Homeಮುಖಪುಟಭರವಸೆಯ ಬೆಳಕಿನತ್ತ 2021 - ಆ ಆಶಾದಾಯಕ ವಿದ್ಯಮಾನಗಳು ಯಾವುವು?

ಭರವಸೆಯ ಬೆಳಕಿನತ್ತ 2021 – ಆ ಆಶಾದಾಯಕ ವಿದ್ಯಮಾನಗಳು ಯಾವುವು?

ತನ್ನ ಪಕ್ಷಕ್ಕೆ ದೇಣಿಗೆ ನೀಡುವ ಕಾರ್ಪೊರೆಟ್ ಧಣಿಗಳ ಋಣ ಹೇಗೆ ತೀರಿಸುವುದು? ಜನರ ಸಂಪತ್ತನ್ನು ಕಸಿದು ತನ್ನ ಕಾರ್ಪೊರೆಟ್ ಧಣಿಗಳಿಗೆ ನೀಡುವುದು. ಕೊರೊನಾ ಸಮಯದಲ್ಲಿ ಹಿಂಬಾಗಿಲಿನಿಂದ ತಂದ ಮೂರು ಕೃಷಿ ತಿದ್ದುಪಡಿಗಳು ಇಂತಹ ಕಾರಣಕ್ಕಾಗಿಯೇ ಇರುವಂತವು. ಎಪಿಎಂಸಿ, ಕಾರ್ಪೊರೆಟ್ ಕಾಂಟ್ರಾಕ್ಟ್ ಕೃಷಿ ತಿದ್ದುಪಡಿ, ಕನಿಷ್ಠ ಮಾರಾಟ ಬೆಲೆ ಸಂಬಂಧಿತ ತಿದ್ದುಪಡಿಗಳು ಇವು. ಬಹುತೇಕವಾಗಿ ಪಂಜಾಬ್, ಹರಿಯಾಣ ಮತ್ತು ಕೇರಳದ ರೈತರು ಈ ಕಾನೂನುಗಳ ವಿರುದ್ಧ ಧ್ವನಿ ಎತ್ತಿದರು ನಂತರ ದೇಶಾದ್ಯಂತ ರೈತರು ಈ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

- Advertisement -

2021 ಪ್ರಾರಂಭವಾಗುತ್ತಿದ್ದಂತೆ ನಮ್ಮ ಮುಂದೆ ಸಾವಿರಾರು ಪ್ರಶ್ನೆಗಳು ಹುಟ್ಟಿವೆ. ಪ್ರಪಂಚದಾದ್ಯಂತ 2020ರಲ್ಲಿ ಬಹುತೇಕವಾಗಿ ಕೋವಿಡ್ ಭಯ, ಆತಂಕ ಮತ್ತು ಅನಿಶ್ಚಿತತೆಯಿಂದ ತತ್ತರಿಸುತ್ತಿದ್ದ ಜನಕ್ಕೆ 2021 ಹೊಸ ಭರವಸೆಗಳನ್ನು ಹುಟ್ಟಿಸಿದೆ. ಹಿನ್ನೋಟ ಮತ್ತು ಮುನ್ನೋಟದಲ್ಲಿ ಫ್ಯಾಸಿವಾದದ ಕಾರ್ಮೋಡಗಳು ಇರುಳಿನ ಹಾಗೆ ಆವರಿಸಿದ್ದರೂ ಅದನ್ನು ಎದುರಿಸುವ ಹೊಸ ಬೆಳಕಿನ ಕಿರಣಗಳು ಗೋಚರಿಸತೊಡಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ, ಉಸಿರುಗಟ್ಟಿಸುವ ಮಾಸ್ಕ್ ಮತ್ತು ಮುಖವಾಡಗಳಿಂದ ಮುಕ್ತಿ ನೀಡಲೋ ಎಂಬಂತೆ ದಾಖಲೆ ಸಮಯದಲ್ಲಿ ಲಸಿಕೆಯತ್ತ ಸಾಗುತ್ತಿರುವ ವೈಜ್ಞಾನಿಕ ವಿದ್ಯಮಾನ, ಕೇಂದ್ರ ಸರ್ಕಾರದ ಸರ್ವಾಧಿಕಾರಿ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಶಾಂತಿಯುತ ದಂಗೆಯೆದ್ದ ಭಾರತೀಯ ರೈತರು ನಮ್ಮೆಲ್ಲರ ಆತ್ಮಸ್ಥೈರ್ಯವನ್ನು, ಹೋಗಬೇಕಿರುವ ದಿಕ್ಕನ್ನು ತೋರಿಸಿಕೊಡುತ್ತಿದ್ದಾರೆ.

