ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2024ರ ಫೆಬ್ರವರಿ 26ರಂದು ಹೊರಡಿಸಿದ್ದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ರದ್ದುಪಡಿಸಿದೆ.
ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇಕಡ 50ರಿಂದ 56ಕ್ಕೆ ಹೆಚ್ಚಳ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶದನ್ವಯ ಕೆಪಿಎಸ್‌ಸಿ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು.
ಈ ಅಧಿಸೂಚನೆಯನ್ನು ಪ್ರಶ್ನಿಸಿ ಚನ್ನಪಟ್ಟಣದ ಎಂ.ಟೆಕ್ ಪದವೀಧರ ಬಿ.ಎನ್ ಮಧು ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಕೆಎಸ್‌ಎಟಿ ಅಧ್ಯಕ್ಷ ಆರ್.ಬಿ.ಬೂದಿಹಾಳ್ ಮತ್ತು ಆಡಳಿತಾತ್ಮಕ ಸದಸ್ಯ ರಾಘವೇಂದ್ರ ಔರಾದ್ಕರ್ ಅವರಿದ್ದ ಪೀಠ ವಿಚಾರಣೆ ನಡೆಸಿ, ಕಳೆದ ಮೇ 28ರಂದು ಆದೇಶ ನೀಡಿದೆ.
ನೇಮಕಾತಿ ಅಧಿಸೂಚನೆ ರದ್ದತಿಯ ಜೊತೆಗೆ 2022ರ ಡಿಸೆಂಬರ್ 12ರಂದು ಸರ್ಕಾರ ಮೀಸಲು ಹೆಚ್ಚಳಕ್ಕೆ ಹೊರಡಿಸಿದ್ದ ಆದೇಶವನ್ನೂ ಪೀಠ ರದ್ದುಗೊಳಿಸಿದೆ. ಕಾನೂನು ಪ್ರಕಾರ ಹೊಸದಾಗಿ ಅಧಿಸೂಚನೆ ಹೊರಡಿಸಲು ಕೆಪಿಎಸ್‌ಸಿ ಸ್ವತಂತ್ರವಿದೆ ಎಂದು ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರ 2022ರ ಅಕ್ಟೋಬರ್ 23ರಂದು ಹೊರಡಿಸಿದ್ದ ಸುಗ್ರಿವಾಜ್ಞೆಯು ಮೀಸಲು ಪ್ರಮಾಣವನ್ನು ಶೇಕಡ 50ರಿಂದ 56ಕ್ಕೆ ಹೆಚ್ಚಿಸಿತ್ತು. ಇದನ್ನು ಆಧರಿಸಿ 2022ರ ಡಿಸೆಂಬರ್ 28ರಂದು ಅಧಿಸೂಚನೆ ಪ್ರಕಟಿಸಿ ರೋಸ್ಟರ್ ಅಂಕಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ಶಾಸನಸಭೆಯ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ಹಾಗಾಗಿ, ಇದರ ಆಧಾರದಡಿ ರಚಿಸಲಾದ 2023ರ ನಿಯಮಾವಳಿ ಊರ್ಜಿತವಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.
ಅರ್ಜಿದಾರರ ವಾದವೇನು?
ಅರ್ಜಿದಾರರ ಪರ ವಕೀಲರಾದ ರಂಗನಾಥ್ ಎಸ್. ಜೋಯಿಷ್, ಬಿ ಒ ಅನಿಲ್ ಕುಮಾರ್ ಮತ್ತು ಎಸ್ ವೈ ರೋಡಗಿ ಅವರು “ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ರಾಜಕೀಯ ಕಾರಣಕ್ಕಾಗಿ ಸರ್ಕಾರ ಮೀಸಲು ಪ್ರಮಾಣ ಶೇ.56ಕ್ಕೆ ಹೆಚ್ಚಳ ಮಾಡಿದೆ. ಇದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕೇವಲ ಶೇ.44ರಷ್ಟು ಮಾತ್ರ ಅವಕಾಶ ಸಿಗುತ್ತದೆ. ಇದರಿಂದ ಸಂವಿಧಾನಬದ್ಧವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಿಗಬೇಕಾದ ಅವಕಾಶ ಕಸಿದುಕೊಳ್ಳಲಾಗಿದೆ. ಇದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಆದೇಶದ ಉಲ್ಲಂಘನೆಯಾಗಿದೆ. ಎಂ ಆರ್ ಬಾಲಾಜಿ ವರ್ಸಸ್ ಮೈಸೂರು ರಾಜ್ಯ ಪ್ರಕರಣದಲ್ಲಿ ಮೀಸಲಿಗೆ ಮಿತಿ ಇರಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ನಿಯಮ ರೂಪಿಸಲಾಗಿದೆ” ಎಂದು ವಾದಿಸಿದ್ದರು.
