Homeಮುಖಪುಟಪೌರೋಹಿತ್ಯ ಧಿಕ್ಕರಿಸಿದ ವಿವಾಹದ ಪರಿಕಲ್ಪನೆ ’ಮಂತ್ರ ಮಾಂಗಲ್ಯ’

ಪೌರೋಹಿತ್ಯ ಧಿಕ್ಕರಿಸಿದ ವಿವಾಹದ ಪರಿಕಲ್ಪನೆ ’ಮಂತ್ರ ಮಾಂಗಲ್ಯ’

- Advertisement -
- Advertisement -

ಕುವೆಂಪು ಸಾಹಿತಿ, ಕವಿ, ಬರಹಗಾರ, ಪ್ರಾಧ್ಯಾಪಕರಷ್ಟೇ ಅಲ್ಲ ಶ್ರೇಷ್ಠ ಸಮಾಜ ಸುಧಾರಕರು ಕೂಡ. ಸಮಾಜದಲ್ಲಿದ್ದ ಮೇಲು ಕೀಳು, ಅಸಮಾನತೆ, ಮೌಢ್ಯ, ದುಂದುವೆಚ್ಚ, ಪುರೋಹಿತಶಾಹಿಗಳ ವಿರುದ್ಧ ಗಟ್ಟಿಯಾದ ಪ್ರತಿರೋಧ ತೋರಿದವರು. ಈ ಎಲ್ಲವುಗಳ ಜೊತೆಗೆ ಅದ್ದೂರಿತನ ಮತ್ತು ಮೌಢ್ಯಗಳೇ ತುಂಬಿದ್ದ ಮದುವೆ ಎಂಬ ಸಾಂಸ್ಥಿಕ ಆಚರಣೆಯನ್ನು ಕೂಡ ಪರಿಷ್ಕರಿಸಿ ಪ್ರಚಾರ ಮಾಡಲು ಶ್ರಮವಹಿಸಿದರು ಕುವೆಂಪು.

ವಿವಾಹಗಳಿಗೆ ಜನರು ಮಾಡುತ್ತಿದ್ದ ದುಂದುವೆಚ್ಚ, ಅದರಿಂದ ಉಂಟಾಗುತ್ತಿದ್ದ ಸಾಲಬಾಧೆ, ಅಲ್ಲಿದ್ದ ಕಂದಾಚಾರ, ಪುರೋಹಿತಶಾಹಿ ವ್ಯವಸ್ಥೆ ಮುಂತಾದವುಗಳ ವಿರುದ್ಧವಿದ್ದ ಕುವೆಂಪು ಅವರು, ಜನರು ಸರಳವಾಗಿ ಮದುವೆ ಮಾಡಿಕೊಂಡು ಬದುಕಬೇಕೆಂದು ಹಂಬಲಿಸಿದ್ದರು. ಇದಕ್ಕಾಗಿ ಹುಟ್ಟುಹಾಕಿದ ಹೊಸ ಪರಿಕಲ್ಪನೆಯೆ ’ಮಂತ್ರ ಮಾಂಗಲ್ಯ’.

’ಮಂತ್ರ ಮಾಂಗಲ್ಯ’ ಎನ್ನುವುದು ಒಂದು ವಿವಾಹ ವಿಧಾನ. ಇದೊಂದು ಸರಳ ವಿವಾಹವಿಧಿ. ಸಹಸ್ರಾರು ವರ್ಷಗಳ ಕಾಲದಿಂದ ಯಾವ ಮೌಲ್ಯಗಳನ್ನು ಭಾರತೀಯರು ದೊಡ್ಡದು ಎಂದು ಭಾವಿಸಿ, ಅವುಗಳನ್ನು ಆರಾಧಿಸುತ್ತಾ, ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾ ಬಂದಿದ್ದಾರೋ, ಆ ಎಲ್ಲಕ್ಕೂ ಸಂಕೇತಗಳಾಗಿರುವ ಮತ್ತು ಅಗತ್ಯವಿರುವಷ್ಟು ಸಂಗತಿಗಳನ್ನು ವಧೂವರರು, ತಮ್ಮ ಬದುಕಿನಲ್ಲಿ ಒಳಗೊಳ್ಳುತ್ತಾ, ಈ ಮಂತ್ರಗಳ ಮೂಲಕ ವಿವಾಹ ಸಂಹಿತೆಯ ಪ್ರತಿಜ್ಞಾವಿಧಿಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವುದು.

ಮಂತ್ರ ಮಾಂಗಲ್ಯದ ವಿಧಿವಿಧಾನಗಳನ್ನು ಕುವೆಂಪು ಪುಟ್ಟ ಪುಸ್ತಕವಾಗಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿ ನಮ್ಮ ದೇಶದ ಋಷಿಗಳು, ದಾರ್ಶನಿಕರು ಸಂತರು ರಚಿಸಿದ ಸ್ತೋತ್ರ, ಪ್ರಾರ್ಥನೆ ಮತ್ತು ಮಂತ್ರಗಳು ಇವೆ. ಇವುಗಳನ್ನು ಪಠಿಸುವ ಮೂಲಕ ವಿವಾಹವಾಗುವ ವಧೂವರರು ತನ್ನ ಜೀವನ ವಿಧಾನವನ್ನು ಬದಲಿಸಿಕೊಳ್ಳಬೇಕು, ತನ್ನ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎನ್ನುವುದು ಈ ಮಂತ್ರ ಮಾಂಗಲ್ಯದ ಉದ್ದೇಶವಾಗಿದೆ.

ಈ ಹಿನ್ನೆಲೆಯಲ್ಲಿ ಮದುವೆಯಾಗುವುದಕ್ಕ್ಕೆ ಕೆಲವು ನಿಯಮಗಳನ್ನು ಮಾಡಲಾಗಿದೆ. ದುಂದುವೆಚ್ಚ ಮಾಡಬಾರದು, ಅದ್ದೂರಿತನವಿರಬಾರದು, ವಧುದಕ್ಷಿಣೆ, ವರದಕ್ಷಿಣೆ ಯಾವುದು ಇಲ್ಲಿ ನುಸುಳುವಂತಿಲ್ಲ. ಜನರು ಕಡಿಮೆ ಇರಬೇಕು, 200 ಜನರಿಗಿಂತ ಕಡಿಮೆ. ಮದುವೆಗೆ ಪುಟ್ಟ ಮಂಟಪವಿರಬೇಕು, ಯಾವ ವೇದಿಕೆಯಾದರೂ ಸಾಕು. ಅರಳಿ ಕಟ್ಟೆಯಾದರೂ ಆದೀತು. ಅಲ್ಲಿ ಉಡುಗೊರೆಗಳು ನಿಷೇಧ. ಉಡುಗೊರೆ ನೀಡಿ ತಮ್ಮ ಶ್ರೀಮಂತಿಕೆ ಪ್ರದರ್ಶಿಸುವುದಕ್ಕೆ ಅವಕಾಶವಿಲ್ಲ.

