ಬಾಂಗ್ಲಾದೇಶದಲ್ಲಿ ಗುಂಪು ದಾಳಿ ಮತ್ತು ವಿಧ್ವಂಸಕ ಕೃತ್ಯಗಳ ನಡುವೆ ‘ಆಪರೇಷನ್ ಡೆವಿಲ್ ಹಂಟ್’ ನ ಭಾಗವಾಗಿ ಭದ್ರತಾ ಪಡೆಗಳು 1,308 ಜನರನ್ನು ಬಂಧಿಸಿವೆ ಎಂದು ದಿ ಡೈಲಿ ಸ್ಟಾರ್ ಭಾನುವಾರ (ಫೆ.9) ವರದಿ ಮಾಡಿದೆ.
ರಾಷ್ಟ್ರೀಯ ಸ್ಮಾರಕವಾಗಿರುವ ರಾಷ್ಟ್ರಪಿತ ಮುಜಿಬುರ್ ರೆಹಮಾನ್ ಅವರು ವಾಸವಿದ್ದ ಮನೆಯನ್ನು ಪ್ರತಿಭಟನಾಕಾರರು ಏಕಾಏಕಿ ಧ್ವಂಸಗೊಳಿಸಿದ ಘಟನೆ ಬಳಿಕ, ಭದ್ರತಾ ಪಡೆಗಳು ಕಾರ್ಯಾಚರಣೆ ಕೈಗೊಂಡಿದೆ.
ಆವಾಮಿ ಲೀಗ್ ನಾಯಕಿ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಮುಜಿಬುರ್ ರೆಹಮಾನ್ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರು ಹೌದು.
ಸೇನೆ, ಪೊಲೀಸರು ಮತ್ತು ಅವರ ವಿಶೇಷ ಘಟಕಗಳನ್ನು ಒಳಗೊಂಡ ಜಂಟಿ ಕಾರ್ಯಾಚರಣೆಯಲ್ಲಿ, ಮುಖ್ಯವಾಗಿ ಬಾಂಗ್ಲಾದೇಶದ ಮಹಾನಗರಗಳಲ್ಲಿ 274 ಜನರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ.
ಬಂಧಿತರಲ್ಲಿ ಹೆಚ್ಚಿನವರು ಅವಾಮಿ ಲೀಗ್ ಮತ್ತು ಅದರ ಸಹವರ್ತಿ ಸಂಸ್ಥೆಗಳ ಸದಸ್ಯರು ಎಂದು ದಿ ಡೈಲಿ ಸ್ಟಾರ್ ವರದಿ ಮಾಡಿದೆ.
ರಾಜಧಾನಿ ಢಾಕಾದಿಂದ 25 ಕಿ.ಮೀ ಉತ್ತರಕ್ಕೆ ಗಾಝಿಪುರದಲ್ಲಿ ಅವಾಮಿ ಲೀಗ್‌ನ 81 ಸದಸ್ಯರನ್ನು ಬಂಧಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಶುಕ್ರವಾರ ರಾತ್ರಿ, ಗಾಝಿಪುರದ ದಕ್ಷಿಣಖಾನ್ ಪ್ರದೇಶದಲ್ಲಿ ಅವಾಮಿ ಲೀಗ್‌ಗೆ ಸಂಬಂಧಿಸಿದ ಆಸ್ತಿಗಳನ್ನು ಧ್ವಂಸ ಮಾಡಲು ಹೊರಟಿದ್ದ ಗುಂಪುಗಳ ಭಾಗವಾಗಿದ್ದ 14 ಜನರು ಗಾಯಗೊಂಡಿದ್ದಾರೆ.
ಮಾಜಿ ಸಚಿವ ಮೊಝಮ್ಮೆಲ್ ಹಕ್ ಅವರ ಮನೆಯ ದಾಳಿ ನಡೆದ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ತಲೆಮರೆಸಿಕೊಂಡಿರುವ ಅಥವಾ ದೇಶದಿಂದ ಪಲಾಯನ ಮಾಡಿರುವ ಅವಾಮಿ ಲೀಗ್‌ನ ಹಿರಿಯ ನಾಯಕರಲ್ಲಿ ಹಕ್ ಕೂಡ ಒಬ್ಬರು.
ತಮ್ಮ ಕಾರ್ಯಕರ್ತರು ಲೂಟಿ ಮಾಡುವುದನ್ನು ನಿಲ್ಲಿಸಲು ಹಕ್ ಅವರ ಮನೆಗೆ ಹೋಗಿದ್ದರು ಆದರೆ, ದುಷ್ಕರ್ಮಿಗಳು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿಯ ನಾಯಕರು ಆರೋಪಿಸಿದ್ದಾರೆ.
ಶೇಖ್ ಹಸೀನಾ ಅವರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸುದೀರ್ಘ ಕಾಲ ನಡೆದ ಪ್ರತಿಭಟನೆಯಲ್ಲಿ 560 ಜನರು ಸಾವನ್ನಪ್ಪಿದರು. ತೀವ್ರ ಪ್ರತಿಭಟನೆಯ ಹಿನ್ನೆಲೆ 16 ವರ್ಷಗಳ ಕಾಲ ಪ್ರಧಾನಿಯಾಗಿದ್ದ ಶೇಖ್ ಹಸೀನಾ, 2024ರ ಆಗಸ್ಟ್ 5 ರಂದು ಢಾಕಾದಿಂದ ನವದೆಹಲಿಗೆ ಪಲಾಯನ ಮಾಡಿದ್ದರು.
ಆಗಸ್ಟ್ 8, 2024 ರಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನುಸ್ ದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.


