ಸಾಂಕ್ರಾಮಿಕ ರೋಗ ತೀವ್ರಗೊಂಡಂತೆ, ಅಂಗವೈಕಲ್ಯ ಹೊಂದಿರುವ ಸುಮಾರು 64% ರಷ್ಟು ಜನರು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಸುಮಾರು 60% ಜನರು ಈ ಸಮಯದಲ್ಲಿ ಶೂನ್ಯ ಆದಾಯವನ್ನು ಹೊಂದಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಗರಿಷ್ಠ ಸಂಖ್ಯೆಯ ವಿಶೇಷ ಚೇತನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಅಥವಾ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಸಮೀಕ್ಷೆಯ ಫಲಿತಾಂಶ ತಿಳಿಸಿದೆ.
ಇವಾರಾ ಫೌಂಡೇಶನ್, ದಶಮ್ಲಾವ್ ಯೂಟ್ಯೂಬ್ ಚಾನೆಲ್ ಮತ್ತು ವೀಕೇಪಬಲ್ ಡಾಟ್ ಕಾಮ್ ಸೇರಿ, ಜುಲೈ 18-27 2020 ರ ನಡುವೆ ನಡೆಸಿದ 2,000 ಕ್ಕೂ ಹೆಚ್ಚು ವಿಶೇಷ ಚೇತನರ ರಾಷ್ಟ್ರವ್ಯಾಪಿ ಸಮೀಕ್ಷೆಯ ಪ್ರಕಾರ, ಕೊರೊನಾ ಸಾಂಕ್ರಾಮಿಕ ಮತ್ತು ಲಾಕ್ಡೌನ್ ನಿರ್ಬಂಧಗಳು ಅವರ ದೈನಂದಿನ ಜೀವನ ಮತ್ತು ಮಾನಸಿಕ ಸ್ಥಿತಿಯ ಮೇಲೆ ತೀವ್ರವಾಗಿ ಪರಿಣಾಮ ಬೀರಿವೆ ಎಂದು ತಿಳಿದು ಬಂದಿದೆ.
ಆತಂಕದಿಂದ ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗಳವರೆಗಿನ ಎಲ್ಲಾ ಭಾವನಾತ್ಮಕ ಸವಾಲುಗಳನ್ನು ಪ್ರತಿ 75 ಮಂದಿ ಎದುರಿಸುತ್ತಿದ್ದಾರೆ.
ಪ್ರಸ್ತುತ ಸಮೀಕ್ಷೆಯಲ್ಲಿ ಒಟ್ಟು ಪ್ರತಿಕ್ರಿಯಿಸಿದವರಲ್ಲಿ ಸುಮಾರು 43.6 ಪ್ರತಿಶತದಷ್ಟು ಜನರು ತಮ್ಮ ಸಮಸ್ಯೆಗಳನ್ನು ಅಥವಾ ಭಾವನಾತ್ಮಕ ಸ್ಥಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿಲ್ಲ ಎಂದು ದತ್ತಾಂಶ ಬಹಿರಂಗಪಡಿಸುತ್ತದೆ.
ವಿಶೇಷ ಚೇತನರ ಉದ್ಯೋಗವು ಭಾರತದಲ್ಲಿ ಯಾವಾಗಲೂ ಪ್ರಮುಖ ವಿಷಯವಾಗಿದೆ. ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಪರೀಕ್ಷೆಗಳು/ಸಂದರ್ಶನಗಳ ರದ್ದು ಅಥವಾ ಮುಂದೂಡುವುದರಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗ ಅರಸುವ ಅಂಗವಿಕಲರು ಜೀವನ ಅತಂತ್ರವಾಗಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸುತ್ತದೆ.
ಕೆಲವರು ಈ ಸಮಯದಲ್ಲಿ ಆಹಾರ/ಆಶ್ರಯ/ಔಷಧದಂತಹ ಮೂಲಭೂತ ಅವಶ್ಯಕತೆಗಳನ್ನು ಪಡೆಯಲೂ ಸಾದ್ಯವಾಗುತ್ತಿಲ್ಲ ಎಂದು ಅದು ಹೇಳಿದೆ.
ಹಣಕಾಸಿನ ತೊಂದರೆಯನ್ನು ಅನುಭವಿಸುತ್ತಿರುವ 78% ಕ್ಕಿಂತ ಹೆಚ್ಚು ಜನರು ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸಹ ಅನುಭವಿಸುತ್ತಿದ್ದಾರೆ.
ಒಟ್ಟು 868 ರಲ್ಲಿ 44% ರಷ್ಟು ಜನರು ಆತಂಕ, ಭಯ ಅಥವಾ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಉಳಿದವಲ್ಲಿ ಹೆಚ್ಚು ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗಮನಿಸಲಾಗಿದೆ.
ಹಾಗಾಗಿ ಪ್ರಸ್ತುತ ಸಮೀಕ್ಷಾ ವರದಿಯು, ರಾಜ್ಯ ಅಂಗವೈಕಲ್ಯ ಆಯುಕ್ತರು ಇದನ್ನು ಗಮನಕ್ಕೆ ತೆಗೆದುಕೊಂಡು, ಆಹಾರ/ಆಶ್ರಯ/ಔಷಧಿಗಳಂತಹ ಮೂಲಭೂತ ಅಗತ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವವರನ್ನು ಗುರುತಿಸಲು ಪಂಚಾಯತ್ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಶಿಫಾರಸು ಮಾಡಿದೆ.
ಇದನ್ನೂ ಓದಿ: ದೇಶದ ಮೊದಲ ದೃಷ್ಟಿಹೀನ ವಿಕಲಚೇತನ ಆಯುಕ್ತ ಪ್ರಸನ್ನ ಕುಮಾರ್ ಪಿಂಚಾ ನಿಧನ


