ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಭಾನುವಾರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಬಂಡಿ ಸಂಜಯ್ ಕುಮಾರ್ ಅವರನ್ನು ಬಂಧಿಸಿದ ನಂತರ ಪಕ್ಷದ ಮುಖಂಡರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.
ಭಾರತೀಯ ಜನತಾ ಪಕ್ಷದ ತೆಲಂಗಾಣ ಘಟಕದ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರನ್ನು ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಭಾನುವಾರ ಬಂಧಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅವರ ಬಂಧನವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಕುಮಾರ್ ಮತ್ತು ಇತರ ಬಿಜೆಪಿ ಮುಖಂಡರು ಈ ತಿಂಗಳ ಆರಂಭದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಹೊಸ ವಲಯ ವರ್ಗಾವಣೆ ನೀತಿಯನ್ನು ವಿರೋಧಿಸಿ ಕರೀಂನಗರ ಪಟ್ಟಣದ ಪಕ್ಷದ ಕಚೇರಿಯಲ್ಲಿ ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಮೇಲೆ ಪರಿಣಾಮ ಬೀರುವ ನೀತಿ ನಿರಂಕುಶವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಸುಮಾರು ಎರಡು ಗಂಟೆಗಳ ಪ್ರತಿಭಟನೆಯ ನಂತರ ಪೊಲೀಸರು ಬಾಗಿಲಿನ ಬೀಗವನ್ನು ಒಡೆದು ಕಚೇರಿಗೆ ನುಗ್ಗಿದರು ಎಂದು ದಿ ಹಿಂದೂ ವರದಿ ಮಾಡಿದೆ.
ಪ್ರತಿಭಟನೆ ವೇಳೆ ದೈಹಿಕ ಅಂತರ ಕಾಯ್ದುಕೊಂಡಿರಲಿಲ್ಲ. ಮಾಸ್ಕ್ ಕೂಡ ಧರಿಸಿರಲಿಲ್ಲ. ಹೀಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 51(ಬಿ) ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188ರ ಅಡಿಯಲ್ಲಿ 21 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕರೀಂನಗರ ಪೊಲೀಸ್ ಆಯುಕ್ತ ವಿ.ಸತ್ಯನಾರಾಯಣ ತಿಳಿಸಿದ್ದಾರೆ.
ಕನಿಷ್ಠ 70 ಜನರನ್ನು ಬಂಧಿಸಿ ನಂತರ ಅವರಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಸೋಮವಾರದವರೆಗೆ ಕುಮಾರ್ ಅವರನ್ನು ಮಣಕೊಂಡೂರು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಬಳಿಕ ಕರೀಂನಗರದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.
ಕುಮಾರ್ ಬಂಧನವನ್ನು ವಿರೋಧಿಸಿ ಹಲವಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರಿಂದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಉದ್ವಿಗ್ನತೆ ಉಂಟಾಯಿತು. ಘೋಷಣೆಗಳನ್ನು ಕೂಗಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ಅವರನ್ನು ಬಂಧಿಸಲಾಯಿತು.
ವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆಯಲ್ಲದೆ, ಗಲಭೆ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ 16 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ನಡುವೆ ಸೋಮವಾರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಕುಮಾರ್ ಬಂಧನವನ್ನು ಖಂಡಿಸಿದ್ದಾರೆ. ಅವರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗಲೂ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹುಜೂರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರಿಂದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಹತಾಶರಾಗಿದ್ದಾರೆ ಎಂದು ನಡ್ಡಾ ಟೀಕಿಸಿದ್ದಾರೆ.
ಇದನ್ನೂ ಓದಿರಿ: ಕೋವಿಡ್: ಫ್ರಾನ್ಸ್‌ನಲ್ಲಿ ಹೊಸ ತಳಿ ‘ಐಎಚ್‌ಯು’ ಪತ್ತೆ


