ನಿಮೆಗೆ ತಿಳಿದಿರುವ ಕೆಲವು ಬಾಲವಿರುವ ಪ್ರಾಣಿಗಳನ್ನು ನೆನಪಿಸಿಕೊಳ್ಳಿ. ಅರೆ ಏನಿದು? ಬೆಳ್ಳಿಚುಕ್ಕಿ ಅಂಕಣದಲ್ಲಿ ಬಾಲವಿರುವ ಪ್ರಾಣಿಗಳ ಬಗ್ಗೆ ಏಕೆ ಚರ್ಚೆ ಅಂತಾನಾ? ಇರ್ಲಿ ಪರ್ವಾಗಿಲ್ಲಾ ಒಮ್ಮೆ ಯೋಚಿಸಿ. ಅಬ್ಬಬ್ಬಾ! ನೆನಪಿಗೆ ಬರುವ ಬಹುತೇಕ ಎಲ್ಲ ಪ್ರಾಣಿಗಳಿಗೆ ಬಾಲವಿದೆ ಅಲ್ಲವಾ? ಹೌದು ಸಾಮಾನ್ಯವಾಗಿ ನಮಗೆಲ್ಲರಿಗೆ ತಿಳಿದಿರುವ ಪ್ರಾಣಿಗಳಲ್ಲಿ ಬಾಲವಿದ್ದೇ ಇದೆ. ಮಾನವನಿಗೆ ಈಗ ಬಾಲವಿಲ್ಲ ಆದರೆ ತನ್ನ ಜೀವವಿಕಾಸದ ಹಾದಿಯಲ್ಲಿ ಆತನಿಗೂ ಹಿಂದೊಮ್ಮೆ ಬಾಲ ಇತ್ತು ಎನ್ನುವುದನ್ನು ಗ್ರಹಿಸಲಾಗಿದೆ. ಇರಲಿ ನಾವಿಂದು ಮಾನವನ ಬಾಲದ ಬಗ್ಗೆಯೇನು ಚರ್ಚಿಸುತ್ತಿಲ್ಲ. ಆಕಾಶದಲ್ಲಿ ಕಾಣುವ ಬಾಲಾಂಕೃತ ಅತಿಥಿಗಳು ಇಂದಿನ ನಮ್ಮ ವಿಷಯ. ಬಾಲ ಹೊಂದಿರುವ ಆಕಾಶಕಾಯಗಳನ್ನು ನೀವೆಂದಾದರೂ ನೋಡಿದ್ದೀರಾ?

ಈಗಾಗಲೇ ಕೆಲವರು ಊಹಿಸಿರಬಹುದು, ಬಾಲವಿರುವ ಆಕಾಶಕಾಯ ಅಂದರೆ ಧೂಮಕೇತು ಅಲ್ಲವಾ ಎಂದು! ನಿಮ್ಮ ಊಹೆ ಸರಿಯಾಗಿದೆ. ಧೂಮಕೇತು ಅಥವಾ ಇಂಗ್ಲಿಷ್‌ನಲ್ಲಿ Comet ಅಂತ ಇದನ್ನು ಕರೆಯುತ್ತಾರೆ. ಆಕಾಶದಲ್ಲಿ ಪೊರಕೆಯ ರೀತಿಯಲ್ಲಿ ಕಾಣಿಸಿಕೊಂಡು ಕುತೂಹಲ ಕೆರಳಿಸುವ ಕಾಯಗಳೇ ಧೂಮಕೇತುಗಳು. ಅನಾದಿಕಾಲದಿಂದಲೂ ಹಲವಾರು ಕಾರಣಗಳಿಗೆ ಈ ಧೂಮಕೇತುಗಳು ಮನುಷ್ಯನಿಗೆ ಚಿರಪರಿಚಿತ. ಧೂಮಕೇತು ಎಂಬ ಶಬ್ದದಲ್ಲಿ ಧೂಮ ಎಂದರೆ ಹೊಗೆ; ಹೊಗೆಯ ಹಾಗೆ ಕಾಣುವ, ಬಾಲ ಇರುವ ಕಾಯ ‘ಧೂಮಕೇತು’. ಇದಕ್ಕ ಬಾಲಚುಕ್ಕಿ ಎಂಬ ಹೆಸರೂ ಇದೆ. ಆದರೆ ಇದು ನಕ್ಷತ್ರವಲ್ಲ.

ಸೌರಮಂಡಲದ ಹೊರವಲಯದಲ್ಲಿರುವ ಊರ್ಟ್ ಮೋಡಗಳು ಅಂತ ಕರೆಯುವ ಸಣ್ಣ ಸಣ್ಣ ಲಕ್ಷಾಂತರ ಆಕಾಶಕಾಯಗಳು ಸೂರ್ಯನ ಸುತ್ತ ತಮ್ಮ ತಮ್ಮ ಕಕ್ಷೆಗಳಲ್ಲಿ ಸುತ್ತುತ್ತಿವೆ. ಈ ಊರ್ಟ್ ಮೋಡಗಳಿಂದ ಕೆಲವೊಂದು ಕಾಯಗಳು ಸೂರ್ಯನ ಗುರುತ್ವ ಬಲಕ್ಕೆ ಒಳಗಾಗಿ, ಸೂರ್ಯನ ದಿಕ್ಕಿಗೆ ಅಂಡಾಕಾರದ ಕಕ್ಷೆಯಲ್ಲಿ ಸುತ್ತುಲು ಬರುತ್ತವೆ. ಹೀಗೆ ಆಕಾಶಕಾಯಗಳು ಸೂರ್ಯನ ಹತ್ತಿರ ಬಂದಾಗ ಅವಕ್ಕೆ ಬಾಲ ಸೃಷ್ಟಿಯಾಗಿ ಧೂಮಕೇತುಗಳಾಗುತ್ತವೆ. ಭೂಮಿಯಿಂದ ಇದನ್ನು ನೋಡಿದಾಗಿ ಬಾಲಚುಕ್ಕಿಯಾಗಿ ಗೋಚರಿಸುತ್ತವೆ.

ಈ ಧೂಮಕೇತುಗಳನ್ನು ಸಣ್ಣ ಬಂಡೆಗಳ ಒಂದು ಉಂಡೆಗೆ ಹೋಲಿಸಬಹುದು. ಈ ಬಂಡೆಯನ್ನು ನ್ಯೂಕ್ಲಿಯಸ್ ಎಂದು ಕರೆಯುತ್ತಾರೆ. ಧೂಮಕೇತುವು ಸೂರ್ಯನ ಹತ್ತಿರ ಬರುತ್ತಿರುವಂತೆ ನ್ಯೂಕ್ಲಿಯಸ್‌ನಲ್ಲಿರುವ ವಸ್ತುವು ಆವಿಯಾಗಲು ಪ್ರಾರಂಭಿಸುತ್ತದೆ. ಇದು ನ್ಯೂಕ್ಲಿಯಸ್ ಸುತ್ತಲು ಸೇರಿಕೊಳ್ಳುತ್ತದೆ. ಇದನ್ನು ಕೋಮಾ ಎಂದು ಕರೆಯುತ್ತಾರೆ. ಹೀಗೆ ಆವಿಯಾದ ವಸ್ತುವು ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಸೌರ ಮಾರುತದಿಂದ ತಳ್ಳಲ್ಪಟ್ಟು ಬಾಲವಾಗಿ ಹರಡಿಕೊಳ್ಳುತ್ತದೆ.

ಧೂಮಕೇತುವಿಗೆ ಒಂದಲ್ಲ ಎರಡು ಬಾಲವಿರುತ್ತದೆ. ಒಂದು ಅನಿಲದಿಂದ ಕೂಡಿರುವ ಬಾಲ, ಇನ್ನೊಂದು ಧೂಳಿನ ಬಾಲ. ಧೂಮಕೇತು ಸೂರ್ಯುನ ಹತ್ತಿರ ಬಂದಾಗ ಅನಿಲದ ಬಾಲ ರೂಪುಗಳ್ಳುತ್ತದೆ. ಅನಿಲದ ಬಾಲ ಸೂರ್ಯ ಇರುವ ದಿಕ್ಕಿಗೆ ವಿರುದ್ಧವಾಗಿದ್ದರೆ, ಧೂಳಿನ ಬಾಲ, ಧೂಮಕೇತು ಚಲಿಸುವ ದಿಕ್ಕಿಗೆ ವಿರುದ್ಧವಾಗಿರುತ್ತದೆ. ಏಕೆಂದರೆ, ಅನಿಲದ ಬಾಲದಲ್ಲಿ ಐಯಾನ್‌ಗಳಿರುವುದರಿಂದ, ಸೂರ್ಯನ ಅಯಸ್ಕಾಂತೀಯ ಬಲದ ಪ್ರಭಾವದಿಂದ ಸೂರ್ಯನ ದಿಕ್ಕಿನ ವಿರುದ್ಧ ದಿಕ್ಕಿನಲ್ಲಿ ನೇರವಾಗಿರುತ್ತದೆ. ಆದರೆ ಧೂಳಿನ ಬಾಲ ಧೂಮಕೇತು ಚಲಿಸುವ ದಿಕ್ಕಿಗೆ ವಿರುದ್ಧವಾಗಿದ್ದು, ಬಾಗಿರುತ್ತದೆ.

