ಶನಿವಾರ ಮಧ್ಯರಾತ್ರಿಯಲ್ಲಿ ಜಮ್ಮು ವಿಮಾನ ನಿಲ್ಧಾಣದ ಮೇಲೆ ಡ್ರೋಣ್ ದಾಳಿಯ ನಂತರ ಜಮ್ಮುವಿನಲ್ಲಿ ಸತತವಾಗಿ ಡ್ರೊಣ್‌ಗಳು ಪತ್ತೆಯಾಗುತ್ತಿವೆ. ಅನಧಿಕೃತವಾಗಿ ಹಾರಾಡುತ್ತಿರುವ ಡ್ರೊಣ್‌ಗಳು ಭದ್ರತಾಪಡೆಗಳ ನೆಲೆಗಳ ಸಮೀಪವೇ ಕಾಣಿಸಿಕೊಳ್ಳುತ್ತಿವೆ. ನಿನ್ನ ರಾತ್ರಿ ಜಮ್ಮು ಹೊರವಲಯದಲ್ಲಿ ಮತ್ತೆ ಮೂರು ಡ್ರೋಣ್‌ಗಳು ಪತ್ತೆಯಾಗಿವೆ ಎಂದು ಭದ್ರತಾಪಡೆಗಳು ತಿಳಿಸಿವೆ.
ನಿನ್ನೆ ರಾತ್ರಿ 9:23 ಗಂಟೆಗೆ ಜಮ್ಮುವಿನ ಮಿರಾನ್ ಸಾಹೇಬ್ ಪ್ರದೇಶದಲ್ಲಿ ಡ್ರೋಣ್ ಒಂದು ಪತ್ತೆಯಾಗಿದ್ದರೆ ಇಂದು ಬೆಳಗಿನ ಜಾವ 4:40 ಗಂಟೆಗೆ ಕಾಲುಚುಕ್ ಮತ್ತು ಕುಂಜ್ವಾನಿ ಪ್ರದೇಶದಲ್ಲಿ ಮತ್ತೆರಡು ಡ್ರೋಣ್‌ಗಳು ಪತ್ತೆಯಾಗಿವೆ.
ಜಮ್ಮು ವಿಮಾನ ನಿಲ್ಧಾಣದ ಮೇಲಿನ ದಾಳಿ ನಂತರ ಪ್ರತಿನಿತ್ಯ ಡ್ರೋಣ್‌ಗಳು ಕಾಣಿಸಿಕೊಳ್ಳುತ್ತಿದ್ದು ಭಾರತದ ಭದ್ರತಾ ವ್ಯವಸ್ಥೆಗೆ ತೀವ್ರ ಆತಂಕವನ್ನು ತಂದೊಡ್ಡಿವೆ. ಮಂಗಳವಾರ ಮುಂಜಾನೆ ರತ್ನುಚಕ್, ಕಾಲುಚಕ್ ಮತ್ತು ಕುಂಜ್ವಾನಿ ಪ್ರದೇಶಗಳಲ್ಲಿ ಡ್ರೋಣ್ ಹಾರಾಟ ಕಂಡು ಬಂದಿದ್ದರೆ ಸೋಮವಾರ ಕೂಡ ಜಮ್ಮುವಿನ ಕಾಲುಚಕ್ ಸೇನಾ ನೆಲೆಯ ಸಮೀಪ ಡ್ರೊಣ್‌ಗಳು ಹಾರಾಟ ನಡೆಸಿದ್ದವು.
ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆ ಮತ್ತು ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಲಷ್ಕರೆ ತೋಯ್ಬಾ ಕಮ್ಯಾಂಡರ್ ಎಂದು ಗುರುತಿಸಲಾದ ಶಂಕಿತ ಉಗ್ರ ನದೀಮ್ ಅಬ್ರಾರ್ ಎಂಬುವವನ್ನು ಸೋಮವಾರ ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಮಂಗಳವಾರ ಪೊಲೀಸರು ಮತ್ತು ಉಗ್ರರ ನಡುವಿನ ದಾಳಿಯಲ್ಲಿ ನದೀಮ್ ಅಬ್ರಾರ್ ಮೃತಪಟ್ಟಿದ್ದಾನೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಗಡಿಯಾಚೆಗಿನ ಶಕ್ತಿಗಳು ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಡ್ರೋಣ್‌ಗಳನ್ನು ಬಳಸಿಕೊಳ್ಳುತ್ತಿವೆ. ಜಗತ್ತಿನ ಭದ್ರತಾ ವ್ಯವಸ್ಥೆಗೆ ಹೊದಸ ಮಾದರಿಯ ಡ್ರೋಣ್ ದಾಳಿಗಳು ಅತ್ಯಂತ ಅಪಾಯಕಾರಿ ಆಗಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನದ ಮೇಲೆ ಭಾರತ ಆರೋಪಿಸಿದೆ.
