ಫ್ರೆಂಚ್ ಯುದ್ಧ ವಿಮಾನ ರಫೇಲ್ ತಯಾರಕರಾದ ಡಸಾಲ್ಟ್ ಕಂಪನಿಯು, 36 ರಫೇಲ್ ವಿಮಾನಗಳನ್ನು ಭಾರತಕ್ಕೆ ಮಾರುವುದಕ್ಕಾಗಿ ಭಾರತದ ಮಧ್ಯವರ್ತಿಯೊಬ್ಬರಿಗೆ 7.5 ಮಿಲಿಯನ್ ಯೂರೋ (65 ಕೋಟಿ ರೂ) ಲಂಚ ನೀಡಿದೆ. ಈ ಕುರಿತು ಸ್ಪಷ್ಟ ದಾಖಲೆಗಳಿದ್ದರೂ ಸಹ ಭಾರತೀಯ ಏಜೆನ್ಸಿ (CBI) ತನಿಖೆ ಮಾಡಲು ವಿಫಲವಾಗಿದೆ ಎಂದು ಫ್ರೆಂಚ್ ಪತ್ರಿಕೆ “ಮೀಡಿಯಾಪಾರ್ಟ್” ಆರೋಪಿಸಿದೆ.
59,000 ಕೋಟಿ ರೂಗಳ ರಾಫೇಲ್ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಮೀಡಿಯಾಪಾರ್ಟ್ 2013 ಕ್ಕೆ ಮುಂಚೆಯೇ ಕಂಪನಿಯು ಮಧ್ಯವರ್ತಿಗೆ ಹಣ ನೀಡಿದೆ ಎಂದು ಹೇಳಿದೆ. ಆ ದಾಖಲೆಗಳನ್ನು ಸಿಬಿಐ ಕಚೇರಿಗೆ ಕಳುಹಿಸಿದೆ.
ಭಾರತದ ಸುಶೇನ್ ಗುಪ್ತಾ ಎಂಬಾತನಿಗೆ ರಹಸ್ಯವಾಗಿ ಲಂಚ ನೀಡಲಾಗಿದೆ. ಸುಳ್ಳು ರಶೀದಿಗಳನ್ನು ಸೃಷ್ಟಿಸಲಾಗಿದೆ. ಇಷ್ಟೆಲ್ಲಾ ದಾಖಲೆಗಳು 2018 ರಲ್ಲಿಯೇ ಸಿಬಿಐ ಮತ್ತು ಇಡಿಗೆ ಸಿಕ್ಕಿದ್ದರೂ ಅವರು ತನಿಖೆ ಆರಂಭಿಸಿಲ್ಲ ಎಂದು ಪತ್ರಿಕೆ ದೂರಿದೆ.
ಅಗುಸ್ಟಾವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ವಿ.ವಿ.ಐ.ಪಿ ಹೆಲಿಕ್ಯಾಪ್ಟರ್‌ಗಳ ಒಪ್ಪಂದದಲ್ಲಿ ಭಾರತದಲ್ಲಿ ಕಿಕ್‌ಬ್ಯಾಕ್ ಪಡೆದ ಆರೋಪದ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಸುಶೇನ್ ಗುಪ್ತಾ ಮೇಲೆ ಈ ಪ್ರಕರಣದಲ್ಲಿ ಏಕೆ ತನಿಖೆಯಿಲ್ಲ ಎಂದು ಮೀಡಿಯಾಪಾರ್ಟ್ ಪ್ರಶ್ನಿಸಿದೆ.
ಮೀಡಿಯಾ ಪಾರ್ಟ್ ಪತ್ರಿಕೆಯೂ ರಾಫೇಲ್ ಹಗರಣದ ದಾಖಲೆಗಳ ತನಿಖೆಯ ಕುರಿತು ಸರಣಿ ಲೇಖನಗಳನ್ನು ಪ್ರಕಟಿಸಿದೆ. ಇದು ರಾಫೇಲ್ ಭ್ರಷ್ಟಾಚಾರದ ಕುರಿತು ಫ್ರಾನ್ಸ್‌ನಲ್ಲಿ ನ್ಯಾಯಾಂಗ ತನಿಖೆಗೆ ಕಾರಣವಾಗಿದೆ.
ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದ ಒಂದು ವಾರದಲ್ಲಿ ಸಿಬಿಐಗೆ ಅಕ್ಟೋಬರ್ 11, 2018ರಂದೇ ದಾಖಲೆಗಳನ್ನು ಒದಗಿಸಲಾಗಿದೆ. ಅದರೂ ತನಿಖೆ ಆರಂಭಿಸದಿರಲು ಸಿಬಿಐ ನಿರ್ಧರಿಸಿದೆ. ರಹಸ್ಯವಾಗಿ ಲಂಚ ಪಡೆದಿರುವುದು ಸಾಬೀತಾಗಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮೀಡಿಯಾಪಾರ್ಟ್ ಆರೋಪಿಸಿದೆ.
“ವಾಸ್ತವದಲ್ಲಿ ಎಷ್ಟು ಲಂಚ ಮತ್ತು ಕಮಿಷನ್ ಅನ್ನು ಪಾವತಿಸಲಾಗಿದೆ? ಮತ್ತು ಭಾರತ ಸರ್ಕಾರದಲ್ಲಿ ಯಾರಿಗೆ ನೀಡಲಾಗಿದೆ ಎಂದು ಕಂಡುಹಿಡಿಯಲು ಭಾರತದ ಅತಿದೊಡ್ಡ ರಕ್ಷಣಾ ಒಪ್ಪಂದದ ಬಗ್ಗೆ ಪೂರ್ಣ ಮತ್ತು ಸ್ವತಂತ್ರ ತನಿಖೆಯ ಅಗತ್ಯವಿಲ್ಲವೇ?” ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
ಇದನ್ನೂ ಓದಿ: ರಕ್ಷಣಾ ಇಲಾಖೆಯ ಅತಿದೊಡ್ಡ ಹಗರಣ – ರಫೇಲ್ ಡೀಲ್