Homeಕರೋನಾ ತಲ್ಲಣಸುಪ್ರೀಂ ಚಾಟಿಗೂ ಮೊದಲೇ ಮೋದಿ ಉಚಿತ ಲಸಿಕೆ ನೀತಿ ಸಿದ್ಧ ಮಾಡಿದ್ದರೆ?: ಮೋದಿ ಸರ್ಕಾರದ ಡ್ಯಾಮೇಜ್...

ಸುಪ್ರೀಂ ಚಾಟಿಗೂ ಮೊದಲೇ ಮೋದಿ ಉಚಿತ ಲಸಿಕೆ ನೀತಿ ಸಿದ್ಧ ಮಾಡಿದ್ದರೆ?: ಮೋದಿ ಸರ್ಕಾರದ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಪತ್ರಕರ್ತರು

- Advertisement -
- Advertisement -

ಜನವರಿಯಿಂದ, ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ ಮೂರು ಹಂತಗಳಲ್ಲಿ ನಡೆಯುತ್ತಿದೆ. ಆದರೂ ಎಲ್ಲರಿಗೂ ಸಮರ್ಪಕವಾಗಿ ಲಸಿಕೆ ನೀಡಲು ಆಗುತ್ತಿಲ್ಲ ಎಂಬ ಕೂಗು ಎಲ್ಲೆಡೆ ಕೇಳಿಬಂತು. ಮೇ 1 ರಿಂದ 18-44 ವಯೋಮಾನದವರಿಗೆ ಈ ಹಂತವನ್ನು ಪ್ರಾರಂಭಿಸಲು ಲಸಿಕೆಗಳನ್ನು ಖರೀದಿಸಲು ಪ್ರಧಾನಿ ಮೋದಿ ಏಪ್ರಿಲ್ 19ರಂದು ರಾಜ್ಯಗಳಿಗೆ ನಿರ್ದೇಶನ ನೀಡಿದ್ದರು. ರಾಜ್ಯಗಳು ಕೇಂದ್ರಕ್ಕಿಂತ ಹೆಚ್ಚು ಹಣ ಪಾವತಿ ಮಾಡಬೇಕಿತ್ತು. ಏಪ್ರಿಲ್‌ನಲ್ಲಿಯೇ, ಸುಪ್ರೀಂಕೋರ್ಟ್ ಕೇಂದ್ರದ ಲಸಿಕಾ ನೀತಿ ಕುರಿತು ಸು-ಮೋಟು ಪ್ರಕರಣದಲ್ಲಿ ಟೀಕಿಸಿತ್ತು. ಸುಪ್ರೀಂ ಕೋರ್ಟ್ ಪದೇ ಪದೇ ಚಾಟಿ ಬೀಸಿದ ನಂತರ, ಅದಕ್ಕಾಗಿ ಎತ್ತಿಟ್ಟ 35,000 ಕೋಟಿ ರೂಗಳ ಲೆಕ್ಕ ಕೇಳಿದ ನಂತರ ಕೇಂದ್ರವು ಈಗ ನೇರವಾಗಿ ಶೇ. 75 ಲಸಿಕೆಗಳನ್ನು ಸಂಗ್ರಹಿಸುತ್ತದೆ ಮತ್ತು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ ಎಂದು ಜೂನ್ 7 ರಂದು ಪ್ರಧಾನಿ ಘೋಷಿಸಿದರು.

ತರುವಾಯ, ಹಲವಾರು ಪತ್ರಕರ್ತರು ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಲಸಿಕೆಗಳ ಕೇಂದ್ರೀಕೃತ ಖರೀದಿಗೆ ಮರಳುವ ಕೇಂದ್ರ ಸರ್ಕಾರದ ಯೋಜನೆಯನ್ನು ಜೂನ್ 1ರಂದು ಮಂಡಿಸಲಾಯಿತು ಮತ್ತು ಸುಪ್ರೀಂಕೋರ್ಟ್ ಆದೇಶದ ವಿಚಾರಣೆ ಜೂನ್ 2ರಂದು ಹೊರಬಂದಿತು – ಹೀಗೆ ಪ್ರಧಾನಿ ಮೋದಿಯವರ ಘೋಷಣೆ ಸ್ವತಂತ್ರ ನಿರ್ಧಾರವಾಗಿತ್ತು ಮತ್ತು ಸುಪ್ರೀಂ ಕೋರ್ಟಿನ ಅವಲೋಕನಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂಬ ವಾದ, ಸಮರ್ಥನೆಯೊಂದು ಈಗ ಮುನ್ನಲೆಗೆ ಬಂದಿದೆ. ಅಂದರೆ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ.

ಟೈಮ್ಸ್ ನೌ ಸಂಪಾದಕಿ ನವಿಕಾ ಕುಮಾರ್ “ಲಸಿಕೆಗಳ ಕೇಂದ್ರೀಕೃತ ಖರೀದಿ ನೀತಿಗೆ ಮರಳುವ ಪ್ರಸ್ತಾಪ ಜೂನ್ 1ರಂದು ಮೋದಿಯವರ ಟೇಬಲ್‍ ಮೇಲಿತ್ತು ಎಂದು ನಾನು ಕೇಳಿದ್ದೇನೆ. ಅದೇ ದಿನ ಅವರು ಅದಕ್ಕೆ ಸಹಿ ಹಾಕಿದ್ದಾರೆ. ಸುಪ್ರೀಂ ವಿಚಾರಣೆಯು ಜೂನ್ 2 ರಂದು ನಡೆಯಿತು. ಹೀಗಾಗಿ ಪ್ರಧಾನಿ ಸುಪ್ರೀಂಕೋರ್ಟ್ ಅವಲೋಕನಕ್ಕೂ ಮೊದಲೇ ಉಚಿತ ಲಸಿಕೆಯ ನಿರ್ಧಾರ ಮಾಡಿದ್ದರು ಎಂದು ಟ್ವೀಟ್‍ ಮಾಡಿದ್ದರು. ನಂತರ ಟ್ವೀಟ್ ಅನ್ನು ಡಿಲೀಟ್‍ ಮಾಡಿದರು.

ಎಬಿಪಿ ನ್ಯೂಸ್ ಆಂಕರ್ ವಿಕಾಸ್ ಭದೌರಿಯಾ “ಸರ್ಕಾರಿ ಮೂಲಗಳನ್ನು” ಉಲ್ಲೇಖಿಸಿ, ಸುಪ್ರೀಂಕೋರ್ಟ್ ವಿಚಾರಣೆಯನ್ನು “ಜೂನ್ 3” ರಂದು ನಡೆಸುವ ಹೊತ್ತಿಗೆ ಕೇಂದ್ರದ ಯೋಜನೆ “ಆಗಲೇ ಪ್ರಕ್ರಿಯೆಯಲ್ಲಿತ್ತು” ಎಂದು ಹೇಳಿದ್ದಾರೆ. ಮಾಹಿತಿಗಾಗಿ “ಸರ್ಕಾರಿ ಮೂಲಗಳನ್ನು” ಉಲ್ಲೇಖಿಸಿದ ಒಂದೇ ರೀತಿಯ ಟ್ವೀಟ್ ಅನ್ನು ಅಮನ್ ವರ್ಮಾ, ಪಾಯಲ್ ಮೆಹ್ತಾ ಮತ್ತು ಮೇಘಾ ಪ್ರಸಾದ್ ಸೇರಿದಂತೆ ಹಲವಾರು ಇತರ ಪತ್ರಕರ್ತರು ಪೋಸ್ಟ್ ಮಾಡಿದ್ದಾರೆ.

ರಿಪಬ್ಲಿಕ್  ಟಿವಿ ವರದಿ ಪ್ರಕಾರ, “ಕೇಂದ್ರೀಕೃತ ಉಚಿತ ವ್ಯಾಕ್ಸಿನೇಷನ್ ಯೋಜನೆಯನ್ನು ಜೂನ್ 1ರಂದೇ ಪ್ರಧಾನಿ ಮೋದಿ ಎದುರು ಮಂಡಿಸಲಾಯಿತು. ಎಂದು ‘ಸರ್ಕಾರದ ಉನ್ನತ ಮೂಲಗಳು’ ಹೇಳಿವೆ. ಅದೇ ದಿನ ಪ್ರಧಾನಿ ಅನುಮೋದನೆ ನೀಡಿದ್ದರು. ಆದರೆ ಇದರ ಬಗ್ಗೆ ಸುಪ್ರೀಂಕೋರ್ಟ್ ಅವಲೋಕನಗಳು ಒಂದು ದಿನದ ನಂತರ ಅಂದರೆ ಜೂನ್ 2ರಂದು ಬಂದಿವೆ….”