ಟ್ರಂಪ್ ಚುನಾವಣಾ ಸೋಲು..

PC : Macleans.ca

ಮೊದಲನೆಯದಾಗಿ, ’ಊರಿಗೆ ಒಂದು ದಾರಿ ಎಂದರೆ ಎಡವಟ್ಟನಿಗೆ ಮತ್ತೊಂದು ದಾರಿ’ ಎಂಬಂತೆ ಉಂಡಾಡಿ ಗುಂಡನಂತಿದ್ದ ಡೊನಾಲ್ಡ್ ಟ್ರಂಪ್‌ನ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು, ಪ್ರಪಂಚದ ಪ್ರಜಾಪ್ರಭುತ್ವದ ಹಾದಿಗೆ ಕೊಂಚ ಮಟ್ಟವಾದರೂ ಸಹಕಾರಿಯೇ. ಅಧಿಕಾರಕ್ಕೆ ಬಂದ ತಕ್ಷಣವೇ ತನ್ನದೇ ದೇಶದ ಹಿಂದಿನ ಅಣು ಒಪ್ಪಂದವನ್ನು ಗಾಳಿಗೆ ತೂರಿ ಇರಾನ್ ವಿರುದ್ಧ ಅತ್ಯಂತ ಕಠಿಣ ನಿರ್ಬಂಧಗಳನ್ನು ಹೇರಿದಾತ ಟ್ರಂಪ್. ಇರಾನಿನಿಂದ ತೈಲ ಖರೀದಿ ಮಾಡುತ್ತಿದ್ದ ಭಾರತವನ್ನು ಸೇರಿ ಬೇರೆ ಬೇರೆ ದೇಶಗಳಿಗೆ ನಿರ್ಬಂಧಗಳ ಬೆದರಿಕೆಯೊಡ್ಡಿ ತೈಲ ಆಮದನ್ನು ನಿಲ್ಲಿಸಿದಾತ. ಇರಾನ್ ವಿರುದ್ಧ ಯುದ್ಧ ಮಾಡಲು ಹವಣಿಸುತ್ತಿರುವ ಇಸ್ರೇಲ್ ಜೊತೆಗೂಡಿ, ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪ್ಪಾದಕ ಸಂಘಟನೆಯ ನಿರ್ಮೂಲನೆಗೆ ಕಾರಣಕರ್ತನಾಗಿದ್ದ ಇರಾನಿನ ಕಮ್ಯಾಂಡರ್ ಜನರಲ್ ಖಾಸೆಮ್ ಸೊಲೈಮಾನಿಯನ್ನು ಅಂತಾರಾಷ್ಟ್ರೀಯ ಕಾನೂನುಗಳಿಗೂ ಕ್ಯಾರೇ ಅನ್ನದೆ, ಜನವರಿ 3 2020ರಂದು ಇರಾಕಿನ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಡ್ರೋನ್ ಸ್ಟ್ರೈಕ್ ಮೂಲಕ ಹತ್ಯೆಗೈದು ಐತಿಹಾಸಿಕ ಅಪರಾಧವೆಸಗಿದ ಆರೋಪ ಆತನ ಮೇಲಿದೆ. ಚೀನಾ ವಿರುದ್ಧ ವಾಣಿಜ್ಯ ಯುದ್ಧ ಸಾರಿ ಜಾಗತಿಕ ವಹಿವಾಟು ಮತ್ತು ಜಿಡಿಪಿಯನ್ನು ಕುಸಿಯುವಂತೆ ಮಾಡಿದಾತ.

