ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು,
ಜೀವದಾತೆಯನಿಂದು ಕೂಗಬೇಕು!
ಶಿಲೆಯ ಮೂರ್ತಿಗೆ ನೆಯ್ದ ಕಲೆಯ ಹೊದಿಕೆಯನೊಯ್ದು
ಚಳಿಯ ಮಳೆಯಲಿ ನವೆವ ತಾಯ್ಗೆ ಹಾಕು
– ಕುವೆಂಪು
ದಿನಾಂಕ 20.04.1974ರಂದು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟವನ್ನು ಉದ್ಘಾಟಿಸಿ ಕುವೆಂಪು ಅವರು ಮಾಡಿದ ಭಾಷಣಕ್ಕೆ 2023ನೇ ಇಸವಿಗೆ 50 ವರ್ಷಗಳಾಗಲಿವೆ. ಈ ಭಾಷಣ ಮುಂದೆ ’ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾಯಿತು. “5000 ವರ್ಷಗಳಿಂದ ನಡೆದುಬಂದಿರುವ ಒಂದೇ ವರ್ಗದ ಬೌದ್ಧಿಕ ದಬ್ಬಾಳಿಕೆಯನ್ನು ಪ್ರತಿಭಟಿಸಿ ಸಾಹಿತ್ಯ, ಕಲೆ, ವೃತ್ತಪತ್ರಿಕೆ, ರೇಡಿಯೋ, ಸಿನಿಮಾ ಜನಸಾಮಾನ್ಯವಾಗಬೇಕು, ಬೌದ್ಧಿಕ ವಿಕೇಂದ್ರೀಕರಣವಾಗಬೇಕು” ಎನ್ನುವ ಧ್ಯೇಯೋದ್ದೇಶಗಳನ್ನುಳ್ಳ ಒಕ್ಕೂಟವನ್ನು ಉದ್ಘಾಟಿಸಿ ಮಾಡಿದ ಈ ಭಾಷಣ ಭಾರತದ ಇವತ್ತಿನ ಪರಿಸ್ಥಿತಿಗೆ ಇನ್ನೂ ಚೆನ್ನಾಗಿ ಹೊಂದುತ್ತದೆ. ಅವರು ಕೊಟ್ಟ ಕರೆಯನ್ನು ಇನ್ನೂ ಆಳದಲ್ಲಿ ತುಂಬಿಕೊಂಡು ನಡೆಯಬೇಕಾದ ತುರ್ತಿದೆ. ಇಂತಹ ಮಹತ್ವದ ಭಾಷಣವನ್ನು ನೆನಪಿಸುವ ಉದ್ದೇಶವಷ್ಟೇ ಇಲ್ಲಿನ ಬರೆಹದ್ದು.
ಕುವೆಂಪು ಅವರ ಇಡೀ ಭಾಷಣ ಕಹಳೆಯೋಪಾದಿಯಲ್ಲಿ ಎಚ್ಚರಿಸುವಂತೆ ಮೂಡಿಬಂದಿದೆ. ಯಾವ ವಿಷಯವನ್ನೇ ಆಗಲಿ ಅಸ್ಪಷ್ಟತೆಗೆ ಆಸ್ಪದವಿಲ್ಲದಂತೆ ಹೇಳುವ ಧಾಟಿ ಅವರದು. ಖಂಡಿಸುವಾಗ ನಿಖರವಾಗಿ ಮತ್ತು ತರ್ಕಬದ್ಧವಾಗಿ ಖಂಡಿಸುತ್ತಾ, ಹೊಗಳುವಾಗ ಅರ್ಥಗರ್ಭಿತವಾಗಿ ಮನಮುಟ್ಟುವಂತೆ ಹೇಳುವ ಅವರ ವಿಮರ್ಶಾ ದೃಷ್ಟಿಕೋನ ನಿಜಕ್ಕೂ ಅದ್ಭುತ. ಇಡೀ ಭಾಷಣ ಕುವೆಂಪು ಅವರ ವಿದ್ವತ್ತಿಗೆ ಮತ್ತು ಈ ದೇಶದ ಸೂಕ್ಷ್ಮಾತಿಸೂಕ್ಷ್ಮ ನೆಲೆಗಳನ್ನು ಅರ್ಥಮಾಡಿಕೊಂಡಿರುವ ರೀತಿಗೆ ಕನ್ನಡಿ ಹಿಡಿದಂತಿದೆ. ಭಾರತದ ಭವಿಷ್ಯವನ್ನು ಕಾಪಾಡುವ ಮತ್ತು ಎಲ್ಲ ಧಾರ್ಮಿಕ ನೆಲೆಗಳ ಪುರೋಹಿತಶಾಹಿಗಳಿಂದ ಜನಸಾಮಾನ್ಯರನ್ನು ಬಿಡುಗಡೆಗೊಳಿಸಿ ಅವರನ್ನು ಉನ್ನತಿಗೇರಿಸುವ ಗುರುತರವಾದ ಜವಾಬ್ದಾರಿಯನ್ನು ಹೊತ್ತುಕೊಂಡಂತೆ ಇಲ್ಲಿನ ಮಾತುಗಳು ಭಾಸವಾಗುತ್ತವೆ. ಇಡೀ ಭಾಷಣದ ಸ್ವರೂಪವು ಕನ್ನಡ ಸಾಹಿತ್ಯದಲ್ಲಿ ಕುವೆಂಪುಗೆ ಕುವೆಂಪುವೇ ಸರಿಸಾಟಿ ಎನ್ನುವ ಭಾವನೆಯನ್ನು ಎದೆಯಾಳದಲ್ಲಿ ಬಿತ್ತುತ್ತದೆ. ಅಷ್ಟೇ ಅಲ್ಲದೆ ಬರೆಹಗಾರರ ದೊಡ್ಡ ಜವಾಬ್ದಾರಿ ಯಾವುದಾಗಿರಬೇಕು ಎಂಬುದನ್ನು ಸೂಕ್ಷ್ಮವಾಗಿ ಹೇಳುತ್ತಾ ಹೋಗುತ್ತದೆ.
ಕುವೆಂಪು ಅವರು ತಮ್ಮ ಭಾಷಣದ ಆರಂಭದಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತಾರೆ. ’ನನ್ನ ಜೀವನ ದೃಷ್ಟಿ ಒಂದು ರೀತಿಯಲ್ಲಿ ಸಮಾನತಾವಾದಿಯ ದೃಷ್ಟಿ. ನೀವು ಸಮಾಜವಾದಿ, ಸಮತಾವಾದಿ ಎಂದೆಲ್ಲ ವ್ಯಾಖ್ಯಾನ ಮಾಡಬಹುದು. ಆದರೆ ನಾನು ಸಮಾನತಾವಾದಿ. ಆದ್ದರಿಂದ ನಾನು ಮಾಡುವ ಟೀಕೆ, ಖಂಡನೆ, ಶ್ಲಾಘನೆ, ಪ್ರಶಂಸೆ ಏನಿದ್ದರೂ ಅವು ಈ ಸಮಾನತಾವಾದಿಯ ದೃಷ್ಟಿಯಿಂದ ಹೊಮ್ಮುತ್ತವೆಯೆ ಹೊರತು ಯಾವ ಜಾತಿದ್ವೇಷದಿಂದಾಗಲೀ ಹೊಮ್ಮುವುದಿಲ್ಲ.’ ಈ ಸ್ಪಷ್ಟತೆ ಅವರಲ್ಲಿ ಇದ್ದುದರಿಂದಲೇ ಪುರೋಹಿತಶಾಹಿಗಳು ಈ ದೇಶದಲ್ಲಷ್ಟೇ ಅಲ್ಲ, ಅವರಿರುವ ಎಲ್ಲ ಕಡೆಗಳಲ್ಲೂ ಯಾವ ರೀತಿಯಲ್ಲಿ ಸರ್ವೋದಯ ಪರಿಕಲ್ಪನೆಗೆ ವಿರುದ್ಧವಾಗಿ ನಿಂತುಕೊಂಡಿದ್ದಾರೆ ಎಂಬುದನ್ನು ನಿಖರವಾಗಿ, ಕುರುಹುಗಳೊಂದಿಗೆ ತೋರಿಸಿಕೊಟ್ಟಿದ್ದಾರೆ. ಪುರೋಹಿತಶಾಹಿ ವರ್ಗ ಎಂದರೆ ಬ್ರಾಹ್ಮಣರಲ್ಲಷ್ಟೇ ಅಲ್ಲ; ಅದು ಎಲ್ಲ ಧರ್ಮದ ಒಳಗೂ ಇದ್ದಾರೆ ಎಂಬುದನ್ನು ಕುವೆಂಪು ಅವರು ಮನಗಾಣಿಸುತ್ತಾರೆ. ಇವರು ಪುರಾಣಗಳ ಹೆಸರಿನಲ್ಲಿ ಇಲ್ಲಸಲ್ಲದ ಕಾಗಕ್ಕ ಗೂಬಕ್ಕನ ರೀತಿಯ ಕತೆಗಳನ್ನು ಕಟ್ಟುವುದರ ಮೂಲಕ ಮೇಲು ಕೀಳಿನ ತರತಮ ಭಾವಗಳನ್ನು ಸೃಷ್ಟಿಸಿ ಜನತೆಯಲ್ಲೇ ಮುಕ್ತಿಯೋಗ್ಯರನ್ನಾಗಿ, ನಿತ್ಯನಾರಕಿಗಳನ್ನಾಗಿ ವಿಭಾಗಿಸಿ ತಮ್ಮ ಬೇಳೆಯನ್ನು ನಿರಂತರವಾಗಿ ಬೇಯಿಸಿಕೊಳ್ಳುತ್ತಾ ಬರುತ್ತಿರುವುದನ್ನು ಅವರು ಸರಿಯಾಗಿಯೇ ಗುರುತಿಸಿದ್ದಾರೆ.

ಕುವೆಂಪು ಅವರು ಇಂತಹ ಪುರೋಹಿತ ವರ್ಗದವರ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ. ಅದರಲ್ಲೂ ಯುವ ಸಮುದಾಯ ಇಂತವರಿಂದ ದೂರವೇ ಇರಬೇಕು ಎನ್ನುತ್ತಾರೆ. ’ಯಾವ ಬ್ರಾಹ್ಮಣನಾಗಲಿ, ಯಾವ ಪೂಜಾರಿಯಾಗಲಿ, ಯಾವ ದೇವಸ್ಥಾನವಾಗಲಿ, ಯಾವ ಭಟ್ಟರಾಗಲಿ ಅವರೇ ನಿಮ್ಮನ್ನೇನೋ ಕರೆಯುವುದಿಲ್ಲ. ನೀವೇ ಹೋಗಿ ಕರೆದು ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ನಿಮ್ಮ ಬೆಲೆಯನ್ನು ತೆತ್ತು, ಅವರಿಗೆ ಬೆಲೆಕೊಟ್ಟು ಬರುತ್ತೀರಿ. ಆದ್ದರಿಂದ ನೀವು ಏನು ಮಾಡಬೇಕೆಂದರೆ ನಿಮ್ಮ ಯುವಕವರ್ಗ ಇದೆಯಲ್ಲ ಅವರನ್ನು ಆಲೋಚನಾಪರರನ್ನಾಗಿ ಮಾಡಬೇಕಾಗುತ್ತದೆ’ ಎನ್ನುವ ಕರೆಯನ್ನು ಏಕಕಾಲದಲ್ಲಿ ಯುವಕರಿಗೂ ಬರೆಹಗಾರರಿಗೂ ಕೊಡುತ್ತಾರೆ. ಏಕೆಂದರೆ ಪುರೋಹಿತಶಾಹಿ ವರ್ಗ ತಮ್ಮ ಮೌಢ್ಯ ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತಿದೆ. ಇದಕ್ಕಾಗಿ ಅವರು ಪುರಾಣಗಳಲ್ಲಿ ಅಲ್ಲಿಇಲ್ಲಿ ಇರುವ ಲೋಕಾಚಾರ, ಕಾಲಾಚಾರ ಇವುಗಳನ್ನು ಅನುಸರಿಸಿಕೊಂಡು ಬಂದು ದೇಶವನ್ನು ಈ ಸ್ಥಿತಿಗೆ ತಂದಿಟ್ಟಿದ್ದಾರೆ. ಆದ್ದರಿಂದ ಬರೆಹಗಾರರು ಇಂತಹ ಮೌಢ್ಯಗಳಿಂದ ಜನಸಾಮಾನ್ಯರನ್ನು ಹೊರತರಲು ಶ್ರಮಿಸಬೇಕು ಎಂಬ ಅಂಶಗಳನ್ನು ಕುವೆಂಪು ಒತ್ತಿ ಹೇಳುತ್ತಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಬರೆಹಗಾರರಿಗೆ ಅವರು ಕರೆ ಕೊಡುವ ರೀತಿ ಮಹತ್ವದ್ದಾಗಿದೆ; ’ನೋಡಿ, ನೀವು ಬರಹಗಾರರು ನೀವೇನು ತಮಾಷೆಗೆ ಹೊರಟಿಲ್ಲ. ಇಂಥವುಗಳನ್ನೆಲ್ಲ ಬರೆದು ತಿಳಿಸಿ ಕೆಲಸ ಮಾಡಬೇಕು. ಇಷ್ಟು ಕೆಲಸ ಮಾಡಿದ್ರೂನೂ ಈ ಮೌಢ್ಯ, ಅವಿದ್ಯೆ ಎನ್ನುವುದು ತಲೆಯ ಮೇಲೆ ಹಿಮಾಲಯ ಸದೃಶವಾಗಿ ಚಪ್ಪಡಿ ಕುಳಿತಿರುತ್ತದೆ… ಆದರೂ ನೀವು ಇನ್ನೂ ಅದಕ್ಕಿಂತಲೂ ಭಯಂಕರವಾಗಿ ಕೆಲಸ ಮಾಡಬೇಕಾಗಿದೆ’ ಎಂದು ಸೂಚಿಸುತ್ತಾರೆ.
ಪುರೋಹಿತಶಾಹಿ ವರ್ಗದ ಗರ್ವ ನಿಂತಿರುವುದೇ ಶೂದ್ರ ಶಕ್ತಿಯ ಮೇಲೆ. ಅವರು ಇದುವರೆಗೆ ತಮ್ಮೆಲ್ಲಾ ಆಲೋಚನೆಯನ್ನು ಈ ಶಕ್ತಿಯ ಮೇಲೆ ಪ್ರಯೋಗಿಸುತ್ತಾ ಬಂದಿದ್ದಾರೆ. ಈ ಶೂದ್ರಶಕ್ತಿ ಇದನ್ನು ತಲೆಯ ಮೇಲೆ ಹೊತ್ತುಕೊಂಡು ಅದು ನಮ್ಮ ಸೌಭಾಗ್ಯವೆನ್ನುವಂತೆ ಸಾಗುತ್ತಾ ಬರುತ್ತಿದೆ. ಇವರನ್ನು ಹೀಗೇ ಅಂಧಕಾರದ ಬಂಧನದಲ್ಲಿ ಬಂಧಿಸಿ, ಅಜ್ಞಾನದಲ್ಲಿ ತೇಲಿಸಿ ತಮ್ಮನ್ನು ತಾವು ಶ್ರೇಷ್ಠರಂತೆ ಬಿಂಬಿಸಿಕೊಳ್ಳುತ್ತಾ ಪುರೋಹಿತಶಾಹಿಗಳು ಬರುತ್ತಿದ್ದಾರೆ. ಇಂತವರಿಂದ ಸಾಮಾನ್ಯ ಜನತೆಯನ್ನು ಹೊರತರಲೇಬೇಕು. ಇದಕ್ಕೆ ವೈಚಾರಿಕತೆ ಅತ್ಯಗತ್ಯ. ಇದನ್ನು ಇನ್ನಷ್ಟು ಗಟ್ಟಿಗೊಳಿಸಲು ಸ್ವಾಮಿ ವಿವೇಕಾನಂದರ, ’ಶೂದ್ರ ಸಮಾಜವನ್ನು ತನ್ನ ಕಬ್ಬಿಣದ ಕರಾಳಮುಷ್ಟಿಯ ಸಹಸ್ರ ಪಾಶಗಳಿಂದ ಬಿಗಿದು ಬಂಧಿಸಿಟ್ಟುಕೊಳ್ಳುವ ಉದ್ದೇಶದಿಂದ, ದೇಹ ಮತ್ತು ಮನಸ್ಸಿನ ಶುದ್ಧೀಕರಣದ ಬಾಹ್ಯಸಾಧನಗಳೆಂಬ ನೆವದಲ್ಲಿ ತನ್ನ ಸುತ್ತಲೂ ಸುತ್ತಿಕೊಂಡ ಅನಂತ ಸಂಖ್ಯೆಯ ಕರ್‍ಮ, ಕ್ರಿಯೆ ಮತ್ತು ಆಚಾರಸಮೂಹ ರೂಪದ ಕೊನೆಗಾಣದ ಕಣ್ಣಿಯ ಬಲೆಯಲ್ಲಿ ಸಿಕ್ಕಿಕೊಂಡು, ಪುರೋಹಿತಶಾಹಿ, ಉದ್ದಾರದ ಆಶಾ ಲವಲೇಶವಿಲ್ಲದೆ, ಆಪಾದಮಸ್ತಕ ಗೋಜು ಬಿಗಿದುಕೊಂಡು, ಈಗ ಸುಸ್ತಾಗಿ, ಸಂಪೂರ್ಣ ಹತಾಶವಾಗಿ, ಮೃತಪ್ರಾಯವಾಗಿ ಪತಿತವಾಗಿ ನಿದ್ದೆ ಹೋಗುತ್ತಿದೆ. ಈಗ ಆ ಬಲೆಯಿಂದ ಅದಕ್ಕೆ ಬಿಡುಗಡೆಯೆ ಇಲ್ಲವಾಗಿದೆ ಆ ಬಲೆಯನ್ನಾದರೂ ಹರಿದರೆ ಸಾಕು, ಆ ಪುರೋಹಿತರ ಪುರೋಹಿತಶಾಹಿ ಬುಡಮಟ್ಟ ಅಲ್ಲಾಡಿ ಹೋಗುತ್ತದೆ..!’ ಈ ಮಾತುಗಳನ್ನು ಕುವೆಂಪು ಅವರು ನೆನಪಿಸುತ್ತಾರೆ..
ಇದನ್ನೂ ಓದಿ: ಹಳತು-ವಿವೇಕ: ಸಮಕಾಲೀನತೆಯಲ್ಲಿ ಕುವೆಂಪು-ಕ್ರಿಯೆ, ಪ್ರತಿಕ್ರಿಯೆ – ದಿ. ಎಂ. ಡಿ. ನಂಜುಂಡಸ್ವಾಮಿ
ಪುರೋಹಿತಶಾಹಿಗಳು ಎಲ್ಲವನ್ನು ಹಿಮ್ಮೆಟ್ಟಿಸಿದ್ದಾರೆ. ಮೌಢ್ಯದಿಂದ ಪಾರು ಮಾಡಲು ಬುದ್ಧದೇವ ಸಾಕಷ್ಟು ಶ್ರಮಿಸಿದ. 12ನೇ ಶತಮಾನದಲ್ಲಿ ಬಸವಣ್ಣಾದಿಗಳು ಜಾತಿವಿನಾಶ ಮಾಡಬೇಕೆಂದು ಪಣತೊಟ್ಟು ನಿಂತರು. ಆದರೆ ಇವುಗಳನ್ನೆಲ್ಲ ಈ ವರ್ಗ ಹಿಮ್ಮೆಟ್ಟಿಸಿಯೇ ತನ್ನದನ್ನು ಸಾಮಾನ್ಯ ಜನರ ಮೇಲೆ ಏರುತ್ತಾ ಸಾಗಿಬಂದಿತು. ಅಂಬೇಡ್ಕರ್ ಅವರ ’ಕ್ರಾಂತಿ ಪ್ರತಿಕ್ರಾಂತಿ’ ಸಂಪುಟವನ್ನು ಓದಿದರೆ ಈ ಪುರೋಹಿತಶಾಹಿಗಳ ತಂತ್ರಗಳು ನಿಖರವಾಗಿ, ಇನ್ನಷ್ಟು ಸ್ಪಷ್ಟವಾಗಿ ನಮಗೆ ತಿಳಿದುಬರುತ್ತದೆ. ಇದರ ವಿರುದ್ಧದ ಆಲೋಚನೆಯನ್ನು ಬಿತ್ತಬೇಕಾದರೆ ಕುವೆಂಪು ಅವರು ಇಡೀ ಭಾಷಣದುದ್ದಕ್ಕೂ ಹೇಳುವ ಕೆಲವೊಂದು ಮಾತುಗಳನ್ನು ಇಂದು ಹಿಂದೆಂದಿಗಿಂತಲೂ ಬಹಳ ಮುಖ್ಯವಾಗಿ ಎಲ್ಲರೆದೆಗೆ ಬಿತ್ತಬೇಕಿದೆ. ’ನನಗೆ ಯಾವ ಜಾತಿಯೂ ಇಲ್ಲ. ಆದ್ದರಿಂದ ಜಾತಿದ್ವೇಷವೂ ಇಲ್ಲ’. ’ಶೂದ್ರಶಕ್ತಿಯ ಬೆಂಬಲ ತಪ್ಪಿದರೆ ಆ ಪುರೋಹಿತಶಾಹಿ ತನಗೆ ತಾನೇ ಕಳಚಿ ಬೀಳುತ್ತದೆ’, ’ನಾನು ಯಾವ ದೇವಸ್ಥಾನಕ್ಕಾಗಲಿ ಪೂಜೆ ಮಾಡಿಸಲು ಹೋಗದೆ ಬಹುಶಃ ಐವತ್ತು ವರುಷಗಳ ಮೇಲೆ ಆಗಿದೆ’, ’ಯಾವ ಭಟ್ಟನಾಗಲಿ, ಯಾವ ಪುರೋಹಿತನಾಗಲಿ, ಯಾವ ಪಂಚಾಂಗವಾಗಲಿ ನನ್ನ ಬಳಿ ಸುಳಿಯಗೊಡುವುದಿಲ್ಲ. ನಮ್ಮ ಮದುವೆಗಿದುವೆಗೆ ಯಾವ ಹಾರುವನನ್ನಾಗಲಿ ಪೌರೋಹಿತ್ಯಕ್ಕೆ ಕರೆಸುವುದಿಲ್ಲ. ಕರೆಸಲೂ ಇಲ್ಲ’. ’ಎಷ್ಟರಮಟ್ಟಿಗೆ ನಿಮ್ಮದು ವಿಶ್ವಪ್ರಜ್ಞೆಯಾಗುತ್ತದೆಯೋ ಅಷ್ಟರಮಟ್ಟಿಗೆ ನಿಮ್ಮ ಸಾಹಿತ್ಯ ವಿಶ್ವಸಾಹಿತ್ಯವಾಗುತ್ತದೆ, ಅದನ್ನು ಬಿಟ್ಟು ಈ ಕಟ್ಟುಕತೆ, ಈ ಬರ್ನಾಸುಗಳನ್ನೆ ಪುರಾಣ, ಹರಿಕಥೆ ಹೇಳುತ್ತಾ, ಹೇಳಿದ ಬುರ್ನಾಸುಗಳನ್ನೇ ಬಯ್ಯುತ್ತಾ ಕೂಡುವುದು ಕಾಲನಷ್ಟ’. ’ಲೋಕಕ್ಕೆ ಒಳ್ಳೆಯದು ಯಾರೇ ಮಾಡಿದರೂ ನೀವು ಅದಕ್ಕೆ ಬೆಂಬಲ ಕೊಡಬೇಕು, ಸಹಕರಿಸಬೇಕು, ನೀವು ಒಪ್ಪಿರುವ ತತ್ವಗಳನ್ನೆ ಆಚರಿಸ ಹೊರಡುವವರನ್ನು ವಿರೋಧಿಗಳೆಂದು ಹೇಳುವುದು ಅವಿವೇಕ. ಒಳ್ಳೆಯ ಕೆಲಸ ಎಲ್ಲಿ ನಡೆಯುತ್ತದೋ ಅದನ್ನು ನೀವು ಒಪ್ಪಿಕೊಳ್ಳಬೇಕು, ಬೆಂಬಲ ಕೊಡಬೇಕು ಅದನ್ನು ಪ್ರಚೋದಿಸಬೇಕು, ಪ್ರಚಾರ ಮಾಡಬೇಕು’. ಇವೆಲ್ಲ ಈ ಕಾಲಕ್ಕಷ್ಟೇ ಅಲ್ಲ ಮುಂದಿನ ತಲೆಮಾರುಗಳಿಗೂ ಬಹಳ ಮುಖ್ಯವಾದ ಮಾತುಗಳಾಗಿವೆ..
ತರುಣರ ಎದೆಯಲ್ಲಿ ವಿಚಾರಪೂರ್ಣತೆಯನ್ನು ಬಿತ್ತಬೇಕು. ಇದಕ್ಕಾಗಿ ಬರೆಹವನ್ನು ಸಜ್ಜುಗೊಳಿಸಬೇಕು. ಇದು ಕುವೆಂಪು ಅವರು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟಕ್ಕೆ ಕೊಟ್ಟ ದಿಕ್ಸೂಚಿಯ ಮಾತುಗಳು. ಇನ್ನು ಕಾಗಕ್ಕ ಗೂಬಕ್ಕನ ಕಟ್ಟುಕತೆಗಳನ್ನೆಲ್ಲ ದೊಡ್ಡ ದೊಡ್ಡ ಋಷಿಗಳ ವಿಚಾರದಲ್ಲಿ ಬರೆಸಿ, ಪ್ರಕಟಿಸಿ ಓದುವ ವಲಯಕ್ಕೆ ಸುಳ್ಳು ಸುಳ್ಳು ವಿಷಯಗಳನ್ನೂ, ಇಲ್ಲದ ಪವಾಡಗಳನ್ನು ತಂದು ತಲೆಗೆ ತುರುಕುವ ಪ್ರಕಾಶನ ಸಂಸ್ಥೆಗಳ ಬಗ್ಗೆಯೂ ಕುವೆಂಪು ಅವರು ಕಿಡಿಕಾರುತ್ತಾರೆ. ಇದರೊಂದಿಗೆ ಇಂತಹ ಬರೆಹಗಳನ್ನು ಪ್ರಕಟ ಮಾಡುವ ಪ್ರಕಾಶನ ಸಂಸ್ಥೆಗಳಿಗೂ ಕೆಲವೊಂದು ಸಲಹೆಗಳನ್ನೂ ಸೂಚಿಸುತ್ತಾರೆ. ’ಈ ಪ್ರಕಾಶನ ಸಂಸ್ಥೆಗಳಿಗೆ ನನ್ನ ಸಲಹೆ: ಧಾರ್ಮಿಕ ಮತ್ತು ಆಧ್ಯಾತ್ಮಿಕ ವರ್ಗದ ವ್ಯಕ್ತಿಗಳನ್ನು ಕುರಿತು ಬರೆಯಿಸುವಾಗ ಕ್ಷುದ್ರ ಕೋಮುವ್ಯಕ್ತಿಗಳನ್ನು ಆರಿಸಿಕೊಳ್ಳಬೇಡಿ; ವಿಶ್ವವ್ಯಕ್ತಿಗಳನ್ನೂ ರಾಷ್ಟ್ರ ವ್ಯಕ್ತಿಗಳನ್ನೂ ಮಾತ್ರ ಆರಿಸಿಕೊಳ್ಳಿ. ಮೌಢ್ಯ ಪ್ರಚೋದಕವಾಗುವಂತಹ ತೀರ್ಥಕ್ಷೇತ್ರಗಳ ಪವಾಡದ ಸುಳ್ಳು ಸುಳ್ಳು ಕತೆಗಳನ್ನೆಲ್ಲ ನಿಜ ಎಂದು ಹೇಳಿ ಮಕ್ಕಳನ್ನೂ ಮೂಢರನ್ನಾಗಿ ಮಾಡಬೇಡಿ. ವೈಜ್ಞಾನಿಕ ದೃಷ್ಟಿಯ ವಿಚಾರವಂತರನ್ನಾಗಿ ಮಾಡಿ’ ಎನ್ನುವ ಸಲಹೆಯನ್ನು ಇಂದಿಗೂ ಅಂತಹ ಸಂಸ್ಥೆಗಳು ನಿರಾಕರಿಸುತ್ತಲೇ ಬಂದಿವೆ. ಈಗಲೂ ಇಂತಹ ಹಸಿಹಸಿ ವಿಚಾರಗಳನ್ನು, ಮೌಢ್ಯಗಳನ್ನು, ಅವೈಚಾರಿಕತೆಯನ್ನು, ತರ್ಕವಿಲ್ಲದ್ದನ್ನು ಜನತೆಯ ತಲೆಗೆ ತುಂಬುವಲ್ಲಿ ನಿರಂತರವಾಗಿ ಶ್ರಮಿಸುತ್ತಲೇ ಇವೆ.
ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಇವುಗಳು ಕುವೆಂಪು ಅವರು ಕೊಟ್ಟ ಮುಖ್ಯ ಕರೆಗಳು. ಇವುಗಳನ್ನು ಹೊಂದಬೇಕಾದರೆ ಅಜ್ಞಾನ ಮತ್ತು ಮೌಢ್ಯದಿಂದ ಹೊರಬಂದು ಇತರರೂ ಹೊರಬರುವಂತೆ ಮಾಡಬೇಕು. ಇದನ್ನು ಪೂರ್ಣಗೊಳಿಸಲು ಕೇವಲ ಹಳೆಯದ್ದನ್ನೆಲ್ಲ ನಿರಾಕರಿಸಿ ಮುನ್ನುಗ್ಗಿದರೆ ಸಾಲದು ಎಂಬ ಅಂಶವನ್ನೂ ಒತ್ತಿ ಹೇಳುತ್ತಾರೆ. ಹೊಸದನ್ನು ಪಡೆಯಬೇಕು ಜೊತೆಗೆ ಹಳೆಯ ಚಿನ್ನವನ್ನು ಕರಗಿಸಿ ತನ್ನ ಕಾಲಕ್ಕೆ ತಕ್ಕಂತೆ ತಮಗಿಷ್ಟ ಬಂದ ಹಾಗೆ ಮಾರ್ಪಡಿಸಿಕೊಳ್ಳುವಂತೆ ಹಿಂದಿನ ಮಹಾಕಾವ್ಯಗಳಂತಹ ಉತ್ತಮವಾದವುಗಳಿಂದ ಉತ್ತಮವಾದದನ್ನು ಪಡೆಯುವ ಇಚ್ಛೆಯೂ ಇರಬೇಕು. ಇದಕ್ಕೆ ಅವರು ರಾಮಾಯಣ, ಮಹಾಭಾರತದಲ್ಲಿನ ಕೆಲವೊಂದು ವಿಷಯಗಳನ್ನು ತಾವೇ ಮಾರ್ಪಡಿಸಿ ಬರೆದ ಉದಾಹರಣೆಯನ್ನೂ ನೀಡುತ್ತಾರೆ. ಕಲೆಯ ವಿಚಾರದಲ್ಲಿ ಕುರಿತು ಅವರು ಹೇಳಿರುವ ಈ ಮಾತುಗಳನ್ನು ಇಂದಿನ ಬರೆಹಗಾರರೂ ಗಂಭೀರವಾಗಿ ಪರಿಗಣಿಸಬೇಕಿದೆ.
ಇದನ್ನೂ ಓದಿ: ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ
ದೇಶದ ಸರ್ವತೋಮುಖ ಅಭಿವೃದ್ದಿಗೆ ತೊಡಕಾಗಿ ನಿಂತಿರುವ ಇಂತಹ ಪುರೋಹಿತಶಾಹಿಯನ್ನು ಮೆಟ್ಟಿನಿಲ್ಲಬೇಕಾದರೆ ಗುಂಡುಹೊಡೆಯಲೇಬೇಕು. (ಇದನ್ನು ಅವರು ಸಾಂಕೇತಿಕವಾಗಿ ಹೇಳಿದ್ದಾರೆ) ಆದರೆ ಈ ಗುಂಡು ಪುರೋಹಿತಶಾಹಿಗಳನ್ನು ತಗಲುವ ಮೊದಲು ನಮ್ಮ ಮೆದುಳನ್ನು ತಗುಲಬೇಕು. ಏಕೆಂದರೆ ಇಂದು ಪುರೋಹಿತಶಾಹಿಯ ಅಂಶಗಳು ಬೇರುಬಿಟ್ಟಿರುವುದು ನಮ್ಮ ಮೆದುಳಿನಲ್ಲಿ. ಇದಕ್ಕೆ ಗುಂಡು ಹೊಡೆದು ನಿರ್ನಾಮಗೊಳಿಸಿದರೆ ಅದರ ಅಂಶಗಳು ತನಗೆ ತಾನೇ ನಾಶ ಹೊಂದುತ್ತವೆ. ಇದು ವಿನಾಶವಾಗದ ಹೊರತು ಒಂದು ದೇಶ ಏಳ್ಗೆ ಹೊಂದಲು ಸಾಧ್ಯವೇ ಇಲ್ಲ. ಇದು ಕುವೆಂಪು ಅವರ ಮಹತ್ವದ ನಿಲುವು.
’ಭರತಖಂಡದ ಪತನಕ್ಕೆ ಮುಖ್ಯ ಕಾರಣವೆಂದರೆ, ರಾಜವರ್ಗದವರ ಮತ್ತು ಪುರೋಹಿತವರ್ಗದವರ ಅಧಿಕಾರ ಬಲದಿಂದ ವಿದ್ಯಾಬುದ್ಧಿಗಳ ಸರ್ವಸ್ವಾಮ್ಯವೂ ಅತ್ಯಲ್ಪ ಸಂಖ್ಯೆಯ ಕೆಲವೇ ಕೆಲವು ಬ್ರಾಹ್ಮಣರ ಹಸ್ತಗತವಾದದ್ದು’ ಎಂದು ಹೇಳುವ ವಿವೇಕಾನಂದರ ಮಾತುಗಳನ್ನು ನೆನಪಿಸುತ್ತಲೇ ನಾನು ಬ್ರಾಹ್ಮಣದ್ವೇಷಿಯಲ್ಲ ಎಂಬುದನ್ನೂ ಸ್ಪಷ್ಟಪಡಿಸುತ್ತಾರೆ. ಆದರೆ ಇಂದೂ ಕೂಡ ಅಖಂಡವಾಗಿ ಬೆಳೆಯುತ್ತಿರುವ ಪುರೋಹಿತಶಾಹಿತ್ವದಿಂದ ಹೊರಬರಲೇಕಿರುವ ಅನಿವಾರ್‍ಯವನ್ನು ಈ ಭಾಷಣದಲ್ಲಿ ಒತ್ತಿ ಹೇಳುತ್ತಾರೆ. ಇದಾಗಬೇಕಾದರೆ ಅವರ ಪದ್ಯವೊಂದು ಕರೆಕೊಡುವ ರೀತಿಗೆ ನಾವೆಲ್ಲ ಕಿವಿಯಾಗಬೇಕಿದೆ.
ಇಂದೊ ನಾಳೆಯೊ ದಾಸನೀಶನಾಗಲೆಬೇಕು
ಎಂದಿಂದೆ ಎದ್ದೇಳಿ; ನಾಳೆಯನೆ ಹೋಕು.
ನಾವೆ ದೇವತೆಗಳೈ; ಭಾರತವೆ ಸ್ವರ್ಗವೈ;
ಭಾರತಾಂಬೆಯೆ ನಮಗೆ ದೇವಿಯೈ ಜನನಿ!
ಇದೇ ಭಾರತಕ್ಕೆ ಇಂದು ಅತ್ಯಗತ್ಯವಾಗಿ ಬೇಕಾಗಿರುವುದು. ಇದನ್ನು ದಿನಬೆಳಗಾಗದರೆ ಮನನ ಮಾಡಿಕೊಂಡು ಮುನ್ನಡೆಯಬೇಕಾಗಿರುವ ಜವಾಬ್ದಾರಿಯನ್ನು ಎಲ್ಲರೂ ಹೊತ್ತುಕೊಳ್ಳಬೇಕಿದೆ.

ಉಮಾಶಂಕರ್.ಎಚ್.ಡಿ
ಕೆ.ಆರ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ’ಉರಿಪಾದ’ ಅವರ ಅಂಕಣ ಬರಹಗಳ ಪುಸ್ತಕ.


