ಅಂಬೇಡ್ಕರ್ ಅವರು ’ಬುದ್ಧ, ಕಬೀರ, ಜೋತಿರಾವ್ ಫುಲೆ ನನ್ನ ಗುರುಗಳು’ ಎನ್ನುತ್ತಾರೆ. ಭಕ್ತಿ ಪಂಥವನ್ನು ನಾಲ್ಕು ಗೋಡೆಗಳಿಂದ ಬಿಡುಗಡೆಗೊಳಿಸಿ ಸಂತೆಯಲ್ಲಿ ಜನರ ನಡುವೆ ತಂದು ಅದಕ್ಕೆ ಆಧ್ಯಾತ್ಮದ ಸ್ಪರ್ಶ ಕೊಟ್ಟ ಕಬೀರ ಸಂತನಾಗಿದ್ದ. ಮನುಷ್ಯರ ಬದುಕನ್ನೇ ಪೊರೆದ ಬುದ್ಧನ ’ನಿನಗೆ ನೀನು ಬೆಳಕಾಗು’ ಬೋಧನೆಯ ನಿಷ್ಠಾವಂತ ವಿದ್ಯಾರ್ಥಿಯಂತಿದ್ದ ಕಬೀರ ’ನನ್ನನ್ನು ನಾನು ಸಂಪೂರ್ಣ ಬಿಚ್ಚಿಕೊಂಡಾಗ ನನಗಿಂತ ನೀಚರಿಲ್ಲ ಎಂಬುದು ಅರಿವಾಯಿತು’ ಅಂತ ಹೇಳಿ ನಮ್ಮನ್ನು ಆತ್ಮವಿಮರ್ಶೆಯ ಒರೆಗೆ ಹಚ್ಚಿದ. ಕಬೀರನ ಸ್ವವಿಮರ್ಶೆಯ ಚುಂಗು ಹಿಡಿದು ಆ ಆಧ್ಯಾತ್ಮಿಕತೆಯನ್ನು ಲೌಕಿಕತೆಗೆ ವಿಸ್ತರಿಸಿದ ಜೋತಿರಾವ್ ಫುಲೆ ನೇರವಾಗಿ ಇಲ್ಲಿನ ರೋಗಗ್ರಸ್ತ ಜಾತಿ ಮನಸ್ಸಿಗೆ ಲಗ್ಗೆ ಹಾಕಿದರು. ಯಥಾಸ್ಥಿತಿ ಕಾಪಾಡಿಕೊಳ್ಳುತ್ತಲೇ ಮೌಢ್ಯಾಚರಣೆಗಳ ವಿರುದ್ಧ ಹೋರಾಡಿದ 19ನೇ ಶತಮಾನದ ಸುಧಾರಣಾವಾದಿಗಳ ಮಿತಿಯನ್ನು ಚೆನ್ನಾಗಿ ಗ್ರಹಿಸಿದ್ದ ಮಹಾತ್ಮ ಫುಲೆ ಇಲ್ಲಿನ ಬ್ರಾಹ್ಮಣೀಕರಣದ ಪ್ರಭಾವದಲ್ಲಿರುವ ಜಾತಿವ್ಯವಸ್ಥೆಯ ವಿರುದ್ಧ ಬಂಡಾಯ ಸಾರಿದರು. ರಾಜಾರಾಮ್ ಮೋಹನ್ ರಾಯ್ ನೇತೃತ್ವದ ಬ್ರಹ್ಮ ಸಮಾಜ, ದಯಾನಂದ ಸರಸ್ವತಿಯ ಆರ್ಯ ಸಮಾಜ ಮತ್ತು ಫುಲೆಯವರ ಸತ್ಯ ಶೋಧಕ ಸಮಾಜ ಮೂರನ್ನೂ ತೌಲನಿಕವಾಗಿ ಅಧ್ಯಯನ ಮಾಡಿದರೆ ಫುಲೆಯವರ ಮಹತ್ವ ಅರಿವಾಗುತ್ತದೆ.
