ಭಾರತದ 36 ಸ್ಥಳಗಳ ಮೇಲೆ ಟರ್ಕಿ ಡ್ರೋನ್ ಮೂಲಕ ದಾಳಿ ನಡೆಸಲು ಪಾಕಿಸ್ತಾನ ಪ್ರಯತ್ನಿಸಿದೆ. 300-400 ಡ್ರೋನ್‌ಗಳ ಸಮೂಹವು ಲೇಹ್‌ನಿಂದ ಸರ್ ಕ್ರೀಕ್‌ವರೆಗಿನ ಭಾರತೀಯ ಸ್ಥಳಗಳನ್ನು ಗುರಿಯಾಗಿಸಿದೆ. ಪಾಕಿಸ್ತಾನ ನಾಗರಿಕ ವಿಮಾನಯಾನ ಸಂಸ್ಥೆಗಳನ್ನು ಗುರಾಣಿಯಾಗಿ ಬಳಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದರು.
ಗುರುವಾರ (ಮೇ.8) ರಾತ್ರಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಏರ್ಪಟ್ಟ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಶುಕ್ರವಾರ (ಮೇ.9) ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಗುರುವಾರ ತಡರಾತ್ರಿ ಭಾರತದ ಉತ್ತರ ಮತ್ತು ಪಶ್ಚಿಮ ವಲಯಗಳಲ್ಲಿನ 15 ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿದೆ ಎಂದು ಸೋಫಿಯಾ ಖುರೇಷಿ ತಿಳಿಸಿದರು.
“ನಮ್ಮ ಸಶಸ್ತ್ರ ಪಡೆಗಳು ಚಲನಶೀಲ ಮತ್ತು ಚಲನಶೀಲವಲ್ಲದ ವಿಧಾನಗಳನ್ನು ಬಳಸಿಕೊಂಡು ಅನೇಕ ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿವೆ. ಭಟಿಂಡಾ ಮಿಲಿಟರಿ ನೆಲೆಯನ್ನು ಗುರಿಯಾಗಿಸಲು ಕಳುಹಿಸಲಾದ ಒಂದು ಪಾಕಿಸ್ತಾನಿ ಸಶಸ್ತ್ರ ಮಾನವರಹಿತ ವೈಮಾನಿಕ ವಾಹನದ ಪ್ರಯತ್ನವನ್ನು ವಿಫಲಗೊಳಿಸಿವೆ ಎಂದು ಹೇಳಿದರು.
“ಭಾರತದ ನೆಲೆಗಳನ್ನು ಗುರಿಯಾಗಿಸುವ ತನ್ನ ಪ್ರಯತ್ನಗಳನ್ನು ಪಾಕಿಸ್ತಾನವು ಹಾಸ್ಯಾಸ್ಪದವಾಗಿ ನಿರಾಕರಿಸುವುದು ಅದರ ದ್ವಂದ್ವತೆಗೆ ಮತ್ತೊಂದು ಉದಾಹರಣೆಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳು ಪ್ರಮಾಣಾನುಗುಣವಾಗಿ ಮತ್ತು ಸಮರ್ಪಕವಾಗಿ ಪ್ರತಿಕ್ರಿಯಿಸಿವೆ. ಪಾಕಿಸ್ತಾನದ ನಾಲ್ಕು ವಾಯು ರಕ್ಷಣಾ ತಾಣಗಳ ಮೇಲೆ ಸಶಸ್ತ್ರ ಡ್ರೋನ್‌ಗಳನ್ನು ಹಾರಿಸಿದೆ ಮತ್ತು ಒಂದು ಡ್ರೋನ್ ಎಡಿ ರಾಡಾರ್ ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು ಹೇಳಿದರು.
ಪಾಕಿಸ್ತಾನದಿಂದ ಬರುತ್ತಿರುವ ಹೇಳಿಕೆಗಳನ್ನು ತಳ್ಳಿ ಹಾಕಿದ ವಿಕ್ರಮ್ ಮಿಸ್ರಿ, ಆ ದೇಶದ ವಿರುದ್ದ ಕಿಡಿಕಾರಿದರು. ಪಾಕಿಸ್ತಾನ ಸುಳ್ಳು ಹೇಳುತ್ತಿದೆ. ವಿಶೇಷವಾಗಿ, ಪೂಂಚ್‌ನಲ್ಲಿರುವ ಗುರುದ್ವಾರದ ಮೇಲೆ ಪಾಕಿಸ್ತಾನ ದಾಳಿ ಮಾಡಿತ್ತು. ಈ ಘಟನೆಯಲ್ಲಿ ಕೆಲವು ಸ್ಥಳೀಯ ಸಿಖ್ ಸಮುದಾಯದ ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಡ್ರೋನ್ ಮೂಲಕ ನಂಕಾನಾ ಸಾಹಿಬ್ ಗುರುದ್ವಾರದ ಮೇಲೆ ಭಾರತ ದಾಳಿ ಮಾಡಿದೆ ಎಂದು ಪಾಕಿಸ್ತಾನ ಸುಳ್ಳು ಹೇಳುತ್ತಿದೆ. ಇದು ಪಾಕಿಸ್ತಾನದ ಸುಳ್ಳು ಅಭಿಯಾನದ ಒಂದು ಭಾಗವಾಗಿದೆ ಎಂದರು.
ಗುರುವಾರ ರಾತ್ರಿ ಪಾಕಿಸ್ತಾನ ದಾಳಿ ನಡೆಸಿದ ನಂತರ, ಭಾರತೀಯ ಸಶಸ್ತ್ರ ಪಡೆಗಳು ಕೂಡ ಪ್ರತೀಕಾರ ತೀರಿಸಿಕೊಂಡಿವೆ. ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಲಾಗಿದೆ. ಲಾಹೋರ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ತಟಸ್ಥಗೊಳಿಸಲಾಗಿದೆ ಎಂದು ಸೋಫಿಯಾ ಖುರೇಷಿ ತಿಳಿಸಿದರು
ಮೇ 7ರಂದು ನಡೆಸಿದ ‘ಆಪರೇಷನ್ ಸಿಂಧೂರ’ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, “ನಮ್ಮ ಕ್ರಮ ನಿರ್ದಿಷ್ಟ, ನಿಖರ, ವಿವೇಚನಾಭರಿತ ಮತ್ತು ಉದ್ವಿಗ್ನತೆ ಹೆಚ್ಚಿಸುವ ಉದ್ದೇಶವಲ್ಲದ್ದು. ಯಾವುದೇ ಪಾಕಿಸ್ತಾನಿ ನಾಗರಿಕ, ಅವರ ಆರ್ಥಿಕ ಅಥವಾ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ. ನಿಖರವಾಗಿ ಗೊತ್ತಿದ್ದ ಭಯೋತ್ಪಾದಕ ನೆಲೆಗಳನ್ನು ಮಾತ್ರ ಗುರಿಯಾಗಿಸಲಾಗಿದೆ” ಎಂದು ಭಾರತ ಹೇಳಿತ್ತು.
ಮೇ 7 ಮತ್ತು 8 ನಡುವೆ ರಾತ್ರಿ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡಲು ಪಾಕಿಸ್ತಾನ ಪ್ರಯತ್ನಿಸಿದೆ. ಎಲ್ಲಾ ದಾಳಿಗಳನ್ನು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ತಟಸ್ಥಗೊಳಿಸಲಾಗಿದೆ ಎಂದು ವಿಂಗ್ ಕಮಾಂಡ್ ವ್ಯೋಮಿಕಾ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಭಾರತೀಯ ಪ್ರವಾಸಿಗರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು ದಾಳಿ ಮಾಡಿತ್ತು. ನಮ್ಮದು ನಿಖರ, ವಿವೇಚನಾಭರಿತ ಮತ್ತು ಉದ್ವಿಗ್ನತೆ ಹೆಚ್ಚಿಸುವ ಉದ್ದೇಶವಲ್ಲದ ದಾಳಿಯಾಗಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಪುನರುಚ್ಚರಿಸಿದರು.
‘ಪಾಕಿಸ್ತಾನಿ’ ಎಂದು ಹೀಯಾಳಿಸಿ ಥಳಿಸಿದ ಪತ್ರಕರ್ತ; ಮನನೊಂದು ಆತ್ಮಹತ್ಯೆಗೆ ಶರಣಾದ ಮುಸ್ಲಿಂ ವ್ಯಕ್ತಿ


