ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಗಣರಾಜ್ಯೋತ್ಸವ ವೇಳೆ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ತೆರವುಗೊಳಿಸಿ, ಧ್ವಜಾರೋಹಣ ನಡೆಸಿರುವ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ನಾಡಿನ ಚಿಂತಕರು, ಸಾಹಿತಿಗಳು, ವಕೀಲರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯನ್ನು ಖಂಡಿಸಿ, ನ್ಯಾಯಧೀಶರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ತಕ್ಷಣವೇ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿರುವ ವಿಮರ್ಶಕ ಕೇಶವ ಮಳಗಿ “ಭಾರತ ದೇಶ ಅಥವ ಇಂಡಿಯನ್ ನೇಶನ್ ಎನ್ನುವುದು ಎಷ್ಟೇ ಅಮೂರ್ತ ಕಲ್ಪನೆಯಾದರೂ ಯಾವುದೇ ರಾಜಕೀಯ ಪಕ್ಷದ ಗುತ್ತಿಗೆಯಲ್ಲ. ಇಲ್ಲಿ, ಗ್ರಾಮ ಪಂಚಾಯಿತಿ ಸದಸ್ಯ, ಚುನಾಯಿತ ಪ್ರಧಾನಿ, ಪಕ್ಷಗಳ ಒಮ್ಮತದಿಂದ ಆಯ್ಕೆಯಾಗುವ ರಾಷ್ಟ್ರಪತಿ, ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಮತ್ತು ಅತಿ ಸಾಮಾನ್ಯ ಹೀಗೆ ಎಲ್ಲರಿಗೂ ಒಂದೇ ಸಂವಿಧಾನ, ಕಾನೂನು, ನ್ಯಾಯವ್ಯವಸ್ಥೆ. ನಾವು ಯಾವುದೇ ಜಾತಿ, ಲಿಂಗ, ಕುಲಮತ, ಬುಡಕಟ್ಟು, ಲೈಂಗಿಕ ಆಯ್ಕೆ-ಅಪೇಕ್ಷೆಗಳಿಗೆ ಸೇರಿದವರಾದರು ಅಂತಿಮವಾಗಿ ಒಂದೇ ಸಂವಿಧಾನವನ್ನು ಒಪ್ಪಿಕೊಂಡು ಬದುಕಲು ಆಯ್ಕೆ ಮಾಡಿಕೊಂಡ ದೇಶಕ್ಕೆ ಸೇರಿದ್ದೇವೆ.
ಇದನ್ನೂ ಓದಿ: ಅಂಬೇಡ್ಕರ್ ಫೋಟೋ ಇದ್ದರೆ ಧ್ವಜಾರೋಹಣ ಮಾಡಲ್ಲ: ರಾಯಚೂರು ಜಿಲ್ಲಾ ನ್ಯಾಯಾಧೀಶರ ನಡೆಗೆ ತೀವ್ರ ಆಕ್ರೋಶ
ಹಿರಿಯ ವಕೀಲರಾದ ಸಿ.ಎಸ್.ದ್ವಾರಕನಾಥ್ ತಮ್ಮ ಫೇಸ್‌ಬುಕ್‌ನಲ್ಲಿ “ಸಂವಿಧಾನದ ಅವಧಿ ಮುಗಿಯುತ್ತಿದೆ’ ಎಂಬ ಚರ್ಚಾ ಸ್ವರ್ಧೆ ಏರ್ಪಡಿಸಿದ್ದ ಶಾಲೆ ಮತ್ತು ಅಂಬೇಡ್ಕರ್ ಫೋಟೋ ತೆಗಿಸಿದ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಈ ಎರಡು ಪ್ರಕರಣಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಸಂವಿಧಾನ ಮತ್ತು ಅಂಬೇಡ್ಕರ್ ರವರ ಕುರಿತು ಏನೆಲ್ಲಾ ಪೂರ್ವಾಗ್ರಹಗಳನ್ನು ಇಟ್ಟುಕೊಂಡ ಅನೇಕ ಮಂದಿ ಜಿಲ್ಲಾ ಮತ್ತು ಅಧೀನ ಕೋರ್ಟುಗಳಲ್ಲಿ ನ್ಯಾಯಾದೀಶರ ವೇಶದಲ್ಲಿದ್ದಾರೆ. ಇಂತವರು ನಮ್ಮ ಹೈಕೋರ್ಟು, ಸುಪ್ರೀಂ ಕೋರ್ಟುಗಳಲ್ಲೂ ಇದ್ದಾರೆ! ಇದರ ಬಗ್ಗೆ ಅನುಮಾನವೇ ಇಲ್ಲ! ನನಗೆ ಆತಂಕವಿರುವುದು ಇಂತಹ ಪೂರ್ವಾಗ್ರಹ ಇಟ್ಟುಕೊಂಡ ನ್ಯಾಯಾದೀಶರಿಂದ ಎಂತಹ ತೀರ್ಪುಗಳನ್ನು ಈ ನಾಡಿನ ಜನ ನಿರೀಕ್ಷಿಸಬಹುದು ಎನ್ನುವುದು..? ಡಾ.ಅಂಬೇಡ್ಕರ್ ರವರು ಈ ದೇಶದ ಸಂವಿಧಾನ ಬರೆದವರು, ಗಣರಾಜ್ಯೋತ್ಸವದ ದಿನ ಎಂದರೆ ಸಂವಿಧಾನದ ಪ್ರಕಾರ ಈ ದೇಶವನ್ನು ಗಣರಾಜ್ಯವನ್ನಾಗಿ ಪರಿಗಣಿಸಿದ ದಿನ. ಇಂತಹ ದಿನದಂದು ಸಂವಿಧಾನ ರಚಿಸಿದ ಅಂಬೇಡ್ಕರ್ ರವರಲ್ಲದೆ ಇನ್ಯಾರ ಚಿತ್ರವನ್ನು ಇಟ್ಟು ಗಣರಾಜ್ಯೋತ್ಸವ ವನ್ನು ಆಚರಿಸಬೇಕು? ಎಂಬ ಕಾಮನ್ ಸೆನ್ಸ್ ಪ್ರಶ್ನೆಯನ್ನು ಹಾಕಿಕೊಂಡಿದ್ದರೂ ಈ ನ್ಯಾಯಾದೀಶನಿಗೆ ಉತ್ತರ ಸಿಗುತಿತ್ತು? ಅಂಬೇಡ್ಕರ್ ಅಸ್ಪೃಶ್ಯ ರಾಗಿದ್ದೇ ಕಾರಣ, ಈ so called ಶೂದ್ರ ಜಾತಿಗಳಿಗೂ ಜಾತಿ ಪ್ರಜ್ಞೆ ಜಾಗೃತವಾಗಿಬಿಡುತ್ತೆ. ಈ ಕ್ಯಾನ್ಸರ್ ಇವರ ತಲೆಯಲ್ಲಿರುವವರೆಗೂ ಇವರಿಗೆ ಉಳಿಗಾಲವಿಲ್ಲ!” ಎಂದಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್‌ಗೆ ಅವಮಾನ ಘಟನೆ: ಶೋಷಿತರ ಬಗ್ಗೆ ಹೆಪ್ಪುಗೊಂಡಿರುವ ಅಸಹನೆಯ ಚಿಕ್ಕ ಪ್ರತಿನಿಧಿ ಈ ನ್ಯಾಯಾಧೀಶರು!
ಹಿರಿಯ ಸಾಹಿತಿ, ಸಂಶೋಧಕ ಪ್ರೊ. ರಹಮತ್ ತರೀಕೆರೆ ಅವರು “ಬಾಬಾಸಾಹೇಬರು ರಚಿಸಿದ ಸಂವಿಧಾನದಡಿಯಲ್ಲಿ, ನ್ಯಾಯದಾನ ಮಾಡುವ ಮತ್ತು ಅಧಿಕಾರ ನಿರ್ವಹಿಸುವ ಸಾರ್ವಜನಿಕ ಜಾಗೆಗಳಲ್ಲಿ, ದಲಿತರನ್ನು ಮಹಿಳೆಯರನ್ನು ಮುಸ್ಲಿಮರನ್ನು ಬುಡಕಟ್ಟುಗಳನ್ನು ಕುರಿತು ಹೆಪ್ಪುಗೊಂಡಿರುವ ಘೋರ ಅಸಹನೆಯ ಒಂದು ಚಿಕ್ಕ ಪ್ರತಿನಿಧಿ ರಾಯಚೂರಿನ ಸದರಿ ಮಾನ್ಯ ನ್ಯಾಯಾಧೀಶರು. ನ್ಯಾಯಾಲಯ ಕ್ಷೇತ್ರದಲ್ಲಿ ಢಾಳಾಗಿ ನೆಲೆಗೊಂಡಿರುವ ಸಾಮಾಜಿಕ-ಧಾರ್ಮಿಕ ದ್ವೇಷಭಾವದ ಬಗ್ಗೆ ನನ್ನ ವಕೀಲ ಮಿತ್ರರ ಅನುಭವಗಳನ್ನು ಕೇಳಿರುವೆ. ನ್ಯಾಯಾಧೀಶರಾಗಿದ್ದ ಕೋಚೆಯವರೂ ಇಂತಹ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಗಾಬರಿಯಾಗುತ್ತದೆ. ದುಗುಡವಾಗುತ್ತದೆ. ಅಂಬೇಡ್ಕರ್ ಅವರು “ಸಾಮಾಜಿಕ ಆರ್ಥಿಕ ಅಸಮಾನತೆ ಇರುವ ಸಮಾಜದಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ” ಎಂದಿದ್ದು ಇದಕ್ಕಾಗಿಯೇ” ಎಂದು ಆತಂಖ ಹಂಚಿಕೊಂಡಿದ್ದಾರೆ.
ಚಿಂತಕ, ಪ್ರಾಧ್ಯಾಪಕ ಕೆಎಲ್ ಚಂದ್ರಶೇಖರ್ ಐಜೂರು, ತಮ್ಮ ಫೇಸ್‌ಬುಕ್‌ನಲ್ಲಿ ಸರ್ಕಾರಿ ಆದೇಶದ ಪ್ರತಿ ಹಂಚಿಕೊಂಡಿದ್ದು, ನ್ಯಾಯಾಧೀಶರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಲೇಖಕ, ಪತ್ರಕರ್ತ ಬಿಎಂ ಬಶೀರ್ ಅವರು, ‘‘ಯಾವಾಗ ಈ ದೇಶದ ಹೈಕೋರ್ಟ್ ಮುಂದೆ ಮನುವಿನ ಪ್ರತಿಮೆ ಸ್ಥಾಪನೆಯಾಗಲು ಜನರು ಮೌನ ಸಮ್ಮತಿಯನ್ನು ಕೊಟ್ಟರೋ ಆಗಲೇ ಅಂಬೇಡ್ಕರ್ ಬದಿಗೆ ಸರಿದರು. ರಾಜಸ್ತಾನದ ಹೈಕೋರ್ಟ್ ಮುಂದೆ ಮನುವಿನ ಪ್ರತಿಮೆ ಬಟಾ ಬಯಲಲ್ಲಿ ನಿಂತು ಈ ದೇಶದ ಸಂವಿಧಾನಕ್ಕೆ ಪ್ರತಿ ದಿನ ಸವಾಲು ಹಾಕುತ್ತಿರುವಾಗ, ನಮಗೇನೂ ಅನ್ನಿಸುವುದಿಲ್ಲ. ನೆನಪಿಡಿ ಈ ಪ್ರತಿಮೆ ನಿಲ್ಲಿಸಲು ಅನುಮತಿ ನೀಡಿದವರು ನ್ಯಾಯಾಧೀಶರೇ. ಹೀಗಿರುವಾಗ ನ್ಯಾಯಾಧೀಶನೊಬ್ಬ ಅಂಬೇಡ್ಕರ್ ಫೋಟೋ ಇದ್ದರೆ ಧ್ವಜಾರೋಹಣ ಮಾಡುವುದಿಲ್ಲ ಎನ್ನುವುದರಲ್ಲಿ ಅಚ್ಚರಿ ಏನೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್
Some peoples trying to touch….. And then it gets embarrassed asking sorry……
But we must think that once day comes next night should also be circulated…… Anyone can’t close the eyes of Almighty God.