ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್‌ಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚುತ್ತಿದ್ದು ರಾಜ್ಯದಲ್ಲೂ ಆತಂಕ ಮನೆಮಾಡಿದೆ. ಸಂಭವನೀಯ ಕೊರೊನಾ 3 ನೇ ಅಲೆಯನ್ನು ತಡೆಯಲು ನೈರುತ್ಯ ರೈಲ್ವೆಯು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರಯಾಣಿಸಲು ಕೊರೊನಾ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದೆ.
ಕೊರೊನಾ ಸಾಂಕ್ರಾಮಿಕದ ತೀವ್ರತೆ ದೇಶದಲ್ಲಿ ಇಳಿಮುಖವಾಗಿದ್ದು ದಿನ ನಿತ್ಯದ ಹೊಸ ಪ್ರಕರಣಗಳ ಸಂಖ್ಯೆಯು ಕಡಿಮೆಯಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಸಾಮಾನ್ಯ ಜನಜೀವನ ಆರಂಭವಾಗಿದ್ದು 3-4 ನೇ ಹಂತದ ಅನ್‌ಲಾಕ್ ಪ್ರಕ್ರಿಯೆಗಳು ಚುರುಕುಗೊಂಡಿವೆ.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಆರೋಪಿಗಳ ವಿರುದ್ಧ KOCCA ಕಾಯ್ದೆ ಕೈಬಿಡದಂತೆ ಸುಪ್ರೀಂ ತಡೆಯಾಜ್ಞೆ
ಕರ್ನಾಟಕದಲ್ಲಿ ಕೂಡ ಉದ್ದಿಮೆ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿದ್ದು ಹೊರ ರಾಜ್ಯಗಳಿಂದ ಕರ್ನಾಟಕ ಪ್ರವೇಶಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಬೆಂಗಳೂರಿನ ಮೆಜೆಸ್ಟಿಕ್, ಯಶವಂತಪುರ, ಹುಬ್ಬಳ್ಳಿ ರೈಲು ನಿಲ್ಧಾಣಗಳಲ್ಲಿ ನಿತ್ಯ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದ್ದು ಕೊರೊನಾ ಸುರಕ್ಷಾ ನಿಯಮಗಳ ಪಾಲನೆ ಕಷ್ಟವಾಗಿದೆ.
ಈ ನಡುವೆ ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಾಣಿಸಿಕೊಂಡಿದ್ದು ಬಹುತೇಕ ರಾಜ್ಯಗಳು ಹೈ ಅಲರ್ಟ್ ಘೋಷಿಸಿವೆ. ವೇಗವಾಗಿ ಹರಡುತ್ತಿರುವ ಡೆಲ್ಟಾ ಪ್ಲಸ್ ರೂಪಾಂತರಿಯನ್ನು ತಡೆಯುವ ಕಾರಣದಿಂದ ಮತ್ತು ಸಂಭವನೀಯ ಕೊರೊನಾ 3 ನೇ ಅಲೆಯನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಹೊರ ರಾಜ್ಯದ ಪ್ರಯಾಣಿಕರಿಗೆ ಕಠಿಣ ನಿರ್ಬಂಧ ವಿಧಿಸಿದೆ.
ಮಹಾರಾಷ್ಟ್ರದಿಂದ ಕರ್ನಾಟಕ ಪ್ರವೇಶಿಸುವ ಎಲ್ಲಾ ರೈಲು ಪ್ರಯಾಣಿಕರು 72 ಗಂಟೆಗೆ ಮೀರದ ಕೊರೊನಾ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಕೊರೊನಾ ನೆಗೆಟಿವ್ ವರದಿ ಇಲ್ಲವಾದರೆ ಮೊದಲ್ ಡೋಸ್ ವ್ಯಾಕ್ಸೀನ್ ಪಡೆದಿರುವ ಪ್ರಮಾಣ ಪತ್ರವನ್ನಾದರು ಹೊಂದಿರಬೇಕು. ಕೊರೊನಾ ನೆಗೆಟಿವ್ ವರದಿ ಅಥವಾ ವ್ಯಾಕ್ಸೀನೇಶನ್ ಪ್ರಮಾಣಪತ್ರ ಹೊಂದಿರದಿದ್ದರೆ ರೈಲ್ವೆ ಮೂಲಕ ಕರ್ನಾಟಕ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ನೈರುತ್ಯ ರೈಲ್ವೆ ಅಧಿಕೃತವಾಗಿ ತಿಳಿಸಿದೆ.
ಇದನ್ನೂ ಓದಿ : ಹೋರಾಟ ನಿರತ ರೈತರಿಂದ ದೆಹಲಿಯಲ್ಲಿ ‘ಕಿಸಾನ್ ಮೆಟ್ರೋ’ ಆರಂಭ!