Homeಕರ್ನಾಟಕಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್‌

ಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್‌

ಡಾ.ಬಿ.ಆರ್‌.ಅಂಬೇಡ್ಕರ್‌ ಫೋಟೋ ಇದ್ದ ಕಾರಣ ಧ್ವಜಾರೋಹಣ ಮಾಡಲು ನಿರಾಕರಿಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿವಾದಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ನಾಗಮೋಹನ್ ದಾಸ್, ಹಿರಿಯ ವಕೀಲರಾದ ಸಿ.ಎಸ್.ದ್ವಾರಕನಾಥ್‌ ನೀಡಿದ ಪ್ರತಿಕ್ರಿಯೆ ಇಲ್ಲಿದೆ...

- Advertisement -
- Advertisement -

“ಪ್ರಜಾಪ್ರಭುತ್ವ ವಿರೋಧಿಗಳು, ಕೋಮುವಾದಿಗಳು ಕ್ರಿಯಾಶೀಲವಾಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ” ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್‌ ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋವನ್ನು ಇಟ್ಟರೆ ಧ್ವಜಾರೋಹಣ ಮಾಡುವುದಿಲ್ಲ ಎಂದು ರಾಯಚೂರಿನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರು ಹೇಳಿದ್ದು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಜಸ್ಟೀಸ್ ನಾಗಮೋಹನ ದಾಸ್‌ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದರು.

“ಈ ಪ್ರಕರಣ ಸದರಿ ನ್ಯಾಯಾಧೀಶರ ಅಜ್ಞಾನ ಮತ್ತು ತಿಳಿವಳಿಕೆಯ ಕೊರತೆಯನ್ನು ಸೂಚಿಸುತ್ತದೆ. ನಾನು ಇದನ್ನು ಖಂಡಿಸುತ್ತೇನೆ” ಎಂದ ಅವರು, ಈ ರೀತಿಯ ಶಕ್ತಿಗಳು ನ್ಯಾಯಾಂಗದಲ್ಲಿ ಇವೆ. ಕೆಲವರು ನೇರವಾಗಿ ಕೆಲವರು ಕದ್ದು ಮುಚ್ಚಿ  ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂದು ಎಚ್ಚರಿಸಿದರು.

ಈ ಸಮಾಜದಿಂದಲೇ ಜಡ್ಜ್‌ಗಳು ಬರುತ್ತಾರೆ. ಈ ಸಮಾಜದಲ್ಲಿ ಏನೆಲ್ಲ ಕೊಳಕು ಇರುತ್ತದೆಯೋ ಅದೆಲ್ಲವನ್ನೂ ಹೊತ್ತಿಕೊಂಡು ಬರುವ ಜನ ಇದ್ದಾರೆ. ಆದರೆ ಬಹುಪಾಲು ಜನ ಆ ರೀತಿಯವರಲ್ಲ. ಕೆಲವೊಂದು ಘಟನೆ ಅಲ್ಲೊಂದು ಇಲ್ಲೊಂದು ನಡೆಯುತ್ತಿವೆ ಎಂದು ತಿಳಿಸಿದರು.

ಇದನ್ನೂ ಓದಿರಿ: ಅಂಬೇಡ್ಕರ್ ಫೋಟೋ ಇದ್ದರೆ ಧ್ವಜಾರೋಹಣ ಮಾಡಲ್ಲ: ರಾಯಚೂರು ಜಿಲ್ಲಾ ನ್ಯಾಯಾಧೀಶರ ನಡೆಗೆ ತೀವ್ರ ಆಕ್ರೋಶ

