ಭಾರತ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ, ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ಬಂದಾಗಲೆಲ್ಲ, ಭಾರತ ತನ್ನ ಅಂತಃಸತ್ವದ ಭವ್ಯತೆಯನ್ನು ಬೆಳಗುತ್ತದೆ ಎಂದು ಕಾಣುತ್ತದೆ. ಆ ಬೆಳಗುವಿಕೆ ಇಂದು ನಿಚ್ಚಳವಾಗಿ ಕಾಣುತ್ತಿದೆ. ಹೃದಯ, ಮಿದುಳು, ಹೊಟ್ಟೆ ತುಂಬ ಗಣಿ ಲೂಟಿ ದುಡ್ಡನ್ನೆ ತುಂಬಿಕೊಂಡ ಮದದ ಸೋಮಶೇಖರ ರೆಡ್ಡಿ ಎಂಬ ಬಿಜೆಪಿ ಶಾಸಕ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸುವವರಿಗೆ ‘ನೀವು 20% ಇದ್ದೀರಿ, ನಾವು 80% ಇದ್ದೇವೆ. ಜೋಕೆ’ ಎಂದು ಹೇಳಿದ್ದಕ್ಕೆ ಭವ್ಯ ಎಂಬ ತರುಣಿ ಹೇಳುವುದು ಹೀಗೆ- “ರೆಡ್ಡಿ, ನೆನಪಿರಲಿ, ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸುವ ನಾವು ಭಾರತೀಯರು 99% ಇದ್ದೇವೆ. ನೀವು ಕೋಮುವಾದಿಗಳು 1% ಇದ್ದಿರಿ”- ಈ ಮಾತಲ್ಲಿ ಭಾರತದ ಭವ್ಯತೆ ಪ್ರಕಾಶಗೊಳ್ಳುತ್ತದೆ. ಇಂದು ಸಂಘರ್ಷ ನಡೆಯುತ್ತಿರುವುದು 99% We the people of India V/s 1% ಕೋಮುವಾದಿ ಗ್ಯಾಂಗ್ ನಡುವೆ ಎಂದು ಹಿರಿಯ ಸಾಹಿತಿ ಮತ್ತು ಹೋರಾಟಗಾರರಾದ ದೇವನೂರು ಮಹಾದೇವರವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ “ಕೇಂದ್ರದ ಜನವಿರೋಧಿ ಪೌರತ್ವ ಕಾಯ್ದೆ” ಕುರಿತು ವಿಚಾರ ಸಂಕಿರಣದಲ್ಲಿ ಮುನ್ನೋಟದ ನುಡಿ ಮಾತನಾಡಿದ ಅವರು, ಹೀಗೆ ಭವ್ಯ ಥರಾನೇ ಉನ್ನತ ಅಧಿಕಾರಿಗಳಾಗಿದ್ದ ಸಸಿಕಾಂತ್ ಸೆಂಥಿಲ್ ಹಾಗೂ ಕಣ್ಣನ್ ಗೋಪಿನಾಥ್ ನಡೆನುಡಿ ನೋಡಿದಾಗಲೂ ಭಾರತಕ್ಕೆ ಭವಿಷ್ಯವಿದೆ ಅನ್ನಿಸುತ್ತದೆ. ಎಲ್ಲಕ್ಕಿಂತ ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಿಂದು ಹಾಕುತ್ತಿದ್ದ ಇಲಿ ಹೆಗ್ಗಣಗಳ ವಿರುದ್ಧವಾಗಿ ವಿದ್ಯಾರ್ಥಿ ಯುವಜನರ ಸ್ಫೋಟ ಕಂಡಾಗ ಈ ವಿದ್ಯಾರ್ಥಿ ಯುವಜನರ ನಾಯಕತ್ವಕ್ಕೆ ಭಾರತವನ್ನು ಕಾಪಾಡುವ ಶಕ್ತಿ ಇದೆ ಎಂದು ಅನ್ನಿಸುತ್ತದೆ ಎಂದರು. ಅವರ ಭಾಷಣದ ಪೂರ್ಣಪಾಠ ಕೆಳಗಿನಂತಿದೆ.
ಇಂದು ದೇಶದ ತುಂಬಾ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಬಗ್ಗೆ ಭೀತಿ ತುಂಬಿದೆ. ಎಷ್ಟೆಂದರೆ ಇತ್ತೀಚೆಗೆ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ಮಾಹಿತಿಗಳನ್ನು ಸಂಗ್ರಹಿಸಲು ಬಂದಾಗ ಅಲ್ಲಿನ ಜನರು ಆ ಗಣತಿಯು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಬಲೆ ಇರಬೇಕೆಂದು ಭಾವಿಸಿ ಆ ಗಣತಿ ಫಾರಂಗಳನ್ನು ಹರಿದೆಸೆದು ಹಿಂದಕ್ಕೆ ಕಳಿಸಿದ್ದಾರೆ. ಅಷ್ಟೊಂದು ಭೀತಿ ಹರಡಿದೆ. ಈಗ, ನನ್ನ ಹುಟ್ಟಿದ ದಿನಾಂಕ ಕೇಳಿದರೆ ನನ್ನ ಅವ್ವ ಹೇಳಿದಂತೆ-ಅದು ಸೋಮವಾರ ಸಂಜೆ ರೈಲು ಕವಲಂದೆ ಸ್ಟೇಷನ್‌ನಲ್ಲಿ ನಿಂತು ಹೊರಡುವ ಸಮಯವಂತೆ. ಹೀಗಿರುವಾಗ ದಿನಾಂಕ ಹೇಗೆ ಹೇಳಲಿ? ನನ್ನ ಮೊಮ್ಮಗಳಿಗೆ ನನಗೆ ಬರ್ತ್ ಡೇ ಇಲ್ಲ ಎಂದು ತಿಳಿದು ಅವಳು ಬೇಜಾರು ಮಾಡಿಕೊಂಡು ‘ನನ್ನ ಹುಟ್ಟಿದ ದಿನವೇ ನಿನ್ನ ಹುಟ್ಟಿದ ದಿನ’ ಎಂದು ನನಗೆ ಸಮಾಧಾನ ಮಾಡಿದ್ದಾಳೆ! ನನಗೇ ಹೀಗಿರುವಾಗ, ಇನ್ನು ನಮ್ಮ ಅಪ್ಪನ ಹುಟ್ಟಿದ ದಿನಾಂಕ ಕೇಳಿದರೆ ಏನು ಹೇಳಲಿ? ಇರುವುದನ್ನು ಹೇಳಿದರೆ ನಾನು ಅನುಮಾನಾಸ್ಪದ (ಡೌಟ್‌ಫುಲ್) ವ್ಯಕ್ತಿಯಾಗುತ್ತೇನೆ, ಏನು ಹೇಳಲಿ? ಮೋದಿಯವರ ಅಪ್ಪ ಹುಟ್ಟುವ ಐದು ವರ್ಷಕ್ಕೆ ಮೊದಲು ಎನ್ನಲೆ? ಅಥವಾ ಅಮಿತ್‌ಷಾರ ಅಪ್ಪ ಹುಟ್ಟುವ 20 ವರ್ಷಕ್ಕೆ ಮೊದಲು ಎನ್ನಲೆ? ಬಹುಶಃ ನನ್ನ ಮೂಲ ಇರುವುದು ಹರಪ್ಪ-ಮಹಂಜೋದಾರೋದಲ್ಲಿ. ಅದು ಇಂದು ಪಾಕಿಸ್ತಾನದಲ್ಲಿದೆ ಏನು ಮಾಡಲಿ? ಈಗ ಮೊದಲು ಎನ್‌ಪಿಆರ್ ಬಲೆ ಹಾಕುತ್ತಾರೆ, ಇದರ ಆಧಾರದ ಮೇಲೆ ಎನ್‌ಆರ್‌ಸಿ ಆವರಿಸಿ ಅನುಮಾನಾಸ್ಪದ(ಡಿ) ಮಾಡುತ್ತಾರೆ, ಆಮೇಲೆ ಈ ಅನುಮಾನಾಸ್ಪದ `ಡಿ’ ಗೆ ಸಿಎಎ (ಕಾ) ಯಮಪಾಶ ಹಾಕುತ್ತಾರೆ. ಇದನ್ನೇ ಐತಿಹಾಸಿಕ ಎನ್ನುತ್ತಿದ್ದಾರೆ.
ಇಂತಹವುಗಳೆನ್ನೆಲ್ಲಾ ಮಾಡಲು ಹೊರಟವರು ಹೇಗೆ ಮಣ್ಣು ಮುಕ್ಕಿದರು ಎಂದು ನಾವು ಅಕ್ಕಪಕ್ಕ ನೋಡಿಯಾದರೂ ಕಲಿಯಬೇಕಾಗಿದೆ. ಪತ್ರಕರ್ತ ಕೆ.ಎಸ್. ದಕ್ಷಿಣಾಮೂರ್ತಿಯವರು ತಮ್ಮ ಲೇಖನವೊಂದರಲ್ಲಿ ಹೇಗೆ ಕೆಲವು ದೇಶಗಳು ತಂತಮ್ಮ ದೇಶದ ರಾಜಧರ್ಮ ಹಾಗೂ ಸಂವಿಧಾನದಲ್ಲಿ ಹಸ್ತಕ್ಷೇಪ ಮಾಡಲು ಹೋಗಿ ಏನೆಲ್ಲಾ ದುರಂತಕ್ಕೆ ತುತ್ತಾದವು ಎಂಬುದನ್ನು ವಿವರಿಸುತ್ತಾರೆ. 1956ರಲ್ಲಿ ಶ್ರೀಲಂಕಾ ‘ಸಿಂಹಳದವರಿಗೆ ಮಾತ್ರ’ ಎಂದು ಮಾಡಲು ಹೋಗಿ ಎಲ್‌ಟಿಟಿಇ ಹುಟ್ಟಿಗೆ ಕಾರಣವಾಯ್ತು. ಧ್ವಂಸ, ಹಿಂಸೆ, ಸಾವು, ನೋವು ರಾಜೀವ್‌ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ರುವಾಂಡಾದಲ್ಲಿ ಅಲ್ಪ ಸಂಖ್ಯಾತ ಟುಟ್ಸಿ ಮತ್ತು ಬಹುಸಂಖ್ಯಾತ ಹುಟುಗಳ ಮಧ್ಯೆ ಸರ್ಕಾರವೇ ಬತ್ತಿ ಇಟ್ಟಿತು. ಐ.ಡಿ ಕಾರ್ಡ್ ಕಡ್ಡಾಯ ಮಾಡುತ್ತದೆ. ಕೇವಲ ನೂರು ದಿನಗಳಲ್ಲಿ 8 ಲಕ್ಷಜನ ಹತರಾಗುತ್ತಾರೆ. ಸಾಯುವಾಗ ಒಂದೇ ಗುಂಪಿನವರು ಸಾಯುವುದಿಲ್ಲ, ಅಮಾಯಕರು ಹೆಚ್ಚು ಸಾಯುತ್ತಾರೆ. ಇದನ್ನೀಗ ಭಾರತ ಸರ್ಕಾರ ಮಾಡಲು ಹೊರಟಿದೆ. ಪಾಕಿಸ್ಥಾನದಲ್ಲಿ ಕೂಡ ಉರ್ದು ಭಾಷೆ ಮತ್ತು ಲಿಪಿಯನ್ನು ಬೆಂಗಾಲಿ ಮುಸ್ಲಿಮರ ಮೇಲೆ ಹೇರಲು ಹೋಗಿ ಇಡೀ ರಾಷ್ಟ್ರವೇ ಹೋಳಾಯ್ತು. ಯುಗೊಸ್ಲಾವಿಯದಲ್ಲಿ ಎಂದೋ ಮುಚ್ಚಿಹೋಗಿದ್ದ ಜನಾಂಗೀಯ/ ಧಾರ್ಮಿಕ ಬಿರುಕನ್ನು ಮತ್ತೆ ಕೆದಕಲು ಹೋಗಿ ಕ್ರಿಶ್ಚಿಯನ್‌ರ ವಿರುದ್ಧ ಮುಸ್ಲಿಮರು, ಸರ್ಬರ ವಿರುದ್ಧ ಬೊಸ್ನಿಯನ್ನರು, ಕ್ರೊವೇಷಿಯನ್ನರ ವಿರುದ್ಧ ಸರ್ಬರು ಪರಸ್ಪರ ಶತ್ರುಗಳಾಗಿ ಈಗಲೂ ಅಲ್ಲಿ ಹಿಂಸೆ ತಾಂಡವವಾಡುತ್ತಿದೆ.
ಈ ರೀತಿಯಾಗುವುದು ಭಾರತಕ್ಕೆ ಬೇಕಾಗಿದೆಯೆ? ಸರ್ಕಾರಕ್ಕೇ ತನ್ನ ವಿಫಲತೆ ಮುಚ್ಚಿಕೊಳ್ಳಲು ಬೇಕಾಗಿರಬಹುದು. ಜನರು ಪೌರತ್ವ ರುಜುವಾತು ಪಡಿಸಲು ಅಲೆಯುತ್ತಿರಲಿ, ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತಕ್ಕೆ ತಲೆ ಕೆಡಿಸಿಕೊಳ್ಳದಿರಲಿ ಎಂದು ಸರ್ಕಾರವೇ ಪೌರತ್ವದ ಬೆಂಕಿ ಹಚ್ಚಿದೆ ಎಂದು ಕಾಣುತ್ತದೆ. ನನ್ನ ಪೌರತ್ವದ ಬಗ್ಗೆ ಅನುಮಾನವಿರಬಹುದು. ಆದರೆ, ಸರ್ಕಾರವೇ ಪೌರತ್ವದ ಬೆಂಕಿ ಹಚ್ಚಿರುವುದರಲ್ಲಿ ಅನುಮಾನವೇ ಇಲ್ಲ. ಇದೆಲ್ಲಾ ಜನಸಮುದಾಯಕ್ಕೆ ಬೇಕಾಗಿದೆಯೆ? ಇದನ್ನೆಲ್ಲಾ ಪ್ರಶ್ನಿಸಬೇಕಾದ ಸಂಸತ್‌ನಲ್ಲಿ ಅಪರಾಧಿಗಳು, ಕೋಟ್ಯಾಧಿಪತಿಗಳು ಹೆಚ್ಚಾಗಿದ್ದು ಸಂಸತ್‌ನಿಂದ ಏನನ್ನೂ ನಿರೀಕ್ಷಿಸಲಾಗದು ಎನ್ನುವಂತಾಗಿದೆ. ಹಾಗೂ ರಾಜಕೀಯ ಪಕ್ಷಗಳ ಸ್ಥಿತಿಗತಿಯೂ ದಯನೀಯವಾಗಿದೆ. ಕಮ್ಯುನಿಸ್ಟರು ಸ್ಥಗಿತವಾಗಿದ್ದಾರೆ, ಆಮ್‌ಆದ್ಮಿ, ಸ್ವರಾಜ್‌ಇಂಡಿಯಾದಂತಹ ಪ್ರಯೋಗಶೀಲ ಪಕ್ಷಗಳು ವ್ಯಾಪಕವಾಗುತ್ತಿಲ್ಲ. ಮೋದಿಶಾ ಆಡಳಿತವು ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳನ್ನು ತೆವಳುವಂತೆ ಮಾಡಿಬಿಟ್ಟಿದೆ. ವಿಪರ್ಯಾಸವೆಂದರೆ ಈ ಮೋದಿಶಾ ಆಡಳಿತವು ಸ್ವತಃ ತನ್ನ ಪಕ್ಷ ಬಿಜೆಪಿಯನ್ನೇ ಧ್ವಂಸ ಮಾಡಿಬಿಟ್ಟಿದೆ. ಅತಿದೊಡ್ಡ ಪಕ್ಷ ಎನಿಸಿಕೊಂಡಿರುವ ಬಿಜೆಪಿಗೆ ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಯಾವ ಚಹರೆಯೂ ಇಂದು ಉಳಿದಿಲ್ಲ. ಜೀವ ಇಲ್ಲದ ಸತ್ತದೇಹದಂತೆ ಇದೆ. ಬಿಜೆಪಿ ಪಕ್ಷದ ಹೆಸರಿನಲ್ಲಿ ಮೋದಿ-ಶಾ ಗ್ಯಾಂಗ್ ಆಡಳಿತ ನಡೆಸುತ್ತಿದೆ.
ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ಸಂವಿಧಾನದ ಸಭೆಯಲ್ಲಿ, ಜಾತಿ ಮತ ಭೇದದ ಕಾರಣವಾಗಿ ಭಾರತವು ಹೇಗೆ ಗುಲಾಮಗಿರಿಗೆ ತುತ್ತಾಯಿತು ಎಂಬ ಸಂಗತಿಗಳನ್ನು ವಿವರಿಸಿ ಹೇಳುತ್ತ ನೀಡುವ ಎಚ್ಚರಿಕೆಯನ್ನು ನಾವಿಂದು ಕೇಳಿಸಿಕೊಳ್ಳಬೇಕಾಗಿದೆ- “ಚರಿತ್ರೆ ಮತ್ತೆ ಮರುಕಳಿಸುತ್ತದೆಯೇ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತದೆೆ. ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ, ಧರ್ಮಗಳ ಜೊತೆಗೆ ವಿಭಿನ್ನ ಮತ್ತು ವಿರೋಧೀ ರಾಜಕೀಯ ಸಿದ್ಧಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೆ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ದೇಶವನ್ನು ತಮ್ಮ ಮತಧರ್ಮಗಳಿಗಿಂತ ಮುಖ್ಯವೆಂದು ಭಾವಿಸುತ್ತಾರೆಯೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಮತಧರ್ಮಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ. ಆದರೆ ಇಷ್ಟಂತೂ ಖಚಿತ. ರಾಜಕೀಯ ಪಕ್ಷಗಳು ಜಾತಿಧರ್ಮವನ್ನೇ ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಂಡು ಬಿಡುತ್ತೇವೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು.”
ಈ ಕಾಲ ಈಗ ಬಂದಿದೆ. ಭಾರತದ ಪೌರತ್ವ ನಿರ್ಧಾರಕ್ಕೆ ಮತಧರ್ಮಗಳನ್ನೂ ಪರಿಗಣಿಸಿ ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಂತಾನೇ ಸಂವಿಧಾನದ ಆಸೆಗಳು ಕುಸಿಯುವಂತೆ ಮಾಡಲಾಗುತ್ತಿದೆ. ಹೌದು, ಇಂದು ಭಾರತ ಎರಡನೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಯಾಚಿಸುತ್ತಿದೆ.
ಕೊನೆಯದಾಗಿ, ಇಷ್ಟಿದ್ದೂ ಹೀಗಿದ್ದೂ ಆದರೂ ಮೋದಿಯವರಿಗೆ ಒಂದು ಪ್ರಾರ್ಥನೆ ಮಾಡುವೆ. ನಿಮ್ಮ ಕಣ್ಗಳ ಕೆಳಗೆ ನಡೆದ ಜೆಎನ್‌ಯು ಘಟನೆಯನ್ನು ನೋಡಿ ತತ್ತರಿಸಿ ಹೋದೆ. ಗುಂಪು ಥಳಿತ ನೋಡಿದಾಗಲು ಈ ದೇಶದಲ್ಲಿ ರಾಜನಿಲ್ಲ (ರೂಲರ್‌ಇಲ್ಲ), ಅರಾಜಕತೆ ಇದೆ ಅನ್ನಿಸುತ್ತದೆ. ಪೊಲೀಸ್ ವ್ಯವಸ್ಥೆ ಕಳಂಕಿತವಾಗಿ ಬಿಟ್ಟಿತು. ಇನ್ನು ಮಿಲ್ಟ್ರಿ ಕತೆ ಏನೋ ಗೊತ್ತಿಲ್ಲ. ಇದು ಪ್ರಧಾನಿಯ ಬುಡವನ್ನೆ ಬುಡಮೇಲು ಮಾಡುತ್ತದೆ. ಮಾಂತ್ರಿಕರು ಭೂತ ಪಿಶಾಚಿಗಳನ್ನು ವಶಪಡಿಸಿಕೊಂಡು ಒಂದು ಬಾಟಲ್‌ನಲ್ಲಿ ಕೂಡಿ ಭದ್ರವಾಗಿ ಮುಚ್ಚಳ ಹಾಕಿ ಇಟ್ಟುಕೊಂಡಿರುತ್ತಾರಂತೆ. ಅವರೇನಾರು ರಾಗದ್ವೇಷಕ್ಕೆ ಒಳಗಾಗಿ ಮುಚ್ಚಳ ತೆಗೆದು ಪಿಶಾಚಿಗಳನ್ನು ತನ್ನ ಹಗೆ ಮೇಲೆ ಛೂ ಬಿಟ್ಟರೆ ಅವು ಎಲ್ಲವನ್ನೂ ತಿಂದು ಹಾಕಿ ಕೊನೆಗೆ ವಶಪಡಿಸಿಕೊಂಡಿರುವ ಮಾಂತ್ರಿಕನ ಬಳಿಗೆ ಬಂದು ಮಾಂತ್ರಿಕನನ್ನೇ ತಿಂದು ಹಾಕುತ್ತವಂತೆ. ಒಬ್ಬ ರೂಲರ್ Negative ಆದಾಗ ಇದು ಆಗುತ್ತಾ ಬಂದಿದೆ. ಇಂಥವರಿಗೆ ಅವರ ಪಕ್ಕದಲ್ಲಿ ಇರುವವರೇ ಮೃತ್ಯು ಆಗುತ್ತಾರೆ. ತಾವು ಗುಹೆಯಲ್ಲಿ ಧ್ಯಾನ ಮಾಡುತ್ತಿರುವುದನ್ನು ಟಿವಿಯಲ್ಲಿ ನೋಡಿದ್ದರಿಂದ ಇದನ್ನು ಹೇಳಬೇಕಾಯ್ತು, ಕ್ಷಮೆ ಇರಲಿ. ತಮ್ಮ ಧ್ಯಾನವು ರಾಗದ್ವೇಷ ಇಲ್ಲದ ಮನಸ್ಸನ್ನು ಪಡೆಯುವಂತಾಗುವುದಕ್ಕೆ ಕಾರಣವಾಗಿ ಅದರಿಂದ ಆರ್ಥಿಕ ಚೇತರಿಕೆ, ಬೆಲೆ ಏರಿಕೆಯ ನಿಯಂತ್ರಣ, ಉದ್ಯೋಗ ಹೆಚ್ಚಳಕ್ಕೆ ಕಾರಣವಾದರೆ ದೇಶಕ್ಕೆ ಒಳ್ಳೆಯದು, ತಮಗೂ ಕೂಡ. ನಮಸ್ಕಾರ.
ಎನ್‌ಆರ್‌ಸಿ ಬಂದರೆ ನಮ್ಮ ಕತೆಯೇನು? ಅದರ ಹಿಂದಿನ ಹುನ್ನಾರವೇನು?
ಈ ಎನ್‌ಆರ್‌ಸಿಯಿಂದ ಉದ್ಭವಿಸಬಹುದಾದ ಒಂದು ಯಾತಾನಾಮಯವಾದ ದೃಶ್ಯವನ್ನು ನೆನಪಿಸಿಕೊಳ್ಳುವುದಕ್ಕೂ ನನಗೆ ಕಷ್ಟವಾಗುತ್ತಿದೆ. ಅದು ಮೂಲನಿವಾಸಿಗಳ ಪಾಡು. ಭಾರತದಲ್ಲಿ ಶೇಖಡ 8 ರಷ್ಟು ಜನರು ಮಾತ್ರ ಮೂಲನಿವಾಸಿಗಳು, ಉಳಿದವರೆಲ್ಲಾ ವಲಸೆಗಾರರು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೂಲನಿವಾಸಿಗಳು ಈಗಲೂ ಬಹುತೇಕ ಅರಣ್ಯವಾಸಿಗಳು. ಇವರು ಅಲ್ಲೇ ಹುಟ್ಟಿ ಅಲ್ಲೇ ಮಣ್ಣಾಗುತ್ತ ಬಂದವರು. ಎನ್‌ಆರ್‌ಸಿ ಬಂದರೆ ಏನಾಗುತ್ತದೆ? ಭಾರತಕ್ಕೆ ವಲಸೆ ಬಂದವರೇ ಅಧಿಕಾರ ಹಿಡಿದು ಈಗ ಮೂಲನಿವಾಸಿಗಳಿಗೆ ‘ನೀವು ಇಲ್ಲಿಯವರು ಎನ್ನುವುದಕ್ಕೆ ದಾಖಲೆ ತೋರಿಸಿ’ ಎಂದು ಕೇಳಿದರೆ, ಇದಕ್ಕೆ ಮೂಲನಿವಾಸಿಗಳು ಏನು ತಾನೇ ಹೇಳಿಯಾರು? “ನೀವು ಬರುವುದಕ್ಕೂ ಮೊದಲಿನಿಂದಲೂ ಇಲ್ಲೇ ಹುಟ್ಟೀ ಇಲ್ಲೇ ಸಾಯುತ್ತಿದ್ದೀವಪ್ಪ. ಬೇಕಾದರೆ ಮರ ಕೇಳು, ಬೆಟ್ಟ ಕೇಳು, ನದಿ ಕೇಳು, ಕಾಡಲ್ಲಿರುವ ಪ್ರಾಣಿಗಳನ್ನ ಕೇಳು… ಅವಕ್ಕೆಲ್ಲಾ ನಾವು ಗೊತ್ತಿದೆ. ಇದನ್ನು ಬಿಟ್ಟರೆ ನಮ್ಮ ಬಳಿ ಏನೂ ಇಲ್ಲ” ಎಂದು ಅರಣ್ಯರೋಧನ ಮಾಡಬೇಕಾಗುತ್ತದೆ. ಇವರ ಜೊತೆಗೆ ನೆಲೆ ಇಲ್ಲದೆ ಅಲೆಯುತ್ತಿರುವ ಅಲೆಮಾರಿಗಳು, ಅತಂತ್ರರಾದ ಹಿಂದುಳಿದ ಸಮೂಹಗಳು, ದಲಿತರು, ಅಲ್ಪಸಂಖ್ಯಾತರು, ಗ್ರಾಮೀಣ ಜನತೆ ಕಣ್ಣುಬಾಯಿ ಬಿಡಬೇಕಾಗುತ್ತದೆ.
ಇದರಲ್ಲೊಂದು ಸಂಚಿನ ವಾಸನೆಯೂ ಇದ್ದಂತಿದೆ. ಮೂಲನಿವಾಸಿಗಳನ್ನು ಎನ್‌ಆರ್‌ಸಿ ನೆಪದಲ್ಲಿ ಅರಣ್ಯದಿಂದ ಸಂಪೂರ್ಣವಾಗಿ ಎತ್ತಂಗಡಿ ಮಾಡುವ ಸಂಚೂ ಇಲ್ಲಿ ಇರಬಹುದು. ಆಗ- ಅರಣ್ಯನಾಶ, ಗಣಿಗಾರಿಕೆ ಮಾಡಿ ಭೂಮಿ ಧ್ವಂಸ ಮಾಡಲು ಕಾರ್ಪೋರೇಟ್ ಕಂಪನಿಗಳಿಗೆ ಹಬ್ಬವಾಗುತ್ತದೆ. ನಮ್ಮ ಪೂರ್ವಿಕರು ಕಟ್ಟಿ ಬೆಳೆಸಿ ಉಳಿಸಿಕೊಂಡು ಬಂದಿದ್ದ ಸಂಸ್ಥೆ ಆಸ್ತಿಪಾಸ್ತಿಗಳನ್ನು ಖಾಸಗಿಗೆ ಮಾರಿಕೊಂಡು ಜೀವನ ದೂಡುತ್ತಿರುವ ಸರ್ಕಾರಕ್ಕೆ ಅರಣ್ಯ, ನದಿ, ಬೆಟ್ಟ ಮಾರುವುದು ಸಹಜವೇ ಇರಬಹುದು. ಆದರೆ, ಇದರಿಂದ ದೇಶವನ್ನೆ ಖಾಸಗಿ ಕಂಪನಿಗಳಿಗೆ ಮಾರಿದಂತಾಗಿ ಬಿಡುತ್ತದೆ. ಆಗ, ಕಂಪನಿ ಸರ್ಕಾರದ ವಿರುದ್ಧ ಹೋರಾಡಿ ದೇಶ ಸ್ವಾತಂತ್ರ್ಯ ಪಡೆಯಿತು. ಈಗ, ಆ ಪಡೆದ ಸ್ವಾತಂತ್ರ್ಯವನ್ನು ಕಂಪನಿಗಳಿಗೆ ಮರುಮಾರಾಟ ಮಾಡಿದಂತಾಗಿ ಬಿಡುತ್ತದೆ. ಉಳಿಗಾಲ ಉಂಟೆ ಎನ್ನುವಂತಾಗಿ ಬಿಡುತ್ತದೆ.