ಎಎನ್‌ಐ, ಯಾಹೂ ನ್ಯೂಸ್, ಟೈಮ್ಸ್ ನೌ, ಝೀ ಟೈಮ್ಸ್‍,  ಲೈವ್‍ ಹಿಂದೂಸ್ತಾನ್ ಮತ್ತು ದಿ ನವಹಿಂದ್‍ ಟೈಮ್ಸ್ ಮಾಧ್ಯಮಗಳು ಇದೇ ರೀತಿಯ ವರದಿಗಳನ್ನು ಪ್ರಕಟಿಸಿವೆ.

ಫ್ಯಾಕ್ಟ್-ಚೆಕ್

ಲಸಿಕೆಯ 3ನೆ ಹಂತದ ಆರಂಭಕ್ಕೆ ಮುಂಚಿತವಾಗಿ, ಕೇಂದ್ರದ ಕೋವಿಡ್‍ ನಿರ್ವಹಣೆಗೆ ಸಂಬಂಧಿಸಿದಂತೆ ಏಪ್ರಿಲ್ ಕೊನೆಯ ವಾರದಲ್ಲಿ ಸುಪ್ರೀಂಕೋರ್ಟ್  ಸು-ಮೋಟು ಕಾಗ್ನಿಜೆನ್ಸ್ ಅನ್ನು ತೆಗೆದುಕೊಂಡಿದೆ ಎಂಬುದನ್ನು ಓದುಗರು ಗಮನಿಸಬೇಕು. ಮೂರನೇ ಹಂತವನ್ನು ಲಿಬರಲೈಸ್ಡ್ ವ್ಯಾಕ್ಸಿನೇಷನ್ ಪಾಲಿಸಿ ಎಂದೂ ಕರೆಯುತ್ತಾರೆ, ಇದನ್ನು ಸುಪ್ರೀಂಕೋರ್ಟ್ ಅನೇಕ ಕಾರಣಗಳಿಂದ ಟೀಕಿಸಿತು. ಈ ವಿಮರ್ಶೆ ಇನ್ನೂ ನಡೆಯುತ್ತಿದೆ.

ಏಪ್ರಿಲ್ 30ರಂದು, ಸುಪ್ರೀಂಕೋರ್ಟ್ ಗಮನಿಸಿದಂತೆ, “ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಬದುಕುವ ಹಕ್ಕಿಗೆ (ಆರೋಗ್ಯದ ಹಕ್ಕನ್ನು ಒಳಗೊಂಡಂತೆ) ಅನುಗುಣವಾಗಿ ಕೇಂದ್ರ ಸರ್ಕಾರವು, ಎಲ್ಲಾ ಲಸಿಕೆಗಳನ್ನು ಸಂಗ್ರಹಿಸಬೇಕು ಮತ್ತು ಲಸಿಕೆ ತಯಾರಕರೊಂದಿಗೆ ದರ ನಿಗದಿ ಮಾಡಿಕೊಳ್ಳಬೇಕು. ಪ್ರತಿ ರಾಜ್ಯ ಸರ್ಕಾರಕ್ಕೆ ಅದರ ಪ್ರಮಾಣವನ್ನು ನಿಗದಿಪಡಿಸಿದ ನಂತರ, ವಿತರಣೆ ಮಾಡಬೇಕು. ಸರಳ ರೀತಿಯಲ್ಲಿ ಹೇಳುವುದಾದರೆ, ಸಂಗ್ರಹವು ಕೇಂದ್ರೀಕೃತವಾಗಿದ್ದರೂ, ರಾಜ್ಯಗಳ ಮೂಲಕ ಭಾರತದಾದ್ಯಂತ ಲಸಿಕೆಗಳ ವಿತರಣೆಯನ್ನು ವಿಕೇಂದ್ರೀಕರಿಸಬೇಕು. ‘ಪ್ರಸ್ತುತ ನೀತಿಯ ಸಾಂವಿಧಾನಿಕತೆಯ ಬಗ್ಗೆ ನಾವು ನಿರ್ಣಯವನ್ನು ರವಾನಿಸದಿದ್ದರೂ, ಪ್ರಸ್ತುತ ನೀತಿಯನ್ನು ರೂಪಿಸಿದ ವಿಧಾನವು ಸಾರ್ವಜನಿಕ ಆರೋಗ್ಯದ ಹಕ್ಕಿಗೆ ಧಕ್ಕೆ ತರುತ್ತದೆ. ಇದು ಸಂವಿಧಾನದ 21ನೇ  ಪರಿಚ್ಛೇದದ ಅವಿಭಾಜ್ಯ ಅಂಶವಾಗಿದೆ . ಆದ್ದರಿಂದ, ಸಂವಿಧಾನದ ಆರ್ಟಿಕಲ್‍ 14 ಮತ್ತು  21 ಎತ್ತಿ ಹಿಡಿಯುವಂತೆ ಸರ್ಕಾರವು ತನ್ನ ಪ್ರಸ್ತುತ ಲಸಿಕೆ ನೀತಿಯನ್ನು ಮರು ಪರಿಶೀಲಿಸಬೇಕು’” (ಏಪ್ರಿಲ್ 30ರ ಆದೇಶದ ಪುಟ 40) ಎಂದು ಅಂದೇ ಹೇಳಿದೆ.

