Homeಮುಖಪುಟರಕ್ಷಣಾ ಇಲಾಖೆಯ ಅತಿದೊಡ್ಡ ಹಗರಣ

ರಕ್ಷಣಾ ಇಲಾಖೆಯ ಅತಿದೊಡ್ಡ ಹಗರಣ

- Advertisement -
- Advertisement -

ಅಂತೂಇಂತೂ ರಫೇಲ್ ಡೀಲ್ ರಾದ್ಧಾಂತ ಇಂಡಿಯಾ ರಕ್ಷಣಾ ಇಲಾಖೆಯ ಅತಿದೊಡ್ಡ ಹಗರಣವಾಗುವತ್ತ ದಾಪುಗಾಲಿಡುತ್ತಿದೆ. ಇದರ ಒಂದೊಂದು ಮಡಿಕೆಯಲ್ಲು ಹತ್ತಾರು ಅಡ್ಜೆಸ್ಟ್ಮೆಂಟ್‌ಗಳು, ನೂರಾರು ಗೊಂದಲಗಳು, ಸಾವಿರಾರು ಪ್ರಶ್ನೆಗಳು ಬೆಳಕಿಗೆ ಬರುತ್ತಲೇ ಇವೆ. ಅವೆಲ್ಲವೂ ಮೋದಿ ಸರ್ಕಾರವನ್ನು ಕಟಕಟೆಯ ಸ್ಥಾನದಲ್ಲಿ ನಿಲ್ಲಿಸಲು ಪೈಪೋಟಿ ನಡೆಸುತ್ತಿರೋದು ದೇಶದ ರಾಜಕಾರಣವನ್ನು ಬಿಸಿಯಾಗಿಸಿದೆ. ನೋ ಡೌಟ್, 2019ರ ಪಾರ್ಲಿಮೆಂಟ್ ಎಲೆಕ್ಷನ್‌ಗೆ ಕೆಲವೇ ದಿನಗಳು ಉಳಿದಿರುವ ಹೊತ್ತಲ್ಲಿ ಮೋದಿ ಸರ್ಕಾರ ಜನರ ಭ್ರಮಾನಿರಶನಕ್ಕೆ ತುತ್ತಾಗಿದ್ದರೂ, ಚುನಾವಣಾ ರಾಜಕಾರಣದಲ್ಲಿ ಸಮರ್ಥ ಎದುರಾಳಿಯಿಲ್ಲದ ಎನ್‌ಡಿಎ ಮೈತ್ರಿಕೂಟವೇ ಇವತ್ತಿಗೂ ಫೇವರಿಟ್ ಸ್ಥಾನದಲ್ಲಿದೆ. ಇಂಥಾ ಸಂದರ್ಭದಲ್ಲಿ ರಫೇಲ್ ಹಗರಣ ವಿರೋಧಿಗಳಿಗೆ ಒಂದು Political tool ಆಗಿ ಹೊಸ ಸಂಚಲನ ತಂದುಕೊಟ್ಟಿರಬಹುದು. ಆದರೆ ರಾಜಕೀಯ ಪಕ್ಷಗಳ ಈ ಮೇಲಾಟವನ್ನು ಬದಿಗಿರಿಸಿ ರಫೇಲ್ ಹಗರಣದಿಂದ ದೇಶಕ್ಕಾದ ಆರ್ಥಿಕ ಲುಕ್ಸಾನನ್ನು, ಭವಿಷ್ಯದಲ್ಲಿ ನಮ್ಮ ರಕ್ಷಣಾ ಸಾಮರ್ಥ್ಯದ ಮೇಲೆ ಅದು ಉಂಟುಮಾಡುವ ಅಡ್ಡಪರಿಣಾಮವನ್ನು ಅರ್ಥ ಮಾಡಿಕೊಳ್ಳಬೇಕಾದ್ದು ಪ್ರತಿಯೊಬ್ಬ ಜವಾಬ್ಧಾರಿಯುತ ಭಾರತೀಯನ ಮುಂದಿರುವ ತುರ್ತು.

ರಫೇಲ್ ಡೀಲ್‌ನ ಕಣ್ಣಾಮುಚ್ಚಾಲೆಗಳನ್ನು ನೋಡುವ ಮುನ್ನ ಈ ರಫೇಲ್ ವ್ಯವಹಾರವನ್ನು ಕೊಂಚ ಮನನ ಮಾಡಿಕೊಳ್ಳೋಣ. ಭಾರತ ಸ್ವತಂತ್ರ ದೇಶವಾಗಿ ರೂಪತಳೆದಾಗ ತನ್ನ ರಕ್ಷಣೆಗೆ ಅವಲಂಬಿಸಿದ್ದು ಬ್ರಿಟಿಷರು ಬಿಟ್ಟುಹೋಗಿದ್ದ ಶಸ್ತ್ರಾಸ್ತ್ರಗಳನ್ನು. ಆನಂತರವೂ ಭಾರತ ಶಸ್ತ್ರಾಸ್ತ್ರಗಳ ಸ್ವದೇಶಿ ನಿರ್ಮಾಣಕ್ಕೆ ಕೈಹಾಕಿತಾದರು ಟೆಕ್ನಾಲಜಿ ಅಭಿವೃದ್ಧಿ ವಿಚಾರದಲ್ಲಿ ಹೇಳಿಕೊಳ್ಳುವಷ್ಟು ಏಳ್ಗೆಯಾಗಲಿಲ್ಲ. ಹಾಗಾಗಿ ಭಾರತ ದುಬಾರಿ ಖರೀದಿಯ ಆಮದು ವ್ಯಾಪಾರವನ್ನೇ ನೆಚ್ಚಿಕೊಳ್ಳಬೇಕಾಯ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶಸ್ತ್ರಾಸ್ತ್ರ ಖರೀದಿಯದ್ದೇ ಒಂದು ವ್ಯವಸ್ಥಿತ ಜಾಲವಿದೆ. ಅಲ್ಲಿ ಮಧ್ಯವರ್ತಿಗಳೂ ಗಡುಸಾಗಿ ಬೇರುಬಿಟ್ಟಿದ್ದಾರೆ. ಅದರರ್ಥ ಅಪಾರ ಭ್ರಷ್ಟಾಚಾರಕ್ಕು ಇಲ್ಲಿ ಸಾಕಷ್ಟು ಸ್ಪೇಸ್ ಇದೆ ಎಂದಾಯಿತು. ಬಹಳಷ್ಟು ಹಿಂದುಳಿದ ಮತ್ತು ಅಭಿವೃದ್ಧಿಶೀಲ ದೇಶಗಳು ದಿನದಿಂದ ದಿನಕ್ಕೆ ತಮ್ಮ ರಕ್ಷಣಾ ಬಜೆಟ್ ಹೆಚ್ಚಿಸಿಕೊಳ್ಳುತ್ತಲೇ ಬರುತ್ತಿರೋದು ಇಂಥಾ ಮಧ್ಯವರ್ತಿಗಳ ಕೈಚಳಕದಿಂದಾಗಿಯೇ ಅನ್ನೇದು ಈ ಕಾಲಘಟ್ಟದ ನಗ್ನಸತ್ಯ. ದೂರದ ಮಾತೇಕೆ, ನಮ್ಮದೇ ರಾಜೀವ್ ಗಾಂಧಿ ಒಟ್ಟೋವಿ ಕ್ವಟ್ರೋಚಿ ಎಂಬ ಮಧ್ಯವರ್ತಿಯಿಂದಾಗಿಯೇ ಬೊಫೋರ್ಸ್ ಹಗರಣವನ್ನು ಮೈಮೇಲೆ ಎಳೆದುಕೊಂಡು ಹೀನಾಯವಾಗಿ ಸೋತದ್ದು. ಈಗಲೂ ಭಾರತ ಯುದ್ಧ ಸಾಮಗ್ರಿಗಳಿಗೆ ವಿದೇಶಗಳನ್ನೇ ಅವಂಬಿಸಿ ಕೂತಿದೆ. ಇದು ನಮ್ಮ ದೇಶದ ರಕ್ಷಣಾ ವಲಯದ ವಾಸ್ತವ ಪರಂಪರೆ.

ಇಂಥಾ ಪರಂಪರೆಯ ಮುಂದುವರಿಕೆಯ ಭಾಗವಾಗಿ 2000ರಲ್ಲಿ ಭಾರತ ಒಂದಷ್ಟು ಯುದ್ಧವಿಮಾನಗಳನ್ನು ಖರೀದಿಸಲು ತೀರ್ಮಾನಿಸಿತ್ತು. ಆಗ ಪ್ರಧಾನಿಯಾಗಿ ಅಧಿಕಾರದಲ್ಲಿದ್ದುದು ಇತ್ತೀಚೆಗಷ್ಟೆ ನಿಧನರಾದ ವಾಜಪೇಯಿ. ಅದಕ್ಕೋಸ್ಕರ ಬೇರೆಬೇರೆ ದೇಶದ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಗಳಿಂದ ಸ್ಪರ್ಧಾತ್ಮಕ ಬಿಡ್ ಆಹ್ವಾನಿಸಲಾಗಿತ್ತು. ಹತ್ತಾರು ಕಂಪನಿಗಳು ಭಾರತ ಸಲ್ಲಿಸಿದ್ದ ಯುದ್ಧವಿಮಾನಗಳನ್ನು ಇಷ್ಟು ದರದಲ್ಲಿ ತಯಾರಿಸಿಕೊಡುತ್ತೇವೆ ಅಂತ ತಮ್ಮತಮ್ಮ ಪ್ರಪೋಸಲ್ ಸಲ್ಲಿಸಿದ್ದವು. ಅಜಮಾಸು ಹತ್ತನ್ನೆರಡು ವರ್ಷಗಳ ಸುದೀರ್ಘ ಪ್ರಕ್ರಿಯೆಯ ನಂತರ 2012ರಲ್ಲಿ ಯುಪಿಎ ಸರ್ಕಾರ ಫ್ರಾನ್ಸ್ ದೇಶದ ಡೆಸ್ಸಾಲ್ಟ್ ಎಂಬ ಕಂಪನಿ ಸಲ್ಲಿಸಿದ್ದ ಪ್ರಪೋಸಲನ್ನು ಓಕೆ ಮಾಡಿತ್ತು. ಬೇರೆ ಕಂಪನಿಗಳಿಗೆ ಹೋಲಿಸಿದರೆ ಈ ಕಂಪನಿ ನಿಗದಿಪಡಿಸಿದ್ದ ದರ ಕಡಿಮೆ, ಗುಣಮಟ್ಟ ಹೆಚ್ಚು ಅನ್ನೋದು ಆಗ ಯುಪಿಎ ಕೊಟ್ಟಿದ್ದ ಕಾರಣ.

ಭಾರತ ಮತ್ತು ಫ್ರಾನ್ಸಿನ ಡೆಸಾಲ್ಟ್ ಕಂಪನಿ ನಡುವೆ ಒಪ್ಪಂದಕ್ಕಾಗಿ ನಡೆದಿದ್ದ ಮಾತುಕತೆಯ ಒಟ್ಟಾರೆ ಸಾರಾಂಶ ಹೀಗಿದೆ. ಒಟ್ಟು 126 ರಫೇಲ್ ಯುದ್ಧವಿಮಾನಗಳನ್ನು ಡಸಾಲ್ಟ್ ಕಂಪನಿ ಪೂರೈಕೆ ಮಾಡಬೇಕು, ಅದರಲ್ಲಿ 18 ವಿಮಾನಗಳನ್ನು ಸದರಿ ಕಂಪನಿ ಫ್ರಾನ್ಸ್ನಲ್ಲಿರುವ ತನ್ನ ಕಾರ್ಖಾನೆಯಲ್ಲೇ ನಿರ್ಮಿಸಿ ಹಾರಾಟ-ಸನ್ನದ್ಧ ಸ್ಥಿತಿಯಲ್ಲಿ ನೀಡಬೇಕು, ಇನ್ನುಳಿದ 108 ವಿಮಾನಗಳನ್ನು ಬೆಂಗಳೂರಿನ ಎಚ್.ಎ.ಎಲ್ ಕಂಪನಿಯಲ್ಲಿ ತಯಾರಿಸಲು ಬೇಕಾದ ಸಹಕಾರ ನೀಡಬೇಕು. ಅರ್ಥಾತ್ ತಯಾರಿಕಾ ತಂತ್ರಜ್ಞಾನವನ್ನು ಎಚ್.ಎ.ಎಲ್.ಗೆ ಹೇಳಿಕೊಡುವ ಜೊತೆಗೆ ತಯಾರಿಕಾ ಮೇಲುಸ್ತುವಾರಿಯನ್ನೂ ಡೆಸಾಲ್ಟ್ ಕಂಪನಿ ನೋಡಿಕೊಳ್ಳಬೇಕಿತ್ತು. ಇದರಿಂದ ಮುಂದೆ ನಮಗೆ ರಫೇಲ್ ವಿಮಾನಗಳು ಬೇಕಾದಾಗ ಮತ್ತೆ ವಿದೇಶಿ ಕಂಪನಿಯ ಹಂಗಿಲ್ಲದೆ ತಯಾರಿಸುವ ಸಾಮರ್ಥ್ಯ ನಮ್ಮದೇ ಎಚ್.ಎ.ಎಲ್. ಸಂಸ್ಥೆಗೆ ಲಭಿಸುತ್ತಿತ್ತು. ಕಾಂಗ್ರೆಸ್ ಪಕ್ಷ ಈಗ ಹೇಳಿಕೊಳ್ಳುತ್ತಿರುವಂತೆ ಈ 126 ಯುದ್ಧವಿಮಾನಗಳ ಪೂರೈಕೆಗಾಗಿ ಅಜಮಾಸು 75,000 ಕೋಟಿ ರೂಪಾಯಿಯ (10.2 ಬಿಲಿಯನ್ ಡಾಲರ್) ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿತ್ತಂತೆ.

ಅಂದಿನ ಫ್ರಾನ್ಸ್ ಅಧ್ಯಕ್ಷ ಹೊಲ್ಯಾಂಡ್ ಜೊತೆ ಮೋದಿ ಒಡಂಬಡಿಕೆ

2014ರ ಚುನಾವಣೆಯಲ್ಲಿ ಯುಪಿಎ ಸರ್ಕಾರ ಪತನಗೊಂಡು ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ತರುವಾಯ ಒಪ್ಪಂದದ ಪ್ರಕ್ರಿಯೆ ತನ್ನ ವೇಗ ಕಳೆದುಕೊಂಡರು ಎಚ್.ಎ.ಎಲ್ ಮತ್ತು ಡೆಸಾಲ್ಟ್ ಕಂಪನಿಯ ನಡುವೆ ಮಾತುಕತೆ ಸಾಗಿತ್ತು. ಆದರೆ 2015ರ ಏಪ್ರಿಲ್‌ನಲ್ಲಿ ತಾನು ಪ್ರಧಾನಿಯಾದ ನಂತರ ಮೊದಲ ಬಾರಿಗೆ ಫ್ರಾನ್ಸ್ಗೆ ಭೇಟಿ ನೀಡಿದ್ದ ಮೋದಿಯವರು ಯುಪಿಎ ಅವಧಿಯಲ್ಲಿ ಚಾಲನೆ ನೀಡಲಾಗಿದ್ದ ಒಪ್ಪಂದದ ಮಾತುಕತೆಯನ್ನು ರದ್ದು ಮಾಡಿ ಹೊಸ ದ್ವಿಪಕ್ಷೀಯ ಒಪ್ಪಂದವನ್ನು ಘೋಷಿಸಿಬಿಟ್ಟರು. ಹೊಸ ಒಪ್ಪಂದದ ಪ್ರಕಾರ 126 ರಫೇಲ್ ವಿಮಾನಗಳ ಬದಲಿಗೆ ಕೇವಲ 36 ವಿಮಾನಗಳನ್ನಷ್ಟೇ ಖರೀದಿಸಲು ಮೋದಿ ತೀರ್ಮಾನಿಸಿದ್ದರು. ಇದಕ್ಕೆಂದು ನಿಗದಿಯಾದ ವೆಚ್ಚ ಸರಿಸುಮಾರು 63,000 (8.8 ಬಿಲಿಯನ್ ಡಾಲರ್) ಕೋಟಿ ರೂಪಾಯಿ! ಹೊಸ ಒಪ್ಪಂದದ ಮತ್ತೊಂದು ಆಘಾತಕಾರಿ ಅಂಶವೆಂದರೆ ಎಲ್ಲಾ 36 ವಿಮಾನಗಳನ್ನು ಹಾರಾಟ-ಸನ್ನದ್ಧ ಸ್ಥಿತಿಯಲ್ಲೇ ಖರೀದಿಸಲು ಮೋದಿ ಸರ್ಕಾರ ತೀರ್ಮಾನಿಸಿತ್ತು. ಅಂದರೆ ಭಾರತಕ್ಕೆ ಆ ವಿಮಾನಗಳನ್ನು ತಯಾರಿಸುವ ತಂತ್ರಜ್ಞಾನ ವರ್ಗಾವಣೆಯಾಗುವ ಸಾಧ್ಯತೆಯೇ ಇಲ್ಲ. ಜೊತೆಗೆ ಮೊದಲು ಸರ್ಕಾರಿ ಒಡೆತನದ ಎಚ್‌ಎಎಲ್ ಸಂಸ್ಥೆಗೆ ನೀಡಲಾಗಿದ್ದ ಈ ಪ್ರೊಜೆಕ್ಟ್ನ ಜಂಟಿ ಪಾಲುದಾರ ಮಾನ್ಯತೆಯನ್ನು ರದ್ದು ಮಾಡಲಾಯ್ತು. ಆ ಜಾಗಕ್ಕೆ ಅನಿಲ್ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ ಸಂಸ್ಥೆ ನಿಕ್ಕಿಯಾಯಿತು. 2019ರಿಂದ 2022ರ ಅವಧಿಯಲ್ಲಿ ಡೆಸಾಲ್ಟ್ ಕಂಪನಿ ಎಲ್ಲಾ 36 ಯುದ್ಧ ವಿಮಾನಗಳನ್ನು ಪೂರೈಕೆ ಮಾಡಬೇಕಿದೆ. ಇದಿಷ್ಟು ಇಡೀ ವ್ಯವಹಾರದ ಸೀದಾಸಾದಾ ಹೊರಕವಚ.

ಮೂರು ಪಟ್ಟು ಹೆಚ್ಚು ಹಣ

ಫೈನಾನ್ಷಿಯಲ್ ಗಾತ್ರದಲ್ಲಿ ಕಾಂಗ್ರೆಸ್‌ನ ಬೋಫೋರ್ಸ್ ಹಗರಣದ ದೊಡ್ಡಪ್ಪನಂತಿರುವ ಈ ರಫೇಲ್ ಹಗರಣ ಇದೀಗ ಬಿಜೆಪಿಯನ್ನು ಹೈರಾಣಾಗಿಸಲು ಕಾಂಗ್ರೆಸ್‌ಗೆ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಭಾರತದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು 126ರ ಬದಲು ಕೇವಲ 36 ವಿಮಾನಗಳನ್ನು ಖರೀದಿಸಲು ತೀರ್ಮಾನಿಸಿದ್ದೇವೆ ಎಂದು ಸಮರ್ಥನೆ ನೀಡುತ್ತಿರುವ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಎಸೆಯುತ್ತಿರುವ ಪ್ರಶ್ನೆ ತುಂಬಾ ಸರಳವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಯವರು `ಕೇವಲ ಒಬ್ಬ ಬ್ಯುಸಿನೆಸ್‌ಮನ್‌ಗೆ ಲಾಭ ಮಾಡಿಕೊಡಲು ಮೋದಿಯವರು ಹಳೆಯ ಒಪ್ಪಂದ ರದ್ದು ಮಾಡಿ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ದೂರಿದರೆ ಅವರ ಪಕ್ಷ ಅಧಿಕೃತವಾಗಿ ಕೆಲ ಅಂಶಗಳನ್ನು ಹೊರಹಾಕಿ `ಯುಪಿಎ ಸರ್ಕಾರ 10.2 ಬಿಲಿಯನ್ ಡಾಲರ್‌ಗೆ 126 ಯುದ್ಧವಿಮಾನಗಳನ್ನು ಖರೀದಿಸಲು ಮಾತುಕತೆ ನಡೆಸಿತ್ತು. ಅಂದರೆ ಪ್ರತಿ ವಿಮಾನಕ್ಕೆ ತಲಾ ಸುಮಾರು 605 ಕೋಟಿ ರೂಪಾಯಿ ತಗುಲುತ್ತಿತ್ತು. ಆದರೆ ಮೋದಿಯವರು ಈಗ 8.8 ಬಿಲಿಯನ್ ಡಾಲರ್‌ಗೆ ಕೇವಲ 36 ಯುದ್ಧ ವಿಮಾನಗಳನ್ನು ಖರೀದಿಸಲು ತೀರ್ಮಾನಿಸಿರೋದ್ರಿಂದ ಒಟ್ಟಾರೆ ವೆಚ್ಚ ಕಡಿಮೆಯಾದಂತೆ ಕಂಡುಬಂದರು ಒಂದೊಂದು ವಿಮಾನಕ್ಕೆ ನಮಗಿಂತ ಮೂರು ಪಟ್ಟು ಹೆಚ್ಚು ಅಂದರೆ, 1670 ಕೋಟಿ ರೂಪಾಯಿ ದರ ನಿಗದಿ ಮಾಡಿ ದೇಶದ ಜನರ ತೆರಿಗೆ ಹಣವನ್ನು ಪೋಲು ಮಾಡಿದೆ. ಇದು ಹೇಗೆ ಆರ್ಥಿಕ ಹೊರೆ ಕಡಿಮೆ ಮಾಡಿದಂತಾಗುತ್ತೆ?’ ಎಂದು ಪ್ರಶ್ನೆ ಮಾಡಿದೆ. ಕಾಂಗ್ರೆಸ್‌ನ ಈ ಪ್ರಶ್ನೆಯ ಜೊತೆಗೆ ಗಮನಿಸಬೇಕಿರುವ ಮತ್ತೊಂದು ಅಂಶವೆಂದರೆ ಮೋದಿಯವರು ಮಾಡಿಕೊಂಡ ಹೊಸ ಒಪ್ಪಂದದಿಂದ ನಮಗೆ ಯುದ್ಧ ವಿಮಾನಗಳು ಸಿಗುತ್ತವೆಯೇ ಹೊರತು, ಅವುಗಳನ್ನು ತಯಾರಿಸುವ ತಂತ್ರಜ್ಞಾನವಲ್ಲ. ಮುಂದೆ ಇದೇ ವಿಮಾನಗಳು ಬೇಕಾದಾಗ ನಾವು ಮತ್ತೆ ಇಷ್ಟು ದುಬಾರಿ ಹಣ ತೆತ್ತೇ ಕೊಂಡು ಕೊಳ್ಳಬೇಕಾಗುತ್ತದೆ.

ಇನ್ನು ರಾಹುಲ್ ಗಾಂಧಿಯವರು ಆರೋಪಿಸಿದ `ಒಬ್ಬ ಬ್ಯುಸಿನೆಸ್‌ಮನ್’ ಒಕ್ಕಣೆಯನ್ನು ಗಮನಿಸೋಣ. ಇಡೀ ವ್ಯವಹಾರದಿಂದ ಲಾಭ ಪಡೆಯಲಿರುವ ಏಕಮಾತ್ರ ಭಾರತೀಯ ಪ್ರಜೆಯೆಂದರೆ ಅದು ಅನಿಲ್ ಅಂಬಾನಿ! ನಮ್ಮ ದೇಶದ ರಕ್ಷಣಾ ಸಾಧನಗಳ ಖರೀದಿ ನಿಯಮಗಳ ಪ್ರಕಾರ ಯಾವುದೇ ವಿದೇಶಿ ಕಂಪನಿಯಿಂದ ಭಾರತ ಸರ್ಕಾರ ಶಸ್ತ್ರಾಸ್ತ್ರ ಒಪ್ಪಂದ ಮಾಡಿಕೊಂಡರೆ, ಒಟ್ಟು ಒಪ್ಪಂದ ಮೊತ್ತದ ಅರ್ಧದಷ್ಟು ಬಂಡವಾಳವನ್ನು ಪುನಾಃ ಆ ವಿದೇಶಿ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಬೇಕು. ಹಳೆಯ ಒಪ್ಪಂದ ಆಲ್‌ಮೋಸ್ಟ್ ಅಂತಿಮ ಹಂತ ತಲುಪಿದ್ದರಿಂದ ಈ ನಿಬಂಧನೆಗೆ ಒಳಪಟ್ಟು ಫ್ರಾನ್ಸ್ನ ಡೆಸ್ಸಾಲ್ಟ್ ಕಂಪನಿ ತಾನು ಹೂಡಿಕೆ ಮಾಡಬೇಕಿದ್ದ ಬಹುಪಾಲು ಬಂಡವಾಳವನ್ನು ಎಚ್.ಎ.ಎಲ್ ಕಂಪನಿಯಲ್ಲಿ ಬೇರೆಬೇರೆ ರೂಪದಲ್ಲಿ ತೊಡಗಿಸಿತ್ತು. ಆದರೆ ಈಗ ಆ ಮಾತುಕತೆ ರದ್ದಾಗಿ ಹೊಸ ಒಪ್ಪಂದ ಏರ್ಪಟ್ಟಿರೋದ್ರಿಂದ ಅಷ್ಟು ಮೊತ್ತದ ಹೂಡಿಕೆಯನ್ನು ಎಚ್.ಎ.ಎಲ್.ಗೆ ಬದಲಾಗಿ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್ ಕಂಪನಿ ಮೇಲೆ ಹೂಡಬೇಕಾಗಿದೆ. ಈ ಮೊದಲಿದ್ದಂತೆ ವಿಮಾನಗಳನ್ನು ತಯಾರಿಸುವ ಗೋಜಲಂತೂ ಅಂಬಾನಿ ಕಂಪನಿಗೆ ಇಲ್ಲ. ಯಾಕೆಂದರೆ ಎಲ್ಲಾ 36 ವಿಮಾನಗಳು ಹಾರಾಟ ಸನ್ನದ್ಧ ಸ್ಥಿತಿಯಲ್ಲೇ ಸಿಗಲಿವೆ. ಹಾಗಾಗಿ ಡೆಸ್ಸಾಲ್ಟ್ ಕಂಪನಿಯಿಂದ ಹೂಡಿಕೆಯಾಗುವ ಒಪ್ಪಂದದ ಅರ್ಧದಷ್ಟು ಬಂಡವಾಳ ಸಲೀಸಾಗಿ ಅಂಬಾನಿಯ ಜೇಬು ಸೇರಲಿದೆ ಅನ್ನೋದು ಕಾಂಗ್ರೆಸ್‌ನ ಆರೋಪ.

ಯಾರಿಗೂ ಗೊತ್ತಿರಲಿಲ್ಲ?

ಈ ರಫೇಲ್ ವ್ಯವಹಾರವನ್ನು ಅನುಮಾನಿಸುವುದಕ್ಕೆ ಇರುವ ಮತ್ತೊಂದು ಮುಖ್ಯ ಕಾರಣ ಮೋದಿಯವರು ತೋರಿರುವ ತರಾತುರಿ. ದೇಶದ ರಕ್ಷಣೆಗೆ ಸಂಬಂಧಿಸಿದ ಇಂತಹ ಮಹತ್ವದ ನಿರ್ಧಾರ ಸ್ವತಃ ರಕ್ಷಣಾ ಸಚಿವರು ಮತ್ತು ರಕ್ಷಣಾ ಇಲಾಖೆಗೇ ಸರಿಯಾಗಿ ತಿಳಿದಿರಲಿಲ್ಲವೇ ಎಂಬ ಅನುಮಾನಗಳನ್ನು ಹಲವು ಸತ್ಯ ಸಂಗತಿಗಳು ಹುಟ್ಟುಹಾಕುತ್ತಿವೆ. ಅವನ್ನೊಂದಷ್ಟು ಗಮನಿಸೋಣ. ಮೋದಿಯವರು ಫ್ರಾನ್ಸ್ಗೆ ಪ್ರವಾಸ ಹೊರಡುವ ಎರಡು ದಿನ ಮೊದಲು ಪ್ರಧಾನಮಂತ್ರಿಯ ವಿದೇಶಾಂಗ ಕಾರ್ಯದರ್ಶಿಯಾದ ಎಸ್.ಜೈಶಂಕರ್‌ರವರು ದೆಹಲಿಯಲ್ಲಿ ಮಾಧ್ಯಮದವರ ಮುಂದೆ ರಫೇಲ್ ಯುದ್ಧ ವಿಮಾನದ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್ನ ಡೆಸ್ಸಾಲ್ಟ್ ಕಂಪನಿ, ಎಚ್.ಎ.ಎಲ್ ಮತ್ತು ಭಾರತ ರಕ್ಷಣಾ ಸಚಿವಾಲಯದ ನಡುವೆ ಮಾತುಕತೆ ಮುಂದುವರೆದಿದೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೂ ಹದಿನೈದು ದಿನ ಮೊದಲು ಡೆಸ್ಸಾಲ್ಟ್ ಕಂಪನಿಯ ಸಿಇಒ ಸಾರ್ವಜನಿಕ ಸಭೆಯೊಂದರಲ್ಲಿ `ಜವಾಬ್ಧಾರಿಗಳ ಹಂಚಿಕೆಯ ಕುರಿತಂತೆ ನಮ್ಮ ನಡುವೆ ಒಪ್ಪಂದ ಏರ್ಪುಡುತ್ತಿರುವುದಾಗಿ ಎಚ್.ಎ.ಎಲ್ ಅಧ್ಯಕ್ಷರು ಹೇಳಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ಆದಷ್ಟು ಬೇಗ ಒಡಂಬಡಿಕೆ ಅಂತಿಮಗೊಂಡು ಸಹಿ ಹಾಕುವ ವಿಶ್ವಾಸವಿದೆ’ ಎಂದು ಹೇಳಿಕೊಂಡಿದ್ದರು.

ಮನೋಹರ್ ಪರಿಕ್ಕರ್

ಈ ಎರಡೂ ಹೇಳಿಕೆಗಳು ಮಹತ್ವದ ಹೊಸ ಒಪ್ಪಂದದ ವಿಚಾರ ಸರ್ಕಾರದ ಮಟ್ಟದಲ್ಲಾಗಲಿ, ಪಾಲುದಾರ ಕಂಪನಿಯ ಜೊತೆಗಾಗಲಿ ಚರ್ಚಿಸಲ್ಪಟ್ಟಿಲ್ಲ ಎನ್ನುವುದನ್ನು ಪುಷ್ಠೀಕರಿಸುತ್ತವೆ. ಇನ್ನೂ ವಿಪರ್ಯಾಸವೆಂದರೆ, ಮೋದಿಯವರು ಫ್ರಾನ್ಸ್ ನೆಲದಲ್ಲಿ ನಿಂತು ಇಂತಹ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದ ಸಂದರ್ಭದಲ್ಲೇ ಇಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅಂದಿನ ರಕ್ಷಣಾ ಸಚಿವ (ಹಾಲಿ ಗೋವಾ ಸಿಎಂ) ಮನೋಹರ್ ಪಾರಿಕ್ಕರ್‌ರವರು `ಆ ಮಾತುಕತೆಯ ವಿವರಗಳ ಬಗ್ಗೆ ನನಗಿನ್ನೂ ತಿಳಿದಿಲ್ಲ’ ಎಂಬ ಹೇಳಿಕೆ ಕೊಟ್ಟಿದ್ದರು! ಅಂದರೆ ಒಬ್ಬ ರಕ್ಷಣಾ ಸಚಿವನಿಗೇ ಸರಿಯಾದ ಮಾಹಿತಿಯಿಲ್ಲದೆ ಆ ಸಚಿವಾಲಯಕ್ಕೆ ಸಂಬಂಧಿಸಿದ ಸಾವಿರಾರು ಕೋಟಿ ಒಪ್ಪಂದವನ್ನು ತುರ್ತಾಗಿ ಅಂತಿಮಗೊಳಿಸುವ ಜರೂರತ್ತು ಏನಿತ್ತು?

ಈಗಾಗಲೇ ರಾಹುಲ್ ಗಾಂಧಿ ಆರೋಪಿಸಿರುವಂತೆ ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡುವುದಕ್ಕೆಂದೇ ಮೋದಿಯವರು ಅಷ್ಟು ತರಾತುರಿಯಲ್ಲಿ ಒಪ್ಪಂದ ಮಾಡಿಕೊಂಡರೆ? ಈ ಅನುಮಾನವನ್ನೂ ಹಲವು ಸತ್ಯಸಂಗತಿಗಳು ಪುಷ್ಠೀಕರಿಸುತ್ತವೆ. ಯಾವುದೇ ಸರ್ಕಾರ ಸಾರ್ವಜನಿಕ ಮತ್ತು ಸರ್ಕಾರಿ ಕ್ಷೇತ್ರಗಳಿಗೆ ಮೊದಲ ಆದ್ಯತೆಯನ್ನು ಕೊಡಬೇಕೆ ವಿನಾಃ ಖಾಸಗಿ ಕಂಪನಿಗಳ ಉದ್ದಾರಕ್ಕಲ್ಲ. ಅದರಲ್ಲೂ ರಕ್ಷಣಾ ವ್ಯವಹಾರದಂತಹ ವಿಷಯ ಬಂದಾಗ ಸರ್ಕಾರಿ ಒಡೆತನದ ಸಂಸ್ಥೆಗಳಿಗೇ ಪ್ರಾಶಸ್ತ್ಯವಿರುತ್ತೆ. ಕೇವಲ ಹೆಚ್ಚು ಬಂಡವಾಳ ಹೂಡಿಕೆ ಹರಿದುಬರುತ್ತೆ ಎಂಬ ಕಾರಣಕ್ಕಲ್ಲ, ದೇಶದ ರಕ್ಷಣಾ ಗೌಪ್ಯತೆಯ ದೃಷ್ಟಿಯಿಂದಲೂ ಇದು ಕ್ಷೇಮ. ಯಾವುದೇ ಖಾಸಗಿ ಕಂಪನಿಗಳು ಲಾಭದ ತಳಹದಿಯನ್ನೇ ಹೆಚ್ಚು ಅವಲಂಬಿಸಿರುತ್ತವೆ. ಅದರಲ್ಲೂ ಜಾಗತೀಕರಣ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಿಗೆ ಒಗ್ಗಿಕೊಂಡ ಕಂಪನಿಗಳು ಎಲ್ಲವನ್ನೂ ಲಾಭ-ನಷ್ಟದಿಂದಲೇ ಅಳೆಯುತ್ತವೆ. ಅಂತಹ ಖಾಸಗಿ ಕಂಪನಿಗಳ ಕೈಗೆ ದೇಶದ ಆಂತರಿಕ ರಕ್ಷಣಾ ರಹಸ್ಯಗಳ ಮಾಹಿತಿ ಲಭ್ಯವಾಗುವುದು ಯಾವ ರೀತಿಯಿಂದಲೂ ಒಳಿತಲ್ಲ. ಈ ಎಲ್ಲಾ ಕಾರಣದಿಂದಲೇ ಹಳೆಯ ಒಪ್ಪಂದದಲ್ಲಿ ಸರ್ಕಾರಿ ಸ್ವಾಮ್ಯದ ಎಚ್.ಎ.ಎಲ್ ಅನ್ನು ಸಹಭಾಗಿ ಸಂಸ್ಥೆಯನ್ನಾಗಿಸಲಾಗಿತ್ತು. ಆದರೆ ಮೋದಿ ಸರ್ಕಾರದ ಹೊಸ ಒಪ್ಪಂದ ಆ ಜಾಗಕ್ಕೆ ಅನಿಲ್ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್ ಎಂಬ ಖಾಸಗಿ ಕಂಪನಿಯನ್ನು ತಂದುಕೂರಿಸಿದೆ.

ರಫೇಲ್ ಒಪ್ಪಂದದ ಸುತ್ತ ಇಂತದ್ದೊಂದು ಪ್ರಶ್ನೆ ಸುಳಿದಾಡಲು ಶುರು ಮಾಡಿದಾಗ ಫೆಬ್ರವರಿ 2018ರಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ರಕ್ಷಣಾ ಸಚಿವಾಲಯ `ಡೆಸ್ಸಾಲ್ಟ್ ಕಂಪನಿ ಭಾರತದ ಯಾವ ಸಂಸ್ಥೆಯನ್ನು ತನ್ನ ಪಾಲುದಾರನನ್ನಾಗಿಸಿಕೊಂಡಿದೆ ಎಂಬ ಬಗ್ಗೆ ನಮಗೆ ಇನ್ನೂ ಸ್ಪಷ್ಟ ಮಾಹಿತಿಯೇ ಇಲ್ಲ. ರಕ್ಷಣಾ ಒಪ್ಪಂದ ನಿಯಮಗಳ ಪ್ರಕಾರ ಯಾವುದೇ ವಿದೇಶಿ ಕಂಪನಿ ಯಾರನ್ನು ತನ್ನ ಭಾಗಿದಾರ ಸಂಸ್ಥೆಯನ್ನಾಗಿ (ಆಫ್‌ಸೆಟ್ ಪಾರ್ಟನರ್) ಆರಿಸಿಕೊಳ್ಳಬೇಕೆಂದು ನಿರ್ಧರಿಸುವ ಸ್ವಾತಂತ್ರ್ಯ ಹೊಂದಿದೆ. ಈ ವಿಚಾರವನ್ನು ಅದು ನಮಗೆ ಈಗಲೇ ತಿಳಿಸಬೇಕೆಂದೇನು ಇಲ್ಲ, ನಮ್ಮ ಸಾಧನಗಳನ್ನು ಪೂರೈಕೆ ಮಾಡುವ ಸಂದರ್ಭದಲ್ಲಿ ತಿಳಿಸುವಷ್ಟು ಕಾಲಾವಕಾಶವೂ ಆ ಕಂಪನಿಗಿರುತ್ತದೆ’ ಎಂಬ ಸ್ಪಷ್ಟನೆ ಕೊಟ್ಟಿತ್ತು. ಹೌದು, ತಾನು ಆಯ್ಕೆ ಮಾಡಿಕೊಳ್ಳುವ ಆಫ್‌ಸೆಟ್ ಪಾರ್ಟನರ್ ಬಗ್ಗೆ ಆರಂಭದಲ್ಲೇ ವಿದೇಶಿ ಕಂಪನಿ ತಿಳಿಸಬೇಕು ಎಂಬ ನಿರ್ಬಂಧವೇನೂ ಇಲ್ಲ, ಪೂರೈಕೆ ಮಾಡುವಾಗಲು ಬೇಕಾದರು ಅದು ತನ್ನ ಪಾರ್ಟನರ್ ಮಾಹಿತಿಯನ್ನು ಸರ್ಕಾರಕ್ಕೆ ನೀಡಬಹುದು ಎಂಬ ನಿಯಮವಿದೆ. ಆದರೆ ಅಸಲೀ ವಿಷಯ ಏನು ಅಂದ್ರೆ, 2015ರ ಆಗಸ್ಟ್-ಗು ಮುನ್ನ ಇಂತದ್ದೊಂದು ನಿಯಮವೇ ಇರಲಿಲ್ಲ. ಯುಪಿಎ ಮಾಡಿಕೊಂಡಿದ್ದ ಹಳೆಯ ಒಡಂಬಡಿಕೆಯನ್ನು ಮೋದಿಯವರು ರದ್ದು ಮಾಡಿದ ಐದು ದಿನಗಳ ನಂತರ ತಿದ್ದುಪಡಿ ತಂದು ಈ ಹೊಸ ನಿಯಮವನ್ನು ಸೇರಿಸಲಾಗಿತ್ತು! ಈಗ ಕೇಂದ್ರ ಸರ್ಕಾರ ತಾನು ತಂದ ಹೊಸ ತಿದ್ದುಪಡಿಯ ನಿಯಮವನ್ನೇ ಮುಂದು ಮಾಡಿ ಸಮರ್ಥನೆ ಮಾಡಿಕೊಳ್ಳುತ್ತಿದೆ. ಅತ್ತ ಹೊಸ ಒಪ್ಪಂದ ಏರ್ಪಡುವುದಕ್ಕೂ ಇತ್ತ ಹಳೆಯ ನಿಯಮದಲ್ಲಿ ತಿದ್ದುಪಡಿ ಬರುವುದಕ್ಕೂ, Coincidence ಅಷ್ಟೆ ಅಂತ ಯಾರಾದರು ನಂಬಲು ಸಾಧ್ಯವೇ…? ವಿಪರ್ಯಾಸ ಏನು ಗೊತ್ತಾ, ರಕ್ಷಣಾ ಸಚಿವಾಲಯ ಇದುವರೆಗೆ ಡೆಸ್ಸಾಲ್ಟ್ ಕಂಪನಿ ಆಯ್ಕೆ ಮಾಡಿಕೊಂಡ ಆಫ್‌ಸೆಟ್ ಪಾರ್ಟನರ್ ಯಾರೆಂಬುದೇ ಗೊತ್ತಿಲ್ಲ ಅನ್ನುತ್ತಿದೆಯಾದರು ಆರ್‌ಟಿಐನಿಂದ ತಿಳಿದು ಬಂದ ಮಾಹಿತಿ ಪ್ರಕಾರ ಖರೀದಿ ಒಪ್ಪಂದ ಮಾಡಿಕೊಂಡ ದಿನವೇ (ಸೆಪ್ಟೆಂಬರ್ 2016) ರಿಲಾಯನ್ಸ್ ಡಿಫೆನ್ಸ್ ಜೊತೆ ಪಾರ್ಟನರ್ ಒಪ್ಪಂದಕ್ಕೂ ಸಹಿ ಹಾಕಲಾಗಿದೆ!

ಹಳೇ ನಿಯಮ, ಹೊಸ ದರ

ಇಲ್ಲಿ ಮತ್ತೊಂದು ಪ್ರಶ್ನೆ ಕಾಡುತ್ತೆ. 2012ರಲ್ಲೆ ಬಿಡ್ಡಿಂಗ್ ಪೂರ್ಣಗೊಂಡಿದ್ದರೆ ಯುಪಿಎ ಸರ್ಕಾರ ಸುಮಾರು ಎರಡು ವರ್ಷಗಳ ಕಾಲ ಯಾಕೆ ಒಪ್ಪಂದಕ್ಕೆ ಸಹಿ ಹಾಕದೆ ಕಾಲಹರಣ ಮಾಡಿತು? ಡೆಸಾಲ್ಟ್ ಕಂಪನಿ ಬಿಡ್ಡಿಂಗ್‌ಗು ಮುನ್ನ ಸರ್ಕಾರಿ ಸ್ವಾಮ್ಯದ ಎಚ್.ಎ.ಎಲ್ ಸಂಸ್ಥೆಯನ್ನೆ ತನ್ನ ಆಫ್‌ಸೆಟ್ ಪಾರ್ಟನರ್ ಮಾಡಿಕೊಳ್ಳುವ ಇಚ್ಛೆ ತೋರಿಸಿತ್ತಾದರು ಬಿಡ್ಡಿಂಗ್‌ನಲ್ಲಿ ಗೆದ್ದ ನಂತರ ಮುಖೇಶ್ ಅಂಬಾನಿಯ ಒಡೆತನವಿರುವ ರಿಲಾಯನ್ಸ್ ಇಂಡಸ್ಟ್ರಿ ಜೊತೆ memorandum of understandingಗೆ ಸಹಿ ಹಾಕಿತ್ತು. ಇದಕ್ಕೆ ಯುಪಿಎ ವಿರೋಧ ವ್ಯಕ್ತಪಡಿಸಿದ್ದರಿಂದ ಕೊನೆಗೆ 18 ವಿಮಾನಗಳ ತಯಾರಿಕೆಗೇ ಪ್ರತ್ಯೇಕ ಮತ್ತು 108 ವಿಮಾನ ತಯಾರಿಕೆಗೇ ಪ್ರತ್ಯೇಕ ಆಫ್‌ಸೆಟ್ ಪಾರ್ಟನರ್ ಮಾಡಿಕೊಳ್ತೀನಿ ಅಂತ ಕಂಪನಿ ವರಾತ ತೆಗೆಯಿತು. ಇದಕ್ಕೂ ಯುಪಿಎ ಒಪ್ಪಲಿಲ್ಲ. ಕೊನೆಗೆ ಸರ್ಕಾರದ ಒತ್ತಡಕ್ಕೆ ಮಣಿದ ಡೆಸ್ಸಾಲ್ಟ್ ಕಂಪನಿ ಎಚ್.ಎ.ಎಲ್. ಅನ್ನೇ ತನ್ನ ಆಫ್‌ಸೆಟ್ ಪಾರ್ಟನರ್ ಮಾಡಿಕೊಂಡಿತು. ಈ ರಗಳೆಯಿಂದ ಒಪ್ಪಂದ ಒಂದಷ್ಟು ದಿನ ಡಿಲೇ ಆದರೆ, ಆನಂತರ ಸಂಸದೀಯ ರಕ್ಷಣಾ ಸಮಿತಿಯ ಮುಂದೆ ಒಪ್ಪಂದ ಚರ್ಚೆಗೆ ಬಂದಾಗ ಮತ್ತೊಂದಷ್ಟು ವಿಳಂಭವಾಯಿತು. ಅದಕ್ಕೆ ಕಾರಣವಾದದ್ದು ಇಬ್ಬರು ವ್ಯಕ್ತಿಗಳು. ಒಬ್ಬರು ತೆಲುಗುದೇಶಂ ಪಾರ್ಟಿಯ ಸಂಸದರಾದರೆ ಮತ್ತೊಬ್ಬರು ಇದೇ ಬಿಜೆಪಿಯ ಯಶವಂತ್ ಸಿನ್ಹಾರವರು. `ವಿಮಾನವನ್ನು ಖರೀದಿಯ ವಿವರವನ್ನು ನೀಡಿದ್ದೀರಿ ಆದರೆ ಅದರ lifetime-cost ಬಗ್ಗೆ ವಿವರಣೆ ನೀಡಿಲ್ಲ. ಅದು ದೇಶಕ್ಕೆ ಹೊರಯಾಗುವ ಸಾಧ್ಯತೆಯಿದೆ. ಅದನ್ನೂ ಬಹಿರಂಗಗೊಳಿಸಿ’ ಎಂಬುದು ಯಶವಂತ್ ಸಿನ್ಹಾರ ತಗಾದೆಯಾಗಿತ್ತು. ಆಗ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟನಿಯವರು ` lifetime-cost ಎಂಬುದು ಖರೀದಿ ಒಪ್ಪಂದಕ್ಕೆ ಅತೀತವಾದ ನಿಬಂಧನೆ ಆಗಿರುವುದರಿಂದ ಅದನ್ನು ಆಧರಿಸಿ ಒಪ್ಪಂದವನ್ನು ಅಂತಿಮಗೊಳಿಸಲಾಗುವುದಿಲ್ಲ. ಅದನ್ನು ದೇಶೀಯ ಆಫ್‌ಸೆಟ್ ಪಾರ್ಟನರ್‌ನ ಸೇವಾ ನಿಯಂತ್ರಣದಲ್ಲಿ ಸರ್ಕಾರ ನಿಯಂತ್ರಿಸಬಹುದು’ ಎಂಬ ಸಮಜಾಯಿಷಿ ಕೊಟ್ಟರೂ ವಾದ-ವಿವಾದ ದೀರ್ಘವಾಗುತ್ತಲೇ ಸಮಯವನ್ನು ತಿಂದುಹಾಕಿತ್ತು.

ಡೆಸಾಲ್ಟ್ ಕಂಪನಿಯ ಸಿಇಒ ಎರಿಕ್

ಮೋದಿಯವರು ಹೊಸ ಒಪ್ಪಂದ ಮಾಡಿಕೊಂಡ ನಂತರ ಮಾಧ್ಯಮದವರ ಜೊತೆ ಮಾತನಾಡುತ್ತಾ `ಈಗ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುತ್ತಿರುವ ಈ ಸರ್ಕಾರ lifetime-cost ನಿಬಂಧನೆಗಳನ್ನು ರದ್ದು ಮಾಡಿಕೊಂಡಿದೆಯಾ?’ ಎಂದು ಪ್ರಶ್ನಿಸಿದ್ದಾರೆ. ಅಸಲಿಗೆ, ಪಾರ್ಲಿಮೆಂಟ್‌ನಲ್ಲಿ ಈಗಾಗಲೇ ಎರಡು ಬಾರಿ ರಫೇಲ್ ಕುರಿತು lifetime-cost ಪ್ರಶ್ನೆಗಳನ್ನು ಕೇಳಲಾಗಿದೆ. ಎರಡೂ ಬಾರಿಯೂ ಸರ್ಕಾರ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿರುವ ಸರ್ಕಾರ, ಹಳೆಯ ಒಪ್ಪಂದದ ವೆಚ್ಚ ದರಕ್ಕೂ ಈಗಿನ ವೆಚ್ಚ ದರಕ್ಕೂ ತುಂಬಾ ವ್ಯತ್ಯಾಸ ಇದೆ ಅಂತೇಳಿ ನುಣುಚಿಕೊಂಡಿದೆ. ವಿಪರ್ಯಾಸವೆಂದರೆ, ಇದೇ ವಿಷಯವಾಗಿ ಈಗ ಬೆಲೆಗಳು ಹೆಚ್ಚಾಗಿರುವುದನ್ನು ಪರಿಗಣಿಸಿ ಬಿಡ್ಡಿಂಗ್‌ನಲ್ಲಿ ಹೇಳಿದ್ದ ದರಕ್ಕಿಂತ ನಿಮ್ಮ ಕಂಪನಿ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಡುತ್ತಿದೆಯೇ ಎಂಬ ಪ್ರಶ್ನೆಗೆ ಫೆಬ್ರವರಿ 2015ರಲ್ಲಿ (ಹಳೆಯ ಒಪ್ಪಂದ ರದ್ದಾಗುವುದಕ್ಕೂ ಎರಡು ತಿಂಗಳು ಮುನ್ನ) ಉತ್ತರ ಕೊಟ್ಟಿದ್ದ ಡೆಸ್ಸಾಲ್ಟ್ ಕಂಪನಿಯ ಸಿಇಒ ಎರಿಕ್ ಟ್ರಫೈರ್‌ರವರು `ಮೊದಲ ದಿನ ಹೇಳಿದ ದರಕ್ಕೇ ನಾವು ಇವತ್ತಿಗೂ ಬದ್ಧರಾಗಿದ್ದೇವೆ’ ಅಂತ ಹೇಳಿದ್ದರು! ಅಂದರೆ ವರ್ಷಗಳು ಉರುಳಿದರೂ ಬಿಡ್ಡಿಂಗ್‌ನಲ್ಲಿ ನಮೂದಿಸಿದ್ದ ದರಕ್ಕೇ ಕಂಪನಿ ವಿಮಾನ ಪೂರೈಸಲು ಸಿದ್ಧವಿತ್ತು ಎಂಬುದು ಇಲ್ಲಿ ಸ್ಪಷ್ಟವಾಗುತ್ತೆ. ಹಳೆಯ ಒಪ್ಪಂದ ರದ್ದಾದದ್ದು ದರ ಏರಿಸಲು ಕಂಪನಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಇತ್ತ ಸರ್ಕಾರ ಹಳೆಯ ಒಪ್ಪಂದವೇ ಬೇರೆ, ಹೊಸ ಒಪ್ಪಂದವೇ ಬೇರೆ ಎಂಬರ್ಥದ ಇಂತಹ ಮಾತುಗಳನ್ನಾಡುತ್ತಿದ್ದರೆ, ಮೋದಿ ಒಪ್ಪಂದ ಮಾಡಿಕೊಂಡ ತಕ್ಷಣವೇ ಬಿಡುಗಡೆ ಮಾಡಲಾದ ಭಾರತ-ಫ್ರಾನ್ಸ್ ಜಂಟಿ ಹೇಳಿಕೆಯಲ್ಲಿ `ಭಾರತೀಯ ವಾಯುಪಡೆ ಈಗಾಗಲೇ ಪರೀಕ್ಷಿಸಿ, ಅನುಮೋದಿಸಿರುವ configuration ಮಾದರಿಯಲ್ಲೇ ವಿಮಾನ ಮತ್ತು ಪೂರಕ ಸಲಕರಣೆಗಳನ್ನು ಪೂರೈಕೆ ಮಾಡಲಾಗುವುದು’ ಎಂದು ಉಲ್ಲೇಖಿಸಲಾಗಿದೆ. ಅಂದರೆ ನಿಯಮ, ನಿಬಂಧನೆಗಳು ಹಳೆಯ ಮಾತುಕತೆಯಂತೆಯೇ ಉಳಿಸಿಕೊಳ್ಳಲಾಗಿದೆ, ಆದರೆ ದರ, ವಿಮಾನಗಳ ಸಂಖ್ಯೆ, ಸಹಭಾಗಿ ಸಂಸ್ಥೆಯನ್ನು ಮಾತ್ರ ಬದಲಿಸಲಾಗಿದೆ!

ಇದು ಚಿಕ್ಕ ಖರೀದಿಯಂತೆ, ಟೆಕ್ನಾಲಜಿ ಇಲ್ಲವಂತೆ

ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್

ಫೆಬ್ರವರಿ 2018ರಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ ಹಾಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ರವರು `ರಫೆಲ್ ಯುದ್ಧವಿಮಾನಗಳ ತಂತ್ರಜ್ಞಾನವನ್ನು ಭಾರತಕ್ಕೆ ಹಸ್ತಾಂತರಿಸುವ ಅಥವಾ ಭಾರತದಲ್ಲೇ ಆ ಯುದ್ಧವಿಮಾನಗಳನ್ನು ಪರವಾನಗಿ ಸಹಿತ ತಯಾರಿಸಲು ನಮ್ಮ ಒಪ್ಪಂದದಲ್ಲಿ ಅವಕಾಶವಿಲ್ಲ’ ಎಂದು ಅಧಿಕೃತವಾಗಿ ಹೇಳಿದ್ದಾರೆ. ಅದನ್ನು ಸಮರ್ಥಿಸಿಕೊಳ್ಳುತ್ತಾ `ಇಷ್ಟು ಚಿಕ್ಕ ಗಾತ್ರದ ಖರೀದಿ ಒಪ್ಪಂದದಲ್ಲಿ ತಂತ್ರಜ್ಞಾನವನ್ನೂ ಕೊಟ್ಟುಬಿಡಿ ಅಂತ ಕೇಳುವುದು ಆ ಕಂಪನಿಗೆ ವೆಚ್ಚ-ಪರಿಣಾಮಕಾರಿ ಅನ್ನಿಸುವಂತದ್ದಲ್ಲ’ ಎಂದಿದ್ದಾರೆ. ಆದರೆ ಸನ್ಮಾನ್ಯ ಸಚಿವೆಯವರು 1996ರಲ್ಲಿ ಹೆಚ್ಚೂ ಕಮ್ಮಿ ಇಷ್ಟೇ ಸಂಖ್ಯೆಯ ಸು-30 ಫೈಟರ್ ವಿಮಾನಗಳನ್ನು ರಷ್ಯಾದಿಂದ ಖರೀದಿಸಿದಾಗ ಭಾರತ ತಯಾರಿಕಾ ತಂತ್ರಜ್ಞಾನವನ್ನೂ ವರ್ಗಾವಣೆ ಮಾಡಿಸಿಕೊಂಡಿತ್ತಲ್ಲದೆ, ಭಾರತದ ಎಚ್.ಎ.ಎಲ್.ನಲ್ಲೇ ಆ ವಿಮಾನಗಳನ್ನು ನಿರ್ಮಿಸಿಕೊಂಡಿತ್ತು!

ಕಾಂಗ್ರೆಸ್ ನೇತೃತ್ವದ ಯುಪಿಎ-1 ಮತ್ತು ಯುಪಿಎ-2 ಸರ್ಕಾರಗಳ ಕಾಮನ್‌ವೆಲ್ತ್, 2ಜಿ ಸ್ಪೆಕ್ಟ್ರಂ, ಕೋಲ್‌ಗೇಟ್ ಹಗರಣಗಳಿಂದ ಬೇಸತ್ತ ಜನರಲ್ಲಿ ಭ್ರಷ್ಟಾಚಾರ-ಮುಕ್ತ ಆಡಳಿತ ನೀಡುವ ಭರವಸೆ ಮತ್ತು ಅಚ್ಚೇ ದಿನಗಳ ನಿರೀಕ್ಷೆ ಹುಟ್ಟಿಸಿ ಅಧಿಕಾರಕ್ಕೇರಿದ ಮೋದಿಯವರ ಸರ್ಕಾರ ನಿಧಾನಕ್ಕೆ ಜನರ ವಿಶ್ವಾಸ ಕಳೆದುಕೊಳ್ಳಲಾರಂಭಿಸಿದೆ. ಅದರಲ್ಲಿ ಈ ರಫೇಲ್ ಹಗರಣ ಚುನಾವಣೆಗೆ ಸಜ್ಜಾಗುತ್ತಿರುವ ಮೋದಿಯವರ ಕಾಲ ಕೆಳಗಿನ ನೆಲವನ್ನೇ ಹುಸುಕಾಗಿಸುತ್ತಿರೋದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಅಂದಹಾಗೆ, ಭಾರತದ ರಾಜಕಾರಣವನ್ನೇ ಅಲ್ಲಾಡಿಸುತ್ತಿರುವ ಡೆಸ್ಸಾಲ್ಟ್ ಸಂಸ್ಥೆಯ ರಫೇಲ್ ಯುದ್ಧವಿಮಾನಗಳು ಗುಣಮಟ್ಟ ಹೊಂದಿಲ್ಲ ಅಂತ ದಕ್ಷಿಣ ಕೊರಿಯಾ, ಮೊರೊಕ್ಕೊ, ಬ್ರೆಜಿಲ್‌ಗಳು ನಿರಾಕರಿಸಿದ್ದವು. ಅಂಥಾ ವಿಮಾನಗಳನ್ನು ನಮ್ಮ ತೆರಿಗೆ ಹಣದಲ್ಲಿ ಕೊಂಡು ತರಲು ಯುಪಿಎ, ಎನ್‌ಡಿಎ ಗೌರ್ಮೆಂಟುಗಳು ಹೆಣಗಾಡುತ್ತಿರೋದು ನೋಡಿದರೆ, ಭಾರತದ ದುರಂತದ ಬಗ್ಗೆ ಆತಂಕ ಶುರುವಾಗುತ್ತೆ.

ದುಬಾರಿ ದೋಸ್ತ್-ಗೆ ಇದು ಮೋದಿ ಸಾಹೇಬರ ಗಿಫ್ಟಾ?

ಬಿಜೆಪಿ ಗೆದ್ದು ಮೋದಿಯವರು ಪ್ರಧಾನಿ ಗಾದಿಗೇರುವಲ್ಲಿ ಕಾರ್ಪೊರೇಟ್ ದೇಣಿಗೆಯ ಪಾತ್ರ ದೊಡ್ಡದಿದೆ. ಹಾಗಾಗಿಯೇ ಅವರ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಕಾರ್ಪೊರೇಟ್ ಕಂಪನಿಗಳಿಗೆ ನೆರವಾಗುವ ಅಜೆಂಡಾ ಹೊತ್ತೇ ಮೈದಳೆದಿರುತ್ತವೆ ಎಂಬ ಮಾತನ್ನು ಈ ರಫೇಲ್ ಹಗರಣವೂ ಸಾಬೀತು ಮಾಡುತ್ತಿರುವಂತಿದೆ. ಈಗಾಗಲೇ ಮುಖೇಶ್ ಅಂಬಾನಿಯ ಜಿಯೋ ಜಾಹಿರಾತಿನಲ್ಲಿ ಮೋದಿಯವರ ಮುಖ ಪ್ರತ್ಯಕ್ಷವಾದದ್ದು, ಇನ್ನೂ ಅಸ್ತಿತ್ವಕ್ಕೇ ಬಾರದ ಜಿಯೋ ಇನ್‌ಸ್ಟಿಟ್ಯೂಟ್‌ಗೆ ಕೇಂದ್ರ ಸರ್ಕಾರ `ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್’ ಮನ್ನಣೆ ಕೊಟ್ಟದ್ದು, ಗೌತಮ್ ಅದಾನಿ ದೇಶವಿದೇಶಗಳ ಬಹುಕೋಟಿ ಪ್ರೊಜೆಕ್ಟ್ಗಳು ಸಿಕ್ಕದ್ದು, ಮಲ್ಯ-ನೀರವ್ ಮೋದಿ-ಮೆಹುಲ್ ಚೋಸ್ಕಿಯಂತವರು ಬ್ಯಾಂಕ್‌ನಲ್ಲಿಟ್ಟಿದ್ದ ಜನರ ಸಾವಿರಾರು ಕೋಟಿ ಹಣ ಲಪಟಾಯಿಸಿ ಅನಾಯಾಸವಾಗಿ ವಿದೇಶಕ್ಕೆ ಹೋಗಿ ಸೆಟ್ಲ್ ಆದದ್ದು, ಇವೆಲ್ಲವೂ ಮೋದಿಯವರ ಸರ್ಕಾರವನ್ನು ಗುಮಾನಿಯಿಂದ ನೋಡುವಂತೆ ಮಾಡಿವೆ. ರಫೇಲ್ ಡೀಲ್‌ನ ಫಲಾನುಭವಿಯಾಗಿರುವ ಅನಿಲ್ ಅಂಬಾನಿ ಈಗ ಅಕ್ಷರಶಃ ಆರ್ಥಿಕ ಇಳಿಜಾರಿನಲ್ಲಿ ಹೆಣಗಾಡುತ್ತಿದ್ದಾರೆ. 2008ರಲ್ಲಿ 42 ಬಿಲಿಯನ್ ಡಾಲರ್‌ನಷ್ಟಿದ್ದ ಅನಿಲ್ ಅಂಬಾನಿಯ ಆಸ್ತಿಯು (ಆ ಕಾಲದ ಭಾರತದ ಒಂದು ವರ್ಷದ ರಕ್ಷಣಾ ಬಜೆಟ್‌ಗಿಂತ ಮೂರು ಪಟ್ಟು ಹೆಚ್ಚು) ಆತನನ್ನು ಫೋರ್ಬ್ಸ್ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರಿಸಿತ್ತು. ಆದರೆ ಅದ್ಯಾಕೊ ಅದೃಷ್ಟ ಅಣ್ಣ ಮುಖೇಶ್ ಅಂಬಾನಿಯನ್ನು ಕೈಹಿಡಿದಂತೆ ಅನಿಲ್ ಕೈಹಿಡಿಯಲಿಲ್ಲ. 2018 ತಲುಪುವ ವೇಳೆಗೆ ಆ ಆಸ್ತಿ 2.4 ಬಿಲಿಯನ್ ಡಾಲರ್‌ಗೆ ಕುಸಿದಿದೆ. ಅನಿಲ್ ಒಡೆತನವಿರುವ ರಿಲಾಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿ., ರಿಲಾಯನ್ಸ್ ಕ್ಯಾಪಿಟಲ್ ಲಿ., ರಿಲಾಯನ್ಸ್ ಕಮ್ಯುನಿಕೇಷನ್ ಲಿ. ಮತ್ತು ರಿಲಾಯನ್ಸ್ ಪವರ್ ಲಿ. ಎಂಬ ನಾಲ್ಕು ಪ್ರಧಾನ ಕಂಪನಿಗಳ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಒಂದು ಲಕ್ಷ ಕೋಟಿಗೂ ಹೆಚ್ಚು ಸಾಲ ಆತನ ಹೆಗಲೇರಿದೆ.

ಈ ದುಬಾರಿ ಗೆಳೆಯನ ಆರ್ಥಿಕ ಸಂಕಷ್ಟ ಬಗೆಹರಿಸಲು ಮೋದಿಯವರು ಜನರ ತೆರಿಗೆ ಹಣವನ್ನೇ ರಫೇಲ್ ವ್ಯವಹಾರದ ಮೂಲಕ ಫಣಕ್ಕಿಟ್ಟರಾ? ಈ ಅನುಮಾನಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಫ್ರಾನ್ಸ್ನ ಡೆಸ್ಸಾಲ್ಟ್ ಕಂಪನಿ ತನ್ನ ಆಫ್‌ಸೆಟ್ ಪಾರ್ಟನರ್ ಆಗಿ ಆಯ್ಕೆ ಮಾಡಿಕೊಂಡಿರೊ ರಿಲಾಯನ್ಸ್ ಡಿಫೆನ್ಸ್ ಲಿ. ಸಂಸ್ಥೆ ಜನ್ಮ ತಳೆದದ್ದೇ ಮೋದಿಯವರು ಹೊಸ ಒಪ್ಪಂದ ಘೋಷಿಸುವ ಹದಿಮೂರು ದಿನಗಳ ಹಿಂದೆ! ಮಹತ್ವದ ರಕ್ಷಣಾ ಪ್ರೊಜೆಕ್ಟ್ ನಿಭಾಯಿಸಿದ ಯಾವ ಅನುಭವವೂ ಇಲ್ಲದ, ಕೇವಲ ಹದಿಮೂರು ದಿನಗಳ ಹಿಂದಷ್ಟೇ ಕಣ್ಣುಬಿಟ್ಟ ಒಂದು ಖಾಸಗಿ ಕಂಪನಿಗೆ ದೇಶದ ರಕ್ಷಣೆಗೆ ಸಂಬಂಧಿಸಿದ ಹೊಣೆ ವಹಿಸುತ್ತಾರೆಂದರೆ ಏನರ್ಥ? ರಕ್ಷಣಾ ನಿಯಮದ ಪ್ರಕಾರ ಒಪ್ಪಂದದ ಅರ್ಧದಷ್ಟು ಹಣವನ್ನು ವಿದೇಶಿ ಕಂಪನಿ ಭಾರತದಲ್ಲಿ (ಅಂದರೆ ಅದರ ಆಫ್‌ಸೆಟ್ ಪಾರ್ಟನರ್ ಸಂಸ್ಥೆಯಲ್ಲಿ) ಹೂಡಬೇಕು. 60,000 ಕೋಟಿ ರೂ. ಗಾತ್ರದ ಬಜೆಟ್ ಅಂದಮೇಲೆ ಏನಿಲ್ಲವೆಂದರು 30,000 ಕೋಟಿ ರೂ. ಅನಾಯಾಸವಾಗಿ ಅನಿಲ್ ಅಂಬಾನಿಯ ಖಾತೆ ಸೇರಿಕೊಳ್ಳಲಿದೆ. ಈಗಾಗಲೇ ಕಳೆದ ವರ್ಷವೇ ರಿಲಾಯನ್ಸ್ ಡಿಫೆನ್ಸ್ ಸಂಸ್ಥೆ ಫ್ರೆಂಚ್ ಕಂಪನಿಯಿಂದ 21,000 ಕೋಟಿ ರೂ. ವಹಿವಾಟವನ್ನು ದಕ್ಕಿಸಿಕೊಂಡಿದೆ ಎಂದು ವರದಿಗಳು ಹೇಳುತ್ತವೆ. ಇದೇ ಜುಲೈನಲ್ಲಿ ಮತ್ತೆ 100 ಮಿಲಿಯನ್ ಯೂರೋ ಹಣವನ್ನು ರಿಲಾಯನ್ಸ್ ಸಂಸ್ಥೆಯಲ್ಲಿ ಹೂಡಿಕೆ ಮಾಡುವುದಾಗಿ ಡೆಸ್ಸಾಲ್ಟ್ ಕಂಪನಿ ಘೋಷಿಸಿದೆ. ರಫೇಲ್ ವಿಮಾನಗಳನ್ನು ತಯಾರಿಸಲು ಡೆಸ್ಸಾಲ್ಟ್ ಕಂಪನಿಗೆ ಬಿಡಿಭಾಗಗಳನ್ನು ಪೂರೈಕೆ ಮಾಡುವ ಇತರೆ ಕಂಪನಿಗಳು ಸಹಾ ರಿಲಾಯನ್ಸ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಶುರು ಮಾಡಿವೆ. ಇವೆಲ್ಲದರಿಂದ ಅನಿಲ್‌ನ ಆರ್ಥಿಕ ದುಸ್ಥಿತಿ ಕೊಂಚ ಚೇತರಿಸಿಕೊಳ್ಳಲಿದೆ. ಆದರೆ ಭಾರತದ ಪರಿಸ್ಥಿತಿ…?

ಕೃಪೆ: ದಿ ಕ್ಯಾರವಾನ್
ಸಂಗ್ರಹಾನುವಾದ: ಗಿರೀಶ್ ತಾಳಿಕಟ್ಟೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...