ಅಮೆರಿಕದಂತಹ ಪ್ರಭಾವಶಾಲಿ ಬಂಡವಾಳಶಾಹಿ ಸಾಮ್ರಾಜ್ಯಶಾಹಿ ಶಕ್ತಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಅತಿ ಹೆಚ್ಚು ಸಾವಿನ ಸಂಖ್ಯೆ ಕಂಡದ್ದು ಟ್ರಂಪ್ ಆಡಳಿತದಲ್ಲೇ. ಈಗಲೂ ಟ್ರಂಪ್ ಬೆಂಬಲಿಗರು ಮಾಸ್ಕ್ ಧರಿಸದೇ, ಚೀನಾವನ್ನು ದೂರುತ್ತಾ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಅಮೆರಿಕದ ಜನರನ್ನು ಅಪಾಯದಂಚಿಗೆ ತಳ್ಳುತ್ತಿದ್ದಾರೆ. ತನ್ನ ಅಬ್ಬರದ ಪ್ರಚಾರದ ನಡುವೆ, ’ಹೌಡಿ ಮೋದಿ’, ’ನಮಸ್ತೆ ಟ್ರಂಪ್ ಕಾರ್ಯಕ್ರಮಗಳ ಹೊರತಾಗಿಯೂ ನವೆಂಬರ್‌ನಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ವಿರುದ್ಧ ಸೋತು ಕೊನೆಗೆ ಜನವರಿ 20, 2021 ಅಧಿಕಾರ ಹಸ್ತಾಂತರ ಮಾಡಬೇಕಿದೆ. ಜೋ ಬಿಡೆನ್ ಯಾವುದೇ ಪ್ರಗತಿಪರ ಚಿಂತನೆಯುಳ್ಳವನಲ್ಲವಾಗಿದ್ದರು ಟ್ರಂಪ್ ಅಧಿಕಾರ ಅವನನ್ನು ಗೆಲ್ಲಿಸುವಂತೆ ಮಾಡಿತು. ಐತಿಹಾಸಿಕ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಅಮೆರಿಕದ ಅಲ್ಪಸಂಖ್ಯಾತರು, ಕಪ್ಪು ವರ್ಣೀಯರು, ಲ್ಯಾಟಿನ್ ಅಮೆರಿಕನ್ನರು, ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಪ್ರಗತಿಪರರು ಟ್ರಂಪ್ ಒಡೆದಾಳುವ ನೀತಿಯನ್ನು ತಿರಸ್ಕರಿಸಿ ಅವನನ್ನು ಸೋಲಿಸಿದರು. ಈ ಸೋಲಿನ ಪ್ರತಿಧ್ವನಿ ಪ್ರಪಂಚಾದ್ಯಂತ ಅಣಬೆಯಂತೆ ಎದ್ದು ನಿಂತಿರುವ ಸರ್ವಾಧಿಕಾರಗಳಿಗೆ ಸ್ವಲ್ಪ ಮಟ್ಟಿಗಾದರೂ ಹಿಮ್ಮೆಟ್ಟುವುದಕ್ಕೆ ಸಹಕಾರಿಯಾಗುತ್ತದೆ.

ಮಾಸ್ಕ್‌ಗಳಿಂದ ಲಸಿಕೆಯೆಡೆಗೆ..

2019 ಡಿಸೆಂಬರ್ ತಿಂಗಳು ಮತ್ತು 2020ರ ಪ್ರಾರಂಭದಲ್ಲಿ, ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಭುಗಿಲೆದ್ದ ಪ್ರತಿಭಟನೆಗಳಿಗೆ ಮೋದಿ ಸರ್ಕಾರ ಪ್ರಪ್ರಥಮ ಬಾರಿಗೆ ದೊಡ್ಡ ಪ್ರಮಾಣದ ಪ್ರತಿರೋಧವನ್ನು ಎದುರಿಸಬೇಕಾಯಿತು. ಪ್ರಜಾಪ್ರಭುತ್ವದ ತತ್ವಗಳನ್ನು ಬರಿ ಭಾಷಣದ ಸರಕನ್ನಾಗಿಸಿ ಒಂದರ ನಂತರ ಮತ್ತೊಂದು ದಮನಕಾರಿ ನೀತಿಗಳನ್ನು ಜನರ ಮೇಲೆ ಹೇರಲು ಹೊರಟಿದ್ದ ಮೋದಿ ಸರ್ಕಾರಕ್ಕೆ ವಿದ್ಯಾರ್ಥಿಗಳು ಪ್ರತಿರೋಧ ಒಡ್ಡಿದರು. ಜಾಮಿಯಾ, ಎಎಂಯು ಮತ್ತು ಜೆಎನ್‌ಯು ಮೇಲೆ ಸ್ವತಃ ಪ್ರಭುತ್ವವೇ ದಾಳಿ ಮಾಡಿತು. ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು ಪ್ರಭುತ್ವಕ್ಕೆ ನುಂಗಲಾರದ ತುತ್ತಾಗಿತ್ತು. ಇದೆ ಸಂದರ್ಭದಲ್ಲಿ, ಜಾಗತಿಕವಾಗಿ ಹರಡುತ್ತಿದ್ದ ಕೊರೊನಾ ಸಾಂಕ್ರಾಮಿಕವನ್ನು ನಿರ್ಲಕ್ಷಿಸಿ ಗುಜರಾತಿನ ಅಹಮದಾಬಾದಿನಲ್ಲಿ ’ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಸಲಾಯಿತು.

