ಮೂರು ಸಾರಿ ಲಡ್ಡು ಹಂಚಲಾಯಿತು; ರೈತರಿಗೆ ಬೂಂದಿ ಕಾಳೂ ಸಿಗಲಿಲ್ಲ

ಮಗು ಇನ್ನೂ ಹುಟ್ಟೇ ಇಲ್ಲ, ಆದರೆ ಈಗಾಗಲೇ ಮೂರು ಸಲ ಸಿಹಿ ಹಂಚಿಕೊಂಡು ತಿಂದುಬಿಟ್ಟರು. ರೈತರ ಬೆಳೆಗೆ ಸರಿಯಾದ ಬೆಲೆ ನೀಡುವಲ್ಲಿ ಮೋದಿ ಸರಕಾರ ಇದನ್ನೇ ಮಾಡಿದೆ. ಇಲ್ಲಿಯತನಕ ಒಬ್ಬ ರೈತನಿಗೂ ಹೆಚ್ಚಿಸಲಾದ ಬೆಲೆ ಸಿಕ್ಕಿಲ್ಲ. ಹೆಚ್ಚಿನ ರೈತರಿಗೆ ಬೆಲೆ ಸಿಗುವ ಸಾಧ್ಯತೆಯೂ ಕಾಣುತ್ತಿಲ್ಲ. ಆದರೆ ಮೂರು ಬಾರಿ ಚಪ್ಪಾಳೆ ತಟ್ಟಲಾಗಿದೆ, ಅಭಿನಂದನೆಗಳ ಪೋಸ್ಟರ್‍ಗಳು, ಹೋರ್ಡಿಂಗ್‍ಗಳನ್ನು ಹಚ್ಚಲಾಗಿದೆ, ಸಿಹಿ ತಿನ್ನಲಾಗಿದೆ.
ಫೆಬ್ರುವರಿ 1 ರಂದು ಅರುಣ್ ಜೇಟ್ಲಿಯವರು ಈ ‘ಐತಿಹಾಸಿಕ’ ನಿರ್ಣಯದ ಘೋಷಣೆ ಮಾಡಿದಾಗ ಮೊದಲ ಬಾರಿ ಲಡ್ಡೂ ತಿನ್ನಲಾಯಿತು. ವಿತ್ತ ಸಚಿವರು ಕೃಷಿ ವೆಚ್ಚದ ವ್ಯಾಖ್ಯೆಯನ್ನೇ ಬದಲಿಸಿದ ಹಾಗೂ ತಮ್ಮ ಮೂಲ ಆಶ್ವಾಸನೆಯಿಂದ ನುಣುಚಿಕೊಂಡ ಕಹಿ ಸತ್ಯ ಲಡ್ಡೂಗಳ ಸಿಹಿಯಲ್ಲಿ ಮುಚ್ಚಿಹೋಯಿತು. ಜುಲೈ 4 ರಂದು ಸರಕಾರ ಈ ವರ್ಷದ ಮುಂಗಾರು ಬೆಳೆಯ ಬೆಲೆಯಲ್ಲಿ ‘ಐತಿಹಾಸಿಕ’ ವೃದ್ಧಿ ಘೋಷಿಸಿದಾಗ ಎರಡನೇ ಬಾರಿ ಲಡ್ಡೂ ತಿನ್ನಲಾಯಿತು. ಇದಕ್ಕಿಂತ ಹೆಚ್ಚಿನ ಚುನಾವಣೆಯ ಉಂಡೆಗಳನ್ನು ಹಿಂದಿನ ಸರಕಾರ 2009 ರಲ್ಲಿಯೇ ಹಂಚಿತ್ತು ಎನ್ನುವ ಸತ್ಯವೂ ಈ ಲಡ್ಡೂಗಳ ಭಾರದಲ್ಲಿ ಅವಿತುಹೋಯಿತು.
ಕಳೆದ ವಾರ ಸರಕಾರದ ಖರೀದಿಯ ವಾರ್ಷಿಕ ನೀತಿಯನ್ನು ಕ್ಯಾಬಿನೆಟ್ ಘೋಷಿಸಿದಾಗ ಮೂರನೇ ಬಾರಿ ಲಡ್ಡೂ ತಿನ್ನಲಾಯಿತು. ಮತ್ತೆ ಇದನ್ನು ಒಂದು ಹೊಸ ‘ಐತಿಹಾಸಿಕ’ ಘೋಷಣೆಯಂತೇ ದೇಶದ ಎದುರಿಡಲಾಯಿತು. ತನ್ನ ಕಾಯಕದ ಫಲ ಯಾವಾಗ ಸಿಗುವುದೆಂದು ರೈತ ಮಾತ್ರ ಕಣ್ಣು ಬಿಟ್ಟು ಕಾಯುತ್ತಿದ್ದ.
ಎಲ್ಲ ರೈತರು ತಮ್ಮ ಎಲ್ಲಾ ಬೆಳೆಗಳನ್ನು ಎಮ್‍ಎಸ್‍ಪಿ ದರದಲ್ಲಿ ಮಾರಾಟ ಮಾಡುವ ಒಂದು ವ್ಯವಸ್ಥೆ ಹೇಗೆ ಮಾಡಬಹುದು ಎಂಬ ಸಮಸ್ಯೆಗೆ ಹೊಸ ನೀತಿಯಲ್ಲೂ ಯಾವುದೇ ಉತ್ತರವಿಲ್ಲ. ಈಗ ಮೂರು ವಿಧಗಳಲ್ಲಿ ಒಂದು ವಿಧದಲ್ಲಿ ಸರಕಾರೀ ಖರೀದಿ ಆಗಬಹುದು. ಮೊದಲನೆಯದು ಹಳೆಯ ಸರಕಾರೀ ಖರೀದಿಯ ವಿಧ. ಈ ಯೋಜನೆ ಅನುಗುಣವಾಗಿ ರೇಷನ್ ಅಂಗಡಿಗಳಲ್ಲಿ ಮಾರಾಟ ಮಾಡಲು ಸರಕಾರ ಧಾನ್ಯಗಳನ್ನು ಖರೀದಿ ಮಾಡುತ್ತದೆ. ಅಥವಾ ಮೌಲ್ಯ ಸಮರ್ಥನೆ ಯೋಜನೆಯ ಅಡಿಯಲ್ಲಿ ಯಾವುದೇ ಬೆಳೆಯ ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಲ್ಲಿ ಸರಕಾರ ಆ ಬೇಳೆಯನ್ನು ಖರೀದಿ ಮಾಡಲು ಪ್ರಾರಂಭಿಸುತ್ತದೆ. ಏಳು ತಿಂಗಳ ನಂತರ ಎಂದಿನಂತೆಯೇ ಈ ವರ್ಷ ಕೂಡ ಇದೇ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸರಕಾರ ನಿರ್ಣಯಿಸಿದೆ.
ಒಂದೇ ಒಂದು ಬದಲಾವಣೆ ಏನೆಂದರೆ, ಸರಕಾರ ತನ್ನ ಬಜೆಟ್‍ನಲ್ಲಿ ಮಾಡಿದ ಕಟುವ್ಯಂಗ್ಯವನ್ನು ಸುಧಾರಿಸುತ್ತ ಈ ಖರೀದಿಗಾಗಿ 200 ಕೋಟಿಗಳ ಬದಲಾಗಿ ಈಗ ಸುಮಾರು 16,000 ಕೋಟಿ ರೂಪಾಯಿಗಳನ್ನು ನೀಡುವ ನಿರ್ಣಯ ಮಾಡಿದೆ. ಅದರೊಂದಿಗೆ ಸರಕಾರೀ ಖರೀದಿ ಮಾಡುವ ಏಜೆನ್ಸಿಗಳು ಬ್ಯಾಂಕಿನಿಂದ 45,000 ಕೋಟಿ ರೂಪಾಯಿಗಳ ಸಾಲ ಮಾಡಬಹುದು ಎನ್ನುವ ಘೋಷಣೆಯನ್ನೂ ಮಾಡಿದೆ. ಆದರೆ ಇದರಲ್ಲಿ ಸರಕಾರ ಗ್ಯಾರಂಟಿ ಮಾತ್ರ ನೀಡಿದೆ, ತನ್ನ ಬೊಕ್ಕಸದಿಂದ ಒಂದು ರೂಪಾಯಿಯನ್ನೂ ಹಾಕಿಲ್ಲ.
ವಾಸ್ತವದಲ್ಲಿ ಈ ಮೊತ್ತವೂ ಒಂಟೆ ಬಾಯಲ್ಲಿ ಜೀರಿಗೆ ಹಾಕಿದಂತಿದೆ ಏಕೆಂದರೆ, ಸರಕಾರ ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲಿ ಅದಕ್ಕೆ ಕನಿಷ್ಠ ಒಂದೂವರೆಯಿಂದ ಎರಡು ಲಕ್ಷ ಕೋಟಿ ರೂಪಾಯಿಗಳ ವ್ಯವಸ್ಥೆ ಮಾಡಬೇಕಿತ್ತು. ಸರಕಾರ ಯಾವುದೇ ಬೆಳೆಯ ಸಂಪೂರ್ಣ ಉತ್ಪನ್ನದಲ್ಲಿ ಕೇವಲ 25% ಉತ್ಪನ್ನ ಖರೀದಿಸುವಲ್ಲಿ ಮಾತ್ರ ರಾಜ್ಯ ಸರಕಾರದೊಂದಿಗೆ ಸಹಯೋಗ ಮಾಡುವುದು ಎನ್ನುವ ಸತ್ಯವೂ ಲಡ್ಡೂಗಳ ತಟ್ಟೆಯ ಮುಂದೆ ಮುಚ್ಚಿಹೋಗಿದೆ. ಇನ್ನುಳಿದ 75% ಖರೀದಿ ಮಾಡುವುದು ರಾಜ್ಯಸರಕಾರದ ತಲೆನೋವು ಆಗಿರುತ್ತದೆ. ರಾಜ್ಯ ಸರಕಾರಗಳಲ್ಲಿ ಅಷ್ಟು ದುಡ್ಡು ಇರೋಲ್ಲ, ರೈತರಿಗೆ ಬೆಳೆಯನ್ನು ಖರೀದಿ ಮಾಡಲ್ಲ.
ಅದರ ಬದಲಿಗೆ ಕೇಂದ್ರ ಸರಕಾರ ಪ್ರಾಯೋಗಿಕವಾಗಿ ಎರಡು ಬೇರೇ ವಿಧಾನಗಳ ಘೋಷಣೆ ಮಾಡಿದೆ. ಆದರೆ ಇವೆರಡರಿಂದಲೂ ರೈತರಿಗೆ ಯಾವುದೇ ಲಾಭ ಆಗಲು ಸಾಧ್ಯವಿಲ್ಲ. ಮೊದಲನೇದಂತೂ ಮಧ್ಯಪ್ರದೇಶದಲ್ಲಿ ಸಂಪೂರ್ಣವಾಗಿ ಫೇಲ್ ಆದ ‘ಭಾವಾಂತರ’ ಯೋಜನೆ. ಇದರಲ್ಲಿ ರೈತರು ಭಾರಿ ನಷ್ಟ ಅನುಭವಿಸಬೇಕಾಗಿ ಬಂತು. ಇನ್ನೊಂದೆಡೆ ಈ ಯೋಜನೆಯ ಗರಿಷ್ಠ ಲಾಭ ಪಡೆಯಲು ವ್ಯಾಪಾರಿಗಳು ರಾತ್ರೋರಾತ್ರಿ ಬೆಳೆಗಳನ್ನು ಬೆಲೆ ಇಳಿಸಿಬಿಟ್ಟರು ಹಾಗೂ ನಂತರ ಭಾರೀ ಲಾಭ ಗಳಿಸಿದರು. ಇದನ್ನು ಸುಧಾರಿಸದೇ ಭಾವಾಂತರ ಯೋಜನೆ ದೇಶಾದ್ಯಂತ ಅನುಷ್ಠಾನಗೊಳಿಸಿದರೆ ರೈತರಿಗೆ ನಷ್ಠ ಹಾಗೂ ವ್ಯಾಪಾರಿ ಮತ್ತು ವಂಚಕರಿಗೆ ಲಾಭ ಕಟ್ಟಿಟ್ಟ ಬುತ್ತಿ.
ಮೂರನೇ ವಿಧಾನ, ಸರಕಾರದ ಪರವಾಗಿ ಕನಿಷ್ಠ ಬೆಂಬಲ ಬೆಲೆ ಮೇಲೆ ಖರೀದಿಯನ್ನು ಖಾಸಗೀ ವ್ಯಾಪಾರಿಗಳು ಮಾಡುವುದು. ಖರೀದಿ, ಸಂಸ್ಕರಣೆ, ಶೇಖರಣೆ ಮತ್ತು ಮಾರಾಟ ಇವೆಲ್ಲವೂ ಅವರ ಜವಾಬ್ದಾರಿ ಆಗಿರುತ್ತವೆ. ಸರಕಾರ ಅವರ ಈ ಕೆಲಸಕ್ಕಾಗಿ 15% ವರೆಗೆ ಶುಲ್ಕ ಪಾವತಿಸುತ್ತದೆ. ಆದರೆ, ಪ್ರಶ್ನೆ ಇರುವುದು, ಒಂದು ವೇಳೆ ಬೆಳೆಯ ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ತುಂಬಾ ಕಡಿಮೆ ಇದ್ದಲ್ಲಿ ಯಾವುದೇ ವ್ಯಾಪಾರಿ ಅದನ್ನೇಕೆ ಖರೀದಿಸುತ್ತಾರೆ ಎನ್ನುವುದು. ಇದರ ಬದಲಾಗಿ ಸರಕಾರ ಯಾವುದೇ ವ್ಯಾಪಾರಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸುವುದನ್ನು ಅಪರಾಧ ಎಂದು ಪರಿಗಣಿಸುವಂತೆ ನಿಯಮ ಮಾಡಬೇಕು ಎಂದು ರೈತ ಚಳವಳಿಗಳು ಬೇಡಿಕೆ ಇಟ್ಟಿದ್ದವು. ಇದರ ಬಗ್ಗೆ ಕೇಂದ್ರ ಸರಕಾರ ಮೌನ ತೋರಿದೆ.
ಈಗ ಅನಿಸುವುದೇನೆಂದರೆ, ಈ ಬಾರಿಯೂ ಮತ್ತೊಮ್ಮೆ ಕುರ್ಚಿಗಳು ಲಡ್ಡೂ ತಿಂದು ಹಾಕುತ್ತವೆ ಹಾಗೂ ರೈತ ನೋಡುತ್ತ ನಿಲ್ಲಲಿದ್ದಾನೆ. ಸರ್ಕಾರ ಈ ‘ಐತಿಹಾಸಿಕ’ ನಿರ್ಣಯದ ಘೋಷಣೆ ಮಾಡಿಬಿಟ್ಟೆನೆಂದು ಕೇಂದ್ರ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಸಂಭ್ರಮ ಆಚರಿಸುತ್ತಿದ್ದಾಗ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮಂಡಿಗಳಲ್ಲಿ ಹೆಸರುಕಾಳು ಬಂದು ಬಿದ್ದಿತ್ತು. ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ಸರ್ಕಾರದ ಪ್ರಕಾರ ಅಧಿಕೃತವಾಗಿ 6975 ಆಗಿದ್ದರೂ, ಮಂಡಿಯ ವೆಬ್‍ಸೈಟುಗಳಲ್ಲಿ ಅದು 3900 ಅಥವಾ 4400 ಎಂದು ಕಾಣಿಸಿಕೊಳ್ಳುತ್ತಾ, ಹೆಸರುಕಾಳಿನ ವಹಿವಾಟು ಅಷ್ಟಕ್ಕೇ ನಡೆದು ಮುಗಿಯಿತು. ಹೆಸರಿನ ಉಂಡೆಗಳಂತೂ ರೈತರ ಪಾಲಿಗೆ ಬಹಳ ಕಹಿಯಾದವು. ಇನ್ನುಳಿದ ಲಡ್ಡುಗಳ ಸಿಹಿಯು ರೈತರ ಮನೆಬಾಗಿಲಿನವರೆಗೆ ತಲುಪಲಿದೆಯೇ?

– ಯೋಗೇಂದ್ರ ಯಾದವ್
ಅನುವಾದ: ರಾಜಶೇಖರ್ ಅಕ್ಕಿ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here