Homeಕರ್ನಾಟಕರಾಯಚೂರು ಮುಖ್ಯ ನ್ಯಾಯಾಧೀಶರ ಛೇಂಬರ್‌ನಲ್ಲಿ ನಡೆದದ್ದೇನು? ಒಂದು ಪ್ರತ್ಯಕ್ಷದರ್ಶಿ ವರದಿ

ರಾಯಚೂರು ಮುಖ್ಯ ನ್ಯಾಯಾಧೀಶರ ಛೇಂಬರ್‌ನಲ್ಲಿ ನಡೆದದ್ದೇನು? ಒಂದು ಪ್ರತ್ಯಕ್ಷದರ್ಶಿ ವರದಿ

ರಾಯಚೂರಿನ ವಕೀಲರಾದ ತಾಯಪ್ಪ ಭಂಡಾರಿಯವರ ಪ್ರತ್ಯಕ್ಷದರ್ಶಿ ಹೇಳಿಕೆಯನ್ನು ಆಧರಿಸಿ ದೇಮರವರ ನಿರೂಪಣೆ.

- Advertisement -
- Advertisement -

ರಾಯಚೂರು ಮುಖ್ಯ ನ್ಯಾಯಾಧೀಶರ ಛೇಂಬರ್‌ನಲ್ಲಿ ನಡೆದದ್ದೇನು?
ಒಂದು ಪ್ರತ್ಯಕ್ಷದರ್ಶಿ ವರದಿ

ಬೆಳಿಗ್ಗೆ : 8:30
1) ಗಣರಾಜ್ಯೋತ್ಸವ ಆಚರಿಸಲು 2022 ಜನವರಿ 26ರಂದು ಕೋರ್ಟ್ ಬಿಲ್ಡಿಂಗ್‌ನಲ್ಲಿ ಎಸ್‌ಸಿ., ಎಸ್.ಟಿ., ಓ.ಬಿ.ಸಿ., ಪ್ರಗತಿಪರ ವಕೀಲರು ಗಾಂಧಿ ಜೊತೆ ಅಂಬೇಡ್ಕರ್ ಪೋಟೋ ಇಟ್ಟಿದ್ದರು.
2) ಸಿಬ್ಬಂದಿಯೊಬ್ಬರು ಅಂಬೇಡ್ಕರ್ ಫೋಟೋ ಇಟ್ಟಿರುವ ಬಗ್ಗೆ ಜಿಲ್ಲಾ ನ್ಯಾಯಾಧೀಶರಿಗೆ ಮಾಹಿತಿ ನೀಡುತ್ತಾರೆ.
3) ಜಿಲ್ಲಾ ನ್ಯಾಯಾಧೀಶರು, ಎಸ್‌ಸಿ., ಎಸ್.ಟಿ., ಓ.ಬಿ.ಸಿ., ಪ್ರಗತಿಪರ ವಕೀಲರನ್ನು ಛೇಂಬರ್‌ಗೆ ಕರೆಸುತ್ತಾರೆ. ಅಲ್ಲಿ ಇನ್ನಿತರ ನ್ಯಾಯಾಧೀಶರು ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಇದ್ದರು.

ಸಂಭಾಷಣೆ:
ಜಿಲ್ಲಾ ನ್ಯಾಯಾಧೀಶರು : ಯಾಕೆ ಅಂಬೇಡ್ಕರ್ ಫೋಟೋ ಇಟ್ಟಿರಿ. ಹೈಕೋರ್ಟ್‌ನಿಂದ ಇನ್ನೂ ಅನುಮತಿ ಸಿಕ್ಕಿಲ್ಲ.

ವಕೀಲರು : ಹಿಂದಿನ ವರ್ಷವೇ ಬೇರೆ ಜಿಲ್ಲಾ ನ್ಯಾಯಾಲಯದಲ್ಲಿ ಇಟ್ಟಿದ್ದಾರೆ, ನಾವು ಯಾಕೆ ಇಡಬಾರದು?

ಜಿಲ್ಲಾ ನ್ಯಾಯಾಧೀಶರು : ಇಲ್ಲ, ಇಡಕ್ಕೆ ಬರಲ್ಲ, ಹೈಕೋರ್ಟ್‌ನಿಂದ ನೋಟಿಫಿಕೇಷನ್ ಇಲ್ಲ.

ವಕೀಲರು : ಹಾಗಾದರೆ, ಕಳೆದ ವರ್ಷ ನಿಮ್ಮ ನೇತೃತ್ವದಲ್ಲೆ ದಸರಾ ಆಚರಿಸಿ, ಕೋರ್ಟ್ ಆವರಣದಲ್ಲಿ ಅಲಂಕರಿಸಿ ಗಣೇಶ, ಚಾಮುಂಡೇಶ್ವರಿ ಫೋಟೋ ಇಟ್ಟು ಪೂಜಾರಿ ಕರೆಸಿ ಪೂಜೆ ಮಾಡಿ ನೀವೇ ಪ್ರಸಾದ ಹಂಚಿದಿರಿ. ಇದಕ್ಕೆ ಹೈಕೋರ್ಟ್ ಅನುಮತಿ ನೀಡಿತ್ತೆ? ನಿರ್ದೇಶನ ಮಾಡಿತ್ತೆ?

ಜಿಲ್ಲಾ ನ್ಯಾಯಾಧೀಶರು : ಇಲ್ಲ.

ವಕೀಲರು : ಇದು ತಪ್ಪಲ್ಲವೆ?

ಜಿಲ್ಲಾ ನ್ಯಾಯಾಧೀಶರು : ಅದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ, ನಮ್ಮ ಸಂಸ್ಕೃತಿ.
ವಕೀಲರು : ನೀವು ತೀರ್ಪು ನೀಡುವುದು ಕಾನೂನು ಅಡಿಯಲ್ಲೊ ಅಥವಾ ಹಿಂದೂ ಸಂಸ್ಕೃತಿ, ಸಂಪ್ರದಾಯದ ಅಡಿಯಲ್ಲೊ?

ಜಿಲ್ಲಾ ನ್ಯಾಯಾಧೀಶರು : ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅಂಬೇಡ್ಕರ್ ಫೋಟೋ ಇಡಲು ಈಗ ಅನುಮತಿಸಿದರೂ, ಎರಡೂ ಫೋಟೋ ಇಟ್ಟು ಧ್ವಜ ಆರೋಹಣ ಮಾಡುತ್ತೇನೆ.
(ನ್ಯಾಯಾಧೀಶರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಫೋನ್ ಮಾಡಿಕೊಡುತ್ತಾರೆ. ಅವರೊಡನೆ ವಕೀಲರ ಮಾತುಕತೆ ನಡೆಯುತ್ತದೆ.)

ವಕೀಲರು : ಕಳೆದ ವರ್ಷವೇ ನಾವು ಅಂಬೇಡ್ಕರ್ ಫೋಟೋ ಇಡಲು ಅನುಮತಿಗೆ ಅರ್ಜಿ ಕೊಟ್ಟಿದ್ದೆವು. ತಮ್ಮಿಂದ ಇನ್ನೂ ನಿರ್ಧಾರ ಬಂದಿಲ್ಲ. ನಾವು ಈಗ ಗಣರಾಜ್ಯೋತ್ಸವದಲ್ಲಿ ಅಂಬೇಡ್ಕರ್ ಫೋಟೋ ಇಡಲು ಅನುಮತಿ ನೀಡಿ.

ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ : ನೋಟಿಫಿಕೇಷನ್ ಇಲ್ಲದೆ ಜಿಲ್ಲಾ ನ್ಯಾಯಾಧೀಶರು ಮಾಡಲು ಬರುವುದಿಲ್ಲ.

ವಕೀಲರು : ಕಳೆದ ನಮ್ಮ ಜಿಲ್ಲಾ ನ್ಯಾಯಾಧೀಶರು ಕೋರ್ಟ್ ಆವರಣವನ್ನು ಸಿಂಗರಿಸಿ ಗಣೇಶ, ಚಾಮುಂಡೇಶ್ವರಿ ಫೋಟೋ ಇಟ್ಟು ಪೂಜಾರಿ ಕರೆಸಿ ಪೂಜೆ ಮಾಡಿ ದಸರಾ ಹಬ್ಬ ಆಚರಿಸಿದರು. ಅವರೇ ಪ್ರಸಾದ ಹಂಚಿದರು. ಇದಕ್ಕೆ ನೀವೇನಾರು ಅನುಮತಿ ಕೊಟ್ಟಿದ್ದೀರಾ?

ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ : ಇಲ್ಲ.

ವಕೀಲರು : ಇದನ್ನು ನಮ್ಮ ರಾಯಚೂರು ಜಿಲ್ಲಾ ನ್ಯಾಯಾಧೀಶರು ಮಾಡಿದ್ದಕ್ಕೆ ಏನು Action ತೆಗೆದುಕೊಂಡಿರಿ?
(ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಿಂದ ಉತ್ತರ ಇಲ್ಲ. ಆಮೇಲೆ)

ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ : ಹೈಕೋರ್ಟ್‌ನ Full court ಮೀಟಿಂಗ್‌ನಲ್ಲಿ ಅಂಬೇಡ್ಕರ್ ಫೋಟೋ ಇಡುವ ಪ್ರಸ್ತಾಪವನ್ನು ಮುಂದಿಟ್ಟು ನಿರ್ಧರಿಸಬೇಕು. ಅದು ಪೆಂಡಿಂಗ್‌ನಲ್ಲಿದೆ.

ವಕೀಲರು : ನಾವು ಅರ್ಜಿಕೊಟ್ಟಾದ ಮೇಲೆ ಸುಮಾರು 20 ಫುಲ್‌ಕೋರ್ಟ್ ಮೀಟಿಂಗ್‌ಗಳು ನಡೆದಿವೆ. ನಮ್ಮ ಅಂಬೇಡ್ಕರ್ ಅರ್ಜಿಯನ್ನು ಫುಲ್‌ಕೋರ್ಟ್ ಮುಂದೆ ಇಡಬೇಕಾದವರು ನೀವು. ಸಂವಿಧಾನ ಶಿಲ್ಪಿಯ ಅರ್ಜಿಯನ್ನು ಯಾಕೆ ನೀವು ಇಷ್ಟು ದಿನಗಳಾದರೂ ಪರಿಗಣಿಸಿ ಫುಲ್‌ಕೋರ್ಟ್ ಮುಂದೆ ಇಡಲಿಲ್ಲ ಏಕೆ?

(ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಫೋನ್ ಕಟ್ ಮಾಡಿಬಿಟ್ಟರು. ಇದೆಲ್ಲಾ ಆಗುವವರೆಗೆ ಕಾಲ 9:30 ಆಗಿತ್ತು. 8:30ಕ್ಕೆನೇ ಧ್ವಜಾರೋಹಣ ಮಾಡಬೇಕಿತ್ತು. ಒಂದು ಗಂಟೆ ವಿಳಂಬವಾಗಿತ್ತು.)

ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರು : ‘ನಿಮ್ಮ ಕಾಲಿಗೆ ಮುಗಿತೀನಿ. ಅಂಬೇಡ್ಕರ್ ಫೋಟೋ ತೆಗೀರಿ’.

ಇದಾದ ಮೇಲೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು, ಛೇಂಬರ್‌ನಲ್ಲಿದ್ದ ಎಸ್‌ಸಿ., ಎಸ್.ಟಿ., ಓ.ಬಿ.ಸಿ., ಪ್ರಗತಿಪರ ವಕೀಲರಿಗೆ ‘ಜಿಲ್ಲಾ ಮುಖ್ಯ ನ್ಯಾಯಾಧೀಶರು ಇಷ್ಟೆಲ್ಲಾ ಹೀಗೆಲ್ಲಾ ಕೇಳಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ನೋಡಿಕೊಳ್ಳೋಣ. ಈಗ ಅಂಬೇಡ್ಕರ್ ಭಾವಚಿತ್ರ ತೆಗೆಯಲು ಸಮ್ಮತಿಸಿ’ ಎಂದು ವಿನಂತಿಸಿ ಸಮ್ಮತಿಸುವಂತೆ ಮಾಡುತ್ತಾರೆ. ಆಮೇಲೆ ಅಲ್ಲಿದ್ದ ವಕೀಲರೆಲ್ಲರೂ ಛೇಂಬರ್‌ನಿಂದ ಹೊರ ನಡೆಯುತ್ತಾರೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಪ್ರಾಂಗಣದಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಮೇಲೆ ಅಂಬೇಡ್ಕರ್ ಭಾವಚಿತ್ರವನ್ನು ಅಲ್ಲಿಂದ ತೆಗೆಯಲಾಗುತ್ತದೆ, ಆಕ್ರೋಶದ ನಡುವೆ. ಅಂಬೇಡ್ಕರ್ ಭಾವಚಿತ್ರ ತೆಗೆದ ನಂತರ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಛೇಂಬರ್‌ನಿಂದ ಹೊರಬಂದು ಧ್ವಜಾರೋಹಣ ಮಾಡುತ್ತಾರೆ! ಸ್ಥೂಲವಾಗಿ ಇದಿಷ್ಟು ನಡೆಯುತ್ತದೆ.

ನ್ಯಾಯವು ಕೇಳುತ್ತಿರುವುದೇನು?

(1) ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ತಕ್ಷಣವೇ ಗಣರಾಜ್ಯೋತ್ಸವ ದಿನದಂದು ಹಾಗೂ ನ್ಯಾಯಾಲಯಗಳ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಡುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತಾಗಲು – ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಫುಲ್‌ಕೋರ್ಟ್ ಮುಂದೆ ಪ್ರಸ್ತಾಪನೆ ಮಂಡಿಸುವಂತೆ ಆದೇಶಿಸಬೇಕು. (ಫೆಬ್ರವರಿ 04ರ ಸಂಜೆ ಹೈಕೋರ್ಟ್ ಈ ಕುರಿತು ಆದೇಶ ನೀಡಿದ್ದು, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಸಂವಿಧಾನ ದಿನ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳ ಅಧಿಕೃತ ಕಾರ್ಯಕ್ರಮಗಳನ್ನು ಅಂಬೇಡ್ಕರ್ ಫೋಟೊ ಇಡಬೇಕೆಂದು ನಿರ್ದೇಶನ ನೀಡಲಾಗಿದೆ)

(2) ಫುಲ್‌ಕೋರ್ಟ್ ಅಂಬೇಡ್ಕರ್ ಭಾವಚಿತ್ರ ಇಡಬೇಕೆಂದು ನಿರ್ಧರಿಸಿದರೆ ಮುಂದಾಗಬಹುದಾದ ವಿವಾದಗಳನ್ನು ತಪ್ಪಿಸಲೋಸುಗ – ಗಾಂಧೀ ಮತ್ತು ಅಂಬೇಡ್ಕರ್‌ರ ಭಾವಚಿತ್ರಗಳ ಅಳತೆಯನ್ನು ಸೂಚಿಸಬೇಕು.

(3) ಯಾವುದೇ ಧರ್ಮ, ಸಂಸ್ಕೃತಿ, ಆಚರಣೆ, ಪರಂಪರೆ, ರೂಢಿಗಳನ್ನು ಕೋರ್ಟ್ ಆವರಣದಲ್ಲಿ ಆಚರಿಸುವ ಬಗ್ಗೆ ಖಚಿತ ನಿಲುವನ್ನು ಫುಲ್‌ಕೋರ್ಟ್ ನಿರ್ದೇಶಿಸಬೇಕು. ನಿರ್ದೇಶನವನ್ನು ಉಲ್ಲಂಘಿಸಿದರೆ ತೆಗೆದುಕೊಳ್ಳುವ ಕ್ರಮವನ್ನೂ ಸ್ಪಷ್ಟಗೊಳಿಸಬೇಕು.

(4) ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುವ ತೆರೆದ (Open) ಕೋರ್ಟ್ ಹಾಲ್‌ನಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಡುವುದರ ಬಗ್ಗೆ ಫುಲ್‌ಕೋರ್ಟ್ ನಿರ್ಧಾರ ತೆಗೆದುಕೊಳ್ಳಬೇಕು.

  • ಪ್ರತ್ಯಕ್ಷದರ್ಶಿ – ತಾಯಪ್ಪ ಭಂಡಾರಿ, ವಕೀಲರು, ರಾಯಚೂರು
  • ನಿರೂಪಣೆ – ದೇಮ

ಇದನ್ನೂ ಓದಿ: ನ್ಯಾಯಾಲಯಗಳ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್‌ ಚಿತ್ರ ಇರಿಸುವಂತೆ ಹೈಕೋರ್ಟ್‌ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...