ಈಶಾನ್ಯ ದೆಹಲಿಯಲ್ಲಿ ಕೋಮು ಗಲಭೆಗೆ ತಾವೇ ಪ್ರಚೋದಿಸಿ, ನಡೆಸಿ ಕೊನೆಗೆ ಕೋಮು ಪ್ರಚೋದನೆ ಭಾಷಣವನ್ನು ಮಾಡಿದವರನ್ನು ಬಿಟ್ಟು ಗಲಭೆಯಲ್ಲಿ ಪ್ರಾಣ, ಮನೆ, ಅಂಗಡಿ, ವ್ಯಾಪಾರ ಕಳೆದುಕೊಂಡವರನ್ನೇ ಆರೋಪಿಗಳನ್ನಾಗಿ ಮಾಡಲಾಯಿತು. ಸಾಂಕ್ರಾಮಿಕ ರೋಗ ಹರಡುತ್ತಿದ್ದಂತೆ ಯಾವುದೇ ತಯ್ಯಾರಿ ಇಲ್ಲದ ಅವೈಜ್ಞಾನಿಕ ಲಾಕ್‌ಡೌನ್‌ಅನ್ನು ಮಾರ್ಚ್ 24ರಂದು ಘೋಷಿಸಲಾಯಿತು. ಅಸಂಖ್ಯಾತ ಅಸಂಘಟಿತ ಕಾರ್ಮಿಕರನ್ನು ಬೀದಿಗೆ ತಳ್ಳಲಾಯಿತು. ಈ ನಡುವೆಯೇ ಕೊರೊನಾ ಸಂಖ್ಯೆ ಹೆಚ್ಚುತ್ತಿದ್ದಂತೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ದೇಶಾದ್ಯಂತ ತಟ್ಟೆ ಬಾರಿಸಲು, ದೀಪ ಹಚ್ಚಲು ಕರೆ ನೀಡಲಾಯಿತು. ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ ಕಾರ್ಮಿಕರು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಸಾಮಾನ್ಯ ಜನರು ತತ್ತರಿಸಿದರು. ಇದರ ಹಿನ್ನೆಲೆಯಲ್ಲಿ ಜೂನ್ ತಿಂಗಳ ಮೊದಲ ವಾರದಲ್ಲಿ ಕಾರ್ಪೊರೆಟ್ ಪೂರಕವಾದ ದೇಶದ ಮೂರು ಪ್ರಮುಖ ಕೃಷಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಗಳನ್ನು ಸದ್ದಿಲ್ಲದೆ ತರಲಾಯಿತು.