ಸಾಮಾನ್ಯವಾಗಿ ಧೂಮಕೇತು ಸೂರ್ಯನಿಂದ ಬಹು ದೂರವಾಗಿದ್ದಾಗ, ಆಕಾಶದಲ್ಲಿ ಚುಕ್ಕಿಯ ಹಾಗೆ ಕಾಣಿಸುತ್ತದೆ. ಆಗ ಆ ಚುಕ್ಕಿಯನ್ನು ಧೂಮಕೇತು ಎಂದು ಗುರುತಿಸುವುದು ಹವ್ಯಾಸಿ ಆಕಾಶ ವೀಕ್ಷಣಾಗಾರರಿಗೆ ಕಷ್ಟವಾಗಿರುತ್ತದೆ. ದಿನದಿಂದ ದಿನಕ್ಕೆ ಆಕಾಶದಲ್ಲಿ ಅದರ ಚಲನೆಯನ್ನು ನೋಡಿ ಅದನ್ನು ಸೌರಮಂಡಲದ ಕಾಯ ಅಂದರೆ, ಸೂರ್ಯನ ಗುರುತ್ವ ಬಲದ ಪ್ರಭಾವದ ಪರಿಧಿಯ ಒಳಗೇ ಇರುವ ಕಾಯ ಎಂದು ಗ್ರಹಿಸಬಹುದು. ಇದು ನಕ್ಷತ್ರವಾಗುವುದಿಲ್ಲ ಏಕೆಂದರೆ, ಸೌರ ಮಂಡಲದ ಕಾಯಗಳು ಆಕಾಶದಲ್ಲಿ ದಿನದಿಂದ ದಿನಕ್ಕೆ ಚಲಿಸುತ್ತವೆ, ನಕ್ಷತ್ರಗಳು ಚಲಿಸುವುದಿಲ್ಲ.

ಹೀಗೆ ಸೌರಮಂಡಲದ ತುದಿಯಲ್ಲಿರುವ ಊರ್ಟ್ ಮೋಡಗಳಿಂದ ಹೊಮ್ಮುವ ಧೂಮಕೇತುವು ಗುರು ಗ್ರಹದ ಕಕ್ಷೆಯ ಬಳಿ ಬಂದಾಗ, ಚುಕ್ಕೆಯ ಸ್ವರೂಪ ಬದಲಾಗಿ, ಧೂಮಕೇತುವಿನಲ್ಲಿರು ವಸ್ತುವು ಸೂರ್ಯನ ಶಾಖದಿಂದ ಆವಿಯಾಗಿ ಮೋಡದಂತೆ ಕಾಣುತ್ತದೆ. ಧೂಮಕೇತುವು ಸೂರ್ಯನ ದಿಕ್ಕಿನತ್ತ ಚಲಿಸಿದಂತೆ, ಅದರ ಬಾಲವೂ ಉದ್ದವಾಗಿ, ವಿಸ್ತಾರವಾಗುತ್ತದೆ. ಕೆಲವು ಧೂಮಕೇತುಗಳು ಹೆಚ್ಚು ಪ್ರಕಾಶಮಾನವಾಗುವುದರಿಂದ, ಅಂತಹ ಸಂದರ್ಭದಲ್ಲಿ ರಾತ್ರಿಯ ಆಕಾಶದಲ್ಲಿ ಬರಿಗಣ್ಣಿಗೇ ಅವು ಗೋಚರಿಸುತ್ತವೆ. ಹೀಗೆ ಬಾಲ ವಿಸ್ತಾರವಾಗಿ ಹರಡಿರುವ ಧೂಮಕೇತು ಆಕಾಶದಲ್ಲಿ ಅದ್ಭುತ ಲೋಕವನ್ನೇ ತೆರೆದಿಡುತ್ತದೆ. ಇಂತಹ ಸಂದರ್ಭ ಮತ್ತು ಅವಕಾಶ ಆಕಾಶ ವೀಕ್ಷಣಾಗಾರರಿಗಂತೂ ಹಬ್ಬ. ಧೂಮಕೇತುವನ್ನು ರಾತ್ರಿಯ ಆಕಾಶದಲ್ಲಿ ನೋಡುವುದೇ ಒಂದು ರೋಮಾಂಚನ.

ಮೊದಲೇ ಹೇಳಿದ ಹಾಗೆ, ಧೂಮಕೇತುಗಳನ್ನು ಆಧುನಿಕ ಯುಗದಲ್ಲೇನು ಕಂಡುಹಿಡಿದಿದ್ದಲ್ಲ. ಪ್ರಪಂಚದ ಎಲ್ಲ ನಾಗರಿಕತೆಗಳೂ ಧೂಮಕೇತುಗಳ ಬಗ್ಗೆ ದಾಖಲಿಸಿವೆ ಮತ್ತು ಇದಕ್ಕೆ ಸಂಬಂಧಿಸಿದ ಅನೇಕ ಕತೆಗಳು ನಮಗೆ ತಿಳಿದಿವೆ. ಎಷ್ಟೋ ನಾಗರಿಕತೆಗಳಲ್ಲಿ ಕಾಲವನ್ನು ಅವರು ದಾಖಲಿಸಿದ ಧೂಮಕೇತುಗಳ ವಿವರಣೆಯಿಂದಲೂ ಲೆಕ್ಕ ಹಾಕಲಾಗಿದೆ. ಅಲ್ಲದೆ, ಪೌರಾಣಿಕ ಕತೆಗಳಲ್ಲಿ ಪುರಾಣ ಪ್ರಸಿದ್ಧ ಮಹಾಕಾವ್ಯಗಳಲ್ಲಿ, ಧೂಮಕೇತು ಇದ್ದೇ ಇರುತ್ತೆ. ಹೆಚ್ಚಾಗಿ ಧೂಮಕೇತುಗಳನ್ನು ಚಿತ್ರಿಸಿರುವುದೇ ವಿನಾಶ ಕಾಲದ ಸನಿಹವನ್ನು ಸೂಚಿಸಲಿಕ್ಕೆ! ಧೂಮಕೇತು ಕಂಡ ದೇಶದ ರಾಜ ಸಾಯುತ್ತಾನೆಂದು, ಕೇಡುಗಾಲ ಬರುವುದೆಂದು, ಅನಿಷ್ಠ ಸೂಚಕಗಳೆಂಬ ಅನೇಕ ಕಾಲಗಳ ಕಲ್ಪನೆಗಳು ಮತ್ತು ಕಟ್ಟುಕತೆಗಳು ಯಥೆಚ್ಛವಾಗಿವೆ. ಕಾಕತಾಳಿಯ ಎಂಬಂತೆ ಇಂತಹ ಸಂದರ್ಭದಲ್ಲಿ ಹಲವು ತೊಂದರೆಗಳು-ಸಮಸ್ಯೆಗಳು ಬಂದಿರಬಹುದು ಅಥವಾ ಆ ಭಯದಲ್ಲಿ ತಾವೇ ಆಹ್ವಾನಿಸಿಕೊಂಡಿರಬಹುದು.

ಆದರೆ, ವಿಜ್ಞಾನ ಬೆಳೆದಂತೆ, ಧೂಮಕೇತುವಿನ ವೀಕ್ಷಣೆ ಮತ್ತು ಅದರ ಬಗೆಗಿನ ಸಂಶೋಧನೆ ಮುಂದುವರೆದಂತೆ ಈ ಯಾವುದೇ ನಂಬಿಕೆಗಳಿಗೆ ಯಾವ ವೈಜ್ಞಾನಿಕ ಪುರಾವೆಗಳು ಇಲ್ಲದಿರುವುದನ್ನು ನಾವು ಕಾಣಬಹುದು. ಈಗ ಈ ನಂಬಿಕೆಗಳು ಮೂಢನಂಬಿಕೆಗಳಾಗಿವೆ.

ಪ್ರಸಿದ್ಧವಾದ ಧೂಮಕೇತುಗಳು

ಹ್ಯಾಲಿ ಧೂಮಕೇತುವಿನ ಹೆಸರು ಎಲ್ಲರೂ ಕೇಳಿರಬೇಕು ಅಥವಾ! ಹ್ಯಾಲಿ ಅತ್ಯಂತ ಪ್ರಸಿದ್ಧವಾದ ಧೂಮಕೇತು. ಇದು ಪ್ರತಿ 75ರಿಂದ 76 ವರ್ಷಗಳಿಗೊಮ್ಮೆ ಸೂರ್ಯನನ್ನು ಸುತ್ತು ಹಾಕುವಾಗ ಭೂಮಿಯ ಬಳಿ ಬರುತ್ತದೆ. ಆಗಸದಲ್ಲಿ ಕಾಣುವ ಇದರ ನೋಟ ಅದ್ಭುತ. ಐಸಾಕ್ ನ್ಯೂಟನ್ ಸ್ನೇಹಿತ ಎಡ್ಮಂಡ್ ಹ್ಯಾಲಿ ಎನ್ನುವ ಖಗೋಳ ವಿಜ್ಞಾನಿ ಮತ್ತು ಗಣಿತಜ್ಞ ಮೊದಲ ಬಾರಿಗೆ ಈ ಧೂಮಕೇತುವನ್ನು ಗುರುತಿಸಿದ. 1682ರಲ್ಲಿ ಆಕಾಶದಲ್ಲಿ ಒಂದು ಆಕಾಶಕಾಯವನ್ನು ಹ್ಯಾಲಿ ನೋಡಿದ. ಈ ಹಿಂದೆ ದಾಖಲಾಗಿದ್ದ ಕೆಲವು ಧೂಮಕೇತುಗಳ ಪಟ್ಟಿಗಳೊಂದಿಗೆ ಹೋಲಿಕೆ ಮಾಡಿ ನೋಡಿದಾಗ, 1531, 1607 ಹಾಗೂ ತಾನು 1682ರಲ್ಲಿ ಕಂಡಿದ್ದ ಧೂಮಕೇತು ಒಂದೇ ಎಂದು ಗ್ರಹಿಸಿದ. ನಂತರ ಈ ಧೂಮಕೇತು 1758ರಲ್ಲಿ ಮತ್ತೊಮ್ಮೆ ಭೂಮಿಯಿಂದ ಕಾಣುತ್ತದೆ ಎಂದು, ಧೂಮಕೇತುವಿನ ಮುಂದಿನ ಆಗಮನವನ್ನು ಮೊದಲ ಬಾರಿಗೆ ಊಹಿಸಿದ. 1758ರಲ್ಲಿ ಹ್ಯಾಲಿ ಬದುಕಿರಲಿಲ್ಲ, ಆದರೆ ಧೂಮಕೇತು ಮಾತ್ರ ಹ್ಯಾಲಿ ಹೇಳಿದ ದಿನದಂದೇ ಆಕಾಶದಲ್ಲಿ ಕಂಡಿತು. ಇದಕ್ಕಾಗಿ ಆ ಧೂಮಕೇತುವಿಗೆ ಹ್ಯಾಲಿ ಧೂಮಕೇತು ಎಂದೇ ಹೆಸರಿಸಲಾಗಿದೆ. 20ನೇ ಶತಮಾನದಲ್ಲಿ, 1910 ಮತ್ತು 1986ರಲ್ಲಿ ಈ ಧೂಮಕೇತು ಆಕಾಶದಲ್ಲಿ ಕಂಡಿದೆ. 1986ರಲ್ಲಿ ಕಂಡಾಗ, ಹಲವು ವ್ಯೋಮ ನೌಕೆಗಳು ಧೂಮಕೇತುವಿನ ಬಳಿ ತೆರಳಿ, ಅದರ ಬಂಡೆಯ ಮಾದರಿಯನ್ನು ಸಂಗ್ರಹಿಸಿವೆ ಮತ್ತು ಅಂದದ ಚಿತ್ರಗಳನ್ನು ತೆಗೆಯಲಾಗಿದೆ. ಮತ್ತೆ 2061ಕ್ಕೆ ಹ್ಯಾಲಿ ಧೂಮಕೇತುವನ್ನು ನಾವು ನೋಡಬಹುದಾಗಿದೆ.

ಶೂಮೇಕರ್ ಲೆವಿ-9 ಧೂಮಕೇತು. ಇದು ಶೂಮೇಕರ್ ಮತ್ತು ಲೆವಿ ಎಂಬ ಇಬ್ಬರು ಖಗೋಳ ವಿಜ್ಞಾನಿಗಳು 1993ರಲ್ಲಿ ಗುರುತಿಸಿದ ಧೂಮಕೇತು. ಇದು, ಆ ಕಾಲಕ್ಕೆ ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧಿ ಪಡೆದ ಧೂಮಕೇತು. 1994ರಲ್ಲಿ ಈ ಧೂಮಕೇತು ಗುರು ಗ್ರಹದ ಬಳಿ ಬರುತ್ತಿರುವಾಗ, ಅದರ ಬಂಡೆಯು ಒಡೆದು ಚೂರುಚೂರಾಯಿತು. ನಂತರ ಗುರು ಗ್ರಹದ ಗುರುತ್ವ ಬಲವು ಈ ಧೂಮಕೇತುವಿನ ಪಥವನ್ನು ಬದಲಿಸಿ, ತನ್ನ ಬಳಿಗೆ ಎಳೆದುಕೊಂಡಿತು. ಶೂಮೇಕರ್ ಲೆವಿ-9 ಧೂಮಕೇತುವಿನ ಹಲವು ಚೂರುಗಳು ಗುರು ಗ್ರಹಕ್ಕೆ ನೇರವಾಗಿ ಬಡಿದು ಅಪ್ಪಳಿಸಿದವು. ಅಂದಿನ ಖಗೋಳ ವಿಜ್ಞಾನಿಗಳು ಮತ್ತು ಹವ್ಯಾಸಿ ಖಗೋಳ ವೀಕ್ಷಕರು ತಾವಿರುವ ಸ್ಥಳದಿಂದಲೇ ದೂರದರ್ಶಕದ ಮೂಲಕ ಇಂತಹ ಅತೀ ವಿರಳವಾದ ಖಗೋಳೀಯ ವಿದ್ಯಮಾನವನ್ನು ನೈಜವಾಗಿ ಕಂಡು, ಚಿತ್ರಗಳನ್ನು ತೆಗೆದರು. ಈ ಘಟನೆ ಅಂದಿನ ಮಾಧ್ಯಮದ ಗಮನವನ್ನು ಸೆಳೆದು, ಎಲ್ಲೆಲ್ಲೂ ಚರ್ಚೆಗಳು ನಡೆಯುತ್ತಿದ್ದವು. ಹ್ಯಾಲಿ ಧೂಮಕೇತುವಿನ ನಂತರ ಶೂಮೇಕರ್ ಲೆವಿ-9 ಧೂಮಕೇತು ಜನಸಾಮಾನ್ಯರ ಮಧ್ಯೆ ಪ್ರಸಿದ್ಧಿ ಪಡೆಯಿತು.

ಆಕಾಶದಲ್ಲಿ ಬರಿಗಣ್ಣಿಗೆ ಕಾಣುವ ಧೂಮಕೇತುಗಳು ಕಡಿಮೆ ಇದ್ದರೂ, ದೂರದರ್ಶಕದಿಂದ ಕಾಣುವ ಧೂಮಕೇತುಗಳು ಬಹಳಷ್ಟಿರುತ್ತವೆ. ಇವುಗಳನ್ನು ಪ್ರತಿ ದಿನವು ಖಗೋಳ ವಿಜ್ಞಾನಿಗಳು ಅಧ್ಯಯನ ಮಾಡುತ್ತಲೆ ಇರುತ್ತಾರೆ. ಶುಭ್ರ ಆಕಾಶದಲ್ಲಿ ಬರಿಗಣ್ಣಿನಲ್ಲಿ ಬಾಲಚುಕ್ಕಿಯನ್ನು ನೋಡುವ ಅವಕಾಶ ಸಿಕ್ಕೆರೆ ಅದನ್ನು ಕಳೆದುಕೊಳ್ಳಬೇಡಿ. ಅದನ್ನು ನೋಡುವುದೇ ಒಂದು ಚಂದದ ಅನುಭವ. ನೀವು ನೋಡಿ, ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೂ ತೋರಿಸಿ. ಮೂಢ ನಂಬಿಕೆಗಳಿಂದ ದೂರವಾಗಿರಿ.


ಇದನ್ನು ಓದಿ: ಬೆಳ್ಳಿಚುಕ್ಕಿ: ಸೌರ ಮಂಡಲದಲ್ಲಿ ಅತ್ಯಂತ ವೇಗವಾಗಿ ಸೂರ್ಯನ ಸುತ್ತ ಸುತ್ತವ ಗ್ರಹ!

LEAVE A REPLY

Please enter your comment!
Please enter your name here