Homeಮುಖಪುಟಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

- Advertisement -
- Advertisement -

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು ಕಾಂಗ್ರೆಸ್‌ ತನ್ನ ಸ್ವಂತ ಬಲದಿಂದ ಗಳಿಸಿದೆ. ಹಾಗಾಗಿ, ಸಿಎಂ ಹುದ್ದೆ ಕಾಂಗ್ರೆಸ್‌ಗೆ ದೊರೆತಿದೆ.

ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಯ ರೇಸ್‌ನಲ್ಲಿ ಪಕ್ಷದ ಹಿರಿಯ ನಾಯಕರಾದ ಕೆ.ಸಿ ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಮತ್ತು ವಿ.ಡಿ ಸತೀಶನ್ ಇದ್ದಾರೆ. ಮೂವರೂ ಕೂಡ ಪ್ರಭಾವಿ ನಾಯಕರಾಗಿರುವುದರಿಂದ ಯಾರಿಗೆ ಪಟ್ಟ ಕಟ್ಟುವುದು ಎಂಬ ಚಿಂತೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಎದುರಾಗಿದೆ. ಏಕೆಂದರೆ, ಯಾರಿಗೂ ಹುದ್ದೆ ಕೊಟ್ಟರೂ, ಇನ್ನುಳಿದ ಇಬ್ಬರಿಂದ ಪಕ್ಷದಲ್ಲಿ ಆಂತರಿಕ ಕಲಹ ಶುರುವಾಗುವ ಸಾಧ್ಯತೆ ಇದೆ.

ಕೆ.ಸಿ. ವೇಣುಗೋಪಾಲ್ (ಕೊಝುಮ್ಮಾಲ್ ಚಟ್ಟಡಿ ವೇಣುಗೋಪಾಲ್) ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಮತ್ತು ಪ್ರಸ್ತುತ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಆಲಪ್ಪುಝ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ವೇಣುಗೋಪಾಲ್, ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಶಾಲಿ ಹುದ್ದೆಯಾದ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ 2019 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 

ರಾಹುಲ್ ಗಾಂಧಿ ಅವರ ಅತ್ಯಂತ ನಿಕಟವರ್ತಿಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ವೇಣುಗೋಪಾಲ್, ಯುಪಿಎ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಮತ್ತು ಇಂಧನ ಇಲಾಖೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ರಾಜ್ಯಮಟ್ಟದಲ್ಲಿ ವೇಣುಗೋಪಾಲ್ ಮೂರು ಬಾರಿ ಕೇರಳ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದರು (1996, 2001, 2006). ಕೇರಳ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ದೇವಸ್ವಂ ಸಚಿವರಾಗಿ ಕೆಲಸ ಮಾಡಿದ್ದರು.

ಕಾಂಗ್ರೆಸ್ ಪಕ್ಷದ ಪ್ರಮುಖ ತಂತ್ರ ನಿರೂಪಕ (Strategist) ಮತ್ತು ಬಿಕ್ಕಟ್ಟು ಪರಿಹಾರಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ವೇಣುಗೋಪಾಲ್ ಅವರಿಗೆ, ಕೇರಳದ ನೂತನ ಸಿಎಂ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಆಂತರಿಕ ಸಭೆಯಲ್ಲಿ, ಚುನಾಯಿತ 63 ಕಾಂಗ್ರೆಸ್ ಶಾಸಕರಲ್ಲಿ ಸುಮಾರು 47 ಶಾಸಕರು ಬೆಂಬಲ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಮೇಲಿನ ಎಲ್ಲಾ ಕಾರಣಗಳಿಂದ ವೇಣುಗೋಪಾಲ್ ಅವರು ಕೇರಳ ಸಿಎಂ ರೇಸ್‌ನ ಮುಂಚೂಣಿಯಲ್ಲಿದ್ದಾರೆ.