ಮಂತ್ರ ಮಾಂಗಲ್ಯದ ವಿವಾಹ ಸಂಹಿತೆಯು ಮದುವೆಯನ್ನು, ವಧೂವರರ ಮತ್ತು ಅವರ ಕುಟುಂಬದ ಖಾಸಗಿ ಸಂದರ್ಭವೆಂದು ಪರಿಗಣಿಸುತ್ತದೆ. ಇದು ಎರಡು ಕುಟುಂಬಗಳ ಆತ್ಮಾವಲೋಕನ, ಅಂತಃಸಾಕ್ಷಿಯ ಸಂದರ್ಭವಾದ್ದರಿಂದ ವಿವಾಹವು ಪ್ರಶಾಂತವಾದ, ಗಂಭೀರ ವಾತಾವರಣದಲ್ಲಿ ನಡೆಯಬೇಕು. ವಾದ್ಯ, ಓಲಗ, ತಮಟೆ, ಧ್ವನಿವರ್ಧಕಗಳಿಗೆ ಅಲ್ಲಿ ಜಾಗವಿಲ್ಲ.

ಮಂತ್ರ ಮಾಂಗಲ್ಯಕ್ಕೆ ಮುಹೂರ್ತ ನೋಡುವ ಹಾಗಿಲ್ಲ. ಮನುಷ್ಯ ಜೀವಿತವೇ ಒಂದು ಸುಮುಹೂರ್ತ ಎಂದು ಭಾವಿಸಿರುವುದರಿಂದ ಗುಳಿಕಕಾಲ, ಯಮಗಂಡಕಾಲ, ರಾಹುಕಾಲಗಳಿಗೆ ಅಲ್ಲಿ ಸ್ಥಳವಿಲ್ಲ. ಪುಸ್ತಕದಲ್ಲಿ ನೀಡಲಾಗಿರುವ ಮಂತ್ರಗಳು, ಪ್ರತಿಜ್ಞಾವಿಧಿ ಬಿಟ್ಟು ಬೇರೆ ಶಾಸ್ತ್ರಗಳಾಗಲೀ, ಜೋಯಿಸರಿಂದ ಜಾತಕ ನೋಡಿಸುವುದು ಎಲ್ಲವೂ ನಿಷಿದ್ಧ.

ಜಾತಿಪದ್ಧತಿ, ಸ್ತ್ರೀ ಅಸಮಾನತೆ, ಅಸ್ಪೃಶ್ಯತೆ, ಮೇಲು-ಕೀಳುಗಳು ತುಂಬಿರುವ ಭಾರತೀಯ ಶಾಸ್ತ್ರಗಳು ಮತ್ತು ಆಚಾರಗಳಿಂದ ಮನುಷ್ಯರನ್ನು ವಿಮುಕ್ತರಾಗಿಸುವುದೇ ಮಂತ್ರಮಾಂಗಲ್ಯದ ಮುಖ್ಯ ಉದ್ದೇಶವಾಗಿದೆ. ಪೌರೋಹಿತ್ಯಕ್ಕೆ ಪ್ರವೇಶ ನಿಷಿದ್ಧ. ಓದುಬರಹ ಬರುವ ಯಾರಾದರೂ ಮಂತ್ರ ಮಾಂಗಲ್ಯದ ಮಂತ್ರಗಳನ್ನು ಮತ್ತು ಪ್ರತಿಜ್ಞಾವಿಧಿಯನ್ನು ಬೋಧಿಸಬಹುದು. ಪ್ರತಿಜ್ಞಾ ವಿಧಿಗಳನ್ನು ಜೋರಾಗಿ ಎಲ್ಲರಿಗೂ ಕೇಳಿಸುವ ಹಾಗೆ ವಧೂವರರು ಪುನರುಚ್ಚರಿಸಬೇಕು. ಎಲ್ಲರ ಮುಂದೆ ತಾವು ಪ್ರಮಾಣಗಳನ್ನು ನೀಡುವುದನ್ನು ದೃಢಪಡಿಸಬೇಕು.

ವೇದಿಕೆ ಮೇಲೆ ’ಮಂತ್ರ ಮಾಂಗಲ್ಯ’ ಮದುವೆಯ ಪರಿಕಲ್ಪನೆಯ ಬಗ್ಗೆ ನಾಲ್ಕೈದು ನಿಮಿಷದಲ್ಲಿ ಸರಳವಾಗಿ ವಿವರಿಸಬಹುದು. ವೇದಿಕೆ ಮೇಲಿರುವ ತಮಗೆ ಆದರ್ಶ ದಂಪತಿ ಎಂದುಕೊಂಡಿರುವ ನಾಲ್ವರು ಮಹಾಪುರುಷರ ಚಿತ್ರಗಳನ್ನು ಇಡಬೇಕು. ಇವರಿಗೆ ನಮಸ್ಕರಿಸಿ ಗಂಡು – ಹೆಣ್ಣು ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು, ಇಷ್ಟ ಇದ್ದವರು ಮಾಂಗಲ್ಯಧಾರಣೆ ನೆರವೇರಿಸುವರು. ತಂದೆ – ತಾಯಿಯರು ಅವರಿಗೆ ಹಾರೈಸುತ್ತಾರೆ. ಮಡಿ, ಮೈಲಿಗೆ, ಮುಯ್ಯಿ, ಇವಾವೂ ಇರದೆ ಮದುವೆಗೆ ಬಂದವರಿಗೆಲ್ಲಾ ಅತಿ ಸರಳವಾಗಿ ಊಟದ ವ್ಯವಸ್ಥೆ ಮಾಡಬಹುದು.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಇಂತಹ ಸರಳ ಮತ್ತು ಸಾಮಾನ್ಯ ನಿಯಮಗಳೊಂದಿಗೆ ಮದುವೆ ಎಂಬ ಸಾಂಸ್ಥಿಕ ಆಚರಣೆಯಲ್ಲಿದ್ದ ಮೌಢ್ಯಗಳನ್ನು ತೊಡೆದುಹಾಕಿ ಸಮಗ್ರ ಬದಲಾವಣೆಗೆ ’ಮಂತ್ರ ಮಾಂಗಲ್ಯಪ್ರಯತ್ನಿಸಿತ್ತು. ಇದು ಕರ್ನಾಟಕದ ಹಲವು ಭಾಗಗಳಲ್ಲಿ ಒಂದು ಮಟ್ಟದ ಜನಪ್ರಿಯತೆ ಗಳಿಸಿದ್ದು ಕೂಡ ವಿಶೇಷ.

ತೇಜಸ್ವಿ ಅವರ ಮದುವೆ ಆಮಂತ್ರಣ ಪತ್ರಿಕೆ

ಮಂತ್ರ ಮಾಂಗಲ್ಯ ಸರಳ ವಿವಾಹ ಪರಿಕಲ್ಪನೆ ಹುಟ್ಟುಹಾಕಿದ್ದ ಕುವೆಂಪು ಅವರು ತಮ್ಮ ಮನೆಯಿಂದಲೇ ಬದಲಾವಣೆಯನ್ನು ಪ್ರಾರಂಭಿಸಿದ್ದರು. ಮೊದಲ ಮಂತ್ರ ಮಾಂಗಲ್ಯ ವಿವಾಹವಾಗಿದ್ದು ಅವರ ಮಗ, ಸಾಹಿತಿ ಪೂರ್ಣಚಂದ್ರ ತೇಜಸ್ವಿ. 1966ರ ನವೆಂಬರ್ 27ರಂದು ಚಿತ್ರಕೂಟದಲ್ಲಿ ತೇಜಸ್ವಿ ಮತ್ತು ರಾಜೇಶ್ವರಿಯವರದ್ದು ಮೊದಲ ಮಂತ್ರ ಮಾಂಗಲ್ಯದ ವಿವಾಹವಾಗಿದೆ. “ನಮ್ಮ ಹಿತೈಷಿಗಳಾದ ತಾವು ತಮಗೆ ಅನುಕೂಲವಿರಾಮ ದೊರೆತಾಗ ’ಚಿತ್ರಕೂಟ’ಕ್ಕೆ ಆಗಮಿಸಿ, ವಧೂವರರ ಆತಿಥ್ಯ ಸ್ವೀಕರಿಸಿ ಅವರನ್ನು ಆಶೀರ್ವದಿಸಿ, ಅವರ ಶ್ರೇಯೋಭಿವೃದ್ಧಿ ಕೋರಬೇಕೆಂದು ವಿಜ್ಞಾಪಿಸಿಕೊಳ್ಳುತ್ತೇವೆ” ಎಂದು ಬರೆದು ಆ ಮದುವೆಗೆ ಹೊರಡಿಸಿದ್ದ ಅತಿ ಸರಳ ಆಹ್ವಾನ ಪತ್ರಿಕೆ ಇಂದಿಗೂ ಜನಪ್ರಿಯವಾಗಿ ಉಳಿದುಕೊಂಡಿದೆ.

ಅಂದು ಕುವೆಂಪು ಪ್ರಚುರಪಡಿಸಿದ ಮಂತ್ರ ಮಾಂಗಲ್ಯ ಇಂದಿಗೂ ಸಾಹಿತ್ಯಾಸಕ್ತರಲ್ಲಿ, ವಿಚಾರಪರ ಆಲೋಚನೆ ಹೊಂದಿರುವವರ ನಡುವೆ ಭರವಸೆಯಾಗಿ ಉಳಿದುಕೊಂಡಿದೆ. ಮಂತ್ರ ಮಾಂಗಲ್ಯದ ಬಗ್ಗೆ, ಈ ರೀತಿಯಲ್ಲಿ ಮದುವಯಾದ ಕೆಲವರು ತಮ್ಮ ಅನುಭವಗಳನ್ನು ನಮ್ಮ ಜೊತೆಗೆ ಹಂಚಿಕೊಂಡಿದ್ದು ಹೀಗೆ.

ಮಂತ್ರ ಮಾಂಗಲ್ಯ ಕಾಲಕಾಲಕ್ಕೆ ತನ್ನದೇ ಆದ ರೀತಿಯಲ್ಲಿ ಬದಲಾವಣೆ ಹೊಂದುತ್ತಿದೆ. ಈ ಕುರಿತು ನ್ಯಾಯಪಥದೊಂದಿಗೆ ಮಾತನಾಡಿದ ರಂಗಕರ್ಮಿಯಾದ ನಯನ ಸೂಡ, “ನಾನು ಐಚ್ಛಿಕ ಕನ್ನಡದ ವಿದ್ಯಾರ್ಥಿನಿ, ನಮ್ಮ ಪಠ್ಯಗಳ ನಡುವೆ ಪ್ರಾಧ್ಯಾಪಕರು ಆಗೊಮ್ಮೆ, ಈಗೊಮ್ಮೆ ಮಂತ್ರಮಾಂಗಲ್ಯದ ಬಗ್ಗೆ ಹೇಳುತ್ತಿದ್ದರು. ವಿದ್ಯಾರ್ಥಿ ಜೀವನದಲ್ಲಿ ಆ ಬಗ್ಗೆ ಒಂದು ಅರಿವಿತ್ತು. ನಾವು ರಂಗಭೂಮಿಯೊಂದಿಗೆ ಅಂಟಿಕೊಂಡಿದ್ದವರು. ನಮಗೆ ಕುವೆಂಪು ಅವರ ನಾಟಕಗಳನ್ನು ರಂಗಭೂಮಿಗೆ ತರುವುದು ಎಲ್ಲಿಲ್ಲದ ಖುಷಿ. ನಾಟಕವೆಂದರೆ ಕುವೆಂಪು ಎಂದೇ ಬೆಳೆದವಳು ನಾನು. ಕೆಲವು ನಾಟಕಗಳ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದೇನೆ. ಆದರೆ, ಮಂತ್ರ ಮಾಂಗಲ್ಯದ ವಿಚಾರದ ಬಗ್ಗೆ ನನ್ನಲ್ಲಿ ಮತ್ತಷ್ಟು ಆಸಕ್ತಿ ಮತ್ತು ಗೌರವ ಮೂಡಿಸಿದ್ದು ನನ್ನ ಸಂಗಾತಿ. ರಂಗಭೂಮಿಯ ವೇದಿಕೆಯೇ ಮಂತ್ರ ಮಾಂಗಲ್ಯದ ವೇದಿಕೆಯಾಗಿ ಅಲ್ಲೇ ವಿವಾಹ ಬಂಧನಕ್ಕೆ ಒಳಗಾಗಿದ್ದೇವೆ. ನಮಗೆ ನಮ್ಮ ಮದುವೆಯ ಬಗ್ಗೆ ತುಂಬಾ ಹೆಮ್ಮೆ ಇದೆ. ಮದುವೆಗಾಗಿ ನಾವು ಸಾಲ ಮಾಡಲಿಲ್ಲ. ಪುರೋಹಿತರು, ಶಾಸ್ತ್ರಗಳು ಎಂದು ತಲೆ ಕೆಡಿಸಿಕೊಳ್ಳಲಿಲ್ಲ. ನನಗೆ ನೀನು ನಿನಗೆ ನಾನು ಎಂದು ಬಾಳುತ್ತಿದ್ದೇವೆ” ಎನ್ನುತ್ತಾರೆ.

ಮುಂದುವರಿದು, “ಮದುವೆಗೆ ಮನೆಯವರನ್ನು ಒಪ್ಪಿಸುವುದು ಬಹಳ ಕಷ್ಟವಾಯಿತು. ಆದರೆ ಒಳ್ಳೆಯ ಕಾರಣಕ್ಕೆ ಕೆಲವೊಂದು ಸುಳ್ಳುಗಳನ್ನು ಹೇಳುವುದು ತಪ್ಪಲಿಲ್ಲ. ಮದುವೆಯಲ್ಲಿ ಧಾರೆ ಇದೆ ಎಂದು ಮನೆಯವರನ್ನು ಒಪ್ಪಿಸಿ ಮಂತ್ರ ಮಾಂಗಲ್ಯ ವೇದಿಕೆಗೆ ಅವರನ್ನು ಕರೆ ತಂದಿದ್ದೆ” ಎಂದು ನಯನಾ ನಸುನಗುತ್ತಾರೆ.

ನಯನಾ ಸೂಡ ಮತ್ತು ರಾಜ್_ಗುರು

“ನನ್ನ ಅಣ್ಣ ಅಂಬೇಡ್ಕರ್ ಅವರ ಅನುಯಾಯಿ. ಅವರ ಆಸೆಯಂತೆ ಸರಳ ವಿವಾಹವಾಗಬೇಕೆಂಬ ಇಚ್ಛೆಯಿಂದ ಮಂತ್ರ ಮಾಂಗಲ್ಯ ಮಾಡಿಕೊಂಡರು. ಈಗ ಮಂತ್ರ ಮಾಂಗಲ್ಯದ ವಿಧಾನ ಕೊಂಚಮಟ್ಟಿಗೆ ಬದಲಾಗಿದೆ. ಸರಳ ಎಂದುಕೊಂಡೆ ಅಲ್ಪ ಸ್ವಲ್ಪ ಅದ್ಧೂರಿತನ ಕಾಣಿಸುತ್ತಿದೆ. ಅದು ಕಡಿಮೆಯಾಗಬೇಕು. ಮಂತ್ರ ಮಾಂಗಲ್ಯದ ಮೂಲ ಆಶಯಕ್ಕೆ ಧಕ್ಕೆಯಾಗಬಾರದು. ಆದರೆ ಜನರಲ್ಲಿ ಈ ಬಗ್ಗೆ ತಿಳಿವಳಿಕೆ ತುಂಬಾ ಕಡಿಮೆ ಇದೆ. ನಾವು ಮದುವೆ ಆಗುತ್ತೇವೆ ಆದರೆ ವಿಧಾನ ಬೇರೆ ಎಂದರೆ ಜನ ನೋಡುವ ರೀತಿಯೇ ಬೇರೆ. ಹಾಗಂತ ನಾವು ಹಿಂದೆ ಸರಿಯಬಾರದು, ಈ ಕುರಿತು ಅಭಿಯಾನ, ಪ್ರಚಾರ ನಡೆಸಬೇಕು” ಎಂದು ಕಳಕಳಿ ವ್ಯಕ್ತಪಡಿಸುತ್ತಾರೆ ನಯನಾ.

ಕಳೆದ ಸೆಪ್ಟಂಬರ್‌ನಲ್ಲಿ ತೇಜಸ್ವಿ ಹುಟ್ಟುಹಬ್ಬದಂದು ಮಂತ್ರ ಮಾಂಗಲ್ಯದ ಮೂಲಕ ಮದುವೆಯಾದ ವಿನುತಾ ವಿಶ್ವನಾಥ್ ಮತ್ತು ಚೇತನ್ ಮಂಜುನಾಥ್ ದಂಪತಿ ನ್ಯಾಯಪಥಕ್ಕೆ ತಮ್ಮ ಅನುಭವಗಳನ್ನು ಹಂಚಿಕೊಂಡದ್ದು ಹೀಗೆ:

“ತೀರ್ಥಹಳ್ಳಿಯಲ್ಲಿ ಹುಟ್ಟಿ ಬೆಳೆದವಳಾದರೂ ನನಗೆ ಮಂತ್ರ ಮಾಂಗಲ್ಯದ ಬಗ್ಗೆ ಅರಿವಿರಲಿಲ್ಲ. ಮೊದಲಿನಿಂದ ಮಗಳ ಮದುವೆಗೆ ಸಾಲ ಮಾಡಿ, ಜೀವನ ಪೂರ್ತಿ ಅದರ ಭಾರ ಹೊರುವ ತಂದೆ ತಾಯಿಯರನ್ನು ನೋಡಿದ್ದೇನೆ. ಆಗೆಲ್ಲಾ ಯಾಕೆ ಮದುವೆ ಸರಳವಾಗಿರಬಾರದು ಎಂಬ ಆಲೋಚನೆ ಬರುತ್ತಿತ್ತು. ಚೇತನ್ ಮಂತ್ರಮಾಂಗಲ್ಯದ ಬಗ್ಗೆ ಹೇಳಿದಾಗ ನಿಜಕ್ಕೂ ನನಗೆ ತುಂಬಾ ಖುಷಿಯಾಯಿತು. ಮದುವೆಗೆ ಮನೆಯವರನ್ನು ಒಪ್ಪಿಸುವ ದೊಡ್ಡ ಸಮಸ್ಯೆಯಿತ್ತು. ಹೇಗಾದರೂ ಸರಿ, ನಾವು ನಮ್ಮ ಕುಟುಂಬ, ಸಂಬಂಧಿಕರಿಗೆ ಈ ರೀತಿಯ ಮದುವೆ ಬಗ್ಗೆ ಪರಿಚಯ ಮಾಡಿಸುವ ಪ್ರಯತ್ನ ಮಾಡಲೇಬೇಕು ಎಂದು ನಿರ್ಧರಿಸಿದೆವು. ಅದು ಸಫಲವಾಗಿದೆ. ಆ ಆತ್ಮತೃಪ್ತಿ ನಮಗಿದೆ” ಎನ್ನುತ್ತಾರೆ ಹವ್ಯಾಸಿ ರಂಗಕರ್ಮಿ ವಿನುತಾ ವಿಶ್ವನಾಥ್.

“ಮೊದಲಿನಿಂದ ಜಾತಿ ತಾರತಮ್ಯ, ಮೇಲು-ಕೀಳು, ಹೆಣ್ಣನ್ನು ಅಡಿಯಾಳಾಗಿ ನೋಡುವ ವ್ಯವಸ್ಥೆ ನೋಡಿ, ನನಗೆ ಇವುಗಳನ್ನು ದಾಟಿ ಮದುವೆಯಾಗುವ ಕನಸಿತ್ತು. ಹೆಣ್ಣಿನ ತಂದೆ-ತಾಯಿ ಗಂಡಿನ ಪಾದ ತೊಳೆಯುವ ಆ ದೃಶ್ಯ ನನಗೆ ಹಿಂಸೆ ತರುತ್ತಿತ್ತು. ಅದಕ್ಕಾಗಿಯೇ ನನ್ನ ನೆಚ್ಚಿನ ತೇಜಸ್ವಿಯವರಂತೆ ಮಂತ್ರ ಮಾಂಗಲ್ಯವಾಗಲು ನಿರ್ಧರಿಸಿದೆವು” ಎನ್ನುವ ಅವರು “ಹೆಣ್ಣಿಗೆ ಸಮಾನತೆ ನೀಡುವ, ಯಾರು ಮೇಲಲ್ಲ, ಯಾರು ಕೀಳಲ್ಲ ಎನ್ನುವ ಅಂಶಗಳನ್ನು ಯಾವ ಶಾಸ್ತ್ರಗಳು ಹೇಳುತ್ತೆವೆ ನೀವೇ ಹೇಳಿ” ಎಂದು ಪ್ರಶ್ನಿಸುತ್ತಾರೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಚೇತನ್ ಮಂಜುನಾಥ್.

“ಇಂದಿಗೂ ನನ್ನ ಸ್ನೇಹಿತರು, ನಾನು ಕೆಲಸ ಮಾಡುವ ಕನ್ನಡ ಚಿತ್ರೋದ್ಯಮದಲ್ಲಿ ಶೇ.90ರಷ್ಟು ಮಂದಿಗೆ ಈ ಕುರಿತು ಯಾವುದೇ ಮಾಹಿತಿಯಿಲ್ಲ. ನಮ್ಮ ಮದುವೆಯನ್ನೇ ವಿಭಿನ್ನ ಎಂದು ನೋಡಿದವರಿದ್ದಾರೆ. ಅವರಿಗೆ ಇದು ಕುವೆಂಪು ಬರೆದ ಸರಳ ವಿವಾಹದ ಪರಿಕಲ್ಪನೆ ಎಂಬುದು ತಿಳಿದಿಲ್ಲ. ಕಡಿದಾಳು ಶಾಮಣ್ಣ ಅವರ ಆತ್ಮಚರಿತ್ರೆಯಲ್ಲಿ ಮಂತ್ರ ಮಾಂಗಲ್ಯ ಪರಿಕಲ್ಪನೆಯ ಹುಟ್ಟಿನ ಬಗ್ಗೆ ವಿಚಾರಗಳಿವೆ” ಎನ್ನುತ್ತಾರೆ ಚೇತನ್.

“ಬದಲಾವಣೆ ನಮ್ಮ ಮನೆಯಿಂದ ಆಗಬೇಕು. ಅಂದು ನಮ್ಮ ಮನೆಯಲ್ಲಿ ಮಂತ್ರ ಮಾಂಗಲ್ಯಕ್ಕೆ ಒಪ್ಪಿಗೆ ನೀಡಲು ತುಂಬಾ ಸತಾಯಿಸಿದ್ದರು. ಆದರೆ, ಅಲ್ಲಿನ ಪ್ರತಿಜ್ಞಾ ವಿಧಿಗಳನ್ನು ಕೇಳಿದ ಮೇಲೆ, ಮನೆಯಲ್ಲಿ ನನ್ನ ತಮ್ಮನ ಮದುವೆಯನ್ನು ಇದೇ ರೀತಿ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಿಂತ ಆತ್ಮತೃಪ್ತಿ ಬೇರೇನಿದೆ..? ಆದರೂ ನಾನು ನನ್ನ ಪರಿಸರದಲ್ಲೇ ಎಲ್ಲರಿಗೂ ಈ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇನೆ. ಎಷ್ಟೋ ಹೆಣ್ಣು ಮಕ್ಕಳು ಮತ್ತು ಅವರ ಕುಟುಂಬಸ್ಥರು ಕಣ್ಣೀರು ಹಾಕುವುದು ತಪ್ಪುತ್ತದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ವಿನುತಾ ವಿಶ್ವನಾಥ್ ಮತ್ತು ಚೇತನ್ ಮಂಜುನಾಥ್

ಮಂತ್ರ ಮಾಂಗಲ್ಯ ಕೇವಲ ಸರಳ ವಿವಾಹಕ್ಕೆ ಮಾತ್ರ ಸೀಮಿತವಲ್ಲ. ಇದರ ಉದಾತ್ತ ಮತ್ತು ವಿಚಾರಪರ ಪ್ರತಿಜ್ಞಾ ವಿಧಿಗಳನ್ನು ಜೀವನ ಪೂರ್ತಿ ಅನುಸರಿಸಬೇಕು. ಈಗ ಕೆಲವು ಮಂತ್ರ ಮಾಂಗಲ್ಯ ಮದುವೆಗಳಲ್ಲಿ ಅದ್ದೂರಿತನ ಕಾಣಿಸುತ್ತಿದೆ. ಭಾಗವಹಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಖಾಸಗಿ ಸಮಾರಂಭವೆಂಬುದು ಹೋಗಿ ಸಾರ್ವಜನಿಕ ಸಮಾರಂಭವಾಗಿದೆ. ವಧೂವರರ ವೇಷಭೂಷಣಗಳಲ್ಲೂ ಬದಲಾವಣೆಯಾಗಿದೆ. ಮಂತ್ರ ಮಾಂಗಲ್ಯ ಮಾಡಿಕೊಂಡು ಸಂಜೆ ರಿಸೆಪ್ಶನ್ ಮಾಡಿಕೊಳ್ಳುವವರು ಇದ್ದಾರೆ. ಇವುಗಳ ನಡುವೆಯೂ ಇಂತಹ ಒಂದು ಪರಿಕಲ್ಪನೆಯನ್ನು ಮೂಲ ಆಶಯದಂತೆ ಒಪ್ಪಿ ಅಳವಡಿಸಿಕೊಳ್ಳುವ ಯುವಜನರು ಬದಲಾವಣೆಯ ಆಶಾಭಾವನೆ ಮೂಡಿಸುತ್ತಿದ್ದಾರೆ.

ಸಾಹಿತ್ಯಾಸಕ್ತರು, ರಂಗಭೂಮಿ ಕಲಾವಿದರು, ಸಾಮಾಜಿಕ ಹೋರಾಟಗಾರರಿಗೆ ಮಾತ್ರ ಈ ವಿವಾಹ ಸಂಹಿತೆಯ ಕುರಿತು ಅರಿವಿದೆ ಎಂಬ ಮಾತನ್ನು ಮಾನವ ಮಂಟಪ ವೇದಿಕೆಯ ಡಾ. ಮಲ್ಲಿಕಾ ಬಸವರಾಜು ಅವರು ನಿರಾಕರಿಸುತ್ತಾರೆ.

“ಇಂದಿನ ಯುವಜನರು ಅದರಲ್ಲೂ ಕುವೆಂಪು, ತೇಜಸ್ವಿ ಅವರನ್ನು ಓದಿಕೊಂಡವರಿಗೆ ಮಂತ್ರ ಮಾಂಗಲ್ಯದ ಕುರಿತು ಉತ್ತಮ ತಿಳಿವಳಿಕೆ ಇದೆ. ಅವರ ಉದ್ದೇಶಗಳ ಬಗ್ಗೆ ವಿಶ್ವಾಸವಿದೆ ಎನ್ನುತ್ತಾರೆ. ನಾವು ಮದುವೆ ಮಾಡಿಸಿರುವ ಎಷ್ಟೋ ದಂಪತಿಗಳಲ್ಲಿ ವೈದ್ಯರು, ಎಂಜಿನಿಯರ್‌ಗಳು ಇದ್ದಾರೆ. ಇವರೆಲ್ಲಾ ಈ ವಿಚಾರಗಳ ಬಗ್ಗೆ ಕೇಳಿ, ತಿಳಿದು ಒಪ್ಪಿದ್ದಾರೆ. ಇಷ್ಟಪಟ್ಟು ಮದುವೆಯಾಗಿದ್ದಾರೆ. ಜಾತಿವ್ಯವಸ್ಥೆಯನ್ನು ಮೆಟ್ಟಿ ನಿಲ್ಲಲು ಇದು ತುಂಬಾ ಸಹಾಯಕ” ಎನ್ನುತ್ತಾರೆ.

“ರೈತ ಚಳವಳಿಯ ಆರಂಭದಲ್ಲಿ ಮಂತ್ರ ಮಾಂಗಲ್ಯದ ಒಂದು ವೇವ್ ಸೃಷ್ಟಿಯಾಗಿತ್ತು. ನಂತರ ಅದು ಕಡಿಮೆಯಾಗಿದೆ. ಆದರೆ, ತೇಜಸ್ವಿಯವರ ವಿಚಾರಗಳಿಂದ ಪ್ರಭಾವಿತರಾಗಿರುವ ಯುವಜನತೆ ಮಾತ್ರ ಮಂತ್ರ ಮಾಂಗಲ್ಯದ ಬಗ್ಗೆ ಅಪಾರ ವಿಶ್ವಾಸವಿರಿಸಿದ್ದಾರೆ. ಇದರ ಉದ್ದೇಶಗಳಿಂದ ಪ್ರಭಾವಿತರಾಗಿದ್ದಾರೆ. ಇದಕ್ಕೆ ಮತ್ತಷ್ಟು ಸಹಾಯಕವಾಗಿರುವುದು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು. ಫೇಸ್‌ಬುಕ್ ಈ ಒಂದು ಕಾರಣಕ್ಕೆ ಮುಖ್ಯ ಎನಿಸುತ್ತದೆ. ಅಲ್ಲಿ ಹಾಕಲಾಗುವ ಮಂತ್ರ ಮಾಂಗಲ್ಯದ ಪೋಸ್ಟ್‌ಗಳಿಗೆ ಬರುವ ಪ್ರತಿಕ್ರಿಯೆಗಳು ಮತ್ತಷ್ಟು ಜನರು ಸರಳ ವಿವಾಹವಾಗಲು ಪ್ರೇರೇಪಿಸುತ್ತವೆ. ನಾವು ಎಷ್ಟೋ ಮಂತ್ರ ಮಾಂಗಲ್ಯ ವಿವಾಹಗಳನ್ನು ಎಷ್ಟು ಸರಳವಾಗಿ ನೆರವೇರಿಸಿದ್ದೇವೆ ಎಂದರೆ, ಒಂದು ಚಹಾ, ಕಾಫಿಯಲ್ಲೇ ಮದುವೆ ಮುಗಿದುಹೋಗಿದೆ. ಇಂತಹ ಒಂದು ಪರಿಕಲ್ಪನೆ ಹುಟ್ಟುಹಾಕಿದ ಕುವೆಂಪು ಅವರಿಗೆ ಅದೆಷ್ಟು ಧನ್ಯವಾದ ಹೇಳಿದರೂ ಕಡಿಮೆ” ಎನ್ನುತ್ತಾರೆ ಡಾ. ಮಲ್ಲಿಕಾ ಬಸವರಾಜು.

