ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋವನ್ನು ತೆಗೆಸಿ ಧ್ವಜಾರೋಹಣ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೈಸೂರು ನಗರದಲ್ಲಿ ಬಂದ್ ನಡೆಯುತ್ತಿದೆ.
“ಸಂವಿಧಾನ ಸಂರಕ್ಷಣಾ ಸಮಿತಿ” ಕರೆಕೊಟ್ಟಿರುವ ಈ ಬಂದ್‌ನಲ್ಲಿ ಮೈಸೂರು ನಗರದ 40ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಪಾಲ್ಗೊಂಡಿವೆ. ಜೊತೆಗೆ ಅನೇಕ ಸಂಘ-ಸಂಸ್ಥೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬೆಂಬಲ ವ್ಯಕ್ತವಾಗುತ್ತಿದೆ.
ಮೈಸೂರು ನಗರದ ಹಳೇಸಂತೇಪೇಟೆ, ಡಿ.ದೇವರಾಜ ಅರಸು ರಸ್ತೆ, ಎಂಪಿಎಂಸಿ, ಸಯ್ಯಾಜಿರಾವ್ ರಸ್ತೆ, ಎಂ.ಜಿ.ರೋಡ್ ಮಾರ್ಕೆಟ್ ಸೋಮವಾರ ಭಾಗಶಃ ಸ್ತಬ್ಧವಾಗಿದ್ದವು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬಂದ್‌ಗೆ ಚಾಲನೆ ನೀಡಲಾಯಿತು.
ಬೆಳ್ಳಂಬೆಳಿಗ್ಗೆ ನಗರದ ಹೃದಯ ಭಾಗವಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದೆ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿಯವರ ನೇತೃತ್ವದಲ್ಲಿ ಜಮಾವಣೆಗೊಂಡಿರುವ ಸಂಘಟನೆಗಳ ಕಾರ್ಯಕರ್ತರು ಬಸ್ ನಿಲ್ದಾಣದ ಎರಡು ಗೇಟುಗಳನ್ನು ಮುಚ್ಚಿ ಸಂಪೂರ್ಣ ಬಸ್ ಸಂಚಾರ ಸ್ಥಗಿತಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜ್ಞಾನ ಪ್ರಕಾಶ್ ಸ್ವಾಮೀಜಿ, “ನ್ಯಾಯಾಧೀಶರ ನಡೆ ಖಂಡನಾರ್ಹ. ಅವರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಹೈಕೋರ್ಟ್ ನಡೆ ಕೂಡ ಖಂಡನೀಯ. ರಾಜ್ಯ ಸರ್ಕಾರ ಕೂಡ ಅವರನ್ನು ರಕ್ಷಿಸುತ್ತ ಬಾಬಾಸಾಹೇಬ್ ಅಂಬೇಡ್ಕರ್ ವಿರೋಧಿ ಧೋರಣೆ ಅನುಸರಿಸುತ್ತಿದೆ” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಸಾರ್ವಜನಿಕರನ್ನು ರಕ್ಷಿಸುತ್ತಿದ್ದಾರೆ, ಅವರು ನಮಗೂ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ ಸ್ವಾಮೀಜಿಯವರು, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್‌ನಲ್ಲಿ ಪಾಲ್ಗೊಳ್ಳಲು ಕೋರಿದರು.
ಹಿರಿಯ ಸಮಾಜವಾದಿ ನಾಯಕರಾದ ಪ.ಮಲ್ಲೇಶ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಕೆ.ಎಸ್.ಶಿವರಾಮ್, ಹಿರಿಯ ಹೋರಾಟಗಾರರಾದ ಶಾಂತರಾಜು, ಬಿಪಿಎಸ್‌ನ ಸೋಸಲೆ ಸಿದ್ದರಾಜು, ಎವಿಎಸ್‌ಎಸ್‌ನ ತುಂಬಲ ರಾಮಣ್ಣ, ದಸಂಸದ ಚೋರನಹಳ್ಳಿ ಶಿವಣ್ಣ, ಎಸ್‌ಡಿಪಿಐನ ಕಾರ್ಯಕರ್ತರು ಮತ್ತು ಎಲ್ಲ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿರಿ: ರಾಯಚೂರು ಮುಖ್ಯ ನ್ಯಾಯಾಧೀಶರ ಛೇಂಬರ್‌ನಲ್ಲಿ ನಡೆದದ್ದೇನು? ಒಂದು ಪ್ರತ್ಯಕ್ಷದರ್ಶಿ ವರದಿ


