ಭಾರತದ ಉನ್ನತ ಔಷಧ ನಿಯಂತ್ರಣ ಸಂಸ್ಥೆ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ನಡೆಸಿದ ಪರೀಕ್ಷೆಯಲ್ಲಿ ಜನಪ್ರಿಯ ಔಷಧಿಗಳಾದ ಪ್ಯಾರಸಿಟಮಲ್, ಪ್ಯಾಂಟೊಪ್ರಜೋಲ್
ಮತ್ತು ಹಲವಾರು ಆಂಟಿ ಬಯೋಟಿಕ್‌ಗಳು ಒಳಗೊಂಡಂತೆ ಸುಮಾರು 50 ಔಷಧಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾಗಿವೆ.
ಇವುಗಳಲ್ಲಿ ಸುಮಾರು 22 ಔಷಧಿಗಳನ್ನು ಹಿಮಾಚಲ ಪ್ರದೇಶದಲ್ಲಿ ಉತ್ಪಾದಿಸಲಾಗಿದೆ ಎಂದು ಸಿಡಿಎಸ್‌ಸಿಒ ಮೇ 2024ರಲ್ಲಿ ನಡೆಸಿದ ಪರೀಕ್ಷೆಯನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದೆ.
ಜೈಪುರ, ಹೈದರಾಬಾದ್, ವಘೋಡಿಯಾ, ವಡೋದರಾ, ಆಂಧ್ರ ಪ್ರದೇಶ ಮತ್ತು ಇಂದೋರ್‌ನಂತಹ ಇತರ ಸ್ಥಳಗಳಿಂದ ಸಂಗ್ರಹಿಸಿದ ಔಷಧಗಳ ಮಾದರಿಯಲ್ಲೂ ಗುಣಮಟ್ಟದ ಕೊರತೆ ಕಂಡು ಬಂದಿದೆ. ಜೂನ್ 20 ರಂದು ಬಿಡುಗಡೆಯಾದ ಡ್ರಗ್ ಅಲರ್ಟ್ ಪ್ರಕಾರ, ಒಟ್ಟು 52 ಔಷಧ ಮಾದರಿಗಳು ಸಿಡಿಎಸ್‌ಸಿಒ ನಡೆಸಿದ ಗುಣಮಟ್ಟದ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿಲ್ಲ.
ಸಾಮಾನ್ಯ ಜ್ವರ, ಮೈಕೈ ನೋವಿಗೆ ಜನರು ಬಳಸುವ ಪ್ಯಾರಸಿಟಮಲ್ ಮಾತ್ರೆಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ. ಇದರಂತೆ ಜನರು ವೈದ್ಯರ ನಿರ್ದೇಶನಗಳಿಲ್ಲದೆ ಮೆಡಿಕಲ್‌ನಿಂದ ಪಡೆದು ಬಳಸುವ ಅನೇಕ ಔಷಧಿಗಳು ಕೂಡ ಗುಣಮಟ್ಟದಿಂದ ಕೂಡಿಲ್ಲ ಎಂಬುವುದು ತಿಳಿದು ಬಂದಿದೆ. ವೈದ್ಯಕೀಯ ಸಮುದಾಯ ಮತ್ತು ಜನರಿಗೆ ಈ ಬಗ್ಗೆ ಸಿಡಿಎಸ್‌ಸಿಒ ಎಚ್ಚರಿಕೆ ನೀಡಿದೆ.
ಮಧ್ಯ ಪ್ರದೇಶದ ಉಜ್ಜಯಿನಿ ಮೂಲದ ಆಸ್ಕೋನ್ ಹೆಲ್ತ್‌ಕೇರ್‌ನಲ್ಲಿ ಕೆಳದರ್ಜೆಯ 500 ಎಂಜಿ ಪ್ಯಾರಸಿಟಮಲ್ ಮಾತ್ರೆಗಳನ್ನು ತಯಾರಿಸಲಾಗಿದೆ. ಆಸ್ಕೋನ್ ಹೆಲ್ತ್‌ಕೇರ್‌ನ ಅಧಿಕೃತ ವೆಬ್‌ಸೈಟ್ ಕಂಪನಿಯು ಅಂತಿಮ ಔಷಧೀಯ ಡೋಸೇಜ್ ಫಾರ್ಮ್‌ಗಳನ್ನು ತಯಾರಿಸುತ್ತದೆ ಎಂದು ಹೇಳುತ್ತದೆ.