PC : Daily Mail

ಮಾಸ್ಕ್ ಹಾಕುವುದರಿಂದ ಹಿಡಿದು ಜನರು ತಮ್ಮ ತಮ್ಮ ಮನೆಗಳಲ್ಲೇ ಬಂಧಿಯಾದರು. ಸಂಚಾರಿ ವ್ಯವಸ್ಥೆ ಸಂಪೂರ್ಣವಾಗಿ ನಿಲ್ಲಿಸಲಾಯಿತು. ಕೊನೆಗೂ ಈ ಸಾಂಕ್ರಾಮಿಕ ರೋಗಕ್ಕೆ ಈಗ ದಾಖಲೆ ಸಮಯದಲ್ಲಿ ಲಸಿಕೆ ಕಂಡುಹಿಡಿಯಲಾಗಿದೆ. ಮೊದಲು ಚೀನಾ ಮತ್ತು ರಶಿಯಾ ದೇಶಗಳು ಲಸಿಕೆಯನ್ನು ಘೋಷಿಸಿದರು, ನಂತರ ಮಾಡೆರ್ನ ಮತ್ತು ಫೈಜ್ಹರ್ ಕಂಪನಿಗಳು ಲಸಿಕೆ ಘೋಷಿಸಿದವು. ಅಮೆರಿಕ, ಇಂಗ್ಲೆಂಡ್, ರಶಿಯಾ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಈಗಾಗಲೇ ಜನರಿಗೆ ಲಸಿಕೆ ಕೊಡುವುದನ್ನು ಶುರು ಮಾಡಿದ್ದಾರೆ. ಭಾರತ ಕೂಡ ಲಸಿಕೆ ಹಾಕಲು ಅನುಮತಿ ಪಡೆದಾಗಿದೆ ಮತ್ತದರ ಸಿದ್ಧತೆಗಳ ಡ್ರೈರನ್ ನೆಡೆಸಲಾಗುತ್ತಿದೆ. ಎಲ್ಲವೂ ಸರಿಯಾದ ರೀತಿಯಲ್ಲಿ ನೆಡೆದರೆ 2021ರ ಮಧ್ಯ ಭಾಗದ ಹೊತ್ತಿಗೆ ಕೊರೊನಾ ಇಳಿಮುಖವಾಗುತ್ತದೆ. ಮಾಸ್ಕ್ ಧರಿಸುವಿಕೆ ಈಗಲೂ ಕಡ್ಡಾಯವಿದ್ದರೂ ಮುಂದಿನ ದಿನಗಳಲ್ಲಿ ಮಾಸ್ಕ್ ಧರಿಸುವುದು ಇಳಿಮುಖವಾಗುತ್ತದೆ. ಜನ ಕಳೆದ ವರ್ಷಕ್ಕಿಂತ ಈ ವರ್ಷ ತಮ್ಮ ಹಳೆಯ ಜೀವನಕ್ಕೆ ಹಿಂದಿರುಗುತ್ತಾರೆ.

ಐತಿಹಾಸಿಕ ದೆಹಲಿ ಪ್ರತಿಭಟನೆಗಳು..

ತನ್ನ ಪಕ್ಷಕ್ಕೆ ದೇಣಿಗೆ ನೀಡುವ ಕಾರ್ಪೊರೆಟ್ ಧಣಿಗಳ ಋಣ ಹೇಗೆ ತೀರಿಸುವುದು? ಜನರ ಸಂಪತ್ತನ್ನು ಕಸಿದು ತನ್ನ ಕಾರ್ಪೊರೆಟ್ ಧಣಿಗಳಿಗೆ ನೀಡುವುದು. ಕೊರೊನಾ ಸಮಯದಲ್ಲಿ ಹಿಂಬಾಗಿಲಿನಿಂದ ತಂದ ಮೂರು ಕೃಷಿ ತಿದ್ದುಪಡಿಗಳು ಇಂತಹ ಕಾರಣಕ್ಕಾಗಿಯೇ ಇರುವಂತವು. ಎಪಿಎಂಸಿ, ಕಾರ್ಪೊರೆಟ್ ಕಾಂಟ್ರಾಕ್ಟ್ ಕೃಷಿ ತಿದ್ದುಪಡಿ, ಕನಿಷ್ಠ ಮಾರಾಟ ಬೆಲೆ ಸಂಬಂಧಿತ ತಿದ್ದುಪಡಿಗಳು ಇವು. ಬಹುತೇಕವಾಗಿ ಪಂಜಾಬ್, ಹರಿಯಾಣ ಮತ್ತು ಕೇರಳದ ರೈತರು ಈ ಕಾನೂನುಗಳ ವಿರುದ್ಧ ಧ್ವನಿ ಎತ್ತಿದರು ನಂತರ ದೇಶಾದ್ಯಂತ ರೈತರು ಈ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಕಾರ್ಪೊರೆಟ್ ಪರ ಕಾನೂನುಗಳು ರೈತನನ್ನು ಉತ್ಪಾದಿಸುವ ಶಕ್ತಿಯನ್ನು ಕಡಿಮೆ ಮಾಡುವ ಮತ್ತು ಕಾರ್ಪೊರೆಟ್‌ಗಳ ಲಾಭವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ ಎಂದು ಅವರು ಪ್ರತಿಭಟಿಸಿದರು. ಜೂನ್‌ನಿಂದ ಅವರು ಎಲ್ಲಾ ಮೂರು ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳಲು ಪ್ರತಿಭಟಿಸುತ್ತಿದ್ದಾರೆ.