ವೇಣುಗೋಪಾಲ್ ಅವರು ಒಂದು ವೇಳೆ ಸಿಎಂ ಹುದ್ದೆಗೆ ಆಯ್ಕೆಯಾದರೆ ಅವರಿಗೆ ಚುನಾವಣೆ ಎದುರಿಸುವ ಸವಾಲು ಎದುರಾಗಲಿದೆ. ಪ್ರಸ್ತುತ ಸಂಸದರಾಗಿರುವ ವೇಣುಗೋಪಾಲ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಬಹುದು. ಆದರೆ, ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

ಸಿಎಂ ಆಗಿ ಅಧಿಕಾರ ವಹಿಸಿಕೊಂಡ 6 ತಿಂಗಳ ಒಳಗಾಗಿ ವೇಣುಗೋಪಾಲ್ ಚುನಾವಣೆ ಎದುರಿಸಿ ಗೆದ್ದು ಶಾಸಕರಾಗಬೇಕು. ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಹುದ್ದೆ ಕೈತಪ್ಪಲಿದೆ.

ವೇಣುಗೋಪಾಲ್ ಚುನಾವಣೆಗೆ ನಿಲ್ಲಬೇಕಾದರೆ, ಇತ್ತೀಚಿನ ಚುನಾವಣೆಯಲ್ಲಿ ಗೆದ್ದಿರುವ ಯಾರಾದರು ಒಬ್ಬರು ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರ ಕ್ಷೇತ್ರವನ್ನು ಬಿಟ್ಟುಕೊಡಬೇಕು. ಆ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ವೇಣುಗೋಪಾಲ್ ಸ್ಪರ್ಧಿಸಿ ಗೆಲ್ಲಬೇಕು.

ವೇಣುಗೋಪಾಲ್ ಅವರು ಕೇವಲ ಕೇರಳದ ನಾಯಕರಲ್ಲ, ಅವರು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ‘ಬಲಗೈ ಬಂಟ’ನಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಎಷ್ಟೇ ವಿರೋಧವಿದ್ದರೂ, ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುವುದರಿಂದ ರಾಹುಲ್ ಅವರ ಬೆಂಬಲ ವೇಣುಗೋಪಾಲ್ ಅವರಿಗೆ ಶ್ರೀರಕ್ಷೆಯಾಗಿದೆ.

ಕಾಂಗ್ರೆಸ್ ಪಕ್ಷದ ಕಷ್ಟಕಾಲದಲ್ಲಿ ರಾಹುಲ್ ಗಾಂಧಿ ಅವರಿಗೆ ಅತ್ಯಂತ ನಿಷ್ಠಾವಂತರಾಗಿ ಉಳಿದವರು ವೇಣುಗೋಪಾಲ್. ಪಕ್ಷದ ಆಂತರಿಕ ಬಿಕ್ಕಟ್ಟುಗಳನ್ನು ನಿಭಾಯಿಸುವಲ್ಲಿ ರಾಹುಲ್ ಅವರಿಗೆ ವೇಣುಗೋಪಾಲ್ ಮೇಲೆ ಅಪಾರ ನಂಬಿಕೆಯಿದೆ. ಈ ‘ನಂಬಿಕೆ’ಯು ಸಿಎಂ ಆಯ್ಕೆಯ ಸಮಯದಲ್ಲಿ ಅವರ ಪರವಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ.

ಕೇರಳ ಕಾಂಗ್ರೆಸ್‌ನಲ್ಲಿ ರಮೇಶ್ ಚೆನ್ನಿತ್ತಲ ಮತ್ತು ವಿ.ಡಿ. ಸತೀಶನ್ ಅವರಂತಹ ಪ್ರಬಲ ನಾಯಕರ ನಡುವೆ ಪೈಪೋಟಿ ಇದೆ. ಇಬ್ಬರ ನಡುವೆ ಒಮ್ಮತ ಮೂಡದಿದ್ದಾಗ, ರಾಹುಲ್ ಗಾಂಧಿ ಅವರು ತಮಗೆ ಅತ್ಯಂತ ಆಪ್ತರಾದ ಮತ್ತು ಎಲ್ಲರನ್ನೂ ನಿಭಾಯಿಸಬಲ್ಲ ವೇಣುಗೋಪಾಲ್ ಅವರ ಹೆಸರನ್ನು ‘ಸಂಧಾನದ ಅಭ್ಯರ್ಥಿ’ಯಾಗಿ ಮುಂದಿಡುವ ಸಾಧ್ಯತೆ ಹೆಚ್ಚಿದೆ.

ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಕಂಡ ಯಶಸ್ಸಿನ ಹಿಂದೆ ವೇಣುಗೋಪಾಲ್ ಅವರ ಸಂಘಟನಾ ಚಾತುರ್ಯವಿದೆ ಎಂಬುದು ರಾಹುಲ್ ಗಾಂಧಿ ಅವರ ಭಾವನೆ. ಹೀಗಾಗಿ, ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ಕೇರಳದಲ್ಲಿ ತಮ್ಮ ಆಪ್ತನೇ ಅಧಿಕಾರದಲ್ಲಿ ಇರಲಿ ಎಂದು ರಾಹುಲ್ ಬಯಸಬಹುದು.

ರಾಹುಲ್ ಆಪ್ತತೆಯಿದ್ದರೂ ವೇಣುಗೋಪಾಲ್ ಸಿಎಂ ಹುದ್ದೆಗೇರುವುದಕ್ಕೆ ಕೆಲವು ಅಡೆತಡೆಗಳಿವೆ. ಕೇರಳದ ಸ್ಥಳೀಯ ನಾಯಕರು “ದಿಲ್ಲಿಯಿಂದ ಬಂದವರಿಗೆ ಮಣೆ ಹಾಕಬೇಡಿ” ಎಂದು ಅಸಮಾಧಾನ ವ್ಯಕ್ತಪಡಿಸಬಹುದು.

ವೇಣುಗೋಪಾಲ್ ಸಿಎಂ ಆದರೆ, ದೆಹಲಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಸಂಘಟನಾತ್ಮಕವಾಗಿ ಸಹಾಯ ಮಾಡಲು ಅವರಷ್ಟೇ ಸಮರ್ಥರಾದ ಮತ್ತೊಬ್ಬ ನಾಯಕರ ಹುಡುಕಾಟ ಕಷ್ಟವಾಗಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ಅವರ “ಗುಡ್ ಬುಕ್”ನಲ್ಲಿ ವೇಣುಗೋಪಾಲ್ ಮೊದಲ ಸ್ಥಾನದಲ್ಲಿರುವುದು ಅವರಿಗೆ ಸಿಎಂ ಹುದ್ದೆ ಸಿಗಲು 70-80% ರಷ್ಟು ನೆರವಾಗಲಿದೆ ಎನ್ನಲಾಗ್ತಿದೆ.

ರಮೇಶ್ ಚೆನ್ನಿತ್ತಲ

ಕೇರಳ ಸಿಎಂ ಹುದ್ದೆಯ ರೇಸ್‌ನಲ್ಲಿರುವ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ರಮೇಶ್ ಚೆನ್ನಿತ್ತಲ. ಇವರು 6 ಬಾರಿ ಶಾಸಕರಾಗಿ ಮತ್ತು 4 ಬಾರಿ ಸಂಸದರಾಗಿ ಆಯ್ಕೆಯಾದ ದೀರ್ಘಕಾಲದ ಅನುಭವ ಹೊಂದಿದ್ದಾರೆ.