ಆದ್ದರಿಂದ, ಸುಪ್ರೀಂಕೋರ್ಟಿನ ಹಸ್ತಕ್ಷೇಪಕ್ಕೆ ಮುಂಚಿತವಾಗಿ ಶೇ. 75 ಲಸಿಕೆಗಳನ್ನು ಸಂಗ್ರಹಿಸಲು ಮತ್ತು 18 ವರ್ಷಕ್ಕೆ  ಮೇಲ್ಪಟ್ಟವರಿಗೆ ಉಚಿತ ಲಸಿಕೆಗಳನ್ನು ನೀಡುವ ಯೋಜನೆಯನ್ನು ಪ್ರಧಾನಿ ಮೋದಿ ಅನುಮೋದಿಸಿದ್ದಾರೆ ಎಂಬುದು ಸುಳ್ಳು.

ಸುಪ್ರೀಂಕೋರ್ಟ್ ವಿಚಾರಣೆಯು ಮೇ 31 ರಂದು ನಡೆದಿದೆ ಮತ್ತು ಆದೇಶವನ್ನು ಜೂನ್ 2ರಂದು ಅಪ್‌ಲೋಡ್ ಮಾಡಲಾಗಿದೆ. ಲೈವ್ ಲಾ ವ್ಯವಸ್ಥಾಪಕ ಸಂಪಾದಕ ಮನು ಸೆಬಾಸ್ಟಿಯನ್ ಆಲ್ಟ್ ನ್ಯೂಸ್‌ಗೆ, “ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು ಮೇ 31 ರಂದು ಹೊರಡಿಸಿದ ಆದೇಶವು ಜೂನ್ 2ರಂದು ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ” (ಮೇ 31 ರ ಆದೇಶದ ಪಿಡಿಎಫ್ ವೀಕ್ಷಿಸಿ) ಎಂದಿ ವಿವರಿಸಿದರು.

ಮಾಧ್ಯಮಗಳು ಮತ್ತು ಪತ್ರಕರ್ತರು ಕೇಂದ್ರ ಸರ್ಕಾರದ ಉದಾರೀಕೃತ ವ್ಯಾಕ್ಸಿನೇಷನ್ ನೀತಿಯ ಬಗ್ಗೆ ಸುಪ್ರೀಂಕೋರ್ಟ್‍ನ ಮೇ 31ರ ಟೀಕೆಗಳನ್ನು ಕಡೆಗಣಿಸಿದ್ದಾರೆ. ವಾಸ್ತವವಾಗಿ, ಎಲ್ಲಾ ಲಸಿಕೆಗಳನ್ನು ಸಂಗ್ರಹಿಸುವ ಜವಾಬ್ದಾರಿ ಕೇಂದ್ರದ್ದಾಗಿರಬೇಕು ಎಂದು ಸುಪ್ರೀಂಕೋರ್ಟ್ ಏಪ್ರಿಲ್ 30ರಂದು ಸೂಚಿಸಿತ್ತು.

ಘಟನೆಗಳ ಟೈಮ್‍ಲೈನ್‍ ಮತ್ತು ನ್ಯಾಯ ವಿಮರ್ಶೆ

 ಅಭಿಯಾನದ ಮೊದಲ ಹಂತ

·   ಕೋವಿಡ್‍ ಲಸಿಕಾ ಅಭಿಯಾನ ಜನವರಿ 16ರಂದು ಪ್ರಾರಂಭವಾಯಿತು. ಲಸಿಕೆಗಳನ್ನು ಸಂಗ್ರಹಿಸುವ ವಿಧಾನವನ್ನು ಕೇಂದ್ರೀಕರಿಸಲಾಯಿತು.