ವಿದ್ಯುತ್ ಖಾಸಗೀಕರಣಕ್ಕೆ ಸಂಬಂಧಿಸಿದ ಹೊಸ ಮಸೂದೆಯನ್ನು ತರುವುದನ್ನು ನಿಲ್ಲಿಸಿ ಮತ್ತು ಕನಿಷ್ಠ ಮಾರಾಟದ ಬೆಲೆಯನ್ನು ಕಾನೂನುಬದ್ಧವಾಗಿ ಖಾತರಿಪಡಿಸಿ ಎಂದು ಆಗ್ರಹಿಸುತ್ತಿದ್ದಾರೆ. ತಿಂಗಳುಗಳ ಪ್ರತಿಭಟನೆಯ ನಂತರ ಅವರು ದೆಹಲಿಗೆ ಮೆರವಣಿಗೆ ನಡೆಸಿದ್ದಾರೆ ಮತ್ತು ಪ್ರಸ್ತುತ ದೆಹಲಿಯ 7 ಪ್ರವೇಶದ್ವಾರಗಳಲ್ಲಿ ಬೀಡುಬಿಟ್ಟಿದ್ದಾರೆ. ಈ ಕಾನೂನುಗಳ ವಿರುದ್ಧ ಲಕ್ಷಾಂತರ ರೈತರು ದೆಹಲಿಯ 1 ಡಿಗ್ರಿ ಕಠಿಣ ಚಳಿಯನ್ನು ಲೆಕ್ಕಿಸದೆ ಪ್ರತಿಭಟಿಸುತ್ತಿದ್ದಾರೆ ಮತ್ತು ಹತ್ತಾರು ರೈತರು ಹುತಾತ್ಮರಾಗಿದ್ದಾರೆ. ಏಳು ಸುತ್ತಿನ ಮಾತುಕತೆಗಳ ನಂತರವೂ ಸರ್ಕಾರ ಅದೇ ರಾಗವನ್ನು ಹಾಡುತ್ತಿದೆ. ರೈತರನ್ನು ಪ್ರತಿಪಕ್ಷಗಳು ದಿಕ್ಕು ತಪ್ಪಿಸುತ್ತಿದ್ದಾರೆ, ರೈತರು ಖಲಿಸ್ತಾನಿಗಳು, ರೈತರು ನಕ್ಸಲರು ಎಂದು ದಿನೇ ದಿನೆ ಹೊಸ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇವೆಲ್ಲದರ ನಡುವೆ ರೈತರು ತಮ್ಮ ಬೇಡಿಕೆ ಈಡೇರವವರೆಗೂ ತಾವು ಆ ಜಾಗದಿಂದ ಕದಲುವುದಿಲ್ಲ ಮತ್ತು ಗಣತಂತ್ರದ ದಿವಸ ತಾವು ಪರ್ಯಾಯ ಗಣತಂತ್ರವನ್ನು ಟ್ರ್ಯಾಕ್ಟರ್ ರ್‍ಯಾಲಿ ಮೂಲಕ ಆಚರಿಸುತ್ತೇವೆ ಎಂದು ಘೋಷಿಸಿದ್ದಾರೆ. ಎಷ್ಟೇ ದೊಡ್ಡ ನಿರಂಕುಶ ಅಧಿಕಾರ ವ್ಯವಸ್ಥೆ ಇರಲಿ, ಪ್ರಜಾಪ್ರಭುತ್ವದ ಅಡಿಪಾಯ ಪ್ರತಿಭಟನೆ ಎಂಬುದನ್ನು ಸರ್ಕಾರಕ್ಕೆ, ಪ್ರತಿಪಕ್ಷಗಳಿಗೆ ಮತ್ತು ಪ್ರಪಂಚಕ್ಕೆ ರೈತರು ಸಾರಿ ಹೇಳುತ್ತಿದ್ದಾರೆ. ಬದಲಾವಣೆಯ ಗಾಳಿ ಪ್ರಪಂಚಾದ್ಯಂತ ಬೀಸುತ್ತಿದರೂ ಭಾರತದ ಈ ಪ್ರತಿಭಟನೆ ಪ್ರಪಂಚದಲ್ಲೇ ದೊಡ್ಡದು. ಗಣತಂತ್ರಕ್ಕೂ ಮುಂಚೆ ಮೋದಿ ಸರ್ಕಾರ ಈ ಕಾರ್ಪೊರೆಟ್ ಪರ ನೀತಿಗಳನ್ನು ಹಿಂಪಡೆಯದಿದ್ದರೆ ಈ ಗಣತಂತ್ರ ಭಾರತದ ಪ್ರಜಾಪ್ರಭುತ್ವಕ್ಕೆ ಹೊಸ ಸ್ವರೂಪವನ್ನು ಕೊಡುತ್ತದೆ ಎಂಬ ಭರವಸೆಯಂತೂ ಇದೆ. ’ನಮಸ್ತೆ’ ಟ್ರಂಪ್ ನಂತರ ಭಾರತದ ಪ್ರಜ್ಞಾವಂತರು ’ನಮಸ್ತೆ’ ಮೋದಿ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇವೆಲ್ಲದರ ನಡುವೆ ವಿಕಿಲೀಕ್ಸ್ ಸಂಸ್ಥಾಪಕ, ಜೂಲಿಯನ್ ಅಸಾಂಜ್ ಎಂಬ ಅಸಾಧಾರಣ ಪತ್ರಕರ್ತನ ಅಮೆರಿಕ ಹಸ್ತಾಂತರವನ್ನು ಇಂಗ್ಲೆಂಡ್ ನ್ಯಾಯಾಲಯ ತಿರಸ್ಕರಿಸಿದೆ. ಅಮೆರಿಕ ಮಾಡಿದ ಯುದ್ಧ ಕ್ರೌರ್ಯವನ್ನು ಪ್ರಪಂಚಕ್ಕೆ ಸಾಕ್ಷಿ ಸಮೇತ ತಿಳಿಸಿದ ಅಸಾಂಜ್ ಈಗಲೂ ಇಂಗ್ಲೆಂಡಿನ ಕುಖ್ಯಾತ ಸೆರೆಮನೆಯಲ್ಲಿ ಬಂಧಿಯಾಗಿದ್ದರೆ.

ಪ್ರಜಾಪ್ರಭುತ್ವವನ್ನು ಬಯಸುವ, ಸಮಾನತೆ, ಸೋದರತೆ ಬಯಸುವ ಎಲ್ಲ ಮನಸ್ಸುಗಳು ನಮ್ಮ ನಾಡಿನ ರೈತರ ಆಶಯಗಳನ್ನು ಈಡೇರಿಸಲು ಪಣ ತೊಡೋಣ ಮತ್ತು ಪ್ರಜಾಪ್ರಭುತ್ವಕ್ಕಾಗಿ ಧ್ವನಿ ಕೊಟ್ಟು ಈಗ ಬಂಧನದಲ್ಲಿರುವ ಸುರೇಂದ್ರ ಗಾಡಲಿಂಗ್, ಸುಧೀರ್ ಧಾವಲೆ, ರೋಣ ವಿಲ್ಸನ್, ಶೋಮಾ ಸೆನ್, ಮಹೇಶ್ ರಾವುತ್, ಸುಧಾ ಭಾರದ್ವಾಜ್, ವರವರ ರಾವ್, ಗೌತಮ್ ನವ್ಲಖ, ವೆರ್ನೊನ್ ಗೋನ್ಸಾಲ್ವೇಸ್, ಆನಂದ್ ತೇಲ್ತುಂಬ್ಡೆ ಮತ್ತು ಸ್ಟಾನ್ ಸ್ವಾಮಿ ಮತ್ತು ಜೂಲಿಯನ್ ಅಸಾಂಜ್ ಪರ ನಿಲ್ಲೋಣ ಮತ್ತು ಅವರ ಮೇಲಿನ ಪ್ರಭುತ್ವದ ದಾಳಿಯನ್ನು ಖಂಡಿಸಿ ಅವರ ಶೀಘ್ರ ಬಿಡುಗಡೆಗೆ ಒತ್ತಾಯಿಸೋಣ.


ಇದನ್ನೂ ಓದಿ: ಪ್ರಯೋಗ ಪೂರೈಸದ ಲಸಿಕೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆಯೆ?: ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರ್‌ಟಿಐ ಕಾರ್ಯಕರ್ತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial