ರಾಜ್ಯದಾದ್ಯಂತ ಭಾರಿ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕರ್ ಟೋಲ್‌ಗೇಟ್ ವಿರೋಧಿ ಹೋರಾಟಗಾರರ ಮೇಲೆ ಮಂಗಳೂರಿನ ಸುರತ್ಕಲ್ ಠಾಣೆಯ ಪೊಲೀಸರು 2 ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆ ಹಿನ್ನಲೆ ತಲಾ 20 ರಿಂದ 25 ಜನ ಅಪರಿಚಿತರ ವಿರುದ್ಧ ಎರಡು FIR ದಾಖಲಾಗಿದೆ.
ಸುಮಾರು ಆರು ವರ್ಷಗಳಿಂದಲೂ ಟೋಲ್‌ಗೇಟ್ ವಿರೋಧಿ ಚಳವಳಿ ನಡೆಯುತ್ತಿದೆ. ಈ ನಡುವೆ ಕರಾವಳಿಯ ಎಲ್ಲಾ ಬಿಜೆಪಿಯೇತರ ಪಕ್ಷ-ಸಂಘಟನೆಗಳನ್ನು ಸಂಘಟಿಸಿರುವ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಅಕ್ಟೋಬರ್ 18 ರ ಮಂಗಳವಾರ ಸುರತ್ಕಲ್‌ನಲ್ಲಿ ಭಾರಿ ಹೋರಾಟವನ್ನು ಸಂಘಟಿಸಿತ್ತು. ಈ ವೇಳೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ಪ್ರತಿಭಟನಾ ಸ್ಥಳದಿಂದ ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರತಿಭಟನೆ ವೇಳೆ ಟೋಲ್ ವಿರೋಧಿ ಸಮಿತಿ ಸಂಚಾಲಕ ಹಾಗೂ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಖ್ಯಾತ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ, ದಕ್ಷಿಣ ಕನ್ನಡ ಜಿಲ್ಲಾ ಡಿವೈಎಫ್‌ಐ ನಾಯಕ ಬಿ.ಕೆ. ಇಂತಿಯಾಝ್, ಕಾಂಗ್ರೆಸ್ ನಾಯಕ ಮಿಥುನ್ ರೈ, ಕಾರ್ಮಿಕ ನಾಯಕ ಸುನಿಲ್ ಕುಮಾರ್ ಬಜಾಲ್ ಸೇರಿದಂತೆ 250ಕ್ಕೂ ಹೆಚ್ಚು ಜನ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರ ಈ ನಡೆಯ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ಇದನ್ನೂ ಓದಿ: ಸುರತ್ಕಲ್ ಅನಧಿಕೃತ ಟೋಲ್ ವಿರೋಧಿ ಹೋರಾಟ | ಪೊಲೀಸರಿಂದ ಬಂಧನ; ಬಿಡುಗಡೆಗೆ ಡಿವೈಎಫ್‌ಐ ಒತ್ತಾಯ
ಗುರುವಾರ ಹೋರಾಟಗಾರರ ಮೇಲೆ ದಾಖಲಾದ ಎಫ್‌ಐಆರ್‌ನಲ್ಲಿ ಎರಡೂ ದೂರು ಒಂದೆ ತರ ಇದೆ ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಒಂದು ದೂರನ್ನು ಟೋಲ್‌ಗೇಟ್ ಗುತ್ತಿಗೆ ಕಂಟ್ರಾಕ್ಟರ್ ನೂರ್ ಮಹಮ್ಮದ್ ಕಂಪೆನಿಯಿಂದ ದಾಖಲಾಗಿದ್ದ, ಎರಡನೇ ದೂರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಲಿಂಗೇಗೌಡ ಅವರು ನೀಡಿದ್ದಾರೆ ಎಂದು ಮುನೀರ್ ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ, ಪ್ರತಿಭಟನಾಕಾರರು ಹೆದ್ದಾರಿ ಸಂಚಾರಕ್ಕೆ ತೊಡಕು ಉಂಟು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದು, “ತಲಾ 20 ರಿಂದ 25 ಜನ ಗುರುತಿಲ್ಲದವರು ಎಂದು ಯಾರ ಹೆಸರೂ ಉಲ್ಲೇಖಿಸದೆ ದೂರು ನೀಡಲಾಗಿದೆ” ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಒಂದು ಘಟನೆಗೆ ಒಂದೇ FIR ಹಾಕುವುದಲ್ಲವೆ? ಎರಡು ಯಾಕೆ ಎಂದು ಪ್ರಶ್ನಿಸಿರುವ ಮುನೀರ್ ಕಾಟಿಪಳ್ಳ,“ಇದನ್ನು ಯಾಕೆ ಎಂದು ಕೇಳಬೇಡಿ. ಇದು ಡಬ್ಬಲ್ ಇಂಜಿನ್ ಬಿಜೆಪಿ ಸರಕಾರ” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರಿಗೆ ತಡರಾತ್ರಿ ನೋಟಿಸ್: ‘ಜೈಲು ಸೇರಿದರೂ ಪ್ರತಿಭಟನೆ ನಿಲ್ಲಲ್ಲ’- ಮುನೀರ್ ಎಚ್ಚರಿಕೆ
“ಯಾವುದೇ ಅಶಾಂತಿ, ಆಸ್ತಿಪಾಸ್ತಿ ಹಾನಿಗೆ ಅವಕಾಶ ನೀಡದ ತುಳುನಾಡಿನ ಮಾದರಿ ಹೋರಾಟವೊಂದನ್ನು ನಿರ್ದಯವಾಗಿ ಅಕ್ರಮದಾರಿಯಲ್ಲಿ ಹತ್ತಿಕ್ಕಲು ನೋಡುತ್ತಿದ್ದೀರಿ. ಪೊಲೀಸ್ ಕೇಸುಗಳ ಮೂಲಕ ಹೋರಾಟವನ್ನು ಮುಗಿಸಿ ಬಿಡುತ್ತೀವಿ ಅನ್ನುವುದು ನಿಮ್ಮ ಭ್ರಮೆ. ಕೆಟ್ಟ ಟ್ರೋಲು, ಪೊಲೀಸ್ ಕೇಸು ಒಟ್ಟೊಟ್ಟಿಗೆ ಆರಂಭ ಆಗಿದೆ. ಅಂದರೆ ಚಿತ್ರಕತೆ ಒಂದೇ ಕಡೆ ಸಿದ್ದಗೊಳ್ಳುತ್ತಿದೆ ಅಂತಾಯ್ತು. ಟೋಲ್ ಮುಚ್ಚಿ ಅಂದರೆ ನಮ್ಮ ಬಾಯಿ ಮುಚ್ಚಿಸುತ್ತಿದ್ದೀರಿ. ಇದು ಅಸಾಧ್ಯ. ಇದು ಖಂಡನಾರ್ಹ” ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಇದು ಹೋರಾಟ ಸಮಿತಿ ಜೊತೆ ನಿಂತಿರುವ ತುಳುನಾಡಿನ ಸಮಸ್ತ ಜನಸಮೂಹದ ಮೇಲೆ ಹಾಕಿರುವ FIR ಎಂದು ಹೇಳಿರುವ ಮುನೀರ್ ಕಾಟಿಪಳ್ಳ, “ತುಳುನಾಡಿನ ಬೆಂಬಲದೊಂದಿಗೆ ಇದನ್ನು ಎದುರಿಸುತ್ತೇವೆ. ನಾವು ಪೊಲೀಸ್ ವಶದಿಂದ ಹೊರಬಂದ ತರುವಾಯ ದೂರು ಬರೆಸಿಕೊಂಡಿದ್ದೀರಿ. ಇದು ಹೇಡಿತನ, ವಂಚಕತನ. ಟೋಲ್ ತೆರವಿನವರೆಗೂ ಹೋರಾಟ ಮುಂದುವರಿಯುತ್ತದೆ” ಎಂದು ಎಚ್ಚರಿಸಿದ್ದಾರೆ.
ಎರಡು ಪ್ರತ್ಯೇಕ ಎಫ್‌ಐಆರ್ ಬಗ್ಗೆ ಪ್ರತಿಕ್ರಿಯಿಸಿರುವ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಮುಖಂಡ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ,“ಟೋಲ್‌ಗೇಟ್ ಹೂರಾಟಗಾರರ ವಿರುದ್ಧ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. 20 ರಿಂದ 25 ಮಂದಿ ರಸ್ತೆ ತಡೆ ಮಾಡಿದ್ದಾರೆ ಎಂಬ ಆರೋಪ. ಯಾರದೇ ಹೆಸರು ನೀಡಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ದೂರಿನ ವಿರುದ್ಧ ಕಾನೂನಾತ್ಮಕ ಮತ್ತು ಹೋರಾಟದ ಕ್ರಮಗಳನ್ನು ಹೋರಾಟ ಸಮಿತಿ ಕೈಗೊಳ್ಳುತ್ತದೆ” ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸಂಗಾತಿಗಳೇ, ನಾವು ಆಸ್ತಿ ಸಂಬಂಧಗಳ ಕುರಿತು ಮಾತನಾಡೋಣ : ಬರ್ಟೋಲ್ಟ್ ಬ್ರೆಕ್ಟ್
ಈ ನಡುವೆ ಹೋರಾಟ ಸಮಿತಿಯು ಅಕ್ಟೋಬರ್ 28 ರಿಂದ ಟೋಲ್‌ಗೇಟ್ ವಿರೋಧಿ ಹೋರಾಟವನ್ನು ಮತ್ತಷ್ಟು ಬಲಗೊಳಿಸಲು ತೀರ್ಮಾನಿಸಿದ್ದು, ಟೋಲ್‌ಗೇಟ್ ತೆರವುಗೊಳ್ಳುವವರೆಗೆ ನಿರಂತರ ಹಗಲು-ರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.


