Homeಮುಖಪುಟಹಳತು-ವಿವೇಕ: ಸಮಕಾಲೀನತೆಯಲ್ಲಿ ಕುವೆಂಪು-ಕ್ರಿಯೆ, ಪ್ರತಿಕ್ರಿಯೆ - ದಿ. ಎಂ. ಡಿ. ನಂಜುಂಡಸ್ವಾಮಿ

ಹಳತು-ವಿವೇಕ: ಸಮಕಾಲೀನತೆಯಲ್ಲಿ ಕುವೆಂಪು-ಕ್ರಿಯೆ, ಪ್ರತಿಕ್ರಿಯೆ – ದಿ. ಎಂ. ಡಿ. ನಂಜುಂಡಸ್ವಾಮಿ

- Advertisement -
- Advertisement -

ಕುವೆಂಪು ಅವರ ಸಾಹಿತ್ಯದ ಬಗ್ಗೆ 1979ರ ಜನವರಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆಸಿದ ವಿಚಾರ ಸಂಕಿರಣದಲ್ಲಿ ಎಂ. ಡಿ ನಂಜುಂಡಸ್ವಾಮಿ ಅವರು ಮಾಡಿದ ಭಾಷಣವನ್ನು ಇಲ್ಲಿ ಮರುಪ್ರಕಟಿಸಲಾಗಿದೆ.

ಕುವೆಂಪು ಅವರು ತುರ್ತುಪರಿಸ್ಥಿಯಲ್ಲಿ ಮೌನವಾಗಿದ್ದರು ಏಕೆ ಎಂಬ ಟೀಕೆಗೆ ಇಲ್ಲಿ ನಂಜುಂಡಸ್ವಾಮಿಯವರು ಸಮರ್ಪಕ ಉತ್ತರವನ್ನು ನೀಡಿದ್ದಾರೆ. ಆದರೆ ತುರ್ತುಪರಿಸ್ಥಿತಿಯನ್ನು ಕುವೆಂಪು ವಿರೋಧಿಸಿದ್ದರು ಎನ್ನುವುದದರ ಬಗ್ಗೆ ಲಂಕೇಶ್ ಅವರು ಮಾತಾಡಿದ್ದ ಒಂದು ಭಾಷಣದ ತುಣುಕನ್ನು ಇಲ್ಲಿ ಪೂರಕವಾಗಿ ಉಲ್ಲೇಖಿಸುತ್ತಿದ್ದೇವೆ. ಲಂಕೇಶ್ ಅವರ ’ಕುವೆಂಪು-90’ ಎಂಬ ಬಾಷಣದಲ್ಲಿ ಅವರು ಹೀಗೆ ದಾಖಲಿಸುತ್ತಾರೆ: “ಅಡಿಗರು, ಶರ್ಮ, ನವ್ಯಕಾವ್ಯ, ನವ್ಯಕತೆಗಳೆಲ್ಲ ತಮ್ಮ ಶ್ರೇಷ್ಠ ಚೈತನ್ಯವನ್ನು ಕನ್ನಡಕ್ಕೆ ಕೊಡುತ್ತಿದ್ದಾಗಲೇ ಕುವೆಂಪು ’ಮಲೆಗಳಲ್ಲಿ ಮದುಮಗಳು’ ಬರೆದರು; ಅನೇಕ ಕಾವ್ಯಮೀಮಾಂಸೆಯ ಲೇಖನ ಬರೆದರು; 1976ರಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ನಿಜಕ್ಕೂ ಗುಡುಗಿದರು; ಎಲ್ಲ ಶೈಲಿಯನ್ನು ಮೀರಿದ್ದು ಸಾಹಿತ್ಯದ ಅರ್ಥಪೂರ್ಣತೆ ಎಂಬುದು ಆಗ ನಮಗೆಲ್ಲ ಗೊತ್ತಾಯಿತು. ಅವರ ಗದ್ಯ ಡಾಲಿ, ಪಿಕಾಸೋ ಕಲೆಯಂತೆ ದಟ್ಟವೂ ಅರ್ಥಪೂರ್ಣವೂ ಆಯಿತು”.
– ಸಂ

ಯಾವುದೇ ಕ್ಷೇತ್ರದಲ್ಲಿ ಯಾವುದೇ ಗಣ್ಯವ್ಯಕ್ತಿ ಅರ್ಧ ಶತಮಾನಕ್ಕೂ ಹೆಚ್ಚಾಗಿ ಕೆಲಸ ಮಾಡಿದಾಗ ಒಂದೇ ವಿಷಯದಮೇಲೆ ಹಲವಾರು ಅರ್ಥ ಬರಬಹುದಾದ ಪ್ರತಿಕ್ರಿಯೆಗಳನ್ನು ವ್ಯಕ್ತಮಾಡುವ ಸಾಧ್ಯತೆ ಉಂಟು. ಈ ವಿಷಯವನ್ನು ನಾವು ಮಾರ್ಕ್ಸ್‌ನಂತಹ ಅಥವಾ ಗಾಂಧೀಜಿಯಂತಹ ಮಹಾತ್ಮರ ಜೀವನಗಳಲ್ಲಿಯೂ ಕಾಣಬಹುದು.

ಗಾಂಧೀಜಿಯವರು ಜಾತಿಪದ್ಧತಿ ಹಿಂದೂ ಧರ್ಮದ ಮುಖ್ಯ ಅಂಶ ಎನ್ನುವುದರಿಂದ ಹಿಡಿದು ಅದೊಂದು ಮಹಾ ಪಾಪ, ಒಂದು ಶಾಪ ಎನ್ನುವ ಮಟ್ಟಕ್ಕೂ ಹೋದರು. ಬ್ರಿಟಿಷ್ ಆಧಿಪತ್ಯ ಎಲ್ಲ ರೀತಿಯಲ್ಲಿ ಕಲ್ಯಾಣಕಾರಿ ಎನ್ನುವುದರಿಂದ ಹಿಡಿದು ಅದೊಂದು ಸೈತಾನಶಾಹಿ ಎನ್ನುವ ಮಟ್ಟಕ್ಕೂ ಬಂದರು. ಆಸ್ತಿಯ ಖಾಸಗಿ ಒಡೆತನ ಅತ್ಯವಶ್ಯಕ ಎನ್ನುವುದರಿಂದ ಹಿಡಿದು ಪರಿಹಾರ ಕೊಡದೇ ಖಾಸಗಿ ಆಸ್ತಿಯ ಸಾಮಾಜೀಕರಣ ಆಗಬೇಕು ಎಂದೂ ಹೇಳಿದರು.

ಗಾಂಧೀಜಿಯವರ ಇಂತಹ ಹೇಳಿಕೆಗಳನ್ನು ನಾವು ಒಂದೊಂದಾಗಿ ಪ್ರತ್ಯೇಕವಾಗಿ ವಿಮರ್ಶೆ ಮಾಡಲು ಪ್ರಾರಂಭಿಸಿದರೆ ಗಾಂಧೀಜಿ ಒಬ್ಬ ದೃಢತೆಯಿಲ್ಲದ (Inconsistent) ವ್ಯಕ್ತಿ ಎನ್ನಿಸುವುದರಲ್ಲಿ ಸಂಶಯವಿಲ್ಲ. ಆದರೆ, ಗಾಂಧೀಜಿಗೆ ಸಂಬಂಧಿಸಿದಂತೆ ನಾವು ಮಾಡಬೇಕಾದ ಕೆಲಸ ಏನೆಂದರೆ, ಅವರ ಹೇಳಿಕೆಗಳ ಒಟ್ಟು ಸಾರವನ್ನು (their essence in their entirety) ಮುಂದೆ ಬರಬಹುದಾದ ವಿವಿಧ ಸನ್ನಿವೇಶಗಳಿಗೆ ಹೇಗೆ ಅಳವಡಿಸಿಕೊಳ್ಳಬೇಕು ಎಂದು ಆಲೋಚಿಸುವ ಮೂಲಕ ಗಾಂಧೀಜಿಯನ್ನು ಅರ್ಥಮಾಡಿಕೊಳ್ಳುವುದು.

ಕುವೆಂಪುರವರ ಅರ್ಧ ಶತಮಾನದ ಸಾಹಿತ್ಯಕ ಜೀವನದ ಪುನರ್ವಿಮರ್ಶೆ ಅಥವಾ ಪುನರ್ ಮೌಲ್ಯೀಕರಣವೂ ಅವರ ವಿವಿಧ ಪ್ರತಿಕ್ರಿಯೆಗಳ ಒಟ್ಟು ಸಾರವನ್ನು ಗುರುತಿಸುವ ಪ್ರಯತ್ನವಾಗಬೇಕು. ಇಂತಹ ವಿಮರ್ಶಾ ಧೋರಣೆ ಅತ್ಯಗತ್ಯ ಹಾಗೂ ಆರೋಗ್ಯಕರ ಎಂದು ನನಗನ್ನಿಸುತ್ತದೆ.

ಗಾಂಧೀಜಿಯವರ ದೀರ್ಘ ರಾಜಕೀಯ ಜೀವನದಲ್ಲಿ ಕಂಡುಬರುವಷ್ಟು ಪೂರ್ವಾಪರ ವಿರೋಧಿ ಹೇಳಿಕೆಗಳು ಕುವೆಂಪುರವರ ದೀರ್ಘ ಸಾಹಿತ್ಯಕ ಜೀವನದಲ್ಲಿ ಕಂಡುಬರುವುದಿಲ್ಲ ಎನ್ನುವುದು ನನ್ನ ಭಾವನೆ. ಇದಕ್ಕೆ ಕಾರಣ ಇವರಿಬ್ಬರ ಕಾರ್ಯಕ್ಷೇತ್ರ ಬೇರೆಬೇರೆಯಾಗಿದ್ದಿರಬಹುದು. ಗಾಂಧೀಜಿಗೆ ಎದುರಾಗುತ್ತಿದ್ದ ಸಂದಿಗ್ಧಗಳು ಕುವೆಂಪುರವರಿಗೆ ಎದುರಾಗದಿದ್ದಿರಬಹುದು. ಇದೇನೇ ಇರಲಿ, ಕುವೆಂಪುರವರ ಜೀವನದಲ್ಲಿ ಕಂಡುಬರುವ ಒಂದು ಮುಖ್ಯ ಅಂಶ ಆ ವ್ಯಕ್ತಿತ್ವದ ದೃಢತೆ (consistency).

Indian spiritual and political leader Mohandas Gandhi circa 1935.

ಆದರೆ, ಇತ್ತೀಚೆಗೆ, ಈ ನನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿ ತೋರುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಇವುಗಳಲ್ಲಿ ಮುಖ್ಯವಾಗಿ ವಿಚಾರವಾದಕ್ಕೆ ಸಂಬಂಧಿಸಿದಂತೆ, ಸಮಾಜವಾದಕ್ಕೆ ಸಂಬಂಧಿಸಿದಂತೆ ಹಾಗೂ ದೇಶದ ರಾಜಕಾರಣಕ್ಕೆ ಸಂಬಂಧಿಸಿದಂತೆ ಕುವೆಂಪುರವರ ಪ್ರತಿಕ್ರಿಯೆಗಳೆಲ್ಲ ಸುಸಂಗತವಾಗಿವೆಯೇ ಎನ್ನುವ ಪ್ರಶ್ನೆಗಳು ಎದ್ದಿವೆ.

ವಿಚಾರವಾದ, ಆಧ್ಯಾತ್ಮಿಕವಾದ ಹಾಗೂ ನಾಸ್ತಿಕವಾದಗಳ ಬಗ್ಗೆ ಕುವೆಂಪುರವರ ದೃಷ್ಟಿ ಸುಸಂಗತವಾಗಿವೆಯೇ? ಪುರೋಹಿತಶಾಹಿಯ ವಿರುದ್ಧ ಮಾತನಾಡುವಷ್ಟು ಗಟ್ಟಿಯಾಗಿ ಬಂಡವಾಳಶಾಹಿಯ ವಿರುದ್ಧ ಅವರೇಕೆ ಮಾತನಾಡುವುದಿಲ್ಲ? ಕುವೆಂಪುರವರ ಕೃತಿಗಳಲ್ಲಿ ಜಾತಿಪ್ರಜ್ಞೆ ಮಾತ್ರ ಇದೆ, ವರ್ಗಪ್ರಜ್ಞೆ ಏಕಿಲ್ಲ? ಹಿಂದೂ ಧರ್ಮ ಮತ್ತು ಕರ್ಮಸಿದ್ಧಾಂತಗಳನ್ನು ಒಪ್ಪಿಕೊಂಡಂತೆ ಕಾಣಿಸುತ್ತದೆ ಏಕೆ? ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ, ಸಮಗ್ರ ಕ್ರಾಂತಿ ಚಳುವಳಿಗಳಲ್ಲಿ ನೇರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ ಅವರು ಏಕೆ ತುರ್ತುಪರಿಸ್ಥಿತಿಯಲ್ಲಿ ಮೌನ ತಾಳಿದರು? ಇತ್ಯಾದಿ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗಳನ್ನು ಹಾಕುತ್ತಿರುವವರು ಹೊಸ ಪೀಳಿಗೆಯ ತರುಣ ಸಾಹಿತಿಗಳು ಎನ್ನುವುದು ಒಂದು ಆಶಾದಾಯಕವಾದ ಬೆಳವಣಿಗೆಯೇ ಸರಿ. ಏಕೆಂದರೆ, ಕುವೆಂಪುರವರಂತಹ ಶ್ರೇಷ್ಠ ಸಾಹಿತಿಯ ಪುನರ್ವಿಮರ್ಶೆಯ ಪ್ರಯತ್ನದ ಮೂಲಕವೇ ಕನ್ನಡ ಸಾಹಿತ್ಯ ಹೊಸ ಆಯಾಮಗಳನ್ನು ಪಡೆಯುವುದರಲ್ಲಿ ಯಾವ ಸಂದೇಹವೂ ಇಲ್ಲ.

ಆದರೆ, ಇಂತಹ ಪ್ರಶ್ನೋತ್ತರ ನಡೆಸುವುದಕ್ಕೆ ಹಾಗೂ ಇಂತಹ ಪುನರ್‌ರ್ವಿಮರ್ಶೆಗೆ ಸಾಕಷ್ಟು ಪೂರ್ವಸಿದ್ಧತೆ ಆಗಬೇಕು. ಅಂದರೆ, ವಿಚಾರವಾದ, ಆಜ್ಞೇಯತಾವಾದ, ನಾಸ್ತಿಕವಾದ, ಭಾರತದ ಚೌಕಟ್ಟಿನಲ್ಲಿ ಬಂಡವಾಳಶಾಹಿ, ಸಕ್ರಿಯ ರಾಜಕಾರಣ, ಇಂತಹ ಸಂಕೀರ್ಣ ವಿಷಯಗಳ ಬಗ್ಗೆ ಕೂಲಂಕಶ ಅಧ್ಯಯನ ಮತ್ತು ಪರಿಪಕ್ವತೆ ಅವಶ್ಯಕ ಎನ್ನುವುದು ನನ್ನ ಅಭಿಪ್ರಾಯ. ಹೊಸ ಪೀಳಿಗೆಯ ಸಾಹಿತಿಗಳು ಈ ದಿಕ್ಕಿನಲ್ಲಿ ಇನ್ನೂ ಬಹಳ ಕೆಲಸ ಮಾಡಬೇಕಾಗಿದೆ, ದಯವಿಟ್ಟು ಮಾಡಿರಿ ಎಂದು, ಅವರೊಂದಿಗೆ ನನಗಿರುವ ಸ್ನೇಹ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ವಿನಯಪೂರ್ವಕವಾಗಿ ವಿನಂತಿ ಮಾಡಿಕೊಳ್ಳುತ್ತೇನೆ.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಮೊದಲನೆಯದಾಗಿ, ವಿಚಾರವಾದ, ಆಧ್ಯಾತ್ಮವಾದ ಮತ್ತು ನಾಸ್ತಿಕವಾದದ ಬಗ್ಗೆ ಮಾತನಾಡುವವರು ಹಾಗೂ ಧರ್ಮ ಮತ್ತು ಕರ್ಮಗಳ ಬಗ್ಗೆ ಮಾತನಾಡುವವರು ಇವುಗಳ ವಿವಿಧ ರೂಪಗಳನ್ನು ಗುರುತಿಸುವುದು ಅತ್ಯವಶ್ಯಕ.

ಧರ್ಮ, ಮುಖ್ಯವಾಗಿ ನಾಲ್ಕು ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಒಮ್ಮೆ ವಿವಿಧ ಧರ್ಮಗಳ ನಡುವೆ ಜಗಳಗಳಂತೆ, ರಕ್ತಸಿಕ್ತ ಯುದ್ಧಗಳಂತೆ ಕಾಣಿಸಿಕೊಂಡರೆ, ಮತ್ತೊಮ್ಮೆ ಆಸ್ತಿ, ಜಾತಿ, ಹೆಣ್ಣಿಗೆ ಸಂಬಂಧಿಸಿದಂತೆ ಯಥಾಸ್ಥಿತಿವಾದವನ್ನು ಸಮರ್ಥಿಸುವ ಮತ್ತೊಮ್ಮೆ, ನೈತಿಕ ಹಾಗೂ ಸಾಮಾಜಿಕ ಸನ್ನಡತೆಯ ತರಬೇತಿ ಸಾಧನವಾಗಿ ಕೆಲಸ ಮಾಡುತ್ತದೆ. ಕೊನೆಗೆ, ಅನುಕಂಪ ಮತ್ತು ಚಿಂತನೆಯ ಶಿಸ್ತಿನಂತೆ ತನ್ನ ಉತ್ಕೃಷ್ಟ ರೂಪವನ್ನು ಪ್ರದರ್ಶಿಸುತ್ತದೆ.

ಧರ್ಮದ ಮೊದಲ ಎರಡು ಅಭಿವ್ಯಕ್ತಿಗಳು ಜನತೆಗೆ ಮಾದಕ ವಸ್ತುಗಳು (Opium to the masses) ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಅವು ರಾಜಕಾರಣವನ್ನು ಧಾರ್ಮಿಕವನ್ನಾಗಿ ಮಾಡುವ ಬದಲು ಧರ್ಮವನ್ನೇ ರಾಜಕಾರಣಕ್ಕೆ ಎಳೆದು ಮತಾಂಧತೆಯನ್ನು ಹೆಚ್ಚಿಸುತ್ತವೆ. ಆದರೆ, ಧರ್ಮದ ಉಳಿದೆರಡು ಅಭಿವ್ಯಕ್ತಿಗಳ ಬಗ್ಗೆ ಯಾರೇ ಆಗಲಿ ನಮ್ರತೆಯ ಧೋರಣೆಯನ್ನು ತಳೆಯಬೇಕಾದದ್ದು ಅವಶ್ಯಕ. ಧರ್ಮದ ಕೊನೆಯೆರಡು ಪಾತ್ರಗಳನ್ನು ವಿಚಾರವಾದಿಯ ಕಡೆಗಣಿಸಲು ಸಾಧ್ಯವಿಲ್ಲ.

ವಿಚಾರವಾದಿ ನಾಸ್ತಿಕವಾದಿಯಾಗಬೇಕು ಎಂದೇನಿಲ್ಲ, ಆತ ಆಸ್ತಿಕನೂ ಆಗಿರಬಹುದು, ಸಂಶಯವಾದಿಯೂ (Agnostic) ಆಗಿರಬಹುದು. ಎಲ್ಲ ರಾಜಕೀಯ ಸಿದ್ಧಾಂತಗಳಂತೆ ಎಲ್ಲ ಧಾರ್ಮಿಕ ಸಿದ್ದಾಂತಗಳ ಅಂತಿಮ ಗುರಿ ಸಮಾನತೆ (Equality) ಮತ್ತು ಭಾವೈಕ್ಯ (Equanimity) ಎನ್ನುವುದನ್ನು ಗುರುತಿಸುವುದರ ಜೊತೆಗೆ ಎಲ್ಲ ಧರ್ಮಗಳಲ್ಲಿರುವ ಮೂಲಭೂತ ಅಸಮರ್ಪಕತೆಯನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಧರ್ಮದ ಜೊತೆಗೆ ನಮ್ಮ ಸಂಬಂಧ ಸಂಶೋಧನಾತ್ಮಕವಾಗಬೇಕೇ ಹೊರತು ಕಲಹಶೀಲವಾಗಬಾರದು. ಇದು ವಿಚಾರವಾದ.

ಹೀಗೆಯೇ, ಆಧ್ಯಾತ್ಮಿಕವಾದವೂ ಹಲವಾರು ಭಂಗಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅದರ ಅತ್ಯಂತ ಅಸಹ್ಯಕರ ಭಂಗಿ ಪವಾಡಗಳ ಮೂಲಕ ಮತ್ತು ವಿಗ್ರಹಾರಾಧನೆಯ ಮೂಲಕ ಕಾಣಿಸುತ್ತದೆ. ಇದಕ್ಕಿಂತ ಕಡಿಮೆ ಅಸಹ್ಯಕರವಾಗಿ ಸ್ವಾರ್ಥದ ನಡುವೆ ದಾನದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. – ಮೂರನೆಯದಾಗಿ, ಎಲ್ಲ ರೀತಿ ಉಚ್ಛ ನೀಚ ವರ್ಗೀಕರಣದ ಸಮರ್ಥನೆಯಾಗಿ ಕಾಣಿಸಿಕೊಳ್ಳುತ್ತದೆ. ಮತ್ತೊಮ್ಮೆ ಧರ್ಮದ ಮೂಲ ಅಡಿಪಾಯಕ್ಕೆ ಕೇವಲ ತಿದ್ದುಪಡಿಗಳಂತಿರುವ ಆದರೆ ಮೂಲಭೂತ ಸಿದ್ಧಾಂತಗಳಿಲ್ಲದ ಉಪನಿಷದ್ ಮತ್ತು ಬೈಬಲ್‌ಗಳ ಸಂದೇಶಗಳನ್ನೊಳಗೊಂಡು ಪ್ರಕಟವಾಗುತ್ತದೆ. ಕೊನೆಯದಾಗಿ, ಮನಸ್ಸಿನ ಕ್ರಿಯೆಗಳ ಹಾಗೂ ಅನುಕಂಪ ಮತ್ತು ಚಿಂತನೆಯ (ಧ್ಯಾನ contemplation) ಸ್ವಚ್ಛ ಸಂಶೋಧನೆಯಾಗಿ ಕಾಣಿಸಿಕೊಳ್ಳುತ್ತದೆ. ಈ ಕೊನೆಯ ಆಧ್ಯಾತ್ಮಿಕತೆಯನ್ನು ಯಾವ ವಿಚಾರವಾದಿಯೂ ವಿರೋಧಿಸುವುದು ಸಾಧ್ಯವಿಲ್ಲ. ಆದರೆ ಇದು ಸಮಾಜದ ಮೂರ್ತ ಸ್ವರೂಪಕ್ಕೆ ನೇರ ಸಂಬಂಧವಿಟ್ಟುಕೊಂಡಾಗ ಮಾತ್ರ ಅರ್ಥಪೂರ್ಣವಾಗುತ್ತದೆ, ಅಷ್ಟೇ ಹೊರತು (timeless and ageless) ಅಲ್ಲ. ಕಾಲಾತೀತವಾದ ಯುಗಾತೀತವಾದ ಆಧ್ಯಾತ್ಮ ಆಕಾಶ ಪುರಾಣ ಆಗುತ್ತದೆ.

ಕುವೆಂಪುರವರ ವಿಚಾರವಾದ ಮತ್ತು ಆಧ್ಯಾತ್ಮಿಕತೆಯನ್ನು ಪುನರ್‌ವಿಮರ್ಶೆ ಮಾಡುವವರು ಈ ವಿಷಯಗಳ ಎಲ್ಲ ಪ್ರಕಾರಗಳನ್ನೂ ತಿಳಿದಿರಬೇಕಾಗುತ್ತದೆ. ಕುವೆಂಪುರವರ ಧರ್ಮ ಆಧ್ಯಾತ್ಮಿಕತೆ ಇಂತಹ ಸ್ವಚ್ಛ ಸಂಶೋಧನೆಯಾಗಿದೆ ಹಾಗೂ ಭಾರತ ಸಮಾಜದ ಮೂರ್ತಸ್ವರೂಪಕ್ಕೆ ನೇರ ಸಂಬಂಧವಿಟ್ಟುಕೊಂಡಿದೆ ಎಂದು ಪುನಃ ವಿವರಿಸಿ ಇಲ್ಲಿ ಹೇಳಬೇಕಾಗಿಲ್ಲ.

ದೇವರು, ಧರ್ಮ, ಕರ್ಮ, ಜನ, ಸಂಸ್ಕಾರ, ಸಾಕ್ಷಾತ್ಕಾರ ಇತ್ಯಾದಿ ಪದಗಳನ್ನು ಕುವೆಂಪುರವರು ಪದೇ ಪದೇ ಬಳಸುತ್ತಾರೆ. ಆದರೂ ಕೂಡ ಅವರ ಆಲೋಚನೆಗಳಿಗೆ ವೈಜ್ಞಾನಿಕ ತಳಹದಿ ಇದೆ ಎಂದೇ ನನ್ನ ಅನ್ನಿಸಿಕೆ. ಈ ಬಗ್ಗೆ ಆಕ್ಷೇಪಣೆಗಳು ಕಂಡುಬರುತ್ತಿರುವುದಕ್ಕೆ ಕಾರಣ ಬಹುಶಃ ಅವರದೇ ಆದ ವಿಶಿಷ್ಟ ಶೈಲಿ, ಅಷ್ಟೆ. ಈ ಶೈಲಿಯ ಕಾರಣದಿಂದ ತಪ್ಪಿಸಿಕೊಳ್ಳಲು ಸಾಹಿತಿಯಲ್ಲದ ನಾನು ಸಾಹಿತಿಗಳಿಗೆ ಒಂದು ಮಾತನ್ನು ಈ ಸಂದರ್ಭದಲ್ಲಿ ಹೇಳಲು ಇಚ್ಛೆಪಡುತ್ತೇನೆ. ವೈಜ್ಞಾನಿಕ ಜ್ಞಾನ ದಿನೇ ದಿನೇ ಹೆಚ್ಚುತ್ತಾ ಹೋದ ಹಾಗೆ ಭಾಷೆಯ ಬಳಕೆ ಕೂಡ ವಿಜ್ಞಾನಕ್ಕೆ ಹೊಂದಿಕೊಂಡಂತೆ ಬದಲಾಗುತ್ತಾ ಹೋದರೆ ಸಾಹಿತ್ಯ ಹೆಚ್ಚು ವೈಚಾರಿಕವಾಗಲು ಸಾಧ್ಯ ಎಂದು ನನ್ನ ಭಾವನೆ. ಸೂರ್ಯ, ಚಂದ್ರ, ಗಾಳಿ, ಬೆಳಕು, ಎನ್ನುವ ದೈನಂದಿನ ವಿಷಯಗಳಲ್ಲಿಯೂ ನಾವು ಈ ದಿಕ್ಕಿನಲ್ಲಿ ಪ್ರಯತ್ನ.

ಈ ಬದಲಾವಣೆ ಆಗದಿದ್ದಲ್ಲಿ ಮುಕ್ತಿಯೋಗ್ಯರು, ನಿತ್ಯಸಂಸಾರಿಗಳು, ತಮೋ ಯೋಗ್ಯರು ಎಂದು ಆತ್ಮಗಳನ್ನೇ, ವರ್ಗೀಕರಿಸಿರುವ ಮಾಧ್ವ ಸಿದ್ಧಾಂತವನ್ನೇ ಪ್ರತಿಭಟಿಸಿದ ಕುವೆಂಪುರವರಿಗೆ ಕರ್ಮ, ಜನ್ಮಾಂತರಗಳಲ್ಲಿ ನಂಬಿಕೆಯಿದೆ ಎನ್ನುವ ಅಪಕ್ವ ವಿಮರ್ಶೆಗಳು ಮುಂದುವರಿಯುತ್ತಾ ಹೋಗುವ ಸಾಧ್ಯತೆ ಹೆಚ್ಚು.

ಎರಡನೆಯದಾಗಿ, ಪುರೋಹಿತಶಾಹಿಯ ವಿರುದ್ಧ ಮಾತನಾಡುವಷ್ಟು ಗಟ್ಟಿಯಾಗಿ, ಬಂಡವಾಶಾಹಿಯ ವಿರುದ್ಧ ಕುವೆಂಪು ಏಕೆ ಮಾತನಾಡುವುದಿಲ್ಲ ಎನ್ನುವ ಟೀಕೆಗಳೂ ಸಹ ಭಾರತದ ಮೂರ್ತ ಸಮಾಜದಲ್ಲಿ ಅಸಮಾನತೆಗಳಿಗಿರುವ ಕಾರಣಗಳನ್ನು ಆ ಮೂಲಕ ಭಾರತದ ಬಂಡವಾಳಶಾಹಿಯ ಸ್ವರೂಪವನ್ನೂ ಅರ್ಥಮಾಡಿಕೊಳ್ಳುವುದು ಅವಶ್ಯಕವಾಗುತ್ತದೆ.

ಇದನ್ನೂ ಓದಿ:ಪೌರೋಹಿತ್ಯ ಧಿಕ್ಕರಿಸಿದ ವಿವಾಹದ ಪರಿಕಲ್ಪನೆ ’ಮಂತ್ರ ಮಾಂಗಲ್ಯ’

ಸೂಕ್ಷ್ಮಮತಿಯುಳ್ಳ ಯಾರಿಗೇ ಆದರೂ ಭಾರತದಲ್ಲಿನ ಅಸಮಾನತೆಗಳಿಗೆ ಮೂರು ಮುಖ್ಯ ಕಾರಣಗಳಿವೆ ಎನ್ನುವುದು ಗೊತ್ತಾಗುತ್ತದೆ. ಇವು, ಇಂಗ್ಲಿಷ್ ಭಾಷೆ, ಜಾತಿ ಪದ್ಧತಿ, ಹಾಗೂ ಆಸ್ತಿ ವ್ಯವಸ್ಥೆ. ಇದನ್ನು ಭಾರತದಲ್ಲಿ ಗುರುತಿಸಿದವರು ಇಬ್ಬರೇ. ಭಾರತ ರಾಜಕೀಯ ಕ್ಷೇತ್ರದಲ್ಲಿ ಲೋಹಿಯ, ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು. ಮೊದಲೆರಡರ ವಿರುದ್ಧ ನಿರಂತರವಾಗಿ ಪ್ರತಿಭಟಿಸುತ್ತಿರುವ ವ್ಯಕ್ತಿ ಕರ್ನಾಟಕದಲ್ಲಿ ಕುವೆಂಪುರವರನ್ನು ಬಿಟ್ಟರೆ ಬೇರೆ ಮತ್ತೊಬ್ಬರಿಲ್ಲ ಎನ್ನುವುದು ನಿಮಗೆಲ್ಲ ತಿಳಿದಿರುವ ವಿಷಯ. ಈ ಬಗ್ಗೆ ವಿವರಗಳಿಗೆ ಹೋಗಬೇಕಾದ ಅವಶ್ಯಕತೆಯಿಲ್ಲ.

ಆಸ್ತಿ ವ್ಯವಸ್ಥೆಯ ಅಸಮಾನತೆಯ ಬಗ್ಗೆ, ’ಅಲ್ಲಿ-ಇಲ್ಲಿ, ’ರೈತನ ದೃಷ್ಟಿ’, ’ಹೊಸಬಾಳಿನ ಗೀತೆ’ ಕವನಗಳನ್ನು ಉದಾಹರಿಸಬಹುದಾದರೂ, ಅವರ ಗದ್ಯ ಬರವಣಿಗೆಯ ನಡುವೆಯೂ ಅವರ ಬಂಡವಾಳಶಾಹಿ ವಿರೋಧವನ್ನು “ಧಾರ್ಮಿಕ ಕಾರಣಗಳಿಂದ ನಡೆಯುತ್ತಿದ್ದ ಶೋಷಣೆ ಈಗ ಕಾರ್ಮಿಕ ಕಾರಣಗಳಿಂದಲೂ ನಡೆಯುತ್ತಿದೆ” ಎನ್ನುವ ಪ್ರತಿಕ್ರಿಯೆಗಳ ಮೂಲಕ ಗುರುತಿಸಬಹುದಾದರೂ, ಮಾರ್ಕ್ಸ್, ಗಾಂಧಿ ಅಥವಾ ಲೋಹಿಯಾರವರು ಮಾಡಿದ ಪ್ರತಿಭಟನೆಗಳ ಪ್ರಮಾಣವನ್ನೇ ಕುವೆಂಪುರವರಲ್ಲಿ ಅಪೇಕ್ಷೆ ಪಡುವವರಿಗೆ ಆಶಾಭಂಗವಾಗಬಹುದು. “ಧಾರ್ಮಿಕ ಕಾರಣಗಳಿಂದ ನಡೆಯುತ್ತಿರುವ ಶೋಷಣೆಯ ಜೊತೆಗೇ ಕಾರ್ಮಿಕ ಕಾರಣಗಳಿಂದಲೂ ಶೋಷಣೆ ಹೆಚ್ಚಾಗುತ್ತಿದೆ” ಎನ್ನುವ ಹೇಳಿಕೆ ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿರುವ ಎಲ್ಲ ಕ್ರಾಂತಿಗಳಿಗೂ ಸಮಾಧಾನ ಕೊಡುವಷ್ಟು ಪರಿಣಾಮಕಾರಿಯಾಗಿದೆ ಎಂದು ನನಗನ್ನಿಸುತ್ತದೆ.

ಕುವೆಂಪು ಕೃತಿಗಳಲ್ಲಿ ಜಾತಿಪ್ರಜ್ಞೆ ಮಾತ್ರ ಇದೆ ವರ್ಗ ಪ್ರಜ್ಞೆ ಇಲ್ಲ ಎನ್ನುವ ಅಭಿಪ್ರಾಯಕೂಡ ಭಾರತದ ಜಾತಿಪದ್ಧತಿಯ ಸಮಗ್ರ ಅನುಭವ ಇಲ್ಲದವರಿಂದ ಬರುತ್ತಿದೆ ಎಂದು ಹೇಳಬೇಕಾಗುತ್ತದೆ. ಏಕೆಂದರೆ, ಇಂದೂ ಕೂಡ ಭಾರತದ ವರ್ಗಪ್ರಜ್ಞೆ ಮತ್ತು ವರ್ಗ ಸಂಘಟನೆ ಕೇವಲ ತುಟ್ಟಿಭತ್ಯ, ಪ್ರಾವಿಡೆಂಟ್ ಫಂಡ್, ಗ್ರಾಚುಯಿಟಿ ಮತ್ತು ಪೆನ್ಮನ್ ಲಾಭಗಳಿಗಾಗಿ ಮಾತ್ರವೇ ಹೊರತು ಜೀವನದ ಮುಖ್ಯ ಸಂಬಂಧಗಳಾದ ಆಸ್ತಿ ಸಂಬಂಧಗಳಲ್ಲಿ, ಮತ್ತು ಗಂಡು ಹೆಣ್ಣಿನ ಸಂಬಂಧಗಳಲ್ಲಿ ಗುಂಪು ಚಟುವಟಿಕೆ ಜಾತಿಯ ಆಧಾರದ ಮೇಲೆಯೇ ಆಗುತ್ತಿದೆ. ಭಾರತದಲ್ಲಿ ವರ್ಗ ಎನ್ನುವುದು ಮಿಥ್ಯ, ಜಾತಿ ಎನ್ನುವುದು ಸತ್ಯ. ವರ್ಗ ಹೋರಾಟ ಮತ್ತು ವರ್ಗ ಸಂಘರ್ಷ ಸಿದ್ಧಾಂತಗಳಲ್ಲಿ ನಂಬಿಕೆಯಿರುವವರು ಇಲ್ಲದ ವರ್ಗಗಳನ್ನು ಹುಡುಕುತ್ತಾ ಕಾಲವ್ಯಯ ಮಾಡುತ್ತಿರುವುದು ಜಾತಿಪದ್ಧತಿಯ ಬಿಗಿಮುಷ್ಟಿಯನ್ನು ಅರ್ಥಮಾಡಿಕೊಂಡಿರದ ಕಾರಣದಿಂದ.

ಇದನ್ನೂ ಓದಿ: ಮದುಮಗಳು ರಂಗದ ಹಿಂದಿನ ವಿಶ್ವಮಾನವ ಶಕ್ತಿ

ಕೊನೆಯದಾಗಿ ಭಾರತದ ರಾಜಕಾರಣದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ, ಸಂಪೂರ್ಣಕಾಂತಿ ಇವುಗಳಿಗೆ ನೇರ ಬೆಂಬಲ ನೀಡಿದ ಕುವೆಂಪು ತುರ್ತು ಪರಿಸ್ಥಿತಿಯಕಾಲದಲ್ಲಿ ಏಕೆ ಮೌನವಾಗಿದ್ದರು ಎಂದು ಕೇಳುವಾಗಲೂ ನಾವು ರಾಜಕಾರಣದಲ್ಲಿ ಆಗುವ ಸಂಕೀರ್ಣವಾದ ಕ್ರಿಯೆ-ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ, ತುರ್ತುಪರಿಸ್ಥಿತಿಯ ಕಾಲದಲ್ಲಿ ಪ್ರಶಸ್ತಿಯನ್ನು ತ್ಯಜಿಸಿದ ಕಾರಂತರು ಜಯಪ್ರಕಾಶರ ಚಳವಳಿಯನ್ನು ಆಷಾಢಭೂತಿಗಳ ಚಳುವಳಿಯೆಂದು, ತುರ್ತುಪರಿಸ್ಥಿತಿಗೆ ಬಹಳ ಹಿಂದೆಯೇ ಏಕೆ ಹೇಳಿದರು ಎನ್ನುವ ಪ್ರಶ್ನೆಗಳನ್ನು ಕೇಳುವವರೂ ಇದ್ದಾರೆ. ನನ್ನ ಅಭಿಪ್ರಾಯದಲ್ಲಿ ಈ ಎರಡು ಪ್ರಶ್ನೆಗಳನ್ನೂ ಕೇಳಬಾರದು. ಇದಕ್ಕೆ ಉತ್ತರಗಳನ್ನು ಕುವೆಂಪು ಕಾರಂತರನ್ನು ಬಿಟ್ಟು ಬೇರೆಯವರು ಉತ್ತರಿಸಲೂ ಹೋಗಬಾರದು.

ಏಕೆಂದರೆ, ತುರ್ತುಪರಿಸ್ಥಿತಿಗೆ ಕಾರಣ ಜಯಪ್ರಕಾಶ್ ನಾರಾಯಣರ ಸಂಪೂರ್ಣ ಕ್ರಾಂತಿ ಸಂಘಟನೆ. ಇದನ್ನು ಕರ್ನಾಟಕದಲ್ಲಿ ಸಂಘಟನೆ ಮಾಡಿದವರು ಪ್ರಾರಂಭಕ್ಕೆ ಸಮಾಜವಾದಿ ಯುವಜನ ಸಭಾದ ಕಾರ್ಯಕರ್ತರು. ನಂತರ ಚಾರ್ವಾಕ ಸಮ್ಮೇಳನದ ಕಾರ್ಯಕರ್ತರು. ನಂತರ ಕರ್ನಾಟಕ ಬರಹಗಾರರ ಕಲಾವಿದರ ಒಕ್ಕೂಟದ ಸದಸ್ಯರು, ಕೊನೆಗೆ ನವನಿರ್ಮಾಣ ಕ್ರಾಂತಿ ಸದಸ್ಯರು. ಈ ಎಲ್ಲ ಸದಸ್ಯರ ಚಟುವಟಿಕೆಯು, ಜಾತಿಪದ್ಧತಿ ವಿರೋಧಿ ಚಟುವಟಿಕೆಯ ಹಿನ್ನೆಲೆಯಿಂದಾಗಿ ಇದೊಂದು ಸಾಂಸ್ಕೃತಿಕ ಚಳುವಳಿಯ ಸ್ವರೂಪ ತೆಗೆದುಕೊಂಡಿತ್ತು. ಆನಂತರ ಈ ಚಳವಳಿಯ ಉಸಾಬರಿಯನ್ನು ಜಾತಿವಾದಿ ಶಕ್ತಿಗಳು, ಮಾಜಿ ಭ್ರಷ್ಟ ರಾಜಕಾರಣಿಗಳು ಮತ್ತು ವೈದಿಕ ಸರ್ವೋದಯ ಕಾರ್ಯಕರ್ತರು ಕೈಗೆತ್ತಿಕೊಳ್ಳುವ ಸನ್ನಾಹ ನಡೆಸಿ ನಿಜವಾದ ಯುವಜನರ ಕ್ರಾಂತಿ ಸಂಘಟನೆಯನ್ನು ಹಾಳುಗೆಡವಿದವು. ಅದರ ಪರಿಣಾಮ ಕರ್ನಾಟಕದಲ್ಲಿ ಏನಾಯಿತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.

ಈ ಎಲ್ಲ ಘಟನೆಗಳೂ ಕೆಲಕೆಲವು ರಾಜಕೀಯ ಬೆಳವಣಿಗೆಗಳ ನಡುವೆ ಒಬ್ಬ ವ್ಯಕ್ತಿಯ ತೀರ್ಮಾನವನ್ನು ನಿಯಂತ್ರಿಸುತ್ತದೆ ಎಂದು ನನ್ನ ಭಾವನೆ. ಸಾಂಸ್ಕೃತಿಕ ಚಳವಳಿಯಲ್ಲಿದ್ದವರು ಜೆ.ಪಿ. ಚಳವಳಿಯಲ್ಲಿದ್ದದ್ದರಿಂದ ಕಾರಂತರಿಗೆ ಅದು ಆಷಾಢಭೂತಿ ಚಳವಳಿಯಾಗಿ ನಂತರ ಜಾತಿವಾದಿ ಶಕ್ತಿಗಳು ಪ್ರಬಲವಾದಾಗ ಸರಿಯಾದ ಕ್ರಾಂತಿಯಾಗಿ ಕಂಡಿರಬಹುದು; ಕುವೆಂಪುರವರಿಗೂ ಹೀಗೆಯೇ ಅನ್ನಿಸಿರಬಹುದು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಆದರೆ, ನನ್ನ ಅಭಿಪ್ರಾಯದಲ್ಲಿ ವಿಶಿಷ್ಟ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಏಕೆ ಹೇಗೆ ವರ್ತಿಸಿದ ಎನ್ನುವ ಪ್ರಶ್ನೆಗೆ ಆ ವ್ಯಕ್ತಿಯೇ ಉತ್ತರ ಕೊಡಬೇಕಾಗುತ್ತದೆ. ಆದ್ದರಿಂದ ಕುವೆಂಪುರವರ ಪುನರ್ ಮೌಲೀಕರಣಕ್ಕೆ ಧರ್ಮ, ಆಧ್ಯಾತ್ಮಿಕತೆ, ವಿಚಾರವಾದ ಇತ್ಯಾದಿ ವಿಷಯಗಳ ಬಗ್ಗೆ ಮುಂದಿನ ಪೀಳಿಗೆ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ನನ್ನ ಅಭಿಪ್ರಾಯ.

ಪ್ರೊ.ಎಂ.ಡಿ. ನಂಜುಂಡಸ್ವಾಮಿ

ದಿವಂಗತ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರು. ತಮ್ಮ ಪ್ರಖರ ವಿಚಾರ ಲಹರಿಯಿಂದ ನಾಡಿನ ಹಲವು ಚಳವಳಿಗಳನ್ನು ಕಟ್ಟಿ ಮುನ್ನಡೆಸಿದವರು. ಸಮಾಜವಾದಿ ಯುವಜನ ಸಭಾದ ಪ್ರಾರಂಭ, ವಿದ್ಯಾರ್ಥಿ, ಕಾರ್ಮಿಕರ ಚಳವಳಿಗಳು, ಜಾತಿವಿನಾಶ ಸಮ್ಮೇಳನ, ದಲಿತ-ಬಂಡಾಯ ಚಳವಳಿ, ತುರ್ತು ಪರಿಸ್ಥಿತಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.


ಇದನ್ನೂ ಓದಿ: ಲಂಕೇಶರ ಒಡನಾಟ–ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕತೆ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...