ರಾಷ್ಟ್ರೀಯ ತನಿಖಾ ದಳ (NIA) ಜಮ್ಮು ವಿಮಾನ ನಿಲ್ಧಾಣದ ಮೇಲಿನ ಡ್ರೋಣ್ ದಾಳಿಯ ಕುರಿತಾಗಿ ತನಿಖೆ ನಡೆಸುತ್ತಿದ್ದು ಶನಿವಾರದ ಭಯೋತ್ಪಾದಕ ದಾಳಿಯ ಹಿಂದೆ ಲಷ್ಕರ್-ಎ-ತೈಬಾ ಸಂಘಟನೆಯ ಕೈವಾಡವನ್ನು ಶಂಕಿಸಲಾಗಿದೆ ಎಂದು ಭದ್ರತಾಪಡೆಯ ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರದ ಡಿಸಿಪಿ ದಿಲ್ಬಾಗ್ ಸಿಂಗ್ ಕೂಡ ಜಮ್ಮು ಡ್ರೋಣ್ ದಾಳಿಯ ಹಿಂದೆ ಲಷ್ಕರ್ ಕೈವಾಡವಿರುವ ಕುರಿತು ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ ಎಂದಿದ್ದಾರೆ.
ಕಳೆದವಾರ ಭಾರತ ಪಾಕಿಸ್ತಾನದೊಂದಿಗೆ ವಿದೇಶಾಂಗ ಸಂಬಂಧವನ್ನು ಸುಧಾರಿಸಿಕೊಳ್ಳಲು ಬಯಸುತ್ತದೆ ಎಂದು ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಅರಿಂದಾಮ್ ಬಗ್ಚಿ ಹೇಳಿದ್ದರು .ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪಾಕಿಸ್ತಾನದ ಐಎಸ್‌ಐ ಮುಖ್ಯಸ್ಥ ಜನರಲ್ ಫೈಜ್ ಹಮೀದ್ ನಡುವೆ ಕಳೆದ ಡಿಸೆಂಬರ್‌ನಲ್ಲಿ ಯುಎಇಯಲ್ಲಿ , ಕಾಶ್ಮೀರ ಗಡಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕುರಿತಾದ ಮಾತುಕತೆ ಕೂಡ ನಡೆದಿದೆ. ಇವೆಲ್ಲ ಬೆಳವಣಿಗೆಗಳ ಫಲವಾಗಿ ಕಳೆದ ಫೆಬ್ರವರಿ 25 ರಂದು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿಗಳು ಕದನ ವಿರಾಮವನ್ನು ಘೋಷಿಸಿವೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸುವ ಲಕ್ಷಣಗಳು ಕಾಣತೊಡಗಿರುವಾಗ ಮತ್ತೆ ಜಮ್ಮ ಗಡಿಯಲ್ಲಿ ಉಂಟಾಗಿರುವ ಉದ್ವಿಘ್ನ ಪರಿಸ್ಥಿತಿ ವಿದೇಶಾಂಗ ನೀತಿಯ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜೂನ್ 24 ರಂದು ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರದ ರಾಜಕೀಯ ನಾಯಕರನ್ನು ಭೇಟಿಯಾಗಿ ಚರ್ಚೆಯನ್ನು ನಡೆಸಿದ್ದರು. ಇದಾದ ಎರಡು ದಿನದಲ್ಲಿ ಕಾಶ್ಮೀರದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭಾರತದ ಭದ್ರತಾ ವ್ಯವಸ್ಥೆಗೆ ಹೊಸ ಹೊಸ ಆತಂಕಗಳು ಎದುರಾಗುತ್ತಿವೆ.
ಇದನ್ನೂ ಓದಿ : ಗೌರಿ ಲಂಕೇಶ್ ಹತ್ಯೆ ಆರೋಪಿಗಳ ವಿರುದ್ಧ KOCCA ಕಾಯ್ದೆ ಕೈಬಿಡದಂತೆ ಸುಪ್ರೀಂ ತಡೆಯಾಜ್ಞೆ


