ಪ್ರಯಾಗ್‌ರಾಜ್ ಕ್ಷೇತ್ರದ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ 6 ವರ್ಷದ ಮೊಮ್ಮಗಳು ಪಟಾಕಿ ಸಿಡಿಸುವ ವೇಳೆ ಆದ ಅಫಘಾತದಲ್ಲಿ ಉಂಟಾದ ಸುಟ್ಟ ಗಾಯಗಳಿಂದಾಗಿ ಇಂದು ಮುಂಜಾನೆ ನಿಧನರಾಗಿದ್ದಾರೆ. ನಿನ್ನೆ ಪಟಾಕಿ ಸಿಡಿಸುವ ವೇಳೆ ನಡೆದ ಅವಘಡದಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿದ್ದ ಮಗುವನ್ನು ಪ್ರಯಾಗರಾಜ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದೀಪಾವಳಿ ಆಚರಣೆ ಸಂದರ್ಭ ಇತರ ಮಕ್ಕಳ ಜತೆಗೆ ಆಡಲೆಂದು ಟೆರೇಸ್‍ಗೆ ತೆರಳಿದ್ದ ಬಾಲಕಿ ಧರಿಸಿದ್ದ ಅಂಗಿಗೆ ಪಟಾಕಿಯ ಬೆಂಕಿ ತಗಲಿತ್ತೆನ್ನಲಾಗಿದ್ದು, ಸುತ್ತಮುತ್ತಲೆಲ್ಲಾ ಪಟಾಕಿಯ ಸದ್ದಿನಿಂದಾಗಿ ಮಗುವಿನ ಅಳು ಹಾಗೂ ಚೀರಾಟ ಯಾರಿಗೂ ಕೇಳಿಸಿರಲಿಲ್ಲ. ಮಗು ಸುಟ್ಟ ಸ್ಥಿತಿಯಲ್ಲಿ ಬಿದ್ದಿರುವುದನ್ನು ನಂತರ ಗಮನಿಸಿದ್ದ ಕೆಲವರು, ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ: ಹಸಿರು ಪಟಾಕಿ ಬಗ್ಗೆ ಗೊತ್ತಿಲ್ಲ ಎಂದ ಆರೋಗ್ಯ ಸಚಿವ ಸುಧಾಕರ್ !
“ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ದೆಹಲಿ ಸ್ಥಳಾಂತರಿಸುವುದೆಂದು ನಿರ್ಧರಿಸಿದ್ದೆವು, ಆದರೆ ಇಂತಹ ಸುದ್ದಿಯನ್ನು ನಾವು ನಿರೀಕ್ಷಿಸಿರಲಿಲ್ಲ. ಕುಟುಂಬಕ್ಕೆ ನನ್ನ ಸಂತಾಪ ತಿಳಿಸುತ್ತೇನೆ ಮತ್ತು ಅಗಲಿದ ಆತ್ಮಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
71 ವರ್ಷದ ಸಂಸದೆ ರೀಟಾ ಬಹುಗುಣ ಜೋಶಿ, 24 ವರ್ಷಗಳು ಕಾಂಗ್ರೆಸ್‌ನಲ್ಲಿದ್ದು, 2016 ರ ನಂತರ ಬಿಜೆಪಿಗೆ ಸೇರಿದ್ದರು. ಅವರು 2007 ರಿಂದ 2012 ರವರೆಗೆ ಐದು ವರ್ಷಗಳ ಕಾಲ ಕಾಂಗ್ರೆಸ್ಸಿನ ಯುಪಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಯಾಗರಾಜ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಇದನ್ನೂ ಓದಿ: ಹಸಿರು ಪಟಾಕಿಗಳು ಎಂದರೇನು..? ಅವು ಮಾಲಿನ್ಯಕಾರಕವಲ್ಲವೇ..?