ಮಂತ್ರ ಮಾಂಗಲ್ಯ ರೀತಿಯಲ್ಲಿ ಮದುವೆಯಾಗುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು. ಸಾಮಾಜಿಕ ಬದಲಾವಣೆಗೆ ಈ ಮಂತ್ರ ಮಾಂಗಲ್ಯ ಶ್ರೇಷ್ಠ ಕೊಡುಗೆಯಾಗಿದೆ. ಸಮಾಜದಲ್ಲಿನ ಮೌಢ್ಯ, ಮೂಢನಂಬಿಕೆ, ಪುರೋಹಿತಶಾಹಿ ವರ್ಗಕ್ಕೆ ಸವಾಲೆಸೆಯುವ ಈ ಮಂತ್ರ ಮಾಂಗಲ್ಯ ಎಷ್ಟೋ ಹೆಣ್ಣು ಮಕ್ಕಳ ಕುಟುಂಬಗಳನ್ನು ಕಾಪಾಡಬಹುದು. ಅವರನ್ನು ಸಾಲದ ಶೂಲದಿಂದ ಹೊರತೆಗೆಯಬಹುದು.

– ಮಮತಾ. ಎಂ

ಇದನ್ನೂ ಓದಿ: ಮದುಮಗಳು ರಂಗದ ಹಿಂದಿನ ವಿಶ್ವಮಾನವ ಶಕ್ತಿ

(ಓದುಗರ ಮಾಹಿತಿಗಾಗಿ – ಮಂತ್ರ ಮಾಂಗಲ್ಯ ವಿವಾಹ ಸಂಹಿತೆಯ ಪ್ರತಿಜ್ಞಾ ವಿಧಿಯನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ)

ಶ್ರೀಯುತ……………..ಎಂಬ ವರನೇ..
ಶ್ರೀಮತಿ………………..ಎಂಬ ವಧುವೇ..
1. ಇಲ್ಲಿ ಈ ದಿನ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುವುದರ ಮೂಲಕ ನೀವು ಮಾನಸಿಕ, ಆಧ್ಯಾತ್ಮಿಕ, ದಾಸ್ಯಗಳ ಸಂಕೋಲೆಗಳಿಂದ ಮುಕ್ತರಾಗುತ್ತಿದ್ದಿರಿ.
2. ನೀವು ಈ ಭೂಮಿಯಲ್ಲಿ ಯಾವುದೇ ಜಾತಿ – ಜನಾಂಗಗಳಿಗಿಂತ ಮೇಲಾದವರಲ್ಲ.
3. ಹಾಗೆಯೇ ಯಾವುದೇ ಜಾತಿ – ಜನಾಂಗಗಳಿಗಿಂತ ಕೀಳಾದವರೂ ಅಲ್ಲ.
4. ನಿಮ್ಮನ್ನು ಇಂದು ಮನುಷ್ಯ ಸಮಾಜದ ಎಲ್ಲ ಕೃತಕ ಜಾತಿಗಳಿಂದ ಮುಕ್ತರನ್ನಾಗಿಸಿದ್ದೇವೆ.
5. ನಿಮ್ಮನ್ನು ಇಂದು ಎಲ್ಲ ಸಂಕುಚಿತ ಮತಧರ್ಮಗಳಿಂದ ನಿಮ್ಮನ್ನು ಮುಕ್ತರನ್ನಾಗಿಸಿದ್ದೇವೆ.
6. ಎಲ್ಲ ಆಚಾರ ಸಂಪ್ರದಾಯಗಳಿಂದ ಮುಕ್ತರನ್ನಾಗಿಸಿದ್ದೇವೆ.
7. ನಿಮ್ಮನ್ನು ಇಂದು ಅಸತ್ಯ ಮತ್ತು ಮೂಢನಂಬಿಕೆಗಳಿಂದ ದೂರಾಗಿಸಿದ್ದೇವೆ.
8. ಮನುಷ್ಯ ಜೀವಿತ ಕಾಲವೇ ಒಂದು ಸುಮಹೂರ್ತ. ಕಾಲವು ನಿರ್ಗುಣವಾದದ್ದು, ರಾಹುಕಾಲ, ಗುಳಿಕಕಾಲವನ್ನು ನೋಡುವ ಅಗತ್ಯವಿಲ್ಲ.
9. ಜೀವಿತ ಕಾಲದ ಪ್ರತಿ ಕ್ಷಣವೂ ಅತ್ಯಮೂಲ್ಯ. ನಿಮ್ಮ ಕರ್ತವ್ಯ ಮತ್ತು ನಡವಳಿಕೆಗಳಿಂದ ಸತ್ಯವನ್ನು ಅರಿತು ಒಳ್ಳೆಯ ಕಾಲವನ್ನಾಗಿ ಮಾಡಿಕೊಳ್ಳಬೇಕು.
10. ನೀವು ಯಾವುದೇ ಮನೆ ದೇವರ, ಕುಲದೇವರ ಅಡಿಯಾಳಾಗಿ ಬದುಕಬೇಕಿಲ್ಲ. ಮನುಷ್ಯ ಸಮಾಜದ ಮಾನವೀಯ ಮೌಲ್ಯಗಳೇ ಮೊದಲನೆಯ ಹಾಗೂ ಕೊನೆಯ ದೇವರು.
11. ಮಾನವರೆಲ್ಲರೂ ಸಮಾನರು. ಪುರುಷರು ಸ್ತ್ರೀಗಿಂತ ಮೇಲು ಎನ್ನುವ ಎಲ್ಲಾ ಧರ್ಮಗ್ರಂಥಗಳನ್ನು, ಸಂಪ್ರದಾಯಗಳನ್ನು ಇಂದು ತ್ಯಜಿಸಿದ್ದೀರಿ.
12. ಗಂಡನಾಗಲೀ, ಹೆಂಡತಿಯಾಗಲಿ ಯಾರಿಗೂ ಯಾರೂ ಅಧೀನರಲ್ಲ. ಇಬ್ಬರೂ ಸರ್ವ ಸ್ವತಂತ್ರರು. ಸಮಾನತೆಯುಳ್ಳವರು ಹಾಗೂ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸವುಳ್ಳವರು.
13. ಗಂಡ ಹೆಂಡತಿಯರನ್ನು ಒಟ್ಟಿಗೆ ಬದುಕುವಂತೆ ಮಾಡುವ ಸಾಧನ ಒಂದೇ ಪ್ರೀತಿ.
ಒಬ್ಬರನ್ನೊಬ್ಬರು ಪ್ರೀತಿಸದಿದ್ದರೇ ತಾಳಿ ಕಟ್ಟಿಕೊಂಡರೂ ವ್ಯರ್ಥ.
14. ದೇವರ ಹೆಸರಿನಲ್ಲಿ ಸುಳ್ಳು ಹೇಳುವವರನ್ನು, ವಂಚನೆ ಮಾಡುವವರನ್ನು ನಂಬಬಾರದು.
15. ನಿಮ್ಮ ಅನುಭವ ನಿಮಗೆ ದೇವರು ಇದ್ದಾನೆ ಎಂದು ತಿಳಿಸಿದರೆ, ದೇವರು ಇದ್ದಾನೆ ಎಂದು ತಿಳಿಸಿ. ಇಲ್ಲವೆಂದರೇ ಇಲ್ಲ ಎಂದು ತಿಳಿಸಿ.
16. ನಿಮ್ಮ ಅನುಭವ ನಿಮಗೆ ದೇವರು ಇದ್ದಾನೋ, ಇಲ್ಲವೋ ಎಂದು ತಿಳಿಸಿದರೆ ಅದನ್ನೇ ತಿಳಿಸಿ.
17. ನಿರ್ಭೀತಿಯಿಂದ ವಾಸ್ತವವನ್ನು ಒಪ್ಪಿಕೊಳ್ಳುವುದು ಸತ್ಯಾನ್ವೇಷಣೆಯ ಮೊದಲ ಹಂತ, ಯೋಗದ ಮೊದಲ ಪಾಠ.
18. ಪರವಂಚನೆ ಮತ್ತು ಆತ್ಮವಂಚನೆ ಮಾಡಿಕೊಳ್ಳುವವರಿಗೆ ಅಜ್ಞಾನದಿಂದ, ತಮಸ್ಸಿನಿಂದ ಮುಕ್ತಿ ಇರುವುದಿಲ್ಲ.
19. ದೇವರ ಹೆಸರಿನಲ್ಲಿ ಸುಳ್ಳು ಹೇಳುವ ಮಠಾಧಿಪತಿಗಳು, ಜಗದ್ಗುರುಗಳು, ಆಚಾರ್‍ಯರನ್ನು ತ್ಯಜಿಸಿ.
20. ದೇವರ ಹೆಸರಿನಲ್ಲಿ ಧನಾರ್ಜನೆ ಮಾಡುವ ದೇವಸ್ಥಾನಗಳನ್ನು, ತೀರ್ಥಕ್ಷೇತ್ರಗಳನ್ನು ತಿರಸ್ಕರಿಸಿ.
21. ವರದಕ್ಷಿಣೆ ಅಥವಾ ವಧುದಕ್ಷಿಣೆ ವ್ಯವಹಾರಗಳಿಗೆ ಒಳಗಾಗದೆ, ನಿಮ್ಮ ಸ್ವಪ್ರಯತ್ನದಿಂದ ತಂದೆ-ತಾಯಿಗಳಿಗೆ ಆರ್ಥಿಕ ಹೊರೆಯಾಗದಂತೆ ವಿವಾಹವಾಗುತ್ತಿದ್ದೀರಿ.

ಈಗ ನೀವು ಹೇಳಿದ ಈ ಮಾತುಗಳೆಲ್ಲಾ ನಿಮಗೆ ಜೀವನದ ದಾರಿದೀಪವಾಗಲಿ; ಅಸಮಾನತೆ, ಮೌಢ್ಯ, ಆಜ್ಞಾನ, ಅಂಧಕಾರಗಳ ವಿರುದ್ಧದ ಹೋರಾಟದಲ್ಲಿ ನೀವೂ ಭಾಗಿಗಳಾಗಬೇಕೆಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ನೀವು ಈ ದಿನದಿಂದ ದಂಪತಿಗಳೆಂದು ಘೋಷಿಸುತ್ತೇವೆ.

ವರನ ಸಹಿ
ವಧುವಿನ ಸಹಿ
ವರನ ತಂದೆ ತಾಯಿ
ವಧುವಿನ ತಂದೆ ತಾಯಿ
ಬಂದು ಬಳಗ, ಸ್ನೇಹಿತರು.


ಇದನ್ನೂ ಓದಿ: ಅಂಬೇಡ್ಕರ್-ವಾಲ್ಮೀಕಿ ಭಾವಚಿತ್ರದ ಮುಂದೆ ಮದುವೆಯಾದ ಪ್ರೇಮಿಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸಾಮೂಹಿಕ ಮದುವೆ ಮಾಡುವ ಸಂಘ ಸಂಸ್ಥೆಗಳು ಈ ಮಂತ್ರಮಾಂಗಲ್ಯ ಮದುವೆಯನ್ನು ನಡೆಸ ಬೇಕು.. ಆ ಮೂಲಕ ಈ (ಮಂತ್ರಮಾಂಗಲ್ಯ) ವಿಚಾರವನ್ನು ಎಲ್ಲರಿಗೂ ಪ್ರಚಾರ ಮಾಡಬಹುದು.

LEAVE A REPLY

Please enter your comment!
Please enter your name here

- Advertisment -

Must Read

ಹಾವೇರಿ| ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಪ್ರಕರಣ: ಆರೋಪಿಗಳ ಬಂಧನ

0
ಹಾವೇರಿ ಜಿಲ್ಲೆಯಲ್ಲಿ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಮಹಿಳೆಯ...