್ತಿರುವ ವಿಷವನ್ನು ಎದುರಿಸಲು ನನ್ನ ಬಳಿ ಯಾವ ಮಾರ್ಗವೂ ಇಲ್ಲ.

ಮಾಧ್ಯಮ ಮತ್ತು ಕರಪತ್ರಗಳಲ್ಲಿ ನನ್ನ ಹೆಸರು ಮತ್ತು ಮುಖವನ್ನು ನೋಡಿದ ನನ್ನ ಸಂಬಂಧಿಕರು ಈ ‘ದಲಿತ’ ಎಂಬ ಗುರುತು ಪ್ರಶ್ನಾರ್ಥಕವಾಗಿದೆ. ’ಈತ ನಮ್ಮವನಲ್ಲವೇ’ (ಇಲ್ಲಿ ನಮ್ಮವ ಎಂಬುದೂ ಸಹ ಜಾತಿ ಸೂಚಕ) ಎಂದು ಮಾತನಾಡಲು ಪ್ರಾರಂಭಿಸಿದರು. ಯಾವುದೇ ಒಂದು ಜಾತಿಯೊಳಗೆ ಸಂಬಂಧವೆಂಬುದಕ್ಕೆ ಮಿತಿ ಇರುವುದಿಲ್ಲ. ಜಾತಿಯೊಳಗಿರುವ ಎಲ್ಲರೂ ಯಾವುದೋ ಒಂದು ಬಗೆಯಲ್ಲಿ ಸಂಬಂಧಿಕರೇ ಆಗಿಬಿಡುತ್ತಾರೆ. ಕುಲ ಗೋತ್ರ್ರ ಎಂಬ ಪದ್ಧತಿಗಳು ಇರುವುದರಿಂದ ಇದು ಇನ್ನೂ ಸುಲಭವಾಗಿಬಿಡುತ್ತದೆ.

ಒಂದೇ ಕುಲ-ಗೋತ್ರದಲ್ಲಿ ಹುಟ್ಟಿದವರು ದಾಯಾದಿಗಳು. ಬೇರೆ ಬೇರೆ ಕುಲ-ಗೋತ್ರಗಳಲ್ಲಿ ಜನಿಸಿದವರು ಮಾಮ-ಅಳಿಯನೆಂಬ ವರಸೆಯಾಗುತ್ತದೆ. ಹೀಗಾಗಿ ಈತ ’ನಮ್ಮವನು’ ಎಂಬ ಉದ್ಘಾರ ಒಬ್ಬರಿಂದ ಮತ್ತೊಬ್ಬರಿಗೆ ಹೋಗುವಾಗ ಇಂತಹ ಸಂಬಂಧಗಳು ತಾನಾಗಿಯೇ ಹುಟ್ಟಿಕೊಳ್ಳುತ್ತದೆ. ನನ್ನನ್ನು ದಲಿತ ಎಂದು ಕರೆದ ವದಂತಿಗೆ ನನ್ನ ಹುಟ್ಟೂರಿನಿಂದ ಮತ್ತು ನನ್ನ ಸಂಬಂಧಿಕರಿಂದ ವಿರೋಧ ವ್ಯಕ್ತವಾದದ್ದರಿಂದ ಆ ವದಂತಿಗೆ ಸಿಕ್ಕಿದ್ದ ಬೆಂಬಲ ಕ್ರಮೇಣವಾಗಿ ಕ್ಷೀಣಿಸಲು ಪ್ರಾರಂಭವಾಯಿತು.

ಏಳು- ಎಂಟು ಜಿಲ್ಲೆಗಳಲ್ಲಿ ಪ್ರಬಲ ಜಾತಿ ಜನರನ್ನು ಒಂದುಗೂಡಿಸಿ ನನ್ನ ವಿರುದ್ಧ ದೊಡ್ಡ ಮೆರವಣಿಗೆಯನ್ನು ನಡೆಸುವ ಯೋಜನೆಗೆ ಹೆಚ್ಚಿನ ಬೆಂಬಲ ಸಿಗಲಿಲ್ಲ. ಏಕೆಂದರೆ ಆ ಜಿಲ್ಲೆಯ ಜಾತಿ ಸಂಘಟನೆಯಲ್ಲಿ ಮುಖ್ಯ ಸ್ಥಾನದಲ್ಲಿ ಇದ್ದದ್ದು ನನ್ನ ಸೋದರಸಂಬಂಧಿ. ಅಸಲಿಗೆ ಆ ಜಿಲ್ಲೆಯಿಂದ ಹೆಚ್ಚಿನ ಜನರನ್ನು ಕರೆದುಕೊಂಡು ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಅವರಿಗೆ ಕರೆ ನೀಡಲಾಗಿತ್ತಂತೆ. ಆದರೆ, ಅವರು “ನನ್ನ ಅಣ್ಣನ ವಿರುದ್ಧ ನಾನು ಹೋರಾಟ ಮಾಡಲಾರೆ, ನೀವು ಬೀದಿಗಿಳಿಯುವುದು ಅನವಶ್ಯಕ” ಎಂದು ಹೇಳಿದ್ದರಂತೆ. ಆದರೂ ನನ್ನ ವಿರುದ್ಧ ಹೋರಾಟ ನಡೆದಿತ್ತು. ಆದರೆ, ಆ ನಿರ್ದಿಷ್ಟ ಜಿಲ್ಲೆಯಿಂದ ಯಾರೂ ಹೋರಾಟದಲ್ಲಿ ಭಾಗವಹಿಸಿರಲಿಲ್ಲ.

ಹೀಗೆ ‘ದಲಿತ’ಎಂಬ ವದಂತಿಯ ಬಣ್ಣ ದಿನದಿಂದ ದಿನಕ್ಕೆ ಮಸುಕಾಗಲು ಪ್ರಾರಂಭಿಸುತ್ತಿದ್ದಂತೆ ಅವರು ನನ್ನ ಕುರಿತ ವಿವಾದವನ್ನು ಬೇರೆ ವೇದಿಕೆಗೆ ಸ್ಥಳಾಂತರಿಸಲು ಪ್ರಯತ್ನಿಸಿದರು. ನನ್ನ ಎಲ್ಲಾ ಪಠ್ಯಗಳನ್ನು ಓದಿದ ಮತ್ತು ನನ್ನ ಬಗ್ಗೆ ಎಲ್ಲಾ ಮಾಹಿತಿಯನ್ನು ಒಟ್ಟುಗೂಡಿಸುವ ಒಂದು ಗುಂಪು ಈ ಸಮಸ್ಯೆ ಸೃಷ್ಟಿಯ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಿರಬಹುದು ಎಂದು ನಾನು ಭಾವಿಸುತ್ತೇನೆ.