ಮೂರು ಸಮಾಜಗಳ ಉದ್ದೇಶ ಮೌಢ್ಯಾಚರಣೆಯನ್ನು ನಿರಾಕರಿಸುವುದು ಮತ್ತು ಶಿಕ್ಷಣವಾಗಿದ್ದರೂ, ಸಹ ಬ್ರಹ್ಮ ಮತ್ತು ಆರ್ಯ ಸಮಾಜಗಳು ಹಿಂದೂ ಧರ್ಮದೊಳಗಿದ್ದುಕೊಂಡು, ಅಲ್ಲಿನ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡು ಸುಧಾರಣೆಗಳನ್ನು ಬಯಸಿದ್ದರೆ ಈ ಸಾಂಪ್ರದಾಯಿಕತೆಗೆ ಸಾಮಾಜಿಕ ಪ್ರತಿರೋಧವಾಗಿ ಶೂದ್ರ, ಅತಿ ಶೂದ್ರರ ಸಬಲೀಕರಣ, ವಿಮೋಚನೆಯನ್ನು ತಮ್ಮ ಬದುಕಿನ ಆದ್ಯತೆಯನ್ನಾಗಿಸಿಕೊಂಡ ಫುಲೆ ದಂಪತಿಗಳು ಇಲ್ಲಿನ ಜಾತಿವ್ಯವಸ್ಥೆಯ ಬುಡಕ್ಕೆ ಪೆಟ್ಟುನೀಡಿದರು. ಶೋಷಿತರಿಗೆ ಅಗತ್ಯವಿರುವುದು ಸುಧಾರಣೆಯಲ್ಲ, ಬದಲಿಗೆ ಸಂಕೋಲೆಗಳಿಂದ ಬಿಡುಗಡೆ. ಅಂತಿಮವಾಗಿ ಶೋಷಿತರ ವಿಮೋಚನೆ ನಮ್ಮ ಗುರಿ ಎಂದ ಫುಲೆ ಇದರ ಅನುಷ್ಠಾನಕ್ಕಾಗಿ ಜಾತಿ ವಿರೋಧಿ ಚಳವಳಿಯನ್ನು ಕಟ್ಟಿದರು. ’ನಾವು ದೇವರ ಸಂದೇಶವಾಹಕರು’ ಎಂದು ವಂಚಿಸುತ್ತಿದ್ದ ಬ್ರಾಹ್ಮಣ ಸಮಾಜಕ್ಕೆ ಸತ್ಯಶೋಧಕ ಸಮಾಜದ ಮೂಲಕ ಸವಾಲು ಹಾಕಿದರು. ಪಥ ಶೋದಕರಾಗಿದ್ದ ಫುಲೆ ದಂಪತಿಗಳು ಬ್ರಾಹ್ಮಣರ ವೇದಕ್ಕೆ ಒರೆಯ ಕಟ್ಟಿದರು, ಶಾಸ್ತ್ರಕ್ಕೆ ನಿಗಳವನ್ನಿಕ್ಕಿದರು. ವ್ಯವಸ್ಥೆಯೊಳಗಿನ ಮೌಢ್ಯದ ವಿರುದ್ಧ, ಬ್ರಾಹ್ಮಣಶಾಹಿಯ ಶೋಷಣೆಯ ವಿರುದ್ಧ ರಚನಾತ್ಮಕವಾಗಿ ಸಂಘಟಿತರಾಗುವುದು ಫುಲೆ ದಂಪತಿಗಳಿಗೆ ಜೀವನ್ಮರಣದ ಪ್ರಶ್ನೆಯಾಗಿತ್ತು.

1971ರಲ್ಲಿ ಇಪಿಡಬ್ಲ್ಯೂ ಪತ್ರಿಕೆಗೆ ಬರೆದ ’ಜೋತಿರಾವ್ ಫುಲೆ ಮತ್ತು ಭಾರತದಲ್ಲಿ ಸಾಮಾಜಿಕ ಕ್ರಾಂತಿಯ ಸಿದ್ಧಾಂತ’ ಲೇಖನದಲ್ಲಿ ಗೇಲ್ ಒಮ್ವೆಟ್ ’19ನೇ ಶತಮಾನದ ಬ್ರಾಹ್ಮಣ ವಿದ್ವಾಂಸರು ಆಧ್ಯಾತ್ಮ ಮತ್ತು ನೈತಿಕತೆಯ ಕೇಂದ್ರವಾಗಿ ಹಿಂದೂ ಪರಂಪರೆ ಎನ್ನುವ ಸಿದ್ಧಾಂತ ರೂಪಿಸಿದರು. ಇದಕ್ಕೆ ’ಪೂರ್ವದ ನೈತಿಕತೆ ಮತ್ತು ಪಶ್ಚಿಮದ ವಿಜ್ಞಾನ’ವನ್ನು ಕಸಿ ಮಾಡಿದರು. ಆರ್ಯರ ಜನಾಂಗೀಯ ಸಿದ್ಧಾಂತವನ್ನು ಒಪ್ಪಿಕೊಂಡರು…. ವರ್ಣ ಮತ್ತು ಜನಾಂಗಕ್ಕೆ ಸಂಬಂಧ ಕಲ್ಪಿಸಿ ಜಾತಿ ಶ್ರೇಣೀಕರಣಕ್ಕೆ ವೈಜ್ಞಾನಿಕ ಸಮರ್ಥನೆ ಕೊಟ್ಟುಕೊಂಡರು’ ಎಂದು ಬರೆಯುತ್ತಾರೆ. 19ನೆ ಶತಮಾನದ ಆರಂಭದಲ್ಲಿ ಮಹಾರಾಷ್ಟ್ರದ ’ಸಾಮಾಜಿಕ ಸುಧಾರಣೆ’ ಚಳವಳಿಯ ಮುಂಚೂಣಿಯಲ್ಲಿದ್ದವರು ಗೋವಿಂದ ರಾನಡೆ, ಕಾಶೀನಾಥ ತ್ರಿಂಬಕ್, ಗೋಪಾಲ ಭಂಡಾರ್ಕರ್‌ರಂತಹ ಬ್ರಾಹ್ಮಣರು. ಪ್ರೊ. ಸುಬೆ ಸಿಂಗ್ ಅವರು ’ರಾನಡೆಯವರು ಸಮಾಜದ ವಿರುದ್ಧ ಬಂಡಾಯವೇಳುವುದನ್ನು ವಿರೋಧಿಸುತ್ತಿದ್ದರು. ಇದು ಸುಧಾರಣೆಗೆ ಒಳಿತಿಗಿಂತ ಕೆಡಕನ್ನುಂಟು ಮಾಡುತ್ತದೆಂದು ನಂಬಿದ್ದರು. ಮೇಲ್ಜಾತಿಗಳ ಹೆಣ್ಣುಮಕ್ಕಳಿಗೆ ಶಿಕ್ಷಣ, ವಿಧವಾ ವಿವಾಹ ಮುಂತಾದವುಗಳು ಇವರ ಆದ್ಯತೆಗಳಾಗಿದ್ದವು’ ಎಂದು ಬರೆಯುತ್ತಾರೆ. ಆದರೆ ಜಾತಿ ಶ್ರೇಣೀಕರಣವನ್ನು ಪ್ರಶ್ನಿಸಿದ ಫುಲೆಯವರು ತಳ ಸಮುದಾಯಗಳು, ವಂಚಿತರ ಪರವಾಗಿ ಬ್ರಾಹ್ಮಣೇತರ ಚಳವಳಿಯನ್ನು ರೂಪಿಸಿದರು. ತಮ್ಮ ’ಗುಲಾಮಗಿರಿ’ ಪುಸ್ತಕ ಪ್ರಕಟಗೊಂಡ ನಾಲ್ಕು ತಿಂಗಳ ನಂತರ 24, ಸೆಪ್ಟೆಂಬರ್ 1873ರಂದು ’ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು.