ಸರ್ಕಾರದ ವಾದವೇನು?
ಸರ್ಕಾರಿ ವಕೀಲ ಕಿರಣ್ ಕುಮಾರ್ ಅವರು “ಕರ್ನಾಟಕ ಶಾಸನಸಭೆ ರೂಪಿಸಿದ ಕಾಯ್ದೆಯನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಕೆಯಾಗಿದ್ದು, ಅದಕ್ಕೆ ಮಾನ್ಯತೆ ಇಲ್ಲ. ಸಾಮಾಜಿಕ ಮತ್ತು ಶೈಕ್ಷ ಣಿಕ ಹಿಂದುಳಿದಿರುವಿಕೆ ಖಚಿತಪಡಿಸಿಕೊಂಡು ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಆಯೋಗವು ವೈಜ್ಞಾನಿಕ ವರದಿ ನೀಡಿದ್ದು, ಈಗಾಗಲೇ ಹಲವಾರು ರಾಜ್ಯಗಳು ಜಾರಿಗೊಳಿಸಿದ ಮಾದರಿಯಲ್ಲಿ ಜನಸಂಖ್ಯೆ ಆಧರಿಸಿ ಮೀಸಲಾತಿ ಪ್ರಮಾಣ ವಿಸ್ತರಿಸಲಾಗಿದೆ” ಎಂದು ಸಮರ್ಥಿಸಿಕೊಂಡಿದ್ದರು.
ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ, ಅಂದರೆ 2022ರಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಸೀಟು ಹಂಚಿಕೆ, ಮೀಸಲು ಮತ್ತು ರಾಜ್ಯ ಸೇವೆಯಲ್ಲಿ ನೇಮಕ ಹುದ್ದೆಗಳಿಗೆ ಮೀಸಲು) ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.18ರಿಂದ ಶೇ.24ಕ್ಕೆ ಹೆಚ್ಚಿಸಲಾಗಿತ್ತು. ಇದರ ಆಧಾರದಲ್ಲಿ ಕರ್ನಾಟಕ ಸರ್ಕಾರಿ ಸೇವೆಯ ರೋಸ್ಟರ್ ನಿಗದಿಪಡಿಸಲಾಗಿತ್ತು. ಇದನ್ನು ಆಧರಿಸಿ ಕೆಪಿಎಸ್‌ಸಿ 384 ಗ್ರೂಪ್ ‘ಎ’ ಮತ್ತು ‘ಬಿ’ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು. ಇದನ್ನು ಕೆಎಸ್‌ಎಟಿಯಲ್ಲಿ ಪ್ರಶ್ನಿಸಲಾಗಿತ್ತು.
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ಭಾರತೀಯ ಸಂವಿಧಾನದ 42ನೇ ತಿದ್ದುಪಡಿಯ (ಆರ್ಟಿಕಲ್ 323ಎ) ನಂತರ 1985ರ ಆಡಳಿತ ನ್ಯಾಯಮಂಡಳಿ ಕಾಯ್ದೆಯ ಅಡಿಯಲ್ಲಿ ಸ್ಥಾಪಿಸಲಾದ ಅರೆ-ನ್ಯಾಯಾಂಗ ಸಂಸ್ಥೆಯಾಗಿದೆ.
ಕರ್ನಾಟಕ ರಾಜ್ಯ ಅಥವಾ ರಾಜ್ಯದೊಳಗಿನ ಯಾವುದೇ ಸ್ಥಳೀಯ ಪ್ರಾಧಿಕಾರ, ನಿಗಮ ಅಥವಾ ಸರ್ಕಾರಿ ನಿಯಂತ್ರಿತ ಘಟಕದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಗೊಂಡ ವ್ಯಕ್ತಿಗಳ ನೇಮಕಾತಿ ಮತ್ತು ಸೇವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ದೂರುಗಳನ್ನು ನಿಭಾಯಿಸಲು ಇದನ್ನು ಸ್ಥಾಪಿಸಲಾಗಿದೆ.
ಸರ್ಕಾರಿ ನೌಕರರ ನೇಮಕಾತಿ, ಬಡ್ತಿ, ವರ್ಗಾವಣೆ ಮತ್ತು ಇತರ ಸೇವಾ ಷರತ್ತುಗಳಂತಹ ಸೇವಾ ಸಂಬಂಧಿತ ಕುಂದುಕೊರತೆಗಳನ್ನು ಇದು ಆಲಿಸುತ್ತದೆ ಮತ್ತು ತ್ವರಿತ ಪರಿಹಾರ ಒದಗಿಸುತ್ತದೆ.
ಆಡಳಿತ ನ್ಯಾಯಮಂಡಳಿ ಕಾಯ್ದೆ, 1985ರ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಮಂಡಳಿ, ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ಸಲ್ಲಿಸಲಾದ ಪ್ರಕರಣಗಳನ್ನು ನಿರ್ವಹಿಸುತ್ತದೆ. ನ್ಯಾಯಮಂಡಳಿಯ ನಿರ್ಧಾರಗಳನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು.
ಕೆಎಸ್‌ಎಟಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ಸದಸ್ಯರನ್ನು ಒಳಗೊಂಡಿದೆ. (ಉದಾ. ಪ್ರಸ್ತುತ ನ್ಯಾಯಾಂಗ ಸದಸ್ಯ ಟಿ. ನಾರಾಯಣಸ್ವಾಮಿ ಮತ್ತು ಆಡಳಿತಾತ್ಮಕ ಸದಸ್ಯ ರಾಘವೇಂದ್ರ ಔರಾದ್ಕರ್). ಮಂಡಳಿಯು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಶಾಖೆಗಳಿವೆ.
ಶೇಕಡ 50 ಮೀಸಲಾತಿ ಮಿತಿಯ ಸುತ್ತಮುತ್ತ
“1992ರ ನ್ಯಾಯಮೂರ್ತಿ ಇಂದಿರಾ ಸಹಾನಿ VS ಭಾರತ ಒಕ್ಕೂಟದ ನಡುವಿನ ಪ್ರಕರಣದಲ್ಲಿ 9 ನ್ಯಾಯಾಧೀಶರ ಪೀಠ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ) ಗಳ ಮೀಸಲಾತಿ ಮಿತಿಯನ್ನು ಶೇಕಡ 50ಕ್ಕೆ ನಿಗದಿಗೊಳಿಸಿದೆ. ಇದರಿಂದ ಎಲ್ಲಾ ರಾಜ್ಯಗಳ ಮೀಸಲಾತಿ ಪ್ರಮಾಣ ಶೇ.50ಕ್ಕೆ ಕಡಿತಗೊಂಡಿದೆ. ಪರಿಣಾಮ ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿ ಪ್ರಮಾಣ ಕಡಿಮೆಯಾಗಿದೆ.”
“ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು ಎನ್ನುವುದು ಆಗ್ರಹ. ಒಬಿಸಿ ವಿಚಾರದಲ್ಲಿ ಸ್ಪಷ್ಟವಾಗಿ ಏನೂ ಹೇಳದಿದ್ದರೂ, ಎಸ್‌ಸಿ, ಎಸ್‌ಟಿಗಳ ವಿಚಾರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು ಎಂದು ಸಂವಿಧಾನ ಹೇಳುತ್ತದೆ ಆದರೆ, ಶೇ.50ರ ಮಿತಿ ಇದನ್ನು ಕಾರ್ಯರೂಪಕ್ಕೆ ತರಲು ಬಿಡುತ್ತಿಲ್ಲ.”
“ಮಹಾರಾಷ್ಟ್ರ, ಜಾರ್ಖಂಡ್, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳು ಒಬಿಸಿಗಳಿಗೆ ಹೆಚ್ಚಿನ ಮೀಸಲಾತಿ ಕೊಡಲು ಶೇ.50 ಮಿತಿಯನ್ನು ಮೀರಿ ಪ್ರಯತ್ನ ಮಾಡಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶ ಅದನ್ನು ತಡೆದಿದೆ.”
“ಕರ್ನಾಟಕದಲ್ಲಿ 2019-20ರಲ್ಲಿ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ಶಿಫಾರಸ್ಸಿನಂತೆ ಎಸ್‌ಸಿ ಮೀಸಲಾತಿ ಶೇ. 15ರಿಂದ 17 ಮತ್ತು ಎಸ್‌ಟಿ ಮೀಸಲಾತಿ ಶೇ. 3ರಿಂದ 7 ಹೆಚ್ಚಿಸಿ, ಒಟ್ಟಾರೆ ಮೀಸಲಾತಿಯನ್ನು ಶೇ. 50ರಿಂದ 56 ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ನಿಟ್ಟಿನಲ್ಲಿ ಆದೇಶವನ್ನು ಹೊರಡಿಸಿತ್ತು. ಈ ಆದೇಶವನ್ನು ಅನುಸರಿಸಿ ಕೆಪಿಎಸ್‌ಸಿ ಕೂಡ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು.”