ಏಕೆಂದರೆ ಒಂದೊಂದೆ ವೇದಿಕೆಯಲ್ಲಿ ಈ ವಿವಾದ ತಣ್ಣಗಾಗುತ್ತಲೂ ಅವರು ಇದನ್ನು ಬೇರೆ ಬೇರೆ ವೇದಿಕೆಗಳಿಗೆ ಸ್ಥಳಾಂತರಿಸಿ ಮುಂದಿನ ಘಟ್ಟಕ್ಕೆ ತೆಗೆದುಕೊಂಡು ಹೋಗುವ ಮೂಲಕ ಈ ವಿವಾದ ಜೀವಂತವಾಗಿರುವಂತೆ ನೋಡಿಕೊಳ್ಳಲು ಅವರಿಗೆ ಸಾಧ್ಯವಾಗಿತ್ತು. ಅಲ್ಲದೆ, ಈ ವಿವಾದ ಹುಟ್ಟುವ ಮೊದಲೇ ಜಾತಿ ಮತ್ತು ಧರ್ಮ ಈ ಎರಡೂ ಸಂಕೋಲೆಗಳ ನಡುವೆ ಸಿಲುಕಿಕೊಂಡಿರುವ ಒಂದು ಅಂತರ್ಜಾಲ ಸುದ್ದಿ ಮಾಧ್ಯಮದಲ್ಲಿ “ಯಾರು ಈ ಪೆರುಮಾಳ್ ಮುರುಗನ್?” ಎಂಬ ಶೀರ್ಷಿಕೆಯ ಅಡಿಯಲ್ಲಿ ಲೇಖನವೊಂದು ಪ್ರಕಟವಾಗಿತ್ತು. ಅಸಲಿಗೆ ಈ ವಿವಾದವನ್ನು ಮುಂದಿನ ಹಂತಕ್ಕೆ ಮುನ್ನಡೆಸಲು ಕೆಲಸ ಮಾಡಿದ ಸಂಘಟನೆಗಳಿಗೆ ಸೇರಿದ ಓರ್ವ ವ್ಯಕ್ತಿ ಇದನ್ನು ಬರೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಆ ಲೇಖನದಲ್ಲಿ ನನ್ನ ಮದುವೆ ಪ್ರಸಂಗದ ಬಗ್ಗೆಯೂ ಒಂದು ಸಾಲು ಇದೆ: “ಈತ ಹಿಂದುಳಿದ ಜಾತಿಗೆ ಸೇರಿದ ಒಂದು ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ” ಅಂದರೆ ನಾನು ಪ್ರೀತಿಸಿ ಮದುವೆಯಾದೆ ಎಂಬುದಲ್ಲ ಇವರ ತಕರಾರು. ಬದಲಿಗೆ “ಹಿಂದುಳಿದ ಜಾತಿಗೆ ಸೇರಿದ ಹುಡುಗಿಯನ್ನು ಮದುವೆಯಾಗಿದ್ದೇನೆ” ಎಂಬುದೇ ಇವರ ಅಸಮಾಧಾನಕ್ಕೆ ಕಾರಣವಾಗಿದೆ.

ನನ್ನ ಪಠ್ಯಗಳನ್ನು ಓದಿದ ಯಾರಾದರೂ ನಾನು ಅಂತರ್ಜಾತಿ ವಿವಾಹವಾಗಿದ್ದೇನೆ, ಪ್ರೀತಿ ಮತ್ತು ಅಂತರ್ಜಾತಿ ವಿವಾಹವನ್ನು ಬೆಂಬಲಿಸುತ್ತೇನೆ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು. ಆದರೆ ನನ್ನ ಹೆಂಡತಿ ಯಾವ ಜಾತಿಗೆ ಸೇರಿದವರು ಎಂದು ಕಂಡುಹಿಡಿಯುವುದು ಇವರಿಗೆ ಸ್ವಲ್ಪ ಕಷ್ಟವಾಗಿತ್ತು. ನನ್ನ ಯಾವ ಪುಸ್ತಕದಲ್ಲೂ ಆ ಕುರಿತ ದಾಖಲೆ ಇದೆ ಎಂದು ನಾನು ಭಾವಿಸುವುದಿಲ್ಲ. ನಾನು ಉದ್ದೇಶಪೂರ್ವಕವಾಗಿ ನನ್ನ ಹೆಂಡತಿಯ ಜಾತಿಯನ್ನು ಮರೆಮಾಡಲಿಲ್ಲ. ಆದರೆ, ಅದನ್ನು ಉಲ್ಲೇಖಿಸುವ ಅಗತ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲವಷ್ಟೇ.

ನಾವು ಪ್ರೀತಿಸುವ ದಿನಗಳಲ್ಲಿ ಎಂದೂ ಸಹ ಪರಸ್ಪರ ಜಾತಿಯನ್ನು ಕೇಳಿರಲಿಲ್ಲ. ನಾವು ಮದುವೆಯಾಗಲು ನಿರ್ಧರಿಸಿದಾಗ ಮಾತ್ರ ಆ ಕುರಿತು ಮಾತನಾಡಿದ್ದೇವೆ. ನನ್ನ ಹೆಂಡತಿ ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗೆ ಸೇರಿದವರು. ತಮಿಳುನಾಡಿನ ಮಟ್ಟಿಗೆ ಹೇಳುವುದಾದರೆ, ಕೆಲವು ಕೃಷಿ ಆಧಾರಿತ ಜಾತಿಗಳು ನಿರ್ದಿಷ್ಟ ಕೆಲವು ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ. ಒಂದು ಪ್ರದೇಶದಲ್ಲಿ ಇವರು ಬಹುಸಂಖ್ಯಾತರಾಗಿದ್ದರೆ, ಮತ್ತೆ ಕೆಲವು ಭಾಗಗಳಲ್ಲಿ ಇವರ ಸಂಖ್ಯೆ ತೀರಾ ಕನಿಷ್ಟವಾಗಿರುತ್ತದೆ. ಸರ್ಕಾರಿ ಉದ್ಯೋಗ ಮತ್ತು ಖಾಸಗಿ ವಲಯದ ಉದ್ಯೋಗದಿಂದಾಗಿ ಇತ್ತೀಚೆಗೆ ವಲಸೆ ಹೆಚ್ಚಾದ ಕಾರಣ ಅವರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ನಗರದಲ್ಲಿ ಅನೇಕ ಜಾತಿಗಳು ಒಟ್ಟಾಗಿ ವಾಸಿಸುತ್ತಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಜಾತಿಗಳಿವೆ ಎಂಬುದೇ ಸತ್ಯ

ಭೂ ಹಕ್ಕು ಹೊಂದಿರುವ ಕೆಲವು ನಿರ್ದಿಷ್ಟ ಜಾತಿಯ ಜನ ಒಂದೇ ಭಾಗದಲ್ಲಿ ನೆಲೆಸಿರುವ ಸಂದರ್ಭದಲ್ಲಿ ಆ ಜಾತಿ ಜನರ ಬಗ್ಗೆ ಬೇರೆ ಭಾಗದಲ್ಲಿ ನೆಲೆಸಿರುವವರಿಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ. ಹೀಗಾಗಿ ನನ್ನ ಜಾತಿಯ ಬಗ್ಗೆ ನನ್ನ ಹೆಂಡತಿ ಮತ್ತು ಅವರ ಮನೆಯವರಿಗೆ ಹೆಚ್ಚಾಗಿ ಏನೂ ತಿಳಿದಿರಲಿಲ್ಲ. ಪರಿಣಾಮ ಅವರ ಭಾಗದಲ್ಲಿ ನೆಲೆಸಿರುವ ಕೃಷಿ ಆಧಾರಿತ ಜಾತಿಗಳ ಜೊತೆಗೆ ನಮ್ಮನ್ನು ಹೋಲಿಸಿ ನಾವೂ ಇದೇ ಜಾತಿಯವರಿರಬೇಕು ಎಂದು ಅರ್ಥಮಾಡಿಕೊಂಡರು. ನನ್ನ ಹೆಂಡತಿ ಕುಂಬಾರ ಜಾತಿಗೆ ಸೇರಿದವಳು.

ದಲಿತರು ಮತ್ತು ಇತರೆ ಸೇವಾ ಜಾತಿಗಳು ಇಡೀ ತಮಿಳುನಾಡಿನಾದ್ಯಂತ ನೆಲೆಸಿದ್ದಾರೆ. ಆದರೆ, ಕೆಲವು ಸಣ್ಣಪುಣ್ಣ ವ್ಯತ್ಯಾಸಗಳಿದ್ದರೂ ನಿರ್ದಿಷ್ಟ ಕೆಲವು ಜಾತಿ ಜನ ಎಲ್ಲೇ ವಾಸವಿದ್ದರೂ ಅವರನ್ನು ಗುರುತಿಸುವುದು ಕಷ್ಟವೇನಲ್ಲ. ಅಂತಹ ಒಂದು ಜಾತಿ ಕುಂಬಾರಿಕೆ ಮಾಡುವವರದ್ದು. ಸಾಮಾನ್ಯವಾಗಿ ಇವರು ಶಿಲ್ಪಕಲೆಗಳನ್ನು ತಯಾರಿಸುವ ಕುಶಲಕರ್ಮಿಗಳು. ಅಲ್ಲದೆ, ಕೆಲವು ದೇವಾಲಯಗಳಲ್ಲಿ ಇವರು ಪೂಜಾರಿಗಳಾಗಿಯೂ ಕೆಲಸ ಮಾಡುವುದುಂಟು.

ಆದಗ್ಯೂ ತಮಿಳುನಾಡಿನಲ್ಲಿ ಕುಂಬಾರಿಕೆ ಮಾಡುವವರ ಸ್ವಭಾವವನ್ನು ತಿರಸ್ಕಾರದಿಂದ ನೋಡುವ ಗ್ರಹಿಕೆ ಇದೆ. “ಕೊಸವನ್” ಎಂಬ ಅವಹೇಳನಕಾರಿಯಾದ ಪದಗಳನ್ನು ಅವರ ವಿರುದ್ಧ ಬಳಸಲಾಗುತ್ತದೆ. ಅಲ್ಲದೆ, ಕುಂಬಾರರನ್ನು ಮೂರ್ಖರೆಂದು ಅವಹೇಳನ ಮಾಡುವ ಅನೇಕ ಗಾದೆಗಳು, ಕಥೆಗಳು ಚಾಲ್ತಿಯಲ್ಲಿವೆ.

ಹೀಗಾಗಿ ನಮ್ಮ ವಿವಾಹದ ಸಮಯದಲ್ಲಿ ಮದುಮಗಳು ಕುಂಬಾರ ಜಾತಿಗೆ ಸೇರಿದವಳು ಎಂಬುದು ತಿಳಿದರೆ ಮದುವೆಗೆ ಬಂದವರು ತಿರಸ್ಕಾರದಿಂದ ನೋಡುವ ಸಾಧ್ಯತೆ ಇರುತ್ತದೆ ಮತ್ತು ಆಂತರಿಕ ಅಸಹನೆ ಹಾಗು ವಿರೋಧ ಹೆಚ್ಚುತ್ತದೆ ಎಂಬ ಕಾರಣಕ್ಕೆ ನಾವು ಒಂದು ಉಪಾಯವನ್ನು ಮಾಡಿದ್ದೆವು. ಅದೇನೆಂದರೆ ಸರ್ಕಾರಿ ಪ್ರತಿಗಳಲ್ಲಿ ಈ ಜಾತಿಯನ್ನು ಕುಂಬಾರರು ಎಂದು ಗುರುತಿಸಿದ್ದರೂ ಸಹ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಗುರುತಿಸಲಾಗುತ್ತದೆ.

ನಮ್ಮ ಪ್ರದೇಶದಲ್ಲಿ “ಸೆಟ್ಟುಕಾರರ್” ಎಂದು ಗುರುತಿಸಿದರೆ ದಕ್ಷಿಣ ಜಿಲ್ಲೆಗಳಲ್ಲಿ ಇವರನ್ನು “ವೇಲಾರ್” ಎಂದು ಗುರುತಿಸಲಾಗುತ್ತದೆ. ಇನ್ನೂ ನನ್ನ ಹೆಂಡತಿಯ ಊರಿನ ಕಡೆಗಳಲ್ಲಿ “ಉದಯಾರ್” ಎಂದು ಕರೆಯಲಾಗುತ್ತದೆ. ಉದಯಾರ್‍ನಲ್ಲಿ ಎರಡು ಪಂಗಡಗಳಿವೆ. ಮೊದಲನೆಯದು “ಪೊನ್ನುಡಯಾರ್” ಇವರು ಸಾಮಾನ್ಯವಾಗಿ ಭೂ ಮಾಲೀಕತ್ವ ಹೊಂದಿದ ಜನ ಸಮುದಾಯ. ಎರಡನೆಯದು ಇವರಿಂದ ಪ್ರತ್ಯೇಕಿಸುವ “ಮನ್ನುದೈಯಾರ್”. ಆದ್ದರಿಂದ ನಾವು “ಉದಯಾರ್” ಎಂದಷ್ಟೆ ಹೇಳಿದ್ದೆವು.

ನಂತರದ ದಿನಗಳಲ್ಲಿ ನನ್ನ ಕುಟುಂಬ ಮತ್ತು ನಿಕಟ ಸಂಬಂಧಿಗಳಿಗೆ ನನ್ನ ಹೆಂಡತಿ ಕುಂಬಾರ ಜಾತಿಗೆ ಸೇರಿದವರು ಎಂಬ ವಿಚಾರ ಸ್ವಾಭಾವಿಕವಾಗಿ ತಿಳಿದಿದ್ದರೂ ಸಹ ಇದರಿಂದ ಯಾವುದೇ ತೊಂದರೆಯಾಗಿರಲಿಲ್ಲ. ಅಸ್ಪೃಶ್ಯ ಜಾತಿಯಾಗಿದ್ದರೆ ಮಾತ್ರ ದೊಡ್ಡ ಸಮಸ್ಯೆ ಉದ್ಭವಿಸುತ್ತಿತ್ತು. ಹೀಗಾಗಿ ಹಿಂದುಳಿದ ಇತರ ಜಾತಿ ಮಿಶ್ರಣವು ಅಷ್ಟೊಂದು ಸಮಸ್ಯಾತ್ಮಕವಾಗಿರಲಿಲ್ಲ. ನನ್ನ ಹೆಂಡತಿ ‘ಎಥ್ನೋಗ್ರಾಫಿಕ್ ಪಾಟರಿ ಫ್ಯಾಮಿಲಿ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಈ ಪುಸ್ತಕ ಬೌದ್ಧಿಕ ವಲಯದ ಅಕಾಡೆಮಿಕ್ ಸಂಶೋಧನೆಯಲ್ಲಿ ತೊಡಗಿರುವ ಕೆಲ ಜನರಿಗೆ ಮಾತ್ರ ತಿಳಿದಿರುವ ಪುಸ್ತಕ. ನನ್ನ ಪತ್ನಿಯ ಮತ್ತೊಂದು ಪುಸ್ತಕವಾದ ‘ಜಾತಿ ಮತ್ತು ನಾನು’ಎಂಬ ಪುಸ್ತಕದಲ್ಲಿ ‘ಮನ್ನುದೈಯಾರ್’ ಎಂಬ ಲೇಖನವನ್ನು ನಾನೇ ಬರೆದಿದ್ದೇನೆ. ಆ ಲಿಖಿತ ದಾಖಲೆಯನ್ನು ಹೊರತುಪಡಿಸಿ ನನ್ನ ಹೆಂಡತಿಯ ಜಾತಿಯ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ನಾನು ಭಾವಿಸುತ್ತೇನೆ.

ಈ ಮಾಹಿತಿಯ ಲಾಭವನ್ನು ಪಡೆದುಕೊಂಡು ಆ ಅಂತರ್ಜಾಲ ಲೇಖನ ನನ್ನ ಹೆಂಡತಿಗೆ ‘ಕೆಳ ಜಾತಿ ಮಹಿಳೆ’ ಎಂಬ ಜಾತಿ ಗುರುತನ್ನು ನೀಡಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿರಬಹುದು. ಅಥವಾ ಜಾತಿ ತಿಳಿದಿಲ್ಲದಿದ್ದರೆ ತಕ್ಷಣವೇ ‘ಕೆಳಜಾತಿ’ ಎಂದು ನಿರ್ಧರಿಸುವುದು ಸಾಮಾನ್ಯ ಜ್ಞಾನದ ಸ್ವರೂಪವಾಗಿರಬಹುದು ಮತ್ತು ಒಬ್ಬರು ಜಾತಿಯನ್ನು ಬಹಿರಂಗಪಡಿಸದಿದ್ದರೆ ಆತ ‘ಕೆಳಜಾತಿ’ ಎಂದು ನಿರ್ಧರಿಸುವುದು ವಾಡಿಕೆ. ಹೀಗಾಗಿ ನನ್ನ ಹೆಂಡತಿಯನ್ನು ಆ ಲೇಖನದಲ್ಲಿ ಕೆಳ ಜಾತಿಯವರು ಎಂದು ಗುರುತಿಸಲಾಗಿದೆ. ಈ ವಿಚಾರವೂ ಸಹ ನನ್ನ ವಿರುದ್ಧ ವದಂತಿ ಹರಡಲು ಮುಂದಾದವರಿಗೆ ಸಹಕಾರಿಯಾಗಿತ್ತು.

ಆತ ಕೆಳಜಾತಿಯವನಲ್ಲ. ಆದರೆ, ಆತನ ಹೆಂಡತಿ ಕೆಳಜಾತಿಗೆ ಸೇರಿದವಳು. ಅದಕ್ಕಾಗಿಯೇ ಎಲ್‍ಟಿಟಿಇ ಪಕ್ಷದ ತಿರುಮಾವಳನ್ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿ ಈಗ ವದಂತಿಯು ನನ್ನ ಹೆಂಡತಿಯ ಕಡೆಗೆ ತಿರುಗಿತು. ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಈ ವಿವಾದ ಸಂದರ್ಭದಲ್ಲಿ ನನಗೆ ನೈತಿಕ ಬೆಂಬಲವನ್ನು ಸೂಚಿಸಿದ್ದರು. ಆದಾಗ್ಯೂ ತಿರುಮಾವಳನ್ ಅವರ ಹೇಳಿಕೆ ಸಾಕಷ್ಟು ಪ್ರಾಮುಖ್ಯತೆಯನ್ನು ದಾಖಲಿಸಿತ್ತು. ನನ್ನ ವಿರುದ್ಧದ ವದಂತಿಗಳನ್ನು ಬಲಪಡಿಸಲು ಮತ್ತು ಜಾತೀಯ ಆಧಾರಿತ ಸಾರ್ವಜನಿಕ ಅಭಿಪ್ರಾಯವನ್ನು ಹೊಂದಿರುವವರು ಅದನ್ನು ತಮ್ಮ ಸ್ವಾರ್ಥ ಉದ್ದೇಶಕ್ಕಾಗಿ ತಿರುಮಾವಳನ್ ಅವರ ಹೇಳಿಕೆಯನ್ನು ಬಳಸಿಕೊಂಡರು.

ನನ್ನ ಹೆಂಡತಿಯನ್ನು “ದಲಿತೆ” ಎಂದು ಗುರುತಿಸಿ ಸಾಕಷ್ಟು ಅಶ್ಲೀಲ ಪೋಸ್ಟ್‌ಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಸ್ತ್ರೀ ಜನನಾಂಗದ ಹೆಸರನ್ನು ದಲಿತ ಜಾತಿಯ ಹೆಸರಿನೊಂದಿಗೆ ಸಂಯೋಜಿಸುವ ಮೂಲಕ ತಮಿಳು ಭಾಷೆಯಲ್ಲಿ ಎಷ್ಟು ಪದಗಳನ್ನು ರಚಿಸಬಹುದು ಎಂಬ ವಿಚಾರ ನನಗೆ ತಿಳಿದಿದ್ದೇ ಆಗ. ದಲಿತ ಜನರ ಮೇಲೆ ದೌರ್ಜನ್ಯ ನಡೆಸುವುದನ್ನೂ ಸಹ ಹಿರಿಮೆ ಎಂಬಂತೆ ಭಾವಿಸುವ ಜನರ ವಿಶ್ವರೂಪವನ್ನು ನಾನು ಸಾರ್ವಜನಿಕವಾಗಿ ನೋಡಿದೆ.

ಹುಟ್ಟುವಾಗ ಎಲ್ಲರೂ ಮನುಷ್ಯರೇ. ಈ ಜಾತಿ ಮೇಲು ಆ ಜಾತಿ ಕೀಳು ಎಂಬ ಶ್ರೇಣಿ ವ್ಯವಸ್ಥೆಯನ್ನು ಹುಟ್ಟುಹಾಕಿದ್ದು ನಾವೇ ಅಲ್ಲವೇ? ಆದರೂ, ಕೆಲವು ಜಾತಿಗಳ ವಿರುದ್ಧ ಜನರಲ್ಲಿ ಏಕೆ ಈ ಪರಿಯ ದ್ವೇಷ? ತಮ್ಮ ಜಾತಿಯ ಬಗ್ಗೆ ಏಕೆ ಈ ಪರಿಯ ಶ್ರೇಷ್ಟತೆಯ ವ್ಯಸನ? ನಾನು ಅಥವಾ ನನ್ನ ಹೆಂಡತಿ ದಲಿತರಾಗಿದ್ದರೆ ಸಮಸ್ಯೆ ಏನು? ಆದರೆ, ನಮಗೆ ಮುಖ ಪರಿಚಯವಿಲ್ಲದ ಯಾರ್ಯಾರೋ ಎಲ್ಲೆಲ್ಲಿಂದಲೋ ನಮ್ಮ ವಿರುದ್ಧ ಅಸಹ್ಯಕರವಾದ ಪದಗಳನ್ನು ಬಳಸಿ ಮಾತನಾಡುವ ಅಗತ್ಯವಾದರೂ ಏನು? ಕೇವಲ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಮ್ಮ ಜೊತೆಗಿರುವ ಸಹ ಮನುಷ್ಯರ ಮೇಲೆ ನಾವು ಈ ಪರಿಯ ಅಸಹನೆ, ಕೌರ್ಯವನ್ನು ಹೊಂದಿದ್ದೇವೆಯೇ ಎಂಬ ಭಾವನೆ ಈ ಸಮಾಜದ ಕುರಿತು ನನ್ನಲ್ಲೊಂದು ಭಯ ಮತ್ತು ನಿರ್ವಾತ ಸ್ಥಿತಿ ಹುಟ್ಟಲು ಕಾರಣವಾಗಿತ್ತು.

ಸಾಮಾಜಿಕ ಜಾಲತಾಣಗಳನ್ನು ನೋಡುವಾಗಲೆಲ್ಲಾ ನಾನು ಭಯ ಮತ್ತು ಆತಂಕಕ್ಕೆ ಒಳಗಾಗುತ್ತೇನೆ. ಅದೃಷ್ಟವಶಾತ್ ನನ್ನ ಹೆಂಡತಿಗೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಇಲ್ಲ. ಆಕೆಯ ವಿರುದ್ಧ ಯಾರು ಏನನ್ನು ಬರೆದಿದ್ದಾರೋ? ಅದು ಆಕೆಗೆ ತಿಳಿಯದಿರಲಿ ಎಂದು ನಾನು ತುಂಬಾ ಜಾಗರೂಕತೆ ವಹಿಸಿದ್ದೆ. ಆದರೂ, ಸ್ನೇಹಿತರು, ವಿದ್ಯಾರ್ಥಿಗಳು ಮತ್ತು ಆಕೆಗೆ ಬರುವ ಫೋನ್ ಕರೆಗಳು ಮೂಲಕ ಕೆಲವು ಮಾಹಿತಿಗಳು ಆಕೆಗೂ ತಿಳಿದುಹೋಗಿತ್ತು.

ನನಗೆ ಮದುವೆಯಾಗಿ 21 ವರ್ಷವಾಗಿದೆ, ಮದುವೆಯಾದ ಹೊಸತರಲ್ಲಿ ಮೂರು ವರ್ಷಗಳ ಕಾಲ ನಾವು ಚೆನ್ನೈನಲ್ಲಿ ವಾಸವಾಗಿದ್ದೆವು. ಆನಂತರದ 18 ವರ್ಷ ಸ್ವಂತ ಊರಿನಲ್ಲೇ ಬದುಕುತ್ತಿದ್ದೇವೆ. ಈ 18 ವರ್ಷಗಳ ಅವಧಿಯಲ್ಲಿ ನನ್ನ ಹೆಂಡತಿ ಇಲ್ಲಿನ ಪ್ರಸಿದ್ಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸಿದ್ದರು. ನಂತರ ಸರ್ಕಾರಿ ಸೇವೆಗೂ ಆಯ್ಕೆಯಾದರು. ಈ ಅವಧಿಯಲ್ಲಿ ನನ್ನ ಸಂಬಂಧಿಕರು, ಗ್ರಾಮಸ್ಥರು ಮತ್ತು ಎಲ್ಲರೊಂದಿಗೂ ಆಕೆ ಸಹಜವಾಗಿ ಸಾಕಷ್ಟು ಹೊಂದಿಕೊಂಡಿದ್ದರು. ಮಾನಸಿಕವಾಗಿ ಈ ಎಲ್ಲರ ಭಾಗವಾಗಿದ್ದರು. ಆದರೆ, ಇದೇ ಜನರ ಮನಸ್ಸಿನಲ್ಲಿ ಇಂತಹ ಒಂದು ಘೋರ ಜಾತಿ ವೈಷಮ್ಯದ ಮುಖ ಇರುತ್ತದೆ ಎಂದು ಆಕೆ ಭಾವಿಸಿರಲಿಕ್ಕಿಲ್ಲ. ಹೀಗಾಗಿ ಈ ದಾಳಿಗಳು ಆಕೆಗೆ ದೊಡ್ಡ ಆಘಾತವನ್ನೇ ಉಂಟುಮಾಡಿದ್ದವು.

ಈ ಪ್ರದೇಶದಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ನನಗೆ ಸ್ವಲ್ಪ ತಿಳಿದಿದ್ದರೂ ಸಹ ನನ್ನ ಊಹೆ ತಪ್ಪಾಗಿತ್ತು. ಜನರು ಕೃಷಿಯಿಂದ ವಿವಿಧ ಕೈಗಾರಿಕೆಗಳಿಗೆ ಸ್ಥಳಾಂತರಗೊಂಡಂತೆ ‘ಜಮೀನುದಾರರ’ ಪಾತ್ರವೂ ಬದಲಾಗಿರುತ್ತದೆ ಎಂದು ನಾನು ಊಹಿಸಿದ್ದೆ. ಇತರ ಜಾತಿ ಜನರೊಂದಿಗೆ ಹೊಂದಿಕೊಳ್ಳುವುದು ವೃತ್ತಿಗೆ ಅಗತ್ಯವಾದ ಕಾರಣ ಜಾತಿ ಅಂತರ್ಗತ ಮತ್ತು ಸಾಮರಸ್ಯ ಸಾಧಿಸಲಾಗಿದೆ ಎಂದೇ ನಾನು ಭಾವಿಸಿದ್ದೆ. ಕೈಗಾರಿಕೆಗಳು ನೀಡುವ ವಿವಿಧ ಉದ್ಯೋಗಗಳಿಂದಾಗಿ ತಮಿಳುನಾಡಿನ ವಿವಿಧ ಭಾಗಗಳಿಂದ ಜನರು ಬರುತ್ತಿರುವುದರಿಂದ ಜಾತಿ ವ್ಯವಸ್ಥೆ ಎಂಬುದು ಮುಂಚೆಗಿಂತ ತುಸು ಮೃದುವಾಗಿರುತ್ತದೆ ಎಂಬುದೇ ನನ್ನ ಅಭಿಪ್ರಾಯವಾಗಿತ್ತು.

ಜಾತಿಯ ಹೆಸರನ್ನು ಬಳಸಿಕೊಂಡು ಅಲ್ಪ ಲಾಭ ಮಾಡಿಕೊಳ್ಳಬಹುದೇ ವಿನಃ ಜಾತಿ ಹೆಸರಿನಲ್ಲಿ ದೊಡ್ಡ ಅಧಿಕಾರ ಅಥವಾ ಪ್ರಾಬಲ್ಯವನ್ನು ಸಾಧಿಸಲು ಸಾಧ್ಯವಿಲ್ಲ ಎಂದೇ ನಾನು ಭಾವಿಸಿದ್ದೆ. ಆದರೆ ಈ ಹಂತದಲ್ಲಿ ನಾನು ಅನೇಕ ಪ್ರಮುಖ ಬದಲಾವಣೆಗಳನ್ನು ಸರಿಯಾಗಿ ಗ್ರಹಿಸಿಲ್ಲ ಎಂದು ಈಗ ತಿಳಿದುಕೊಂಡೆ. ಗುರುತಿನ ರಾಜಕಾರಣದ ಮುಖ್ಯ ಸಂಕೇತವೆಂದರೆ ಧರ್ಮ ಮತ್ತು ಜಾತಿ ಎಂದು ಊಹಿಸುವಲ್ಲಿ ನಾನು ವಿಫಲನಾಗಿದ್ದೆ. ಅಧಿಕಾರ ಮತ್ತು ಪ್ರಾಬಲ್ಯದಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಅದು ಬಹಳ ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತದೆ. ಸಮಯ ಬಂದಾಗ ತನ್ನ ಮುಖವಾಡವನ್ನು ಕಳಚಿ ನೈಜ ಮುಖವನ್ನು ಪ್ರದರ್ಶಿಸುತ್ತದೆ ಎಂಬ ಅಂಶವನ್ನು ನಾನು ಈಗ ಅರಿಯುತ್ತಿದ್ದೇನೆ. ಹೀಗಾಗಿ ನನ್ನ ಹೆಂಡತಿಗೆ ಮಾತ್ರವಲ್ಲ, ಜಾತೀಯ ಸಂಘಟನೆಗಳು ಈ ನಮ್ಮ ವಿವಾದದಲ್ಲಿ ಭೂತಗಾತ್ರಕ್ಕೆ ಬೆಳೆದದ್ದರ ಕುರಿತು ನಾನೂ ಸಾಕಷ್ಟು ಆಘಾತಕ್ಕೊಳಗಾಗಿದ್ದೇನೆ.

ಇಂತಹ ಪರಿಸ್ಥಿತಿಯಲ್ಲಿ ನನ್ನ ಹೆಂಡತಿಯ ಮನಸ್ಸಿನಲ್ಲಿ ಹಿಂದೆಂದೂ ಕಾಣಿಸದ ಸಂಗತಿಗಳು ಒಳಮೂಡಿ ಆಕೆ ಅಳುತ್ತ ನನ್ನ ಬಳಿ ಹೀಗೆ ಹೇಳಿದ್ದಳು, “ನೀವು ನನ್ನನ್ನು ಮದುವೆಯಾದ ಕಾರಣ ಇಂತಹ ಸಮಸ್ಯೆಯನ್ನು ಎದುರಿಸಬೇಕಾಗಿದೆ. ನೀವು ನಿಮ್ಮದೇ ಜಾತಿಯೊಳಗೆ ಮದುವೆಯಾಗಿದ್ದರೆ ಈ ವಿವಾದದ ಸಂದರ್ಭದಲ್ಲಿ ನಿಮ್ಮ ಪರವಾಗಿ ಒಂದಷ್ಟು ನಿಮ್ಮ ಜಾತಿಯ ಜನರಾದರೂ ನಿಂತಿರುತ್ತಿದ್ದರಲ್ಲವೇ?”

photo courtesy: New Indian Express

ಅಸಲಿಗೆ ಪ್ರೀತಿಸಿ ವಿವಾಹವಾದ ಕಾರಣದಿಂದಾಗಿ ನಾವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರೂ ಸಹ ನಮ್ಮ ಮದುವೆಯ ಕುರಿತು ನಾವು ಎಂದೂ ವಿಷಾದಿಸಿರಲಿಲ್ಲ. ಆದರೆ, ಅಂತಹ ಒಂದು ವರ್ತನೆಯನ್ನು ಮತ್ತು ಅತೀವ ದುಖಃವನ್ನು ನಾನು ಮೊದಲ ಬಾರಿಗೆ ನನ್ನ ಹೆಂಡತಿಯಲ್ಲಿ ಕಂಡಿದ್ದೆ. ಆದರೂ ಅಂತಹ ಸಂದರ್ಭದಲ್ಲೂ ಆಕೆ ನನ್ನ ಒಳಿತಿನ ಕುರಿತೆ ಚಿಂತಿತಳಾಗಿದ್ದಳು.

ಆದರೆ, ನನ್ನ ದುಃಖ ಇದಕ್ಕೂ ವಿಭಿನ್ನವಾಗಿತ್ತು. ಈ ಪ್ರದೇಶದ ಬಗ್ಗೆ ಏನೂ ತಿಳಿಯದೆ, ನನ್ನನ್ನು ಮದುವೆಯಾಗಿ ಸಂತೋಷದ ಜೀವನವನ್ನು ನಡೆಸಬಹುದೆಂಬ ಭರವಸೆಯೊಂದಿಗೆ ನನ್ನನ್ನು ನಂಬಿ ಬಂದ ಮಹಿಳೆಗೆ ನಾನು ನಿರ್ಭೀತ ಜೀವನವನ್ನೂ ಸಹ ನೀಡಲು ಸಾಧ್ಯವಾಗಲಿಲ್ಲ ಎಂಬ ವಿಷಾದದ ಸಂಗತಿಯ ಬಗ್ಗೆ ಚಿಂತಿತನಾಗಿದ್ದೆ. ಈ ವಿವಾದದ ವೇಳೆ ನನ್ನದೇ ಊರಿನ ಜನ ನಮ್ಮನ್ನು ತುಂಬಾ ಅಸಹ್ಯಕರವಾಗಿ ನೋಡಿ, ಅಸಹನೆ ವ್ಯಕ್ತಪಡಿಸಿದ್ದನ್ನು ಈಗಲೂ ನನ್ನಿಂದ ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ನಾನು ಸರ್ಕಾರಿ ಕೆಲಸವನ್ನು ಪಡೆದ ನಂತರವೂ ಬೇರೆಡೆ ಸ್ಥಳಾಂತರವಾಗದೆ ನನ್ನೂರಿನಲ್ಲೇ ನೆಲೆ ಕಂಡುಕೊಂಡದ್ದು ಎಷ್ಟು ದೊಡ್ಡ ತಪ್ಪು ಎಂಬುದು ಮೊದಲ ಬಾರಿಗೆ ನನಗೆ ಮನವರಿಕೆಯಾಗಿತ್ತು. ಪದಗಳ ಮೂಲಕ ನನ್ನ ಹೆಂಡತಿಗೆ ಸಾಂತ್ವನ ಹೇಳಲು ನಾನು ಪ್ರಯತ್ನಿಸಿದೆನಾದರೂ ಪದಗಳೆಲ್ಲವೂ ಅರ್ಥಹೀನ ಎಂದು ನನಗೆ ಅರಿವಾಯಿತು.

ಈತನೋರ್ವ ಕ್ರಿಶ್ಚಿಯನ್, ದಲಿತ ಮತ್ತು ಈತನ ಹೆಂಡತಿ ದಲಿತೆ ಎಂದು ಮೂರು ವದಂತಿಗಳು ಒಂದರ ಹಿಂದೊಂದರಂತೆ ಅನುಕ್ರಮವಾಗಿ ಉದ್ಭವಿಸಿದಾಗ ಅದನ್ನು ಆಲಿಸಿದ ಜನ ಈ ವದಂತಿಗಳು ಏಕೆ ಹೀಗೆ ಹಾಗು ಮತ್ತೆ ಮತ್ತೆ ಬದಲಾಗುತ್ತಲೇ ಇವೆ ಏಕೆ ಎಂದು ಒಂದೇ ಒಂದು ಪ್ರಶ್ನೆಯನ್ನು ಕೇಳಲು ಮುಂದಾಗಲಿಲ್ಲ. ವದಂತಿ ಮತ್ತು ವದಂತಿಯ ಸ್ವರೂಪ ನಿರಂತರವಾಗಿ ಬದಲಾಗುತ್ತಿದೆ ಎಂದು ಜನ ಏಕೆ ಅನುಮಾನಿಸುವುದಿಲ್ಲ? ತಾವು ಕೇಳ್ಪಡುತ್ತಿರುವ ವಿಚಾರ ಹೀಗೆ ಮತ್ತೆ ಮತ್ತೆ ಬದಲಾಗುತ್ತಿರುವುದರ ಹಿಂದೆ ಏನೋ ಕುತಂತ್ರ ಅಡಗಿದೆ ಮತ್ತು ಇದನ್ನು ಯಾರೋ ಬೇಕೆಂದೆ ಹರಡುತ್ತಿದ್ದಾರೆ ಎಂದು ಜನರಿಗೆ ಕೊನೆವರೆಗೂ ಒಂದು ಸಣ್ಣ ಅನುಮಾನವೂ ಮೂಡಲಿಲ್ಲವೇ? ಜನ ಏನೇ ಹೇಳಿದರೂ ನಂಬುತ್ತಾರಲ್ಲ ಇದು ವದಂತಿಯ ಸ್ವರೂಪವೇ? ಅಥವಾ ಜನರ ಸ್ವಭಾವವೇ? ಎಂಬುದು ನನ್ನಲ್ಲಿ ದೊಡ್ಡದೊಂದು ಗೊಂದಲವನ್ನು ಸೃಷ್ಟಿಸಿದೆ.

ನನ್ನ ಹೆಂಡತಿ ದಲಿತೆ ಎಂಬ ವದಂತಿಯ ಆಯುಷ್ಯ ಇನ್ನೂ ಮುಗಿದಿಲ್ಲ. ನನ್ನ ಸೋದರನ ಮಗನಿಗೆ 2016 ರಲ್ಲಿ ವಿವಾಹವಾಯಿತು. ನನ್ನ ಸಹೋದರ ತೀರಿಕೊಂಡ ನಂತರ ನನ್ನ ಹೆಂಡತಿ ಮತ್ತು ನಾನು ಪೋಷಕರ ಜಾಗದಲ್ಲಿ ನಿಂತು ಮದುವೆಯ ವಿಧಿಗಳನ್ನು ನಿರ್ವಹಿಸಬೇಕಿತ್ತು. ನನ್ನ ಸಹೋದರನ ಮಗ ಒಂಭತ್ತನೇ ತರಗತಿಯಲ್ಲಿದ್ದಾಗ ನನ್ನ ಸಹೋದರ ನಿಧನರಾದರು. ಅಂದಿನಿಂದ ಅವನ ಶಿಕ್ಷಣ ನನ್ನ ಮಾರ್ಗದರ್ಶನ ಮತ್ತು ಸಹಾಯದಲ್ಲಿ ನಡೆಯಿತು. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ, ಬಿ.ಎಡ್ ಮುಗಿಸಿದ ಅವನು ಈಗ ಸರ್ಕಾರಿ ಶಾಲೆಯಲ್ಲಿ ಪದವಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾನೆ. ನಾವು ನಮ್ಮ ಸ್ವಂತ ಊರಿಗೆ ಹೋಗದ ಕಾರಣ ಅವನ ಮದುವೆ ತಯಾರಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಆತನ ಮದುವೆಯಲ್ಲಿ ನಾವೇ ಪೋಷಕರ ಸ್ಥಾನದಲ್ಲಿ ನಿಲ್ಲಬೇಕು ಎಂದು ಆತ ಬಯಸಿದ್ದ.

ಈ ಸಂಪ್ರದಾಯ ಮತ್ತು ಆಚರಣೆಗಳಲ್ಲಿ ನನಗೆ ನಂಬಿಕೆ ಇಲ್ಲ. ಏಕೆಂದರೆ ಅಂತರ್ಜಾತಿ ವಿವಾಹವಾದವರನ್ನು ಜಾತಿ ಜನರ ವಿವಾಹದಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಅವರನ್ನು ತೀರಾ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ನಾನು ಹಲವಾರು ಸನ್ನಿವೇಶಗಳಲ್ಲಿ ಸ್ವತಃ ಕಂಡಿದ್ದೇನೆ. ಹೀಗಾಗಿ ಹೆತ್ತವರು ಮಾಡಬೇಕಾದ ವಿಧಿವಿಧಾನಗಳನ್ನು ನನ್ನ ಚಿಕ್ಕಪ್ಪನ ಮಗ ಮತ್ತು ಆತನ ಹೆಂಡತಿ ಮುಂದೆ ನಿಂತು ಮಾಡುವಂತೆ ನಾನು ಸೂಚಿಸಿದ್ದೆ. ಆದರೆ ಅಣ್ಣನ ಮಗ ಅದಕ್ಕೆ ಒಪ್ಪಲಿಲ್ಲ.

ವಧುವಿಗೆ ತಾಯಿ-ತಂದೆ ಇಲ್ಲ; ಅಜ್ಜ ಒಬ್ಬನೇ. ಆದರೆ, ಯಾರೋ ಒಬ್ಬ ಅವರಿಗೆ ‘ಹುಡುಗನ ಚಿಕ್ಕಮ್ಮ ದಲಿತೆ’ ಎಂದು ಹೇಳಿದ್ದಾರೆ. ಅದನ್ನು ಕೇಳಿಯೇ ಆ ಅಜ್ಜನಿಗೆ ರಾತ್ರಿಯಿಡೀ ನಿದ್ರೆ ಬರಲಿಲ್ಲ. ಹೀಗಾಗಿ ಮದುವೆ ವಿಧಿವಿಧಾನಗಳನ್ನು ನಾವು ಮಾಡಬಾರದು ಎಂದು ಷರತ್ತು ಹಾಕಿದ್ದರು. ಆದರೆ, ನನ್ನ ಸೋದರ ಸಂಬಂಧಿ ಅವರಿಗೆ ನನ್ನ ಹೆಂಡತಿ ದಲಿತೆ ಅಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಮೇಲೆ ಆತ ನಮಗೆ ವಿಧಿವಿಧಾನಗಳನ್ನು ನೆರವೇರಿಸಲು ಅನುಮತಿ ನೀಡಿದ್ದರು.

ಆದರೆ ಮದುವೆಯ ಹಿಂದಿನ ದಿನವೇ ಅವರಿಂದ ನನಗೊಂದು ಸಂದೇಶ ಬಂದಿತ್ತು. ಹುಡುಗಿಗೆ ಹೆತ್ತವರು ಇಲ್ಲದ ಕಾರಣ, ಅವರ ಚಿಕ್ಕಪ್ಪನ ಕುಟುಂಬದವರೇ ಮುಂದೆ ನಿಂತು ಮದುವೆ ಕಾರ್ಯವನ್ನು ಮಾಡುತ್ತಿದ್ದಾರೆ. ಹೀಗಾಗಿ ಯಾರೋ ಅವರ ಬಳಿ “ಹುಡುಗನ ಚಿಕ್ಕಮ್ಮ ದಲಿತ ಜಾತಿಗೆ ಸೇರಿದವರು. ನೀವು ಮತ್ತು ಅವರು ಸಮಾನವಾಗಿ ನಿಂತು ವಿಧಿವಿಧಾನ ಆಚರಿಸುತ್ತೀರ?” ಎಂದು ಪ್ರಶ್ನಿಸಿದ್ದರಂತೆ. ಹೀಗಾಗಿ ನಾವಿಬ್ಬರೂ ಶುಭ ಕಾರ್ಯದಲ್ಲಿ ಭಾಗವಹಿಸಿದರೆ ತಾವು ಮದುವೆಗೆ ಬರುವುದಿಲ್ಲ ಎಂದು ಅವರು ಹೇಳಿದ್ದರಂತೆ.

ಹೀಗಾಗಿ ಹುಡುಗಿಯ ಅಜ್ಜ ನನಗೆ ಕರೆಮಾಡಿ ಒಂದು ರೀತಿಯ ಮೆಲು ದ್ವನಿಯಲ್ಲಿ “ನೀವೆ ಈ ಮದುವೆ ನಡೆಯುವಂತೆ ನೋಡಿಕೊಳ್ಳಬೇಕು” ಎಂದು ಹೇಳಿದ ರೀತಿಯೇ ಅವರ ಉದ್ದೇಶವನ್ನು ತಿಳಿಸುವಂತಿತ್ತು. ಆದರೆ, ಮದುವೆ ಸಮಾರಂಭದಂತಹ ಸಮಯದಲ್ಲೂ ವಧುವಿನ ಮನೆಗೆ ಹೋಗಿ ನನ್ನ ಹೆಂಡತಿ ದಲಿತೆ ಎಂದು ಹೇಳಿದ್ದ ಮಹಾನುಭಾವ ಯಾರು? ಎಂಬುದು ನನಗೆ ಈವರೆಗೆ ತಿಳಿದಿಲ್ಲ. ಮಧುರುಭಾಗನ್ ವಿವಾದವನ್ನು ಮುಂದಿಟ್ಟು ದೊಡ್ಡ ಸಮಸ್ಯೆಯನ್ನು ವಿವಾದವನ್ನು ಸೃಷ್ಟಿಸಿದವರು, ಇದನ್ನು ಮುನ್ನಡೆಸಿದವರ ಮುಖ ಪರಿಚಯವೂ ನನಗಿಲ್ಲ. ಏಕೆಂದರೆ ಮುಖವನ್ನು ತೋರಿಸದಿರುವುದು ಧಾರ್ಮಿಕ ಸಂಘಟನೆಗಳ ಮುಖ್ಯ ತಂತ್ರ ಎಂಬುದನ್ನು ನಾನು ಅನುಭವದಿಂದ ಕಲಿತಿದ್ದೇನೆ.

ನಾನು ನನ್ನ ಅಣ್ಣನ ಮಗನೊಂದಿಗೆ ಮದುವೆ ವಿಧಿಗಳನ್ನು ನಡೆಸಿಕೊಡುವುದರ ಬಗ್ಗೆ ಮಾತನಾಡಿದೆ. ಆದರೆ, ಇದನ್ನು ನಾವೇ ನೆರವೇರಿಸಬೇಕು ಎಂಬುದರಲ್ಲಿ ಆತ ಅಚಲವಾಗಿ ನಿಂತುಬಿಟ್ಟಿದ್ದ. “ನನ್ನ ಮದುವೆ ನನ್ನ ಜೀವನದಲ್ಲಿ ಒಂದು ಪ್ರಮುಖ ಕ್ಷಣವಾಗಿದೆ. ನೀವು ಅದನ್ನು ತಪ್ಪಿಸಿದರೆ ನನ್ನ ಜೀವನದುದ್ದಕ್ಕೂ ಇದು ನನಗೆ ಕಿರಿಕಿರಿ ಉಂಟುಮಾಡುತ್ತದೆ. ಆದ್ದರಿಂದ ನೀವು ಸಮಾರಂಭವನ್ನು ನಡೆಸಿಕೊಟ್ಟರೆ ಮದುವೆಯಾಗುತ್ತೇನೆ. ಇಲ್ಲದಿದ್ದರೆ ನನಗೆ ಮದುವೆಯಾಗಲು ಇಷ್ಟವಿಲ್ಲ” ಎಂದು ಖಂಡತುಂಡವಾಗಿ ಹೇಳಿದ.

ನಾನು ಈ ಆಚರಣೆಗಳನ್ನು ಒಪ್ಪುವುದಿಲ್ಲ, ಈ ಕುರಿತು ಇಚ್ಛೆಯೂ ಇಲ್ಲ. ಅಂತಹ ಸಮಾರಂಭಗಳಲ್ಲಿ ಕೆಲವರು ಜೀವನದಲ್ಲಿ ಎಂದಿಗೂ ಹೊಂದಿರದ ಪ್ರಾಮುಖ್ಯತೆ ಮತ್ತು ಮನ್ನಣೆಯನ್ನು ಪಡೆಯುತ್ತಾರೆ. ನಮಗೆ ಅಂತಹ ಯಾವ ಮನ್ನಣೆಯೂ ಅಗತ್ಯವಿಲ್ಲ. ಆದ್ದರಿಂದ ನನ್ನ ಮತ್ತೊಬ್ಬ ಸಹೋದರ ಇದನ್ನು ವರನಿಗೆ ವಿವರಿಸಿ ಅರ್ಥ ಮಾಡಿಸಲು ಯತ್ನಿಸಿದ್ದ. ನಾವು ಮದುವೆಗೆ ಬರುತ್ತಿದ್ದೇವೆ. ಆದರೆ ಆಚರಣೆಗಳಲ್ಲಿ ಭಾಗಿಯಾಗುವುದಿಲ್ಲ. ನಮಗೆ ಈ ಕುರಿತು ಯಾವುದೇ ಪಶ್ಚಾತ್ತಾಪವಿಲ್ಲ. ನಮಗೆ ಆಚರಣೆಗಳಿಗಿಂತ ಮದುವೆ ಮುಖ್ಯ ಎಂದು ಅವನಿಗೆ ಮನವರಿಕೆ ಮಾಡಲು ನಾನು ಸಾಕಷ್ಟು ಹೆಣಗಾಡುವಂತಾಗಿತ್ತು.

ಕೊನೆಗೂ ನಾವು ಮದುವೆಯಲ್ಲಿ ಭಾಗಿಯಾಗಿದ್ದೆವು. ಯಾವ ವಿಧಿವಿಧಾನಗಳನ್ನೂ ನಾವು ಮಾಡಲಿಲ್ಲ. ಆದರೆ, ಆ ಸಂತೋಷದ ಮದುವೆ ನಮಗೆ ಅಷ್ಟೊಂದು ಸಂತಸದಾಯಕವಾಗಿ ಕಾಣಲಿಲ್ಲ. ಮದುವೆಗೆ ಬಂದ ಪ್ರತಿಯೊಬ್ಬರೂ ನಮ್ಮೆಡೆಯೇ ಬೊಟ್ಟು ಮಾಡಿ ಮಾತನಾಡುವಂತೆಯೂ, ನಗುವಂತೆಯೂ ನಮಗೆ ಕಾಣಿಸುತ್ತಿತ್ತು. ಮನುಷ್ಯರ ಗುಂಪಿನಿಂದ ಬೇರ್ಪಟ್ಟ ಯಾವುದೋ ಪ್ರಾಣಿಗಳಂತೆ ಅಲ್ಲಿದ್ದವರಿಗೆ ನಾವು ಕಾಣುತ್ತಿದ್ದಂತೆ ನಮಗೆ ಭಾಸವಾಗುತ್ತಿತ್ತು. ಆ ಎಲ್ಲಾ ಕಣ್ಣುಗಳು ನಮ್ಮನ್ನೇ ಮುತ್ತುತ್ತಿದ್ದವು.

ಹೌದು, ಈ ನೊಣಗಳು ಮುತ್ತುವ ತಿನಿಸುಗಳೇ ನಾವು?

ಪೆರುಮಾಳ್ ಮುರುಗನ್, photo courtesy: Wikipedia

(ಪೆರುಮಾಳ್ ಮುರುಗನ್, ತಮಿಳಿನ ಖ್ಯಾತ ಕಾದಂಬರಿಕಾರ. ಅವರ ಕಾದಂಬರಿ ‘ಮಧುರುಭಾಗನ್’ ಬಗ್ಗೆ ಹಲವು ಬಲಪಂಥೀಯ ಸಂಘಟನೆಗಳು ಬಹಿಷ್ಕಾರದ ಅನುಚಿತ ಅಸಹನೆಯನ್ನು ಹೊರಹಾಕಿದಾಗ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗಿ ಬಂದಿತ್ತು. ಈ ವಿವಾದದ ಬಗ್ಗೆ ಬರೆದಿರುವ ಪ್ರಬಂಧ ಇದು.)

ಅರ್ಧನಾರೀಶ್ವರ

ಸದರಿ ಕಾದಂಬರಿ ‘ಅರ್ಧನಾರೀಶ್ವರ’ ಹೆಸರಿನಲ್ಲಿ ಲಂಕೇಶ್ ಪ್ರಕಾಶನದಿಂದ ಪ್ರಕಟಗೊಂಡಿದೆ. ಪೆರುಮಾಳ್ ಮುರುಗನ್ ಅವರ ಹಲವು ಕಾದಂಬರಿಗಳು ಇಂಗ್ಲಿಶ್ ಸೇರಿ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ‘ಪೂನಚ್ಚಿ’, ‘ಪಯರ್’, ‘ದ ಸ್ಟೋರಿ ಆಫ್ ಗೋಟ್’, ‘ರೈಸಿಂಗ್ ಹೀಟ್’ ಅವರ ಇಂಗ್ಲಿಶ್ ಅನುವಾದದ ಕೆಲವು ಪುಸ್ತಕಗಳ ಶೀರ್ಷಿಕೆಗಳು.

ತಮಿಳಿನಿಂದ ಕನ್ನಡಕ್ಕೆ: ಬಿ.ಎ ತೇಜಸ್ವಿ


ಇದನ್ನೂ ಓದಿ: ಸುದರ್ಶನ ಟಿವಿಯ ವಿವಾದಾತ್ಮಕ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...