ಈ ಹಿಂದೆ ಕೇರಳದ ಗೃಹ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ (2016-2021) ಕಾರ್ಯನಿರ್ವಹಿಸಿದ್ದಾರೆ. 2026ರ ಚುನಾವಣೆಯಲ್ಲಿ ಚೆನ್ನಿತ್ತಲ ಅವರು ತಮ್ಮ ಭದ್ರಕೋಟೆಯಾದ ಹರಿಪಾದ್ ಕ್ಷೇತ್ರದಿಂದ 23,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಚೆನ್ನಿತ್ತಲ ಅವರ ಬೆಂಬಲಿಗರು ಸುದೀರ್ಘ ಅನುಭವ ಮತ್ತು ಪಕ್ಷದ ಸಂಘಟನೆಯಲ್ಲಿ ಅವರ ಕೊಡುಗೆಯನ್ನು ಮುಂದಿಟ್ಟು ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕೆ.ಸಿ. ವೇಣುಗೋಪಾಲ್ ಮತ್ತು ವಿ.ಡಿ. ಸತೀಶನ್ ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟರೆ, ಹಿರಿಯ ನಾಯಕರಾದ ಚೆನ್ನಿತ್ತಲ ಅವರು ಎಲ್ಲರಿಗೂ ಒಪ್ಪಿತವಾಗುವ ‘ಸಂಧಾನದ ಅಭ್ಯರ್ಥಿ’ಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಚೆನ್ನಿತ್ತಲ ಅವರು ಮೇ 9ರಂದು ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. “ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾನು ಬದ್ಧ” ಎಂದು ಅವರು ಸೋಮವಾರ (ಮೇ 11) ತಿಳಿಸಿದ್ದಾರೆ. 

ಚೆನ್ನಿತ್ತಲ ಕೇರಳದ ಪ್ರಬಲ ನಾಯರ್ ಸಮುದಾಯಕ್ಕೆ ಸೇರಿದವರಾಗಿದ್ದು, ಇದು ಅವರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. 69 ವರ್ಷದ ಚೆನ್ನಿತ್ತಲ ಅವರಿಗೆ ಸಿಎಂ ಆಗಲು ಇದು ಕೊನೆಯ ಮತ್ತು ಉತ್ತಮ ಅವಕಾಶ ಎಂದು ಅವರ ಬೆಂಬಲಿಗರು ಭಾವಿಸಿದ್ದಾರೆ.

ಸದ್ಯಕ್ಕೆ ಹೈಕಮಾಂಡ್ ಯಾರ ಹೆಸರನ್ನು ಅಂತಿಮಗೊಳಿಸುತ್ತದೆ ಎಂಬ ಕುತೂಹಲ ಕೇರಳ ರಾಜಕೀಯದಲ್ಲಿದೆ. ಅಧಿಕೃತ ಘೋಷಣೆಯು ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಹೊರಬೀಳುವ ನಿರೀಕ್ಷೆಯಿದೆ.

ವಿ.ಡಿ ಸತೀಶನ್

ಪ್ರಸ್ತುತ ಕೇರಳದ ರಾಜಕೀಯ ಬೆಳವಣಿಗೆಗಳ ಪ್ರಕಾರ, ವಿ.ಡಿ. ಸತೀಶನ್ ಅವರು ಮುಖ್ಯಮಂತ್ರಿ ಹುದ್ದೆಯ ಅತ್ಯಂತ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು. ಕಳೆದ ಐದು ವರ್ಷಗಳಿಂದ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ ರೀತಿ ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ಎರ್ನಾಕುಲಂ ಜಿಲ್ಲೆಯ ಪರವೂರು ಕ್ಷೇತ್ರದಿಂದ ಸತತ ಐದನೇ ಬಾರಿಗೆ ಸತೀಶನ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವೃತ್ತಿಯಿಂದ ವಕೀಲರಾಗಿರುವ ಸತೀಶನ್, ಸಂಸದೀಯ ವ್ಯವಹಾರಗಳಲ್ಲಿ ಅಪಾರ ಜ್ಞಾನ ಹೊಂದಿದ್ದಾರೆ.

ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಸಾಕ್ಷ್ಯಧಾರ ಸಮೇತ ಸದನದಲ್ಲಿ ಮಂಡಿಸಿ ಜನಪ್ರಿಯತೆ ಗಳಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಬದಲಾವಣೆ ಬಯಸುವ ಯುವ ಕಾರ್ಯಕರ್ತರ ಮತ್ತು ನಾಯಕರ ಮೊದಲ ಆಯ್ಕೆಯಾಗಿ ಸತೀಶನ್ ಹೊರ ಹೊಮ್ಮಿದ್ದಾರೆ.

ಕೆ.ಸಿ. ವೇಣುಗೋಪಾಲ್ ಅವರಂತೆಯೇ ರಾಹುಲ್ ಗಾಂಧಿ ಅವರ ತಂಡದಲ್ಲಿ ಇವರಿಗೂ ಉತ್ತಮ ಹೆಸರಿದೆ. ಕೇರಳದಲ್ಲಿ ಕಾಂಗ್ರೆಸ್ ಪುನಶ್ಚೇತನಕ್ಕೆ ಸತೀಶನ್ ಕಾರಣ ಎಂದು ದೆಹಲಿ ನಾಯಕರು ನಂಬಿದ್ದಾರೆ. ಸತೀಶನ್ ಕೂಡ ಪ್ರಭಾವಿ ನಾಯರ್ ಸಮುದಾಯಕ್ಕೆ ಸೇರಿದವರಾಗಿದ್ದು, ರಾಜ್ಯದ ಪ್ರಮುಖ ಸಮುದಾಯಗಳ ಬೆಂಬಲ ಇವರಿಗಿದೆ.

ಇಷ್ಟೆಲ್ಲ ಅರ್ಹತೆಗಳಿದ್ದರೂ, ಹಿರಿಯ ನಾಯಕ ಚೆನ್ನಿತ್ತಲ ಅವರು ತಮ್ಮ ಅನುಭವದ ಆಧಾರದ ಮೇಲೆ ಹಕ್ಕು ಮಂಡಿಸುತ್ತಿರುವುದು ಸತೀಶನ್ ಅವರಿಗೆ ಅಡ್ಡಿಯಾಗಬಹುದು.

ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಶಾಸಕರ ಅಭಿಪ್ರಾಯವನ್ನು ಪಡೆಯಲಾಗಿದೆ. ವರದಿಗಳ ಪ್ರಕಾರ, ಯುವ ಶಾಸಕರಲ್ಲಿ ಹೆಚ್ಚಿನವರು ಸತೀಶನ್ ಪರವಾಗಿದ್ದಾರೆ. ಒಂದು ವೇಳೆ ರಾಹುಲ್ ಗಾಂಧಿ ಅವರು ಭವಿಷ್ಯದ ದೃಷ್ಟಿಯಿಂದ ಯುವ ನಾಯಕತ್ವಕ್ಕೆ ಆದ್ಯತೆ ನೀಡಿದರೆ ವಿ.ಡಿ. ಸತೀಶನ್ ಅವರೇ ಕೇರಳದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚು.

ಮೋದಿ ಹೊಗಳಿ ಪೇಚಿಗೆ ಸಿಲುಕಿದ ಸತೀಶನ್

ಸಿಎಂ ಹುದ್ದೆಗೆ ಕಸರತ್ತು ನಡೆಸುತ್ತಿರುವ ನಡುವೆ ವಿ.ಡಿ ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ ಎನ್ನಲಾದ ವಿವಾದವೊಂದು ಭಾರಿ ಚರ್ಚೆಗೆ ನಾಂದಿ ಹಾಡಿದೆ. ಸಂದರ್ಶನವೊಂದರಲ್ಲಿ ಸತೀಶನ್ ಅವರು ನೀಡಿದ ಒಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಸಿಎಂ ಆಗಲು “ಆಡಳಿತಾತ್ಮಕ ಅನುಭವ” ಬೇಕು ಎಂಬ ವಾದವನ್ನು ತಳ್ಳಿಹಾಕಲು ಸತೀಶನ್ ಅವರು ನರೇಂದ್ರ ಮೋದಿ ಅವರ ಉದಾಹರಣೆಯನ್ನು ನೀಡಿರುವುದು ವಿವಾದದ ಪ್ರಮುಖ ಅಂಶ.

ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗಿನ ಸಂದರ್ಶನದಲ್ಲಿ ಸತೀಶನ್ ಅವರು, “ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗುವ ಮೊದಲು ಅವರಿಗೆ ಯಾವುದೇ ಆಡಳಿತಾತ್ಮಕ ಅನುಭವವಿರಲಿಲ್ಲ. ಅವರು ಕೇವಲ ಒಬ್ಬ ಪಕ್ಷದ ಸಂಘಟಕರಾಗಿದ್ದರು. ಆದರೂ ಅವರು ಯಶಸ್ವಿ ನಾಯಕನಾಗಿ ಹೊರಹೊಮ್ಮಿದರು” ಎಂದು ಹೇಳಿದ್ದಾರೆ.

ನಾಯಕತ್ವಕ್ಕೆ ಬೇಕಿರುವುದು ದೂರದೃಷ್ಟಿ ಮತ್ತು ತಂಡವನ್ನು ಕಟ್ಟುವ ಸಾಮರ್ಥ್ಯವೇ ಹೊರತು ಕೇವಲ ಹಿರಿತನವಲ್ಲ ಎಂಬುದು ಸತೀಶನ್ ಅವರ ವಾದ.

ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಮತ್ತು ಮೋದಿ ಅವರ ಸಿದ್ಧಾಂತದ ವಿರುದ್ಧ ತೀವ್ರವಾಗಿ ಹೋರಾಡುತ್ತಿರುವಾಗ, ಸಿಎಂ ಹುದ್ದೆಯ ರೇಸ್‌ನಲ್ಲಿರುವ ನಾಯಕರೊಬ್ಬರು ಮೋದಿ ಅವರ ಹಾದಿಯನ್ನು ಮಾದರಿಯಾಗಿ ಉಲ್ಲೇಖಿಸಿದ್ದು ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಸತೀಶನ್ ಅವರ ವಿರೋಧಿಗಳು ಇದನ್ನು “ಮೋದಿ ಅವರ ಹೊಗಳಿಕೆ” ಎಂದು ಬಿಂಬಿಸುತ್ತಿದ್ದಾರೆ. ಕೇರಳದಂತಹ ಸಿದ್ಧಾಂತ ಆಧಾರಿತ ರಾಜಕೀಯವಿರುವ ರಾಜ್ಯದಲ್ಲಿ ಇದು ದೊಡ್ಡ ಮಟ್ಟದ ‘ರೆಡ್ ಫ್ಲಾಗ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

ಸಿಪಿಎಂ ನಾಯಕರು ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಳಸಂಚು ಎಂದು ಟೀಕಿಸಲು ಈ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.

ಆದರೆ, ಸತೀಶನ್ ಅವರ ಬೆಂಬಲಿಗರು ಈ ವಿವಾದವನ್ನು ತಳ್ಳಿಹಾಕಿದ್ದಾರೆ. “ಅವರು ಮೋದಿ ಅವರ ಸಿದ್ಧಾಂತವನ್ನಲ್ಲ, ಕೇವಲ ಒಬ್ಬ ಸಂಘಟನಾ ನಾಯಕ ನೇರವಾಗಿ ಸಿಎಂ ಆಗಬಹುದು ಎಂಬ ರಾಜಕೀಯ ಇತಿಹಾಸದ ಉದಾಹರಣೆಯನ್ನು ನೀಡಿದ್ದಾರಷ್ಟೇ” ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. 

ಒಟ್ಟಿನಲ್ಲಿ, ಚುನಾವಣಾ ನಂತರದ ಬೆಳವಣಿಗೆಗಳು ಗಮನಿಸಿದರೆ, ಕಾಂಗ್ರೆಸ್‌ ಹೈಕಮಾಂಡ್‌ಗೆ ಚುನಾವಣೆ ಎದುರಿಸಿರುವುದಕ್ಕಿಂತ ಸಿಎಂ ಆಯ್ಕೆಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ ಎಂದು ಭಾಸವಾಗುತ್ತದೆ. ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೈಕಮಾಂಡ್ ಹೇಗೆ ಸಿಎಂ ಆಯ್ಕೆ ಮಾಡಲಿದೆ. ಕೇರಳದ ನೂತನ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.

 


 

 



 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...