ಕೋವಿಡ್ ಕಾರಣದಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ, ಗಂಡನನ್ನು ಕಳೆದುಕೊಂಡ ಮಡದಿ ಹೀಗೆ ನೂರಾರು ರೀತಿಯಲ್ಲಿ ಸಂಬಂಧಗಳು ಛಿದ್ರವಾಗಿವೆ. ಕೊರೋನಾ ತಂದಿಟ್ಟ ಎಲ್ಲಕ್ಕಿಂತ ಕರಾಳ ಪರಿಸ್ಥಿತಿಯೆಂದರೆ ಎಳೆಯ ಮಕ್ಕಳು ತಮ್ಮ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾಗುವಂತಾಗಿರುವುದು. ಭಾರತದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿರುವಂತೆ ಕೊರೋನಾ ಕಾರಣದಿಂದ ಇದುವರೆಗೆ ದೇಶದಲ್ಲಿ 30,000 ಕ್ಕೂ ಹೆಚ್ಚು ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ನಡೆಸಿರುವ ಪ್ರಾಥಮಿಕ ಸರ್ವೇ ಪ್ರಕಾರ 811 ಮಕ್ಕಳು ತಂದೆ ಅಥವಾ ತಾಯಿ ಹೀಗೆ ಒಬ್ಬ ಪೋಷಕರನ್ನು ಕಳೆದುಕೊಂಡಿವೆ. ಇದುವರೆಗಿನ ಸರ್ಕಾರದ ಸರ್ವೆ ಪ್ರಕಾರ ರಾಜ್ಯದಲ್ಲಿ 42 ಜನ ಮಕ್ಕಳು ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥವಾಗಿವೆ. ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಈ ಮಕ್ಕಳಲ್ಲಿ 5 ಜನ ಮಕ್ಕಳು ಏಳು ವರ್ಷಕ್ಕಿಂತ ಒಳಗಿನವರಾಗಿದ್ದರೆ ಉಳಿದವರು 10 ರಿಂದ 18 ವರ್ಷ ಒಳಗಿನ ಮಕ್ಕಳಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಂದೆ-ತಾಯಿಯರನ್ನು ಕಳೆದುಕೊಂಡ ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದೆ. ಇದರ ಭಾಗವಾಗಿ ಸರ್ವೆಯೊಂದನ್ನು ನಡೆಸುತ್ತಿದೆ. ಈ ಸರ್ವೆ ಮೂಲಕ ಕೋವಿಡ್ ಕಾರಣದಿಂದ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಮುಖ್ಯಮಂತ್ರಿಗಳ ಬಾಲ ಸೇವಾ ಯೋಜನೆಯಡಿಯಲ್ಲಿ ತಿಂಗಳಿಗೆ 3500 ರೂ ಮಾಸಾಶನವನ್ನು ನೀಡಲಾಗುತ್ತದೆ.
ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸ್ವಲ್ಪ ವಿಳಂಬವಾಗಬಹುದು. ನಾವೀಗ ಯೋಜನೆಯ ಮಾರ್ಗಸೂಚಿಗಳನ್ನು ಅಂತಿಮಗೊಳಿಸುವುದರಲ್ಲಿದ್ದೇವೆ. ಮಾರ್ಗಸೂಚಿಗಳು ಹೊರ ಬಂದಮೇಲೆ ಯೋಜನೆಯು ಆರಂಭವಾಗುತ್ತದೆ. ಅರ್ಹ ಫಲಾನುಭವಿ ಮಕ್ಕಳಿಗೆ ಖಂಡಿತ ಸಹಾಯ ತಲುಪುತ್ತದೆ. ಆದರೆ ಮಕ್ಕಳಿಗೆ ಎಷ್ಟು ವರ್ಷದವರೆಗೆ ಆರ್ಥಿಕ ಸಹಾಯವನ್ನು ಮುಂದುವರೆಸಬೇಕು ಎಂದು ಸರ್ಕಾರ ಅಂತಿಮಗೊಳಿಸಿಲ್ಲ. ಹಾಗಾಗಿ ಯೋಜನೆಯ ಅನುಷ್ಠಾನ ನಿಧಾನವಾಗುತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಕಾರಣದಿಂದ ತಂದೆ ತಾಯಿಯನ್ನು ಕಳೆದುಕೊಂಡು ಪೋಷಕರಿಲ್ಲದೇ ಅನಾಥವಾದ ಮಕ್ಕಳನ್ನು ವಸತಿ ಶಾಲೆಗೆ ಸೇರಿಸಲಾಗುವುದು. ಎಸ್‌ಎಸ್‌ಎಲ್‌ಸಿ ಪಾಸಾದ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ವಿತರಿಸಲಾಗುವುದು. 21 ವರ್ಷ ತುಂಬಿದಾಗ ಹೆಣ್ಣು ಮಕ್ಕಳಿಗೆ ಒಂದೇ ಹಂತದಲ್ಲಿ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಿಳಿಸಿದ್ದಾರೆ.
ಇದನ್ನೂ ಓದಿ : ಹೈದರಾಬಾದ್: 16 ಕೋಟಿ ರೂಗಳ ವಿಶ್ವದ ದುಬಾರಿ ಇಂಜೆಕ್ಷನ್ ಪಡೆದ 3 ವರ್ಷದ ಮಗು!