“ಮೀಸಲಾತಿ ಮಿತಿ ಶೇ.50 ದಾಟಿದರೆ ನ್ಯಾಯಾಲಯ ತಡೆಯಬಹುದು ಎಂಬ ನಿರೀಕ್ಷೆ ಇದ್ದರೂ, ಎಸ್‌ಸಿ, ಎಸ್‌ಟಿ ಮೀಸಲಾತಿ ಎಂಬ ಕಾರಣ ಮುಂದಿಟ್ಟು, ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಂತೆ ಎಂದು ಉಲ್ಲೇಖಿಸಿ ಸರ್ಕಾರ ಆದೇಶ ಮಾಡಿತ್ತು. ಈ ಹೆಚ್ಚಳವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಬಿದ್ದು ಹೋಗುತ್ತದೆ ಎಂಬ ಮುನ್ಸೂಚನೆ ಸರ್ಕಾರಕ್ಕೆ ಇತ್ತು. ಇದೀಗ ಕೆಎಟಿ ಮೀಸಲಾತಿ ಹೆಚ್ಚಿಸಿ ಹೊರಡಿಸಿದ್ದ ನೇಮಕಾತಿ ಅಧಿಸೂಚನೆಯನ್ನು ರದ್ದು ಮಾಡಿದೆ. ಇದನ್ನು ಕೆಪಿಎಸ್‌ಸಿ ಅಥವಾ ಸರ್ಕಾರ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಈ ಹಿಂದಿನಂತೆ ಶೇ.50ರ ಮಿತಿಯನ್ನು ನ್ಯಾಯಾಲಯ ಉಲ್ಲೇಖಿಸಬಹುದು” ಎನ್ನುತ್ತಾರೆ ಚಿಂತಕ ಶಿವಸುಂದರ್.
ಇತರ ರಾಜ್ಯಗಳಲ್ಲಿ ಹೇಗಿದೆ ಸ್ಥಿತಿ?
ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡು ಹೊರತುಪಡಿಸಿ ದೇಶದ ಇತರ ಎಲ್ಲಾ ರಾಜ್ಯಗಳಲ್ಲೂ ಮೀಸಲಾತಿ ಮಿತಿ ಶೇ.50 ಇದೆ. ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ ಹೆಚ್ಚಿತ್ತು. ಆದರೆ, ಆದೇಶದ ಬಳಿಕ ಕಡಿತಗೊಂಡಿದೆ. ತಮಿಳುನಾಡಿನಲ್ಲಿ ಮೀಸಲಾತಿಯನ್ನು ಸಂವಿಧಾನ 9ನೇ ಶೆಡ್ಯೂಲ್‌ಗೆ ಸೇರಿಸಲಾಗಿದೆ. ಹಾಗಾಗಿ, ಅಲ್ಲಿ ಮೀಸಲಾತಿ ಮಿತಿ ಶೇ.69 ಇದೆ. 9ನೇ ಶೆಡ್ಯೂಲ್‌ನಲ್ಲಿ ರಕ್ಷಿಸಲ್ಪಟ್ಟದನ್ನೂ ಪರಿಶೀಲಿಸಬಹುದು ಎಂದು ನ್ಯಾಯಾಲಯಗಳ ಹಲವು ಆದೇಶಗಳು ಹೇಳಿವೆ. ಆದರೆ, ಸದ್ಯಕ್ಕೆ ತಮಿಳುನಾಡಿನಲ್ಲಿ ಯಥಾಸ್ಥಿತಿ ಮುಂದುವರಿದೆ.
ಇತರ ಕೆಲ ರಾಜ್ಯಗಳು ವಿಶೇಷವಾಗಿ ಒಬಿಸಿ ಮೀಸಲಾತಿ ಹೆಚ್ಚಳಕ್ಕೆ ಶೇ.50ರ ಮಿತಿ ದಾಟುವ ಪ್ರಯತ್ನ ಮಾಡಿದೆ. ಆದರೆ, ಅದನ್ನು ನ್ಯಾಯಾಲಯಗಳು ತಡೆದಿವೆ.
ಸುಪ್ರೀಂ ಕೋರ್ಟ್ ತೀರ್ಪು ಬರುವ ಮೊದಲು ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣ ಶೇ. 68, 75 ಹೀಗೆ ಶೇ. 50ಕ್ಕಿಂತ ಹೆಚ್ಚಿತ್ತು. ಯಾವತ್ತೂ ಶೇ.50ರ ಒಳಗಡೆ ಇದ್ದಿರಲಿಲ್ಲ. ಚಿನ್ನಪ್ಪ ರೆಡ್ಡಿ ಆಯೋಗ ವರದಿ ಕೊಟ್ಟಾಗ ಪ್ರಾರಂಭದ ಕರಡಲ್ಲಿ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ. 62 ಇತ್ತು. ಅದರ ಭಾಗವಾಗಿ ಮುಸ್ಲಿಂ ಮೀಸಲಾತಿ ಕೂಡ ಶೇ.4ರ ಬದಲು ಶೇ.8 ಇತ್ತು. ವರ್ಗ 1ಕ್ಕೆ ಶೇ.15ರ ಬದಲು ಶೇ.18 ಇತ್ತು. ಇವೆಲ್ಲವನ್ನು ಕಡಿತಗೊಳಿಸಿ ಶೇ.50ಕ್ಕೆ ಮಿತಿಗೊಳಿಸಲಾಯಿತು. ಇದರಿಂದ ಎಲ್ಲಾ ವರ್ಗದ ಮೀಸಲಾತಿ ಕಡಿಮೆ ಆಯಿತು. ಆದ್ದರಿಂದ ಎಸ್‌ಸಿ, ಎಸ್‌ಟಿ, ಒಬಿಸಿಗಳು ಎಲ್ಲರೂ ಒಟ್ಟಾಗಿ ಶೇ.50ರ ಮೀಸಲಾತಿ ಮಿತಿ ರದ್ದು ಮಾಡಲು ಆಗ್ರಹಿಸಬೇಕಿದೆ ಎಂದು ಶಿವಸುಂದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯುಎಸ್) ಶೇ. 50 ಮಿತಿ ಅನ್ವಯಿಸುವುದಿಲ್ಲವೇ?
ನ್ಯಾಯಮೂರ್ತಿ ಇಂದ್ರ ಸಾಹ್ನಿ ನೇತೃತ್ವದ 9 ನ್ಯಾಯಾಧೀಶರ ಪೀಠ ಶೇ.50ಕ್ಕಿಂತ ಮೀಸಲಾತಿ ಹೆಚ್ಚಳ ಆಗಬಾರದು ಎಂದರೂ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ.10 ಮೀಸಲಾತಿ ಕೊಡಲಾಗಿದೆ. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ 5 ಜನ ನ್ಯಾಯಾಧೀಶರು ‘ಆರ್ಥಿಕ’ ಎಂಬ ಅಂಶವನ್ನು ಉಲ್ಲೇಖಿಸಿ ಎತ್ತಿ ಹಿಡಿದರು. ಆದರೆ, ಇಂದ್ರ ಸಾಹ್ನಿ ಪೀಠ ‘ಆರ್ಥಿಕ’ ಎಂಬ ಒಂದೇ ಅಂಶವನ್ನು ಪರಿಗಣಿಸಬಾರದು ಎಂದಿದೆ. ಆದ್ದರಿಂದ ಇದು ಇಂದಿರಾ ಸಹಾನಿ ಪೀಠದ ಆದೇಶದ ಸ್ಪಷ್ಟ ಉಲ್ಲಂಘಣೆಯಾಗಿದೆ. ಆದರೆ, ಇದನ್ನು ಯಾವುದೇ ರಾಜ್ಯ, ಪಕ್ಷ ಅಥವಾ ಕೇಂದ್ರ ಸರ್ಕಾರ ಪ್ರಶ್ನಿಸಿಲ್ಲ. ಹಾಗಾಗಿ, ಅದು ಮುಂದುವರಿದಿದೆ.
ಒಳಮೀಸಲಾತಿ ಇತ್ಯಾದಿಗಳ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಶೇ.50ರ ಮೀಸಲಾತಿ ಮಿತಿ ರದ್ದಾಗಬೇಕು. ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು. ಮೀಸಲಾತಿಯನ್ನು ಖಾಸಗಿ ವಲಯಕ್ಕೆ ವಿಸ್ತರಿಸಬೇಕು ಮತ್ತು ಖಾಸಗೀಕರಣ ನಿಲ್ಲಬೇಕು ಎಂದು ಶಿವಸುಂದರ್ ಹೇಳಿದ್ದಾರೆ.
ರೋಹಿತ್ ವೇಮುಲ ಕಾಯ್ದೆಯ ಕರಡು ಪ್ರತಿಯನ್ನು ಮತ್ತಷ್ಟು ಬಲಪಡಿಸಲು ವಿಶ್ವಸಂಸ್ಥೆಯಿಂದ ಸರಕಾರಕ್ಕೆ ಪತ್ರ