·   ಕೇವಲ ಮೂರು ದಿನಗಳ ನಂತರ, ಭಾರತ ಸರ್ಕಾರ, “ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಭಾರತದ ಘೋಷಿತ ಬದ್ಧತೆಗೆ ಅನುಗುಣವಾಗಿ, ಭೂತಾನ್‍, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್ ಮತ್ತು ಸೀಶೆಲ್ಸ್ ದೇಶಗಳಿಗೆ 2021ರ ಜನವರಿ 20ರಿಂದ ಲಸಿಕೆ ಕಳಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ” ಎಂದು ಘೋಷಿಸಿತು.

·   ಲಸಿಕೆ ತಯಾರಿಕೆಯಲ್ಲಿ ಭಾರತವನ್ನು ವಿಶ್ವ ನಾಯಕನಾಗಿ ಬಿಂಬಿಸಲು ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಈ ಅವಕಾಶವನ್ನು ಬಳಸಿಕೊಂಡರು. ಗಮನಿಸಬೇಕಾದ ಸಂಗತಿ ಎಂದರೆ,  ಸರಬರಾಜಿನಲ್ಲಿ ಗಮನಾರ್ಹ ಪಾಲು ವಾಣಿಜ್ಯ ಸ್ವರೂಪದ್ದಾಗಿತ್ತು. ವಿದೇಶಾಂಗ ಸಚಿವಾಲಯದ ಪ್ರಕಾರ, ಮೇ 29ರ ವೇಳೆಗೆ 663.698 ಲಕ್ಷ  ಡೋಸ್‍ಗಳನ್ನು ಸರಬರಾಜು ಮಾಡಲಾಗಿದೆ.

ಅದರಲ್ಲಿ ಶೇ. 50ಕ್ಕಿಂತ  ಹೆಚ್ಚು ವಾಣಿಜ್ಯ ಸರಬರಾಜು. ಅಂದರೆ ಲಸಿಕೆಗಳನ್ನು ವಿದೇಶಗಳಿಗೆ ಮಾರಾಟ ಮಾಡಲಾಗಿದೆ.

·    ಫೆಬ್ರವರಿ 1 ರಂದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದ ಕೋವಿಡ್ ಲಸಿಕೆ ಅಭಿವೃದ್ಧಿ ಮತ್ತು ಚಾಲನೆಗಾಗಿ 35 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದರು.

ಲಸಿಕಾ ಅಭಿಯಾನದ 2ನೆ ಹಂತ

ಲಸಿಕೆಗಳನ್ನು ಸಂಗ್ರಹಿಸುವ ವಿಧಾನವು ಹಂತ -1 ರಂತೆಯೇ ಕೇಂದ್ರೀಕೃತವಾಗಿತ್ತು.

ಕೋ-ವಿನ್ 2.0 ಪೋರ್ಟಲ್‍ನಲ್ಲಿ ಮಾರ್ಚ್ 1 ರಂದು ನೋಂದಣಿಗೆ ಅವಕಾಶ ನೀಡಲಾಗಿತು.

ಆಗಿನ ಲಸಿಕಾ ನೀತಿಯು “2022ರ ಜನವರಿ 1ರ ಹೊತ್ತಿಗೆ 60 ವರ್ಷ ತುಂಬುವ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲ ನಾಗರಿಕರು ನೋಂದಾಯಿಸಲು ಅರ್ಹರು.  ಜನವರಿ 1, 2022 ಮಾನದಂಡದಲ್ಲಿ  45-59 ವಯಸ್ಸಿನವರು ಮತ್ತು ನಿರ್ದಿಷ್ಟಪಡಿಸಿದ ಕೋವಿಡ್‍ ಪೂರ್ವ ಲಕ್ಷಣಗಳನ್ನು ಹೊಂದಿದವರೂ ಅರ್ಹರು’ ಎಂದು ಹೇಳಿದೆ.

ಮೂರನೇ ಹಂತ

ಮೇ 1ರಿಂದ ಆರಂಭವಾಗಿದೆ. ಲಸಿಕೆಗಳನ್ನು ಖರೀದಿಸುವ ವಿಧಾನವನ್ನು ವಿಕೇಂದ್ರೀಕರಣ ಮಾಡಲಾಗಿತು.

·   ಏಪ್ರಿಲ್‌ನಿಂದ ಮೇ ಮಧ್ಯದವರೆಗೆ, ಭಾರತವು ಎರಡನೇ ಅಲೆಗೆ ತುತ್ತಾಯಿತು. ರಾಷ್ಟ್ರವು ಆರೋಗ್ಯ ಮೂಲಸೌಕರ್ಯಗಳ ಕುಸಿತ ಮತ್ತು ಅಪಾಯಕಾರಿ ಸಂಖ್ಯೆಯ ಸಾವುಗಳನ್ನು ಕಂಡಿತು. ಏಪ್ರಿಲ್‌ನಿಂದ ಸುಮಾರು ಎರಡು ಲಕ್ಷ ಸಾವುಗಳು ಸಂಭವಿಸಿವೆ.

·   ಎರಡನೇ ಅಲೆ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು, ಲಸಿಕಾ ಅಭಿಯಾನಕ್ಕಾಗಿ “ಉದಾರೀಕೃತ ಮತ್ತು ವೇಗವರ್ಧಿತ  3ನೆ ಹಂತದ ಕಾರ್ಯತಂತ್ರ” ವನ್ನು ಘೋಷಿಸಿತು. ಲಸಿಕೆ ಖರೀದಿಯ ಕುರಿತಾದ ಒಂದು ಅಂಶವು ಹೀಗೆ ಹೇಳಿದೆ, “ತಯಾರಕರು ಪಾರದರ್ಶಕವಾಗಿ ಶೇ. 50 ಪೂರೈಕೆಯ ದರವನ್ನು ರಾಜ್ಯ ಸರ್ಕಾರಗಳಿಗೆ ಮೇ 1 ರಮೊದಲು ತಿಳಿಸಬೇಕು. ಈ ಬೆಲೆಯ ಆಧಾರದ ಮೇಲೆ, ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಸಂಸ್ಥೆಗಳು ಉತ್ಪಾದಕರಿಂದ ಲಸಿಕೆ ಪ್ರಮಾಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ…..”

ಲೈವ್‍ ಲಾದ ಮನು ಸೆಬಾಸ್ಟಿಯನ್ ಆಲ್ಟ್ ನ್ಯೂಸ್‌ಗೆ, “ಏಪ್ರಿಲ್‌ನಲ್ಲಿ ಕನಿಷ್ಠ ಆರು ಹೈಕೋರ್ಟ್‍ಗಳು ಸಾಂಕ್ರಾಮಿಕ ನಿರ್ವಹಣೆಗೆ ಸಂಬಂಧಿಸಿದ ಪ್ರಕರಣಗಳನ್ನು ಪರಿಗಣಿಸಿವೆ. ಸಾಂಕ್ರಾಮಿಕ ಸಮಯದಲ್ಲಿ ಅಗತ್ಯ ಸೇವೆಗಳು ಮತ್ತು ಸರಬರಾಜುಗಳ ಮರು ವಿತರಣೆಯಲ್ಲಿ ಸು-ಮೋಟೋ ಕಾಗ್ನಿಜೆನ್ಸ್ ತೆಗೆದುಕೊಳ್ಳುವುದಾಗಿ ಏಪ್ರಿಲ್ 22ರಂದು ಸುಪ್ರೀಂಕೋರ್ಟ್ ಘೋಷಿಸಿತು. ಆಮ್ಲಜನಕದ ಪೂರೈಕೆ, ಅಗತ್ಯ ಔಷಧಿಗಳ ಪೂರೈಕೆ, ವ್ಯಾಕ್ಸಿನೇಷನ್ ವಿಧಾನ ಮತ್ತು ಲಾಕ್‌ಡೌನ್ ಘೋಷಿಸುವ ನಿರ್ಧಾರಗಳ ಬಗ್ಗೆ ಕೋರ್ಟ್ ವಿಶೇಷ ಗಮನ ನೀಡಲು ಆರಂಭಿಸಿತು. ಏಪ್ರಿಲ್ 30ರಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು ಉದಾರೀಕೃತ ವ್ಯಾಕ್ಸಿನೇಷನ್ ನೀತಿಯಲ್ಲಿ ಹಲವಾರು ನ್ಯೂನತೆಗಳನ್ನು ಎತ್ತಿ ತೋರಿಸಿತು. ಏಪ್ರಿಲ್ 30ರಂದು ಅಂಗೀಕರಿಸಿದ ಆದೇಶದಲ್ಲಿ, ಕೇಂದ್ರದ ವ್ಯಾಕ್ಸಿನೇಷನ್ ನೀತಿಯು ಜೀವನದ ಹಕ್ಕಿಗೆ ಮತ್ತು ಆರೋಗ್ಯದ ಹಕ್ಕಿಗೆ ಹಾನಿಕಾರಕವಾಗಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್‍ ಅದರ ಬಗ್ಗೆ ಮರುಚಿಂತನೆ ಮಾಡುವಂತೆ ಕೇಂದ್ರವನ್ನು ಕೇಳಿತು’ ಎಂದು ವಿವರಿಸಿದರು.

ಸೆಬಾಸ್ಟಿಯನ್ ಅವರು, “ಮುಂದಿನ ವಿಚಾರಣೆ ಮೇ 31 ರಂದು ನಡೆಯಿತು. ಈ ವಿಚಾರಣೆಯಲ್ಲಿ, ಏಪ್ರಿಲ್ 30 ರ ಆದೇಶಕ್ಕೆ ಕೇಂದ್ರದ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ ಎಂದು ಸುಪ್ರೀಂಕೋರ್ಟ್ ಗಮನಿಸಿದೆ. ಮೇ 31ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಪೀಠವು ಉಭಯ ಬೆಲೆ ನೀತಿ, ರಾಜ್ಯಗಳಿಗೆ ವಿಭಿನ್ನ ಖರೀದಿ ಪ್ರಕ್ರಿಯೆ, ಕೋವಿನ್ ಅಪ್ಲಿಕೇಶನ್‌ನ ಡಿಜಿಟಲ್ ವಿಭಜನೆ ಇತ್ಯಾದಿ ಹಲವಾರು ಸಮಸ್ಯೆಗಳನ್ನು ಎತ್ತಿ ತೋರಿಸಿದೆ. ರಾಜ್ಯಗಳು ಏಕೆ ಹೆಚ್ಚಿನ ಬೆಲೆ ನೀಡಬೇಕು ಎಂದು ನ್ಯಾಯಾಲಯವು ಕೇಳಿದೆ. ಬೆಲೆ ರಾಷ್ಟ್ರದಾದ್ಯಂತ ಏಕರೂಪವಾಗಿರಬೇಕು. ನೀತಿಯನ್ನು ಮರುಪರಿಶೀಲಿಸಬೇಕು ಎಂದು ನ್ಯಾಯಾಲಯವು ಸಾಲಿಸಿಟರ್ ಜನರಲ್‌ಗೆ ತಿಳಿಸಿತು.

ಅಂತಿಮದಲ್ಲಿ….

ಸುಪ್ರೀಂಕೋರ್ಟ್ ಸತತವಾಗಿ ಕೇಂದ್ರ ಸರ್ಕಾರದ ಲಸಿಕಾ ನೀತಿಯ ವಿರುದ್ಧ ತೀವ್ರ ಆಕ್ಷೇಪಗಳನ್ನು ಎತ್ತುತ್ತ ಬಂದ ಪರಿಣಾಮವಾಗಿಯೇ ಮೋದಿ ಸರ್ಕಾರ ಲಸಿಕಾ ನೀತಿಯನ್ನು ಬದಲಿಸಿತು. ಸುಪ್ರೀಂಕೋರ್ಟಿನ ಅವಲೋಕನಕ್ಕೂ ಮೊದಲೇ ಸರ್ಕಾರ ಲಸಿಕಾ ನೀತಿ ಬದಲಿಸಿತ್ತು ಎಂಬುದು ಸುಳ್ಳು ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ; ಲಸಿಕೆಗಾಗಿ ಆನ್‌ಲೈನ್ ನೋಂದಣಿ: ಇಂಟರ್‌ನೆಟ್ ಇಲ್ಲದವರಿಗೂ ಬದುಕುವ ಹಕ್ಕಿದೆ ಎಂದ ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ನಿಧನ

0
ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ ನಿಧನರಾಗಿದ್ದಾರೆ. 81 ವರ್ಷ ಪ್ರಾಯದ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯಾಘಾತದಿಂದ ಇಂದು ನಿಧರಾಗಿದ್ದಾರೆ. ಹುಣಸೂರಿನಲ್ಲಿ ಆಗಸ್ಟ್ 19,1942ರಂದು ದ್ವಾರಕೀಶ್ ಜನಿಸಿದ್ದಾರೆ....