ಫುಲೆ ದಂಪತಿಗಳ ಸತ್ಯ ಶೋಧನೆಯು ಆರ್ಯ, ವೇದ ಸಂಸ್ಕೃತಿಯನ್ನು ತಿರಸ್ಕರಿಸಿತು. ಶೂದ್ರ, ಅತಿ ಶೂದ್ರರ ಮೇಲಿನ ಬ್ರಾಹ್ಮಣರ ಶೋಷಣೆಯನ್ನು ಕೊನೆಗೊಳಿಸುವುದು ಈ ಸಮಾಜದ ಮುಖ್ಯ ಉದ್ದೇಶವಾಗಿತ್ತು. ಈ ಪರಿವರ್ತನೆಗೆ ತಳ ಸಮುದಾಯಗಳನ್ನು ಸಜ್ಜುಗೊಳಿಸಲು ಪ್ರಾಥಮಿಕ ಅಗತ್ಯವಾದ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವುದು ಇವರ ಮುಖ್ಯ ಗುರಿಯಾಗಿತ್ತು. ಬ್ರಾಹ್ಮಣೀಕರಣವನ್ನು ಕೊನೆಗೊಳಿಸಬೇಕೆಂದರೆ ಅದರ ಎಲ್ಲಾ ಬಗೆಯ ಮೌಢ್ಯ ಆಚರಣೆಗಳಿಗೆ ಸೆಡ್ಡುಹೊಡೆದು ಎಲ್ಲರನ್ನೂ ಒಳಗೊಳ್ಳುವ ಪರ್ಯಾಯ ಮಾದರಿಗಳನ್ನು ಕಟ್ಟುವುದು ಸಹ ಸತ್ಯಶೋಧನ ಸಮಾಜದ ಮುಖ್ಯ ಪ್ರಣಾಳಿಕೆಯಾಗಿತ್ತು. ಗೃಹ ಕೈಗಾರಿಕೆಗೆ ಉತ್ತೇಜನ ನೀಡುವುದರ ಮೂಲಕ ವಂಚಿತ ಸಮುದಾಯಗಳ ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಈ ಸಮಾಜದ ಆಶಯವಾಗಿತ್ತು. ಈ ಸತ್ಯಶೋಧಕ ಸದಸ್ಯರಿಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರವಿತ್ತು. ಸಮಾಜದ ಬಗ್ಗೆ ಪತ್ರಕರ್ತ ಅನಿಲ್ ವರ್ಗೀಸ್ ’ಬ್ರಾಹ್ಮಣ ವಿರೋಧಿ ಚಳವಳಿಯನ್ನು ಎಷ್ಟು ಹಂತದವರೆಗೆ ಮುಂದುವರಿಸಬೇಕು? ಬ್ರಿಟಿಷರ ಆಡಳಿತದ ವಿರುದ್ಧ ಟೀಕೆಯು ಶರತ್ತುಬದ್ಧವಾಗಿರಬೇಕೆ? ಮುಂತಾದ ವಿಚಾರಗಳ ಕುರಿತು ಭಿನ್ನಾಭಿಪ್ರಾಯಗಳಿದ್ದವು. ಆದರೆ ಎಲ್ಲವೂ ಚರ್ಚೆಯಾಗುತ್ತಿದ್ದವು…. ಹಳ್ಳಿಗಳಲ್ಲಿ ಬ್ರಾಹ್ಮಣ ಪುರೋಹಿತರಿಗೆ ಬಹಿಷ್ಕಾರ, ಶೂದ್ರ ವಿದ್ಯಾರ್ಥಿಗಳಿಗೆ ಸ್ಕಾಲರ್ಶ್ಶ್‌ಪ್ ಯೋಜನೆ ಮುಂತಾದ ಚಳವಳಿಗಳ ಮೂಲಕ ಗ್ರಾಮೀಣ ಭಾಗದಲ್ಲಿ ಸತ್ಯಶೋಧಕ ಚಳವಳಿ ಪರಿಣಾಮಕಾರಿಯಾಗಿತ್ತು’ ಎಂದು ಬರೆಯುತ್ತಾರೆ.