ಗುಣಮಟ್ಟವಿಲ್ಲದ ಔಷಧಗಳ ಬಗ್ಗೆ ಹೆಚ್ಚುತ್ತಿರುವ ಆತಂಕ
ರೋಗ ಗ್ರಸ್ತವಾಗುವಿಕೆಗಳು ಮತ್ತು ಆತಂಕದ ಅಸ್ವಸ್ಥತೆಗಳಿಗೆ ಬಳಸುವ ಕ್ಲೋನಾಜೆಪಮ್ ಮಾತ್ರೆಗಳು, ನೋವು ನಿವಾರಕ ಡಿಕ್ಲೋಫೆನಾಕ್, ಆಂಟಿ-ಹೈಪರ್ಟೆನ್ಷನ್ ಡ್ರಗ್ ಟೆಲ್ಮಿಸಾರ್ಟನ್, ಉಸಿರಾಟದ ಕಾಯಿಲೆಗಳಿಗೆ ಬಳಸುವ ಆಂಬ್ರೋಕ್ಸೋಲ್, ಆಂಟಿಫಂಗಲ್ ಫ್ಲುಕೋನಜೋಲ್ ಮತ್ತು ವಿವಿಧ ಮಲ್ಟಿವಿಟಮಿನ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳು ಕಳಪೆ ಗುಣಮಟ್ಟದ ಔಷಧಿಗಳ ಪಟ್ಟಿಯಲ್ಲಿ ಸೇರಿವೆ.
ಭಾರತದಲ್ಲಿ ಉತ್ಪಾದಿಸಲ್ಪಟ್ಟ ಕೆಮ್ಮಿನ ಸಿರಪ್‌ಗಳು ಸಾಗರೋತ್ತರ ಮಕ್ಕಳ ಸಾವಿಗೆ ಕಾರಣವಾಗಿರುವ ನಡುವೆ ಅನೇಕ ಔಷಧಿಗಳು ಗುಟಮಟ್ಟದಿಂದ ಕೂಡಿಲ್ಲ ಎಂಬುವುದು ಬಹಿರಂಗವಾಗಿದೆ. ಅಂಬಾಲಾದಲ್ಲಿ ಉತ್ಪಾದಿಸಲಾದ ಟೆರ್ಬುಟಲಿನ್ ಸಲ್ಫೇಟ್, ಬ್ರೋಮ್ಹೆಕ್ಸಿನ್ ಹೈಡ್ರೋಕ್ಲೋರೈಡ್, ಗ್ವೈಫೆನೆಸಿನ್ ಮತ್ತು ಮೆಂಥಾಲ್ ಸಿರಪ್ ಅನ್ನು ಒಳಗೊಂಡಿರುವ ಕೆಮ್ಮಿನ ಸಿರಪ್‌ಗಳೂ ಕೂಡ ಗುಣಮಟ್ಟದ ಕೊರತೆಯ ಔಷಧಿಗಳ ಪಟ್ಟಿಯಲ್ಲಿ ಸೇರಿವೆ. ಇದು ಆತಂಕ ಹೆಚ್ಚಿಸಿದೆ.
ಮೆಹಂದಿ ಬಗ್ಗೆಯೂ ಎಚ್ಚರಿಕೆ ನೀಡಿದ ಸಿಡಿಎಸ್‌ಸಿಒ
ಹೆಣ್ಣು ಮಕ್ಕಳು ಬಳಸುವ ಮೆಹಂದಿಯ ಕುರಿತು ಕೂಡ ಸಿಡಿಎಸ್‌ಸಿಒ ಎಚ್ಚರಿಕೆ ನೀಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಮೆಹಂದಿ ಟ್ಯೂಬ್‌ಗಳು ಸೌಂದರ್ಯವರ್ಧಕಗಳ ವರ್ಗಕ್ಕೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತಿಲ್ಲ. ಅವುಗಳು ಕಳಪೆ ಗುಣಮಟ್ಟದ್ದಾಗಿದ್ದು, ಹಾನಿಕಾರಕ ರಾಸಾಯನಿಕಗಳಿಂದ ಕೂಡಿದೆ. ಅಂತಹ ಮೆಹಂದಿಗಳ ಬಳಕೆ ಚರ್ಮ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಸಿಡಿಎಸ್‌ಸಿಒ ಹೇಳಿದೆ.
ಇದನ್ನೂ ಓದಿ : ವಿವಾಹಿತ ಮಹಿಳೆಯರ ನೇಮಕಕ್ಕೆ ನಿರಾಕರಿಸುತ್ತಿರುವ ‘ಫಾಕ್ಸ್‌ಕಾನ್’: ವರದಿ



Why the brand Dolo image is used when it’s not in the list of substandard drugs . This is not right