ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟ ಆರಂಭವಾಗಿ ಜೂನ್ 26ಕ್ಕೆ ಏಳು ತಿಂಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ, ದೇಶಾದ್ಯಂತ ರಾಜಭವನಗಳ ಮುಂದೆ `ಕೃಷಿ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ ದಿನ’ (ಖೇತಿ ಬಚಾವೋ, ಲೋಕತಂತ್ರ ಬಚಾವೋ ದಿವಸ್) ಘೋಷಣೆಯಡಿ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.
ಜೂನ್ 26ರಂದು ರೈತರು ಕಪ್ಪು ಧ್ವಜಗಳನ್ನು ಹಿಡಿದು ಪ್ರತಿಭಟನೆ ನಡೆಸಲಿದ್ದಾರೆ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಪತ್ರಗಳನ್ನು ಸಲ್ಲಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಆ ದಿನವನ್ನು`ಖೇತಿ ಬಚಾವೋ, ಲೋಕ್‌ತಂತ್ರ ಬಚಾವೋ ದಿವಸ್’ ಆಚರಿಸಲಾಗುವುದು ಎಂದು ರೈತ ನಾಯಕ ಇಂದ್ರಜಿತ್ ಸಿಂಗ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. `ನಾವು ಕಪ್ಪು ಧ್ವಜಗಳನ್ನು ಹಿಡಿದು ರಾಜಭವನದ ಎದುರು ಪ್ರತಿಭಟನೆ ನಡೆಸಲಿದ್ದೇವೆ. ರಾಷ್ಟ್ರಪತಿಗಳ ಪ್ರತಿನಿಧಿಯಾಗಿರುವ ಪ್ರತಿ ರಾಜ್ಯದ ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಪ್ರತಿಭಟಿಸುತ್ತೇವೆ’ ಎಂದಿದ್ದಾರೆ.
`ಇದು (ಜೂನ್ 26) 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ದಿನ ಮತ್ತು ಅಂದು ನಮ್ಮ ಪ್ರತಿಭಟನೆಯು ಆರಂಭವಾಗಿ ಏಳು ತಿಂಗಳು ಪೂರ್ಣಗೊಳ್ಳುತ್ತದೆ. ಕೃಷಿಯ ಜೊತೆಗೆ ಸರ್ವಾಧಿಕಾರದ ಈ ವಾತಾವರಣದಲ್ಲಿ ಜನರ ಪ್ರಜಾಪ್ರಭುತ್ವ ಹಕ್ಕುಗಳ ಮೇಲೂ ದಾಳಿ ಮಾಡಲಾಗಿದೆ. ಇದು ಅಘೋಷಿತ ತುರ್ತು ಪರಿಸ್ಥಿತಿಯ ಕಾಲವಾಗಿದೆ’ ಎಂದು ಅವರು ತಿಳಿಸಿದರು.
ಮಹಿಳಾ ಪ್ರತಿಭಟನಾಕಾರರ ಕಳವಳಗಳನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಸುಮನ್ ಹೂಡಾ, `ಪ್ರತಿಭಟನಾ ಸ್ಥಳಗಳಲ್ಲಿರುವ ಮಹಿಳೆಯರಿಗಾಗಿ ಶನಿವಾರ ಸಂಜೆ ವೇಳೆಗೆ ವಿಶೇಷ ಸಮಿತಿಗಳನ್ನು ರಚಿಸಲಾಗುವುದು’ ಎಂದು ತಿಳಿಸಿದರು.
`ನಮ್ಮ ಮಹಿಳಾ ಪ್ರತಿಭಟನಾಕಾರರಿಂದ ನಾವು ಕೆಲವು ದೂರುಗಳನ್ನು ಸ್ವೀಕರಿಸಿದ್ದೇವೆ. ಈ ವಿಶೇಷ ಸಮಿತಿಗಳು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತವೆ ಎಂದು ನಾನು ಅವರಿಗೆ ಭರವಸೆ ನೀಡಲು ಬಯಸುತ್ತೇನೆ. ಸಮಿತಿಯ ಸಂಪರ್ಕ ಸಂಖ್ಯೆಯನ್ನು ಭಾನುವಾರದ ವೇಳೆಗೆ ಹಂಚಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕೃಪೆ: ಅನ್ನದ ಋಣ
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಅಮೆರಿಕಾದ ಕೃಷಿಕರು, ತಜ್ಞರು ಮತ್ತು ರಾಜಕಾರಣಿಗಳು