ಸ್ನೇಹಶೀಶ್ ದಾಸ್ ಅವರು ’ಸತ್ಯಶೋಧಕರು ತಲೆಯ ಮೇಲೆ ಪೇಟ, ಧೋತಿ, ಭುಜದ ಮೇಲೆ ಶಲ್ಯ ಧರಿಸುತ್ತಿದ್ದರು. ಕೈಯಲ್ಲಿ ಡೋಲು ಹಿಡಿದಿರುತ್ತಿದ್ದರು. ಆ ಕಾಲದ ಮೇಲ್ಜಾತಿಗಳು ಮಾತ್ರ ತೊಡುತ್ತಿದ್ದ ಈ ಧಿರಿಸನ್ನು ಕಾರ್ಯಕರ್ತರು ಧರಿಸುವುದರ ಮೂಲಕ ಸಾರ್ವತ್ರೀಕರಣಗೊಳಿಸುತ್ತಿದ್ದರು’ ಎಂದು ಬರೆಯುತ್ತಾರೆ.

ಜೋತಿರಾವ್ ಫುಲೆಯವರು ಸತ್ಯಶೋಧಕ ಸಮಾಜದ ಮೊದಲ ಅಧ್ಯಕ್ಷ ಮತ್ತು ಖಜಾಂಚಿಯಾಗಿ ಮತ್ತು ನಾರಾಯಣ ರಾವ್ ಗೋವಿಂದರಾವ್ ಕಡಾಲಕ್ ಮೊದಲ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸಾವಿತ್ರಿಬಾಯಿ ಫುಲೆ, ಕೃಷ್ಣರಾವ್ ಬಾಲೇಕರ್, ನಾರಾಯಣ ಮೇಘಾಜಿ ಲೋಖಂಡೆ, ಬಾವು ಕೊಂಡಜ್ಜಿ ಪಾಟೀಲ, ಜಯ ಕರಾಡಿ ಲಿಂಗು, ಜ್ಞಾನಬಾ ಕೃಷ್ಣಾಜಿ ಸಾಸನೆ, ರಾಜು ಬಾಬಾಜಿ ಮುಂತಾದವರು ಸ್ಥಾಪಕ ಸದಸ್ಯರಾಗಿದ್ದರು. ಮಹರ್, ಮಾಂಗ್, ಮುಸ್ಲಿಂ, ಜ್ಯೂ ಒಳಗೊಂಡಂತೆ ಎಲ್ಲಾ ಬ್ರಾಹ್ಮಣೇತರರು ಇದರ ಸದಸ್ಯರಾಗಿದ್ದರು. 1876ರ ವೇಳೆಗೆ ಸತ್ಯಶೋಧಕ ಸಮಾಜದಲ್ಲಿ 316 ಸದಸ್ಯರಿದ್ದರು. ಸತ್ಯಶೋಧಕ ಸಮಾಜದ ದನಿಯಾಗಿ ’ದೀನಬಂಧು’ ಪತ್ರಿಕೆ ಆರಂಭಿಸಲಾಯಿತು. ಭಾಲೇಕರ್ ಇದರ ಸ್ಥಾಪಕ ಸಂಪಾದಕರಾಗಿದ್ದರು. ನಂತರ ಲೋಖಂಡೆ ಇದರ ಸಂಪಾದಕರಾದರು. ಸತ್ಯಶೋಧಕ ಸಮಾಜದ ಸಂಘಟನೆಗೆ ಆ ಕಾಲದ ಕುಣುಬಿ, ಮಾಲಿ, ಕೋಲಿ ಮುಂತಾದ ಮರಾಠ ರೈತ ಸಮುದಾಯಗಳ ಬೆಂಬಲ ದೊರಕಿತು.
ಸೋನಾಲಿ ಕಾಳೆಯವರು “ಸತ್ಯಶೋಧಕ ತತ್ವದಲ್ಲಿ ವರ್ಗ ಸಂಘರ್ಷದ ಕುರಿತಾಗಿ ಮಾಹಿತಿಯ ಕೊರತೆಯಿದ್ದರೂ ಸಹ ಆರ್ಥಿಕ ಶೋಷಣೆ ಕುರಿತು ಅರಿವಿತ್ತು. ಕೂಲಿ ಕಾರ್ಮಿಕರ ಬವಣೆಗಳ ಕುರಿತು ಸೂಕ್ಷ್ಮ ಸಂವೇದನೆ ಹೊಂದಿದ್ದರು. ಈ ಸಮಾಜದ ಕಾರ್ಯಕರ್ತರು ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರ ಜೊತೆ ಕೆಲಸ ಮಾಡಿದರು. 1885ರಲ್ಲಿ ಜುನ್ನಾರ್ ಭಾಗದಲ್ಲಿ ಸತ್ಯಶೋಧಕ ಕಾರ್ಯಕರ್ತರು ಸಾವಿರ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರ, ಕುಶಲಕರ್ಮಿಗಳ ಪ್ರತಿಭಟನೆ ಆಯೋಜಿಸಿದ್ದರು. ಇವರು ಬ್ರಾಹ್ಮಣರು, ಮೇಲ್ಜಾತಿಗಳ ಜಮೀನುಗಳಲ್ಲಿ ಕೆಲಸ ಮಾಡಲು ನಿರಾಕರಿಸಿದರು, ಕುಶಲಕರ್ಮಿಗಳು ಬ್ರಾಹ್ಮಣರಿಗೆ ಸೇವೆ ಒದಗಿಸಲು ನಿರಾಕರಿಸಿದರು, ನಂತರ ಇದು ಕೊಂಕಣ ಮತ್ತು ಘಟ್ಟ ಪ್ರದೇಶಗಳಿಗೂ ಹಬ್ಬಿಕೊಂಡಿತು. ಮೂರು ವರ್ಷಗಳ ಕಾಲ ಪ್ರತಿಭಟನೆ ಮುಂದುವರಿಯಿತು. ತಮ್ಮ ನೆನಪಿನ ಅಂಗಳದಿಂದ ಮಾತನಾಡುತ್ತಾ ಗೋವಿಂದ ಬಾವು ಪಾಟೀಲ್ ಅವರು ’ಬ್ರಾಹ್ಮಣ ಪುರೋಹಿತರು ತಮ್ಮ ಶುಲ್ಕವನ್ನು ಎಂಟು ಆಣೆಗೆ ಇಳಿಸಿದರು, ಜಮೀನ್ದಾರರು 20ರಷ್ಟು ಕಡಿಮೆ ಪ್ರಮಾಣದಲ್ಲಿ ತಮ್ಮ ಭೂಮಿಯನ್ನು ಬಾಡಿಗೆಗೆ ಕೊಟ್ಟರೆಂದು’ ಹೇಳುತ್ತಾರೆ. 1880ರಲ್ಲಿ ಬಾಂಬೆಯಲ್ಲಿ ಲೋಖಂಡೆಯವರು ಕೈಮಗ್ಗ ನೇಕಾರರ ಸಂಘವನ್ನು ಸ್ಥಾಪಿಸಿದರು. ಕರಪತ್ರ, ಭಾಷಣಗಳ ಮೂಲಕ ಸತ್ಯಶೋಧಕ ಕಾರ್ಯಕರ್ತರು ವಂಚಿತ ಸಮುದಾಯಗಳನ್ನು ಸಂಘಟಿಸಿದರು. ಇದರ ಪರಿಣಾಮವಾಗಿ ಭಾನುವಾರದ ರಜಾ ದಿನ, ಅರ್ಧ ಗಂಟೆ ಊಟದ ವಿರಾಮ, ಸಮಯಕ್ಕೆ ಸರಿಯಾಗಿ ವೇತನ ನೀಡುವುದು ಇತ್ಯಾದಿ ಬದಲಾವಣೆಗಳು ಜಾರಿಗೆ ಬಂದಿತು” ಎಂದು ಬರೆಯುತ್ತಾರೆ. ಧನಂಜಯ ಕೀರ್ ಹೇಳಿದಂತೆ ಇಪ್ಪತ್ತನೇ ಶತಮಾನದ ಆರಂಭದಲ್ಲಿನ ಕಾರ್ಮಿಕ ಚಳವಳಿಗೆ ಸತ್ಯಶೋಧಕ ಸಮಾಜವು ಚಿಮ್ಮು ಹಲಗೆಯಾಗಿತ್ತು.
ಜೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆಯವರ ನಿಧನದ ನಂತರವೂ ’ಸತ್ಯಶೋಧಕ ಸಮಾಜ’ದ ಕಾರ್ಯ ಚಟುವಟಿಕೆ ಮುಂದುವರಿಯಿತು. ಶಾಹು ಮಹಾರಾಜ್, ನಂತರ ಬಾಬುರಾವ್ ಪಾಟೀಲ್, ಕೇಶವರಾವ್ ಜೆಢೆ ಮುಂತಾದವರು ಇದನ್ನು ಮುಂದುವರಿಸಿದರು. 1911ರಲ್ಲಿ ರಾಮಯ್ಯ ಅಯ್ಯವರು ಅವರ ಅಧ್ಯಕ್ಷತೆಯಲ್ಲಿ ಸತ್ಯಶೋಧಕ ಸಮಾವೇಶ ಹಮ್ಮಿಕೊಳ್ಳಲಾಯಿತು. ಭಾಸ್ಕರರಾವ್ ಜಾಧವ್, ಮುಕುಂದರಾವ್ ಪಾಟೀಲ್, ದಿನಕರ್‌ರಾವ್ ಜಾವಲ್ಕರ್ ಈ ಸಮಾಜದ ಎರಡನೇ ತಲೆಮಾರಿನ ಮುಖಂಡರಾಗಿದ್ದರು.

ಬ್ರಾಹ್ಮಣರ ಸನಾತನ ಪದ್ಧತಿ ಪ್ರಧಾನವಾಗಿರುವ ಸಾಂಪ್ರದಾಯಿಕ ಮದುವೆಯನ್ನು ತಿರಸ್ಕರಿಸಿ ಪುರೋಹಿತರಿಲ್ಲದ, ಮಂತ್ರಘೋಷಣೆಗಳಿಲ್ಲದ, ವರದಕ್ಷಿಣೆಯಿಲ್ಲದ ’ಸತ್ಯಶೋಧಕ ಮದುವೆ’ ಅತ್ಯಂತ ವಿಶಿಷ್ಟವಾಗಿತ್ತು. 25, ಡಿಸೆಂಬರ್ 1873ರಂದು ಮೊದಲ ’ಸತ್ಯಶೋಧಕ ಮದುವೆ’ ಆಯೋಜಿಸಲಾಗಿತ್ತು ಫ್ರೊ. ಹರಿ ನರ್ಕೆಯವರು “ಸಾವಿತ್ರಿಬಾಯಿ ಫುಲೆಯವರ ಸ್ನೇಹಿತೆ ಬಜುಬಾಯಿ ಜ್ಞಾನೋಬ ನಿಂಬಾರ್ಕರ್ ಅವರ ಮಗಳು ರಾಧ ಮತ್ತು ಸಾಮಾಜಿಕ ಕಾರ್ಯಕರ್ತ ಸೀತಾರಾಂ ಜಬಾಜಿ ಅಲ್ಹತ್ ಅವರ ಮದುವೆ ಮೊದಲ ಸತ್ಯಶೋಧಕ ಮದುವೆ. ಈ ಚಾರಿತ್ರಿಕ ಮದುವೆಯ ಖರ್ಚುವೆಚ್ಚವನ್ನು ಸಾವಿತ್ರಿಬಾಯಿ ವಹಿಸಿಕೊಂಡಿದ್ದರು.. ಬ್ರಾಹ್ಮಣರು, ಪುರೋಹಿತರು ಈ ಮದುವೆಗಳನ್ನು ವಿರೋಧಿಸಿದರು, ಕೋರ್ಟಗೆ ಸಹ ಹೋದರು.. ಫುಲೆ ದಂಪತಿಗಳು 4 ಫೆಬ್ರವರಿ 1889ರಂದು ತಮ್ಮ ದತ್ತು ಮಗನ ಮದುವೆಯನ್ನು ಸಹ ಇದೇ ಮಾದರಿಯಲ್ಲಿ ನೆರೆವೇರಿಸಿದರು” ಎಂದು ಬರೆಯುತ್ತಾರೆ.
’ಸತ್ಯಶೋಧಕ ಮದುವೆ’ಗಾಗಿ ಫುಲೆ ದಂಪತಿಗಳು ರಚಿಸಿದ “ಮದುವೆಯ ಹಾಡು” (ಮಂಗಲಾಷ್ಟಕ) ವಿವರಗಳು ಹೀಗಿವೆ
ಮದುಮಗ: ದೇವರ ಕಾನೂನಿನಂತೆ ನಿಮ್ಮ ಮನೆಯ ವಿಧಿವಿಧಾನಗಳನ್ನು ಅನುಸರಿಸು.
ಸತ್ಯ ಎಲ್ಲದಕ್ಕಿಂತಲೂ ದೊಡ್ಡದು. ಅದನ್ನು ಗೌರವಿಸು
ಅನಕ್ಷರಸ್ತರಿಗೆ ಪಾಠ ಕಲಿಸು. ಬೋಧಿಸು. ಅವರಿಗೆ ಜ್ಞಾನವನ್ನು ಕೊಡು
ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಾನು ವಚನ ನೀಡುತ್ತೇನೆ
ಮದುಮಗಳು: ನಿನ್ನ ಮಾತುಗಳು ಚೆನ್ನಾಗಿವೆ, ನಿಮ್ಮ ವರ್ತನೆ ನಮಗೆ ಹಿಡಿಸಿದೆ. ಮಹಿಳೆಯರಾದ ನಾವೆಲ್ಲಾ ಶೋಷಿತರು. ನನ್ನನ್ನು ಹೇಗೆ ಜೊತೆಯಾಗಿ ಕರೆದೊಯ್ಯುವೆ?
ನಮಗೆ ಸ್ವಾತಂತ್ರ್ಯದ ಅನುಭವ ದೊರಕಿದೆ. ನಾವು ಆತ್ಮಗೌರವದಿಂದ ಬದುಕಲು ಇಚ್ಛಿಸುತ್ತೇವೆ
ಇದಕ್ಕಾಗಿ ಮಹಿಳೆಯರಿಗೆ ನೀವು ಹಕ್ಕನ್ನು ನೀಡುತ್ತೀರ? ವಚನ ಕೊಡಿ.
ಮದುಮಗ: ನಾನು ಮಹಿಳೆಯರ ಹಕ್ಕಿಗಾಗಿ ಹೋರಾಡುತ್ತೇನೆ.
ಯಾವುದೇ ಬೆಲೆ ತೆತ್ತಾದರೂ ಸರಿಯೇ;
ಎಲ್ಲಾ ಮಹಿಳೆಯರನ್ನು ಗೌರವಿಸುತ್ತೇನೆ.
ನನ್ನ ಕರ್ತವ್ಯದ ಭಾಗವಾಗಿ ಇದನ್ನು ಮಾಡುತ್ತೇನೆ.
ಮದುಮಗಳು: ನಿಮ್ಮ ಮಾತುಗಳ ಮೇಲೆ ಭರವಸೆಯನ್ನು ಇಟ್ಟು ನಾನು ನಿಮ್ಮನ್ನು ಪತಿಯೆಂದು ಸ್ವೀಕರಿಸುತ್ತೇನೆ.
ನಾವಿಬ್ಬರೂ ಒಟ್ಟಾಗಿ ಮಹಿಳೆಯರ ಹಕ್ಕಿಗಾಗಿ, ಸಬಲೀಕರಣಕ್ಕಾಗಿ ಹೋರಾಡೋಣ.
ಸುಲಗ್ನಾ ಸಾವಧಾನ..
ಉಪಸಂಹಾರ
1885ರ ತಮ್ಮ ಮೊದಲ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವು ಬ್ರಾಹ್ಮಣರಿಗೆ, ಮೇಲ್ಜಾತಿಗಳಿಗೆ ಪ್ರಾಶಸ್ತ್ಯ ನೀಡಿತು. ಅಲ್ಲಿಯವರೆಗೂ ಶೂದ್ರರ ಮರಾಠಿ ಅಸ್ಮಿತೆಯ ಭಾಗವಾಗಿದ್ದ ಶಿವಾಜಿಯನ್ನು ಕಾಂಗ್ರೆಸ್‌ನ ಟಿಳಕರು ತಮ್ಮ ಬ್ರಾಹ್ಮಣೀಕರಣದಲ್ಲಿ ಜೀರ್ಣಿಸಿಕೊಂಡರು. ಆಗ ಲೋಖಂಡೆ ಸಂಪಾದಕತ್ವದ ದೀನಬಂಧು ಪತ್ರಿಕೆಯಲ್ಲಿ ಈ ಕುರಿತು ಸರಣಿ ಲೇಖನಗಳು, ಪತ್ರಗಳು ಪ್ರಕಟಗೊಂಡವು. ಸತ್ಯಶೋಧಕ ಕಾರ್ಯಕರ್ತನಾಗಿದ್ದ ಧೋಂಡಿರಾಂ ನಾಮದೇವ ಕುಂಬಾರ “ನಂಬಿಕೆಯಿಲ್ಲದ ಈ ಜನ ಶಿವಾಜಿಯನ್ನು ಹೇಗೆ ಸಂಭ್ರಮಿಸಲು ಸಾಧ್ಯ? ಇವರು ಬೇರೆಯವರಿಗೆ ಜ್ಞಾನವನ್ನು ವರ್ಗಾಯಿಸುವುದಿಲ್ಲ, ಯಾರಿಗೂ ಮಾಹಿತಿ ಕೊಡದೆ ಛತ್ರಪತಿಯನ್ನು ತಮ್ಮೊಳಗೆ ಬಚ್ಚಿಟ್ಟುಕೊಂಡರು.. ಶಿವಾಜಿ ವಂಶಸ್ಥರನ್ನು ನಾಶ ಮಾಡಿದರು.. ಆತನ ಘನತೆಯ ಮೇಲೆ ದಾಳಿ ಮಾಡಿದರು…” ಎನ್ನುವ ಸಾಲುಗಳನ್ನು ಬರೆಯುತ್ತಾರೆ. ತನ್ನ ಪತ್ರದ ಕೊನೆಗೆ “ನನ್ನ ಬ್ರಾಹ್ಮಣೇತರ ಸಹೋದರರೇ ಈ ರೋಚಕತೆಗೆ ಬಲಿಯಾಗಿ ದೇಶದ್ರೋಹಿಗಳಾಗಬೇಡಿ” ಎಂದು ಬರೆಯುತ್ತಾರೆ. (ರೊಸಲಿಂಡ್ ಒ ಹನ್ಲನ್‌ರ ’ಜಾತಿ, ಸಂಘರ್ಷ ಮತ್ತು ಸಿದ್ಧಾಂತ: ಮಹಾತ್ಮ ಜೋತಿರಾವ್ ಫುಲೆ ಮತ್ತು 19ನೆ ಶತಮಾನದಲ್ಲಿ ಕೆಳಜಾತಿಗಳ ಪ್ರತಿಭಟನೆ’ ಪುಸ್ತಕದ ಭಾಗ.)
ಕಾಲಚಕ್ರವು ತಿರುಗುತ್ತಲೇ ಇರುತ್ತದೆ. ಆಗಿನ ಟಿಳಕ, ಮಾಳವೀಯರ ಮುಂದುವರಿಕೆಯಾಗಿ ಇಂದು ಆರ್‌ಎಸ್‌ಎಸ್ ಪೇಶ್ವೆಗಳ ಆಡಳಿತವನ್ನು ತನ್ನ ಆದರ್ಶವಾಗಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಚಿತ್ಪಾವನ್ ಬ್ರಾಹ್ಮಣರ ಪ್ರಭಾವದಲ್ಲಿರುವ ಈ ಹಿಂದುತ್ವ ಸಂಘಟನೆಯು ಪೇಶ್ವೆಗಳ ಶತ್ರು ಶಿವಾಜಿಯನ್ನು ಸಹ ತಮ್ಮೊಳಗೆ ಜೀರ್ಣಿಸಿಕೊಂಡಿದ್ದಾರೆ. ಸಂಘ ಪರಿವಾರದ ಅಂಗಳದಲ್ಲಿ ಬೆಳೆದ ದಲಿತ ಸಮುದಾಯದ ರಾಮನಾಥ ಕೋವಿಂದ, ಮುರ್ಮು ಬಿಜೆಪಿ ಪಕ್ಷದ ರಾಜಕೀಯ ದಾಳವಾಗಿ ಬಳಕೆಗೊಂಡು ರಾಷ್ಟ್ರಪತಿಗಳಾಗಿ ಆಯ್ಕೆಯಾಗುತ್ತಾರೆ. ಬಿಜೆಪಿ ಪಕ್ಷವು ಈ ಹಿಂದುತ್ವ-ದಲಿತರನ್ನು ಮುಂದಿಟ್ಟುಕೊಂಡು ಅಂಬೇಡ್ಕರವಾದಿ ದಲಿತ ಸಂಘಟನೆಗಳನ್ನು ಬಗ್ಗುಬಡಿಯಲು ಪ್ರಯತ್ನಿಸುತ್ತದೆ. ’ಬ್ರಾಹ್ಮಣ್ಯ-ಫ್ಯೂಡಲಿಸಂ’ನ ಯಜಮಾನ್ಯವು ’ಸಬಲ್ಟ್ರಾನ್ ವರ್ಗ’ಗಳನ್ನು ’ಗೆಲ್ಲುವುದರ’ ಮೂಲಕ ಅವರ ಮೇಲೆ ಸಮಾಜೋ-ಸಾಂಸ್ಕೃತಿಕ-ರಾಜಕೀಯ ಅಧಿಕಾರ ಸ್ಥಾಪಿಸುವುದು ಇಂದಿನ ಸಾಂಸ್ಕೃತಿಕ ರಾಜಕಾರಣ ಎಂದು ಕರೆಯಬಹುದು.
ಆದರೆ ಈ ಚಕ್ರವ್ಯೂಹದಿಂದ ಹೊರಬರಲು ಅಗತ್ಯವಾದ ಕಾರ್ಯ ಯೋಜನೆಗಳಿಗೆ ಮಾದರಿಯಾಗಿ ’ಸತ್ಯಶೋಧಕ ಸಮಾಜ’ದ ಲೆಗಸಿ ನಮ್ಮ ಮುಂದಿದೆ. ಅಂಚಿನಲ್ಲಿರುವ ತಳಸಮುದಾಯಗಳು ಕೇಂದ್ರ ಸ್ಥಾನಕ್ಕೆ ತರಲು ಪ್ರಯತ್ನಿಸಿದ ಈ ಸಮಾಜದ ಕಾರ್ಯ ಚಟುವಟಿಕೆಗಳನ್ನು ಪ್ರಸ್ತುತ ಸಂದರ್ಭಕ್ಕೆ ಒಳಗೊಳ್ಳಲು ಮತ್ತೆ ಮತ್ತೆ ಮರುಚಿಂತನೆ ಮಾಡಬೇಕಿದೆ. ಫುಲೆಯವರ ಸತ್ಯಶೋಧಕ ಸಮಾಜದ ಮಾದರಿಯನ್ನು ವರ್ತಮಾನಕ್ಕೆ ಸೂಕ್ತವಾಗಿ ಅಳವಡಿಸಿಕೊಂಡು ಸಾಮಾಜಿಕ-ಸಾಂಸ್ಕೃತಿಕ ಜೀವನದ ಹಕ್ಕಿನಿಂದ ವಂಚಿತರಾಗಿರುವ ತಳಸಮುದಾಯಗಳ ಬದುಕನ್ನು ಮರುರೂಪಿಸಬೇಕಾಗಿದೆ. ಸಸ್ಯಾಹಾರದ ಪಾವಿತ್ರ್ಯತೆ, ಉಪವಾಸ ಎನ್ನುವ ವ್ರತ, ಧಾರ್ಮಿಕರಣಗೊಂಡಿರುವ ಯೋಗ, ಬ್ರಹ್ಮಚರ್ಯ, ಶೋಭಾಯಾತ್ರೆ, ಖಾಕಿ ಚೆಡ್ಡಿ- ಕೇಸರಿ ಬಾವುಟ ಇತ್ಯಾದಿಗಳ ಈ ಬ್ರಾಹ್ಮಣ, ವೈದಿಕ ಚಹರೆಗಳನ್ನು, ಪುರೋಹಿತಶಾಹಿ ಆಚರಣೆಗಳನ್ನು ಸತ್ಯಶೋಧಕ ಸಮಾಜದ ಪ್ರಣಾಳಿಕೆಯ ಮೂಲಕ ಹಿಮ್ಮೆಟ್ಟಿಸುವುದೇ ಇಂದಿನ ಸಮಾಜೋ-ಸಾಂಸ್ಕೃತಿಕ ರಾಜಕಾರಣ.

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿಪರೀತದ ಬೆಳಗು ಫುಲೆ ಮಾರ್ಗ