ಜನಾಭಿಪ್ರಾಯವೇ ಇದಕ್ಕೆ ಮದ್ದಾಗಿದೆ. ವಕೀಲರು ಇದರ ಬಗ್ಗೆ ಚರ್ಚೆ ಮಾಡಬೇಕು. ನ್ಯಾಯಾಂಗದಲ್ಲೂ ಇದು ಚರ್ಚೆಗೆ ಬರಬೇಕು. ಹಿರಿಯರಾದವರು ಇದಕ್ಕೆ ಸಂಬಂಧಿಸಿದಂತೆ ತಿಳಿವಳಿಕೆಯನ್ನು ನೀಡಬೇಕು. ಮಾರ್ಗಸೂಚಿಗಳನ್ನು ವಿಧಿಸಬೇಕು ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್‌ ಒಬ್ಬರೇ  ಸಂವಿಧಾನ ಬರೆಯಲಿಲ್ಲ ಎನ್ನುವ ಒಂದು ವರ್ಗವೇ ಇದೆ. ಬೆಂಗಳೂರಿನ ಶಾಲೆಯೊಂದರಲ್ಲಿ ‘ಸಂವಿಧಾನದ ಅವಧಿ ಮುಗಿದು ಹೋಗಿದೆ’ ಎಂಬ ಚರ್ಚಾ ಸ್ಪರ್ಧೆಯನ್ನು ನಿನ್ನೆ ಏರ್ಪಡಿಸಿತ್ತು. ಕೆಲವರು ಸಂವಿಧಾನ ಬದಲಿಸುತ್ತೇವೆ ಎನ್ನುತ್ತಾರೆ. ಕೆಲವರು ಸಂವಿಧಾನವನ್ನು ಸುಟ್ಟರು. ಇನ್ನು ಕೆಲವರು ಸಂವಿಧಾನಕ್ಕೆ ಮುಂದೆ ನಮಸ್ಕಾರ ಮಾಡಿ, ಹಿಂದೆ ನಿಂತು ಚೂರಿ ಹಾಕುತ್ತಾರೆ. ಇದೆಲ್ಲ ಯಾಕೆ ಆಗುತ್ತಿದೆ ಎಂದರೆ- ಇಂದು ಅಪ್ರಜಾಪ್ರಭುತ್ವ ಶಕ್ತಿಗಳು ಕ್ರಿಯಾಶೀಲವಾಗಿವೆ. ಕೋಮುವಾದಿ ಶಕ್ತಿಗಳು, ಕಾರ್ಪೋರೇಟ್ ಹಿತಾಸಕ್ತಿಗಳು ಆಕ್ಟೀವ್ ಆಗಿವೆ. ಹೀಗಾಗಿ ಇಂತಹ ಬೆಳವಣಿಗೆಳಾಗುತ್ತಿವೆ ಎಂದರು.

ವಿವಾದಕ್ಕೆ ಕಾರಣವಾಗಿರುವ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ

ಇದರ ವಿರುದ್ಧ ಜನಾಭಿಪ್ರಾಯಗಳು ನಡೆಯಬೇಕು. ದೊಡ್ಡವರಾಗಲಿ, ಚಿಕ್ಕವರಾಗಲಿ ತಪ್ಪು ಮಾಡಿದಾಗ ಖಂಡಿಸಬೇಕು. ಈ ಮೂಲಕ ಜನಾಭಿಪ್ರಾಯವನ್ನು ರೂಪಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚಿಸಿದರು.

ಇದೊಂದು ದುರಂತ, ಆಂತಕಕಾರಿ: ಸಿ.ಎಸ್.ದ್ವಾರಕನಾಥ್‌

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹಿರಿಯ ವಕೀಲರು, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕನಾಥ್‌, “ಜಿಲ್ಲಾ ಮಟ್ಟದ ನ್ಯಾಯಾಧೀಶರಾದವರೂ ಸಂವಿಧಾನವನ್ನು ಓದಿರುವುದಿಲ್ಲವ ಎಂಬುದು ದುರಂತ ಅನ್ನಿಸುತ್ತಿದೆ” ಎಂದು ವಿಷಾದಿಸಿದರು.

“ಅಂಬೇಡ್ಕರ್‌ ಒಬ್ಬರು ಸಂವಿಧಾನ ತಜ್ಞರು, ಅವರು ಭಾರತ ಸಂವಿಧಾನದ ರಚನಾಕಾರೆಂಬುದು ಇಡೀ ಜಗತ್ತಿಗೆ ಗೊತ್ತು. ನ್ಯಾಯಾಧೀಶರಿಗೆ ಗೊತ್ತಿಲ್ಲವಾ? ಅಲ್ಲದೆ ಗಣರಾಜ್ಯೋತ್ಸವದಂದು ಅಂಬೇಡ್ಕರ್‌ ಫೋಟೋ ಇಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಇದನ್ನಾದರೂ ನ್ಯಾಯಧೀಶರು ಗಮನಿಸಬಾರದಾ?” ಎಂದು ಪ್ರಶ್ನಿಸಿದರು.

“ಇಂತಹ ಮನಸ್ಥಿತಿ ಇರುವವರು ನ್ಯಾಯಾಧೀಶರಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿದೆ. ಅಂಬೇಡ್ಕರ್‌ ಪರವಾಗಿಯೇ ಇರಬೇಕೆಂದು ನಾನೇನು ಹೇಳುತ್ತಿಲ್ಲ. ಆದರೆ ಅಂಬೇಡ್ಕರ್‌ ಯಾರು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅಂಬೇಡ್ಕರ್‌ ಯಾರು? ಅವರ ಫೋಟೋನ್ನು ಯಾಕೆ ಇಟ್ಟಿದ್ದಾರೆ? ಎಂಬುದನ್ನು ತಿಳಿಯಬೇಕು. ಜಡ್ಜ್‌ಗಳು ಇಷ್ಟೊಂದು ಪೂರ್ವಗ್ರಹ ಪೀಡಿತರಾಗಬಾರದು. ಅಂಥವರು ಎಂತಹ ತೀರ್ಪುಗಳನ್ನು ಕೊಡಬಹುದು ಎಂದು ಆತಂಕವಾಗುತ್ತಿದೆ” ಎಂದರು.


ಇದನ್ನೂ ಓದಿರಿ: ಅಂಬೇಡ್ಕರ್‌ಗೆ ಅವಮಾನ ಘಟನೆ: ಶೋಷಿತರ ಬಗ್ಗೆ ಹೆಪ್ಪುಗೊಂಡಿರುವ ಅಸಹನೆಯ ಚಿಕ್ಕ ಪ್ರತಿನಿಧಿ ಈ ನ್ಯಾಯಾಧೀಶರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಈ ದುರ್ಘಟನೆ ನಡೆದಿರುವುದಕ್ಕೆ ಕೋಮುವಾದಿಗಳು ಸಕ್ರಿಯರಾಗಿರುವುದು ಮಾತ್ರ ಕಾರಣವಲ್ಲ; ಕೋಮುವಾದಿಗಳ ದುರಾಚಾರಗಳನ್ನು ಕಂಡೂ ಕಾಣದಂತೆ ಜಾಣಮೌನಕ್ಕೆ ಶರಣಾಗಿರುವ ಪ್ರಜಾಪ್ರಭುತ್ವವಾದಿಗಳು, ಮಾರ್ಕ್ಸ್ ವಾದಿಗಳು ಮತ್ತು ಅಂಬೇಡ್ಕರ್ ವಾದಿಗಳು ಸಹ ಕಾರಣ. ಈಗಲಾದರೂ ಈ ಮೂರು ವರ್ಗಗಳು ಎಚ್ಚೆತ್ತುಕೊಳ್ಳದಿದ್ದರೆ, ಈ ದೇಶಕ್ಕೆ ಕರಾಳ ಬವಿಶ್ಯ ಕಟ್ಟಿಟ್ಟ ಬುತ್ತಿಯಾಗಲಿದೆ.

LEAVE A REPLY

Please enter your comment!
Please enter your name here

- Advertisment -

Must Read

ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

0
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೆರಿದೆ. ಕರ್ನಾಟಕ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆಗಳು ಸಂವಿಧಾನ ವಿರೋಧಿಯಾಗಿದ್ದು, ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಎಳೆಯ...