ಭಾರತೀಯ ರೈಲ್ವೇ ನೇಮಕಾತಿ ಪರೀಕ್ಷೆಗಳ ಆಯ್ಕೆ ಪ್ರಕ್ರಿಯೆ ಕುರಿತು ಉದ್ಯೋಗ ಆಕಾಂಕ್ಷಿಗಳ ಪ್ರತಿಭಟನೆ ಮುಂದುವರೆದಿದೆ. ರೈಲ್ವೇ ನೇಮಕಾತಿ ಮಂಡಳಿಯ (ಆರ್‌ಆರ್‌ಬಿ) ಎನ್‌ಟಿಪಿಸಿ ಹಂತ 1 ಪರೀಕ್ಷೆಯ ಫಲಿತಾಂಶಗಳಲ್ಲಿನ ಅಕ್ರಮಗಳನ್ನು ಪ್ರತಿಭಟಿಸಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಯೂನಿಯನ್ (ಎಐಎಸ್‌ಎ) ಮತ್ತು ಇತರ ಯುವ ಸಂಘಟನೆಗಳು ಶುಕ್ರವಾರ ‘ಬಿಹಾರ ಬಂದ್’ಗೆ ಕರೆ ನೀಡಿವೆ. ವಿದ್ಯಾರ್ಥಿಗಳ ಕಳವಳಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿರುವ ರೈಲ್ವೆ ಸಚಿವಾಲಯದ ಕ್ರಮವನ್ನು ವಿದ್ಯಾರ್ಥಿ ಸಂಘಟನೆಗಳು “ವಂಚನೆ” ಎಂದು ಕರೆದಿವೆ.
ಎರಡು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸುವ ರೈಲ್ವೇ ಇಲಾಖೆ ನಿರ್ಧಾರದ ವಿರುದ್ಧ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. 2019 ರಲ್ಲಿ ಹೊರಡಿಸಲಾದ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆಯಲ್ಲಿ ಒಂದೇ ಒಂದು ಪರೀಕ್ಷೆಯನ್ನು ಉಲ್ಲೇಖಿಸಲಾಗಿದೆ. ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ಹೋರಾಡುತ್ತಿರುವವರ ಜೊತೆಗಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಹಿಂಸೆಯೇ ಪರಿಹಾರದ ಮಾರ್ಗವಲ್ಲ ಎಂದು ಸಹ ಒತ್ತಿ ಹೇಳಿದ್ದಾರೆ.
ನಿನ್ನೆ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಉದ್ಯೋಗ ಆಕಾಂಕ್ಷಿಗಳು ಬುಧವಾರ ಬೃಹತ್ ಪ್ರತಿಭಟನೆಗಳನ್ನು ನಡೆಸಿದ ನಂತರ ರೈಲ್ವೆ ಸಚಿವಾಲಯವು ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳು (ಎನ್‌ಟಿಪಿಸಿ) ಮತ್ತು ಹಂತ 1 ಪರೀಕ್ಷೆಗಳನ್ನು ಅಮಾನತುಗೊಳಿಸುವುದಾಗಿ ಘೋಷಿಸಿದ್ದು, ಬಿಹಾರದ ಗಯಾದಲ್ಲಿ ಪ್ರತಿಭಟನಾಕಾರರು ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ.
ಸಚಿವಾಲಯವು ರಚಿಸಿರುವ ಸಮಿತಿಯು ಉತ್ತರ ಪ್ರದೇಶದ ಚುನಾವಣೆಯವರೆಗೆ ವಿಷಯವನ್ನು ಮುಂದೂಡುವ “ಪಿತೂರಿ” ಎಂದು AISA ಮತ್ತು ಇತರ ಯುವ ಸಂಘಟನೆಗಳು ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿವೆ. “ಇದು ತೀವ್ರ ನಿರುದ್ಯೋಗವನ್ನು ಎದುರಿಸುತ್ತಿರುವ ವಿದ್ಯಾರ್ಥಿ ಯುವಜನರ ಬೃಹತ್ ಆಂದೋಲನವಾಗಿದೆ. ಆದರೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಅಭ್ಯರ್ಥಿಗಳು ಎತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರೈಲ್ವೆ ಸಚಿವಾಲಯವು ಉನ್ನತ ಸಮಿತಿಯನ್ನು ಸ್ಥಾಪಿಸಿದ್ದು, ಮಾರ್ಚ್ 4 ರೊಳಗೆ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮುಂದಿನ ತಿಂಗಳು ನಿಗದಿಯಾಗಿದ್ದ NTPC ಪರೀಕ್ಷೆಗಳನ್ನು ಮುಂದೂಡಿದ ಕೇಂದ್ರವು ಉದ್ಯೋಗ ಆಕಾಂಕ್ಷಿಗಳಿಗೆ ತಮ್ಮ ಕಳವಳಗಳನ್ನು ಸಲ್ಲಿಸಲು ಮೂರು ವಾರಗಳ ಕಾಲ (ಫೆಬ್ರವರಿ 16 ರವರೆಗೆ) ಕಾಲಾವಕಾಶ ನೀಡಿದೆ.
ಬುಧವಾರದ ಪ್ರತಿಭಟನೆಯ ಸಂದರ್ಭದಲ್ಲಿ, ಉದ್ಯೋಗ ಆಕಾಂಕ್ಷಿಗಳು ನವದೆಹಲಿ-ಕೋಲ್ಕತ್ತಾ ಮುಖ್ಯ ರೈಲು ಹಳಿಗಳನ್ನು ತಡೆದಿದ್ದು, ಆಂದೋಲನದ ಬಿಸಿಯು ಪೂರ್ವ ಉತ್ತರ ಪ್ರದೇಶದ ಗಡಿ ಪ್ರದೇಶಗಳಿಗೂ ಹರಡಿದೆ. ಗಯಾ, ಜೆಹಾನಾಬಾದ್, ಭಾಗಲ್ಪುರ್, ಸಸಾರಾಮ್, ಸಮಸ್ತಿಪುರ್ ಮತ್ತು ಛಾಪ್ರಾ ಜಿಲ್ಲೆಗಳಲ್ಲಿ ರೈಲ್ವೆ ಆಸ್ತಿಗಳಿಗೆ ಹಾನಿಮಾಡಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ; ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ನೇಮಕಾತಿ ಪರೀಕ್ಷೆಗಳನ್ನು ರದ್ದುಗೊಳಿಸಿದ ರೈಲ್ವೇ


